ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೩೭. ಪ್ರಯತ್ನವನ್ನು ಎಲ್ಲಿ ಮಾಡಬೇಕು?
ವಿದ್ಯಾಭ್ಯಾಸದಲ್ಲಿ, ಒಳ್ಳೆಯ ಔಷಧದಲ್ಲಿ ಮತ್ತು ಸತ್ಪಾತ್ರರಿಗೆ ದಾನಮಾಡುವುದರಲ್ಲಿ.
ನಾವು ನಮ್ಮ ಜೀವನವನ್ನು ಒಳ್ಳೆಯದಾಗಿ ಮಾಡಿಕೊಳ್ಳಬೇಕು ಎಂಬುದಾಗಿ ಬಯಸುತ್ತೇವೆ. ಅದಕ್ಕಾಗಿ ಅನೇಕ ಬಗೆಯಲ್ಲಿ ಪ್ರಯತ್ನವನ್ನೂ ಮಾಡುತ್ತಿರುತ್ತೇವೆ. ಆದರೆ ಎಲ್ಲಿ ಪ್ರಯತ್ನ ಮಾಡಬೇಕು? ಯಾವ ವಿಷಯದಲ್ಲಿ ಮಾಡಬೇಕು? ಎಂಬುದರ ಬಗ್ಗೆ ಸ್ಪಷ್ಟನಿರ್ದೇಶನ ನಮಗೆ ಅತ್ಯಂತವಿರಳ. ಆದರೆ ಇಲ್ಲಿ ಅಂತಹ ಸ್ಪಷ್ಟವಾದ ನಿರ್ದೇಶನ ಇದೆ. ಅಂದರೆ ವಿದ್ಯಾಭ್ಯಾಸದಲ್ಲಿ ಮತ್ತು ಒಳ್ಳೆಯ ಔಷಧದಲ್ಲಿ ಹಾಗೂ ಸತ್ಪಾತ್ರರಿಗೆ ದಾನಮಾಡುವುದರಲ್ಲಿ ನಮ್ಮ ವಿಶೇಷ ಪ್ರಯತ್ನವನ್ನು ಮಾಡಿದರೆ, ಆಗ ನಮ್ಮ ಜೀವನ ಸಫಲ ಎಂದೇ ಅರ್ಥ. ಹಾಗಾಗಿ ಈ ಮೂರು ಸಂಗತಿಗಳು ನಮ್ಮ ಜೀವನವನ್ನು ಪೂರ್ಣಜೀವನವನ್ನಾಗಿಸುವುದಕ್ಕೆ ಇರುವ ಶ್ರೇಷ್ಠಸಾಧನಗಳು ಎಂಬ ಆಶಯ ಈ ಪ್ರಶ್ನೋತ್ತರದಲ್ಲಿ ಇದೆ. ಈ ಮೂರು ಸಂಗತಿಗಳು ನಮ್ಮ ಜೀವನವನ್ನು ಹೇಗೆ ಹದಗೊಳಿಸುತ್ತವೆ? ಎಂಬುದನ್ನು ಚಿಂತಿಸಿಸೋಣ.
ವಿದ್ಯಾಭ್ಯಾಸ - ವಿದ್ಯೆಯನ್ನು ಅಧ್ಯಯನ ಮಾಡುವುದು. ಇಂದು ಯಾವುದು ವಿದ್ಯೆ? ಎಂಬುದೇ ತಿಳಿಯದ ಸ್ಥಿತಿ ಉಂಟಾಗಿದೆ. ಅದಕ್ಕೆ ಶ್ರೀರಂಗ ಮಹಾಗುರುಗಳು ಈ ಮಾತನ್ನು ಹೇಳುತ್ತಿದ್ದರು "ವಿದ್ಯಾಭ್ಯಾಸವಲ್ಲಪ್ಪ ವಿದ್ಯಾಭಾಸವಾಗಿದೆ" ಎಂದು. ಹಾಗಾದರೆ ವಿದ್ಯೆ ಎಂದರೆ ಯಾವುದು ನಮ್ಮನ್ನು ಜ್ಞಾನದ ಕಡೆ ಕೊಂಡೊಯ್ಯುತ್ತದೆಯೋ, ಅದು. ಮೂಲತಃ ಭಗವಂತನನ್ನೇ ವಿದ್ಯೆ ಎಂಬುದಾಗಿ ಕರೆಯಲಾಗುತ್ತದೆ. ಭಗವಂತನ ಬಳಿಗೆ ಹೋಗಲು ಇರುವ ಅರಿವಿನ ಸಾಧನ ಯಾವುದೋ ಅದೇ ವಿದ್ಯೆ ಎಂದು ಕರೆಸಿಕೊಳ್ಳುತ್ತದೆ. ಅಂತಹ ವಿದ್ಯೆಯನ್ನು ಅಧ್ಯಯನ ಮಾಡುವಂತವಲ್ಲಿ ನಮ್ಮ ಪ್ರಯತ್ನ ಇರಬೇಕು. ಆಗ ನಮ್ಮ ಜೀವನದ ಗುರಿಯಾದ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲು ಸುಲಭಸಾಧ್ಯಎಂದು.
ಇನ್ನೊಂದು ವಿಷಯ ಉತ್ತಮ ಔಷಧ. ನಮ್ಮ ಜೀವನ ವ್ಯಾಪಾರವನ್ನು ಮಾಡುವಾಗ ಈ ದೇಹಕ್ಕೆ ಅನೇಕ ರೋಗಗಳು ಬರುವುವು. ಆ ರೋಗಗಳನ್ನು ಪರಿಹರಿಸುವ ಬೇಕಾದುದು ಅಷ್ಟೇ ಅಗತ್ಯ. ಏಕೆಂದರೆ ನಾವು ಸಾಧನೆ ಮಾಡಬೇಕಾದರೆ ಶರೀರವು ನೀರೋಗವಾಗಿರಬೇಕು. ಬಂದ ರೋಗಗಳನ್ನು ಪರಿಹರಿಸಿಕೊಳ್ಳಬೇಕು. ಹಾಗಾಗಿ ರೋಗಕ್ಕೆ ಸರಿಯಾದ ಔಷಧೋಪಚಾರವನ್ನು ಮಾಡಿಕೊಂಡಾಗ ಶರೀರ ಸೌಖ್ಯವಾಗಿರುತ್ತದೆ. ಅಂತಹ ಶರೀರದಿಂದ ಒಳ್ಳೆಯ ಸಾಧನೆಯನ್ನು ಮಾಡಲು ಸಾಧ್ಯ ಎಂಬುದು ಇದರ ಹಿಂದಿರುವ ತಾತ್ಪರ್ಯ.
ಇನ್ನೊಂದು ಸಂಗತಿ ಎಂದರೆ ಸತ್ಪಾತ್ರದಾನ. ಈಗಾಗಲೇ ಈ ಹಿಂದಿನ ಪ್ರಶ್ನೆಯಲ್ಲಿ ಸತ್ಪಾತ್ರದಾನದ ಬಗ್ಗೆ ಅನೇಕ ಮಾರ್ಮಿಕವಾದ ವಿಷಯಗಳನ್ನು ಚರ್ಚಿಸಲಾಗಿತ್ತು. ನಮ್ಮಲ್ಲಿರುವ ವಸ್ತುಗಳು ಸದುಪಯೋಗವಾಗಬೇಕು. ಅಂದರೆ ಯಾವಾಗ ದಾನವು ನಮ್ಮಿಂದ ಆಗುತ್ತದೆಯೋ ಆಗ ನಾವು ಶುದ್ಧರಾಗುತ್ತೇವೆ. ಅದರ ಪರಿಣಾಮವಾಗಿ ನಮ್ಮಲ್ಲಿ ಒಳ್ಳೆಯ ಪದಾರ್ಥಗಳು ಸೇರಿಕೊಳ್ಳುತ್ತವೆ. ಶುದ್ಧವಾದ ಪದಾರ್ಥಗಳು ಈ ಶರೀರವನ್ನು ಪಡೆದುಕೊಂಡು ತನ್ಮೂಲಕ ವಿದ್ಯೆಯ ಮೂಲವಾದ ಭಗವಂತನನ್ನು ಸೇರಲು ಅತ್ಯಂತ ಉಪಯುಕ್ತವಾಗುತ್ತವೆ. ಹಾಗಾಗಿ ಸತ್ಪಾತ್ರದಾನವು ಅತ್ಯಂತ ಶ್ರೇಷ್ಠವಾದದ್ದು ಎಂಬುದಾಗಿ ಪರಿಗಣಿತವಾಗಿವೆ. ಆದ್ದರಿಂದ ಈ ಮೂರು ವಿಷಯಗಳಲ್ಲಿ ನಮ್ಮ ನಿರಂತರ ಪ್ರಯತ್ನ ಬಹಳ ಮುಖ್ಯ ಎಂಬ ಸಂಗತಿ ಈ ಪ್ರಶ್ನೋತ್ತರದಲ್ಲಿ ಇದೆ.
ಸೂಚನೆ : 26/10/2025 ರಂದು ಈ ಲೇಖನವು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.