ಲೇಖಕರು : ವಿದ್ವಾನ್ ಅನಂತ ಬಿ.ಜಿ.
ಪ್ರತಿಕ್ರಿಯಿಸಿರಿ (lekhana@ayvm.in)
ಯಾರನ್ನು ದಾಟಿ ಹೋಗುವುದು ಸಾಧ್ಯವಿಲ್ಲವೋ ಅವಳು ದುರ್ಗೆ. ಅವಳು ಸಂಪ್ರೀತಳಾಗಿ ಸಮ್ಮತಿಸಿದರೆ ಮಾತ್ರ ಅದನ್ನು ದಾಟಲು ಸಾಧ್ಯ. ಯಾವುದನ್ನು? ಎಂದರೆ ಒಳಗಿನ ಮತ್ತು ಹೊರಗಿನ ದುರ್ಗಗಳನ್ನು. ಹೊರ ಜಗತ್ತಿನ ಶತ್ರುಗಳ ಕೋಟೆ ಕೊತ್ತಲಗಳನ್ನು ದಾಟಿ ವಿಜಯ ಸಾಧಿಸಲು ರಣಚಂಡಿಯ ಸಹಕಾರವು ಹೇಗೆ ಅಗತ್ಯವೋ ಅಂತೆಯೇ ಸಾಧನೆಯ ಒಳ ಪ್ರಪಂಚದಲ್ಲಿ ಎದುರಾಗುವ ದುರ್ಗ ರೂಪವಾದ ಅಡೆತಡೆಗಳನ್ನು ಸುಖವಾಗಿ ದಾಟಲು ದುರ್ಗಾ ಪರಮೇಶ್ವರಿಯ ಪ್ರಸನ್ನತೆಯು ಅಷ್ಟೇ ಅನಿವಾರ್ಯ. ದುರ್ಗೆಯನ್ನು ನಂಬಿದವರಿಗೆ ದುರ್ಗತಿಯಿಲ್ಲ. ಆದ್ದರಿಂದಲೇ ದುರ್ಗಾ- ದುರ್ಗತಿ ನಾಶಿನೀ ಎನ್ನುತ್ತಾರೆ ಜ್ಞಾನಿಗಳು.
ಇಂದು ದುರ್ಗಾಷ್ಟಮೀ.
ದುರ್ಗಾಷ್ಟಮಿಯ ಆರಾಧ್ಯದೇವತೆ ನಿಶುಂಭಹಾ ದುರ್ಗೆ. ಅವಳ ಸ್ವರೂಪವನ್ನು ವಿಸ್ತಾರವಾಗಿ ವರ್ಣಿಸಲಾಗಿದೆ.
ಶ್ವೇತವಸ್ತ್ರಾದ್ಯಲಂಕಾರೈಃ ಭೂಷಿತಾಂ ಚತುರ್ಭುಜಾಮ್
ತ್ರಿಶೂಲಂ ಡಮರುಂ ಚೈವ
ರಥಾಂಗಂ ಕುಲಿಶಂ ತಥಾ
ಕುಠಾರಂ ಶಂಖಮಭಯಂ
ಪಾಶಶಕ್ತಿಂ ಚ ಯಷ್ಟಿಕಾಂ
ಖೇಟಂ ಶರಾಸನಂ ಚಕ್ರಂ
ಕಮಂಡಲುಧೃತಾಂ ಶುಭಾಮ್
ಏವಂ ಸ್ವರೂಪಸಂಯುಕ್ತಾಂ
ಅಷ್ಟಮ್ಯಾಂ ಪೂಜಯೇನ್ನೃಪ//
ಬಿಳಿಯ ವಸ್ತ್ರವನ್ನೂ ಆಭರಣಗಳನ್ನೂ ಧರಿಸಿ ಕೈಗಳಲ್ಲಿ ತ್ರಿಶೂಲ ಡಮರು ಚಕ್ರ ವಜ್ರ ಕೊಡಲಿ ಶಂಖ ಪಾಶ ಶಕ್ತಿ ಖಡ್ಗ ಬಿಲ್ಲು ಬಾಣ ಕಮಂಡಲು ಇತ್ಯಾದಿಗಳನ್ನು ಹಿಡಿದು ದುಷ್ಟರಿಗೆ ಭಯವನ್ನೂ ಸಜ್ಜನರಿಗೆ ಅಭಯವನ್ನೂ ಉಂಟುಮಾಡುವ ಪರಮ ಮಂಗಳಮೂರ್ತಿ.
ಹೇಳಿ ಕೇಳಿ ದುರ್ಗೆಯು ಯುದ್ಧದ ಅಭಿಮಾನಿ ದೇವತೆ. ಶುಂಭ ನಿಶುಂಭರಂಥಹಾ ಮಹಾಬಲಿಷ್ಟರಾದ ಅಸುರರನ್ನು ರಣಭೂಮಿಯಲ್ಲಿ ಕಿರುಚಿಕೊಳ್ಳುವಂತೆ ಮಾಡಿದವಳು. ರಜಸ್ಸು ತಮಸ್ಸುಗಳೇ ತುಂಬಿಕೊಂಡಿರುವ ಮಹಾದುಷ್ಟರಾದ ಅಸುರರನ್ನು ಶಿಕ್ಷಿಸಲು ಅದೇ ರಜಸ್ಸನ್ನೇ ಆಶ್ರಯಿಸಿಕೊಂಡು ತನ್ನ ಅಷ್ಟ ಭುಜಗಳಲ್ಲಿ ವಿಧವಿಧವಾದ ಆಯುಧಗಳನ್ನು ಧರಿಸಿಕೊಂಡು ಸದಾ ಯುದ್ಧ ಸನ್ನದ್ಧಳಾದವಳು. ಅವಳ ಸ್ವರೂಪವು ಹೀಗೆ ತಾನೇ ಇರಬೇಕು.
ಅಂತಹ ಮಹಾತಾಯಿಯನ್ನು ಜೀವನದ ಒಳ ಹೊರಗಿನ ಕಷ್ಟಗಳ ನಿವಾರಣೆಗಾಗಿ, ಸರ್ವ ಸಂಪನ್ನತೆಗಾಗಿ ಮತ್ತು ಮನಸ್ಸಿನ ಆನಂದಕ್ಕಾಗಿ ಆರಾಧಿಸೋಣ.
ಸೂಚನೆ: 30/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ