Sunday, April 9, 2023

ಸಂಗೀತ ಮನೋರಂಜನೆಗೋ ? ಆತ್ಮರಂಜನೆಗೋ ? (Sangita Manorannjanege? Atmarannjanego?)

ಶ್ರೀಮತಿ ಪದ್ಮಿನಿ ಶ್ರೀನಿವಾಸನ್

 (ಪ್ರತಿಕ್ರಿಯಿಸಿರಿ lekhana@ayvm.in)



ಪುರುಷೋತ್ತಮನಾದ ಶ್ರೀರಾಮನ ಕಥೆಯನ್ನು, ಶ್ರೀಮದ್ರಾಮಾಯಣವೆಂಬ ಮಹಾಕಾವ್ಯವಾಗಿ ಮಹರ್ಷಿ ವಾಲ್ಮೀಕಿಗಳು ರಚಿಸಿ, ಸಂಗೀತವನ್ನೂ ಸಂಯೋಜಿಸಿ, ಅವರ ಶಿಷ್ಯರೂ ಹಾಗೂ ರಾಮನ ಔರಸ ಪುತ್ರರೂ ಆದ ಲವ- ಕುಶರಿಗೆ ಕಲಿಸಿದರು.  ಲವಕುಶರು ಹಾಡಿದ್ದು ಮಾರ್ಗ ಸಂಗೀತ ಪದ್ಧತಿಯಲ್ಲಿದ್ದು, ಶ್ರೀರಾಮನ ಎದುರಿಗೇ ವೀಣೆಯೊಂದಿಗೆ ಹಾಡಿ, ಮೆಚ್ಚುಗೆ ಪಡೆದರೆಂಬುದು ರಾಮಾಯಣದ ಪ್ರಸಿದ್ಧ ಪ್ರಸಂಗ. ರಾಮಾಯಣದ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳನ್ನು ಸಣ್ಣ ವಯಸ್ಸಿನಲ್ಲೇ ಕಂಠಪಾಠ ಮಾಡಿಕೊಂಡಿದ್ದ ತ್ಯಾಗರಾಜರು ಹೀಗೆ ಹಾಡುತ್ತಾರೆ- "ನಾದಸುಧೆಯ ರಸವೇ ನರಾಕೃತಿಯಾಗಿರುವ ರಾಮ! ವಾಲ್ಮೀಕಿ ನಿನ್ನ ಕಥೆ ಬರೆದರೇನಂತೆ? ನಾನು ನಿನ್ನ ಸ್ತುತಿಯನ್ನು ಹಾಡಬೇಕೆಂದೇ ಜನ್ಮತಾಳಿದ್ದೀನಿ" ಎಂದು. ತಿರುಮಲೆಗೆ ಹೋಗಿದ್ದಾಗ ತ್ಯಾಗರಾಜರು, ದರ್ಶನಕ್ಕೆ ಸ್ವಲ್ಪ ವಿಳಂಬವಾಗಲು, "ತೆರೆಯನ್ನು (ಕಾಮಕ್ರೋಧಾದಿ ಷಡ್ರಿಪುಗಳಿಂದುಂಟಾದ ಅಜ್ಞಾನದ ತೆರೆ) ತೆಗೆಯಬಾರದೇ?" ಎಂದು ಆತ್ಮಭಾವದಿಂದ ಒಡಗೂಡಿದವರಾಗಿ  ಹಾಡಿದಾಗ, ಅವರಿಗೆ ಬಹಿರಂಗವಾದ ಸೇವೆಯೊಡನೆ ಅಂತರಂಗದಲ್ಲಿ ಪರಮಾತ್ಮನ ದರ್ಶನವಾಗಿ, ತಕ್ಷಣ "ವೆಂಕಟೇಶ! ನಿನ್ನನ್ನು ನೋಡಲು ಹತ್ತುಸಾವಿರ ಕಣ್ಣು ಬೇಕು (ಜ್ಞಾನಚಕ್ಷು ಬೇಕು)" ಎಂದು ಮತ್ತೊಂದು ಕೃತಿ ಹಾಡಿದರಂತೆ. ಇವೆಲ್ಲ ಹೇಗೆ ಸಾಧ್ಯ?

ನಾದಯೋಗಿಗಳಾದ ಶ್ರೀರಂಗಮಹಾಗುರುಗಳು ಸಂಗೀತ ಪಾಠ ಮಾಡುತ್ತಾ ಹೇಳಿದ್ದರು "ರೇಡಿಯೋ ಸ್ಟೇಷನ್ನಲ್ಲಿ ಮುದ್ರಿತವಾದ ದ್ವನಿ, ಅಮೆರಿಕಾದಲ್ಲೂ ಕೇಳುವಂತೆ, ಸಾಧನಾಸಂಪನ್ನರು ವಿಶೇಷ ಸ್ಥಿತಿಯನ್ನು ಮುಟ್ಟಿದಾಗ ಇಲ್ಲಿಯ ಧ್ವನಿ ಭಗವಂತನವರೆಗೆ ತಲುಪಿಸಬಹುದು. ಪ್ರತಿಯೊಂದು ಭಾವದಲ್ಲಿಯೂ, ಸ್ಥಿತಿಯಲ್ಲಿಯೂ ಒಂದೊಂದು ಸ್ವರ. ಅದರ ವಿಸ್ತಾರ, ರಾಗ. ಮನೋರಂಜನೆ ಮಾಡುವ ರಾಗಗಳಿವೆ, ಭವಭಂಜನೆ ಮಾಡಿ ಆತ್ಮರಂಜನೆ ಮಾಡುವ ರಾಗವೂ ಇರುತ್ತೆ. ಹಲವು ರಾಗಗಳು ಆತ್ಮಭಂಜನೆಯನ್ನೂ ಮಾಡುವುದುಂಟು! ಹೀಗಿದೆ ಸಂಗೀತದ ಪರಿಪೂರ್ಣವಾದ ಮಾರ್ಗ" ಎಂದು.

ಮಾರ್ಗ-ದೇಶೀ ಸಂಗೀತಗಳು

 ಮಾರ್ಗ ಹಾಗೂ ದೇಶೀ ಪದ್ಧತಿಗಳು ಸಂಗೀತದ ಎರಡು ಪ್ರಭೇದಗಳೆಂದು ಶಾಸ್ತ್ರಗಳು ಹೇಳುತ್ತವೆ. ಅತ್ಯಂತ ಪ್ರಾಚೀನವಾದ, ಈಶ್ವರಪ್ರಣೀತವಾದ, ಕಠಿಣ ನಿಯಮಗಳನ್ನೊಳಗೊಂಡ,  ಭಗವನ್ಮಾರ್ಗ ತೋರುವುದು 'ಮಾರ್ಗ' ಸಂಗೀತ. ಇದು ಭಗವಂತನಿಗೆ ಪ್ರಿಯವಾದದ್ದು ಎನ್ನುತ್ತಾರೆ ಭರತ ಮುನಿಗಳು. ಸಾಮಾನ್ಯರಿಗೆ ಕಠಿಣ ನಿಯಮಗಳನ್ನು ಸಡಿಲ ಪಡಿಸಿ, ಆಕರ್ಷಕವಾಗಿ, ವಿವಿಧ ಭಾವನೆಗಳನ್ನು ವ್ಯಕ್ತಪಡಿಸುವ ರಾಗಗಳಿಂದ ಕೂಡಿ, ಕಲೆಯಾಗಿ ಬೆಳೆದದ್ದು 'ದೇಶೀ' ಸಂಗೀತ. ಮಾರ್ಗಸಂಗೀತದ ಲಕ್ಷ್ಯ-ಲಕ್ಷಣಗಳಿಂದಲೇ ಮುಂದುವರೆದದ್ದು  ದೇಶೀ ಎಂದು, ಮತಂಗಮುನಿಗಳು ಹೇಳುತ್ತಾರೆ. ಬೇರೆ ಬೇರೆ ದೇಶಗಳಲ್ಲಿ ಹುಟ್ಟಿಕೊಂಡದ್ದು ದೇಶೀ. 

ಆತ್ಮಮೂಲದಿಂದ ವಿಷಯವನ್ನು ಅಳೆಯುತ್ತಿದ್ದ  ಶ್ರೀರಂಗಮಹಾಗುರುಗಳು ಒಂದು ಉದಾಹರಣೆಯೊಂದಿಗೆ ಹೀಗೆ ಸ್ಪಷ್ಟಪಡಿಸಿದ್ದರು. "ಸಂಗೀತದಲ್ಲಿ ಮಾರ್ಗ-ದೇಶೀ ಎಂದು ಎರಡು ವಿಭಾಗವಿದೆ. ಮಾರ್ಗವೆಂದರೆ ಹಾದಿ. ಆತ್ಮಮೂಲವಾಗಿ ಹೊರಟ ಸಂಗೀತ ಪದ್ಧತಿ;  ಆರ್ಯವಾದದ್ದು. ಆತ್ಮರಂಜನೆ ಮಾಡುವುದರಿಂದ 'ಮಾರ್ಗ'. ಆ ರಾಗದ ಹರಿವನ್ನು ಅನುಸರಿಸಿ ಹೋದರೆ, ಆತ್ಮಮಾರ್ಗದಲ್ಲೊಂದು ಗುರಿ ಮುಟ್ಟಿಸುವ ಶಕ್ತಿ ಅದಕ್ಕಿರುತ್ತೆ. ಪ್ರಹ್ಲಾದನಾರದಪರಾಶರಪುಂಡರೀಕಾದಿ ಭಕ್ತರ ಕಕ್ಷೆಗೆ ಸೇರಿಸುವ ಮಾರ್ಗ. ಆತ್ಮಮಾರ್ಗವನ್ನು ಮರೆಸಿ ಪ್ರಕೃತಿ ದೇಶದಲ್ಲಿಯೇ ಸುತ್ತಿಸುವುದು  'ದೇಶೀ'".

ಒಂದು ನದಿಯ ಸೋಪಾನದ ಮೇಲುಮೆಟ್ಟಲಿನಲ್ಲಿ (ಭಗವಂತನ ಸ್ಥಾನ) ಜಲಪೂರ್ಣ ಕುಂಭವನ್ನಿಟ್ಟು  ತಳ್ಳಿದರೆ, ಒಂದೊಂದು ಮೆಟ್ಟಲಿನ ಮೇಲೆ ಒಂದೊಂದು ಸ್ವರ ಬರುತ್ತದೆ. ಪರಮಪದದಿಂದ  ಉರುಳಿದ ನಾದಸುಧೆ, ನಾದವನ್ನು ಚೆಲ್ಲುತ್ತಾ ಕೆಳಮೆಟ್ಟಲಿಗೆ (ಮೂಲಾಧಾರ ಸ್ಥಾನಕ್ಕೆ) ಬಂತು. (ದೇಹವನ್ನು ತೋರಿಸಿಕೊಂಡು 'ಇದೇ ಆ ಘಟ' ಎಂದಿದ್ದರು). ಅದರ ಜಾಡನ್ನು ಹಿಡಿದರೆ ಮೇಲಕ್ಕೆತ್ತಿ ಭಗವಂತನ ಸ್ಥಾನದಲ್ಲಿ ನಿಲ್ಲಿಸುತ್ತೆ. 

ಮನೋರಂಜನೆ – ಆತ್ಮರಂಜನೆ

ಜನಪ್ರಿಯವಾದ ಜಾನಪದ ಸಂಗೀತಕ್ಕೆ ಲೋಕಗೀತೆ, ನಾಟ್ಟುಪಾಟ್ಟು, ಗ್ರಾಮಗೀತೆ ಇತ್ಯಾದಿ ಹೆಸರುಗಳುಂಟು. ಅಲ್ಪ ವಿಸ್ತಾರ ಹೊಂದಿದ್ದು, ಕೇವಲ ಮನೋರಂಜನೆಯೇ ಇದರ ಗುರಿ. ಪ್ರಕೃತಿಯ ಪ್ರೇರಣೆಯಿಂದ, ಉತ್ಸಾಹದಿಂದ ಅವರವರ ಭಾಷೆಗಳಲ್ಲಿ ಬಂದ ಹಾಡುಗಳು. ಜೀವನದ ಪ್ರತಿಯೊಂದು ಸಂದರ್ಭಕ್ಕೂ ಹೊಂದುವಂತಹ, ವಿಶೇಷ ನಿಯಮ, ಬಂಧನಗಳಿಲ್ಲದ ಈ ಸಂಗೀತವನ್ನು ಎಲ್ಲ ದೇಶಗಳಲ್ಲಿಯೂ ಕಾಣಬಹುದು. ಅವರವರ ಮತಾನುಸಾರವಾಗಿ ಭಕ್ತಿಗೀತೆಗಳಾಗಿಯೂ ಬೆಳೆಯಿತು. ಸಂಗೀತವು ಕಲೆಯಾಗಿ ಬೆಳೆದದ್ದು ಕೆಲವು ದೇಶಗಳಲ್ಲಿ ಮಾತ್ರ.  ಆದರೆ ಆತ್ಮಮೂಲದಿಂದ ವಿದ್ಯೆಯಾಗಿ ವಿಸ್ತಾರವಾದದ್ದು ನಮ್ಮ ದೇಶದಲ್ಲಿ ಮಾತ್ರ.

 ಸರಳ ರಾಗಗಳನ್ನೂ ಶಾಸ್ತ್ರೀಯ ಪದ್ಧತಿಗೆ ಅಳವಡಿಸಿದ ಮೊದಲಿಗರು ಸಂಗೀತ ಪಿತಾಮಹ ಪುರಂದರದಾಸರು. ತ್ಯಾಗರಾಜರು ಮುಂದುವರೆದು, ಉತ್ಸವ ಸಂಪ್ರದಾಯ ಕೃತಿ  ಹಾಗೂ ದಿವ್ಯನಾಮ ಸಂಕೀರ್ತನ ಕೃತಿಗಳಲ್ಲಿ ಈ ಸರಳ ರಾಗಗಳನ್ನು ಬಳಸಿ, ಸಾಮಾನ್ಯರೂ ಗೋಷ್ಠಿಯಲ್ಲಿ ಹಾಡುವಂತಹ ಕೃತಿಗಳನ್ನು ರಚಿಸಿದ್ದಾರೆ. ಇಂದಿಗೂ ಪ್ರಸ್ತುತವಾಗಿರುವ ಈ ಕೃತಿಗಳು ನಮಗೇಕೆ ದೇವರನ್ನು ತೋರಿಸುವುದಿಲ್ಲಾ? ಎಂದರೆ, ನಮ್ಮ ಸಾಧನಾಸಾಮರ್ಥ್ಯಗಳು, ಸಂಸ್ಕಾರಗಳು ಕುಗ್ಗಿವೆ ಎಂದಷ್ಟೇ ಉತ್ತರ. ನಮ್ಮವರೆಗೆ ತಲುಪಿರುವ ವಿದ್ಯೆಯನ್ನೇ ಅವಲಂಬಿಸಿ, ಇಂದ್ರಿಯಗಳಿಂದ ಮನೋರಂಜನೆ ಪಡೆಯುತ್ತಾ, ಸ್ವರದೇವತೆಗಳ ಅನುಗ್ರಹಕ್ಕೆ ಪಾತ್ರರಾಗಿ, ಸಂಗೀತದ ಮೂಲವಾದ, ಪರಮಾನಂದಭರಿತವಾದ  ಆತ್ಮರಂಜನೆಯ ಸ್ಥಿತಿಯವರೆಗೂ ತಲುಪಬೇಕು ಅನ್ನುವುದು ಭಾರತದ ಮಹರ್ಷಿಗಳ ತುಂಬು ನೋಟದ ಮಾರ್ಗ. "ತುಂಬಾ ಲಾಭ ಸಿಕ್ಕಿದಾಗ ಅದನ್ನು ಪಡೆಯುವುದು ಬಿಟ್ಟು ಅಲ್ಪಕ್ಕಾಗಿ ಗುದ್ದಾಡುವುದೇ?" ಎಂದಿದ್ದರು ಶ್ರೀರಂಗಮಹಾಗುರುಗಳು.


ಒಟ್ಟಿನಲ್ಲಿ ಮನೋರಂಜನೆಗೆ ಮಾತ್ರ ಭಾರತೀಯ ಸಂಗೀತವಿದ್ಯೆಯನ್ನು ಸೀಮಿತಗೊಳಿಸದೆ, ಆತ್ಮರಂಜನೆಯ ಸ್ಥಿತಿಯನ್ನು ತಲುಪಿದಾಗಷ್ಟೇ ಸಂಗೀತದ ಸಾರ್ಥಕ್ಯ.


ಸೂಚನೆ : 8/4/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.