Tuesday, April 22, 2025

ವ್ಯಾಸ ವೀಕ್ಷಿತ 133 ಅಮ್ಮನಿಗೆ ಮರಿಗಳ ಹಿತೋಪದೇಶ! (Vyaasa Vikshita 133)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಪ್ರಾಣಾಪಾಯದಿಂದ ತಮ್ಮನ್ನು ಕಾಪಾಡಿಕೊಳ್ಳುವ ಸಲುವಾಗಿ ಜರಿತೆಯು ಹೇಳಿದ ಉಪಾಯಕ್ಕೆ ಪ್ರತಿಯಾಗಿ ಮರಿ ಶಾರ್ಙ್ಗಕ-ಪಕ್ಷಿಗಳು ಹೇಳಿದವು :


ಗಿಡುಗವು ಇಲಿಯನ್ನು ಹೊತ್ತುಕೊಂಡು ಹೋದುದನ್ನು ನಾವರಿಯೆವು. ಈ ಬಿಲದಲ್ಲಂತೂ ಬೇರೆ ಇಲಿಗಳೂ ಇದ್ದಾವು. ಅವುಗಳಿಂದ ನಮಗೆ ಭಯವು ಇರುವಂತಹುದೇ ಸರಿ. ಇನ್ನು ಅಗ್ನಿಯು ಇಲ್ಲಿಯವರೆಗೆ ಬರುವುದು ಸಹ ಸಂಶಯವೇ. ಏಕೆಂದರೆ ವಾಯುವಿನ ದೆಸೆಯಿಂದಾಗಿ ಅಗ್ನಿಯು ಮತ್ತೊಂದೆಡೆಗೆ ತಿರುಗುತ್ತಿರುವುದನ್ನು  ಕಂಡಿದ್ದೇವೆ. ಆದರೆ ಈ ಬಿಲದೊಳಗೇ ಇರುವುದೆನ್ನುವುದಾದರೆ, ಇಲ್ಲಿಯ ಬಿಲವಾಸಿಗಳಿಂದಾಗಿಯೇ ನಮಗೆ ಸಾವೆಂಬುದು ನಿಶ್ಚಯವೇ ಸರಿ.


ಹೀಗಿರಲು, "ಮೃತ್ಯುವು ನಿಃಸಂಶಯ" - ಎಂದಾಗುವುದಕ್ಕಿಂತ, "ಮೃತ್ಯುವು ಸಂಶಯಾಸ್ಪದ" - ಎಂದಾಗುವುದೇ ನಮಗೆ ವಾಸಿಯೆಂದು ತೋರುತ್ತದೆ.


ಆದುದರಿಂದ ನೀನು ಲೆಕ್ಕಕ್ಕೆ ಅನುಸಾರವಾಗಿ ಆಕಾಶದಲ್ಲಿ ಯಥಾನ್ಯಾಯವಾಗಿ ಸಂಚರಿಸು; [ಮುಂದೆ] ಸುಂದರವಾದ ಮಕ್ಕಳನ್ನು ನೀನು ಪಡೆಯುವೆಯೆಂಬುದೇ ಸರಿ - ಎಂದು.


ಆಗ ಜರಿತೆಯು ಹೇಳಿದಳು:


ಬಿಲದಿಂದ ಇಲಿಯನ್ನು ಒಯ್ಯುತ್ತಾ ವೇಗದಿಂದ ಹೋಗುತ್ತಿದ್ದ ಆ ಪಕ್ಷಿಶ್ರೇಷ್ಠನನ್ನು ನಾನು ಕಂಡೆ. ಮಹಾವೇಗದಿಂದ ಹಾರಿಹೋಗುತ್ತಿದ್ದ ಆ ಗಿಡುಗವನ್ನು ಶೀಘ್ರವಾಗಿ ಹಿಂಬಾಲಿಸಿದೆ. ಬಿಲದಿಂದ ಇಲಿಯನ್ನು ಹೊತ್ತೊಯ್ಯುತ್ತಿದ್ದ ಅದಕ್ಕೆ ಆಶೀರ್ವಾದವನ್ನೂ ಹೇಳಿದೆ:


"ಗಿಡುಗಗಳಿಗೊಡೆಯನೇ, ನನ್ನ ಶತ್ರುವಾದ ಇಲಿಯನ್ನು ತೆಗೆದುಕೊಂಡು ನೀನು ವೇಗವಾಗಿ ಹೋಗುತ್ತಿದ್ದೀಯೆ. ನೀನು ಸ್ವರ್ಗವನ್ನು ಸೇರುವೆಯೆಲ್ಲಾ, ಆಗ ನೀನು ಹಿರಣ್ಮಯನಾಗು, ಎಂದರೆ ಚಿನ್ನದ ಶರೀರವುಳ್ಳವನಾಗು. ಹಾಗೂ ನೀನು ನಿರಮಿತ್ರನಾಗು (ಎಂದರೆ ಶತ್ರುಗಳೇ ಇಲ್ಲದವನಾಗು)." ಎಂದು.


ಆ ಶ್ಯೇನರಾಜನು, ಎಂದರೆ ಗಿಡುಗಗಳ ರಾಜನಾದ ಆ ಪಕ್ಷಿಯು, ಆ ಇಲಿಯನ್ನು ತಿಂದುಹಾಕಿದ ಮೇಲೆ, ನಾನು ಆತನ ಅಪ್ಪಣೆ ಪಡೆದು ಮನೆಗೆ ಹಿಂದಿರುಗಿದೆನು.


ಆದ್ದರಿಂದ, ಮಕ್ಕಳಿರಾ, ಶೀಘ್ರವಾಗಿಯೇ ನೀವು ಬಿಲವನ್ನು ಪ್ರವೇಶಿಸಿ. ನಿಮಗಲ್ಲಿ ಭಯವಿರದು. ಮಹಾತ್ಮನಾದ ಆ ಪಕ್ಷಿರಾಜನು ನಾನು ನೋಡುತ್ತಿದ್ದಂತೆಯೇ ಆ ಇಲಿಯನ್ನು ಅಪಹರಿಸಿರುವನು" ಎಂದು.


ಅದಕ್ಕೆ ಆ ಶಾರ್ಙ್ಗಕಗಳು, "ಆ ಗಿಡುಗವು ಇಲಿಯು ಹೊತ್ತೊಯ್ದುದನ್ನು ನಾವಂತೂ ಅರಿಯೆವು. ಮತ್ತು ಇದನ್ನು ಅರಿಯದೆಯೇ ನಾವು ಬಿಲವನ್ನು ಹೊಗಲಾರೆವು" ಎಂದವು.


ಅದಕ್ಕೆ ಜರಿತೆಯು, "ಆ ಶ್ಯೇನವು ಆ ಮೂಷಿಕವನ್ನು ಹೊತ್ತು ಹೋದುದನ್ನು ನಾ ಬಲ್ಲೆ. ಆದ್ದರಿಂದ ನಿಮಗೆ ಯಾವ ಭಯವೂ ಇಲ್ಲ, ಮಕ್ಕಳೇ, ನನ್ನ ಮಾತಿನಂತೆ ನಡೆಯಿರಿ" ಎಂದಳು.


ಆಗ ಶಾರ್ಙ್ಗಕಗಳು ಹೇಳಿದವು: "ಮಿಥ್ಯೋಪಚಾರದಿಂದ, ಎಂದರೆ ಸುಳ್ಳನ್ನು ಹರಿಬಿಟ್ಟಾದರೂ, ನಮ್ಮನ್ನು ಭಯದ ದೆಸೆಯಿಂದ ಕಾಪಾಡಲು ನೀನೆಳಸುತ್ತಿಲ್ಲವಷ್ಟೆ? ಜ್ಞಾನವು ಸಮಾಕುಲವಾಗಿರಲು, ಎಂದರೆ ಕಾರ್ಯವೊಂದರ ಬಗ್ಗೆ ಇನ್ನೂ ಸ್ಪಷ್ಟತೆಯೆಂಬುದೇ ಮೂಡಿಲ್ಲದಿರಲು, ಕಾರ್ಯಪ್ರವೃತ್ತರಾಗಿಬಿಡುವುದು ಧೀಮಂತರ ಲಕ್ಷಣವಲ್ಲ.


ನಮ್ಮಿಂದ ನಿನಗಾವ ಉಪಕಾರವೂ ಆಗಿಲ್ಲ. ನಾವಾರೆಂಬುದಾಗಿ ನೀನರಿತಿಲ್ಲ. ಹೀಗೆ ಕಷ್ಟಪಟ್ಟಾದರೂ ನಮ್ಮನ್ನು ಕಾಪಾಡುತ್ತಿರುವೆಯೆಲ್ಲಾ, ನೀನು ನಮಗೇನಾಗಬೇಕು, ನಾವಾದರೂ ನಿನಗೇನಾಗಬೇಕು?


ನೀನಿನ್ನೂ ತರುಣಿಯೂ ಸುಂದರಿಯೂ ಆಗಿದ್ದೀಯೇ. ಪತಿಯ ಅನ್ವೇಷಣದಲ್ಲಿ ಸಮರ್ಥಳೂ ಆಗಿದ್ದೀಯೇ. ಪತಿಯನ್ನು ಅನುಸರಿಸು, ತಾಯೇ, ನೀನು ಮತ್ತೆ ಮುದ್ದಾದ ಮಕ್ಕಳನ್ನು ಪಡೆಯುವೆ."


ಸೂಚನೆ : 20
/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 12 (Prasnottara Ratnamalike 12)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೧೨. ಸಂಸಾರವಲ್ಲಿ (ಬಳ್ಳಿ) ಯಾವುದು ?

ಉತ್ತರ - ತೃಷ್ಣಾ.


ಈ ಮುಂದಿನ ಪ್ರಶ್ನೆ ಹೀಗಿದೆ - ಸಂಸಾರ ಎಂಬ ಬಳ್ಳಿ ಯಾವುದು ? ಎಂದು. ಅದಕ್ಕೆ ಉತ್ತರ ತೃಷ್ಣಾ ಅಥವಾ ಆಶೆ. ಆಶೆ ಎಂಬುದು ಸಂಸಾರವನ್ನು ಬೆಳೆಸುತ್ತದೆ ಎಂಬುದು ಈ ಪ್ರಶ್ನೋತ್ತರದ ಒಟ್ಟಾರೆ ಅಭಿಪ್ರಾಯವಾಗಿದೆ. ಸಂಸಾರವನ್ನು ಆಶೆಯು ಹೇಗೆ ಬೇಳೆಸುತ್ತದೆ? ಎಂಬುದನ್ನು ನಾವಿಲ್ಲಿ ನೋಡಬೇಕಾಗಿದೆ. ಪ್ರಶ್ನೆಯು ಬಹಳ ಜಟಿಲವಾಗಿದೆ. ಭಾಷೆಯ ದೃಷ್ಟಿಯಿಂದ ಪ್ರಶ್ನೋತ್ತರ ಬಹಳ ಸುಲಭವಾಗಿರುವಂತೆ ಕಂಡರೂ ಅರ್ಥೈಸುವಾಗ ಅದರ ಕಾಠಿನ್ಯ ಅಥವಾ ಅದನ್ನು ಅನುಭವಿಸುವಾಗ ತಿಳಿಯುತ್ತದೆ. ಇಂತಹ ಗಂಭೀರವಾದ ವಿಷಯವನ್ನು ಪ್ರಶ್ನೋತ್ತರರೂಪದಲ್ಲಿ ಚಿಂತಿಸೋಣ. 


ಸಂಸ್ಕೃತ ಭಾಷೆಯ ವಲ್ಲಿ ಎಂಬ ಪದವೇ ಕನ್ನಡದಲ್ಲಿ ಬಳ್ಳಿಯಾಗಿದೆ. ವಕಾರಕ್ಕೆ ಬಕಾರ ಬಂದಿದೆ. ಲಕಾರವು ಳಕಾರವಾಗಿದೆ ಅಷ್ಟೆ. ಬಳ್ಳಿಯು ಹಬ್ಬುವ ಸಭಾವ ಉಳ್ಳದ್ದು. ಎಲ್ಲಿಯವರೆಗೆ ಅದಕ್ಕೆ ಬೇಕಾದ ಪೋಷಕವಾದ ಅಂಶ ದೊರಕುತ್ತದೆಯೋ ಅಲ್ಲಿಯವರೆಗೆ ಅದು ಹಬ್ಬುತ್ತದೆ. ಅದು ವಲ್ಲಿಯಾದ್ದರಿಂದ ಸ್ವತಂತ್ರವಾಗಿ ಬೆಳೆಯದು ಎಂಬುದನ್ನೂ ನಾವಿಲ್ಲಿ ತಿಳಿಯಲೇ ಬೇಕು. ವಲ್ಲಿಯ ಮೂಲ ಭದ್ರವಾಗಿ ಬೇರೂರಿದ ಒಂದು ವೃಕ್ಷ. ಅದನ್ನು ಆಶ್ರಯಿಸಿ ವಲ್ಲಿಯು ತನ್ನ ವಿಸ್ತಾರವನ್ನು ಮಾಡಿಕೊಳ್ಳುತ್ತದೆ. ವಲ್ಲಿಯ ಬೆಳವಣಿಗೆಗೆ ವಸ್ತುತತಃ ಬೇರೆಯದಾದ ಪೋಷಕಾಂಶದ ಅಗತ್ಯವಿಲ್ಲ. ವೃಕ್ಷಕ್ಕೆ ಹಾಕಿದ ನೀರು ಗೊಬ್ಬರವೇ ವಲ್ಲಿಗೂ ಸಾಕಾಗುತ್ತದೆ. ಕೆಲವೊಮ್ಮೆ ವಲ್ಲಿಯು ತಾನು ಆಶ್ರಯಿಸಿದ ಮರವನ್ನು ಬೆಳೆಯಲು ಕೊಡುವುದಿಲ್ಲ. ಮರಕ್ಕೆ ಹಾಕಿದ ಗೊಬ್ಬರವನ್ನೆಲ್ಲಾ ತಾನೇ ಹೀರುತ್ತದೆ. 


ಇಲ್ಲಿ ಬಹಳ ಅದ್ಭುತವಾದ ರೂಪಕ ಅಲಂಕಾರವಿದೆ. ಎರಡು ವಸ್ತುಗಳಿಗೆ ಅಭೇದವನ್ನು ಹೇಳುವಾಗ ರೂಪಕಾಲಂಕಾರವನ್ನು ಬಳಸಲಾಗುತ್ತದೆ.  ಇಲ್ಲಿ ವೃಕ್ಷವೆಂದರೆ ಸಮಸ್ತ ಪ್ರಪಂಚಕ್ಕೂ ಆಧಾರಭೂತವಾದ ಪರಬ್ರಹ್ಮ. ಅದನ್ನು ಆಶ್ರಯಿಸಿಕೊಂಡಿರುವುದು ಈ ಸಂಸಾರವೆಂಬ ವಲ್ಲಿ. ಹೇಗೆ ನೀರು ಗೊಬ್ಬರಗಳು ವೃಕ್ಷವನ್ನು ಮತ್ತು ವಲ್ಲಿಯನ್ನೂ ಬೆಳೆಸುತ್ತದೆಯೋ ಅಂತೆಯೇ ಆಶೆಯು ಪರಬ್ರಹ್ಮವನ್ನು ಮತ್ತು ಸಂಸಾರವನ್ನು ಎರಡನ್ನೂ ಬೆಳೆಸುತ್ತದೆ. ಆಶಾ ಎಂಬುದಕ್ಕೆ ಕಾಮ ಎಂದು ಇನ್ನೊಂದು ಪದದಿಂದ ಹೇಳುವ ರೂಢಿಯಿದೆ. ವಲ್ಲಿಯು ವೃಕ್ಷವನ್ನು ಆಶ್ರಯಿಸಿಕೊಂಡು ಬೆಳೆದರೆ ಒಳ್ಳೆಯದು. ತಾನು ಮಾತ್ರ ಬೆಳೆದು ವೃಕ್ಷವನ್ನೇ ಸಾಯಿಸುವಂತಾಗಬಾರದಷ್ಟೆ. ಅಂತೆಯೇ ಕಾಮವು ಸಂಸಾರವನ್ನು ಬೆಳೆಸುವುದರ ಜೊತೆ ಜೊತೆ ಸಂಸಾರ ಮೂಲವಾದ ಪರಬ್ರಹ್ಮವನ್ನು ಮೆರೆಸುವಂತೆ ಇರಬೇಕು; ಮರೆಸುವಂತಲ್ಲ. ಬಳ್ಳಿಯು ಮಿತಿಮೀರಿ ಬೆಳೆದರೆ ವೃಕ್ಷವೇ ಕಾಣದಂತಾಗುವ ಸಂದರ್ಭವಿರುತ್ತದೆ. ಅಂತೆಯೇ ಕಾಮವು ಅಧಿಕವಾಗಿ ಸಂಸಾರ ಮಾತ್ರ ಬೆಳೆಯುತ್ತದೆ. ಈ ಸಂಸಾರಕ್ಕೆ ಯಾವುದು ಆರಂಭವೋ ಅದೇ ಅಂತ್ಯವೂ ಹೌದು. ಪರಬ್ರಹ್ಮವೇ ಈ ಸಂಸಾರಕ್ಕೆ ಆರಂಭ, ಅದೇ ಅಂತ್ಯವೂ ಆಗಿದೆ.  ಶ್ರೀರಂಗ ಮಹಾಗುರುಗಳು ಹೇಳಿದ ಕಾಮದ ವಿವರಣೆ ಈ ವಿಷಯಕ್ಕೆ ಹೆಚ್ಚು ಸೂಕ್ತವಾಗಿದೆ - "ಅರ್ಥ-ಕಾಮಗಳು ತುಂಟಹಸುವಿನಂತೆ: ಹಾಲು ಕರೆಯಲು ಹೋದರೆ, ಕೊಂಬಿನಿಂದ ತಿವಿಯುವುವು, ಕಾಲಿನಿಂದ ಒದೆಯುವುವು. ಅಂತಹ ಹಸುಗಳನ್ನು ಹಿಂದೊಂದು ಮುಂದೊಂದು ಕಂಬಗಳಿಗೆ ಕಟ್ಟಿಹಾಕಿ ಹಾಲು ಕರೆಯಬೇಕು: ಧರ್ಮ-ಮೋಕ್ಷಗಳೆಂಬ ಎರಡು ಕಂಬಗಳಿಗೆ ಕಟ್ಟಿಹಾಕಿದಾಗ ಅಮೃತದ ಧಾರೆಯನ್ನೇ ಅವು ಕರೆಯಬಲ್ಲವು!" ಎಂದು. ಅಂತೆಯೇ ಆಶೆಯು ಸಂಸಾರವನ್ನು ಬೆಳೆಸಿ ಸಂಸಾರಮೂಲವಾದ ಪರಂಜ್ಯೋತಿಯನ್ನು ದರ್ಶನಮಾಡಿಸುವಂತಿರಬೇಕೆಂಬುದೇ ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 20/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 21, 2025

ಕೃಷ್ಣಕರ್ಣಾಮೃತ ಕೃ 60 ಷ್ಣಾವತಾರದ ವೈಶಿಷ್ಟ್ಯ: ಸರ್ವಪುರುಷಾರ್ಥಸಿದ್ಧಿ (Krishakarnamrta 60)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಭಗವಂತನ ಅವತಾರಗಳು ಹಲವುಂಟು. ತಾನು ಶೈವನಾದರೂ ವಿಷ್ಣುವಿನ ಅವತಾರಗಳೇ ಲೀಲಾಶುಕನಿಗೆ ಅತ್ಯಂತವಾಗಿ ಇಷ್ಟವೆನಿಸುವಂತಹವು. ಅಷ್ಟೇ ಅಲ್ಲ. ವಿಷ್ಣುವಿನ ಅವತಾರಗಳೂ ಹಲವಿವೆಯಲ್ಲವೇ? ಅವೆಲ್ಲ ಇರುವುವಾದರೂ ಕೃಷ್ಣಾವತಾರವೇ ಆತನಿಗೆ ಪ್ರಿಯವಾದದ್ದು.

ವಿಷ್ಣುವಿನ ಮಿಕ್ಕ ಅವತಾರಗಳೆಂತಹವು? ಮತ್ತು ಕೃಷ್ಣಾವತಾರದ ವಿಶೇಷವೇನು? ಯಾವ ಅಂಶಗಳಲ್ಲಿ ಈ ಅವತಾರವು ಮಿಕ್ಕ ಅವತಾರಗಳಿಗಿಂತ ಆದರಣೀಯವೆಂಬುದಾಗಿ ಲೀಲಾಶುಕನಿಗೆ ತೋರಿದೆ?  - ಎಂಬೀ ವಿಷಯಗಳನ್ನು ಕವಿಯು ಈ ಶ್ಲೋಕದಲ್ಲಿ ತಿಳಿಸಿದ್ದಾನೆ.

ಸರಸಿಜ-ನಯನನೆಂದರೆ ಕಮಲದಂತಿರುವ ಕಣ್ಣುಗಳುಳ್ಳವನು. ಪುಂಡರೀಕನೇತ್ರನೆಂಬ ಪ್ರಸಿದ್ಧಿಯಿರುವುದು ವಿಷ್ಣುವಿಗೇ ಅಲ್ಲವೇ? ವಿಷ್ಣುವಿನ ಅವತಾರಗಳು ಹಲವು. ಅವೆಲ್ಲವೂ ಸರ್ವತೋಭದ್ರಗಳೇ. ಎಂದರೆ ಎಲ್ಲ ಪ್ರಕಾರಗಳಲ್ಲಿಯೂ ಮಂಗಳಕರಗಳೇ. ಕನ್ನಡದಲ್ಲಿ ಭದ್ರವೆಂಬ ಪದಕ್ಕೆ ಬೇರೆ ಅರ್ಥವೇ ವಿದಿತ.

ಹಾಗಿದ್ದ ಮೇಲೆ ಯಾವ ಅವತಾರವಾದರೇನು? ಎಲ್ಲವೂ ಅನುಗ್ರಹ-ಕಾರಕಗಳೇ ಆಯಿತಲ್ಲವೇ? - ಎಂಬ ಪ್ರಶ್ನೆಗೆ ಉತ್ತರವನ್ನು ಶ್ಲೋಕದ ಉತ್ತರಾರ್ಧದಲ್ಲಿ ಕೊಟ್ಟಿದ್ದಾನೆ, ಕವಿ.

ಉತ್ಕಟವಾದ ಉಪಾಸನೆಯನ್ನು ಮಾಡಿದವರಿಗೆ ಫಲಪ್ರದವಾಗತಕ್ಕವು, ಉಳಿದ ಅವತಾರಗಳು. ಆದರೆ ಗೋಪಾಲಕರಿಗೆ, ಎಂದರೆ ಗೊಲ್ಲರಿಗೆ ಸಹ ಮೋಕ್ಷವನ್ನು ಕೊಟ್ಟದ್ದು ಈ ಅವತಾರದಲ್ಲಿಯೇ. ಬರೀ ಗೊಲ್ಲರಿಗೆ ಮಾತ್ರವಲ್ಲ, ಎಂದರೆ ಗಂಡಸರಿಗೆ ಮಾತ್ರವಲ್ಲ, ಸ್ತ್ರೀಯರಿಗೂ, ಎಂದರೆ ಗೊಲ್ಲತಿಯರಿಗೂ, ಮೋಕ್ಷವಿತ್ತವನು ಕೃಷ್ಣನೇ. ಗೊಲ್ಲರಾಗಲಿ ಗೊಲ್ಲತಿಯರಾಗಲಿ, ಶಾಸ್ತ್ರವನ್ನೇನು ಬಲ್ಲವರೇ? ಏನೂ ಅರಿಯದ ಗೊಲ್ಲಗೊಲ್ಲತಿಯರಿಗೆ ಮಾತ್ರವೇ ಅಲ್ಲ, ಗೋವುಗಳಿಗೆ ಸಹ ಮುಕ್ತಿಯನ್ನಿತ್ತವನು ಶ್ರೀಕೃಷ್ಣ!

ಹೀಗೆ ಪಶುಗಳಿಗೆ ಸಹ ಮುಕ್ತಿಯಿತ್ತವನು ಮನುಷ್ಯರಿಗೆ ಕೊಡಲಾರನೇ?

ಹೀಗಾಗಿ, ಸಾಧಾರಣರಿಗೂ ಅತ್ಯಂತ ಸುಲಭನೆನಿಸಿದ ಶ್ರೀಕೃಷ್ಣನೇ ನನಗೆ ಅಚ್ಚುಮೆಚ್ಚು ಎನ್ನುತ್ತಾನೆ, ಲೀಲಾಶುಕ.

ಅವತಾರಾಃ ಸಂತ್ವನ್ಯೇ/

ಸರಸಿಜನಯನಸ್ಯ ಸರ್ವತೋಭದ್ರಾಃ |

ಕೃಷ್ಣಾದ್ ಅನ್ಯಃ ಕೋ ವಾ/

ಪ್ರಭವತಿ ಗೋ-ಗೋಪ-ಗೋಪಿಕಾ-ಮುಕ್ತ್ಯೈ? ||

ಈ ಮುಂದಿನ ಪುಟ್ಟ ಶ್ಲೋಕದಲ್ಲಿ ಕೃಷ್ಣನ ವೇಣುಗಾನವನ್ನು ಕವಿಯು ಚಿತ್ರಿಸಿದ್ದಾನೆ. ಶ್ರೀಕೃಷ್ಣನು ವೃಕ್ಷವೊಂದರ ಬುಡದಲ್ಲಿ ನಿಂತು ವೇಣುವಾದನ ಮಾಡುವ ಕೃಷ್ಣನ ಚಿತ್ರ ಸುಪ್ರಸಿದ್ಧ. ಅದನ್ನು ಎಲ್ಲರೂ ನೋಡಿರುವವರೇ.

ಆದರೆ ಇಲ್ಲಿ ಚಿತ್ರಿಸಿರುವುದು ಶ್ರೀಕೃಷ್ಣನ ವಾಸ-ಕ್ರೀಡೆಗಳನ್ನು, ಆತನ ಆಸನ-ಕ್ರಿಯೆಗಳನ್ನು. ವೃಂದಾವನದಲ್ಲಿ ವಾಸಮಾಡತಕ್ಕವನಲ್ಲವೇ ನಮ್ಮ ಕೃಷ್ಣ? ಎಂದೇ ಆತನನ್ನು ವೃಂದಾವನ-ನಿವೇಶಿತನೆಂದು ಕವಿಯು ಹೇಳಿರುವುದು.

ಇಡೀ ವೃಂದಾವನವೇ ಕೃಷ್ಣನ ಕ್ರೀಡಾಂಗಣ, ಹೌದು. ಆದರೆ ಪ್ರಕೃತ, ಕದಂಬ-ವೃಕ್ಷದ ಮೂಲದಲ್ಲಿ ಖೇಲಿಸುತ್ತಿದ್ದಾನೆ. ಮೂಲವೆಂದರೆ ಬೇರು ಎಂಬ ಅರ್ಥವು ಪ್ರಸಿದ್ಧವಾದರೂ, ವೃಕ್ಷಮೂಲವೆಂದರೆ ಈ ಸಂದರ್ಭದಲ್ಲಿ ಮರದ ಬುಡ.

ಈಗಷ್ಟೆ ಆಟವಾಡುತ್ತಿದ್ದರೂ ಮತ್ತೊಂದು ಕ್ಷಣದಲ್ಲಿ ಎಲ್ಲೋ ಒಂದು ಕಡೆ ನೆಮ್ಮದಿಯಾಗಿ ಕುಳಿತಿದ್ದಾನೆ. ಕೃಷ್ಣನು ಎಷ್ಟಾದರೂ ಯೋಗಿಯಲ್ಲವೇ? ಯೋಗಿಗಳು ಕುಳಿತುಕೊಳ್ಳುವ ಬಗೆಯೇ ಬೇರೆ, ಭಂಗಿಯೇ ಭಿನ್ನ. ಉನ್ನತಯೋಗಸ್ಥಿತಿಗಳಿಗೆ ಹೊಂದುವ/ಸಲ್ಲುವ ಪರಿಯಲ್ಲೇ ಅವರ ನಡೆಯೂ ನಡತೆಯೂ.

ಎಂದೇ ಆತನು ಕುಳಿತಿರುವುದು ಪದ್ಮಾಸನದಲ್ಲಿ. ಆ ಆಸನದಲ್ಲಿ ಕುಳಿತೇ ಕೊಳಲನ್ನೂದುತ್ತಿದ್ದಾನೆ. ಹಾಗೆ ವೇಣುಗಾನಮಾಡುತ್ತಿರುವ ಅಚ್ಯುತನನ್ನು ನಾನು ವಂದಿಸುತ್ತೇನೆ - ಎನ್ನುತ್ತಾನೆ, ಕವಿ. ವಂದಿಸುವುದೆಂದರೆ ನಮಸ್ಕರಿಸುವುದೆಂಬುದು ಪ್ರಸಿದ್ಧಾರ್ಥ. ಸ್ತುತಿಸುವುದೆಂಬರ್ಥವೂ ಅದಕ್ಕಿರುವುದು.

ಕದಂಬ-ಮೂಲೇ ಕ್ರೀಡಂತಂ/

ವೃಂದಾವನ-ನಿವೇಶಿತಂ |

ಪದ್ಮಾಸನ-ಸ್ಥಿತಂ ವಂದೇ

ವೇಣುಂ ಗಾಯಂತಮ್ ಅಚ್ಯುತಮ್ ||

ದೇವರಲ್ಲಿ ಭಕ್ತಿಯಿರಬೇಕೆಂಬ ಮಾತನ್ನು ಯಾರು ಕೇಳಿರುವುದಿಲ್ಲ? ಅಷ್ಟೇ ಅಲ್ಲ, ಭಗವಂತನಲ್ಲಿ ತಮಗಿರುವುದು ನಿಜವಾದ ಭಕ್ತಿಯೇ ಎಂದು ಎಷ್ಟು ಮಂದಿ ಭಾವಿಸಿರುವುದಿಲ್ಲ?

ಹಾಗೆಂದು ಆ ಬಗ್ಗೆ ಆಗೊಮ್ಮೆ ಈಗೊಮ್ಮೆ ಸಂಶಯಗಳೂ ನಮ್ಮೊಳಗೇ ಬರದೇ ಏನಿಲ್ಲ. ಹಾಗಿದ್ದರೆ ಭಗವದ್ಭಕ್ತಿಯೆಂಬುದು ತನ್ನಲ್ಲಿ ಊರಿದೆ - ಎಂಬುದಕ್ಕೆ ನಿಶ್ಚಯವು ದೊರಕುವುದೆಂತು? ಯಾವುದಾದರೂ ಗಿಡವು ಚೆನ್ನಾಗಿ ಬೆಳೆದಿದೆಯೆಂದು ನಾವು ಹೇಗೆ ತೀರ್ಮಾನಿಸುವೆವು? ಅದು ಗೊತ್ತಾಗುವುದು ಅದು ಫಲ ಬಿಟ್ಟಾಗಲೇ, ಅಲ್ಲವೇ? ಹಾಗೆಯೇ ಇಲ್ಲೂ.

"ಭಗವಂತನೇ, ನಿನ್ನಲ್ಲಿ ಭಕ್ತಿಯು ದೃಢವಾದರೆ" - ಎಂದು ಶ್ಲೋಕವನ್ನು ಆರಂಭಿಸುತ್ತಾನೆ, ಲೀಲಾಶುಕ. ಏಕೆ? ಭಕ್ತಿಯು ಕೆಲವೊಮ್ಮೆ ಉಕ್ಕಿ ಹರಿಯುವುದು. ಅದು ಎಂದೋ ಒಮ್ಮೊಮ್ಮೆ ಎಂಬಂತಾದರೆ ಸಾಲದು. ಅದು ದೃಢವಾಗಬೇಕು. ಭಕ್ತಿಯಲ್ಲಿ ಸ್ಥೈರ್ಯವಿರಬೇಕು. ಸ್ಥೈರ್ಯವೆಂದರೆ ಸ್ಥಿರತೆ. ಅದು ಕೂಡ ತೃಪ್ತಿ ತರದು. ಎಂದೇ ಅದು ಸ್ಥಿರತರವಾಗಿರಬೇಕು. ಅತಿಶಯವಾಗಿ ಸ್ಥಿರವಾಗಿದ್ದರೆ ಅದನ್ನು ಸ್ಥಿರತರ ಎನ್ನುತ್ತಾರೆ.

ಅದು ಹಾಗಾಗುವುದು ದೈವದಿಂದ. ದೈವವೆಂದರೆ ಭಾಗ್ಯ. ಹೀಗಾಗಿ ದೈವದಿಂದ ಎಂದರೆ ಸುದೈವದಿಂದ, ಒಳ್ಳೆಯ ಅದೃಷ್ಟದಿಂದ - ಎಂದೇ. ಉತ್ಕೃಷ್ಟವಾದ ಮನುಷ್ಯಪ್ರಯತ್ನದಿಂದ ದೈವವು ಒಲಿಯುವುದು. ಕೆಲವೊಮ್ಮೆ ಅದರೊಂದಿಗೆ ಕಾಲವೂ ಕೂಡಿಬರಬೇಕು, ದೇವತಾನುಗ್ರಹವೂ ಬೇಕು.

ಭಗವಂತನ ಮೂರ್ತಿಗಳು ಹಲವಿದ್ದರೂ, ಕೃಷ್ಣನ ಬಗೆಯೇ ಸೆಳೆತ, ಲೀಲಾಶುಕನಿಗೆ. ಕೃಷ್ಣನ ಮೂರ್ತಿಗಳೂ ಹಲವಿರಬಹುದು. ಆದರೆ ಆತನ ದಿವ್ಯಕಿಶೋರಮೂರ್ತಿಯೇ ಲೀಲಾಶುಕನಿಗೆ ಅತಿಪ್ರಿಯವಾದುದು.

ಅದರಲ್ಲಿ ಭಕ್ತಿ ನೆಲೆಗೊಂಡರೆ ಏನು ಫಲವೆಂಬುದನ್ನು ಶ್ಲೋಕದ ಉತ್ತರಾರ್ಧವು ಹೇಳುತ್ತದೆ. ನಾಲ್ಕು ಪುರುಷಾರ್ಥಗಳೂ ದೊರಕುವುವು. ಅವಲ್ಲಿ ಅತ್ಯಂತ ಮುಖ್ಯವಾದುದೇ ಮೋಕ್ಷ ಅಥವಾ ಮುಕ್ತಿ. ಅದುವೇ ಅತ್ಯಂತ ಕಷ್ಟಸಾಧ್ಯವಾದುದೂ. ಮುಕ್ತಿಯೆಂಬುದನ್ನೇ ಒಬ್ಬ ಸ್ತ್ರೀಯೆಂದುಕೊಳ್ಳಿ. ಅವಳೇ ದಾಸಿಯಾಗಿಬಿಡುತ್ತಾಳೆ ಎನ್ನುತ್ತಾನೆ! ದಾಸಿಯ ವರ್ತನೆ ಹೇಗಿರುತ್ತದೆ? ಕೈಜೋಡಿಸಿ ನಿಂತು ಸೇವೆ ಸಲ್ಲಿಸುವುದು. ಹಾಗೆ ಸಾಕ್ಷಾತ್ ಮುಕ್ತಿಯೇ ಮುಕುಲಿತಾಂಜಲಿಯಾಗಿ ನಮ್ಮನ್ನು ಸ್ವಯಂ ಸೇವಿಸುವುದು. ಅಂಜಲಿಯೆಂದರೆ ಬೊಗಸೆ. ಅದನ್ನು ಮುಕುಲದಂತೆ ಎಂದರೆ ಮೊಗ್ಗಿನಂತೆ ಮಾಡಿಕೊಳ್ಳುವುದು.

ಮುಕ್ತಿಯೆಂಬುದೇ ಸೇವಕಿಯಂತೆ ನಿಂತಮೇಲೆ, ಧರ್ಮ-ಅರ್ಥ-ಕಾಮಗಳ ಬಗ್ಗೆ ಹೇಳಬೇಕಾದುದೇ ಇಲ್ಲ.

ಬಳಿಯೇ ಇದ್ದು ಸೇವೆಸಲ್ಲಿಸುವ ಭಾಗ್ಯವೂ ಇಲ್ಲದವರು ದ್ವಾರಪಾಲಕ ಮುಂತಾದ ಆಳುಕಾಳುಗಳು. ಕರೆದೊಡನೆ ಬರತಕ್ಕವರು - ಎಂದಷ್ಟೇ ಅಲ್ಲ. ಕರೆದು ಕೆಲಸ ಹೇಳಿದರೆ ಅದನ್ನೇ ಭಾಗ್ಯವೆಂದುಕೊಳ್ಳತಕ್ಕವರು. ಒಡೆಯನು ತಮ್ಮನ್ನು ಕರೆದಾನೇ? ಆತನಿಗೆ ಸೇವೆ ಸಲ್ಲಿಸುವ ಭಾಗ್ಯ ದೊರೆತೀತೇ? - ಎಂದು ಎದುರುನೋಡುತ್ತಿರುವವರು ಸಮಯಪ್ರತೀಕ್ಷರು. ಧರ್ಮಾದಿಗಳು ಹಾಗಿರುವರು.

ಹೀಗೆ ಶ್ರೀಕೃಷ್ಣನ ಕಿರ್ಶೋರಮೂರ್ತಿಯಲ್ಲಿ ಭಕ್ತಿಯು ಸುಸ್ಥಿರವಾದರೆ ಅದರ ಫಲವಾದ ನಾಲ್ಕೂ ಪುರುಷಾರ್ಥಗಳು ಹೇಗೆ ಕರಗತವಾಗುವುವೆಂಬುದನ್ನು ಅವುಗಳಲ್ಲಿಯ ತಾರತಮ್ಯನಿರೂಪಣೆಯೊಂದಿಗೆ ಲೀಲಾಶುಕನು ತಿಳಿಸಿದ್ದಾನೆ.

ಭಕ್ತಿಃ ತ್ವಯಿ ಸ್ಥಿರತರಾ ಭಗವನ್ ಯದಿ ಸ್ಯಾತ್/

ದೈವೇನ ನಃ ಫಲಿತ-ದಿವ್ಯ-ಕಿಶೋರ-ವೇಷೇ |

ಮುಕ್ತಿಃ ಸ್ವಯಂ ಮುಕುಲಿತಾಂಜಲಿ ಸೇವತೇಽಸ್ಮಾನ್/

ಧರ್ಮಾರ್ಥಕಾಮಗತಯಃ ಸಮಯಪ್ರತೀಕ್ಷಾಃ ||

ಸೂಚನೆ : 21/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 14, 2025

ಪ್ರಶ್ನೋತ್ತರ ರತ್ನಮಾಲಿಕೆ 11 (Prasnottara Ratnamalike 11)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೧೧. ಕಳ್ಳರು ಯಾರು ?

ಉತ್ತರ - ವಿಷಯಗಳು.


ಈ ಮುಂದಿನ ಪ್ರಶ್ನೆ ಕಳ್ಳರು ಯಾರು? ಎಂಬುದಾಗಿ. ಅದಕ್ಕೆ ಉತ್ತರ ವಿಷಯ. ಕಳ್ಳರು ವಸ್ತುವನ್ನು ಕದಿಯುವವರು. ಪ್ರತಿಯೊಂದು ವಸ್ತುವಿಗೂ ಒಂದು ಸ್ವಾಮೀ ಅಂದರೆ ಆ ವಸ್ತುವಿಗೆ ಆ ವ್ಯಕ್ತಿಯ ಅಧಿಕಾರ ಎಂಬುದು ಇರುತ್ತದೆ. ಆ ವಸ್ತುವಿನ ಸ್ವಾಮಿಯ ಅನುಮತಿ ಪಡೆದು ಆ ವಸ್ತುವನ್ನು ಸ್ವೀಕರಿಸುವುದು ಸರಿಯಾದ ಕ್ರಮ. ಆದರೆ ವಸ್ತುವಿನ ಸ್ವಾಮಿಯ ಅನುಮತಿಯನ್ನು ಪಡೆಯದೆ ಆ ವಸ್ತುವನ್ನು ಬಳಸಿದರೆ ಅದನ್ನು ಕಳ್ಳತನ ಅಥವಾ ಚೌರ್ಯ ಎಂಬುದಾಗಿ ಕರೆಯಲಾಗುತ್ತದೆ. ಆ ವಸ್ತುವು ಆತನ ಭೋಗದ ವಿಷಯವಾಗಿರುತ್ತದೆ. ಅದನ್ನು ಅನುಭವಿಸಲು ಆತನಿಗೆ ಮಾತ್ರ ಅವಕಾಶವಿರುತ್ತದೆ. ಅವನನ್ನು ಬಿಟ್ಟು ಉಳಿದವರು ಆ ವಸ್ತುವನ್ನು ಬಳಸಬೇಕಾದರೆ ಆ ಪದಾರ್ಥದ ಸ್ವಾಮಿಯ ಅನುಜ್ಞೆ ಅತ್ಯಂತ ಅವಶ್ಯ. ಪ್ರಸ್ತುತ ಪ್ರಶ್ನೆಯಲ್ಲಿ ವಿಷಯಗಳು ಆ ಚೋರರು ಎಂಬುದಾಗಿ ಹೇಳಲಾಗಿದೆ. ಅಂದರೆ ಈ ವಿಷಯಗಳು ಯಾವ ರೀತಿಯಾಗಿ ಸ್ವಾಮಿಯ ಅನುಮತಿ ಇಲ್ಲದೆ ಆ ವಸ್ತುವನ್ನು ಕದಿಯುವರು ಎಂಬುದು ಇಲ್ಲಿ ವಿವೇಚಿಸಬೇಕಾದ ವಿಷಯ.


ವಿಷಯ ಎಂದರೆ ವಿಷಿಣೋತಿ- ಬಧ್ನಾತಿ ಯಾವುದು ನಮ್ಮನ್ನು ಕಟ್ಟಿ ಹಾಕುತ್ತದೆಯೋ ಅದಕ್ಕೆ 'ವಿಷಯ' ಎಂಬುದಾಗಿ ಕರೆಯಲಾಗಿದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಈ ಐದು ವಿಷಯಗಳಾಗಿವೆ. ರೂಪವು ಕಣ್ಣನ್ನು, ಗ್ರಂಧವು ಮೂಗನ್ನು, ರಸವು ನಾಲಿಗೆಯನ್ನು, ಸ್ಪರ್ಶವು ಚರ್ಮವನ್ನು, ಶಬ್ದವು ಕಿವಿಯನ್ನು ಬಂಧಿಸುತ್ತದೆ. ಅಂದರೆ ಈ ಕಣ್ಣಿನ ಎದುರುಗಡೆ ಯಾವುದಾದರೂ ಒಂದು ವಸ್ತು ಇದೆ ಅಂತಾದರೆ ಕಣ್ಣು ಆ ವಸ್ತುವಿನಿಂದ ಆಚೆಗೆ ಹೋಗದೆ ಇರುವಂತೆ ತಡೆಯುತ್ತದೆ. ಅದಕ್ಕೆ ಕಾರಣ ಎದುರುಗಡೆ ಇರುವಂತಹ ಆ ವಸ್ತುವಿನ ರೂಪ. ಅದು ನಮ್ಮ ಕಣ್ಣನ್ನು ಬಂಧಿಸುತ್ತದೆ ಎಂಬುದಾಗಿ ಹೇಳಬಹುದು. ಆತ್ಮವು ಅಥವಾ ಜೀವವು ಈ ಇಂದ್ರಿಯಗಳನ್ನು ಬಳಸಿಕೊಂಡು ಶಬ್ದಸ್ಪರ್ಶಾದಿ ವಿಷಯಗಳನ್ನು ಅನುಭವಿಸಬೇಕು. ಈ ಇಂದ್ರಿಯಗಳು ಆತ್ಮದ ಅಪ್ಪಣೆಯನ್ನು ಪಡೆದು ವಿಷಯವನ್ನು ಅನುಭವಿಸಬೇಕಾಗುತ್ತದೆ. ಇವೆಲ್ಲವೂ  ಜೀವದ ಅಧಿಕಾರದಲ್ಲಿಯೇ ಇರಬೇಕಾದದ್ದು ಸಹಜವಾದದ್ದು. ಆದರೆ ಈ ವಿಷಯಗಳು ಜೀವದ ಅಂದರೆ ಸ್ವಾಮಿಯ ಅನುಮತಿ ಇಲ್ಲದೆ ಅವು ಬೇರೆ ಬೇರೆ ವಸ್ತುವನ್ನು - ವಿಷಯವನ್ನು ಇಷ್ಟಪಡುವಂತಾಗುತ್ತದೆ. ಹಾಗಾಗಿ ಅವು ನಮ್ಮ ಜೀವದ ಅರಿವನ್ನು ಅದರ ವಿಷಯವನ್ನು ಅನುಭವಿಸದೆ ಇರುವಂತೆ ಮಾಡುತ್ತದೆ. ಯಾವಾಗ? ಎಷ್ಟು ವಿಷಯವನ್ನು ಅನುಭವಿಸಬೇಕು? ಎಂಬ ನಿಯಂತ್ರಣ ಈ ಇಂದ್ರಿಯಗಳಿಗೆ ಇರುವುದಿಲ್ಲ. ಈ ಇಂದ್ರಿಯಗಳನ್ನು ಆತ್ಮದ ಅರಿವಿಲ್ಲದಂತೆ ರೂಪಾದಿ ವಿಷಯಗಳು ಇಂದ್ರಿಯಗಳ ದಿಕ್ಕನ್ನೇ ಬದಲಿಸುತ್ತದೆ. ವಿಷಯಗಳ ದಾಸರಂತೆ ವರ್ತಿಸುತ್ತವೆ. ಆಗ ಶರೀರವು ಅನಾರೋಗ್ಯಪೀಡಿವಾಗುತ್ತದೆ. ಅಷ್ಟೇ ಅಲ್ಲ ಮನಸ್ಸು ಕೂಡ ನೆಮ್ಮದಿಯನ್ನು ಕಳೆದುಕೊಳ್ಳುದೆ. ಇದೆಲ್ಲದಕ್ಕೂ ಕಾರಣ ರೂಪಾದಿ ವಿಷಯಗಳು ಆತ್ಮದ ಅನುವಭವಕ್ಕೆ ಕಾರಣವಾಗದೆ ಆತ್ಮವನ್ನು ಮರೆಸಿ ಇಂದ್ರಿಯಾರಾಮರಾಗುವಂತೆ ಮಾಡುತ್ತವೆ. ಆದ್ದರಿಂದ ಈ ವಿಷಯಗಳನ್ನು ಕಳ್ಳರು, ಚೋರರು ಎಂಬುದಾಗಿ ಅಧ್ಯಾತ್ಮದ ಭಾಷೆಯಲ್ಲಿ ಹೇಳುವ ಅಭ್ಯಾಸ ಬಂದಿದೆ. 


ಸೂಚನೆ : 13/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 132 (Vyaasa Vikshita 132)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯಾವ ಸಾವು ವಾಸಿ? ಇಲಿಯಿಂದಲೋ, ಅಗ್ನಿಯಿಂದಲೋ?


ಖಾಂಡವವನದಲ್ಲಿ ಹೀಗೆ ಅಗ್ನಿಯು ಆವರಿಸುತ್ತಾ ಬರುತ್ತಿರಲು, ತನ್ನ ಮಕ್ಕಳನ್ನು ಈ ಅಗ್ನಿಯ ದೆಸೆಯಿಂದ ಬಿಡಿಸುವ ಬಗೆ ಹೇಗೆ? - ಎಂಬುದನ್ನು ಅರಿಯಲಾರದೆ ನೊಂದಳು, ಜರಿತೆ. ಹೀಗೆಲ್ಲ ತನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದ ತಾಯಿ ಜರಿತೆಯನ್ನು ಕುರಿತು, ಆ ಶಾರ್ಙ್ಗಕಗಳು ಹೇಳಿದವು: "ಅಮ್ಮ, ನಮ್ಮ ಮೇಲಣ ಈ ಪುತ್ರಸ್ನೇಹವನ್ನು ತೊರೆ; ಈ ಅಗ್ನಿಯು ಎಲ್ಲಿಲ್ಲವೋ ಅಲ್ಲಿಗೆ ನೀ ಹಾರಿಕೋ! ಏಕೆನ್ನುವೆಯಾ? ಒಂದು ವೇಳೆ ನಾವುಗಳು ಸತ್ತರೆ, ನಿನಗೆ ಮುಂದೆ ಮಕ್ಕಳಾಗುವರು. ಆದರೆ ತಾಯಿ, ನೀನೇ ಇಲ್ಲವಾದರೆ, ನಮ್ಮ ಕುಲಸಂತತಿಯೆಂಬುದೇ ಇರದು.


ಇವೆರಡೂ ಅಂಶಗಳನ್ನು ಗಮನಿಸಿಕೊಂಡು ನಮ್ಮ ಕುಲಕ್ಕೆ ಯಾವುದು ಕ್ಷೇಮವಾದೀತೋ ಅದನ್ನು ಮಾಡಲು ಇದುವೇ ಶ್ರೇಷ್ಠವಾದ ಕಾಲವಾಗಿದೆ, ಅಮ್ಮಾ. ಸರ್ವರಿಗೂ ವಿನಾಶವನ್ನು ತರತಕ್ಕಂತಹುದು, ನಮ್ಮಗಳ ಮೇಲಣ ಪ್ರೀತಿ; ಅದೀಗ ಬೇಡ. ನಮ್ಮ ತಂದೆಗೆ ಉತ್ತಮವಾದ ಲೋಕಗಳು ಬೇಕಾಗಿವೆ. ಆದುದರಿಂದ ಆತನ ಈ ಕರ್ಮವು ವ್ಯರ್ಥವಾಗುವುದು ಬೇಡ." - ಎಂದು. ಆಗ ಜರಿತೆಯು ಹೇಳಿದಳು:


ಇದೋ ಈ ಮರದ ಬುಡದಲ್ಲಿ ನೆಲದಲ್ಲೊಂದು ಇಲಿಬಿಲವಿದೆ. ಅದರೊಳಗೆ ಬೇಗನೆ ನೀವು ನುಗ್ಗಿರಿ. ಬೆಂಕಿಯ ದೆಸೆಯಿಂದ ನಿಮಗಲ್ಲಿ ಭಯವಿರದು.

ಆ ಬಳಿಕ ನಾನು ಈ ಬಿಲದ ಬಾಯನ್ನು ಧೂಳಿನಿಂದ ಮುಚ್ಚಿಬಿಡುತ್ತೇನೆ, ಮಕ್ಕಳಿರಾ. ಹೀಗೆ ಮಾಡಿದಲ್ಲಿ ಅಗ್ನಿಗೆ ತಕ್ಕ ಪ್ರತೀಕಾರವನ್ನೇ ನಾವು ಮಾಡಿದಂತಾಗುತ್ತದೆ. ಆಮೇಲೆ, ಎಂದರೆ ಬೆಂಕಿಯಾರಿದ ನಂತರ, ನಾನು ಬರುವೆ, ಈ ಧೂಳಿನ ರಾಶಿಯನ್ನು ತೆಗೆದುಹಾಕುವುದಕ್ಕೋಸ್ಕರ. ಅಗ್ನಿಯ ದೆಸೆಯಿಂದ ನೀವುಗಳು ಬಿಡುಗಡೆಹೊಂದಲಿಕ್ಕಾಗಿ ನನ್ನೀ ಮಾತು. ಅದು ನಿಮಗೆ ರುಚಿಸುವುದೆಂದುಕೊಳ್ಳುತ್ತೇನೆ – ಎಂದು.


ಆಗ ಆ ಶಾರ್ಙ್ಗಕಗಳು ಹೇಳಿದವು: "ರೆಕ್ಕೆಯಿನ್ನೂ ಬಂದಿಲ್ಲದ ನಾವು ಇನ್ನೂ ಮಾಂಸದ ಮುದ್ದೆಗಳಂತಿದ್ದೇವೆ, ಅಲ್ಲವೇ? ಹಾಗಿರುವ ನಮ್ಮನ್ನು ಇಲಿಯು ತಿಂದೇ ಹಾಕೀತು - ಏಕೆಂದರೆ ಇಲಿಯು ಹಸೀಮಾಂಸವನ್ನು ತಿನ್ನುವ ಪ್ರಾಣಿ. ಈ ಭಯವನ್ನು ಎದುರುನೋಡುತ್ತಿರುವ ನಾವು ಇಲ್ಲಿ ಪ್ರವೇಶಿಸಲಾರೆವು. ಬದಲಾಗಿ, ಹೀಗೆ ಯೋಚಿಸೋಣ: ಅಗ್ನಿಯು ನಮ್ಮನ್ನು ಸುಡದಿರುವುದೆಂತು? ಇಲಿಯು ನಮ್ಮನ್ನು ನಾಶಪಡಿಸದಿರುವುದೆಂತು? ನಮ್ಮ ತಂದೆಯು ತಂದೆಯೆಂದಾಗಿರುವುದು - ಎಂದರೆ ನಮಗೆ ಜನ್ಮವಿತ್ತಿರುವುದು - ವ್ಯರ್ಥವಾಗದಿರುವುದೆಂತು? ನಮ್ಮ ತಾಯಿಯೂ ಉಳಿದಾಳು ಹೇಗೆ? – ಇದಕ್ಕೆ ಮಾರ್ಗವನ್ನು ಹುಡುಕಬೇಕಾಗಿದೆ.


ಬಿಲದೊಳಗೆಂದರೆ ಇಲಿಯ ದೆಸೆಯಿಂದಾಗಿ ನಾಶ ನಿಶ್ಚಿತ; ಆಕಾಶದಲ್ಲಿ ಸಂಚರಿಸುವ ಪಕ್ಷಿಯೆಂದರೆ ಅಗ್ನಿಯಿಂದಾಗಿ ನಾಶ ನಿಶ್ಚಿತ; ಎರಡನ್ನೂ ತೋಲನೆ ಮಾಡಿದರೆ, ಅಗ್ನಿಯಲ್ಲಿ ನಾವು ಸುಟ್ಟುಹೋಗುವುದೇ ವಾಸಿ, ಇಲಿಗೆ ಆಹಾರವಾಗಿಬಿಡುವುದಲ್ಲ. ಬಿಲದೊಳಗೆ ಇಲಿಯು ನಮ್ಮನ್ನು ತಿಂದುಹಾಕಿತೆಂದರೆ ಅದು ಗರ್ಹಿತವಾದ ಮರಣ. ಶಿಷ್ಟರ ಮಾತಿನಂತೆ ಶರೀರಕ್ಕೆ ಅಗ್ನಿಯಿಂದ ದಹನವಾಗುವುದೆಂಬುದೇ ಲೇಸು" - ಎಂದು. ಆಗ ಜರಿತೆ ಹೇಳಿದಳು: "ಈ ಬಿಲದಿಂದ ಹೊರಬಂದ ಇಲಿಯನ್ನು ಗಿಡುಗವೊಂದು ಹಾರಿಸಿಕೊಂಡು ಹೋಯಿತು. ಅದನ್ನು ನಾನೇ ಕಂಡೆ. ಅದು ಈ ಇಲಿಮರಿಯನ್ನು ತನ್ನ ಕಾಲುಗಳಲ್ಲಿ ಹಿಡಿದುಕೊಂಡು ಹೊರಟುಹೋಯಿತು. ಎಂದೇ ಈ ಬಿಲದಲ್ಲಿ ನಿಮಗೆ ಭಯವಿಲ್ಲವೆಂದು ನಾ ಹೇಳಿದುದು" - ಎಂದು.


ಸೂಚನೆ : 13/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Sunday, April 13, 2025

ಅಷ್ಟಾಕ್ಷರೀ 79 ಯಸ್ಮಿನ್ ದೇಶೇ ಮೃಗಃ ಕೃಷ್ಣಃ (Ashtakshari 79)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


 ಕೃಷ್ಣಮೃಗವು ವಿಹರಿಸುವೆಡೆಯೇ ಪವಿತ್ರವಾದದ್ದು

ಭಾರತೀಯಸಾಹಿತ್ಯದಲ್ಲಿ ಮೊದಲಿನಿಂದಲೂ  ಸಿಂಹಕ್ಕೇ ಮೃಗರಾಜನೆಂಬ ಪಟ್ಟ. ರಾಣಾಪ್ರತಾಪ ಸಿಂಗ್, ಭಗತ್ ಸಿಂಗ್ - ಮುಂತಾದವರ ಹೆಸರಿಗೂ ಶೋಭೆಕೊಡಬಲ್ಲ, ಠೀವಿಯ ನಡೆಯ ನಿರ್ಭಯಪ್ರಾಣಿಯೇ ಈ ಕಂಠೀರವ. ಆದರೂ ಭಾರತದ ರಾಷ್ಟ್ರಿಯಪ್ರಾಣಿಯೆಂದು ಘೋಷಿಸಿದುದು ವ್ಯಾಘ್ರವನ್ನೇ. ಎಲ್ಲಾ ರಾಜ್ಯಗಳಲ್ಲೂ ಅದರ ಅಸ್ತಿತ್ವ, ವಿಶಿಷ್ಟಬಲ-ಪರಾಕ್ರಮಗಳು, ಮುಂತಾದುವನ್ನಾಧರಿಸಿ ಅದಕ್ಕೀ ಪದವಿಯು ದಕ್ಕಿತು- ೧೯೭೩ರಲ್ಲಿ. ಇನ್ನು ಆನೆಯೋ? ಸಸ್ಯಾಹಾರಿಯಾದರೂ ಬೃಹದಾಕಾರದ ಪ್ರಾಣಿ. ಬಲಶಾಲಿಯಾದರೂ ಪಳಗಿಸಬಹುದಾದದ್ದು. ಅರಸರಿಗೆ ಅಚ್ಚುಮೆಚ್ಚಾಗಿದ್ದು,ಮೆರವಣಿಗೆ-ಉತ್ಸವಗಳಿಗೆ ಮೆರುಗು ತರುವುದೆಂಬ ಕಾರಣಕ್ಕೆ, ರಾಷ್ಟ್ರಿಯಸಾಂಸ್ಕೃತಿಕ-ಪ್ರಾಣಿಯೆಂಬ ಬಿರುದನ್ನು ಪಡೆಯಿತು - ೨೦೧೦ರಲ್ಲಿ . ಸರ್ವವಂದ್ಯವಾದ ಗೋವಿಗೆ ಸಹ ಇವಕ್ಕೆ ಸರಿಸಮವೆನಿಸುವ ಸ್ಥಾನಗಳು ಸಲ್ಲಲಿಲ್ಲ! 

ಭಾರತದೇಶದ ಪ್ರಾಜ್ಞರು ಪೃಥಿವಿಯಲ್ಲಿರುವ ಮಾನವರೆಲ್ಲರಿಗೂ ಮಾರ್ಗದರ್ಶಕರಾಗಬಲ್ಲರು - ಎಂದು ಮನುಸ್ಮೃತಿಯು ಭಾರತದ ವಿಶ್ವಗುರುತ್ವವನ್ನು ಸಾರಿದೆಯಷ್ಟೆ. ಆ ಸಂದರ್ಭದಲ್ಲಿಯೇ ಬ್ರಹ್ಮಾವರ್ತ, ಬ್ರಹ್ಮರ್ಷಿದೇಶ, ಆರ್ಯಾವರ್ತಗಳನ್ನು ಕುರಿತು ಅದು ಹೇಳುತ್ತದೆ. ಹಾಗೆ ಹೇಳುವಾಗ ಯಾವುದು ಶ್ರೇಷ್ಠದೇಶ, ಯಾವುದಲ್ಲವೆಂಬ ವಿಂಗಡಣೆಯನ್ನದು ಮಾಡುತ್ತದೆ. ಯಾಜ್ಞವಲ್ಕ್ಯಸ್ಮೃತಿಯು ಸಹ, ಪವಿತ್ರವೆನಿಸುವ ದೇಶವನ್ನು ಆರಂಭದಲ್ಲೇ ಗುರುತಿಸಿ, ಅಲ್ಲಿ ಆಚರಿಸಿ ಸಾಧಿಸಬೇಕಾದುದನ್ನು ಹೇಳಹೊರಡುತ್ತದೆ. 

ಈ ಎರಡು ಸ್ಮೃತಿಗಳೂ ಈ ಪುಣ್ಯಭೂಮಿಗೆ ಕೊಡುವ ಒಂದು ವಿಶಿಷ್ಟಲಕ್ಷಣವಿದೆ. ಯಾವ ದೇಶದಲ್ಲಿ "ಸ್ವಭಾವತಃ" ಕೃಷ್ಣಮೃಗದ ವಾಸವಿರುತ್ತದೋ (ಯಸ್ಮಿನ್ ದೇಶೇ ಮೃಗಃ ಕೃಷ್ಣಃ), ವಿಹಾರವಿರುತ್ತದೋ, ಅದುವೇ ಶ್ರೇಷ್ಠಭೂಮಿ - ಎಂದು. ಯಾಜ್ಞವಲ್ಕ್ಯಸ್ಮೃತಿಗೆ ಕರ್ಣಾಟಕದ ವಿಜ್ಞಾನೇಶ್ವರನು ಬರೆದಿರುವ "ಮಿತಾಕ್ಷರಾ" ವ್ಯಾಖ್ಯೆಯೂ ಕೃಷ್ಣಸಾರಮೃಗವು "ಸ್ವಚ್ಛಂದವಾಗಿ" ಎಲ್ಲಿ ಸಂಚರಿಸುತ್ತದೆಯೋ ಅದು ಎನ್ನುತ್ತದೆ. ಸ್ವಭಾವತಃ ವಾಸಮಾಡುವುದೆಂದರೇನೆಂದು ವಿವರಿಸುತ್ತಾ, ಮನುಸ್ಮೃತಿವ್ಯಾಖ್ಯಾನಕಾರರಾದ ಮೇಧಾತಿಥಿ-ಕುಲ್ಲೂಕಭಟ್ಟರು, "ದೇಶಾಂತರದಿಂದ ಏನೋ ಉಪಾಯಮಾಡಿಯೋ, ಮತ್ತಾವುದೋ ಉದ್ದೇಶಕ್ಕೆಂದೋ ತರಲಾದ ಮೃಗವಾಗಿರಬಾರದು ಅದು", ಎನ್ನುತ್ತಾರೆ.  ಹೀಗೆ ಅನ್ವಯಮುಖವಾಗಿ ಹೇಳಿದ್ದನ್ನು ವ್ಯತಿರೇಕಮುಖವಾಗಿಯೂ ದೃಢಪಡಿಸಿ ಹೇಳಿದೆ. ಅನ್ವಯಮುಖವಾಗಿ ಎಂದರೆ, "ಇದು ಹೀಗಿದ್ದರೆ ಅದು ಹಾಗಾಗುತ್ತದೆ" - ಎಂಬ ಲೆಕ್ಕ. ವ್ಯತಿರೇಕಮುಖವಾಗಿ ಎಂದರೆ, "ಇದು ಹೀಗಿಲ್ಲದಿದ್ದರೆ ಅದು ಹಾಗಾಗದು" - ಎಂಬ ಲೆಕ್ಕ. 

ಈ ಲೆಕ್ಕದ ಮೇರೆಗೆ, ಕೃಷ್ಣಸಾರಮೃಗದ ಸಹಜವಾದ ಇರುವಿಕೆ, ಸ್ವಚ್ಛಂದವಾದ ಸಂಚಾರಗಳು ಇದ್ದಲ್ಲಿ ಅದು ಶ್ರೇಷ್ಠವಾದ ದೇಶ, ಹಾಗಿಲ್ಲದಿದ್ದಲ್ಲಿ ಅದು ಮ್ಲೇಚ್ಛದೇಶ - ಎಂದಿದೆ. ಶ್ರೇಷ್ಠವಾದ ದೇಶವೆಂಬುದನ್ನು ಸೂಚಿಸಲು "ಅದು ಯಜ್ಞಿಯದೇಶ" - ಎಂದೂ ಈ ಸ್ಮೃತಿಗಳು ಹೇಳಿವೆ.  ಆದರೆ ಇಲ್ಲಿ ಬರಬಹುದಾದ ಪ್ರಶ್ನೆಯೆಂದರೆ, ಮೇಲೆ ಹೇಳಿದ ಬಗೆಬಗೆಯ ಹೆಗ್ಗಳಿಕೆಗಳುಳ್ಳ ಗೋ-ಗಜ-ಸಿಂಹ-ವ್ಯಾಘ್ರಗಳನ್ನು ಬಿಟ್ಟು ಕೃಷ್ಣಸಾರಮೃಗಕ್ಕೆ ಕೊಟ್ಟಿರುವ ಈ ವಿಶಿಷ್ಟಸ್ಥಾನಕ್ಕೆ ಕಾರಣವೇನೆಂಬುದು.   ಈ ಪ್ರಶ್ನೆಯನ್ನು ತಾವೇ ಎತ್ತಿ ಇದಕ್ಕೊಂದು ಸಮರ್ಪಕವಾದ ಉತ್ತರವನ್ನು ಶ್ರೀರಂಗಮಹಾಗುರುಗಳು ಬಹಳ ಹಿಂದೆಯೇ ಕೊಟ್ಟಿರುವರು. ಅವರ ಮಾತಿನ ಕೆಲಮುಖ್ಯಾಂಶಗಳು ಹೀಗಿವೆ. 

"ಕೃಷ್ಣಸಾರಮೃಗವು ಯಜ್ಞಿಯವಾದ ಮೃಗ. ಎಷ್ಟೆಂದರೆ, ಈ ಮೃಗದ ಪ್ರತಿಯೊಂದು ಭಾಗವೂ ಯಜ್ಞದಲ್ಲಿ ಉಪಯೋಗಕ್ಕೆ ಬರತಕ್ಕದ್ದಾಗಿದೆ. ಇದರ ಚರ್ಮವೂ ಶೃಂಗಗಳೂ ಯಜ್ಞೀಯ ಸಾಮಗ್ರಿಗಳು. ಅಲ್ಲದೆ, ಇದರ ಚಲನ-ವಲನಗಳು ಮಾನವನ ಪ್ರಜ್ಞಾಕೇಂದ್ರದ ಕೆಲವು ಗ್ರಂಥಿಗಳ ಮೇಲೆ ಕೆಲಸ ಮಾಡುತ್ತವೆ. ಋಷಿಗಳಿಗೆ ಬೇಕಾದ ನೀವಾರ-ದರ್ಭೆಗಳು ಇರುವ ಪ್ರದೇಶಗಳಲ್ಲಿ ಇವು ವಾಸಿಸುವುವು."  ಎಲ್ಲಿ ಕ್ರೂರಪ್ರಾಣಿಗಳಿರುವುವೋ ಅಲ್ಲಿ ಕೃಷ್ಣಸಾರಗಳಿರ(ಲಾರ)ವು. ಬದಲಾಗಿ, ಎಲ್ಲಿ ದರ್ಭಸಮೃದ್ಧಿಯಿರುವುದೋ ಅಲ್ಲಿಯೇ ಕೃಷ್ಣಸಾರಗಳಿರುವುದೂ. ಎಲ್ಲಿ ಹಿಂಸ್ರಪ್ರಾಣಿಗಳಿರವೋ,ಹಾಗೂ ದರ್ಭೆಯು ಪುಷ್ಕಳವಾಗಿ ದೊರೆಯುವುದೋ,  ಅಲ್ಲಿಯೇ ತಪೋವನಗಳು ಏಳುವುದು. ಎಲ್ಲಿ ತಪೋವನಗಳಿರುವುವೋ ಅಲ್ಲಿಯೇ ಯಜ್ಞಯಾಗಾದಿಗಳು ನೆರವೇರುವುವು. ಎಲ್ಲಿ ತಪೋ-ಯಜ್ಞಗಳು ಸಂಪನ್ನವಾಗುವುವೋ ಅಲ್ಲಿ ಧರ್ಮವು ಸುಪ್ರತಿಷ್ಠಿತವಾಗುವುದು. ಋಷಿಗಳು ನಡೆಸುತ್ತಿದ್ದ ಯಜ್ಞಗಳು ಧರ್ಮಸಾರವಾದ ಲೋಕಕಲ್ಯಾಣಾರ್ಥವಾಗಿಯೇ ಇರುತ್ತಿದ್ದವು. ಎಲ್ಲಿ ಧರ್ಮವು ನೆಲೆಗೊಂಡಿರುವುದೋ ಅಲ್ಲೇ ಪ್ರಜೆಗಳು ಪರಸ್ಪರ-ಹಿತಚಿಂತಕರಾಗಿದ್ದು ನೆಮ್ಮದಿಯನ್ನು ಕಾಣುವುದು. 

ಈ ಕಾರಣಕ್ಕಾಗಿಯೇ, "ತಪಸ್ವಿಗಳ ಯಜ್ಞ-ತಪಸ್ಸುಗಳು ನಿರ್ವಿಘ್ನವಾಗಿ ನಡೆಯುತ್ತಿವೆ ತಾನೆ?" – ಎಂಬ ಕಾಳಜಿಯನ್ನು ರಾಜರುಗಳು ವಹಿಸುತ್ತಿದ್ದುದು. ಹಾಗೂ, ಪ್ರಜೆಗಳ ಸುಖವನ್ನು ಲೆಕ್ಕಿಸದೆ ತಮ್ಮ ಅಧಿಕಾರ-ಐಶ್ವರ್ಯಗಳಲ್ಲಿ ಮೆರೆಯುತ್ತಾ ಲೋಕಕಂಟಕರಾಗಿದ್ದ ರಾಕ್ಷಸರಾದರೂ ಯಜ್ಞಕಾರ್ಯಗಳಿಗೇ ಧ್ವಂಸವನ್ನು ಉಂಟುಮಾಡುತ್ತಿದ್ದುದು. ಹೀಗಾಗಿ, ದೇಶದ ಸಲ್ಲಕ್ಷಣವನ್ನು ಮನು-ಯಾಜ್ಞವಲ್ಕ್ಯರು ಕೊಟ್ಟಿರುವುದು ಅತ್ಯಂತಸಾರ್ಥಕವಾಗಿದೆ. ಸ್ವಾರ್ಥ-ರಹಿತರಾಗಿ ಲೋಕಹಿತಕ್ಕಾಗಿಯೇ ಶ್ರಮಿಸುತ್ತಿದ್ದ ಋಷಿಗಳ ಮಾರ್ಗದರ್ಶನದಲ್ಲಿದ್ದ ನಾಡು ವಿಶ್ವಗುರುವಾದದ್ದರಲ್ಲಿ ಆಶ್ಚರ್ಯವಾದರೂ ಏನು?  ಮತ್ತದೇ ಸ್ಥಾನವು ಮರುಕಳಿಸಲಾ(ಬಾ)ರದೇನು? 

ಸೂಚನೆ: 12/4//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 59 ನೇತ್ರದಿಂದ ಆಲಿಂಗಿಸಿಕೊಳ್ಳಬೇಕು, ಈ ಬಾಲನನ್ನು! (Krishakarnamrta 59)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಬಾಲೇನ ಮುಗ್ಧ.

ಬಾಲಕೃಷ್ಣನನ್ನು ಅಪ್ಪಿಕೊಂಡು ಮುದ್ದಿಸಬೇಕೆಂಬ ಹಂಬಲವೆಮಗೆ - ಎನ್ನುತ್ತಾನೆ ಲೀಲಾಶುಕ, ಈ ಪದ್ಯದಲ್ಲಿ. ಎಳೆಯ ಕೃಷ್ಣನನ್ನು ಅಪ್ಪಿಕೊಳ್ಳಲು ಯಾರಿಗೆ  ತಾನೆ ಇಷ್ಟವಾಗುವುದಿಲ್ಲ? - ಎಂದು ನೀವು ಕೇಳುತ್ತೀರೇನೋ? ಆದರೆ ಹೇಗಪ್ಪಿಕೊಳ್ಳುವುದೆಂಬ ಬಗೆಯೇ ಬೇರೆ, ಲೀಲಾಶುಕನದು. ಅದರ ಏನು-ಎಂತುಗಳನ್ನೊಮ್ಮೆ ನೋಡೋಣವೇ?

ಎಂತಹ ಕೃಷ್ಣನನ್ನು? - ಎಂದು ಸೂಚಿಸಲು, "ಲೀಲಾಕಿಶೋರನನ್ನು" ಎನ್ನುತ್ತಾನೆ, ಕವಿ ಲೀಲಾಮಯನಾದ ಕಿಶೋರನಲ್ಲವೆ ಆತನು? ಲೀಲಾಪರನೂ ಹೌದು. ಲೀಲೈಕಪರನೇ ಆತನೆನ್ನಬಹುದು.

ಉಪಗೂಹನವೆಂದರೆ ಆಲಿಂಗನ. ಆಶ್ಲೇಷವೆಂದರೂ ಅದೇ. ಆತನನ್ನು ಆಶ್ಲೇಷಿಸಿಕೊಳ್ಳಬೇಕೆನ್ನುವುದರ ಬಗೆಯಲ್ಲೂ ವಿಶೇಷವುಂಟು. ಆತನನ್ನು ಕಣ್ಣಿನಿಂದಲೇ ಆಲಿಂಗಿಸಿಕೊಳ್ಳಬೇಕಂತೆ!

ಕಣ್ಣಿನಿಂದ ಎಂದೇಕೆ ಹೇಳಬೇಕು? ಎರಡೂ ಕಣ್ಣುಗಳಿಂದ ಎನ್ನಬೇಕಲ್ಲವೆ? "ಎರಡು ಕಣ್ಣುಗಳಿಂದ" - ಎಂದುಬಿಟ್ಟರೆ ಸರಿಹೋಗದಂತೆ. ಏಕೆ? ಎರಡೇ ಕಣ್ಣುಗಳಿಂದ ಕಂಡಲ್ಲಿ ತೃಪ್ತಿಯುಂಟಾಗದು. ಅದಕ್ಕೇ, 'ಕಣ್ಣಿನಿಂದ' ಎಂದು ಸಾಧಾರಣವಾಗಿ ಹೇಳಿಬಿಟ್ಟರೆ ಮತ್ತೂ ಹೆಚ್ಚನ್ನೇ ಹೇಳಿದಂತಾಯಿತು - ಎಂಬ ಭಾವನೆ, ಕವಿಯದು, ಎನ್ನುತ್ತಾರೆ, ವ್ಯಾಖ್ಯಾನಕಾರರು.

ಯಾರನ್ನಾದರೂ ಕಣ್ಣಿನಿಂದ ಆಲಿಂಗಿಸಿಕೊಳ್ಳಲಾಗುವುದೇ? ಆಲಿಂಗಿಸುವುದೆಂದರೆ ಬಾಚಿತಬ್ಬಿಕೊಳ್ಳುವುದು, ಕೈಗಳನ್ನು ಬಾಚಿ ತಾನೆ ತಬ್ಬಿಕೊಳ್ಳುವುದು. ಕಣ್ಗಳಿಗೆ ಕೈಗಳಿವೆಯೇ? ಕೈಗಳಿಂದಾಗಬೇಕಾದ ಕೆಲಸವನ್ನು ಕಣ್ಗಳಿಂದ ಮಾಡಲಾಗುವುದೇ? ಕರ್ಮೇಂದ್ರಿಯದಿಂದಾಗಬೇಕಾದ ಕಾರ್ಯವನ್ನು ಜ್ಞಾನೇಂದ್ರಿಯದಿಂದ ಮಾಡುವುದೇ?  

ಕರ್ಮೇಂದ್ರಿಯಗಳಲ್ಲಿ ಮೊದಲನೆಯ ಸ್ಥಾನ ಕೈಗೆ. ಕಾರ್ಯಕರಣಕ್ಕಾಗಿ, ಎಂದರೆ ಕೆಲಸಗಳನ್ನು ಮಾಡಲಿಕ್ಕಾಗಿ ಬಳಸುವ ಮೊದಲ ಕರಣವೇ, ಎಂದರೆ ಸಾಧನವೇ, ಕರ, ಹಸ್ತ. ಎಂದರೆ, ಏನೇ ಕೆಲಸಮಾಡಲೂ ಮೊದಲ ಸಾಧನವೇ ಕೈ. ಹಾಗೆಯೇ ಸರ್ವೇಂದ್ರಿಯಗಳಲ್ಲೂ, ಎಂದರೆ ಜ್ಞಾನೇಂದ್ರಿಯಗಳಲ್ಲೆಲ್ಲ ಮೊಟ್ಟಮೊದಲೆಂದರೆ ಕಣ್ಣೇ ಸರಿ.

ಯಾರನ್ನಾದರೂ ಆಲಿಂಗಿಸಿಕೊಳ್ಳಬೇಕೆಂದರೆ ಅವರದೆಷ್ಟು ಸಮೀಪದಲ್ಲಿರಬೇಕು! ಹಾಗಿರಲು, ಕಣ್ಣಿನಿಂದ ಆಲಿಂಗಿಸಿಕೊಳ್ಳುವುದೆಂದರೆ ಕೃಷ್ಣನು ಅದೆಲ್ಲೋ ದೂರದಲ್ಲಿರುವನೆಂದರ್ಥವಲ್ಲ. ಕಣ್ತುಂಬ ತುಂಬಿಕೊಳ್ಳಲು ಬೇಕಾಗುವಷ್ಟು ಹತ್ತಿರದಲ್ಲೇ ಕೃಷ್ಣನಿರಬೇಕು. ತೃಪ್ತಿಯಾಗುವಷ್ಟೂ ನೋಡುತ್ತಲೇ ಇರಬೇಕು - ಎಂಬ ಬಯಕೆ, ಕವಿಯದು.

ಯಾರನ್ನಾದರೂ ನೋಡುತ್ತಲೇ ಇರುವುದೆಂದರೆ ಬೇಜಾರಾಗುವುದಿಲ್ಲವೇ - ಎಂದು ಕೇಳಬಹುದು. ಹೆತ್ತವರಿಗೆ ಹೆಗ್ಗಣ ಮುದ್ದು - ಎನ್ನುವಂತೆ, ಹೆತ್ತಮ್ಮನಿಗಂತೂ ತನ್ನ ಮಗುವನ್ನು ನೋಡುತ್ತಿದ್ದರೆ ಬೇಸರವೇನೂ ಬರದು. ಯಾವುದೇ ಮಗುವಾದರೂ ಬಲುಮುದ್ದಾಗಿದ್ದರೆ ಆಕರ್ಷಣೆ ಕಡಿಮೆಯೇನಿರುವುದಿಲ್ಲ.

ಇನ್ನು ಕೃಷ್ಣನೋ? ಆಕರ್ಷಣೆಯ ಮೂರ್ತಿಯೇ ಆತ. ಎಳಸಿನಲ್ಲೂ ಸೊಗಸು, ಬೆಳೆದಾಗಲೂ ಬೆಡಗೇ, ಎಂದರೆ ಬೆಳಕೇ. ಕರ್ಷತೀತಿ ಕೃಷ್ಣಃ.

ಆತನು ಲೋಚನ-ರಸಾಯನ. ಏನು ಹಾಗೆಂದರೆ? ರಸಗಳಿಗೆ ಅಯನವಾದದ್ದು, ಎಂದರೆ ನೆಲೆಯಾದದ್ದು ರಸಾಯನ. ಎಲ್ಲಿ ರಸವಿರುವುದೋ ಅಲ್ಲಿ ತಾನೆ ಚಪ್ಪರಿಕೆಯಿರುವುದು? ಹೀಗಾಗಿ ಆಸ್ವಾದನೆಯನ್ನೀಯುವ ವಸ್ತುವಿನಿಂದ ಸಂತೋಷವೆಂಬುದು ಬರುತ್ತಲೇ ಇರುವಂತಹುದು.

ಅಲ್ಲದೆ, ಆಯುರ್ವೇದದಲ್ಲೂ ರಸಾಯನಗಳನ್ನು ಕುರಿತು ಹೇಳಲಾಗಿದೆ. ರಸಾಯನಗಳು  ಪುಷ್ಟಿಕರವಾದವು. ಹೀಗೆ ವಿಶಿಷ್ಟ-ಪುಷ್ಟಿಯನ್ನೂ ಕೊಡತಕ್ಕವು ರಸಾಯನಗಳು. ಆದರೆ ನನ್ನ ಕಣ್ಣುಗಳೆಂತಹವು? ಅವಕ್ಕೇನೋ ವ್ಯಾಧಿ ಬಡಿದಂತಿದೆ. ದೃಷ್ಟಿಮಾಂದ್ಯವೋ ಏನೋ? ಅವಕ್ಕೆಲ್ಲಾ ದಿವ್ಯೌಷಧವೆಂದರೆ ಈ ರಸಾಯನವೇ ಸರಿ. ನಾಲಿಗೆಗೆ ರುಚಿ ಕೆಟ್ಟಾಗ ರಸಾಯನವನ್ನು ಕೊಡುವರು. ರುಚಿಯುಂಟುಮಾಡುವುದೂ ರಸಾಯನವೇ. ಕೊನೆಗೆ,

ನಾಲಿಗೆಗೆ ಪರಮಸಂತೃಪ್ತಿಯನ್ನುಂಟುಮಾಡುವುದನ್ನೇ ರಸಾಯನವೆನ್ನುವುದು.

ಅಂತೂ ಹೀಗೆ ನಾನಾ-ಕಾರಣಗಳಿಂದಾಗಿ ಲೋಚನ-ರಸಾಯನ, ನಮ್ಮ ಬಾಲಕೃಷ್ಣ. ಅವನಿಗಾಗಿ ನನ್ನ ಕಣ್ಣುಗಳು ಲೋಲವಾಗಿವೆ. ಲೋಲವಾಗಿವೆಯೆಂದರೆ ತೃಷ್ಣೆಯಿಂದ ಕೂಡಿವೆ. "ಈಗ ಕಂಡೆನೇ, ಮರುಕ್ಷಣದಲ್ಲಿ ಕಂಡೆನೇ?" - ಎಂದುಕೊಳ್ಳುತ್ತಲೇ ಇರುವುದನ್ನೇ ಲೋಲವೆನ್ನುವುದು. ಅಂತಹ ಕಣ್ಣಿನಿಂದ ಆತನನ್ನು ಅಪ್ಪಿಕೊಳ್ಳಬೇಕು.

ಯಾರ ಬಗ್ಗೆಯಾದರೂ ಪ್ರೀತಿ ಹುಟ್ಟಿತೆಂದರೆ ಆ ಪ್ರೀತಿಯು ಏನೇನನ್ನೋ ಮಾಡಿಸುತ್ತದೆ. ಪ್ರೀತಿಪಾತ್ರರಾದವರ ಹಸ್ತಾಕ್ಷರವೂ ಅಚ್ಚುಮೆಚ್ಚಾಗುತ್ತದೆ.  ಅವರ ಫೋಟೋ, ಅವರ ಒಂದು ವಿಡಿಯೋ - ಏನು ಸಿಕ್ಕರೂ ಅದನ್ನು ಕಾಪಿಟ್ಟುಕೊಳ್ಳುವಂತಾಗುತ್ತದೆ. ಅಷ್ಟುದೂರದಲ್ಲಿ ಕಂಡರೂ ತೋಷವೇ. ಬಳಿ ಸುಳಿದಾಡಿದರಂತೂ ಮತ್ತೂ ಸಂತೋಷವೇ. ಇವಕ್ಕೂ ಮಿಗಿಲಾದುದು ಆತನ ಮುಖ ತೋರುವುದು. ಮತ್ತೂ ಹೆಚ್ಚೆನಿಸುವುದೆಂದರೆ ಆತನ ದೃಷ್ಟಿ ನಮ್ಮ ಮೇಲೆ ಬೀಳುವುದು. ಮತ್ತೂ ಮಿಗಿಲಾದುದೆಂದರೆ ನಮ್ಮ ಕಣ್ಣೂ ಆತನ ಆ ಕಣ್ಣೂ ಸಂಧಿಸುವುದು. ಚಕ್ಷುಃಪ್ರೀತಿಯೆಂದರೆ ಒಬ್ಬರನ್ನೊಬ್ಬರು ನೋಡುತ್ತಲೇ ಇರಬೇಕು - ಎನ್ನಿಸುವುದು.

ಹೀಗಿರುವಾಗ ಕೃಷ್ಣನ ಕಣ್ಣೋಟವು ಹೇಗಿರುವುದೆಂಬುದನ್ನೂ ಸ್ವಲ್ಪ ಹೇಳಬೇಕಲ್ಲವೇ? ಅದು ಬಾಲ-ವಿಲೋಕಿತ - ಎಂದರೆ ಕೋಮಲವಾದ ನೇತ್ರ, ಬಾಲ್ಯದ ಕಾರಣ, ಕ್ರೀಡಾಪರವಾದ ನಯನ. ಅದಲ್ಲದೆ, ಅದು ಮುಗ್ಧವೂ ಚಪಲವೂ ಆದ ಲೋಚನವದು. ಯಾವುದರಲ್ಲಿ ಹೆಜ್ಜೆಹೆಜ್ಜೆಗೂ ಮಾಧುರ್ಯವುಂಟೋ ಅದು ಮುಗ್ಧ. ಜೊತೆಗೆ ಆ ಅಕ್ಷಿಗಳಲ್ಲಿ ಚಪಲತೆ, ಎಂದರೆ ಚಂಚಲತೆ - ಅದು ಸಹ ಮನೆಮಾಡಿದೆ. ಎಳೆಮಕ್ಕಳ ನೇತ್ರ-ಚಾಂಚಲ್ಯವೂ ಆಕರ್ಷಕವೇ.

ಹಾಗಿರುವ ನೇತ್ರಗಳು ನನ್ನ ಮೇಲೆ ಪರಿಣಾಮವನ್ನುಂಟುಮಾಡಿವೆ. ನನ್ನ ಮನಸ್ಸಿನ ಮೇಲೂ ಪರಿಣಾಮವಾಗಿದೆ. ಆತನನ್ನು ಕಾಣಲೇಬೇಕೆಂಬ ಚಾಪಲವನ್ನು ಮೂಡಿಸಿದೆ, ಅದು. ಚಾಪಲವೆಂದರೆ ಆಸೆ. ತಡೆಯಲಾರದ ಒಂದು ಕುತುಕವೇ ಚಾಪಲ. ಯಾವುದಾದರೂ ಕೆಲಸವು ಸಾಧ್ಯವೋ ಇಲ್ಲವೋ, ಅರ್ಹವೋ ಅಲ್ಲವೋ ಎಂದು ಲೆಕ್ಕಿಸದೆಯೇ ನುಗ್ಗಿ ಅದಕ್ಕಾಗಿ ಯತ್ನಿಸಿಬಿಡಬೇಕೆನ್ನುವ ಪ್ರವೃತ್ತಿಯೇ ಚಾಪಲ. ಒಮ್ಮೆ ಸವಿದಿದ್ದರೂ ಮತ್ತೊಮ್ಮೆ ಸವಿಗಾಣಬೇಕೆಂಬ, ಸವಿಯಿನ್ನೂ ಕೊನೆಗೊಂಡಿರದ ಸ್ಥಿತಿಯೇ ಚಾಪಲ. ಒಮ್ಮೆ ಚಪ್ಪರಿಸಿದ್ದುದರ ನೆನಪು ಕಾಡಿ ಮತ್ತೆ ಮತ್ತೆ ಅದೇ ಬೇಕೆನಿಸಿದಾಗ ಆಗುವ ಅದಮ್ಯಪ್ರೇರಣೆಯೇ ಚಾಪಲ.

ಅಂತೂ, ಚಪಲವಾದ ಲೋಚನಗಳು ಚಾಪಲವನ್ನುಂಟುಮಾಡಿವೆಯೆಂದಾದರೆ ಅದರಲ್ಲಿ ಆಶ್ಚರ್ಯವು ತಾನೆ ಏನು? – ಎಂದೂ ಕೇಳಬಹುದಲ್ಲವೇ?  ಅಂತಹ ಉನ್ನತವೂ ಉತ್ಕೃಷ್ಟವೂ ಆದ ಉತ್ಕಂಠೆಯನ್ನುಂಟುಮಾಡುವ ಲೀಲಾಕಿಶೋರ, ಈ ಕೃಷ್ಣ.

ಅಂತೂ ಕಣ್-ಸೊಬಗಿನ ಆತನನ್ನು ಕಣ್ಣುಗಳಿಂದಲೇ ತಬ್ಬಿಕೊಳ್ಳುವ ಹಂಬಲ ನಮ್ಮದು. ಇದು ಗೋಪಿಕೆಯ ಮಾತೆಂದುಕೊಂಡರೆ, ಅದೇ ಮನಃಸ್ಥಿತಿಯಲ್ಲಿರುವ ಇತರ ಗೋಪಿಕೆಯರ ಚಿತ್ತವೃತ್ತಿಯನ್ನೂ ಸೇರಿಸಿಕೊಂಡು, ಈ ಸ್ಥಿತಿ ನಮ್ಮದಾಗಿದೆಯೆಂದು ಹೇಳಿಕೊಳ್ಳುತ್ತಿರುವುದು -ಎಂಬ ಕಾರಣಕ್ಕೆ "ಉತ್ಸುಕರಾಗಿದ್ದೇವೆ" ಎಂದು ಹೇಳಲಾಗಿದೆ.

ಎರಡನೆಯ ಪಾದದಲ್ಲಿ "ನನ್ನ ಮಾನಸದಲ್ಲಿ" ಎಂದು ಏಕವಚನವನ್ನು ಬಳಸಿ ಹೇಳಿದರೆ, ಕೊನೆಯ ಪಾದದಲ್ಲಿ "ನಾವು ಉತ್ಸುಕರಾಗಿದ್ದೇವೆ" ಎಂದು ಬಹುವಚನದಲ್ಲಿ ಹೇಳಿದೆ. ಒಮ್ಮೆ ಏಕವಚನ, ಮತ್ತೊಮ್ಮೆ ಬಹುವಚನ ಸರಿಯೇ? ಅದು ದೋಷವಾಗುವುದಿಲ್ಲವೇ? – ಎಂದರೆ, ಭಾವ-ಪರವಶತೆಯಿರುವಾಗ ಹೀಗೆ ವ್ಯತ್ಯಾಸಗಳಾಗುವುದು ದೂಷಣವಲ್ಲ, ಭೂಷಣವೇ ಸರಿ! ದೂಷಣವೆಂದರೆ ದೋಷ; ಭೂಷಣವೆಂದರೆ ಅಲಂಕಾರ.

"ಲ"ಕಾರ ಒಂಭತ್ತು ಬಾರಿ ಬಳಕೆಯಾಗಿರುವ ಹೃದ್ಯಾನುಪ್ರಾಸದಿಂದ ಕೂಡಿರುವ ಶ್ಲೋಕವಿದು.

ಶ್ಲೋಕ ಹೀಗಿದೆ:

ಬಾಲೇನ ಮುಗ್ಧ-ಚಪಲೇನ ವಿಲೋಕಿತೇನ

ಮನ್ಮಾನಸೇ ಕಿಮಪಿ ಚಾಪಲಮ್ ಉದ್ವಹಂತಮ್ |

ಲೋಲೇನ ಲೋಚನ-ರಸಾಯನಮ್ ಈಕ್ಷಣೇನ

ಲೀಲಾ-ಕಿಶೋರಮ್ ಉಪಗೂಹಿತುಮ್ ಉತ್ಸುಕಾಃ ಸ್ಮಃ ||

ಸೂಚನೆ : 13/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 7, 2025

ವ್ಯಾಸ ವೀಕ್ಷಿತ 131 ಮಂದಪಾಲನ ಅಗ್ನಿಸ್ತುತಿ, ವರಪ್ರಾಪ್ತಿ (Vyaasa Vikshita 131)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತನ್ನ ಮಕ್ಕಳಿನ್ನೂ ಎಳೆಯರೆಂಬುದನ್ನು ಮನಗಂಡನು. ಎಂದೇ ಅಗ್ನಿಯ ಸ್ತುತಿಯನ್ನು ಮಾಡಿದನು. ಲೋಕಪಾಲಕನೂ ಮಹಾ ತೇಜಸ್ವಿಯೂ ಅದ ಅಗ್ನಿಯನ್ನು, ತನ್ನ ಮಕ್ಕಳನ್ನುಳಿಸಬೇಕೆಂಬ ಉದ್ದೇಶದಿಂದ ಹೀಗೆ ಸ್ತುತಿಸಿದನು:

"ಓ ಅಗ್ನಿಯೇ, ಎಲ್ಲ ಭೂತಗಳೊಳಗೂ ಸಂಚರಿಸತಕ್ಕವನು ನೀನೇ. ಜ್ಞಾನಿಗಳು ನಿನ್ನನ್ನು 'ಒಬ್ಬನೇ' ಎನ್ನುತ್ತಾರೆ (ಎಂದರೆ ಪರಮಾತ್ಮ-ಸ್ವರೂಪನನ್ನಾಗಿ ಒಬ್ಬನೆನ್ನುತ್ತಾರೆ). ನಿನ್ನನ್ನು ಮೂರೆಂದು ಹೇಳುವುದೂ ಉಂಟು (ಆಕಾಶದಲ್ಲಿ ಸೂರ್ಯರೂಪನಾದ ಅಗ್ನಿ, ಭೂಮಿಯಲ್ಲಿ ಬೆಳಗುವ ಬೆಂಕಿ, ಜಠರದೊಳಗಿನ ಪಾಚಕಾಗ್ನಿ). ನಿನ್ನನ್ನು ಎಂಟಾಗಿ ಸಹ ನೋಡುವರು ( ಪಂಚಭೂತಗಳು, ಸೂರ್ಯಚಂದ್ರರು, ಹಾಗೂ ಯಜಮಾನ - ಎಂಬ ಶಿವನ ಅಷ್ಟಮೂರ್ತಿಗಳೆಂದು ಹೆಸರಾದವುಗಳು).

ನಿನ್ನಿಂದಲೇ ವಿಶ್ವವು ಸೃಷ್ಟಿಯಾಗಿದೆಯೆಂದು ಮಹರ್ಷಿಗಳು ಹೇಳುತ್ತಾರೆ. ನೀನಿಲ್ಲದೆ ಜಗತ್ತೇ ನಾಶಹೊಂದಿಬಿಡುವುದಲ್ಲವೇ? ನಿನಗೆ ನಮಸ್ಕಾರ ಮಾಡಿಯೇ ವಿಪ್ರರು ಪತ್ನೀಪುತ್ರರೊಂದಿಗೆ ಸ್ವಕರ್ಮ-ಸಂಪಾದಿತವಾದ ಶಾಶ್ವತ-ಸ್ಥಾನಗಳನ್ನು ಪಡೆಯುವರು.

ಆಕಾಶದಲ್ಲಿ ಮಿಂಚುಗಳಿಂದ ಕೂಡಿರುವ ಮೋಡಗಳು ಸಹ ನೀನೇ ಎನ್ನುವರು. ಪ್ರಲಯಕಾಲದಲ್ಲಿ ನಿನ್ನಿಂದ ಹೊಮ್ಮಿದ ಆಯುಧಗಳೇ ಸಮಸ್ತಭೂತಗಳನ್ನೂ ಸುಡುವುವು. ಓ ಜಾತವೇದನೇ (ಅಗ್ನಿಯೇ), ಈ ವಿಶ್ವವು ನಿನ್ನಿಂದಲೇ ಸೃಷ್ಟವಾಗಿದೆ. ಎಲ್ಲ ಚರಾಚರ ಪ್ರಾಣಿಗಳ ಕರ್ಮಗಳೂ ನಿನ್ನಿಂದಲೇ ವಿಹಿತವಾಗಲ್ಪಟ್ಟಿವೆ. ಜಗತ್ಸೃಷ್ಟಿಯ ಆದಿಯಲ್ಲಿ ಬಂದ ನೀರೆಂಬುದು ನಿನ್ನಿಂದಲೇ ಆದುದು, ಈ ಜಗತ್ತು ನಿಂತಿರುವುದು ನಿನ್ನಿಂದಲೇ.

ಹವ್ಯ-ಕವ್ಯಗಳು ನಿನ್ನಲ್ಲೇ ನೆಲೆಗೊಂಡಿವೆ. ನೀನೇ ದಾಹಕ, ನೀನೇ ಬ್ರಹ್ಮನೂ ಬೃಹಸ್ಪತಿಯೂ ಆಗಿದ್ದೀಯೆ. ನೀನೇ ಅಶ್ವಿನೀ-ದೇವತೆಗಳಿಬ್ಬರು, ನೀನೇ ಮಿತ್ರ, ನೀನೇ ಸೋಮ, ನೀನೇ ವಾಯುವೂ.

ಈ ರೀತಿ ಮಂದಪಾಲನು ಅಗ್ನಿಯನ್ನು ಸ್ತುತಿಸಿದನು. ಅಮಿತವಾದ ತೇಜಸ್ಸುಳ್ಳ ಆ ಮುನಿಯ ವಿಷಯದಲ್ಲಿ ಅಗ್ನಿಯೂ ಸಂತೋಷಗೊಂಡನು. ಪ್ರಸನ್ನವಾದ ಮನಸ್ಸುಳ್ಳವನಾಗಿ ಆತನನ್ನು ಅಗ್ನಿಯು ಕೇಳಿದನು - "ನಿನಗಿಷ್ಟವಾದ ಯಾವ ಕಾರ್ಯವು ನೆರವೇರುವಂತೆ ಮಾಡಲಿ?"

ಕೈಗಳನ್ನು ಜೋಡಿಸಿದ ಮಂದಪಾಲನು ಅಗ್ನಿದೇವನಿಗೆ ಹೇಳಿದನು: "ನೀನು ಖಾಂಡವವನ್ನು ಸುಡುತ್ತಿರುವ ಈ ಸಂದರ್ಭದಲ್ಲಿ ನನ್ನ ಮಕ್ಕಳನ್ನು ಉಳಿಸು." ಎಂದನು. ಅಗ್ನಿಭಗವಾನನು ಅದಕ್ಕೆ ಹಾಗೇ ಆಗಲೆಂದನು. ಮತ್ತು ಖಾಂಡವವನ್ನು ಸುಡುವ ಬಯಕೆಯಿಂದ ಸರಿಯಾಗಿ ಜ್ವಲಿಸಿದನು.

ಇತ್ತ ಅಗ್ನಿಯು ಪ್ರಜ್ವಲಿಸುತ್ತಿದ್ದಾನೆಂದು ಆ ಶಾರ್ಙ್ಗಕ-ಶಿಶುಗಳು ಬಹಳವೇ ವ್ಯಥೆಗೊಂಡವು. ಬಹಳವೇ ಉದ್ವೇಗಕ್ಕೆ ಒಳಗಾದವು. ಮತ್ತು ತಮಗೆ ರಕ್ಷಕರು ಯಾರು? - ಎಂಬುದನ್ನು ತಿಳಿಯದಾದವು. ತನ್ನ ಶಿಶುಗಳು ಹೀಗಾಗಿರುವುದನ್ನು ಕಂಡ ಅವುಗಳ ತಾಯಿ ಜರಿತೆಯೂ ಬಹಳವೇ ದುಃಖಿತಳೂ ಶೋಚನೀಯಳೂ  ಆಗಿಬಿಟ್ಟಳು.

ಹಾಗೂ ಹೀಗೆ ಹೇಳಿದಳು: ಇದೋ ಕಾಡನ್ನು ಸುಡುತ್ತಿರುವ ಅಗ್ನಿಯು ಇತ್ತಲೇ ಭಯಂಕರನಾಗಿ ಬರುತ್ತಿದ್ದಾನೆ. ಜಗತ್ತನ್ನೇ ಸುಡುವಂತಿರುವ ಈತನು ನನಗೆ ಅತಿಶಯವಾದ ದುಃಖವನ್ನುಂಟುಮಾಡುತ್ತಿದ್ದಾನೆ. ಇನ್ನೂ ಬುದ್ಧಿಯೇ ಬೆಳೆದಿಲ್ಲದ ಈ ಶಿಶುಗಳು ನನ್ನನ್ನು ಸೆಳೆಯುತ್ತಿವೆ. ಅವುಗಳಿಗೆ ಇನ್ನೂ ರೆಕ್ಕೆಯೂ ಮೂಡಿಲ್ಲ, ಕಾಲುಗಳೂ ಸರಿಯಾಗಿ ಬಂದಿಲ್ಲ. ಹೀಗಾಗಿ ಕಷ್ಟಪಡುತ್ತಿವೆ.

ಮರಗಳನ್ನೇ ತನ್ನ ನಾಲಿಗೆಗಳಿಂದ ನೆಕ್ಕುತ್ತಾ ಈ ಅಗ್ನಿಯಂತೂ ನಮ್ಮನ್ನು ಬೆದರಿಸುತ್ತಲೇ ಬರುತ್ತಿದ್ದಾನೆ.

ರೆಕ್ಕೆ ಹುಟ್ಟಿಲ್ಲದ ಈ ಮರಿಗಳು ಚಲಿಸಲೂ ಆರವಾಗಿವೆ. ಅವನ್ನು ಹೊತ್ತುಕೊಂಡು ದಾಟಿಹೋಗಲು ನಾನು ಅಸಮರ್ಥಳಾಗಿದ್ದೇನೆ. ಅವನ್ನು ಇಲ್ಲೇ ಬಿಟ್ಟೂ ಹೋಗಲಾರೆ, ಹೀಗಾಗಿ ನನ್ನ ಹೃದಯವು ಬಹಳವೇ ನೋಯುತ್ತಿದೆ.

ಸೂಚನೆ : 6/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 10 (Prasnottara Ratnamalike 10)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೦. ಮದಿರದಂತೆ ಮೋಹಜನಕ ಯಾವುದು ?

ಉತ್ತರ - ಶರೀರ, ಸ್ತ್ರೀ, ಪುತ್ರ, ಧನ ಈ ವಿಷಯಗಳಲ್ಲಿ ಮೋಹ.


ಮದಿರಾ ಎಂಬುದು ಒಂದು ಬಗೆಯ ಮಾದಕದ್ರವ್ಯ. ಅದನ್ನು ಸ್ವೀಕರಿಸಿದವನು ತನ್ನ ಮನಸ್ಸಿನ ಸ್ತಿಮಿತತೆಯನ್ನು ಕಳೆದುಕೊಳ್ಳುತ್ತಾನೆ. ಅವನು ಹೇಗೆ ನಡೆಯಬೇಕಿತ್ತೋ ಹಾಗೆ ನಡೆಯಲಾಗದು; ಹೇಗೆ ಯೋಚಿಸಬೇಕೋ ಹಾಗೆ ಯೋಚಿಸಲಾಗದು; ಹೇಗೆ ಮಾತನಾಡಬೇಕೋ ಹಾಗೆ ಮಾತನಾಡಲಾಗದು. ಇವೆಲ್ಲವೂ ವ್ಯತ್ಯಾಸವಾಗುವುದು. ಅಂದರೆ ಅವನ ನಡವಳಿಕೆಯಲ್ಲಿ ಮದಿರೆಯೆಂಬುದು ತೊಂದರೆಯನ್ನು ಉಂಟುಮಾಡುತ್ತದೆ. ಹಾಗೆಯೇ ಇಲ್ಲೂ ಕೂಡ ಅಂಥದ್ದೇ ಮೋಹಜನಕವಾದುದು ಯಾವುದು? ಎಂಬ ಪ್ರಶ್ನೆ ಬಂದಿದೆ. ಅದಕ್ಕೆ ಉತ್ತರವಾಗಿ ಶರೀರ, ಸ್ತ್ರೀ, ಪುತ್ರ, ಧನ ಈ ವಿಷಯಗಳಲ್ಲಿ ಇರುವ ಮೋಹವವೇ ಅಂತಹ ಮದಿರೆ ಎಂಬುದಾಗಿ ಕರೆಯಬೇಕು ಎಂಬ ಉತ್ತರ ಇಲ್ಲಿದೆ. ಅಂದರೆ ಶರೀರ ಸ್ತ್ರೀ ಮೊದಲಾದವುಗಳು ನಮ್ಮ ಸ್ತಿಮಿತತೆಯನ್ನು ಅಥವಾ ನಮ್ಮ ಅಸ್ತಿತ್ವವನ್ನು ಕಳೆಯುವಂತವುಗಳು ಎಂಬುದು ಇದರ ಅರ್ಥ. 

 

ನಮಗೆ ಒಂದು ಸಂದೇಹ ಬರುತ್ತದೆ ಇವು ಮೋಹವನ್ನು ಅಂದರೆ ನಮ್ಮ ಅಸ್ತಿತ್ವವನ್ನು ಕಳೆಯುವಂತಹ ವಿಷಯಗಳಾದರೆ ಇವು ಬೇಡವೇ? ಎಂದರೆ ಹಾಗಲ್ಲ. ಇವುಗಳು ಇಲ್ಲದಿದ್ದರೆ ಯಾವುದೂ ಕೂಡ ನಡೆಯುವುದಿಲ್ಲ. ಶರೀರವಿಲ್ಲದಿದ್ದರೆ ನಾವು ಯಾವ ಕಾರ್ಯವನ್ನು ಕೂಡ ಮಾಡಲಾರೆವು. ಸ್ತ್ರೀ ಇಲ್ಲದಿದ್ದರೆ ಈ ಸಂಸಾರ ಅಥವಾ ವಂಶವೇ ಮುಂದುವರೆಯಲಾರದು. ಪುತ್ರ ಸಂತತಿ ಇಲ್ಲದಿದ್ದರೆ ಅದು ಕೂಡ ಅಷ್ಟೇ. ಇವೆಲ್ಲದಕ್ಕೂ ಕಳಶಪ್ರಾಯದಂತೆ ಇರುವಂತದ್ದು ಧನ. ಅಂದರೆ ನಮ್ಮ ಬಾಹ್ಯವ್ಯವಹಾರ ಸಂಗತವಾಗಿ ನಡೆಯಬೇಕಾದರೆ ಧನ ಬೇಕಷ್ಟೇ. ಹಾಗಾಗಿ ಇವುಗಳು ಇಲ್ಲದಿದ್ದರೆ ನಮ್ಮ ಬದುಕು ಅಸಾಧ್ಯ ಎಂಬುದೇ ವಿಷಯ. ಆದರೆ ಇಲ್ಲಿ ಹೇಳುವ ವಿಷಯ ಯಾವುದು? ಇವುಗಳು ಹೇಗೆ ಮೋಹಕ? 

 

ಶರೀರ ಮೊದಲಾದ ವಿಷಯಗಳು ನಮಗೆ ಬೇಡವೆಂಬ ಅರ್ಥವಲ್ಲ. ಅವುಗಳನ್ನು ಯಾವಾಗ? ಹೇಗೆ? ಎಷ್ಟು ಬಳಸಿಕೊಳ್ಳಬೇಕು? ಎಂಬ ಬಗ್ಗೆ ನಮಗೆ ಒಂದು ಬಗೆಯ ನಿಗಾ ಇರಬೇಕು ಎಂಬುದು ಇದರ ತಾತ್ಪರ್ಯ. ಅದಕ್ಕಾಗಿಯೇ ಶರೀರವನ್ನು ಅಷ್ಟಾಗಿ ಮೋಹಿಸಬಾರದು ಎಂಬುದಾಗಿ ಶ್ರೀಶಂಕರ ಭಗವತ್ಪಾದರು ಮೋಹಮದ್ಗರ ಸ್ತೋತ್ರದಲ್ಲಿ ಹೇಳುತ್ತಾರೆ ಮತ್ತು ದಾರೇಷಣ, ವಿತ್ತೇಷಣ, ಪುತ್ರೇಷಣ ಎಂಬುದಾಗಿ ಈಷಣಾತ್ರಯ ತ್ಯಾಗವೇ ಮುಕ್ತಿಗೆ ಸಾಧನ ಎಂಬುದಾಗಿ ಬಹಳ ವಿವರವಾಗಿ ಈ ಬಗ್ಗೆ ಉಪನಿಷತ್ತುಗಳಲ್ಲಿ ಕಾಣಬಹುದು. ಅಂದರೆ ಇವೆಲ್ಲವೂ ನಮ್ಮ ಮುಕ್ತಿಗೆ ಬಾಧಕಗಳಾಗಬಹುದು ಎಂಬುದು ಅರ್ಥ. ಇಲ್ಲಿ ಸ್ತ್ರೀ ಪುರುಷ ಎಂಬ ಸಂಕೇತದ ವಿಷಯವಲ್ಲ. ಈ ಪ್ರಪಂಚಕ್ಕೆ ಬಂದಂತಹ ಪ್ರತಿಯೊಬ್ಬರೂ ಕೂಡ ಸ್ತ್ರೀಯೇ ಆಗಿರುತ್ತಾನೆ. ಅಲ್ಲಿ ಭಾವಿಸಬೇಕಾದುದೇ ಪುರುಷ. ಹಾಗಾಗಿ ಈ ಪ್ರಪಂಚಕ್ಕೆ ಬಂದವನು ಈ ಶರೀರವೆಂಬ ಪ್ರಕೃತಿಯನ್ನು ಮತ್ತು ಅದರ ವಿಕಾಸ ರೂಪವಾಗಿರುವಂತ ಸಂಸಾರವನ್ನು ಮತ್ತು ಅದಕ್ಕೆ ಬೇಕಾದಂತಹ ಧನ-ಸಂಪತ್ತು ಮೊದಲಾದವುಗಳನ್ನು ಎಷ್ಟಕ್ಕೆ ಬೇಕೋ ಅಷ್ಟರಮಟ್ಟಿಗೆ ಅದನ್ನು ಬಳಸಿಕೊಂಡರೆ ಅವನು ತನ್ನ ಗುರಿಯನ್ನು ಬಹಳ ಸುಲಭವಾಗಿ ಮುಟ್ಟಬಲ್ಲ. ಅದಿಲ್ಲದಿದ್ದರೆ ಅವನಿಗೆ ಗುರಿಯು ಬಹಳ ಕಷ್ಟವಾದೀತು ಎಂಬ ಒಂದು ಸಂದೇಶವನ್ನು ಈ ಪ್ರಶ್ನೋತ್ತರದಲ್ಲಿ ಕೊಟ್ಟಂತೆ ಕಂಡುಬರುತ್ತದೆ. 


ಸೂಚನೆ : 6/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.