ಪ್ರತಿಕ್ರಿಯಿಸಿರಿ (lekhana@ayvm.in)

ಸಾವು ಯಾರಿಗೆ ಭಯ ತರದು? ಸಾವು ಬಂದರೆ ನಾವು ಇಲ್ಲವಾಗುವೆವಲ್ಲವೆ? ತಾನಿರಬಾರದೆಂಬ ತವಕ ಯಾರಿಗೆ ಬಂದೀತು? ಕಣ್ಮರೆಯಾಗುವೆನೆಂಬ ಕಲ್ಪನೆಯೂ ಕ್ಲೇಶಕಾರಿಯೇ, ಅಸಹನೀಯವೇ, ಆತಂಕ ತರುವಂತಹುದೇ.
ಮೇಲೆ ಹೇಳಿದುದೆಲ್ಲ ಸಾಧಾರಣರ ಸಾವಿನ ಬಗೆಗೆ. ಮಹಾತ್ಮರಿಗೂ ಭಯವಾಗಬಹುದು. ಆದರೆ ಕಾರಣ ಬೇರೆ. ಲೀಲಾಶುಕನಿಗೂ ಆತಂಕವೇ: ಸಾವಿನತ್ತ ಸಾಗುವುದಕ್ಕೂ ಮೊದಲೇ ಒಂದು ಮುಖ್ಯವಾದ ಕೆಲಸವಾಗಬೇಕಾಗಿದೆ, ಆಗಲೇಬೇಕಾಗಿದೆ.
ಏಕೆ? ಸಾವಿನ ಸಮಯದಲ್ಲಿ ಸ್ಮರಣೆಯಾದರೆ ಅಷ್ಟೇ ಸಾಕಲ್ಲವೆ? ಅಂತಕಾಲದ ಸ್ಮರಣೆಯ ಬಗ್ಗೆ ಹಾಗೆಂದು ಭಗವದ್ಗೀತೆಯಲ್ಲಿಯೇ ಹೇಳಿಲ್ಲವೇ? – ಎಂದು ಕೇಳಬಹುದು. ಹೀಗೆಂಬುದಾಗಿ ಕೇಳುವುದು ಸುಲಭ. ಸಾವಿನ ಕ್ಷಣ ಹೇಗಿರುವುದೋ ಬಲ್ಲವರಾರು?
ಇಲ್ಲ, ಕೊನೆಗಾಲದ ಕೆಲ ಲಕ್ಷಣಗಳನ್ನಂತೂ ಹೇಳಬಹುದು. ಏನವು? ಆಗಾಗುವ ತಾಪ ಹೀಗೆಂದು ವರ್ಣಿಸಲಾಗದಂತಹುದು. ಎಂದೇ ಅದನ್ನು "ಕೋಽಪಿ ತಾಪಃ" ಎನ್ನುತ್ತಾನೆ, ಕವಿ.
ಆಗಿನ ನೋವು ಹೇಗಿರಬಹುದೆಂದು ಕಿಂಚಿತ್ತಾಗಿ ಸೂಚಿಸಬಹುದು. ಹೇಗೆ? ಎಲ್ಲ ಮರ್ಮ-ಸ್ಥಾನಗಳಿಗೂ ಘಾತವು ಆಗಾಗುವುದು. ಅದೂ ಸಾಧಾರಣವಾದ ಹೊಡೆತವಲ್ಲ. ದೃಢವಾದ ಅಭಿಘಾತವದು. ಯಾವುದೇ ಮರ್ಮಸ್ಥಾನಕ್ಕೆ ಏಟುಬಿದ್ದವ ತತ್ತರಿಸಿಹೋಗುತ್ತಾನೆ. ಹೊರಗಿನಿಂದ ಬೀಳುವ ಏಟಿಗೇ ಬೊಬ್ಬೆಯಿಡುವಂತಾಗುತ್ತದೆ. ಆದರಿದೋ, ಒಳಗಿನಿಂದಲೇ ಆಗುವ ಅತಿಶಯವಾದ ಅಭಿಘಾತ. ಅದರಿಂದಾಗುವ ಪರಿಣಾಮ ಅವಾಚ್ಯ. ಏಕೆ? ಆಗಾಗುವ ತಬ್ಬಿಬ್ಬು ಎಂತಹುದೆಂದರೆ ಏನಾಯಿತೆಂಬುದೇ ಗೋಚರವಾಗದು. ಆದರೂ ಅದನ್ನು ಪರಿಕಿಸಲಂತೂ ಆಗುವುದೇ ಇಲ್ಲ.
ಅಷ್ಟೇ ಅಲ್ಲ. ನಮ್ಮ ನಾನಾಂಗಗಳ ನಡುವೆ ಸಂಧಿಗಳುಂಟಲ್ಲವೇ? ಸಂಧಿಗಳೆಲ್ಲ ಪಟುವಾಗಿದ್ದಾಗ ಶರೀರವೇ ಒಂದು ಸಂಘವಾಗಿ ಕೆಲಸ ಮಾಡುತ್ತದೆ. ಆದರೆ ಮರಣವಪ್ಪಳಿಸುತ್ತಲೇ ಸಂಧಿ-ಬಂಧನಗಳೇ ಕಿತ್ತುಕೊಂಡುಬಿಡುತ್ತವೆ. ಆಂತರಿಕವಾಗಿಯೇ ಹೀಗಾಗಿಹೋದಾಗಲಂತೂ ಕೈಕಾಲುಗಳನ್ನೂ ಆಡಿಸಲಾಗುವುದಿಲ್ಲ. ಆಗಿರುವ ಸಂಧಿ-ಬಂಧದ ಶಿಥಿಲತೆಯನ್ನು ಹೇಳಿಕೊಳ್ಳಲೂ ಆಗುವುದಿಲ್ಲ, ಸರಿಪಡಿಸಲೂ ಆಗುವುದಿಲ್ಲ. ಎಲ್ಲ ಹತೋಟಿಗಳೂ ತಪ್ಪುತ್ತವೆ.
ಸಕಲವಿಧ-ವಿವಶತೆಯೂ ಅತಿಶಯಿತ-ವೇದನೆಯೂ ಒಟ್ಟಿಗೇ ಅನಿರೀಕ್ಷ್ಯವಾಗಿ ಹಾಗೂ ಅಪ್ರತೀಕಾರ್ಯವಾಗಿ ಉಂಟಾಗುತ್ತಿರುವಾಗ, ಏನು ಮಾಡಬೇಕೆಂಬುದಾಗಿ ದಿಕ್ಕೇ ತೋಚದಂತೆ ಆಗಿಬಿಡುತ್ತಿರಲು, ಭಗವಂತನ ಸ್ಮರಣೆಯು ಅದೆಲ್ಲಿಂದ ಬಂದೀತು?
ಎಂದೇ ಲೀಲಾಶುಕನು ಕೇಳಿಕೊಳ್ಳುವುದಾದರೂ, ಶ್ರೀಕೃಷ್ಣನ ಸುಂದರವದನದ ದರ್ಶನವು ಮೊದಲೇ ಆಗಿಬಿಡಲೆಂದು. ಅದನ್ನು ಆತನು ಕೇಳಿಕೊಳ್ಳುವ ಬಗೆಯೂ ವಿಶಿಷ್ಟವೇ.
ಪ್ರಭುವೇ, ಅವಸಾನಕಾಲವು ಆಗಮಿಸುವುದರೊಳಗೆ ನಿನ್ನ ಮುಖಚಂದ್ರನ ದರ್ಶನವಾಗಬೇಕು. ಅ ಚಂದ್ರಾತಪದ ಪ್ರಭಾವದಿಂದಾಗಿ ನನ್ನ ಚಿತ್ತಧಾರೆಯು ದ್ವಿಗುಣಿತವಾಗಬೇಕು - ಎನ್ನುತ್ತಾನೆ.
ಏನು ಹಾಗೆಂದರೆ? ಚಂದ್ರಾತಪ ಅಥವಾ ಚಂದ್ರಿಕೆಯೆಂದರೆ ಬೆಳದಿಂಗಳು. ಚಂದ್ರನಿದ್ದ ಮೇಲೆ, ಅರ್ಥಾತ್ ಪೂರ್ಣಚಂದ್ರನಿದ್ದ ಮೇಲೆ, ಚಂದ್ರಿಕೆಯಿರದೇ? ಅದರ ಪ್ರಭಾವವಿರದೇ? "ಚಿತ್ತಧಾರೆ"ಯೆನ್ನುವುದರಲ್ಲೇ "ಚಿತ್ತವೊಂದು ಸಮುದ್ರ"ವೆಂಬುದರ ಧ್ವನಿಯಿರುವುದು.
ಪೂರ್ಣಚಂದ್ರನು ಬಂದಾಗ (ಗುರುತ್ವಾಕರ್ಷಣದಿಂದಾಗಿ) ಸಮುದ್ರವು ಚಂದ್ರನತ್ತ ಉಕ್ಕುವುದಷ್ಟೆ. ಹಾಗೆ ನಿನ್ನ ಮುಖಚಂದ್ರನು ಕಣ್ಣ ಮುಂದೆ ಕಾಣುತ್ತಲೇ ನನ್ನ ಚಿತ್ತವು ನಿನ್ನತ್ತ ಉಕ್ಕಲಿ. ದ್ವಿಗುಣಿತವಾಗಿ, ಎಂದರೆ ಎರಡರಷ್ಟಾಗಿ, ಉಕ್ಕಲಿ – ಎಂದು ಕವಿ ಕೋರಿದ್ದಾನೆ.
ವಿಭೋ! - ಎಂದು ಸಂಬೋಧಿಸಿರುವುದೇ ಅದಕ್ಕಾಗಿ. ಸರ್ವ-ಸಾಮರ್ಥ್ಯವುಳ್ಳವನು ವಿಭು. ಕದ್ದು ಬರುವ ಕೊನೆಗಾಲ ಬಳಿ ಸಾರುವ ಮೊದಲೇ ನಿನ್ನ ಮುಖಚಂದ್ರನ ದರ್ಶನವನ್ನು ದಯಪಾಲಿಬಿಡು - ಎಂಬ ಅರಿಕೆ ಆತನದು.
ಶ್ಲೋಕ ಹೀಗಿದೆ:
ಯಾವನ್ನ ಮೇ ನಿಖಿಲ-ಮರ್ಮ-ದೃಢಾಭಿಘಾತಂ
ನಿಃಸಂಧಿ-ಬಂಧನಂ ಉಪೈತಿ ನ ಕೋಽಪಿ ತಾಪಃ |
ತಾವದ್ ವಿಭೋ ಭವತು ತಾವಕ-ವಕ್ತ್ರ-ಚಂದ್ರ-
-ಚಂದ್ರಾತಪ-ದ್ವಿಗುಣಿತಾ ಮಮ ಚಿತ್ತ-ಧಾರಾ ||
ಯಾವತ್-ತಾವತ್ ಎಂಬ ಪದಗಳಿಂದ ಪ್ರಥಮಪಾದ-ತೃತೀಯಪಾದಗಳು ಆರಂಭಗೊಂಡಿವೆ. ಎಷ್ಟರಲ್ಲಿ-ಅಷ್ಟರಲ್ಲಿ - ಎಂಬುದು ಅವುಗಳ ಅರ್ಥ.
ಯಾವತ್-ತಾವತ್-ಗಳನ್ನುಳ್ಳ ಮುಂದಿನ ಶ್ಲೋಕದಲ್ಲಿ ಸಹ ಇದೇ ಸಂನಿವೇಶವನ್ನು ಲೀಲಾಶುಕನು ಪರಿಭಾವಿಸುತ್ತಾನೆ. ಈ ಶ್ಲೋಕ ಹೀಗಿದೆ:
ಯಾವನ್ನ ಮೇ ನರ-ದಶಾ ದಶಮೀ ದೃಶೋಽಪಿ
ರಂಧ್ರಾದ್ ಉಪೈತಿ ತಿಮಿರೀಕೃತ-ಸರ್ವ-ಭಾವಾ |
ಲಾವಣ್ಯ-ಕೇಲಿ-ಸದನಂ ತವ ತಾವದ್ ಏವ
ಲಕ್ಷ್ಯಾಸಮ್ ಉತ್-ಕ್ವಣಿತ-ವೇಣು ಮುಖೇಂದು-ಬಿಂಬಂ ||
ಸಾವಿಗೆ "ಹತ್ತನೆಯ ಅವಸ್ಥೆ" ಎನ್ನುವರು. ಏಕೆ? ಕಾಮವು ಉತ್ಕಟವಾಗುತ್ತಿದ್ದಂತೆ ಹತ್ತು ಅವಸ್ಥೆಗಳು ಸಾಧ್ಯವಂತೆ. ಮೊದಲನೆಯದು ಬಯಕೆ. ಅದು ಹೆಚ್ಚಾದಂತೆ ಎರಡನೆಯದು ಪ್ರಿಯನನ್ನೇ ಕುರಿತಾದ ಚಿಂತನ. ಮೂರನೆಯದು ಕಾಡುವ ಸ್ಮೃತಿ, ನೆನಪು. ನಾಲ್ಕನೆಯದು ಆತನಲ್ಲಿರುವ ಗುಣಗಳ ಕೊಂಡಾಟ. ಐದನೆಯದು ಉದ್ವೇಗ. ಆರನೆಯದು ಪ್ರಲಾಪ. ಏಳನೆಯದು ಉನ್ಮಾದ. ಎಂಟನೆಯದು ಕಾಮ-ವ್ಯಾಧಿ. ಒಂಭತ್ತನೆಯದು ಜಡತೆ. ಹತ್ತನೆಯದೇ ಮರಣ.
ತೀವ್ರತಮವಾದ ಪ್ರೀತಿಯು ಪೂರೈಸದೆ ಸಾವಿಗೆ ತುತ್ತಾದವರುಂಟಲ್ಲವೇ? ಎಂದೇ ಅದೇ ಕೊನೆಯದಾದ ದಶಮೀ ನರ-ದಶೆ.
ಹೀಗೆ "ಹತ್ತನೆಯ ಸ್ಥಿತಿ"ಯೆಂದೇ ಕರೆಸಿಕೊಳ್ಳಲಾಗುವ ಮರಣವು ಯಾರಿಗೆ ತಪ್ಪಿದ್ದು? ಹಾಗಿದ್ದರೂ ನಾನು ಸಾಯಲು ಸಿದ್ಧನಾಗಿದ್ದೇನೆ ಎನ್ನುವವರುಂಟೆ? ಅದು ಬಂದಾಗ ನಾವು ವಿಹ್ವಲರಾಗುತ್ತೇವೆ. ಕಣ್ಣಿಗೆ ಕತ್ತಲು ಕವಿಯುತ್ತದೆ. ಬಾಹ್ಯಾಂಧಕಾರವಲ್ಲ, ಕಣ್ಣೊಳಗಣ ಕತ್ತಲೆಯದು. ಈ ಅಂತಸ್ತಿಮಿರವು ಆವರಿಸಿದಾಗ ಸಮಸ್ತ-ವಸ್ತುಗಳೂ ವಿಲೀನವಾಗುತ್ತವೆ. ಎಂದರೆ ಬರೀ ರೂಪವು ಮಾತ್ರವಲ್ಲ, ಶಬ್ದ-ಸ್ಪರ್ಶ-ರಸ-ಗಂಧಗಳೂ ಅಗ್ರಾಹ್ಯವಾಗಿಬಿಡುತ್ತವೆ. ಅರ್ಥಾತ್, ಯಾವ ಇಂದ್ರಿಯವೂ ಕೆಲಸಮಾಡದು.
ಎಂದೇ ಅಂತಹ ಸ್ಥಿತಿಯು ಬಂದು ಗ್ರಸಿಸುವ ಮೊದಲೇ, ಎಂದರೆ ನುಂಗಿಹಾಕುವ ಮೊದಲೇ, ನಾನು ನೋಡಿಬಿಡಬೇಕು ದೇವಾ ಎನ್ನುತ್ತಾನೆ, ಲೀಲಾಶುಕ. ಏನನ್ನು ಕಾಣಬೇಕು? ನಿನ್ನ ಮುಖಚಂದ್ರ-ಬಿಂಬವನ್ನು.
ಆ ಮುಖಚಂದ್ರ-ಬಿಂಬದ ವಿಶೇಷವೇನು? - ಎಂಬುದನ್ನು ಎರಡು ಪದಗಳಿಂದ ಸೂಚಿಸುತ್ತಾನೆ. ಮೊದಲನೆಯದಾಗಿ ಅದು ಲಾವಣ್ಯ-ಕೇಲಿ-ಸದನ. ಮಾಧುರ್ಯ-ಪರಂಪರೆಯೇ ಲಾವಣ್ಯ. ಕೇಲಿ ಎಂದರೆ ಆಟ. ಲಾವಣ್ಯದ ಆಟಕ್ಕೆ ಅದು ಸದನ - ಎಂದರೆ ನೆಲೆಮನೆ. ಎಷ್ಟಾದರೂ ಕೃಷ್ಣನ ಲಾವಣ್ಯವೇ ಲಾವಣ್ಯ. ಅದರ ಮುಂದೆ ಮತ್ತಾವ ಲಾವಣ್ಯ? ಆತನ ಆಟವೇ ಆಟ. ಆತನ ಆಟಗಳೆದುರು ಮತ್ತಾವುದು ನಿಲ್ಲುವುದು? ಹೀಗೆ ಕೃಷ್ಣನ ಬಗೆಬಗೆಯ ಲಾವಣ್ಯಗಳಿಗೂ ಬಗೆಬಗೆಯ ಕ್ರೀಡೆಗಳಿಗೂ ಆಸ್ಪದವಾದುದು ಆತನ ಸೊಗಸಿನ ಮೊಗ.
ಎರಡನೆಯ ವಿಶೇಷಣವೆಂದರೆ ಅದು ವೇಣುವನ್ನು ಧರಿಸಿರುವಿಕೆ. ಎಂತಹ ವೇಣುವದು? ಉತ್-ಕ್ವಣಿತವಾದ ವೇಣು. ಎಂದರೆ ಎತ್ತರದ ಧನಿಯುಳ್ಳದ್ದು, ಅರ್ಥಾತ್ ತಾರದ ದನಿ ಅದರದು. ತಾರಕವಾದ ನಾದವನ್ನುಳ್ಳದ್ದದು. ಯೋಗಿಗಳಿಗೆ ಒಳಗಿವಿಯೊಳಗೆ ಕೇಳಿಬರುವ ಅಂತರ್ನಾದಕ್ಕೆ ಸರಿಸಮವಾದುದು.
ಹೀಗೆ ಅಲ್ಲಿ ಕಣ್ಣುಗಳಿಗೆ ಸವಿಯುಣಿಸುವ ರೂಪ-ಮಾಧುರ್ಯವಿದೆ; ಕಿವಿಗಳಿಗೆ ತಂಪೆರೆಯುವ ನಾದ-ಮಾಧುರ್ಯವಿದೆ. ಮಧುರಾಕೃತಿಯ ದರ್ಶನ, ಹಾಗೂ ಯೋಗದ ಉನ್ನತಾನುಭವ – ಇವುಗಳು ಕೂಡಿರುವೆಡೆಯಿದು. ಮರಣವಪ್ಪಳಿಸುವ ಮುನ್ನ, ಸಾವನ್ನಪ್ಪುವ ಮುನ್ನ, ನನ್ನ ಕಣ್ಗಳಿಗೂ ಕಿವಿಗಳಿಗೂ ಹಬ್ಬವೆನಿಸುವ ತಾರಕಯೋಗವನ್ನು ಅನುಗ್ರಹಿಸುವ ಭಾಗ್ಯವನ್ನು ಬೇಡುತ್ತಿದ್ದಾನೆ, ಭಕ್ತಕವಿ ಲೀಲಾಶುಕ.
ಸತ್ತಮೇಲಲ್ಲ, ಆಧ್ಯಾತ್ಮಿಕದ ಸವಿ: ಸಾಯುವ ಮುನ್ನವೇ.
ಸೂಚನೆ : 04/10/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ