ಪ್ರತಿಕ್ರಿಯಿಸಿರಿ (lekhana@ayvm.in)
ಬೊಟ್ಟು (ಪೊಟ್ಟು ) ಹಣೆಗೇ ಇಟ್ಟು ಕೊಳ್ಳು ವಂತಹ ಒಂದು ಬಿಂದು. ಇದು ಭಾರತೀಯ ಪ್ರಾಚೀನ ಪರಂಪರೆಯನ್ನು ಅನುಸರಿಸುವವರ ಒಂದು ಕಲಾತ್ಮಕವಾದ,ಶ್ರೇಷ್ಠವಾದ ಆಚಾರ.
ಪಾಶ್ಚಾತ್ಯ ಚಿಂತನಾನುಕ್ರಮಕ್ಕೆ ದಾಸರಾದವರು ಇದನ್ನ ಬ್ಯೂಟಿ ಸ್ಪಾಟ್ (Beauty-Spot), ಫ್ಯಾಷನ್ ಸ್ಪಾ ಟ್(Fashion-Spot) ಎಂದೆಲ್ಲ ಕರೆದಿರುವುದುಂಟು. ಇದನ್ನು ಚಿತ್ರ -ವಿಚಿತ್ರವಾದ ಆಕಾರ ಮತ್ತು ಬಣ್ಣಗಳಲ್ಲಿ ಧರಿಸುವದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಮತ್ತು ಸೀರೆ, ಮತ್ತು ಇತರ ಉಡಿಗೆಗಳ ಬಣ್ಣಕ್ಕೆ ತಕ್ಕಂತೆ ಬಿಂದುವನ್ನು ಹಣೆಯಲ್ಲಿ ಫ್ಯಾಷನ್ (Fashion statement) ಗುರುತಾಗಿ ಅಲಂಕರಿಸಿಕೊಳ್ಳುತ್ತಾರೆ. ಅಂಗಡಿಗಳಲ್ಲಿ , ಪ್ಲಾಸ್ಟಿ ಕ್ Sticker, ಬಟ್ಟೆ (Dye) ಇತ್ಯಾ ದಿ ಪದಾರ್ಥಗಳಿಂದ ತಯಾರಿಸಲ್ಪಟ್ಟ ಬಹುರೂಪ, ಬಹುಬಣ್ಣ ವೈವಿದ್ಯಗಳ ಬಿಂದಿಗಳನ್ನು ಮಾರುತ್ತಾರೆ. ಇದು ಆಧುನಿಕ ಅಲಂಕಾರ ಪದ್ಧತಿಗೆ ಹೊಂದಿಕೊಳ್ಳುವುದು ಮತ್ತು ಧರಿಸುವುದಕ್ಕೆ ಸುಲಭ ಎಂಬ ಕಾರಣದಿಂದ ಪ್ರಚಲಿತವಾಗಿದೆ. ಈ ಬಿಂದುವಲ್ಲದೆ ನಮ್ಮ ದೇಶದ ವಿವಿಧಪ್ರಾಂತಗಳಲ್ಲಿ ದೇವತಾ ಉಪಾಸನೆಗೆ ತಕ್ಕಂತೆ ಅನೇಕ ಆಕಾರಗಳಲ್ಲಿ ಪುಂಡ್ರಗಳನ್ನು ಧರಿಸುತ್ತಾರೆ. ವಾಮಪಂಥೀಯ ಚಿಂತಕರು ಈ ಸಾಂಪ್ರದಾಯಿಕ ಗುರುತನ್ನು Caste Mark ಎಂಬ ಶಬ್ದದಿಂದ ಅವಹೇಳನೆ ಮಾಡುತ್ತಾರೆ. ಇನ್ನು ಕೆಲವರು- ಇದು ನಮ್ಮ ಗುಂಪು, ಇತರರಗಿಂತ ನಾವು ಭಿನ್ನ , ಎಂದು ತೋರಿಸುಕೊಳ್ಳುವುದಕ್ಕಾಗಿ ಇರುವ ಒಂದು ಹೊರಗುರುತು, ಅಷ್ಟೆ ಎನ್ನುವುದೂ ಉಂಟು.
ಆದರೆ, ಈ ಆಚಾರವನ್ನು ತಂದವರು ಭಾರತೀಯ ಮಹರ್ಷಿಗಳು. ಇದರ ಹಿಂದಿನ ವಿಜ್ಞಾನವನ್ನೂ ಅವರ ಚಿಂತನಾ ಕ್ರಮದಲ್ಲೇ ಅರಿಯುವುದು ಹೆಚ್ಚು ಸೂಕ್ತ. ಈ ದೇಶದ ಮಹರ್ಷಿಗಳು ತಾವು ಜೀವನದ ಒಳಸೌಖ್ಯವನ್ನು ಅನುಭವಿಸಿ, ಸ್ಥೂಲವಾಗಿ ಕಾಣುವ ಈ ಜಗತ್ತಿನ ಸೂಕ್ಷ್ಮ ರೂಪವೇನು? ಅದಕ್ಕೂ ಹಿಂದಿನ ಪರ ರೂಪವೇನು? ಎಂಬುದನ್ನು ತಮ್ಮ ತಪಸ್ಯೆಯಿಂದ ಕಂಡುಕೊಂಡರು. ಆ ಪರರೂಪವೇ ನಿತ್ಯದಲ್ಲೂ ಬೆಳಗುತ್ತಿರುವ ಮತ್ತು ಸೂಕ್ಷ್ಮ ಮತ್ತು ಸ್ಥೂಲರೂಪಗಳಿಗೂ ಕಾರಣವಾಗಿದೆ ಎಂಬುದನ್ನು ಅರಿತರು. ಈ ಮೂರೂ ಕ್ಷೇತ್ರಗಳಲ್ಲಿನ ಬಾಳಾಟದಲ್ಲಿ ಅತ್ಯಂತ ನೆಮ್ಮದಿ, ಸುಖ ಶಾಂತಿ ಇರುವುದನ್ನು ಗಮನಿಸಿ ಅದಕ್ಕೆ ಪರಸ್ಪರ ವಿರೋಧವಿಲ್ಲದ , ಪೂರಕವಾದ ಜೀವನ ವ್ಯವಸ್ಥೆಯನ್ನು ಈ ದೇಶದಲ್ಲಿ ರೂಪಿಸಿದರು. ಅಂತಹ ಜೀವನ ವಿಧಾನದಲ್ಲಿ ನಮ್ಮನ್ನು ಆ ಆನಂದದೆಡೆಗೆ ಒಯ್ಯುವ ಅಲಂಕಾರಗಳನ್ನೂ ಬಹಳ ವೈಜ್ಞಾನಿಕವಾಗಿ ಅವರು ತಂದಿದ್ದಾರೆ ಎಂಬುದನ್ನು ಮರೆಯಲಾಗದು. ಅಂತಹ ಅಲಂಕಾರಗಳಲ್ಲಿ ಒಂದು, ಹಣೆಯ ತಿಲಕ, ಬೊಟ್ಟು . ಯಾರು ಕೇವಲ ಭೌತಿಕ ದೃಷ್ಟಿಯಿಂದ ಇದನ್ನು ಬ್ಯೂಟಿ ಸ್ಪಾಟ್ ಎಂದರೋ, ಋಷಿಗಳ ದೃಷ್ಟಿಯಲ್ಲಿ ಅದು ಒಳಬೆಳಗುವ ಪರಂಜ್ಯೋತಿಯ ಬ್ಯೂಟಿ ಸ್ಪಾಟ್ ಆಗಿದೆ.
ಜ್ಞಾನಿಗಳು ಪರಮಾತ್ಮ ಸಾಕ್ಷಾತ್ಕಾರವನ್ನು ಪಡೆಯುವ ಮಾರ್ಗದಲ್ಲಿ ಸಾಗುವಾಗ ಒಂದು ಜ್ಯೋತಿರ್ಮಯವಾದ ಬಿಂದುವನ್ನ್ನುಭ್ರೂಮಧ್ಯ ಸ್ಥಾನದಲ್ಲಿ ದರ್ಶನ ಮಾಡುತ್ತಾರೆ. ಆ ದರ್ಶನವೇ ಅವರು ಹಿಂದೆಂದೂ ಅನುಭವಿಸಿರದ ಪರಮಾನಂದವನ್ನು, ನೆಮ್ಮದಿಯನ್ನೂ, ಕೃತಕೃತ್ಯ ಭಾವವನ್ನು ಅನುಭವಿಸಿದರು. ಇದನ್ನೇ "ಬಿಂದೋರ್ನಾದಸಮುತ್ಪನ್ನ: ಸಮುದಿತೇ ನಾದೆ ಜಗತ್ಕಾರಣಂ।" ಈ ಬಿಂದುವಿನಿಂದಲೇ ನಾದ ಉತ್ಪ ನ್ನವಾಗುತ್ತೆ. ಅದರಿಂದಲೇ ಸಮಸ್ತ ಸೃಷ್ಟೀ ಹೊರಹೊಮ್ಮುತ್ತದೆ! ಎಂಬುದು ಅವರ ಅನುಭವದ ಧೀರ ಘೋಷ. ಹೀಗೆ ಯಾವ ಜ್ಯೋ ತಿರ್ಮಯವಾದ ಬಿಂದುವನ್ನು ಅಂತರಂಗದಲ್ಲಿ ದರ್ಶನ ಮಾಡಿದರೋ, ಅದರ ಸ್ಮರಣೆ ಉಂಟಾಗಲು ಹೊರಗೂ ಅದೇ ಬಗೆಯ ಅಲಂಕಾರ. ಹೊರಬಿಂದುವನ್ನು ನೋಡುತ್ತಾ ಒಳದರ್ಶನದೆಡೆಗೆ ಜೀವಲೋಕವನ್ನು ಸೆಳೆಯುವ ಸಂಸ್ಕಾರವನ್ನು ತಂದುಕೊಡುವುದಕ್ಕಾಗಿ ಈ ಹೊರ ಅಲಂಕಾರವನ್ನು ಸಂಸ್ಕೃತಿಯಾಗಿ ಅವರು ತಂದುದು. ಈ ಆಚರಣೆಯನ್ನು ಅವರು ಜೀವಲೋಕದ ಮೇಲಿನ ಕರುಣೆಯಿಂದ ತಂದುಕೊಟ್ಟದ್ದು ಎಂಬುದನ್ನು ಮರೆಯಬಾರದು. ಹೊರ ಬಿಂದುವಿನ ಮಾಧ್ಯಮವಾಗಿ ನಮ್ಮ ಮನೋಬುದ್ಧಿಗಳನ್ನು ಒಳಗೆ ಬೆಳಗುವ ಪರಬ್ರಹ್ಮನ ಕಡೆಗೆ ಏರಿಸುವ ಉಪಾಯ ಈ ಅಲಂಕಾರದಲ್ಲಿದೆ. ನಾವು ಸೇರಬೇಕಾದ ಜೀವನ ಧ್ಯೇಯದ ನಕ್ಷೆಯಾಗಿ ಈ ಬೊಟ್ಟಿನ ಅಲಂಕಾರ ಇದೆ ಎಂಬುದೇ ಸತ್ಯಾರ್ಥ.
ಎಂದೇ ಇದು ಕೇವಲ ಹೊರ ಅಲಂಕಾರ ಮಾತ್ರವಲ್ಲದೇ ಅದಕ್ಕೆ ಉಪಯೋಗಿಸುವ ದ್ರವ್ಯ, ಬಣ್ಣ, ಗಾತ್ರ ಇತ್ಯಾದಿ ಎಲ್ಲವನ್ನೂ ಅವರು ನಿರ್ದೇಶಿಸಿದ್ದಾರೆ. ಅದು ನಮ್ಮ ಐಹಿಕ ಪಾರಮಾರ್ಥಿಕ ಜೀವನದ ಮೇಲ್ಮೆಗೆ ಸಹಕಾರಿಯಾಗುವಂತೆ ಯೋಜಿಸಿದ್ದಾರೆ ಎಂಬುದು ಗಮನಾರ್ಹ. ಅದರ ವಿದ್ಯೆಯನ್ನು ಅರಿತು ಆಚರಿಸಿದಾಗ ಭೌತಿಕವಾಗಿ ಆರೋಗ್ಯ ವೃದ್ಧಿ,ಐಶ್ವರ್ಯಪ್ರಾಪ್ತಿ, ದೈವಿಕ ಕ್ಷೇತ್ರದಲ್ಲಿ ಪಾಪ ನಿವಾರಣೆ, ನಾಡೀ ಶುದ್ಧಿ, ದೇವತಾ ದರ್ಶನ ಮತ್ತು ಕಡೆಯಲ್ಲಿ ಆಧ್ಯಾತ್ಮ ಕ್ಷೇತ್ರದಲ್ಲಿ ಪರಮಾತ್ಮಾನುಭವದಲ್ಲಿ ಪರ್ಯವಸಾನವಾಗುವಷ್ಟು ವ್ಯಾಪ್ತಿಯನ್ನು ಹೊಂದಿದೆ.
ಬೊಟ್ಟನ್ನು ಧರಿಸುವ ಭ್ರೂಮಧ್ಯ ಪ್ರದೇಶ ಆಜ್ಞಾಚಕ್ರದ ಸ್ಥಾನ. ಯೋಗಿಗಳು ಪ್ರಕೃತಿ ಚಕ್ರಗಳನ್ನೆಲ್ಲ ದಾಟಿ ಊರ್ಧ್ವ ಮುಖವಾಗಿ ಸಂಚರಿಸಿದಾಗ ಈ ಜಾಗದಲ್ಲಿಯೇ ಅವರಿಗೆ ಒಂದು ಜೋತಿರ್ಮಯವಾದ ಬಿಂದು ದರ್ಶನ ಆಗುವುದು. ಅದಕ್ಕಾಗಿ ಅಲ್ಲೇ ಬೊಟ್ಟನ್ನು ಧರಿಸಬೇಕು. ಅದನ್ನೂ ದಾಟಿ ಮೇಲಕ್ಕೆ ಏರಿದಾಗ ಲಲಾಟ ಮತ್ತು ಮೂರ್ಧನ್ಯ ಪ್ರದೇಶಗಳಲ್ಲಿ ಅರ್ಧಚಂದ್ರ , ತ್ರಿಕೋನ ಇತ್ಯಾದಿ ಆಕಾರಗಳಲ್ಲಿ ದರ್ಶನಗಳು ಆಗುತ್ತದೆ ಎಂಬುದು ಯೋಗಶಾಸ್ತ್ರಗಳು ಸಾರುವ ಮಾತು. ಅಂತಹ ಲಾಂಛನಗಳನ್ನು ಅಲ್ಲಲ್ಲಿ ಧರಿಸುವುದೂ ಈ ಕಾರಣದಿಂದಲೇ.
ನಾವು ಧರಿಸುವ ಬೊಟ್ಟು ಸುಂದರವಾದ ವೃತ್ತಾಕಾರದಿಂದ ಒಳಗಿನ ದರ್ಶನಕ್ಕೆ ಹೊಂದಿರುವಂತೆ ಕೂಡಿರಬೇಕು. ಇದರ ಅಳತೆ ಜ್ಞಾನಿಗಳು ನಿರ್ದೇಶಿಸಿದ ಮಾನದಿಂದ ಕೂಡಿರಬೇಕು. ,ಬಿಂದುವಿನ ಪದಾರ್ಥಗಳು ಕುಂಕುಮ-ಕೇಸರಿ, ಶ್ರೀ ಗಂಧ, ಚಂದನ, ಗೋಪಿಚಂದನ ಇದ್ಯಾ ದಿ ಪದಾರ್ಥಗಳಿಂದ ರಚಿತವಾಗಿರಬೇಕು. ಇದರ ಹಿಂದೆ ಒಂದು ದ್ರವ್ಯ ಸಂಯೋಜನೆಯ ವಿಜ್ಞಾನವೂ ಇದೆ ಎಂಬುದನ್ನು ಗಮನಿಸಬೇಕು. ಹಾಗಾದಾಗ ಇದರ ದರ್ಶನ ಕಲ್ಯಾಣಕಾರಿಯೂ-ಹಿತಕಾರಿಯೂ ಹೌದು. ಮತ್ತು ಒಳಬೆಳಗುವ ಆತ್ಮಜ್ಯೋ ತಿಯ ವರ್ಣಕ್ಕೆ ಹಳದಿ, ಸುವರ್ಣ, ಕುಂಕುಮದ ವರ್ಣಗಳು ಹೋಲುವುದರಿಂದ ಬಿಂದುವಿನ ವರ್ಣವೂ ಇದಕ್ಕೆ ತಕ್ಕಂತೇ ಇರಬೇಕಾಗುತ್ತದೆ. ನಮ್ಮ ಮನಸ್ಸಿಗೆ ಚಂದವೆಂದು ಕಾಣುವ ಯಾವ ಯಾವುದೋ ಬಣ್ಣಗಳ, ಆಕಾರಗಳ ಬೊಟ್ಟುಗಳನ್ನು ಧರಿಸುವುದು ಒಳಜೀವನದ ಪರಿಚಯವಿಲ್ಲದ ಆಚರಣೆಯಾಗಿ ಹಾನಿಕಾರಕವಾಗಬಹುದಾಗಿದೆ .
"ದೇಹವೇ ದೇವಾಲಯ" ಎಂಬ ಯೋಗಮರ್ಮವನ್ನು ಅರಿತು ತಂದ ಉತ್ಕೃಷ್ಟವಾದ ಆಚರಣೆ ಈ ಬೊಟ್ಟಿನ ಅಲಂಕಾರ. ದೇಹದರ್ಶನ ಒಳಗಿನ ದೇವದರ್ಶನಕ್ಕೆ ಸಹಕಾರಿಯಾಗುವಂತಿದ್ದರೆ ಅದೇ ಸಹಜವಾದ ಅಲಂಕಾರ. ಈ ಉತ್ತಮವಾದ ಕಲಾಪೂರ್ಣವಾದ ಸಂಪ್ರದಾಯವನ್ನು ಆಚರಿಸಿದರೆ ನಮಗೆ ಒಳ-ಹೊರ ಆರೊಗ್ಯ , ಮನಸ್ಸಿನ ನೆಮ್ಮದಿ,ಉಂಟಾಗಿ ಪರಮಾತ್ಮ ಸಾಕ್ಷಾತ್ಕಾರಕ್ಕೆ ಸಾಧನವೂ ಆಗುತ್ತದೆ. ಅದಕ್ಕೆಂದೇ -. "ದೀಪಪ್ರಕಾಶಂ ಪರಮಾತ್ಮಾನಂ ಪಶ್ಯನ್ ಊರ್ಧ್ವ ಪುಂಡ್ರಮ್ ಧಾರಯೇತ್ ಯೋಗಿ ಲಲಾಟೇ" ಎಂಬ ಮಾತು ಬಂದಿರುವುದು. ಋಷಿಗಳ ಸಮಗ್ರ ದೃಷ್ಟಿಯ ಈ ಅಲಂಕಾರವೂ ನಮ್ಮ ಇಹ-ಪರ ಜೀವನಗಳನ್ನು ಸಮೃದ್ಧಿಗೊಳಿಸಿಕೊಳ್ಳಲು ಸಹಕಾರಿಯಾಗಲಿ. ಆ ಪವಿತ್ರ ಭಾವದಿಂದ ನಾವೆಲ್ಲರೂ ಅವರ ಈ ಕೊಡುಗೆಯನ್ನು ಭಾವಿಸಿ ಆಚರಿಸುವ ಸದ್ಬುದ್ಧಿಯನ್ನು ಭಗವಂತ ನಮಗೆ ಕರುಣಿಸಲಿ ಎಂದು ಪ್ರಾರ್ಥಿಸೋಣ.!
ಸೂಚನೆ : 04/10/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ