Sunday, October 12, 2025

ಕೃಷ್ಣಕರ್ಣಾಮೃತ 78 ದನಕಾಯುವ ಜಗದೊಡೆಯನ ಮುಖಮಾಧುರ್ಯ (Krishakarnamrta 78)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಶ್ರೀಕೃಷ್ಣನು ನಮ್ಮನ್ನು ಕಾಪಾಡಲಿ - ಎಂಬುದಾಗಿ ಕೇಳಿಕೊಳ್ಳುವ ಶ್ಲೋಕವೊಂದು ಇಲ್ಲಿದೆ. ಇದರಲ್ಲೆಲ್ಲೂ "ಶ್ರೀಕೃಷ್ಣ" ಎಂಬ ಪದವನ್ನೇ ಬಳಸಿಲ್ಲ, ಲೀಲಾಶುಕ. ಬದಲಾಗಿ ನಾಲ್ಕು ಪಾದಗಳಲ್ಲಿ ನಾಲ್ಕು ವಿಶೇಷಣಗಳನ್ನು ಬಳಸಿದ್ದಾನೆ. ಅವುಗಳು ಹೇಳುವುದು ಕೃಷ್ಣನ ವೈಭವವನ್ನೇ ಎನ್ನುವುದು ಸ್ಪಷ್ಟವೇ ಸರಿ.

ಕೃಷ್ಣನು ಅಖಿಲೇಶ್ವರ, ಎಲ್ಲಕ್ಕೂ ಒಡೆಯ. ಆತನ ಮೈಯೂ ಆತನ ವೈಭವವೇ.

ಕೃಷ್ಣನ ಶರೀರವು ದಿವ್ಯವಾದದ್ದು. ಅದು ಕಾಂತಿಯಿಂದ ತುಂಬಿರುವುದು. ಅಷ್ಟೇ ಅಲ್ಲ, ಅದು ಪರಿಮಲಭರಿತವೂ ಹೌದು. ಕಿಶೋರಭಾವಕ್ಕೂ ಯೌವನಕ್ಕೂ ಮಧ್ಯದಲ್ಲಿರುವ ಸ್ಥಿತಿ : ಯೌವನವಿನ್ನೂ ಆವರಿಸಿಲ್ಲ, ವ್ಯಕ್ತವಾಗಿಲ್ಲ. ಆ ಅವ್ಯಕ್ತತೆಯೇ ಆತನ ಕಿಶೋರಸ್ಥಿತಿಯನ್ನು ಆವರಿಸಿದೆ.

ಮೇಲಿನ ಎರಡಂಶಗಳು ಕೃಷ್ಣನ ಶರೀರದ ಸೊಬಗನ್ನು ಸೂಚಿಸತಕ್ಕವು. ಕೃಷ್ಣನಿಗೇ ವಿಶಿಷ್ಟವಾದ ಒಂದಂಶವೂ ಉಂಟು. ಆತನು ಶಿಕ್ಷಣ ಪಡೆದುಕೊಂಡಿರುವುದು ಗವ್ಯಾನುಪಾಲನದಲ್ಲಿ. ಗವ್ಯವೆಂದರೆ ಗೋ-ಸಮೂಹ. (ಪಂಚ-ಗವ್ಯವೆನ್ನುವಾಗ ಗವ್ಯವೆಂದರೆ ಬೇರೆ ಅರ್ಥ: ಗೋವಿನಿಂದ ಜನಿಸಿದ ಪದಾರ್ಥ - ಎಂದು). ಹಸುವಿನ ಮಂದೆಯ ಅನುಪಾಲನವಿಧಿಯೆಂದರೆ ಅವನ್ನು ಕಾಯುವ ಬಗೆ. ಆ ಬಗ್ಗೆ ಆತನು ಅನುಶಿಷ್ಟ. ಅನುಶಿಷ್ಟನೆಂದರೆ ಅನುಶಾಸನಕ್ಕೆ ಒಳಪಟ್ಟಿರುವವನು, ಶಿಕ್ಷಣ ಹೊಂದಿರುವವನು.

ಇಷ್ಟಲ್ಲದೆ ಅವ್ಯಾಜ-ರಮ್ಯತೆಯೂ ಅಲ್ಲಿದೆ. ವ್ಯಾಜವೆಂದರೆ ನೆಪವೆಂದೋ ಕಾರಣವೆಂದೋ ಅರ್ಥ. ಯಾರಾದರೂ ಚೆನ್ನಾಗಿ ಕಾಣಲು ವೇಷವೋ ಭೂಷಣಗಳೋ ಕಾರಣವಾಗುವುದುಂಟು. ಅವೇನೂ ಇಲ್ಲದೆಯೇ ಯಾವುದು ಸೊಗಯಿಸುವುದೋ ಅದು ಅವ್ಯಾಜ-ರಮ್ಯ.

ಹಾಗಿರುವ ಅಖಿಲೇಶ್ವರನ ವೈಭವವು ಕಾಪಾಡಲಿ ನಮ್ಮನ್ನು - ಎಂಬುದಾಗಿ ನಮ್ಮೆಲ್ಲರಿಗೂ ರಕ್ಷಣೆಯನ್ನು ಕೋರುತ್ತಿದ್ದಾನೆ, ಲೀಲಾಶುಕ. ಶ್ಲೋಕ ಹೀಗಿದೆ:

ಸುವ್ಯಕ್ತ-ಕಾಂತಿ-ಭರ-ಸೌರಭ-ದಿವ್ಯ-ಗಾತ್ರಂ
ಅವ್ಯಕ್ತ-ಯೌವನ-ಪರೀತ-ಕಿಶೋರ-ಭಾವಂ |
ಗವ್ಯಾನುಪಾಲನ-ವಿಧಾವನುಶಿಷ್ಟಂ ಅವ್ಯಾತ್
ಅವ್ಯಾಜ-ರಮ್ಯಂ ಅಖಿಲೇಶ್ವರ-ವೈಭವಂ ನಃ ||

ಮೊದಲನೆಯ ಪಾದವು ಸುವ್ಯಕ್ತವಾದುದನ್ನು ಹೇಳಿದರೆ, ಎರಡನೆಯ ಪಾದವು ಅವ್ಯಕ್ತವಾದುದನ್ನು ಹೇಳುತ್ತದೆ. ನಾಲ್ಕು ಪಾದಗಳಲ್ಲೂ ದ್ವಿತೀಯಾಕ್ಷರಪ್ರಾಸವನ್ನು ಕಾಣಬಹುದು. ಜಗದೊಡೆಯನೇ ದನಕಾಯುವವನಾಗಿರುವ ಲೀಲೆಯನ್ನುಈ ಪದ್ಯದಲ್ಲಿ ಪರಿಶೀಲಿಸಿದೆ.

***

ಕೃಷ್ಣನು ನಮ್ಮನ್ನು ಸಂತೋಷಪಡಿಸಲಿ ಎಂದು ಬಯಸುತ್ತಾನೆ, ಕವಿ ಲೀಲಾಶುಕ. ಕೃಷ್ಣನೊಂದು ತೇಜಸ್ಸು. ಬಹಳ ವಿಶೇಷವಾದ ತೇಜಸ್ಸದು. ರಮೆಯ ಅಂತಃಪುರವೆನಿಸುವ ತೇಜಸ್ಸು.

ಲಕ್ಷ್ಮಿಯು ಸದಾ ಆತನ ಹೃದಯದಲ್ಲೇ ನೆಲೆಸಿರುವಳಷ್ಟೆ? ರಾಣಿವಾಸದವರನ್ನು ರಾಜನ ಅಂತಃಪುರವೆನ್ನುವುದನ್ನು ಕೇಳಿರುತ್ತೇವೆ. ಆದರೆ ಲೀಲಾಶುಕನ ನಿರೂಪಣೆಯಲ್ಲಿ, ಲಕ್ಷ್ಮಿಯ ಅಂತಃಪುರವೇ ಶ್ರೀಕೃಷ್ಣ!

ಕೃಷ್ಣನು ಅಧಿಕ-ಮನೋಹರ - ಎಂದರೆ ಅತ್ಯಂತ ಆಕರ್ಷಕನಾಗಿರುವವನು. ಅಧಿಕವೆಂದರೆ ಎಷ್ಟು? ಅದಕ್ಕೇನಾದರೂ ಅಳತೆಗೋಲುಂಟೆ? ಉಂಟು. ಎಷ್ಟೆಂದರೆ ವ್ರಜ-ಯುವತಿಯರ, ಅರ್ಥಾತ್ ಗೊಲ್ಲತಿಯರ, ಅಚ್ಚುಮೆಚ್ಚು ಆತ.

ಅವರಿಗೆ ಆತನು ಅಚ್ಚುಮೆಚ್ಚೆಂದರೆ ಅವನನ್ನು ಕಾಣುತ್ತಿರುವ ಬಯಕೆ ಅವರದು - ಎಂದೇ. ಅವರ ವಿಲೋಚನಗಳಿಗೆ ಆತನು ಅವಲೇಹ್ಯನಂತೆ. ಹಾಗೆಂದರೆ ತಮ್ಮ ಕಣ್ಣುಗಳಿಂದ ಆತನನ್ನು ನೆಕ್ಕುವರಂತೆ ಅವರು!

ಲೇಹ್ಯವೆಂದರೆ ನೆಕ್ಕಿ ನೆಕ್ಕಿ ಆಸ್ವಾದಿಸುವಂತಹುದು. ಒಂದೇ ತುತ್ತಿಗೋ ಒಂದೇ ಗುಟುಕಿಗೋ ನುಂಗಿ ಮುಗಿಸಿಬಿಡುವಂತಹುದಲ್ಲ. ನಾಲಿಗೆಯ ಮೇಲೆಲ್ಲಾ ಪಸರಿಸಿಕೊಂಡು ಮೆಲ್ಲಮೆಲ್ಲನೆ ಆಸ್ವಾದಿಸಿ ಸುಖಿಸುವಂತಹ ವಸ್ತುವೇ ಲೇಹ್ಯ.

ನಾಲಿಗೆಯ ಈ ಕೆಲಸವನ್ನು ಕಣ್ಣಿಗೆ ಹಚ್ಚುವ ಪರಿಯಲ್ಲಿ ಕವಿಯ ಕೈವಾಡವು ಕಾಣುತ್ತದೆ. ಕೃಷ್ಣನನ್ನು ಒಮ್ಮೆ ಕಂಡರೂ ತೃಪ್ತಿಯಾಗುವುದೇ; ಜೊತೆಗೇ, ಎಷ್ಟು ಕಂಡರೂ ತೃಪ್ತಿಯೇ ಇಲ್ಲ - ಎಂಬುದೂ ನಿಜವೇ. ಎವೆಯಿಕ್ಕದೆ ನೋಡುತ್ತಿರಬೇಕೆಂಬ ತನ್ನ ಹೃದ್ಗತವಾದ ಆಸೆಯನ್ನೇ ವ್ರಜಾಂಗನೆಯರ ಹಂಬಲಿಕೆಯಾಗಿ ಕವಿ ನಿರೂಪಿಸುತ್ತಿದ್ದಾನೆ. ತಮ್ಮೆರಡೂ ಕಣ್ಣುಗಳಿಂದ ಆತನನ್ನು ತುಂಬಿಕೊಳ್ಳುತ್ತಿರುವವರು, ಗೋಕುಲದ ಮುಗ್ಧರಮಣಿಯರು.

ಕೆಲವರ ಮುಖ-ಮಾಧುರ್ಯವು ಹೇಗಿರುವುದೆಂದರೆ ಅವರನ್ನು ಸುಮ್ಮನೆ ನೋಡುತ್ತಿರಬೇಕೆನಿಸುತ್ತದೆ. ಅವರು ಕಿಂಚಿತ್ತಾದ ಮಂದಹಾಸವನ್ನು ಬೀರಿದರಂತೂ ಮತ್ತೂ ಮನೋಹರವಾಗಿಯೇ ತೋರುತ್ತಾರೆ. ಕೃಷ್ಣನಿಲ್ಲಿ ಹಾಗೆಯೇ. ತನ್ನ ಮಂದಹಾಸದಿಂದಲೇ ಅಧಿಕ-ಮನೋಹರನಾಗಿ ತೋರಿ ಮನಸೆಳೆದವನು.

ಏನಿದೆ ವಿಶೇಷ ಆತನ ಮಂದಹಾಸಗಳಲ್ಲಿ? ಅತ್ಯಂತ ಆಸ್ವಾದ್ಯವೆನಿಸುವುದು ಅಮೃತವೆನ್ನುತ್ತಾರಲ್ಲವೇ? ಅದನ್ನು ಹೋಲುವುದೇ ಈ ಮಂದಸ್ಮಿತ? - ಎಂದು ಕೇಳುವಿರೇನು? ಹೋಲುವುದಲ್ಲ, ಇದರ ಮುಂದೆ ಅದೇ ಸೋಲುವುದು! ಸುಧೆಗೆ ಮದವಿರಬಹುದು, ತಾನೇ ಅತ್ಯಂತ ಆಸ್ವಾದ್ಯವೆಂದು. ಅದರಿಂದುಂಟಾಗುವ ಯಾವ ಅಹಂಕಾರವುಂಟೋ ಅದನ್ನೇ ಅಪಹಾಸ್ಯಮಾಡುವ ಆಸ್ವಾದ್ಯತೆ ಶ್ರೀಕೃಷ್ಣನ ಮಂದಹಾಸಕ್ಕುಂಟು. ಎಂತಹ ಆರ್ದ್ರವಾದ ಹಸಿತ, ಕೃಷ್ಣನದು! ಆರ್ದ್ರವೆಂದರೆ ಒದ್ದೆ, ಅರ್ಥಾತ್ ರಸಭರಿತವಾದದ್ದು.

ಹೀಗೆ ಸುಧೆಯನ್ನು ಮೀರಿಸುವ ಮಂದಹಾಸದಿಂದಾಗಿ ಅತಿಮನೋಹರನಾಗಿದ್ದು ಗೊಲ್ಲತಿಯರ ನೇತ್ರಗಳಿಗೆ ಹಬ್ಬವಾಗಿದ್ದ ಕೃಷ್ಣನು ನಮ್ಮನ್ನೂ ಸಂತೋಷಪಡಿಸಲಿ - ಎನ್ನುತ್ತಾನೆ, ಲೀಲಾಶುಕ.

ಶ್ಲೋಕ ಹೀಗಿದೆ:
ಅಪಹಸಿತ-ಸುಧಾ-ಮದಾವಲೇಪೈಃ
ಅಧಿಕ-ಮನೋಹರಂ ಆರ್ದ್ರ-ಮಂದಹಾಸೈಃ |
ವ್ರಜ-ಯುವತಿ-ವಿಲೋಚನಾವಲೇಹ್ಯಂ
ರಮಯತು ಧಾಮ ರಮಾವರೋಧನಂ ನಃ ||

***

ನನ್ನ ಮನಸ್ಸಿನಲ್ಲಿ ನಲಿಯಲಿ, ಆ ತೇಜಸ್ಸು - ಎಂದು ಕೇಳಿಕೊಳ್ಳುತ್ತಾನೆ, ಲೀಲಾಶುಕ. ಯಾವುದು ಆ ತೇಜಸ್ಸು? ಅದೇನೆಂದು ಹೇಳಲಾಗದು- ಎನ್ನುತ್ತಾನೆ, ಕವಿ; ಆದರೂ ಕೆಲವೇ ಲಕ್ಷಣಗಳನ್ನು ಹೇಳಲು ಶಕ್ಯ. ಏನನ್ನೂ ಹೇಳಲೇ ಆಗದೆಂದೆನ್ನುವಲ್ಲಿ ಆ ಬಗ್ಗೆ ಮಾತನಾಡುವುದಾದರೂ ಎಂತು?

ಹಾಗಿದ್ದರೆ ಆ ಬಗ್ಗೆ ಏನನ್ನು ಹೇಳಬಹುದು? ಕಾಡಿನಲ್ಲಿ ಅದು ಜಗಳ ಮಾಡಿಕೊಂಡಿದೆಯೆನ್ನಬಹುದು. ಕಾಡೆಂದರೆ ವೃಂದಾವನವೇ. ಅದರ ಜಗಳ ಮೋಡದೊಂದಿಗೆ. ಇಬ್ಬರು ಬೆಳ್ಳಗಿದ್ದರೆ ಕೆಲವೊಮ್ಮೆ ಪೈಪೋಟಿಯಿರುವುದಲ್ಲವೇ - ತಾ ಹೆಚ್ಚು ಬಿಳಿಯೋ ನಾ ಹೆಚ್ಚೋ? – ಎಂದು. ಹಾಗಿಲ್ಲಿ ನಾ ಕರಿಯೋ ನೀ ಕರಿಯೋ ಎಂದು ಪೈಪೋಟಿ! ಏಕೆ? ಕೃಷ್ಣನೂ ಕಪ್ಪು, ಕಾಳಮೇಘವೂ ಕಪ್ಪು. ಯಾರು ಹೆಚ್ಚು ಕಪ್ಪೆಂಬ ಪೈಪೋಟಿ.

ಹೀಗೆ ಹೇಳುವುದರ ತಾತ್ಪರ್ಯವೆಂದರೆ, ಕೃಷ್ಣವೆಂಬ ತೇಜಸ್ಸು ಕಾಲಮೇಘದಂತೆ ಇದೆ, ಎಂಬುದೇನೋ ಅಷ್ಟೇ. ಮುಖಕ್ಕೂ ಕಮಲಕ್ಕೂ ಪೈಪೋಟಿಯೆಂದರೆ ಹೇಗೋ ಹಾಗೆಯೇ ಇದೂ. ಪೈಪೋಟಿಯೆಂದರೂ ಔಪಮ್ಯವೇ ಉದ್ದಿಷ್ಟ.

ಈ ಕಪ್ಪಾದ ಮಹಸ್ಸಿನ ವಿಶೇಷವೆಂದರೆ ಅದರ ವೇಣುಧ್ವನಿಯು ಎಲ್ಲರಿಗೂ ಮಾನ್ಯವಾಗಿದೆ. ಎಲ್ಲರಿಗೂ ಎಂದು ಹೇಳಲೇಬೇಕಿಲ್ಲ. ಪರಮ-ಸಂಗೀತ-ರಸಿಕರು ಯಾರೋ ಅವರಿಗೆ ಮೆಚ್ಚುಗೆಯಾಗಿದೆಯೆಂದು ಹೇಳಿದರೆ ಸಾಕು. ಆಗ ಮಿಕ್ಕವರು ಲೆಕ್ಕಕ್ಕೇ ಇಲ್ಲ.

ಯಾರವರು ಅಂತಹ ಸಂಗೀತ-ರಸಿಕರು? ಅವರೇ ಕಿನ್ನರಿಯರು. ಆಕಾಶದಲ್ಲಿ ಸಂಚರಿತತಕ್ಕ ಕಿಂನರ/ಕಿಂಪುರುಷರ ನಾರಿಯರು. ಖೇಚರರಾದ ಅವರು ಗಾಂಧರ್ವ-ಗಾನದ ಅರಿವುಳ್ಳವರು. ಅವರೇ ಮನಸೋತಿರುವ ಮೃದುವಾದ ವೇಣು-ಧ್ವನಿ, ಈ ಕೃಷ್ಣನೆಂಬ ತೇಜಸ್ಸಿನದು.

ಈ ಅಂಶಗಳಿಗಿಂತಲೂ ಮಿಗಿಲಾದ ಒಂದು ಅಂಶವಿದೆ, ಆ ತೇಜಸ್ಸಿನಲ್ಲಿ. ಅದೆಂದರೆ ಅದು ಕೃಪಾಸ್ಪದವಾದದ್ದು, ಎಂದರೆ ದಯಾಮಯವಾದದ್ದು. ಈ ಕಾರಣಕ್ಕಾಗಿಯೇ ಆ ತೇಜಸ್ಸು ನಮ್ಮ ಮನಸ್ಸಿನಲ್ಲಿ ಆಡಲಿ - ಎಂದು ಕೇಳಿಕೊಂಡಿರುವುದು.

ಖೇಲತಾಂ ಮನಸಿ ಖೇಚರಾಂಗನಾ-

-ಮಾನನೀಯ-ಮೃದು-ವೇಣು-ನಿಃಸ್ವನೈಃ |

ಕಾಲಮೇಘ-ಕಲಹೋದ್ವಹಂ ಮಹಃ

ಕಾನನೇ ಕಿಮಪಿ ನಃ ಕೃಪಾಸ್ಪದಮ್ ||

ಸೂಚನೆ : 12
/10/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.