ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೩೪. ಮರಣವು ಯಾವುದು?
ಉತ್ತರ - ಮೂರ್ಖತನ.
ಪ್ರಶ್ನೋತ್ತರ ರತ್ನಮಾಲಿಕೆಯಲ್ಲಿ ಕೇಳಲಾಗುವ ಪ್ರಶ್ನೆಯು ಮತ್ತು ಅದಕ್ಕೆ ಕೊಡುವ ಉತ್ತರವು ನಮ್ಮ ಊಹೆಗೂ ನಿಲುಕದಷ್ಟು ವಿಸ್ಮಯಕಾರಿಯಾಗಿರುತ್ತದೆ. ಹೀಗೂ ಈ ಪ್ರಶ್ನೆಗೆ ಉತ್ತರ ಉಂಟೇ? ಎಂಬುದಾಗಿ ಒಮ್ಮೆ ಅನಿಸುವುದು. ಯೋಚಿಸಬೇಕಾದ ವಿಚಾರ ಇಷ್ಟೇ, ಈ ಪ್ರಶ್ನೆಗೆ? ಇದೇ ಉತ್ತರ ಹೇಗೆ ಸಾಧ್ಯವಾಗುತ್ತದೆ? ಎಂದೂ. ಇಂತಹ ವಿಸ್ಮಯಾವಹ ಪ್ರಕೃತಪ್ರಶ್ನೆಯಾದ 'ಮರಣವು ಯಾವುದು?' ಎಂಬುದಕ್ಕೆ 'ಮೂರ್ಖತನ' ಎಂಬ ಉತ್ತರ. ಹೇಗೆ ಒಂದಕ್ಕೊಂದು ಇಷ್ಟು ಸಂಬಂಧವಾದದ್ದು? ಮೂರ್ಖತನವು ಮರಣಕ್ಕೆ ಸದೃಶವದು ಹೇಗೆ? ಎಂಬುದನ್ನು ಇಲ್ಲಿ ವಿವೇಚಿಸಬೇಕಾಗಿದೆ.
ಮೂರ್ಖ ಎಂದರೆ ತಿಳುವಳಿಕೆ ಇಲ್ಲದವನು, ಬುದ್ಧಿ ಇಲ್ಲದವನು, ಅಜ್ಞ ಇತ್ಯಾದಿ ಅರ್ಥವನ್ನು ಹೇಳಬಹುದು. ಅಂದರೆ ಯಾವ ವಸ್ತುವನ್ನು ಅಥವಾ ವಿಚಾರವನ್ನು ಅದು ಹೇಗಿದೆಯೋ ಅಂತೆಯೇ ತಿಳಿದುಕೊಳ್ಳುವುದಕ್ಕೆ ಪ್ರಾಜ್ಞತೆ ಅಥವಾ ಬುದ್ಧಿಮತ್ತೆ ಎಂದು ಕರೆಯುವುದಾದರೆ, ಇದಕ್ಕೆ ವಿರುದ್ಧವಾದದ್ದು ಅಂದರೆ ವಸ್ತು ಒಂದಿದೆ; ಅದನ್ನು ಇನ್ನೊಂದು ಬಗೆಯಿಂದ ತಿಳಿದುಕೊಳ್ಳುವಂಥದ್ದು. ಇದಕ್ಕೆ 'ಮೂರ್ಖತನ' ಎಂದು ಕರೆಯಬಹುದು. ಇದು ಆ ವ್ಯಕ್ತಿಯ ಸ್ವಭಾವವೇ ಆಗಿರುತ್ತದೆ. ಯಾವುದೋ ಒಂದು ಸಂದರ್ಭದಲ್ಲಿ ಒಂದು ವಿಷಯವನ್ನು ಅನ್ಯಥಾ ಭಾವಿಸುವಂಥದ್ದು ಮಾನವನ ಸಹಜ ಗುಣವಷ್ಟೇ. ಆದರೆ ಮೂರ್ಖತನದ ವ್ಯಕ್ತಿ ಎಲ್ಲಾ ಕಾಲದಲ್ಲೂ ಅನ್ಯಥಾ ಭಾವಿಸುವುದೇ ಅವನ ಸ್ವಭಾವ ಆಗಿರುತ್ತದೆ. ಅವನಿಗೆ ಒಳ್ಳೆಯದು ಎಂಬ ವಿಷಯವೇ ಬಳಿ ಸುಳಿಯದು. ಒಳ್ಳೆಯದೆಂದರೆ ಕಾದ ಕಬ್ಬಿಣವನ್ನು ಇಟ್ಟಂತೆ ಸುಡುವುದು. ಒಂದು ಸುಭಾಷಿತ ಹೀಗೆ ಮೂರ್ಖರ ಬಗ್ಗೆ ಹೇಳುತ್ತದೆ - ವಿಷಸರ್ಪಕ್ಕೆ ಹಾಲನ್ನು ಎರೆದರೆ ಅದು ತನ್ನ ವಿಷವನ್ನು ಬಿಡುವುದೇ? ಅಂತಯೇ ಮೂರ್ಖರಿಗೆ ಮಾಡುವ ಉಪದೇಶವು ಕೋಪಕ್ಕೆ ಕಾರಣವಾಗುತ್ತದೆಯೇ ವಿನಾ ಮೂರ್ಖತನದ ಶಾಂತಿಗಲ್ಲ ಎಂಬುದಾಗಿ. ಇವರು ಎಂದಿಗೂ ತಾವು ತಿಳಿದಿದ್ದನ್ನು ಬದಲಿಸದ ಸ್ವಭಾವದವರಾಗಿರುತ್ತಾರೆ. 'ತಾನು ಕಂಡ ಮೊಲಕ್ಕೆ ಮೂರು ಕಾಲು' ಎಂಬ ಸಂಕುಚಿತ ಬುದ್ಧಿ ಇವರದ್ದಾಗಿರುತ್ತದೆ. ಹಾಗಾಗಿ ಈ ವ್ಯಕ್ತಿ ಎಂದೂ ಉದ್ಧಾರವಾಗುವುದಿಲ್ಲ. ಇಂತಹ ಸ್ವಭಾವ ಉಳ್ಳವನು ಇದ್ದರೂ ಇಲ್ಲದಂತೆ. ಅಂದರೆ ಅದು ಮರಣಕ್ಕೆ ಸದೃಶವಷ್ಟೇ.
ಮರಣ ಎಂದರೆ ಪ್ರಾಣ ಗತಿಸಿ ಕೇವಲ ಶರೀರ ಮಾತ್ರ ಇರುವಂತಹ ಸ್ಥಿತಿ. ಅಲ್ಲಿ ಇರುವ ದೇಹಕ್ಕೆ ಯಾವುದೇ ಮೌಲ್ಯವಿರುವುದಿಲ್ಲ. ಅದನ್ನು ಕೊನೆಗೆ ಬೆಂಕಿಯಲ್ಲೋ ಅಥವಾ ಭೂಮಿಯಲ್ಲೊ ವಿಸರ್ಜಿಸಬೇಕಾಗುತ್ತದೆ. ಹಾಗೆಯೇ ಈ ಮೂರ್ಖನ ಜೀವನವು ಮರಣದಂತೆ ಎಂಬುದಾಗಿ ಇಲ್ಲಿ ಉತ್ತರಿಸಲಾಗಿದೆ.
ಬುದ್ಧಿಮತ್ತೆ ಅಥವಾ ಸಜ್ಜನಿಕೆ ಇದ್ದರೆ ಮರಣವನ್ನು ಸುಖವಾಗಿ ಸ್ವಾಗತಿಸುವಂತೆ ಮಾಡಿಕೊಳ್ಳಬಹುದು. ಅಂತಹ ಜೀವನವನ್ನು ಬದುಕಿ ಮರಣದಲ್ಲೂ ತನ್ನ ಸಜ್ಜನಿಕೆಯನ್ನು ಪ್ರಸ್ತುತಪಡಿಸಬಹುದು. "ಶರಣರ ಜೀವನವನ್ನು ಮರಣದಲ್ಲಿ ನೋಡು" ಎಂಬ ಗಾದೆಗೂ ಇದೇ ಅರ್ಥ. ಅಂದರೆ ಒಬ್ಬ ಮೂರ್ಖನ ಬಾಳು ಮರಣಕ್ಕೂ ಕಷ್ಟಪಡುವ ರೀತಿಯದ್ದು. ಜೀವನ ಎಂದರೇನು? ಜೀವನದ ಉದ್ದೇಶ ಏನು? ಅದಕ್ಕನುಗುಣವಾದ ಜೀವನವನ್ನು ಹೇಗೆ ಮಾಡಬೇಕು? ಎಂಬ ಯಾವುದೇ ರೀತಿಯ ಪರಿಜ್ಞಾನ ಇಲ್ಲದಿದ್ದಾಗ ಮರಣವೂ ಕಷ್ಟದಾಯಕವಾಗುತ್ತದೆ ಎಂಬುದನ್ನು ನಾವು ಅನೇಕರ ಮರಣದಲ್ಲಿ ನೋಡಬಹುದು. ಹಾಗಾಗಿಯೇ ಈ ಮೂರ್ಖತನವು ಮರಣಕ್ಕೆ ಸದೃಶ ಎಂಬ ಉತ್ತರವನ್ನು ಇಲ್ಲಿ ಕೊಡಲಾಗಿದೆ.
ಸೂಚನೆ : 05/08/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.