Monday, April 24, 2023

ಯಕ್ಷ ಪ್ರಶ್ನೆ 35 (Yaksha prashne 35)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 34 ರೋಗಿಯಾದವನಿಗೆ ಮಿತ್ರನಾರು ?

ಉತ್ತರ - ವೈದ್ಯ

ಇಲ್ಲಿ ಯಕ್ಷನು ಕೇಳುವ ಪ್ರಶ್ನೆಯು ನಿಜವಾಗಿಯೂ ಅತ್ಯಂತ ಸರಳವಾದುದು. ಚಿಕ್ಕ ಮಕ್ಕಳನ್ನು ಕೇಳಿದರೂ ಈ ಪ್ರಶ್ನೆಗೆ ವೈದ್ಯ ಎಂಬ ಉತ್ತರವನ್ನೇ ಕೊಡುತ್ತಾರೆ. ರೋಗಿಯಾದವನಿಗೆ ವೈದ್ಯ ಮಿತ್ರನು ಹೌದು. ಆದರೆ ಆ ವೈದ್ಯನು ಎಂತವನಾಗಿರಬೇಕು ಎಂಬುದೂ ಅಷ್ಟೇ ಗಹನವಾದ ವಿಚಾರ. ಅಂತಹ ವೈದ್ಯನೇನಾದರೂ ಸಿಕ್ಕರೆ ಅವನು ಈ ಲೋಕದಲ್ಲಿ ಮಾತ್ರ ಅಲ್ಲ, ಮೂರು ಲೋಕದಲ್ಲೂ ಮಿತ್ರನಾಗಬಲ್ಲ. 

ರೋಗವನ್ನು ಹೇಳುವಾಗ ಸಾಮಾನ್ಯವಾಗಿ ಆಧಿ ಮತ್ತು ವ್ಯಾಧಿ ಎಂಬುದಾಗಿ ಎರಡಾಗಿ ಆಯುರ್ವೇದವು ಹೇಳುತ್ತದೆ. ಈ ಎರಡೂ ಬಗೆಯ ರೋಗವೂ ಈ ಮಾನವಜನ್ಮವು ಪ್ರಾಪ್ತವಾದ ಮೇಲೆ ಬರುವಂತದ್ದು. ಅಲ್ಲದೆ ಈ ಜನ್ಮವನ್ನೇ ಒಂದು ರೋಗ - ಭವರೋಗ ಎಂದು ಕರೆದಿದ್ದಾರೆ. ಲೋಕಕ್ಕೆ ಮತ್ತೆ ಮತ್ತೆ ಬರದಂತೆ ಮಾಡುವುದೂ ಒಂದು ವೈದ್ಯನ ವಿಶೇಷ ಪರಿಣತಿ ಎಂಬುದೂ ಇಲ್ಲಿನ ಪ್ರಶ್ನೆಯಲ್ಲಿರುವ ಗಹನಾವ ವಿಚಾರ ಎಂಬುದು ನನ್ನ ಭಾವನೆ. 

ವ್ಯಾಧಿ ಎಂದರೆ ಶರೀರಕ್ಕೆ ಬರುವ ರೋಗವಾದರೆ, ಆಧಿ ಎಂದರೆ ಮನಸ್ಸಿಗೆ ಬರುವ ರೋಗವಾಗಿದೆ. ಒಬ್ಬ ವ್ಯಕ್ತಿ ಸ್ವಸ್ಥನಾಗಿ ಬದುಕಬೇಕಾದರೆ ಈ ಎರಡು ಬಗೆಯ ರೋಗಕ್ಕೆ ಚಿಕೆತ್ಸೆ ಬೇಕಾಗುತ್ತದೆ. ಯಾರು ಸ್ವಸ್ಥ? ಎನ್ನುವಾಗ ಆಯುರ್ವೇದವು ಅವನ ಲಕ್ಷಣವನ್ನು ಈ ರೀತಿ ಹೇಳುತ್ತದೆ. "ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ । ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ" ಎಂದು. ವಾತ ಪಿತ್ತ ಕಫಗಳೆಂಬ ಮೂರುದೋಷಗಳು, ದೇಹದಲ್ಲಿ ಅಗ್ನಿಯ ಸಮತೋಲನತೆ,  ಸಪ್ತಧಾತುಗಳೂ ಈ ಶರೀರದಲ್ಲಿ ಒಂದು ಬಗೆಯ ಸಮಸಮಭಾವದಲ್ಲಿ ಇರುವುದು, ಶರೀರದಿಂದ ಹೊರಹೋಗುವ ಮೂರು ಬಗೆಯ ಮಲಗಳು, ಶಾಂತವಾದ ಉದ್ವಿಗ್ನಗೊಳ್ಳದ ಪಂಚೇಂದ್ರಿಯಗಳು ಮತ್ತು ಮನಸ್ಸು, ಮತ್ತು ಕೊನೆಯಲ್ಲಿ ಆತ್ಮದ ಪ್ರಸನ್ನತೆ ಇವು ಆರೋಗ್ಯವಂತನ ಲಕ್ಷಣ. ಇವುಗಳಲ್ಲಿ ಯಾವುದೊಂದು ಕೆಟ್ಟರೂ ಆತ ರೋಗಿಯಾಗುತ್ತಾನೆ. ಆ ರೋಗ ನಿವಾರಣೆಗೆ ಇವುಗಳನ್ನು ಬಲ್ಲ ತಜ್ಞವೈದ್ಯನಿದ್ದರೆ ಆ ರೋಗಿಯು ಮತ್ತೆ ಆ ಸ್ವಸ್ಥವಾದ ಸ್ಥಿತಿಗೆ ಹೋಗಲು ಸಾಧ್ಯ. ನಿಜವಾಗಿಯೂ ಆರೋಗ್ಯವೇ ಇರಬೇಕಾದ ಅವಸ್ಥೆ. ಅದನ್ನು ಕಾಪಾಡಿಕೊಂಡು ಹೋಗುವುದಕ್ಕೆ ವೈದ್ಯನ ಸಲಹೆ ಸಹಕಾರವಿದ್ದಾಗ ಮಾತ್ರ ಸಾಧ್ಯ.

ವೈದ್ಯನಾದವನ ಪಾತ್ರನಿರ್ವಹಣೆ ಇಲ್ಲಿ ಅತಿಮುಖ್ಯವಾದುದು. ಒಬ್ಬ ವ್ಯಕ್ತಿಯ ಪ್ರಾಣವನ್ನು ಪಣವಾಗಿಸಿ ಕಾರ್ಯವನ್ನು ನಿರ್ವಹಿಸಬೇಕಾದುದು ಆತನ ಕರ್ತವ್ಯ. ಮಾನವ ಜನ್ಮವು ದುರ್ಲಭವಾದು. ಇದರಿಂದ ಮಾತ್ರ ಈ ಭವರೋಗವನ್ನು ದಾಟಲು ಸಾಧ್ಯ. ಅದಕ್ಕೆ ನೀರೋಗ ದೃಢಕಾಯದ ಅವಶ್ಯಕತೆ ಇದೆ. ಧರ್ಮಸಾಧನೆಗೆ ಶರೀರವೇ ಅತಿಮುಖ್ಯಸಾಧವಷ್ಟೇ. ಹಾಗಾಗಿ ಅಂತಹ ದುರ್ಲಭವಾದ ಆ ಶರೀರವೆಂಬ ಸಂಪತ್ತನ್ನು ಅಂತೆಯೇ ರಕ್ಷಿಸಲು ವೈದ್ಯನ ಸಹಕಾರವಿದ್ದರೆ ಮಾತ್ರ ಸಾಧ್ಯವಾಗುವುದು. ಹಾಗಾದಾಗ ಮಾತ್ರವೇ ಆತ ಲೋಕದಲ್ಲಿ ಹೆಮ್ಮೆ ಪಡುವ ವೈದ್ಯನಾಗುತ್ತಾನೆ. ಇಂತಹ ವೈದ್ಯನೇ ರೋಗಿಯ ನಿಜವಾದ ಮಿತ್ರನಾಗಬಲ್ಲ.   

ಸೂಚನೆ : 23/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.