ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ರಾಜ್ಯವು ಸುವ್ಯಸ್ಥಿತವಾಗಿರಬೇಕೆಂದರೆ ರಾಜನು ಯಾವ ಯಾವ ಎಚ್ಚರಗಳನ್ನು ವಹಿಸಬೇಕೆಂಬುದನ್ನು ಯುಧಿಷ್ಠಿರನಿಗೆ ನಾರದರು ತಿಳಿಹೇಳುತ್ತಿದ್ದಾರೆ.
ಹದಿನಾಲ್ಕು ರಾಜದೋಷಗಳುಂಟು. ಅವೆಲ್ಲವನ್ನೂ ನೀನು ಬಿಟ್ಟಿರುವೆಯಲ್ಲವೆ? ಏಕೆಂದರೆ ರೂಢಮೂಲರಾದ ರಾಜರು ಸಹ, ಎಂದರೆ ಆಳವಾಗಿ ಬೇರುಬಿಟ್ಟಿರುವ ರಾಜರೂ ಕೂಡ, ಇವುಗಳಿಂದಲೇ ಬಹುವಾಗಿ ಹಾಳಾಗುವರು.
ಯಾವುವು ಆ ಚತುರ್ದಶ-ರಾಜದೋಷಗಳು? ಇವು: ನಾಸ್ತಿಕ್ಯ - ಎಂದರೆ ವೇದಗಳಲ್ಲಿ ನಂಬಿಕೆಯಿಲ್ಲದಿರುವುದು; ಅನೃತ - ಎಂದರೆ ಸುಳ್ಳು ಹೇಳುವುದು; ಕ್ರೋಧ - ಎಂದರೆ ಕೋಪಿಯಾಗಿರುವುದು; ಪ್ರಮಾದ - ಎಂದರೆ ಜಾಗರೂಕತೆಯಿಲ್ಲದಿರುವುದು; ದೀರ್ಘಸೂತ್ರತೆ - ಎಂದರೆ ಕೆಲಸವನ್ನು ಬೇಗಮುಗಿಸದೆ ಎಳೆದಾಡಿ ವಿಳಂಬಮಾಡುವುದು; ಜ್ಞಾನಿಗಳನ್ನು ಆಗಾಗ್ಗೆ ಕಾಣದಿರುವುದು; ಆಲಸ್ಯ - ಎಂದರೆ ಸೋಮಾರಿತನ; ಪಂಚವೃತ್ತತೆ - ಎಂದರೆ ಪಂಚೇಂದ್ರಿಯಪರವಶನಾಗಿರುವುದು; ವಿಷಯಗಳನ್ನು ಕುರಿತು ಏಕಚಿಂತನ - ಎಂದರೆ ಒಬ್ಬನೇ ಸಮಾಲೋಚನೆ ಮಾಡುವುದು; ಹಾಗೆಯೇ ಅರ್ಥಜ್ಞರಲ್ಲದವರೊಡನೆ ಚಿಂತನೆಮಾಡುವುದು; ಮಾಡಬೇಕೆಂದು ನಿಶ್ಚಯಮಾಡಿಯಾಗಿರುವುದನ್ನು ಆರಂಭಿಸದೆಯೇ ಇರುವುದು; ಮಾಡಿದ ಮಂತ್ರಾಲೋಚನೆಯನ್ನು ಗುಟ್ಟಾಗಿಡದಿರುವುದು; ಮಂಗಲಕಾರ್ಯಗಳೆನಿಸುವ ದೇವಪೂಜೆ ಮೊದಲಾದುವನ್ನು ಮಾಡದಿರುವುದು; ಎಲ್ಲ ಶತ್ರುಗಳ ಮೇಲೂ ಒಂದೇ ಸಮಯಕ್ಕೇ ದಾಳಿ ಮಾಡುವುದು.
ಈ ಹದಿನಾಲ್ಕು ರಾಜದೋಷಗಳನ್ನೂ ನೀನು ವರ್ಜಿಸಿರುವೆ ತಾನೆ (ಎಂದರೆ ತೊರೆದಿರುವೆ ತಾನೆ)?
ವೇದಗಳು ನಿನ್ನ ಪಾಲಿಗೆ ಸಫಲವಾಗಿದೆಯಲ್ಲವೇ? ಸಂಪತ್ತೂ ನಿನಗೆ ಫಲಪ್ರದವಾಗಿದೆಯಷ್ಟೆ? ನಿನ್ನ ಪತ್ನಿಯರೂ ಸಫಲರಷ್ಟೆ? ಹಾಗೆಯೇ ನಿನ್ನ ಶಾಸ್ತ್ರಜ್ಞಾನವೂ ಸಫಲವಾಗಿರುವುದಷ್ಟೆ?"
ನಾರದರು ಹೀಗೆ ದೀರ್ಘವಾಗಿ ಮಾತನಾಡಿದ ಬಳಿಕ, ಯುಧಿಷ್ಠಿರನು ಕೇಳಿದನು: "ವೇದಗಳು ಹೇಗೆ ಸಫಲವಾಗುವುವು? ಧನವು ಸಫಲವಾಗುವುದು ಹೇಗೆ? ಪತ್ನಿಯು ಸಫಲಳಾಗುವುದೆಂತು? ಶ್ರುತವು, ಎಂದರೆ ಶಾಸ್ತ್ರಜ್ಞಾನವು, ಸಫಲವಾಗುವುದು ಹೇಗೆ?"
ಆಗ ನಾರದರು ಹೇಳಿದರು: "ವೇದಗಳ ಸಫಲತೆಯು ಅಗ್ನಿಹೋತ್ರ(ವೆಂಬ ಯಜ್ಞ)ದ ಆಚರಣೆಯಲ್ಲಿ. ಧನಗಳು ಸಫಲವಾಗುವುದು ದಾನದಿಂದ ಹಾಗೂ ಭೋಗದಿಂದ. ಪತಿಗೆ ರತಿಸುಖವನ್ನೀಯುವುದು ಹಾಗೂ ಪುತ್ರವತಿಯಾಗುವುದೇ ಪತ್ನಿಯ ಸಫಲತೆಯೆನಿಸುವುದು; ಶೀಲ ಮತ್ತು ಸದ್ವೃತ್ತ, ಎಂದರೆ ಒಳ್ಳೆಯ ನಡತೆ - ಇದುವೆ ಶಾಸ್ತ್ರಜ್ಞಾನದ ಫಲವೆನಿಸುವುದು - ಎಂದರು.
ಮಹಾತಪಸ್ವಿಗಳಾದ ನಾರದರು ಇದಿಷ್ಟು ಹೇಳಿ, ಆ ಬಳಿಕೆ ಧರ್ಮಾತ್ಮನಾದ ಯುಧಿಷ್ಠಿರನನ್ನು ಕುರಿತಾಗಿ ಈ ಮಾತನ್ನು ಕೇಳಿದರು:
"ಹೆಚ್ಚು ಲಾಭವನ್ನು ಮಾಡಿಕೊಳ್ಳುವುದಕ್ಕೋಸ್ಕರ ದೂರದೂರದೇಶಗಳಿಂದ ವ್ಯಾಪಾರಿಗಳು ಬರುವರಷ್ಟೆ? ಅವರಿಂದ ಶುಲ್ಕ(ಸುಂಕ)ವನ್ನು ವಸೂಲಿಮಾಡತಕ್ಕದ್ದುಂಟಷ್ಟೆ. ಅದನ್ನೆಲ್ಲಾ ಅದರ ಅಧಿಕಾರಿಗಳು ಸರಿಯಾಗಿ ವಸೂಲಿಮಾಡುತ್ತಿರುವರಷ್ಟೆ?
ಮಾನಿತರಾದ (ಎಂದರೆ ಮಾನ್ಯತೆಯನ್ನು ಪಡೆದ) ವ್ಯಾಪಾರಿಗಳು ಮಾರುಕಟ್ಟೆಗೆ ಸಾಮಾನು-ಸರಂಜಾಮುಗಳನ್ನು ತರುವರಲ್ಲವೆ? ಆಗ ಅವರಿಗೆ ಜನತೆಯಿಂದಲೂ, ಅದಕ್ಕಿಂತ ಮುಖ್ಯವಾಗಿ ನಿನ್ನ ರಾಷ್ಟ್ರದ ಅಧಿಕಾರಿವರ್ಗದಿಂದಲೂ, ಏನೂ ವಂಚನೆಯಾಗಬಾರದು. ತತ್ಸಂಬಂಧದ ವ್ಯವಹಾರಗಳೆಲ್ಲವೂ ಋಜುವಾಗಿವೆಯಷ್ಟೆ?
ಧರ್ಮವನ್ನೂ ಅರ್ಥವನ್ನೂ ಚೆನ್ನಾಗಿ ಬಲ್ಲವರೂ ಅರ್ಥಶಾಸ್ತ್ರವೇತ್ತರೂ ಆದ ವೃದ್ಧರ ಧರ್ಮಾರ್ಥಸಹಿತವಾದ ಮಾತುಗಳನ್ನು ನಿತ್ಯವೂ ಕೇಳುತ್ತಿರುವೆಯಷ್ಟೆ?
ಕೃಷಿಯಿಂದ ಧಾನ್ಯಸಂಚಯವಾಗುವಾಗಲೂ, ಗೋಸಂತತಿಯ ವೃದ್ಧಿಯಾಗುವಾಗಲೂ, ವೃಕ್ಷಗಳು ಫಲಪುಷ್ಪಭರಿತವಾಗಿರುವಾಗಲೂ - ಧರ್ಮಪ್ರಾಪ್ತಿಗೋಸ್ಕರವಾಗಿ ದ್ವಿಜರಿಗೆ ತುಪ್ಪ-ಜೇನುಗಳ ಸಮರ್ಪಣೆಯಾಗುವುದಷ್ಟೆ?