Saturday, October 4, 2025

ಅಷ್ಟಾಕ್ಷರೀ - 90 ಸ್ವದೇಶೋ ಭುವನತ್ರಯಂ (Astakshari 90)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಈ ನೆಲ ಮಾತ್ರವಲ್ಲ, ತ್ರಿಜಗವೂ ನಮ್ಮ ದೇಶವೇ

ಬ್ರಿಟಿಷರ ದಬ್ಬಾಳಿಕೆಯಿಂದ ಬೇಸತ್ತಿದ್ದ ಭಾರತವು ಸ್ವಾತಂತ್ರ್ಯಪೂರ್ವಕಾಲದಲ್ಲಿ ಎರಡು ಬಾರಿ ಸ್ವದೇಶಿ ಚಳುವಳಿಯನ್ನು ಕಂಡಿತು - ಎನ್ನುತ್ತಾರೆ ಇತಿಹಾಸಜ್ಞರು: ೧೮೫೦ರ ಆಸುಪಾಸಿನಲ್ಲಿ, ಹಾಗೂ ೧೯೦೫ರ ಆಸುಪಾಸಿನಲ್ಲಿ ಇವುಗಳಾರಂಭವಾಯಿತು. ಮೊದಲನೆಯದರಲ್ಲಿ ನೌರೋಜಿ-ಗೋಖಲೆ-ರಾನಡೆ-ಟಿಳಕ-ಪ್ರಭೃತಿಗಳ ಮುಂದಾಳುತ್ವವಿತ್ತು. ಎರಡನೆಯದರಲ್ಲಿ ಗಾಂಧೀಜಿಯವರದು.

ಭಾರತದ ಸಂಪತ್ತನ್ನು ವ್ಯವಸ್ಥಿತವಾಗಿ ಬ್ರಿಟಿಷರು ಕೊಳ್ಳೆಹೊಡೆಯುತ್ತಿದ್ದುದನ್ನು ದಾದಾಭಾಯಿ ನೌರೋಜಿ ಎಲ್ಲರ ಮುಂದೆ ತೆರೆದಿಟ್ಟರು. ಬಂಗಾಳವನ್ನೊಡೆದು ಮುಸ್ಲಿಮರಿಗೆ ಪೂರ್ವಬಂಗಾಳವನ್ನು ಬ್ರಿಟಿಷರಿತ್ತದ್ದು ಎರಡನೆಯದಕ್ಕೆ ನಾಂದಿಯಾಯಿತು. ಆಂಗ್ಲ-ವಸ್ತ್ರಗಳನ್ನು ಲಕ್ಷಾಧಿಕವಾಗಿ ಸುಡುತ್ತಾ ಖಾದಿಚಳುವಳಿಯಾರಂಭವಾಯಿತು. ವಿದೇಶೀಮಾಲುಗಳನ್ನು ಬಹಿಷ್ಕರಿಸಿ ಸ್ವದೇಶೋತ್ಪಾದನಗಳಿಗೇ ಪ್ರೋತ್ಸಾಹವೀಯಬೇಕೆಂಬ ತತ್ತ್ವವು ಆರ್ಥಿಕ-ಸ್ವಾತಂತ್ರ್ಯವೆಂಬ ತನ್ನ ಮೊದಲ ಹೆಜ್ಜೆಯನ್ನು ಕಂಡಿತು. ಸ್ವರಾಜ್ಯವೆಂಬುದು ತಮ್ಮ ಜನ್ಮಸಿದ್ಧ ಹಕ್ಕೆಂದು ಟಿಳಕರು ಘೋಷಿಸಿದರು. ಭಗತ್ ಸಿಂಗ್ ಮೊದಲಾದ ಧೀರರು ಬ್ರಿಟಿಷರು ತತ್ತರಿಸುವಂತೆ ಸಿಡಿದೆದ್ದರು. ಬ್ರಿಟಿಷರ ಉಚ್ಚಾಟನೆಯಾಯಿತು.

ಆದರೆ ಮತ್ತೆ ಮೋಹವಾವರಿಸಿತು, ನಮ್ಮ ಜನತೆಗೆ. ವಿದೇಶೀ-ವಸ್ತು-ವ್ಯಾಮೋಹ ಮರುಕಳಿಸಿತು. ಈಗಂತೂ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಸ್ವದೇಶೀ ಆಂದೋಳನಕ್ಕೆ ನವರೂಪವೇ ಬಂದಿದೆ. ಸ್ವದೇಶೀ-ತಾಂತ್ರಿಕತೆಯೂ ರೂಪುಗೊಳ್ಳುತ್ತಿದೆ. ಸ್ವದೇಶೀ ಚಳುವಳಿಯ ಸ್ಮರಣೆ-ಪ್ರಸ್ತುತತೆಗಳು ಮನ್ ಕೀ ಬಾತ್ ಗಳಲ್ಲೂ ಪ್ರತಿಪಾದಿತವಾಗಿವೆ. ಈಚೆಗೆ ಅಮೇರಿಕಾಧ್ಯಕ್ಷರು ತಾಳಿದ ಕಟುನಿಲುವುಗಳಿಗೆ ಪ್ರತಿಯಾಗಿ, ಉತ್ಕಟವಾದ ಆತ್ಮನಿರ್ಭರತೆಗೆ ಕರೆನೀಡಲಾಗಿದೆಯಷ್ಟೆ.

ರಾಜಕೀಯ-ಸ್ವಾತಂತ್ರ್ಯವೊಂದು ಯಜ್ಞವೆಂದೂ ಸ್ವದೇಶೀ ಆಂದೋಳನವು ಯಜ್ಞ-ಕಲ್ಪವೆಂದೂ ಯೋಗಿ ಅರವಿಂದರು ನಿರೂಪಿಸಿದರು. ಹಾಗೆ ನೋಡಿದರೆ ರವೀಂದ್ರನಾಥಠಾಕೂರರೇ ಸ್ವದೇಶೀಚಳುವಳಿಯ ವಿಷಯವಾಗಿ ಲಘುವಾಗಿ ಮಾತನಾಡಿದವರು.

ಕೇವಲ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕರೆ ಸಾಲದೆಂಬುದನ್ನು ಚಿಕ್ಕಂದಿನಲ್ಲೇ ಮನಗಂಡು, ಸಾಂಸ್ಕೃತಿಕವಾದ ನಮ್ಮತನವು ದೃಢವಾಗಬೇಕೆಂದು ಪ್ರತಿಪಾದಿಸಿ, ಆ ದಿಶೆಯಲ್ಲಿ ಶ್ರಮಿಸಿದವರೆಂದರೆ ರಾಷ್ಟ್ರೀಯ-ಸ್ವಯಂಸೇವಕ-ಸಂಘದ ಸಂಸ್ಥಾಪಕರಾದ ಡಾ. ಹೆಡಗೇವಾರರೇ ಸರಿ. ಇತ್ತ ಕಲೆಗೂ ಸ್ವದೇಶೀ-ಸಿದ್ಧಾಂತಕ್ಕೂ ಇರುವ ನಂಟನ್ನು ಡಾ. ಆನಂದಕುಮಾರಸ್ವಾಮಿಗಿಂತಲೂ ಮಿಗಿಲಾಗಿ ಪ್ರತಿಪಾದಿಸಿದವರುಂಟೆ?

ಬಹಳ ಮುಖ್ಯವಾಗಿ ಭಾರತವು ಈಚೆಗೆ ದಿವಾಳಿಯೆದ್ದಿರುವುದು ಬೌದ್ಧಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ - ಎಂಬುದನ್ನು ದಿಟ್ಟವಾಗಿ ಪ್ರತಿಪಾದಿಸಿದವರು, ಗುರೂಜಿ ಎಂದು ಪ್ರಸಿದ್ಧರಾದ ಗೋಳವಲಕರರೇ ಸರಿ.

ಹಾಗಾದರೆ ಸ್ವದೇಶವೆಂದರೇನೆಂಬುದರ ಬಗ್ಗೆ ಭಾರತೀಯ-ಚಿಂತನೆಯೇನಾದರೂ ಉಂಟೆ?

ಸಾಧಾರಣವಾಗಿ ಎಲ್ಲರಿಗೂ ತಾನು, ತನ್ನ ಕುಟುಂಬ, ತನ್ನ ಮನೆ, ತನ್ನ ಮನೆತನ - ಇವುಗಳು ದೊಡ್ಡದಾಗಿ ಕಾಣುತ್ತವೆ, ಸರಿಯೇ. ಇವಕ್ಕಿಂತಲೂ ಗ್ರಾಮ- ಜನಪದಗಳನ್ನು ದೊಡ್ಡದಾಗಿ ಕಾಣುವುದಿದೆ. ತನ್ನ ದೇಶವೆಂದರೆ ಭೂಪಟದಲ್ಲಿ ಗೆರೆಯೆಳೆದು ಇಲ್ಲಿಂದ ಇಲ್ಲಿಯವರೆಗೆ - ಎಂದು ಅವಧಿಗಳನ್ನು ಸೂಚಿಸುವ ಕ್ರಮವಿದೆ: ಕರಾರುವಾಕ್ಕಾಗಿ ಹೇಳಲು ಅಕ್ಷಾಂಶ-ರೇಖಾಂಶಗಳ ಉಲ್ಲೇಖವಾಗುತ್ತದೆ. ಸ್ವದೇಶದ ಭೂವಲಯವೆಂದು ಹೇಳುವಲ್ಲಿ ಕಲ್ಲು-ಮಣ್ಣು, ಬೆಟ್ಟ-ಗುಡ್ಡ, ನದಿ-ಝರಿಗಳಿಂದ ಗುರುತಿಸಲಾಗುವ ಸೀಮೆಯಾಗಿ ತೋರಿಸುವುದಿದೆ. 

ಆದರೆ ಇದನ್ನು ಮೀರಿ ಭೂಮಿಯೆಲ್ಲವೂ ಒಂದೇ ಕುಟುಂಬದಂತೆ - ಎಂದುಕೊಳ್ಳುವುದು ವಿಶಾಲಮನೋಭಾವವಲ್ಲವೇ? ಮನೋವೈಶಾಲ್ಯವೆಂದು ಕಣ್ಣುಮುಚ್ಚಿಕುಳಿತುಕೊಳ್ಳುವುದೂ ಸರಿಯಲ್ಲ: ನಾಡಿಗೋ, ಮನುಕುಲಕ್ಕೋ ಕಂಟಕಪ್ರಾಯರಾದವರ ಮೇಲೆ ಒಂದು ಕಣ್ಣಿಟ್ಟೇ ಇರಬೇಕಾಗುತ್ತದೆ.

ನಮ್ಮ ದೇಶದ ಜ್ಞಾನಿಗಳಂತೂ ಭೂಮಿಯನ್ನೇ ತಾಯಿಯನ್ನಾಗಿಯೂ, ಸ್ವರ್ಗವನ್ನೇ ತಂದೆಯನ್ನಾಗಿಯೂ ಕಂಡಿರುವರು. ಈ ತಾತ್ತ್ವಿಕನೋಟವನ್ನೇ ಸ್ಪಷ್ಟತರವಾಗಿ ಕಂಡುಕೊಂಡು ಪರಮಪುರುಷ-ಪರಾಪ್ರಕೃತಿಗಳನ್ನೇ ತಂದೆತಾಯಿಗಳನ್ನಾಗಿ ತೋರಿಸುವುದಿದೆ: ಇದರ ಅಭಿವ್ಯಕ್ತಿಯಾಗಿಯೇ, ಪಾರ್ವತೀ-ಮಹೇಶ್ವರರನ್ನೇ ತಾಯಿ-ತಂದೆಗಳೆಂದೂ ಶಿವಭಕ್ತರನ್ನೇ ಬಂಧುಗಳೆಂದೂ ಹೇಳಿ, ಸ್ವದೇಶವೆಂದರೆ ಮೂರೂ ಲೋಕಗಳು (ಸ್ವದೇಶೋ ಭುವನತ್ರಯಂ) – ಎಂದಿದೆ , ಅನ್ನಪೂರ್ಣಾಷ್ಟಕದ ಕೊನೆಯಲ್ಲಿ . ಹೀಗೆಯೇ ಕಮಲಾ-ಜನಾರ್ದನರನ್ನೂ ವಿಷ್ಣುಭಕ್ತರನ್ನೂ ಮಾತಾ-ಪಿತೃಗಳೆಂದೂ ಬಂಧುಗಳೆಂದೂ ಹೇಳುವುದಿದೆ.

ಬಹುಪ್ರಾಚೀನವಾದ ವಿಷ್ಣುಪುರಾಣದಲ್ಲಿ ಭಾರತದೇಶವನ್ನು ಸ್ವರ್ಗ-ಅಪವರ್ಗಗಳ ಸಾಧನೆಗೆ ಎಡೆಯಾದುದೆಂದೇ ಸ್ತುತಿಸಿದೆ (ಅಪವರ್ಗವೆಂದರೆ ಮೋಕ್ಷ).

ನಮ್ಮ ದೃಷ್ಟಿಯು ಭೌತಿಕಕ್ಕೆ ಸೀಮಿತವಾದಾಗ ದೇಶವೆಂಬುದು ಕಲ್ಲು-ಮಣ್ಣುಗಳ ಸೀಮೆಯಾಗುತ್ತದೆ. ಆದರೆ ಶ್ರೀರಂಗಮಹಾಗುರುಗಳು ಹೇಳಿರುವಂತೆ, ನಮ್ಮ ನೋಟವು ಆಧಿಭೌತಿಕದೊಂದಿಗೆ ಅದನ್ನೂ ಮೀರಿದ ಆಧಿದೈವಿಕ-ಆಧ್ಯಾತ್ಮಿಕಕ್ಷೇತ್ರಗಳ ನೋಟಗಳನ್ನೂ ಒಳಗೊಳ್ಳುವುದಾಗಿರಬೇಕು.

ಬೇರೆ ದೇಶದವರ ದೃಷ್ಟಿಯು ಭೌತಿಕಕ್ಕೆ ಸೀಮಿತವೆಂದರೆ ನಮ್ಮದೂ ಹಾಗೆಯೇ ಇರಬೇಕೆಂದೇ? ಋಷಿದೃಷ್ಟಿಯು ಪರಿಮಿತವಲ್ಲ, ತ್ರಿಕ್ಷೇತ್ರ-ಸಾಮರಸ್ಯವನ್ನು ಕಂಡುಕೊಳ್ಳುವಂತಹುದು.

ಸ್ವದೇಶವೆನ್ನುವಾಗ ಸ್ವದೇಶದ ಹೆಸರನ್ನೂ ಒಮ್ಮೆ ಜ್ಞಾಪಿಸಿಕೊಳ್ಳಬೇಕಷ್ಟೆ. ಭಾ-ರತವೆನ್ನುವಾಗ ಭಾ ಎಂದರೆ ಬೆಳಕು, ಜ್ಞಾನ: ಎಲ್ಲ ಬೆಳಕುಗಳಿಗೂ ಮೂಲವಾದ ಪರಮಾತ್ಮಪ್ರಕಾಶ, ಅರ್ಥಾತ್ ಪರಂಜ್ಯೋತಿ. ಭಾರತದ ಸಾಂಸ್ಕೃತಿಕ-ರಾಜಧಾನಿಯಾಗಿದ್ದು ವಿದ್ಯೆಗೆ ಹೆಸರಾಗಿದ್ದ 'ಕಾಶಿ'ಯೆಂಬುದರ ಅರ್ಥವೂ ಅದೇ ಆತ್ಮಜ್ಯೋತಿಯೇ ತಾನೆ? ಹೀಗಾಗಿ, ಶ್ರೀರಂಗಮಹಾಗುರುಗಳು ಹೇಳುವಂತೆ, "ನಮ್ಮ ಜೀವನದ ನೆಲೆಯು ಪರಮವ್ಯೋಮವೇ ಆಗಿದೆ".

ಸ್ವದೇಶವೆಂಬುದನ್ನು ಭೌತಿಕಕ್ಕೆ (ಸೀ)ಮಿತಗೊಳಿಸದೆ, ಮಹಾಮೇಧಾವಿಗಳಾದ ಋಷಿಗಳು ಕಂಡುಕೊಂಡಿದ್ದ ತ್ರಿಕ್ಷೇತ್ರಗಳಿಗೂ ಅನ್ವಯಮಾಡಿಕೊಂಡರಲ್ಲವೆ, ಭಾ-ರತರಾದವರ ಜೀವಿತದ ಸಾರ್ಥಕ್ಯ?

ಸೂಚನೆ: 03/10//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.