ಲೇಖಕರು : ವಿದ್ವಾನ್ ಅನಂತ ಬಿ.ಜಿ.
ಪ್ರತಿಕ್ರಿಯಿಸಿರಿ (lekhana@ayvm.in)
ದುರ್ಗಾಷ್ಟಮಿಯ ನಂತರ ಇಂದು ಮಹಾನವಮಿ. ಇಂದು 'ಜಯಂತೀ ಮಂಗಲಂ' ಎಂಬ ಮಂತ್ರದಿಂದ ಅಥವಾ 'ನಮೋ ದೇವ್ಯೈ ಮಹಾದೇವ್ಯೈ' ಎಂಬ ಶ್ಲೋಕದಿಂದ ಅಥವಾ ದುರ್ಗಾ ಸಪ್ತಶತಿಯ ಶ್ಲೋಕಗಳಿಂದ ಹೋಮವನ್ನು ಮಾಡಬೇಕು. ಈ ಹೋಮವನ್ನು ತುಪ್ಪ ಬೆರೆಸಿದ ಮತ್ತು ಬಿಳಿಎಳ್ಳು ಮಿಶ್ರವಾದ ಪಾಯಸದಿಂದ ಅಥವಾ ಬರಿಯ ಬಿಳಿಯ ಎಳ್ಳುಗಳಿಂದ ದೂರ್ವೆ ಸಾಸಿವೆ ಅರಳು ಅಡಿಕೆ ಜವೆ ಬಿಲ್ವಪತ್ರೆ ಕೆಂಪುಚಂದನವೃಕ್ಷದ ಚೂರು ಇತ್ಯಾದಿಗಳಿಂದ ಮಿಶ್ರಿತವಾದ ಪಾಯಸದಿಂದ ಮಾಡಬೇಕು.
ಮಹಾನವಮಿಯ ಆರಾಧ್ಯ ದೇವಿ, ಶುಂಭಹಾದುರ್ಗೆ. ಅವಳ ಸ್ವರೂಪವು ಅತ್ಯದ್ಭುತವಾದುದು.
ತ್ರಿನೇತ್ರಾಂ ಚಂದ್ರಚೂಡಾಂ ಚ ಮುಕುಟೇನೋಪಶೋಭಿತಾಮ್
ಸೂರ್ಯಕೋಟಿ ಪ್ರತೀಕಾಶಾಂ
ಶುಂಭಾಸುರವಿಮರ್ದಿನೀಮ್/
ಸಿಂಹಾರೂಢಾಂ ಮಹಾದುರ್ಗಾಂ
ತ್ರಿದಶೈರಪಿ ಪೂಜಿತಾಮ್
ನವಮ್ಯಾಂ ಪೂಜಯೇದ್ದೇವೀಂ
ಅಭೀಷ್ಟಫಲದಾಯಿನೀಮ್//
ಇವಳು ಮಹಾಸಿಂಹದ ಮೇಲೆ ಸ್ಥಿತಳಾಗಿರುವ ಮಹಾದೇವಿ. ಶಿವನ ಅರ್ಧಾಂಗಿನಿಯಾದ ಇವಳು ಪರಶಿವನಂತೆಯೇ ಹಣೆಯಲ್ಲಿ ಮೂರನೆಯ ಕಣ್ಣುಳ್ಳವಳು, ಶಿವನಂತೆಯೇ ಶಿರಸ್ಸಿನಲ್ಲಿ ಚಂದ್ರಕಲೆಯಿಂದ ವಿಭೂಷಿತಳಾದವಳು. ಸ್ವತಃ ಕೋಟಿ ಸೂರ್ಯರ ಕಾಂತಿಯಿಂದ ಕೂಡಿದವಳಾಗಿ ಶುಂಭಾಸುರನನ್ನು ಮರ್ದನಮಾಡಿ ದೇವತೆಗಳಿಂದಲೂ ಪೂಜಿತಳಾದ ಮಹಾದೇವಿ. ಮೇಲಾಗಿ ಭಕ್ತಿಯಿಂದ ಪೂಜಿಸಿದವರಿಗೆ ಬೇಕಾದ ಇಷ್ಟಾರ್ಥಗಳನ್ನು ಕೊಡುವವಳು.
ಇಂದು ಆಯುಧ ಪೂಜೆಯೂ ಹೌದು. ನಮ್ಮ ನಿತ್ಯಜೀವನಕ್ಕೆ ಸಹಕಾರ ಕೊಟ್ಟು ರಕ್ಷಣೆ ಮಾಡುತ್ತಿರುವ ಎಲ್ಲ ಪದಾರ್ಥಗಳೂ ಆಯುಧಗಳೇ. ಅವುಗಳನ್ನು ದುರ್ಗಿಯ ರೂಪದಲ್ಲಿ, ಮಹಾಲಕ್ಷ್ಮಿಯ ರೂಪದಲ್ಲಿ ಭಾವಿಸಿ ಪೂಜಿಸುವುದು ಸಂಪ್ರದಾಯ. ಆಯುಧಗಳನ್ನು ಗಂಧ ಪುಷ್ಪ ಧೂಪ ದೀಪ ನೈವೇದ್ಯಗಳಿಂದ ಪೂಜಿಸಬೇಕು. ಯಾರು ಮಾಂಸಾಹಾರವನ್ನು ಬಳಸುತ್ತಾರೋ ಅಂಥವರು ಆಯುಧಗಳಿಗೆ ಬಲಿಯನ್ನು ಕೊಡುವ ಸಂಪ್ರದಾಯವಿದೆ. ಉಳಿದವರು ಬೂದುಗುಂಬಳಕಾಯಿ, ನಿಂಬೆಹಣ್ಣು, ಉದ್ದು ಇತ್ಯಾದಿಗಳಿಂದ ಕೂಡಿದ ಅನ್ನ, ಹಿಟ್ಟಿನಿಂದ ಮಾಡಿದ ಪಶು ಇತ್ಯಾದಿಗಳಿಂದಲೇ ಬಲಿಯನ್ನು ಕೊಡಬೇಕು. ಇಂದಿಗೆ ಒಂಬತ್ತು ದಿವಸಗಳ ನವದುರ್ಗೆಯರ ಪೂಜೆ ಮಂಗಳವಾಗುತ್ತದೆ. ನಾಳೆ ವಿಜೃಂಭಣೆಯ ವಿಜಯದಶಮಿಯನ್ನು ಆಚರಿಸಿ, ಆನಂದಿಸೋಣ !.
ಕೃಷ್ಣಾರ್ಪಣಮಸ್ತು
ಸೂಚನೆ: 1/10//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.