Thursday, April 20, 2023

ಬಂಗಾರದ ಪ್ರಾಮುಖ್ಯ (Baṅgarada Pramukhya)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)



ರಾಮಾಯಣದ ಒಂದು ಪ್ರಸಂಗ.  ಶ್ರೀರಾಮಚಂದ್ರ ಪ್ರಭುವು ಲೋಕ ಕಲ್ಯಾಣಾರ್ಥವಾಗಿ ಅಶ್ವಮೇಧಯಾಗವನ್ನು ಮಾಡಬೇಕೆಂದು ಸಂಕಲ್ಪಿಸಿ ವಸಿಷ್ಠಾದಿಗಳೊಂದಿಗೆ ಚರ್ಚಿಸುತ್ತಾನೆ.  ಆಗ ಅಶ್ವಮೇಧಯಾಗವನ್ನು  ಪತ್ನೀ ಸಹಿತನಾಗಿ ಆಚರಿಸಬೇಕೆಂಬ ಶಾಸ್ತ್ರವಿಧಿ ತಿಳಿಯುತ್ತದೆ. ಆ ಸಮಯದಲ್ಲಿ ಸೀತಾಮಾತೆಯು ಭೌತಿಕವಾಗಿ ಅವನ ಬಳಿ ಇರುವುದಿಲ್ಲ;  ಶ್ರೀರಾಮನಿಂದ ಪರಿತ್ಯಕ್ತಳಾಗಿ ವಾಲ್ಮೀಕಿಗಳ ಆಶ್ರಮದಲ್ಲಿರುತ್ತಾಳೆ. ಅಶ್ವಮೇಧಯಾಗ ಮಾಡುವ ಬಗೆ ಹೇಗೆ ಎಂಬುದಾಗಿ ವಿಮರ್ಶಿಸಿದಾಗ ಬಂಗಾರದಿಂದ ಮಾಡಲ್ಪಟ್ಟ ಸೀತೆಯ ಪ್ರತಿಮೆಯೊಂದಿಗೆ ಯಾಗವನ್ನು ನೆರವೇರಿಸಬಹುದು ಎಂಬ ಶಾಸ್ತ್ರಪರಿಹಾರವು ಸೂಚಿಸಲ್ಪಡುತ್ತದೆ. ಇದು ಶ್ರೀರಾಮನ ಏಕಪತ್ನೀ ವ್ರತದ ಮಹತ್ವವನ್ನು ಒಂದೆಡೆ ತಿಳಿಸಿದರೆ ಇನ್ನೊಂದೆಡೆ ಬಂಗಾರದ ಮಹತ್ವವನ್ನೂ ತಿಳಿಸುತ್ತದೆ.  


 ಸುವರ್ಣ (ಬಂಗಾರ) ಎನ್ನುವುದು ಉತ್ಕೃಷ್ಟವಾದ ಲೋಹಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿರುವ ಅತ್ಯಮೂಲ್ಯವಾದ ಪದಾರ್ಥವಾಗಿದೆ.  ಇದಕ್ಕೆ ಕಾರಣಗಳು ಹಲವು. ಕಣ್ಮನ ಸೆಳೆಯುವ ಆಕರ್ಷಣೀಯವಾದ ಅದರ ಬಣ್ಣ, ಎಂದೆಂದಿಗೂ ಮಾಸದ ಅದರ ಹೊಳಪು, ಹಾಗೆಯೇ ಮೃದುವಾದ ಲೋಹವಾದ್ದರಿಂದ ವಿಧ ವಿಧವಾದ ವಿನ್ಯಾಸಗಳಿಂದ ಕೂಡಿದ ಆಭರಣಗಳ ತಯಾರಿಕೆಗೆ ಅನುಕೂಲಕರ- ಇವು ಮೇಲ್ನೋಟಕ್ಕೆ ತಿಳಿದು ಬರುವ ಅಂಶಗಳು.  ಸುವರ್ಣಕ್ಕೆ ಹಿರಣ್ಯ, ಕನಕ, ಕಾಂಚನ, ತಪನೀಯ ಇತ್ಯಾದಿ ಪರ್ಯಾಯ ಪದಗಳಿವೆ. 


ದೇವತಾರಾಧನೆಯಲ್ಲಿ ಬಂಗಾರವು ಪ್ರಮುಖ ಪಾತ್ರವನ್ನು ವಹಿಸುವುದನ್ನು ಕಾಣುತ್ತೇವೆ.  ದೇವಸ್ಥಾನಗಳಲ್ಲಿ ದೇವತಾ ಮೂರ್ತಿಗಳಿಗೆ ಸುವರ್ಣದ ಕವಚ ಕುಂಡಲಗಳನ್ನು ತೊಡಿಸಿ ಆನಂದ ಪಡುತ್ತೇವೆ.  ಅಂತೆಯೇ ಭಗವಂತನನ್ನು ಸುವರ್ಣ ವರ್ಣೋ ಹೇಮಾoಗಃ ಎಂಬುದಾಗಿ ಸ್ತುತಿಸಿರುವುದೂ ಉಂಟು. ಆಯುರ್ವೇದ ಶಾಸ್ತ್ರದಲ್ಲಿಯೂ ಕೂಡ ಅನೇಕ ಔಷಧ ದ್ರವ್ಯಗಳ ತಯಾರಿಕೆಯಲ್ಲಿ ನಿರ್ದಿಷ್ಟ ಪ್ರಮಾಣದ ಬಂಗಾರದ ಅಂಶವನ್ನು ಸೇರಿಸುವುದು ಕಂಡುಬರುವ ವಿಷಯವೇ ಆಗಿದೆ. ದಾನಗಳನ್ನು ನೀಡುವಾಗಲೂ ಕೂಡ ಸುವರ್ಣದಾನ ಅತ್ಯಂತ ಶ್ರೇಷ್ಠ ಎಂಬುದಾಗಿ ಹೇಳುತ್ತಾರೆ. ಮಂಗಳ ದ್ರವ್ಯಗಳಲ್ಲಿ ಸುವರ್ಣವು ಸ್ಥಾನವನ್ನು ಪಡೆದುಕೊಂಡಿದೆ. ನವರತ್ನಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.


 ಸಾಮಾನ್ಯ ದೃಷ್ಟಿಗೆ ಸುವರ್ಣದ ಭೌತಿಕ ಅಂಶಗಳು, ಅಂದರೆ ಆಭರಣ ತಯಾರಿಕೆಗೆ ಸಹಕಾರಿ, ಅತ್ಯಂತ ಬೆಲೆ ಬಾಳುವ ಪದಾರ್ಥ ಇತ್ಯಾದಿ ಗುಣಗಳು ಗೋಚರಿಸಲ್ಪಟ್ಟರೂ, ಋಷಿ ದೃಷ್ಟಿಗೆ ಅದರ ವ್ಯಾಪ್ತಿ ದೈವಿಕ, ಆಧ್ಯಾತ್ಮಿಕ ಎಂಬ ಇನ್ನೆರಡು ಕ್ಷೇತ್ರಗಳಿಗೂ ವಿಸ್ತರಿಸಲ್ಪಟ್ಟಿರುವುದು ಅವರ ಅನುಭವ ವೇದ್ಯವಾಗಿದೆ.  ಹಾಗಾಗಿಯೇ ಸುವರ್ಣವು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವನ್ನು ಅಲಂಕರಿಸಿದೆ.


 ಶ್ರೀರಂಗ ಮಹಾಗುರುಗಳು ಸುವರ್ಣದ ವಿಶೇಷತೆಯನ್ನೂ, ಅದರ ಧಾರಣೆಯಿಂದ ನಮ್ಮ ಶರೀರದ ಮೇಲೆ ಉಂಟಾಗುವ ಪ್ರಭಾವವನ್ನೂ ನಾಡೀಗತಿಯ ಮೂಲಕ ಪತ್ತೆಹಚ್ಚಿ ಮೂರೂ(ಭೌತಿಕ, ದೈವಿಕ, ಆಧ್ಯಾತ್ಮಿಕ) ಕ್ಷೇತ್ರಗಳ ಮೇಲೆ ಅದರಿಂದ ಉಂಟಾಗುವ ಪ್ರಯೋಜನಗಳನ್ನು ಪ್ರಯೋಗದ ಮೂಲಕ ತೋರಿಸಿ ಕೊಟ್ಟಿರುವುದು ಇಲ್ಲಿ ಸ್ಮರಣೀಯ ವಿಷಯವಾಗಿದೆ.


ಸುವರ್ಣದಲ್ಲಿ ಅನೇಕ ಪ್ರಭೇದಗಳಿವೆ. ಒಂದೊಂದು ಪ್ರಭೇದಕ್ಕೂ, ಒಂದೊಂದು ದೇವತೆಯನ್ನು ಪ್ರಸನ್ನಗೊಳಿಸುವ ಶಕ್ತಿ ಇದೆ. ಹೀಗೆ ದೇವತಾ ಪ್ರಸನ್ನತೆಗೆ ಸುವರ್ಣವು ಸಹಕಾರಿಯಾಗಿದೆ.


ಸುವರ್ಣದ ಆಧ್ಯಾತ್ಮಿಕ ಪ್ರಯೋಜನದ ಕಡೆ ಗಮನ ಹರಿಸುವುದಾದರೆ, ಯೋಗಸಾಧಕರಿಗೆ ಇದು ಅತ್ಯಂತ ಪೋಷಕವಾದ ಪದಾರ್ಥವಾಗಿದೆ.  "ಯೋಗಿಯು ಸಮಾಧಿಗೆ ಹೋಗುವಾಗ ಯಾವ ನಾಡೀಗತಿ ಆರಂಭವಾಗುತ್ತದೆಯೋ ಅಂತಹ ನಾಡೀಗತಿಯನ್ನು ಸುವರ್ಣವು ಉಂಟುಮಾಡುತ್ತದೆ. ಆದ್ದರಿಂದ, ಸಾಧಕರಿಗೆ ಪೋಷಕವಾದ ವಾತಾವರಣವನ್ನು ಇದು ಒದಗಿಸಿಕೊಡುತ್ತದೆ" ಎಂಬುದನ್ನು ಶ್ರೀರಂಗ ಮಹಾಗುರುಗಳು ತಿಳಿಯಪಡಿಸಿದ್ದರು. ಹಾಗಾಗಿ, ಬಂಗಾರವು ಭೌತಿಕ ಕ್ಷೇತ್ರದಿಂದ ಹಿಡಿದು ಆಧ್ಯಾತ್ಮಿಕ ಕ್ಷೇತ್ರದವರೆಗೂ ಮನುಷ್ಯನಿಗೆ ಪೋಷಕವಾದ ವಾತಾವರಣವನ್ನು ಕಲ್ಪಿಸುತ್ತದೆ ಎಂಬುದು ಅದರ ವಿಶಿಷ್ಟತೆಯೇ ಸರಿ.


ಭಗವಂತನಿಂದ ಸೃಷ್ಟಿಸಲ್ಪಟ್ಟ ಈ ಮಾನವ ಶರೀರವೆಂಬುದು ಯೋಗಾನುಭವವನ್ನು ಪಡೆಯುವುದಕ್ಕೂ, ಭೋಗಾನುಭವವನ್ನು ಪಡೆಯುವುದಕ್ಕೂ ಎಲ್ಲಾ ವಿಧವಾದ ಅನುಕೂಲಗಳಿಂದ ಕೂಡಿದೆ.  ಅಂತಹ ಯೋಗ ಭೋಗಮಯವಾದ ಜೀವನವನ್ನು ಹೊಂದಲು ಸುವರ್ಣಧಾರಣೆಯು ಅತ್ಯಂತ ಪೋಷಕವಾಗಿರುವುದು ಅದರ ಮಹತ್ವ.


ಇಂದ್ರಿಯಗಳನ್ನು ಹಿಮ್ಮುಖವಾಗಿ ತಿರುಗಿಸಿ ಅಂತರ್ಮಾರ್ಗದಲ್ಲಿ ಸಂಚರಿಸಿ ಯೋಗಾನುಭವವನ್ನು ಪಡೆಯುವ ನಿವೃತ್ತಿಮಾರ್ಗವನ್ನು, ಒಳ ಆನಂದವನ್ನು ಮನೋಬುದ್ಧಿಗಳಲ್ಲಿ ತುಂಬಿಕೊಂಡು ಆ ಆನಂದದಿಂದೊಡದಗೂಡಿ ಪ್ರವೃತ್ತಿ ಮಾರ್ಗದಲ್ಲಿ ಸಂಚರಿಸಿ ಬಾಹ್ಯ ಜೀವನವನ್ನು ನಡೆಸಲು, ಯೋಗ ಭೋಗಮಯವಾದ ಜೀವನವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸುವರ್ಣದ ಧಾರಣೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ದೃಷ್ಟಿಯಿಂದ ಮಹರ್ಷಿಗಳು ಅದಕ್ಕೆ ಶ್ರೇಷ್ಠವಾದ ಸ್ಥಾನವನ್ನು ಕೊಟ್ಟಿರುತ್ತಾರೆ.


 ಇಷ್ಟೆಲ್ಲಾ ವಿಶೇಷತೆಗಳನ್ನು ತನ್ನಲ್ಲಿಟ್ಟುಕೊಂಡಿರುವ ಬಂಗಾರವನ್ನು ಇತ್ತೀಚಿನ ದಿನಗಳಲ್ಲಿ ಧರಿಸಿ ಹೊರಗಡೆ ಓಡಾಡುವುದಕ್ಕೂ, ಮನೆಯಲ್ಲಿ  ಇಟ್ಟುಕೊಳ್ಳುವುದಕ್ಕೂ  ಕಳ್ಳ - ಕಾಕರ ದೆಸೆಯಿಂದ, ಭಯದ ವಾತಾವರಣವೇ ನಿರ್ಮಿತವಾಗಿದೆ.  ಸುವರ್ಣಕ್ಕೆ ಬದಲಾಗಿ ನಕಲಿ ಆಭರಣಗಳು ಎಲ್ಲೆಡೆ ವಿಜೃಂಭಿಸುತ್ತಿವೆ. ಆದರೆ ಚಿನ್ನಕ್ಕೆ ಚಿನ್ನವೇ ಸರಿಸಾಟಿ.  ಅದರ ಸ್ಥಾನವನ್ನು ಪೂರ್ಣವಾಗಿ ಬೇರೆ ಆಭರಣಗಳು ತುಂಬಲು ಸಾಧ್ಯವಿಲ್ಲ.  ಹಾಗಾಗಿ ಜಾಗರೂಕತೆಯಿಂದ, ಯಥಾಶಕ್ತಿ ಅದನ್ನು ಧರಿಸಿ ಅದರ ಉಪಯೋಗವನ್ನು ಪಡೆದುಕೊಳ್ಳಲು ಪ್ರಯತ್ನಿಸೋಣ.


ಸೂಚನೆ: 20/04/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.