ಭಗವದ್ಗೀತೆಯ ಸಾಂಖ್ಯಯೋಗದಲ್ಲಿ ಶ್ರೀಕೃಷ್ಣನು ಸ್ಥಿತಪ್ರಜ್ಞನ ಲಕ್ಷಣಗಳನ್ನು ಅರ್ಜುನನ ಪ್ರಶ್ನೆಗೆ ಉತ್ತರವಾಗಿ ಹೇಳುತ್ತಾನೆ. ಅದರಲ್ಲಿ ಹೇಳುವ ಒಂದು ಮುಖ್ಯ ಲಕ್ಷಣವೆಂದರೆ ದುಃಖದಲ್ಲಿ ಮನಸ್ಸು ಉದ್ವೇಗಗೊಳ್ಳದಿರುವುದೂ ಸುಖ ಬಂದಾಗ ಅದಕ್ಕೆ ಅಂಟಿಕೊಳ್ಳದಿರುವುದೂ ಎಂದು. ಇದೇ ಲಕ್ಷಣವನ್ನು ಹಲವು ಮಹಾತ್ಮರ ಜೀವನದಲ್ಲಿ ನೋಡುತ್ತೇವೆ.
ಕೃಷ್ಣಾವತಾರದ ಹಿಂದಿನ ಅವತಾರವಾದ ರಾಮನ ಜೀವನವನ್ನು ನೋಡೋಣ. ವಾಸ್ತವವಾಗಿ ಭಗವದ್ಗೀತೆಯೊಡನೆ ರಾಮಾಯಣವನ್ನು ಪಾರಾಯಣಮಾಡಬೇಕೆಂದು ಸಂಪ್ರದಾಯವಿದೆ. ಇದರ ನಂಟನ್ನು ತಿಳಿಹೇಳುತ್ತಾ, ಶ್ರೀರಂಗಮಹಾಗುರುಗಳು ಹೇಳಿರುವುದಿದು: "ಗೀತೆಯು ಹೇಳುವುದಾದರೂ ಏನು? ಆ ಪರಮತತ್ತ್ವವನ್ನೇ. ಅದನ್ನುಪದೇಶಿಸುವವನೂ ನರನ ರಥದಲ್ಲಿರುವ ನಾರಾಯಣ...ರಾಮಾಯಣದಲ್ಲಿ ಪರಮಪುರುಷನ ಕಥೆಯೊಡನೆ ಪ್ರಕೃತಿಯ ಕಥೆಯನ್ನೂ ಸೇರಿಸಿ ಹೆಣೆದಿದ್ದಾರೆ."
ರಾಮಾಯಣದಲ್ಲಿ ರಾಮನಿಗೆ "ನಿನಗೀಗ ಯುವರಾಜನಾಗಿ ಅಭಿಷೇಕವಿಲ್ಲ. ನೀನು ಕಾಡಿಗೆ ಹದಿನಾಲ್ಕುವರ್ಷ ಹೋಗಬೇಕು" ಎಂದು ಆಜ್ಞೆಯಾಗುವುದು ಎಲ್ಲರಿಗೂ ತಿಳಿದೇ ಇದೆ. ಆದರೂ ಅದು ಹೇಗಾಯಿತು? ಅಂತಹ ಕಠೋರವಾದ ಸುದ್ದಿಯನ್ನು ಕೇಳಿದಾಗ ರಾಮನ ಸ್ಥಿತಿ ಹೇಗಿತ್ತು? - ಇದನ್ನು ನೋಡಬೇಕಲ್ಲವೇ?
ಕೈಕೇಯಿಯು ತನ್ನ ಎರಡು ವರಗಳನ್ನು ಕೇಳಿಕೊಂಡಾಗ ದಶರಥನು ಇಲ್ಲವೆಂದು ಹೇಳಲಾಗದೆಹೋದ. ಇನ್ನಿಲ್ಲದ ಪ್ರಯತ್ನಪಟ್ಟು ರಾತ್ರಿಯಿಡೀ ಪರಿಪರಿಯಾಗಿ ಅವಳನ್ನು ಬೇಡಿಕೊಂಡ, ಕೋಪದಿಂದ ಅವಳನ್ನು ಬೈದ. ಯಾವುದಕ್ಕೂ ಅವಳು ಜಗ್ಗಲಿಲ್ಲ. ತನ್ನ ಹಠವನ್ನೇ ಸಾಧಿಸಿದಳು. ಅಷ್ಟರಲ್ಲಿ ಬೆಳಕು ಹರಿದಿತ್ತು. ಇನ್ನೇನು ಪಟ್ಟಾಭಿಷೇಕದ ಕಾರ್ಯಕ್ರಮ ಪ್ರಾರಂಭವಾಗಬೇಕು. ಆಗ ಮಹಾರಾಜನ ಸಾರಥಿಯಾದ ಸುಮಂತ್ರ ಸಂತೋಷದಿಂದ, ಕುಲಪುರೋಹಿತರಾದ ವಸಿಷ್ಠರ ಸಂದೇಶವನ್ನು ತೆಗೆದುಕೊಂಡು ಲಗುಬಗೆಯಿಂದ ದಶರಥನಿದ್ದಲ್ಲಿಗೆ ಹೋದನು.
ಸುಮಂತ್ರನು ಸಹಜತೆಯಿಂದಲೇ ಪಟ್ಟಾಭಿಷೇಕಕ್ಕೆ ಅನುಮತಿ ಕೇಳಿದಾಗ, ದಶರಥನಿಗೆ ಶೋಕ ಉಮ್ಮಳಿಸಿತು. ಎರಡು ಮಾತು ಹೇಳಿ ಬಾಯಿ ಕಟ್ಟಿದ ದಶರಥನ ಸ್ಥಾನದಲ್ಲಿ ಕೈಕೇಯಿಯೇ ಮಾತನಾಡಿದಳು. ರಾಮನನ್ನು ಕರೆತರಲು ಹೇಳಿದಳು. ರಾಮನಾದರೋ, ತಂದೆಯು ಹೇಳಿಕಳುಹಿಸಿರುವನೆಂದು ತಿಳಿದು ಸೀತೆಗೆ ಹೇಳಿ ಅಲ್ಲಿಂದ ಹೊರಟನು. ದಾರಿಯಲ್ಲೆಲ್ಲಾ ಪ್ರಜೆಗಳ ಸಂಭ್ರಮವೇ. ಆದರೆ ಕೈಕೇಯಿಯ ಅಂತಃಪುರಕ್ಕೆ ಹೋದರೆ, ಅಲ್ಲಿ ಕಂಡ ದೃಶ್ಯವೇ ಬೇರೆ.
ಕಳೆಗುಂದಿ ದೈನ್ಯದಿಂದ ಕುಳಿತಿರುವ ತಂದೆಯನ್ನು ಕಂಡ ರಾಮನು ತಳಮಳಗೊಂಡನು. ತನ್ನ ಮೇಲೆ ತಂದೆಗೆ ಕೋಪಬಂದಿದೆಯೇನೋ ಎಂದು ಬಗೆದನು. ತಂದೆಗೆ ಏನಾಗಿದೆ ಎಂದು ತಿಳಿಯಬಯಸಿದಾಗ, ಕೈಕೇಯಿಯೇ ಮಾತನಾಡಿದಳು. ರಾಮನಿಗೆ ಅಪ್ಪನ ಮಾತನ್ನು ನಡೆಸಿಕೊಡಬೇಕೆಂದು ಹೇಳಿದಳು. ಮಹಾರಾಜನ ಇಷ್ಟದ ಪ್ರಕಾರವೇ ತಾನು ನಡೆಯುತ್ತೇನೆಂದು ರಾಮನು ಪ್ರತಿಜ್ಞೆ ಮಾಡಿದಾಗ, ಅವಳು ತನ್ನ ಎರಡು ವರಗಳ ಬಗ್ಗೆ ಹೇಳಿದಳು - ಭರತನಿಗೆ ಪಟ್ಟಾಭಿಷೇಕ ಆಗಬೇಕು ಹಾಗೂ, ರಾಮನು ದಂಡಕಾರಣ್ಯಕ್ಕೆ ಅಂದೇ ಹೊರಡಬೇಕು - ಎಂದು.
ಇಂತಹ ಕಠೋರನುಡಿಗಳನ್ನು ಕೇಳಿಯೂ ರಾಮನಿಗೆ ಇಷ್ಟೂ ಶೋಕವಾಗಲಿಲ್ಲ (ನ ಚೈವ ರಾಮಃ ಪ್ರವಿವೇಶ ಶೋಕಮ್). ಆದರೆ ದಶರಥನು ಪುತ್ರನಿಗೊದಗಿದ ಕಷ್ಟದಿಂದಾಗಿ ಬೆಂದುಹೋದನು. ಮಹಾತ್ಮನಾದ ರಾಮನು ತಾನು ಅರಣ್ಯಕ್ಕೆ ಹೋಗುತ್ತೇನೆಂದು ಸಮಾಧಾನದಿಂದಲೇ ಉತ್ತರಿಸಿ, ಭರತನಿಗೆ ಪಟ್ಟಾಭಿಷೇಕವೆಂದು ತಂದೆಯೇ ಹೇಳಬಹುದಿತ್ತಲ್ಲಾ ಎಂದು ವ್ಯಥೆಪಟ್ಟನು. ಹರ್ಷದಿಂದ ಉಬ್ಬಿದ ಕೈಕೇಯಿಯು ಹೇಳಿದ್ದಾದರೂ ಏನು? "ರಾಮ, ನೀನು ಕಾಡಿಗೆ ಹೊರಡುವವರೆಗೆ ನಿನ್ನ ತಂದೆ ಸ್ನಾನ-ಊಟಗಳನ್ನೂ ಮಾಡುವುದಿಲ್ಲ" ಎಂದು! ಈ ಯಾವ ಚುಚ್ಚುಮಾತನ್ನೂ ಲೆಕ್ಕಿಸದೆ, ತಂದೆಯ ಆಜ್ಞೆಯಂತೆ ವರ್ತಿಸಲು ರಾಮನು ಅನುವಾದನು.
ಮೊದಲಿದ್ದ ಪರಿಸ್ಥಿತಿಯನ್ನೂ ಬದಲಾದ ಪರಿಸ್ಥಿತಿಯನ್ನೂ ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ಇಲ್ಲಿ ಆಗಿರುವ ಆಘಾತದ ಪರಿಮಾಣ ತಿಳಿಯುತ್ತದೆ. ಪಟ್ಟಾಭಿಷೇಕದ ನಿಶ್ಚಯ ಆಗಿದ್ದು, ಈಗ ಅದು ಇಲ್ಲ ಎಂದಾಗಿದ್ದರೇ ಬಿದ್ದ ಪೆಟ್ಟು ದೊಡ್ಡದು. ಇಲ್ಲವೇ, ಸಾಮಾನ್ಯ ಸ್ಥಿತಿಯಿದ್ದು (ಪಟ್ಟಾಭಿಷೇಕದ ಮಾತಿಲ್ಲದಿದ್ದು) ಈಗ ನಾಡನ್ನು ಬಿಟ್ಟು ಕಾಡಿಗೆ ಹೋಗಬೇಕು ಎಂದಾಗಿದ್ದರೂ ಕಷ್ಟವೇ. ಆದರೆ ಇಲ್ಲೋ ಆಗಿರುವುದು +೧೦೦ರಿಂದ ಸೊನ್ನೆಗೆ ಇಳಿದಿರುವುದಲ್ಲ, ಬದಲಿಗೆ -೧೦೦ಕ್ಕೆ ಇಳಿದಂತಾಗಿದೆ. ಮೊದಲ ರ್‍ಯಾಂಕ್ ಬಂದಿರುವ ಬುದ್ಧಿವಂತ ವಿದ್ಯಾರ್ಥಿಗೆ "ನೀನು ಮೊದಲ ರ್‍ಯಾಂಕ್ ಬಂದಿಲ್ಲ, ಬದಲಿಗೆ ಪರೀಕ್ಷೆಯಲ್ಲಿ ನೀನು ನಪಾಸಾಗಿದ್ದೀಯೆ" ಎಂದು ಹೇಳಿದರೆ, ಎಂತಹ ಆಘಾತವಾದೀತು! .
ಆದರೆ ಶ್ರೀರಾಮ ಸಂಪೂರ್ಣವಾಗಿ ಸಮಾಧಾನದಿಂದಿದ್ದ. ಮುಖದಲ್ಲಿ ಮಾತ್ರವಲ್ಲ, ಆತನಿಗೆ ಮನಸಿನಲ್ಲೂ ಒಂದಿಷ್ಟೂ ತಳಮಳವಾಗಲಿಲ್ಲ. ವಯಸ್ಸಾದ ಮೇಲೆ, ಜೀವನಾನುಭವ ಹೆಚ್ಚಿದಮೇಲೆ ಈ ಸ್ಥಿತಪ್ರಜ್ಞತೆ ಬಂದರೆ, ಅದೇ ಶ್ಲಾಘನೀಯವಾದದ್ದು. ಆದರೆ ಇನ್ನೂ ಹರೆಯದ ವಯಸ್ಸಿನ, ಇನ್ನೂ ಅಷ್ಟೇನೂ ಅನುಭವವಾಗಿಲ್ಲದ ವಯಸ್ಸಿನಲ್ಲಿ ಹೇಗೆ ಇಂತಹ ಸಂಯಮ?
ತನ್ನ ಧರ್ಮದ ಬಗ್ಗೆಯೇ ನೆಟ್ಟಮನಸ್ಸುಳ್ಳವನಾದ್ಧರಿಂದಲೇ ರಾಮನಿಗೆ ಇಂತಹ ಸಮಚಿತ್ತತೆ. ಧರ್ಮಿಷ್ಠನಾದ ತಂದೆಯ ಮಾತನ್ನು ನಡೆಸುವುದೇ ತನ್ನ ಧರ್ಮ ಎಂಬ ನಿಷ್ಕರ್ಷ ಅವನ ಮನಸ್ಸಿನಲ್ಲಿತ್ತು. ಇಂತಹ ಕರ್ಮಪರತೆ-ಧರ್ಮಪರತೆಗಳೂ, ಅದರಿಂದ ಬರುವ ಸ್ಥಿತಪ್ರಜ್ಞತೆಯೂ ಮೇಲ್ಪಂಕ್ತಿಯಲ್ಲವೇ?
ಸೂಚನೆ : 25/10/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.