ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಕೃಷ್ಣನೊಬ್ಬ ದರೋಡೆಗಾರನೆನ್ನುತ್ತದೆ, ಈ ಶ್ಲೋಕ!
ಎಂದೇ, ಊರಿಂದೂರಿಗೆ ಹೋಗುವವರಿಗೆ ಒಂದು ಎಚ್ಚರಿಕೆಯನ್ನು ನೀಡುತ್ತದೆ: ಭೀಮರಥೀ-ನದಿಯ ದಾರಿಯಲ್ಲಿ ಮಾತ್ರ ಹೋಗಬೇಡಿ! - ಎಂದಿಲ್ಲಿ ಹೇಳುತ್ತಿದ್ದಾನೆ, ಲೀಲಾಶುಕ. ಇಂದು ಈ ನದಿಗೆ "ಭೀಮಾ" ಎಂದಷ್ಟೇ ಹೇಳುತ್ತಾರೆ. ಅದು ಮಹಾರಾಷ್ಟ್ರ, ಕರ್ಣಾಟಕ, ತೆಲಂಗಾಣಗಳಲ್ಲಿ ಹರಿದು ಕೃಷ್ಣಾ ನದಿಯನ್ನು ಸೇರಿಕೊಳ್ಳುತ್ತದೆ. ಈ ನದಿಗೇ ಪಂಢರಾಪುರದ ಪರಿಸರದಲ್ಲಿ ಚಂದ್ರಭಾಗಾ ಎಂಬ ಹೆಸರಿದೆ. ಹೀಗೆ ಮೊದಲಿನಿಂದಲೂ ಕೃಷ್ಣನೊಂದಿಗೆ ಜೊತೆಗಾರಿಕೆಯಿದೆ, ಈ ನದಿಗೆ.
ಏಕೆ ಹೋಗಬಾರದು, ಭೀಮರಥಿಯತ್ತ? ಏಕೆಂದರೆ ಅಲ್ಲೊಬ್ಬ ಕಳ್ಳನಿದ್ದಾನೆ. ಕಳ್ಳನೆಂದರೂ ಸಾಮಾನ್ಯನಲ್ಲ. ಆತನೊಬ್ಬ ಧೂರ್ತನೇ ಸರಿ. ಆತನೇನು ಮಾಡುತ್ತಾನೆ? ಹೇಗಿದ್ದಾನೆ ಆತ? - ಎಂಬ ಕುತೂಹಲಗಳೇ?
ಸಾಮಾನ್ಯವಾಗಿ ಕಳ್ಳರು ಹೇಗಿರುತ್ತಾರೆ? ಏನೇನೋ ವೇಷ, ಏನೇನೋ ಬಣ್ಣ ಅವರ ಮೈಮೇಲೆ. ಏಕೆ? ತಮ್ಮನ್ನು ಯಾರೂ ಪತ್ತೆಹಚ್ಚಲಾಗಬಾರದಲ್ಲವೇ? ಅದಕ್ಕೇ.
ಆದರೆ ಈ ಕಳ್ಳ ವಿಶಿಷ್ಟನಾದವನು: ಈತ ದಿಗಂಬರ! ಎಂದರೆ ಮೈಮೇಲೆ ಬಟ್ಟೆಯೇ ಇಲ್ಲ. ಯಾರಿಗೆ ದಿಕ್ಕುಗಳೇ ಅಂಬರವೋ, ಎಂದರೆ ದಿಕ್ಕೇ ಬಟ್ಟೆಯೋ, ಆತನೇ ದಿಗಂಬರ. ಅರ್ಥಾತ್ ಮೈಮೇಲೆ ಬಟ್ಟೆಯೆಂಬುದೇ ಇಲ್ಲದವನು! ಅಷ್ಟೇ ಅಲ್ಲ. ಆತ ನೀಲವರ್ಣದವನು. ತಮಾಲದ ಹಾಗೆ, ಎಂದರೆ ಹೊಂಗೆಯ ಹಾಗೆ ಕಪ್ಪಗಿರುವವ. ಕಳ್ಳರು ಸ್ವಲ್ಪ ಕಪ್ಪಾಗಿರುವುದೇ ಹೆಚ್ಚು. ಅಂತೂ ಈ ತೆರನಾದವನನ್ನು ಯಾರೂ ಕಂಡಿಲ್ಲ!
ಸರಿ, ಆತನೇನು ಖಡ್ಗ-ಹಸ್ತನಾಗಿಯೋ ದಂಡ-ಹಸ್ತನಾಗಿಯೋ ನಿಂತಿದ್ದಾನೇನು? ಹೊಡೆದೋ ಬಡಿದೋ ತನ್ನ ಕಾರ್ಯವನ್ನು ಸಾಧಿಸಿಕೊಳ್ಳುತ್ತಾನೇನು? ಇಲ್ಲ, ಅದೆಲ್ಲ ಏನೂ ಇಲ್ಲ. ಅತ ತನ್ನ ನಿತಂಬ-ಬಿಂಬದ ಮೇಲೆ, ಎಂದರೆ ಸೊಂಟದ ಮೇಲೆ, ಕೈಯನ್ನಿಟ್ಟುಕೊಂಡು ನಿಂತಿದ್ದಾನೆ, ಅಷ್ಟೆ.
ಹಾಗಿದ್ದರೆ ಆತನು ಮಾಡುವುದೇನನ್ನು? ಏನೂ ಇಲ್ಲ. ಏನನ್ನೂ ಮಾಡದೆಯೇ, ನಿಮ್ಮ ವಿತ್ತವನ್ನೇ ಕದಿಯುವವ ಆತ! ನಿಮ್ಮ ಚಿತ್ತವೆಂಬ ವಿತ್ತವನ್ನೇ, ಅರ್ಥಾತ್ ಚಿತ್ತವೆಂಬ ಹಣವನ್ನೇ, ಸೆಳೆದುಕೊಂಡು ಬಿಡುವವ ಆತ.
ನಮ್ಮ ಹಣವನ್ನೇ ಕಿತ್ತುಕೊಂಡರಾದರೂ ವಾಸಿ. ಆದರೆ ಚಿತ್ತವನ್ನೇ ಸೂರೆ ಮಾಡಿದರೆ ನಮ್ಮಲ್ಲಿನ್ನು ಉಳಿಯುವುದೇನು? ಏನೂ ಇಲ್ಲ! ಏನನ್ನೂ ಮಾಡದೆಯೇ ಎಲ್ಲವನ್ನೂ ಲೂಟಿ ಮಾಡುವವನಾದ್ದರಿಂದಲೇ ಆತನನ್ನು ಧೂರ್ತನೆಂದಿರುವುದು!
ಲೋಕದಲ್ಲಿ ಬೇರೆ ಕಳ್ಳರ ಬಗೆಯೇ ಬೇರೆ. ಅವರು ಸಾಯುಧರಾಗಿರುತ್ತಾರೆ, ನನ್ನ ಧನವನ್ನು ಅಪಹರಿಸುತ್ತಾರೆ. ಆದರೆ ಈ ಕಳ್ಳ ಹಾಗಲ್ಲ!
ಈ ಶ್ಲೋಕದ ಭಾವವಿದು: ಕೃಷ್ಣನೇ ಆ ಅಪೂರ್ವ-ಚೋರ. ಕಂಡರೆ ಸಾಕು, ನಮ್ಮ ಮನಸ್ಸನ್ನೇ ಸೂರೆಗೊಳ್ಳುತ್ತಾನೆ, ಅವನು. ಆತನ ಭಂಗಿಯೇ ಸಾಕು. ಸೊಂಟದ ಮೇಲೆ ಕೈಯಿಟ್ಟಿರುವ ಬಗೆಯೇ ಆಕರ್ಷಕ. ಪಂಢರಪುರದ ಕೃಷ್ಣನು ನಿಂತಿರುವುದೂ ಈ ಭಂಗಿಯಲ್ಲೇ ಅಲ್ಲವೇ? ಚಂದ್ರಭಾಗಾ-ತೀರದ ವಿಟ್ಠಲನ ಕಥೆಯೇ ಇದಲ್ಲವೇ?
ಎಷ್ಟು ನೋಡಿದರೂ ಕಣ್ತಣಿಯದ ಸೊಬಗಿನ ಈ ಮೂರ್ತಿಯನ್ನು ಕಂಡವರು ಆತನಿಗೆ ಒಡನೆಯೇ ಮನಸೋಲುತ್ತಾರೆ. ಏನೂ ಮಾಡದೆಯೇ ಚಿತ್ತವನ್ನು ತನ್ನತ್ತ ಸೆಳೆದುಕೊಳ್ಳುವವ, ಈತ.
ಲೀಲಾಶುಕನ ಮಾತನ್ನು ಕೇಳಿ, ಯಾರೀ ವಿಲಕ್ಷಣ-ಚೋರನೆಂದು ಆತನನ್ನು ನೋಡಹೋದಿರೋ, ಅವನಿಗೆ ನೀವೇ ಮನಸೋಲುವಿರಿ. ಅಲ್ಲಿ ಮಾತ್ರ ಹೋಗಬೇಡಿರಿ - ಎಂದು ಹೇಳಿದ್ದಕ್ಕೇ ಕೆಲವರು ಹೋಗಿ ನೋಡುವುದುಂಟು. ಹೋಗಿ ನೋಡಿ - ಎಂದು ಹೇಳುವುದೇ ಕವಿಯ ಆಶಯ. ಹೋಗಬೇಡಿ - ಎಂದು ಹೇಳಿ, "ಹೋಗಿ, ಖಂಡಿತಾ ಬಿಡಬೇಡಿ!" - ಎಂದೇ ಸಂದೇಶ ನೀಡುವ ಕವಿಯ ಜಾಣ್ಮೆ ಇಲ್ಲಿ ಆಸ್ವಾದ್ಯ. ಕೆಲವು ಮಕ್ಕಳಿಗೆ ಮಾಡಬೇಡವೆಂದದ್ದನ್ನೇ ಮಾಡುವುವಲ್ಲವೇ? ಹಾಗೇ ಇಲ್ಲೂ.
ಮಾ ಯಾತ ಪಾಂಥಾಃ ಪಥಿ ಭೀಮರಥ್ಯಾ
ದಿಗಂಬರಃ ಕೋಽಪಿ ತಮಾಲನೀಲಃ |
ವಿನ್ಯಸ್ತ-ಹಸ್ತೋಽಪಿ ನಿತಂಬ-ಬಿಂಬೇ
ಧೂರ್ತಃ ಸಮಾಕರ್ಷತಿ ಚಿತ್ತ-ವಿತ್ತಮ್ ||
***
ಗೋಪ-ಕಿಶೋರನೆಂದರೆ ಬಾಲಕೃಷ್ಣನೆಂದೇ ಅರ್ಥ. ಆತನ ಮೂರ್ತಿಯು ನಮ್ಮ ಕಾಮವನ್ನು ಪೂರೈಸಲಿ ಎನ್ನುತ್ತದೆ ಈ ಶ್ಲೋಕ. ಸಣ್ಣಪುಟ್ಟ ಬಯಕೆಗಳೇ ಕಾಮವಲ್ಲ. ಅತ್ಮಕಾಮ - ಎಂದು ಉಪನಿಷತ್ತು ಹೇಳುವ ಉನ್ನತವಾದ ಅಪೇಕ್ಷೆಯೇ ಅದು. ಪರಾತ್ಪರ-ವಸ್ತುವನ್ನು ಬೇಡಿಕೊಳ್ಳುವುದು ಸಣ್ಣಪುಟ್ಟ ಕಾಮನೆಗಳ ಪೂರ್ತಿಗಾಗಿ ಅಲ್ಲ. ಮಹಾರಾಜನು ಪ್ರಸನ್ನನಾಗಿ, ಅರ್ಧರಾಜ್ಯವನ್ನು ಕೊಡಲೂ ಸಿದ್ಧನಿದ್ದು, "ಏನು ಬೇಕು, ಹೇಳು" ಎಂದರೆ, ಅರ್ಧ ಚಟಾಕು ಸಾಸಿವೆ ಬೇಕಿತ್ತು – ಎನ್ನುವಿರಾ? – ಎಂದು ಶ್ರೀರಂಗಮಹಾಗುರುಗಳು ಉದಾಹರಣೆಗಾಗಿ ಕೇಳಿದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಎಂದೇ ಎಂತಹ ಅದ್ಭುತ ಈ ಬಾಲಕೃಷ್ಣಮೂರ್ತಿಯೆಂಬುದು ಎಂಬುದನ್ನು ಮೊದಲು ಮನಗಾಣಬೇಕು. "ಅಯ್ಯೋ ಅದನ್ನು ಇಂತಹುದೆಂದು ಹೇಳಲೇ ಆಗದು!" - ಎನ್ನುತ್ತಾನೆ, ಕವಿ. ಎಂದರೆ ಅದರ ಸ್ವರೂಪವು ಸುಜ್ಞೇಯವೇ ಅಲ್ಲ. ಎಂದೇ "ಕಾ ಅಪಿ" ಎನ್ನುವುದು.
ಹಾಗೆಂದು ಹೇಳಿಯೂ, ಇಷ್ಟು ಮಾತ್ರ ಹೇಳಬಹುದು, ಅಥವಾ ಹೇಳಲೇಬೇಕು - ಎಂಬಂತೆ ನಾಲ್ಕು ವಿಶೇಷಗಳನ್ನು ಹೇಳಿದ್ದಾನೆ. ಮೊದಲನೆಯದು ಅದು ಇಡೀ ಜಗತ್ತಿಗೇ ಅಭಿರಾಮವಾದುದು ಎಂಬುದು. ಅಭಿರಾಮವೆಂದರೆ ಸುಂದರ. ಅಭಿರಾಮ-ಸೀಮೆಯೆಂದರೆ ಸೌಂದರ್ಯದ ಎಲ್ಲೆ.
ಅಷ್ಟೇ ಅಲ್ಲ. ಮೂರು ಕಡೆ ಲಭ್ಯವಾದುದು ಆ ಮೂರ್ತಿ. ಅದೂ ಒಂದರ್ಥದಲ್ಲಿ ಸುಲಭವಾಗಿಯೇ ದೊರೆಯುವಂತಹುದು. ಎಲ್ಲೆಲ್ಲಿ? ಮೊದಲನೆಯದು ವೇದ-ವಾಕ್ಕುಗಳ ಶಿರಸ್ಸಿನಲ್ಲಿ. ವೇದವಾಙ್ಮಯದ ಶೀರ್ಷ-ಭಾಗವೆಂದರೆ ಉಪನಿಷತ್ತು ಎಂದರ್ಥ. ತಲೆಯೆಂಬುದೇ ಶರೀರದ ಅತ್ಯುನ್ನತವಾದ ಭಾಗವಲ್ಲವೇ? ಹಾಗೆ ವೇದವಾಣಿಯ ತುತ್ತತುದಿಯೆಂದರೆ ವೇದಾಂತವೇ. ವೇದಾಂತವೆಂದರೆ ಉಪನಿಷತ್ತೇ. ತಲೆಯು ಜ್ಞಾನಭಾಗವೆನಿಸಿಕೊಳ್ಳುವುದಲ್ಲವೇ? ಹಾಗೆಯೇ ಉಪನಿಷತ್ತಿಗಾದರೂ ಜ್ಞಾನಕಾಂಡವೆಂದೇ ಹೆಸರು. ಹೀಗೆ ಉಪನಿಷದ್-ವೇದ್ಯನು ನಮ್ಮ ಕೃಷ್ಣನು – ಎನ್ನುವುದು ಇಲ್ಲಿಯ ಭಾವ. ಇದು ಮೊದಲನೆಯದು.
ಎರಡನೆಯದಾಗಿ ಯೋಗ-ವಿದ್ಯೆಯನ್ನು ಬಲ್ಲವರ ಹೃದಯದಲ್ಲಿ ಕಾಣಿಸಿಕೊಳ್ಳುವವನು, ಶ್ರೀಕೃಷ್ಣ.
ಮೊದಲನೆಯದಕ್ಕೆ ವಿದ್ವತ್ತು ಬೇಕು. ಎರಡನೆಯದಕ್ಕೆ ಯೋಗಜ್ಞನಾದ ಗುರುವಿನ ಮಾರ್ಗದರ್ಶನ ಬೇಕು. ಇದಕ್ಕೂ ಹಿರಿದಾದ ಸಾಧನೆಯೇ ಬೇಕು.
ಮೂರನೆಯದೇ ನಿಜವಾಗಿ ಸುಲಭವೆನ್ನಿಸತಕ್ಕದ್ದು. ವ್ರಜ-ಸ್ತ್ರೀಯರ ಪಾದಾಂಬುಜದಲ್ಲಿ. ಎಂದರೆ ಗೋಪಾಂಗನೆಯರ ಚರಣದಲ್ಲಿ. ಗೋಪಿಕೆಯರ ಭಾಗ್ಯವೆಂದರೆ ಕೃಷ್ಣನ ಸಾಂನಿಧ್ಯ-ಸಲಿಗೆಗಳು. ಸನಿಹವಿರುವೆಡೆಯಲ್ಲಿ ಕಲಹವೂ, ಕಲಹವಿರುವೆಡೆ ಕ್ಷಮಾ-ಯಾಚನವೂ ಇರುವಂತಹುದೇ. ಕ್ಷಮೆ ಕೇಳುವುದೆಂದರೆ ಕಾಲಿಗೆ ಬೀಳುವುದೇ ತಾನೇ? ಗೋಪಿಕೆಯರ ಕಾಲಿಗೆ ಕೃಷ್ಣನೇ ಬೀಳುವ ಪ್ರಸಂಗಗಳೂ ಇಲ್ಲದಿಲ್ಲ!
ಎಂದೇ ಈ ಮೂರೆಡೆಗಳಲ್ಲಿ ಕೃಷ್ಣನನ್ನು ಕಾಣಬಹುದು - ಎನ್ನುತ್ತಾನೆ, ಕವಿ.
ಯಾ ಕಾಪಿ ಸರ್ವ-ಜಗತಾಮ್ ಅಭಿರಾಮ-ಸೀಮಾ
ಕಾಮಾಯ ನೋ ಭವತು ಗೋಪ-ಕಿಶೋರ-ಮೂರ್ತಿಃ |
ಯಾ ಶೇಖರೇ ಶ್ರುತಿ-ಗಿರಾಂ ಹೃದಿ ಯೋಗ-ಭಾಜಾಂ
ಪಾದಾಂಬುಜೇ ಚ ಸುಲಭಾ ವ್ರಜ-ಸುಂದರೀಣಾಮ್||
ಸೂಚನೆ : 25/10/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.