Sunday, October 26, 2025

ವ್ಯಾಸ ವೀಕ್ಷಿತ 159 ಹರಿಶ್ಚಂದ್ರನ ಸಾಧನೆಯಿದು (Vyaasa Vikshita 157)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಸುರಾಜ್ಯಸುವ್ಯವಸ್ಥೆಯೆಂದರೇನೆಂಬುದನ್ನು ನಾರದರು ಯುಧಿಷ್ಠಿರನಿಗೆ ತಿಳಿಸಿಕೊಟ್ಟರಷ್ಟೆ. ಅದಾದ ಮೇಲೆ ಇಂದ್ರಾದಿಗಳ ದಿವ್ಯಸಭೆಗಳ ವೈಭವವನ್ನೂ ತಿಳಿಸಿದರು. ಅದಕ್ಕೆ ಪ್ರತಿಯಾಗಿ ಯುಧಿಷ್ಠಿರನು ತನ್ನ ಕೋರಿಕೆಯೊಂದನ್ನು ಅವರ ಮುಂದಿಟ್ಟನು:

"ಪೂಜ್ಯರೇ, ಯಮನ ಸಭೆಯಲ್ಲಿ ಅನೇಕ ಅರಸರೂ, ವರುಣಸಭೆಯಲ್ಲಿ ಅನೇಕ ನಾಗರೂ, ಕುಬೇರಸಭೆಯಲ್ಲಿ ಯಕ್ಷರಾಕ್ಷಸಾದಿಗಳೂ, ಬ್ರಹ್ಮಸಭೆಯಲ್ಲಿ ಬ್ರಹ್ಮರ್ಷಿಗಳೂ ಪ್ರಧಾನವಾಗಿ ಇರುವರೆಂದು ನಿರೂಪಿಸಿದಿರಿ. ಇಂದ್ರನ ಸಭೆಯಲ್ಲಿ ಅನೇಕ ದೇವತೆಗಳೂ ಗಂಧರ್ವರೂ ಮಹರ್ಷಿಗಳೂ ಇರುವರೆಂದೂ ತಿಳಿಸಿದಿರಿ.

ಆದರೆ ಇಂದ್ರಸಭೆಯನ್ನು ಹೇಳುವಾಗ ಅಲ್ಲಿ ಹರಿಶ್ಚಂದ್ರನಿರುವನೆಂದೂ ಹೇಳಿದಿರಿ. ಅಲ್ಲಿರುವ ರಾಜರ್ಷಿಯೆಂದರೆ ಆತನೊಬ್ಬನೇ. ಇಂದ್ರನೊಂದಿಗೂ ಆತನು ಇರಬಲ್ಲನೆನಿಸುವಂತಹ ಯಾವ ಮಹಾಕಾರ್ಯವನ್ನು ಮಾಡಿದನು, ಅಥವಾ ತಪಸ್ಸನ್ನಾಚರಿಸಿದನು? – ಎಂಬುದನ್ನು ತಾವು ತಿಳಿಸಬೇಕು. ಹಾಗೆಯೇ ಪಿತೃಲೋಕವನ್ನು ಸೇರಿರುವ ನನ್ನ ತಂದೆಯಾದ ಪಾಂಡುವನ್ನು ಸಹ ಯಮಸಭೆಯಲ್ಲಿ ಕಂಡೆನೆಂದಿರಿ. ಕಂಡಾಗ ಆತನು ಏನನ್ನು ಹೇಳಿದನೆಂಬುದನ್ನು ತಿಳಿಸುವಿರಾ, ಮಹಾತ್ಮರೇ? ಅದೆಲ್ಲವನ್ನೂ ತಿಳಿಸುಕೊಳ್ಳಲು ನನಗೆ ಮಹತ್ತಾದ ಕೌತೂಹಲವೇ ಉಂಟಾಗಿದೆ" – ಎಂದನು.

ಆಗ ನಾರದರು, "ನಿನ್ನ ಎರಡೂ ಪ್ರಶ್ನೆಗಳಿಗೆ ಉತ್ತರಕೊಡುವೆ, ಕೇಳು.

ಇಕ್ಷ್ವಾಕುವಂಶದ ತ್ರಿಶಂಕು ಮಹಾರಾಜನಿಗೆ ಸತ್ಯವತಿಯೆಂಬ ಪತ್ನಿಯಿದ್ದಳು. ಅವರ ಪುತ್ರನೇ ಹರಿಶ್ಚಂದ್ರ. ತ್ರಿಶಂಕು ಪುತ್ರನಾದುದರಿಂದಲೇ  ಆತನನ್ನು ತ್ರೈಶಂಕವ ಎಂದೂ ಕರೆಯುತ್ತಾರೆ. ಆತನು ಬಲಶಾಲಿಯಾದ ರಾಜನಾಗಿದ್ದನು. ಎಲ್ಲ ರಾಜರ ಸಮ್ರಾಟ್ ಆತ. ಎಂದೇ ಭೂಮಂಡಲದ ರಾಜರೆಲ್ಲರೂ ಆತನ ಶಾಸನಕ್ಕೆ ತಲೆಬಾಗುವವರೇ.

ಆತನ ರಥದ ಹೆಸರೇ ಜೈತ್ರ. ಎಂದೇ ಅತನು ತನ್ನ ಶಸ್ತ್ರಪ್ರತಾಪದಿಂದ ಸಪ್ತದ್ವೀಪಗಳನ್ನು ಜಯಿಸಿದನು. ಗಿರಿಗಳಿಂದಲೂ ವನಗಳಿಂದಲೂ ತುಂಬಿದ ಭೂಮಿಯನ್ನು ಗೆದ್ದವನಾಗಿ, ಮಹಾಕ್ರತು ಎಂದೆನಿಸುವ ರಾಜಸೂಯ ಯಾಗವನ್ನು ನೆರವೇರಿಸಿದನು.

ಆತನ ಆಜ್ಞೆಯಂತೆ ರಾಜರುಗಳೆಲ್ಲರೂ ಆತನಿಗೆ ಭೂರಿ-ಧನ-ಸಮರ್ಪಣವನ್ನು ಮಾಡಿದರು. ವಿಪ್ರರನ್ನು ಆದರಿಸಿದರು. ಧನಾಪೇಕ್ಷಿಗಳಾದ ಯಾಚಕರಿಗೆ ರಾಜನೂ ಭೂರಿದಾನವನ್ನು - ಅಪೇಕ್ಷಿತವಾದುದಕ್ಕೆ ಐದರಷ್ಟು ದಾನವನ್ನು - ಮಾಡಿದನು. ರಾಜನೂ ವಿಪ್ರರನ್ನು ಸಂತರ್ಪಣದಿಂದಲೂ ರತ್ನರಾಶಿದಾನದಿಂದಲೂ ಸಂತೋಷಗೊಳಿಸಿದನು. ಇತರ ರಾಜರಿಗಿಂತಲೂ ತೇಜಸ್ವಿಯಾಗಿಯೂ ಯಶಸ್ವಿಯಾಗಿಯೂ ವಿರಾಜಿಸಿದನು.

ಈ ಕಾರಣಕ್ಕೇ, ಓ ಯುಧಿಷ್ಠಿರಾ, ಹರಿಶ್ಚಂದ್ರನು ಬೆಳಗಿದನು - ಇನ್ನಿತರ ಸಾವಿರಾರು ರಾಜರುಗಳಿಗಿಂತಲೂ! ಮಹಾಯಜ್ಞವನ್ನು ಹೀಗೆ ಮುಗಿಸಿ, ಪ್ರತಾಪವಂತನಾದ ಹರಿಶ್ಚಂದ್ರನು ಪಟ್ಟಾಭಿಷಿಕ್ತನಾದನು. ಸಹಸ್ರರಾಜರಿಗಿಂತಲೂ ತೇಜಸ್ವಿಯೂ ಯಶಸ್ವಿಯೂ ಆದ್ದರಿಂದಲೇ ಆತನು ಪರಮಶೋಭೆಯಿಂದ ಕೂಡಿದವನಾದನು.

ಮಹಾಯಜ್ಞವನ್ನು ಮುಗಿಸಿದ ಮಹಾಪ್ರತಾಪಿಯಾದ ಆತನಿಗೆ ಸಮ್ರಾಟ್ - ಎಂದು ಪಟ್ಟಾಭಿಷೇಕವನ್ನು ನೆರವೇರಿಸಲಾಯಿತು. ಮಹಾಯಜ್ಞವೆನಿಸುವ ರಾಜಸೂಯವನ್ನು ಯಾರೇ ಆಗಲಿ ಸಾಧಿಸಿದಲ್ಲಿ ಅವರು ಇಂದ್ರನೊಂದಿಗೆ ಸಂತೋಷಪಡತಕ್ಕವರೇ.

ರಣಾಂಗಣದಲ್ಲಿ ಯಾರು ಪಲಾಯನವನ್ನು ಮಾಡದೇ ನಿಧನವನ್ನು ಹೊಂದುವರೋ, ಅವರು ಇಂದ್ರನ ಸದನವನ್ನು ಸೇರುವರು. ಹಾಗೆಯೇ ಯಾರು ತೀವ್ರ-ತಪಸ್ಸನ್ನು ಆಚರಿಸಿ ದೇಹವನ್ನು ತ್ಯಜಿಸುವರೋ, ಅವರೂ ಸಹ ಆತನ ಸ್ಥಾನವನ್ನು ಹೊಂದಿ ತೇಜಸ್ವಿಗಳಾಗಿ ಸದಾ ಬೆಳಗುವರು. ಇದಿಷ್ಟು ಹರಿಶ್ಚಂದ್ರನ ವಿಷಯವಾಯಿತು.

ಇನ್ನು ಪಾಂಡುವಿನ ವಿಷಯವನ್ನು ನೀ ಕೇಳಿದೆಯಲ್ಲವೆ? ಅದನ್ನೂ ಹೇಳುವೆ, ಕೇಳು.

ಹರಿಶ್ಚಂದ್ರನ ಆ ವಿಭವವನ್ನು ಕಂಡ ಪಾಂಡುವು ಆಶ್ಚರ್ಯಚಕಿತನಾಗಿದ್ದನು. ಹಾಗೂ, ನಾನು ಮನುಷ್ಯಲೋಕಕ್ಕೆ ಹೋಗುತ್ತಿರುವೆನೆಂದು ತಿಳಿದವನೇ, ನನಗೊಂದು ಮಾತನ್ನು ಹೇಳಿದನು. ಅದನ್ನು ಹೇಳುವೆ – ಎಂದನು.

ಸೂಚನೆ : 26/10/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.