Wednesday, October 22, 2025

ವ್ಯಾಸ ವೀಕ್ಷಿತ 158 ಇಂದ್ರ-ಯಮ-ವರುಣ-ಕುಬೇರ-ಬ್ರಹ್ಮರ ಸಭೆಗಳು (Vyaasa Vikshita 158)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ನಾರದರ ಮಾತುಗಳನ್ನು ಆಲಿಸಿದ ಯುಧಿಷ್ಠಿರನಿಗೆ ಸಂತೋಷವಾಯಿತು. ಅವರ ಪ್ರವಚನಕ್ಕೆ ತನ್ನ ಪ್ರಶಂಸೆಯನ್ನು ಸೂಚಿಸಿದನು. ಮುಹೂರ್ತಕಾಲವಾದ ಮೇಲೆ ಮತ್ತೆ ಅವರಲ್ಲಿಗೆ ಹೋದನು. ಶಾಂತರಾಗಿ ಅವರು ಕುಳಿತಿರುವುದನ್ನು ಕಂಡನು. ಮಹಾತೇಜಸ್ವಿಯಾದ ಆತನು ರಾಜರುಗಳ ಸಾಂನಿಧ್ಯದಲ್ಲೇ ಈ ರೀತಿಯಾಗಿ ಅವರನ್ನು ತನ್ನ ಸಭೆಯ ವಿಶೇಷತೆಯನ್ನು ಕುರಿತಾಗಿ ಪ್ರಶ್ನಿಸಿದನು.

"ಮನೋವೇಗದಿಂದ ಸದಾ ಸಂಚರಿಸುತ್ತಿರುವ ತಾವು, ಬ್ರಹ್ಮಸೃಷ್ಟಿಯಲ್ಲಿಯ ಬಹುವಿಧವಾದ ಬಹುದೇಶಗಳನ್ನು ಕಂಡೇ ಇರುತ್ತೀರಿ. ಎಂದೇ ನನಗೆ ಕುತುಕವಿದೆ. ಈ ಪರಿಯ ಸಭೆಯನ್ನು ಯಾವುದನ್ನಾದರೂ ಈ ಮೊದಲು ಕಂಡಿರುವಿರೇ? ಅಥವಾ ಇದಕ್ಕಿಂತಲೂ ಉತ್ಕೃಷ್ಟವಾದ ಸಭೆಯನ್ನೇನಾದರೂ ಕಂಡಿರುವಿರಾ? ಇದನ್ನು ತಿಳಿಯಬೇಕೆಂಬ ಕುತೂಹಲ. ತಾವದನ್ನು ತಿಳಿಸಿಕೊಡಬೇಕು" ಎಂದನು.

ಧರ್ಮರಾಜನ ಆ ನುಡಿಯನ್ನು ಕೇಳಿ, ಮಧುರವಾದ ವಾಣಿಯಿಂದ ಆಗ ನಾರದರು ಮುಗುಳ್ನಗೆಯೊಡನೆ ಹೇಳಿದರು:

"ಪಾಂಡವನೇ, ಮಣಿಮಯವಾದ ಈ ನಿನ್ನ ಸಭೆ ಯಂತಹ ಸಭೆಯನ್ನು ಯಾವ ಮನುಷ್ಯರಲ್ಲೂ ನಾ ಕಂಡಿಲ್ಲ. ಪಿತೃರಾಜನೆನಿಸುವ ಯಮನ ಸಭೆ, ಧೀಮಂತನಾದ ವರುಣನ ಸಭೆ, ಇಂದ್ರನ ಸಭೆ, ಕೈಲಾಸವಾಸಿಯೆನಿಸುವ ಕುಬೇರನ ಸಭೆ - ಇವೆಲ್ಲಾ ಉಂಟು. ಅವೆಲ್ಲವನ್ನೂ ಕಂಡಿದ್ದೇನೆ.

ಹಾಗೆಯೇ ಎಲ್ಲಾ ಆಯಾಸವನ್ನೂ ಕಳೆಯತಕ್ಕ ಬ್ರಹ್ಮನ ಸಭೆಯುಂಟು. ಅದಾದರೋ ದಿವ್ಯ-ಅದಿವ್ಯವೆನಿಸುವ ಭೋಗಗಳನ್ನೆರಡನ್ನೂ ಹೊಂದಿರುವಂತಹುದು. ನಾನಾರೂಪಗಳಿಂದ ಅಲಂಕೃತವಾದದ್ದು, ಅದು. ಅಲ್ಲದೆ, ದೇವತೆಗಳು, ಪಿತೃಗಣಗಳು, ಸಾಧ್ಯರು, ಯಾಜಕರು, ನಿಯತಾತ್ಮರಾದ (ಎಂದರೆ ಮನೋನಿಗ್ರಹವನ್ನು ಸಾಧಿಸಿರತಕ್ಕ) ಮುನಿಗಳ ಗಣಗಳು - ಇವರುಗಳಿಂದ ಸೇವಿಸಲ್ಪಟ್ಟದ್ದು ಅದು. ಉತ್ತಮವಾದ ದಕ್ಷಿಣಾ-ಪ್ರದಾನಗಳಿಂದ ಸಹಿತವಾದ ವೈದಿಕ-ಯಜ್ಞಗಳು ನಡೆಯುವ ಸಭೆಯದು.

ಆ ಬಗ್ಗೆ ಕೇಳಿ ತಿಳಿದುಕೊಳ್ಳುವ ಕುತೂಹಲವು ನಿನಗಿದ್ದರೆ ಹೇಳುವೆ ಕೇಳು" ಎಂಬುದಾಗಿ.

ನಾರದರು ಹೀಗೆ ಹೇಳಲು, ತನ್ನ ಸಹೋದರರೊಂದಿಗೂ, ಬ್ರಾಹ್ಮಣ-ಶ್ರೇಷ್ಠರೊಂದಿಗೂ ಕೂಡಿದವನಾಗಿ, ಮಹಾಮನಸ್ಕನಾದ ಯುಧಿಷ್ಠಿರನು ಕೈಜೋಡಿಸಿ ಹೀಗೆ ಹೇಳಿದನು:

"ಪೂಜ್ಯರೇ, ಆ ಸಭೆಗಳೆಲ್ಲವನ್ನೂ ಕುರಿತು  ಹೇಳಿರಿ. ನಾವು ಕೇಳಲು ಆಸೆಯುಳ್ಳವರಾಗಿದ್ದೇವೆ. ಆ ಸಭೆಗಳ ನಿರ್ಮಾಣವು ಯಾವ ದ್ರವ್ಯಗಳಿಂದಾಗಿರುವುದು? ಅವುಗಳ ಉದ್ದವೇನು, ಅಗಲವೇನು? ಆ ಸಭೆಯಲ್ಲಿ ಯಾರು ಯಾರು ಪಿತಾಮಹನೆನಿಸುವ ಆ ಬ್ರಹ್ಮನನ್ನು ಉಪಾಸಿಸುತ್ತಾರೆ? ದೇವರಾಜನಾದ ಇಂದ್ರ, ವೈವಸ್ವತನಾದ (ಎಂದರೆ ವಿವಸ್ವಂತನ ಪುತ್ರನಾದ) ಯಮ, ವರುಣ ಹಾಗೂ ಕುಬೇರ - ಇವರುಗಳ ಸಭೆಯಲ್ಲೂ ಯಾರು ಯಾರು ಅವರನ್ನು ಸೇವಿಸುತ್ತಾರೆ?

ಬ್ರಹ್ಮರ್ಷಿಯೇ, ಇದನ್ನೆಲ್ಲವನ್ನೂ ಯಥೋಚಿತವಾಗಿ ವಿವರಿಸುವುದಾದರೆ ನಾವೆಲ್ಲರೂ ಒಟ್ಟಿಗೇ ಕೇಳಲು ಬಯಸುತ್ತೇವೆ. ನಮಗೆ ಹೆಚ್ಚಾದ ಕುತೂಹಲವೇ ಇದೆ ಈ ಬಗ್ಗೆ" ಎಂದು.

ಯುಧಿಷ್ಠಿರನು ಹೀಗೆ ಹೇಳಲು ನಾರದರು ಹೇಳಿದರು "ರಾಜನೇ ಆ ದಿವ್ಯಸಭೆಗಳೆಲ್ಲವನ್ನೂ ಕುರಿತು ಹೇಳುವೆ, ಕೇಳೋಣವಾಗಲಿ" ಎಂದರು.

ದಿವ್ಯವಾದ ಆ ಎಲ್ಲ ಸಭೆಗಳನ್ನು ಸುವಿಸ್ತೃತವಾಗಿ ವರ್ಣಿಸಿದರು. ನಂಬಲೇ ಅಸಾಧ್ಯವೆನಿಸುವ ಅನೇಕ ವೈಶಿಷ್ಟ್ಯಗಳಿಂದ ಅವು ಕೂಡಿದ್ದವು. ಅವರ ಆ ವರ್ಣನೆಗಳೆಲ್ಲಾ ಮುಗಿದ ಮೇಲೆ ಯುಧಿಷ್ಠಿರನು ಒಂದು ಪ್ರಶ್ನೆಯನ್ನು ನಾರದರ ಮುಂದಿಟ್ಟನು.

ಸೂಚನೆ : 19/10/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.