ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ಸನಾತನ ಈ ಪದ ಬಹಳ ಪ್ರಚಲಿತವಾಗಿದೆ. ಸನಾತನ ಧರ್ಮ, ಸನಾತನ ಸಂಪ್ರದಾಯ, ಸನಾತನಿಗಳು ಇಲ್ಲೆಲ್ಲಾ ಸನಾತನ ಎಂಬ ಪದದ ಬಳಕೆಯಾಗಿದೆ. ಹಾಗೆ ಬಳಸುವವರಲ್ಲಿ ಅನೇಕರು ಸನಾತನ ಎಂದರೆ ಹಳೆಯದು, ಪ್ರಾಚೀನ ಎಂಬ ಅರ್ಥದಲ್ಲೇ ಅದನ್ನು ಬಳಸುತ್ತಾರೆ. ನಮ್ಮ ಪಕ್ಕದ ರಾಜ್ಯದ ರಾಜಕೀಯ ಪ್ರಮುಖರೊಬ್ಬರು ಸನಾತನ ಧರ್ಮವು ಸಾಮಾಜಿಕ ನ್ಯಾಯ, ಸಮಾನತೆಗೆ ವಿರುದ್ಧವಾಗಿದೆ, ಇದನ್ನು ತೊಡೆದುಹಾಕಬೇಕು ಎಂಬ ಆಕ್ಷೇಪಾರ್ಹ ಮಾತುಗಳನ್ನು ಆಡಿರುವುದನ್ನು ಕೇಳಿದ್ದೇವೆ. ಅವರಲ್ಲದೇ ಆಧುನಿಕ ವಿಚಾರವಂತರು ಅನೇಕರು ಅದು ಜಡ್ಡು, ಹಳೆಯದು, ಇಂದಿನ ಕಾಲಕ್ಕೆ ಪ್ರಸ್ತುತವಲ್ಲ ಎಂಬ ಮಾತುಗಳನ್ನು ಮೇಜು ಗುದ್ದಿ ಹೇಳುವುದನ್ನು ಕೇಳುತ್ತೇವೆ. ಈ ನಡುವೆ ಸನಾತನ ಧರ್ಮ ನಮ್ಮದು, ಅದು ಉಳಿಯಬೇಕು ಎಂಬ ಆಗ್ರಹ, ಹೋರಾಟಗಳೂ ಸಾಕಷ್ಟು ನಡೆದಿವೆ.
ಆದರೆ "ಸನಾತನ" ಎಂಬ ಪದವನ್ನು ಯಾರು ತಂದರೋ, ಯಾವ ಸಂಸ್ಕೃತಿಯಲ್ಲಿ ಅದು ಜನಜನಿತವಾಗಿ ಬರುತ್ತಿದೆಯೋ, ಯಾವ ಭಾಷೆಯಲ್ಲಿ ಅದು ಬಂದಿದೆಯೋ ಅಲ್ಲಿ ಅದರ ಅರ್ಥವನ್ನು ಹುಡುಕುವುದು ನ್ಯಾಯಬದ್ಧವಾಗಿದೆ. ಸಂಸ್ಕೃತ ಭಾಷೆಯ ಪದ. "ಸನಾ" ಎಂದರೆ ನಿತ್ಯ, ಶಾಶ್ವತ. ಸನಾತನ ಎಂದರೆ ಶಾಶ್ವತವಾಗಿರುವ ಎಂಬ ಅರ್ಥ ಬರುತ್ತದೆ.
ಹೀಗಾಗಿ ಮೇಲಿನ ಪದಗಳು- ನಿತ್ಯ ಶಾಶ್ವತವಾದ, ಬದಲಿಸಲಾಗದ ಧರ್ಮ-ಸನಾತನ ಧರ್ಮ. ನಿತ್ಯ ಶಾಶ್ವತವಾಗಿ ಬೆಳೆಸಿದ ಸಂಪ್ರದಾಯ-ಸನಾತನ ಸಂಪ್ರದಾಯ. ನಿತ್ಯ ಶಾಶ್ವತವಾದ ಬದುಕಿನ ವಿಧಾನವನ್ನು ಅನುಸರಿಸುವವನು-ಸನಾತನಿ ಎಂಬ ಅರ್ಥವನ್ನು ಒಳಗೊಂಡಿವೆಯೇ ಹೊರಟು ಹಿಂದಿನದು ಎಂದಲ್ಲ.
ಯಾವುದು ನಿತ್ಯ ಶಾಶ್ವತವಾದ ಬದುಕು?
ವಿಶ್ವದ ಎಲ್ಲಾ ಸಂಗತಿಗಳೂ ಕಾಲದ ಪ್ರಭಾವಕ್ಕೆ ಒಳಗಾಗಿ ಬದಲಾಗುತ್ತಿರುವಾಗ ನಿತ್ಯ ಶಾಶ್ವತ ಎಂಬುದು ಉಂಟೇ? ಎಂಬುದು ಪ್ರಶ್ನೆ.ಆದರೆ ಮಾನವನ ಉಗಮದಿಂದ ಇಲ್ಲಿಯವರೆಗೆ ಬದಲಾಗದ ವಿಷಯಗಳೂ ಉಂಟು. ಅಂದಿನಿಂದ ಇಂದಿನ ವರೆಗೂ ಆಲೋಚನೆ ಮಾಡುವುದು ಬುದ್ಧಿ. ನೋಡುವುದು ಕಣ್ಣು. ಕೇಳುವುದು ಕಿವಿ.ಎಂಬ ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ. ಹೀಗೆ ಕಾಲ ಬದಲಾದಂತೆ ಬದಲಾಗುವ ವ್ಯವಸ್ಥೆ ಇದ್ದಂತೆ ಬದಲಾಗದ ವ್ಯವಸ್ಥೆಯೂ ಇರುತ್ತದೆ. ಆದರೆ ಈ ದೇಶದ ಜ್ಞಾನಿಗಳು ಕಾಲದ ಪ್ರಭಾವಕ್ಕೆ ಒಳಗಾಗದ ಬೆಳಕೊಂದನ್ನು ಕಂಡುಕೊಂಡಿದ್ದಾರೆ.
ಸ ಹಿ ಲೋಕಯೋನಿರಮೃತಸ್ಯ ಪದಮ್
ಸೂಕ್ಷ್ಮo ಪರಾಯಣಮಚಲಂ ಹಿ ಪದಮ್
ತತ್ಸಾಂಖ್ಯಯೋಗಿಭಿರುದಾಹೃತಂ ತಂ
ಬುದ್ಧ್ಯಾ ಯದಾತ್ಮಭಿರಿದಂ ಸನಾತನಂ||
ಅದು ವಿಶ್ವವು ವಿಕಾಸವಾಗುವ ಎಡೆ.ಅಮೃತದ ಸ್ಥಾನ. ಮೃತ್ಯುವು ಯಾವ ಎಡೆಯನ್ನು ಸೊಂಕಲಾರದೋ , ಯಾವುದನ್ನು ಮುಟ್ಟಿದಾಗ ವಿಶ್ವವನ್ನು ಯಾವ ಶಕ್ತಿಯು ತುಂಬಿಕೊಂಡಿದೆ ಎಂಬ ಅರಿವಾಗುವುದೋ ಅಂತಹ ಅಮೃತದ ನೆಲೆ. ಮೃತ್ಯುವಿನಿಂದ ಅಮೃತತ್ವದ ಎಡೆಗೆ ನಮ್ಮನ್ನು ಕರೆದೊಯ್ಯು ಎಂಬುದು ಭಾರತೀಯರ ನಿತ್ಯದ ಪ್ರಾರ್ಥನೆ.ಅಂತಹ ಅಮೃತದ ನೆಲೆಯನ್ನೇ ಸನಾತನ ಎಂದಿದ್ದಾರೆ. ಅದು ಸ್ಥೂಲ ದೃಷ್ಟಿಗೆ ಗೋಚರವಲ್ಲದ ಸೂಕ್ಷ್ಮತಮವಾದ ಬದುಕು.. ಅದು ಶ್ರೇಷ್ಠವಾದ ಗತಿ. ಬದಲಾಗದ ಸ್ಥಿರವಾದ ಬದುಕು. ಇದನ್ನು ಹೇಳಿದವರು-ಸಾಂಖ್ಯ ಯೋಗಿಗಳು. ತಮ್ಮ ಬುದ್ಧಿ ಮನಸ್ಸುಗಳನ್ನು ಮುಂದಕ್ಕೆ ಮಾತ್ರವೇ ಹರಿಸದೇ, ಹಿಂಬದಿಗೂ ಹರಿಸುತ್ತಾ "ತನ್ಮನೋ ವಿಲಯಂ ಯಾತಿ ತದ್ವಿಷ್ನೋ ಪರಮಂ ಪದಮ್" . ಎಂದು ಆ ಶಾಶ್ವತವಾದ ನೆಲೆಯನ್ನು ಮುಟ್ಟಿ,ಅಲ್ಲಿ ಆದ ದರ್ಶನದಿಂದ ಅರಳಿದ ಮನಸ್ಸಿನಿಂದ ಹೊರಬಂದ ಪದವೇ ಸನಾತನ. ಆ ದರ್ಶನವು ಕೊಟ್ಟ ಸುಖ, ನೆಮ್ಮದಿ,ತಂಪು ಇವುಗಳನ್ನು ಅನುಭವಿಸಿ ಜೀವಲೋಕಕ್ಕೆ ಅದೇ ಸುಖವೇ ಬೇಕಿರುವುದು, ಎಂಬ ಲೋಕಹಿತ ದೃಷ್ಟಿಯಿಂದ ಅದನ್ನು ಹೊಂದುವ ಆಚಾರ ವಿಚಾರಗಳನ್ನೇ ಸಾಧನ ಧರ್ಮವಾಗಿ ತಂದರು.
ಸೃಷ್ಟಿಯಲ್ಲಿ ಕ್ರಮಬದ್ಧವಾದ ನಡೆ
ಒಂದು ಬೀಜದಿಂದ ವಿಕಾಸವಾದ ವೃಕ್ಷದಲ್ಲಿ ಕ್ರಮಬದ್ಧವಾದ ನಡೆ ಇರುತ್ತದೆ.ಅಂಕುರ,ಕಾಂಡ,ಕೊಂಬೆ,ಎಲೆ,ಹೂವು.ಕಾಯಿ,ಹಣ್ಣು ಮತ್ತೆ ಬೀಜದಲ್ಲಿ ಪರ್ಯವಸಾನ. ಹಾಗೆಯೇ ವೃಕ್ಷದ ಬೆಳವಣಿಗೆ ಆದರೆ ಅದು ಸಹಜ. ಹಾಗೆ ಬೆಳೆಯುವಂತೆ ಮಾಡುವ ಕೃಷಿಯೆಲ್ಲವೂ ಧರ್ಮವೇ. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು- ತೆಂಗಿನ ಮರ ಪಾಪಾಸ್ ಕಳ್ಳಿ ಬಿಟ್ಟಿತು ಅಂದರೆ ಅದು ಅಸಹಜ. ಅದರ ಬಾಳಾಟ ಅದರ ಸೃಷ್ಟಿಯಂತೆಯೇ ಸಾಗಬೇಕು.ಎಲ್ಲಿಂದ ಆರಂಭವಾಯಿತೋ ಆ ಮೂಲದಲ್ಲೇ ನಿಲ್ಲಬೇಕು" ಹಾಗೆಯೇ ನಿತ್ಯವಾದ ಸನಾತನವಾದ ಪರಮಾತ್ಮ ಬೀಜದಿಂದ ಹೊರಟ ನಮ್ಮ ಜೀವನ ವೃಕ್ಷಗಳು ವಿಕಾಸದ ಎಲ್ಲಾ ಹಂತಗಳಲ್ಲೂ ಪರಮಾತ್ಮ ಬೀಜದ ಧರ್ಮವನ್ನೇ ಇಟ್ಟುಕೊಂಡು ತುಂಬಿದ ಬಾಳನ್ನು ನಡೆಸಿ ಮತ್ತೆ ಪರಮಾತ್ಮ ಬೀಜದಲ್ಲೇ ನೆಲೆ ನಿಲ್ಲುವಂತಾದರೆ ಅದು ಸಹಜವಾದ ಜೀವನ ಎಂದರು ಶ್ರೀರಂಗ ಮಹಾಗುರುಗಳು. ಹಾಗೆ ನಡೆಯುವಂತೆ ಜೀವನ ವಿಧಾನವನ್ನು ರೂಪಿಸಿದರೆ ಆ ಸನಾತನ ಧರ್ಮ. ಅಂತಹ ವಿಧಾನವನ್ನೇ ಕೆಡಿಸದೇ ಹಾಗೇ ಮುಂದು ಮುಂದಿನ ಪೀಳಿಗೆಗೆ ಕೊಡುತ್ತಾ ಬಂದರೆ ಅದು ಸನಾತನ ಸಂಪ್ರದಾಯ.
ಬೇರಿನಿಂದ ಬೇರೆಯಾಗಿಲ್ಲ
ಇಲ್ಲಿನ ಯಾವ ಸಂಪ್ರದಾಯಗಳೂ ಸನಾತನವಾದ ಬದುಕಿನ ಬೇರಿನಿಂದ ಬೇರೆಯಾಗಿ ಬಂದಿಲ್ಲ. ಎಂದೇ ಯಾವುದೇ ಭಾರತೀಯ ವಿದ್ಯೆ, ಕಲೆಗಳನ್ನು ಹಿಡಿದು ಹೊರಟರೆ ಅದು ಆ ಕಲಾನಾಥನಾದ ಭಗವಂತನಲ್ಲೇ ನಿಲ್ಲಿಸುತ್ತದೆ. ಶ್ರೀರಂಗ ಮಹಾಗುರುಗಳು ಹೇಳಿದಂತೆ-"ಸನಾತನಾರ್ಯ ಭಾರತ ಮಹರ್ಷಿಗಳು ಕೇವಲ ಭೌತಿಕದಲ್ಲೇ ನಿಲ್ಲದೇ ದೈವಿಕವಾಗಿ ಏನಿದೆ? ಆಧ್ಯಾತ್ಮಿಕವಾಗಿ ಏನಿದೆ? ಎಂದು ನೋಡುತ್ತಾ ದೈವೀ ರಾಜ್ಯ, ಆತ್ಮ ರಾಜ್ಯಗಳನ್ನು ಪ್ರವೇಶಿಸಿ ಜ್ಞಾನಭಂಡಾರವನ್ನು ತಲುಪಿದರು." ಹಾಗೆ ಬೇರಿನೊಡನೆ ಇದ್ದಾಗ ಆ ಜೀವನ ವೃಕ್ಷದಲ್ಲಿ ರಸವಿದೆ, ಸೌಂದರ್ಯವಿದೆ, ಮಾಧುರ್ಯವಿದೆ. ಇಲ್ಲವೇ ನೀರಸ. ಹೀಗಾಗಿ ಸನಾತನ ಎಂದಾಗ ನಿತ್ಯ ಶಾಶ್ವತನಾದ ಭಗವಂತನನ್ನೇ ಹೇಳಿರುವುದು. ಅವನಿಂದ ವಿಕಾಸವಾದ ಎಲ್ಲವೂ ಸನಾತನದ ವ್ಯಾಪ್ತಿಗೆ ಬರುತ್ತವೆ. ಸನಾತನ ಧರ್ಮ ಸಂಸ್ಕೃತಿಗಳು ಎಲ್ಲಾ ಕಾಲಕ್ಕೂ ಪ್ರಸ್ತುತವೇ. ಅದನ್ನು ಅಪ್ರಸ್ತುತ ಎನ್ನುವವರು ಜೀವನ ವೃಕ್ಷದ ಸಮಗ್ರ ಪರಿಚಯವಿಲ್ಲದವರು.ಅದರ ಅರ್ಥ ಸಂಪತ್ತಿಯನ್ನು ಕಂಡುಕೊಂಡಿಲ್ಲ. ಅದು ಅವರ ದೃಷ್ಟಿದೋಷ. ಅದನ್ನು ಅವರೇ ಸರಿ ಮಾಡಿಕೊಳ್ಳಬೇಕು. ಆ ಮೂಲವಸ್ತು ಕೇಂದ್ರಿತವಾಗಿ ಬಂದ ಸಂಸ್ಕೃತಿಯೇ ಸನಾತನ ಸಂಸ್ಕೃತಿ. ನಾವೆಲ್ಲರೂ ಅಷ್ಟೇ ಏಕೆ ವಿಶ್ವದ ಎಲ್ಲಾ ಜೀವಿಗಳೂ ಸನಾತನರಾಗಬೇಕೆಂಬುದೇ ಈ ದೇಶದ ಮಹರ್ಷಿಗಳ ಜೀವನ ದೃಷ್ಟಿ, ಎಂದೇ ಅವರ ಧೀರ ಘೋಷಣೆ- "ವಿಶ್ವವನ್ನೇ ಶ್ರೇಷ್ಠವನ್ನಾಗಿಸೋಣ" ಎಂದಾಗಿದೆ. ನಾವೆಲ್ಲಾ ಈ ಅರ್ಥದಲ್ಲಿ ಸನಾತನಿಗಳಾಗೋಣ.