ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೩೬. ಮರಣದ ಪರ್ಯಂತ ಶೂಲದಂತೆ ಚುಚ್ಚುವುದು ಯಾವುದು?
ಉತ್ತರ - ಹುದುಗಿದ ಪಾಪ.
ಈ ಪ್ರಕೃತಪ್ರಶ್ನೆಯಲ್ಲಿ ವಿವೇಚಿಸಬೇಕಾದ ವಿಷಯಗಳು ಇಷ್ಟು - ಪಾಪ ಹೇಗೆ ಮರಣಪರ್ಯಂತವಾಗಿ ನಮ್ಮನ್ನು ದುಃಖಕ್ಕೆ ಈಡಾಗಿಸುತ್ತದೆ? ಎಂಬುದಾಗಿ. ಈ ಪ್ರಶ್ನೆಯಲ್ಲಿ ಬರುವ ಹುದುಗಿದ ಪಾಪ ಅಥವಾ ಪ್ರಚ್ಛನ್ನಪಾಪ ಎಂಬುದು ನಮ್ಮನ್ನು ಚುಚ್ಚುವಂತದ್ದು ಎಂಬುದಾಗಿ ಹೇಳಿದೆ. ಪಾಪ ಎಂಬುದು ಎರಡು ವಿಧ ಎಂದು ಹೇಳಿದಂತಾಯಿತು. ಅವು ಪ್ರಚ್ಛನ್ನಪಾಪ ಮತ್ತು ಪ್ರಕಟಪಾಪ ಎಂಬುದಾಗಿ. ಪಾಪ ಎಂದರೆ ದುಷ್ಟಕರ್ಮದ ಫಲ. ಪಾಪ ಅಥವಾ ಪುಣ್ಯವಾಗಲಿ ನಮ್ಮ ಆತ್ಮದಲ್ಲಿ ಇರುತ್ತದೆ. ಕಾಲ ಬಂದಾಗ ಅದು ತನ್ನ ಕಾರ್ಯವನ್ನು ಆರಂಭಿಸುತ್ತದೆ. ಆ ಆ ಪಾಪದ ಪರಿಣಾಮವಾಗಿ ಆ ವ್ಯಕ್ತಿಯು ದುಷ್ಟ ಕಾರ್ಯಗಳಲ್ಲಿ ಮತ್ತೆ ಪ್ರವರ್ತನಾಗುತ್ತಾನೆ. ಅಂದರೆ ಪಾಪದ ಫಲವು ದುಷ್ಪಲವೇ ಆಗಿರುತ್ತದೆ. ಮಾಡಿದ ಕರ್ಮವು ಫಲವನ್ನು ಅಗತ್ಯವಾಗಿ ನೀಡಲೇಬೇಕಾಗುತ್ತದೆ. ಅದು ಪಾಪಕರ್ಮದ ಪಕ್ವತೆಯನ್ನು ಅವಲಂಬಿಸಿರುತ್ತದೆ. ಯಾವಾಗ ಕಾಲವು ಪಕ್ವವಾಗುತ್ತದೆಯೋ ಆಗ ಅದು ಫಲವನ್ನು ನೀಡುತ್ತದೆ. ಪಕ್ವವಾಗುವ ತನಕ ಅಡಗಿ ಅಥವಾ ಹುದುಗಿ ಇರುತ್ತದೆ. ಅದನ್ನೇ ಪ್ರಚ್ಛನ್ನಪಾಪ ಅಥವಾ ಹುದುಗಿದ ಪಾಪ ಎಂಬುದಾಗಿ ಕರೆಯಬಹುದು.
ಸಾಮಾನ್ಯವಾಗಿ ಕರ್ಮವನ್ನು ದೃಢಕರ್ಮ, ಅದೃಢಕರ್ಮ ಮತ್ತು ಮಿಶ್ರಕರ್ಮ ಎಂಬುದಾಗಿ ಮೂರಾಗಿ ವಿಭಾಗಿಸಲಾಗುತ್ತದೆ. ಯಾವ ಕರ್ಮದ ಫಲವನ್ನು ನಾವು ಅನುಭವಿಸಿಯೇ ತೀರಬೇಕೋ ಅದು ದೃಢಕರ್ಮ. ಯಾವ ಕರ್ಮದ ಫಲವನ್ನು ಬದಲಿಸಿ ಅಥವಾ ಇಲ್ಲವಾಗಿಸಿ ಅನುಭವಿಸದಂತೆ ಮಾಡಬಹುದೋ ಅದು ಅದೃಢಕರ್ಮ ಎಂದು. ಇನ್ನೊಂದು ಕರ್ಮ ದೃಢಾದೃಢ. ಅದು ಫಲವನ್ನು ಕೊಡಲು ಆರಂಭಿಸಿದ್ದರೂ, ಅನುಭವಿಸಲೂ ಬಹುದು ಅಥವಾ ಅನುಭವಿಸಂತೆ ಮಾಡಲೂಬಹುದು. ಇನ್ನೊಂದು ಬಗೆಯಲ್ಲಿ ಇದನ್ನೇ ಸಂಚಿತಕರ್ಮ ಮತ್ತು ಆಗಾಮಿಕರ್ಮ ಎಂಬುದಾಗಿ ಎರಡಾಗಿಯೂ ವಿಭಾಗಿಸಲಾಗುತ್ತದೆ. ಯಾವುದು ಫಲವನ್ನು ಕೊಡಲು ಆರಂಭವಾಗಿದ್ದು, ಪರಿವರ್ತಿಸಲೂ ಅಸಾಧ್ಯವೋ ಅದು ಸಂಚಿತಕರ್ಮ. ಅಲ್ಲೂ ಸತ್ಕರ್ಮ ಮತ್ತು ಪಾಪಕರ್ಮ ಎಂದೂ ವಿಭಾಗವುಂಟು. ಇನ್ನೂ ಫಲವನ್ನು ಕೊಡಬೇಕಾದದ್ದು ಆಗಮಿ ಕರ್ಮ. ಇಲ್ಲೂ ಸತ್ಕರ್ಮ ಮತ್ತು ಪಾಪಕರ್ಮ ಎಂಬ ವಿಭಾಗ ಉಂಟು. ಇಲ್ಲಿ ಹೇಳಿರುವ ಪಾಪಕರ್ಮವನ್ನೇ ಬದುಕಿನ ಪಾಪ ಎಂಬುದಾಗಿ ಕರೆಯಬಹುದು. ಇವು ನಮ್ಮನ್ನು ಕಾಡಿಸುತ್ತಾ ಇರುತ್ತವೆ. ಅದು ನಮಗೆ ಅರಿವಿಗೆ ಬರದ ರೀತಿಯಲ್ಲಿ ಇರುತ್ತದೆ. ನಾವು ಇರುವ ತನಕ ಇರುತ್ತದೆ. ಕೆಲವೊಮ್ಮೆ ಮರಣ ತನಕ ಅಲ್ಲ, ಮರಣದ ಅನಂತರ ಮುಂದಿನ ಜನ್ಮಕ್ಕೂ ಕಾರಣವಾಗಬಹುದು. ಹಾಗಾಗಿ ಈ ಪಾಪವು ಅತ್ಯಂತ ಭಯಾನಕವಾದದ್ದು ಎಂಬುದಾಗಿ ಪರಿಗಣಿತವಾಗುತ್ತದೆ ಎಂಬ ಅಭಿಪ್ರಾಯವನ್ನು ಈ ಪ್ರಶ್ನೋತ್ತರದಲ್ಲಿ ತಿಳಿಸಲಾಗಿದೆ. ಮರಣ ಪರ್ಯಂತವೂ ನಮ್ಮನ್ನು ಗೊತ್ತಿಲ್ಲದಂತೆ - ಅರಿವಿಗೆ ಬಾರದಂತೆ ಬಾಧಿಸುತ್ತಿರುವ ವಿಷಯ ಯಾವುದುಂಟೋ ಅದನ್ನೇ ಪ್ರಚ್ಛನ್ನಪಾಪ ಎಂಬುದಾಗಿ ಇಲ್ಲಿ ಗುರುತಿಸಲಾಗಿದೆ. ವ್ಯಕ್ತಪಾಪವಾದರೆ ಅದನ್ನು ನಾವು ಪವಿತ್ರ, ಔಷಧ, ಜಪ, ಪೂಜಾ ಇತ್ಯಾದಿಗಳಿಂದ ಪರಿಹರಿಸಲು ಸಾಧ್ಯ. ಆದರೆ ಹುದುಗಿದ ಕರ್ಮ ಯಾವುದಿದೆಯೋ ಅದು ನಮ್ಮನ್ನು ಗೊತ್ತಿಲ್ಲದಂತೆ ಕಾಡಿಸುತ್ತಾ ಇರುತ್ತದೆ. ಹಾಗಾಗಿ ಇದನ್ನು 'ಶೂಲದಂತೆ' ಎಂದು ಹೇಳಲಾಗಿದೆ. ಇದರ ಪರಿಹಾರ ಅಸಾಧ್ಯ. ಅದರ ಅನುಭವ ಮಾತ್ರ ಸಾಧ್ಯ - ಅನಿವಾರ್ಯ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ.