ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೩೦. ಪ್ರಿಯ ಯಾವುದು?
ಉತ್ತರ - ಪ್ರಾಣಿಗಳಿಗೆ ಕಲ್ಯಾಣ.
ಈ ಮುಂದಿನ ಪ್ರಶ್ನೆ ಹೀಗಿದೆ - 'ಪ್ರಿಯ ಯಾವುದು?' ಎಂಬುದಾಗಿ. ಅದಕ್ಕೆ ಉತ್ತರ - 'ಪ್ರಾಣಿಗಳಿಗೆ ಕಲ್ಯಾಣವಾದದ್ದು' ಯಾವುದೋ ಅದನ್ನು ಪ್ರಿಯ ಎಂಬುದಾಗಿ ಕರೆಯಲಾಗುತ್ತದೆ. ಅಂದರೆ ಪ್ರಾಣಿಗಳಿಗೆ, ಅಥವಾ ಸೃಷ್ಟಿಯಲ್ಲಿ ಇರುವ ಪ್ರತಿಯೊಂದು ಜೀವಿಗೆ ಪ್ರಿಯವಾಗುವಂತೆ ಇರುವುದು; ಅವುಗಳಿಗೆ ಒಳ್ಳೆಯದಾಗುವಂತೆ ಅಥವಾ ಕಲ್ಯಾಣವಾಗುವಂತೆ ನಡೆದುಕೊಳ್ಳುವಿಕೆಯನ್ನೇ 'ಪ್ರಿಯ' ಎಂಬುದಾಗಿ ಇಲ್ಲಿ ಹೇಳಲಾಗಿದೆ. ಹೀಗೊಂದು ಮಾತಿದೆ - "ನ ಹಿ ಕಸ್ಯ ಪ್ರಿಯಃ ಕೋ ವಾ ವಿಪ್ರಿಯಃ ವಾ ಜಗತ್ತ್ರಯೇ । ಕಾಲೇ ಕಾರ್ಯವಶಾತ್ ಸರ್ವೇ ಭವಂತ್ಯೇವ ಅಪ್ರಿಯಾಃ ಪ್ರಿಯಾಃ ॥" ಯಾರಿಗೆ ಯಾರೂ ಪ್ರಿಯನು ಅಲ್ಲ ಅಪ್ರಿಯನೂ ಅಲ್ಲ. ಯಾವುದೋ ಕಾಲದಲ್ಲಿ, ಯಾವುದೋ ಕಾರ್ಯಕ್ಕೆ ಅನುಗುಣವಾಗಿ ಅವನು ಪ್ರಿಯ ಅಥವಾ ಅಪ್ರಿಯ ಎಂಬುದಾಗಿ ಪರಿಗಣಿತವಾಗುತ್ತಾನೆ ಎಂಬುದಾಗಿ. ಅಂದರೆ ವಸ್ತುವು ಅಥವಾ ಪ್ರಾಣಿಯು ನಮಗೆ ಪ್ರಿಯವಾಗಬೇಕಾದರೆ ಅದೊಂದು ಕಾಲದ ಸನ್ನಿವೇಶದಲ್ಲಿ ನಮಗೆ ಸಂಬಂಧಿಸಿದ್ದಾದಾಗ ಮಾತ್ರ ಆಗುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ ಆ ಪ್ರಾಣಿಗೆ ನಾವು ಒಳ್ಳೆಯದನ್ನು ಉಂಟುಮಾಡಿದರೆ ಅದನ್ನು 'ಪ್ರಿಯ' ಎಂಬುದಾಗಿ ಕರೆಯಬೇಕು. ಮಾನವನಾದ ನಾವುಗಳು ಅತ್ಯಂತ ವಿವೇಕಿಯಾಗಿ ಎಲ್ಲ ಪ್ರಾಣಿಗಳಿಗೆ ಕಲ್ಯಾಣವಾಗಬೇಕು ಎಂಬುದನ್ನು ಬಯಸಬೇಕು. ಅಂದರೆ ಎಲ್ಲ ಪ್ರಾಣಿಗಳು ಈ ಪ್ರಪಂಚದಲ್ಲಿ ಬದುಕಬೇಕು; ಆ ಬದುಕು ಅವುಗಳಿಗೆ ಸಾರ್ಥಕತೆಯನ್ನು ಕೊಡುವಂತಿರಬೇಕು; ಕೇವಲ ಆಹಾರ ನಿದ್ರಾ ಭಯಗಳಿಂದ ಕೂಡಿದ ಜೀವಿಕೆ ಅವುಗಳದ್ದು. ಆದರೂ ಕೂಡ ಅವುಗಳು ಇವೆಲ್ಲವನ್ನೂ ದಾಟಿ ಮುಂದೆ ಆ ಜೀವವು ಸನ್ಮಾರ್ಗದತ್ತ ನಡೆಯುವಂತಾಗಬೇಕು. ಕರ್ಮಸಿದ್ಧಂತದ ಅನುಗುಣವಾಗಿ ಪ್ರತಿಯೊಂದು ಜೀವವೂ ಅದರ ಕರ್ಮಕ್ಕೆ ಅನುಗುಣವಾಗಿ ಆ ಕರ್ಮಫಲವನ್ನು ಸವೆಸಲು ಆ ಜನ್ಮವನ್ನು ಪಡೆದಿರುತ್ತದೆ. ಅದಕ್ಕೆ ಪ್ರತಿಯೊಬ್ಬರೂ ಕೂಡ ಸಹಕರಿಸಬೇಕಾಗುತ್ತದೆ. ಹಾಗಾಗಿ ಇಂತಹ ಕಲ್ಯಾಣದ ಮನೋಭಾವನೆ ಇರುವಂತಹದ್ದನ್ನು 'ಪ್ರಿಯ' ಎಂಬುದಾಗಿ ಕರೆಯಲಾಗಿದೆ. ಜೀವಕಲ್ಯಾಣವುಂಟಾಗುವಂತೆ ಬದುಕನ್ನು ಸಾಗಿಸಲು ಜ್ಞಾನವನ್ನು ಸಂಪಾದಿಸಬೇಕು. ಅದರ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆಗಳಾದ ಇಚ್ಛೆ ಮತ್ತು ಕ್ರಿಯೆಗಳು ನಡೆಯುವಂತಾಗಬೇಕು.
ಈ ಹಿಂದಿನ ಲೇಖನದಲ್ಲಿ ಜ್ಞಾಪಿಸಿಕೊಂಡಂತೆ ಹೇಗೆ ಸತ್ಯವು ಕಾಯಿಕ, ವಾಚಿಕ ಮತ್ತು ಮಾನಸಿಕ ಎಂಬುದಾಗಿ ಮೂರು ವಿಧವಿದೆಯೋ, ಅಂತಯೇ ಈ ಪ್ರಿಯವೂ ಕೂಡ ಮೂರು ವಿಧವಾಗಿದೆ. ಜೀವಕ್ಕೆ ಕಲ್ಯಾಣವನ್ನು ಈ ಮೂರು ಬಗೆಯಲ್ಲೂ ಕೂಡ ಮಾಡಲು ಸಾಧ್ಯ. ಸಾಮಾನ್ಯವಾಗಿ ಮನಸ್ಸಿಗೆ ಯಾವುದು ಮುದವನ್ನು ಕೊಡುತ್ತದೆಯೋ ಅದು ಪ್ರಿಯ ಎಂಬುದಾಗಿ ಹೇಳಲಾಗುತ್ತದೆ. ಪ್ರಿಯವಾದದ್ದೆಲ್ಲವೂ ಹಿತವಾಗುವುದಿಲ್ಲ. ಹಿತವಾದದ್ದೆಲ್ಲವೂ ಪ್ರಿಯವಾಗಬೇಕೆಂದು ಇಲ್ಲ ಆದರೆ ಯಾವುದು ಹಿತವೂ ಮತ್ತು ಪ್ರಿಯವೂ ಆಗಿರುತ್ತದೆಯೋ, ಅದುವೇ ಜೀವಕ್ಕೂ ಹಿತ ಮತ್ತು ಪ್ರಿಯ ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳಿದ್ದನ್ನು ಜ್ಞಾಪಿಸಿಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಜೀವವೂ ಅದರ ಸಹಜತೆಯಲ್ಲಿ ಬದುಕಿದರೆ ಮಾತ್ರ ಆಗ ಎಲ್ಲ ಜೀವಿಗಳಿಗೆ ಶುಭ ಅಥವಾ ಕಲ್ಯಾಣ ಉಂಟಾಗುತ್ತದೆ. ಅದುವೇ ಪ್ರಿಯವಾದ ಬದುಕು. ಹಾಗೆ ಬದುಕ ಸಾಗಿಸಬೇಕು ಎಂಬ ಉಪದೇಶ ಈ ಪ್ರಶ್ನೋತ್ತರದಲ್ಲಿ ಕಾಣುತ್ತದೆ.