Monday, April 17, 2023

ಸಜ್ಜನರು ಯಾರು ? (Sajjanaru Yaru?)


ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)


"ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ' ಎಂಬ ಸರ್ವಜ್ಞ ಕವಿಯ ಸೂಕ್ತಿಯೊಂದನ್ನು ತಿಳಿಯ ಹೇಳಿ ಮಕ್ಕಳಿಗೆ ಸಜ್ಜನರ ಸಹವಾಸದಲ್ಲಿರುವಂತೆ ಉಪದೇಶ ಮಾಡುತ್ತೇವೆ. ಸತ್ಪುರುಷರನ್ನು ಪ್ರಶಂಸೆ ಮಾಡುವುದು ಮತ್ತು ತಮ್ಮ ಮಕ್ಕಳೂ ಸಜ್ಜನರಾಗಬೇಕೆಂದು ಅಪೇಕ್ಷಿಸುವುದು- ಇವುಗಳನ್ನು ನಮ್ಮ ದೇಶದಲ್ಲಿ ಎಲ್ಲಾ ವರ್ಗದ ಜನರಲ್ಲಿಯೂ ನಾವು ಕಾಣಬಹುದಾಗಿದೆ. ತಮ್ಮ ಮಕ್ಕಳು ದುರ್ಜನರಾಗಬೇಕೆಂದು ಯಾರೂ ಬಯಸುವುದಿಲ್ಲ. "ಅವರು ಸಜ್ಜನರು; ಯಾರ ತಂಟೆಗೂ ಹೋಗುವುದಿಲ್ಲ"-ಇತ್ಯಾದಿ ಮಾತುಗಳಿವೆ. ಆದರೆ ಇಲ್ಲಿ ಸಜ್ಜನರೆಂದರಾರು? ಸತ್ಪುರುಷರ ಲಕ್ಷಣವೇನು ? ಎಂಬುದಾಗಿ ಪ್ರಶ್ನೆ ಮಾಡಿದಲ್ಲಿ, ಯಾವ ಒಂದು ಸ್ಪಷ್ಟವಾದ ಮತ್ತು ನಿರ್ದಿಷ್ಟವಾದ ಉತ್ತರವನ್ನೂ ನಾವು ನಿರೀಕ್ಷಿಸಲು ಸಾಧ್ಯವಿಲ್ಲ.'ಸಜ್ಜನರು'-ಎಂದಾಗ ಒಳ್ಳೆಯವರು, ಹಸುವಿನಂತೆ ಸಾಧುವಾದ ಪ್ರಾಣಿ, ಬಹಳ ಮೃದು ಸ್ವಭಾವದವರು ಯಾರು ಏನೆಂದರೂ ಪ್ರತಿಯಾಗಿ ಮಾತನಾಡದೆ ಸಹಿಸಿಕೊಳ್ಳುವವರು,'ಕಪಟ-ಕುಹಕಗಳನ್ನು ಅರಿಯದವರು'-ಇತ್ಯಾದಿ ಮಾತುಗಳಿವೆ.

ಆದರೆ 'ಸಜ್ಜನ', 'ಸತ್ಪುರುಷ','ಸತ್ಸಂಗ'- ಇತ್ಯಾದಿ ಪದಗಳನ್ನು ಮೂಲತಃ ತಂದ ನಮ್ಮ ಭಾರತೀಯ ಮಹರ್ಷಿಗಳ ದೃಷ್ಟಿಯಿಂದ ಈ ಪದಗಳು ಯಾವ ಅರ್ಥವನ್ನು ಕೊಡುತ್ತವೆ? ಈ ಸಂಸ್ಕೃತ ಪದಗಳನ್ನು ಬಿಡಿಸಿ ನೋಡಿದಾಗ "ಸತ್+ಜನ?', 'ಸತ್ + ಪುರುಷ', 'ಸತ್+ಸಂಗ', 'ಸತ್+ವಿದ್ಯೆ'-ಹೀಗೆ ಎರಡೆರಡು ಪದಗಳನ್ನು ನಾವು ಕಾಣಬಹುದು. ಇಲ್ಲಿ 'ಸತ್' ಎಂಬುದು ಸರ್ವಸಾಮಾನ್ಯವಾಗಿದ್ದು, ನಾವು ಅದರ ಬಗ್ಗೆ ವಿಚಾರ ಮಾಡಬೇಕಾಗಿದೆ. ನಮ್ಮ ಆರ್ಷಸಂಸ್ಕೃತಿಯಲ್ಲಿ 'ಸತ್'-ಎಂಬ ಈ ಪದಕ್ಕೆ ಎಂದೆಂದಿಗೂ ಒಂದೇ ರೀತಿಯಲ್ಲಿ ವಿಕಾರ(ಬದಲಾವಣೆ)ವಿಲ್ಲದೆ ಇರುವ ಸತ್ಯ, ನಿತ್ಯವಾದ ವಸ್ತು'-ಎಂಬ ವಿವರಣೆ ಇದೆ. ಇದು ಮಹರ್ಷಿಗಳು ಅಧ್ಯಯನ ಮಾಡಿ ಕಂಡಿರುವ ಅಂಶ.

'ಸತ್' ಎಂದರೆ ಇರುವುದು. ಇರುವುದು ಆ ವಸ್ತುವೊಂದೇ; ಉಳಿದುದೆಲ್ಲವೂ ವಿಕಾರಗೊಳ್ಳುವುದರಿಂದ, ಬರಿಯ ತೋರಿಕೆಯಾದ್ದರಿಂದ 'ಅಸತ್' ಎನಿಸುತ್ತದೆ. ಹೀಗೆ ಸದಸದ್ವಿವೇಚನೆಯನ್ನು ಮಾಡಿದ್ದಾರೆ ನಮ್ಮ ಹಿರಿಯರು. ಈ ಭಗವಂತನೆಂಬ 'ಸದ್ವಸ್ತು'ವೊಂದೇ ಎಂದೆಂದಿಗೂ ಯಾವ ಬದಲಾವಣೆಯನ್ನೂ, ನಾಶವನ್ನೂ ಹೊಂದದೇ ಇರುವ ವಸ್ತು. ನಮ್ಮ ಕಣ್ಣಿಗೆ ಕಾಣುವ ಇತರ ಎಲ್ಲಾ ವಸ್ತುಗಳೂ ಬದಲಾವಣೆ ಹೊಂದುತ್ತಿರುವುದೂ ನಾಶವಾಗುತ್ತಿರುವುದೂ ನಮ್ಮ ಅನುಭವಕ್ಕೆ ಬಂದಿರುವ ವಿಷಯವೇ. ನಮ್ಮದೇ ಆದ ದೇಹ, ಇಂದ್ರಿಯ, ಮನಸ್ಸು, ಬುದ್ಧಿ-ಇವುಗಳೇ ಕಾಲ-ದೇಶ-ಸನ್ನಿವೇಶಗಳಿಗನುಗುಣವಾಗಿ ವಿಕಾರಹೊಂದುತ್ತಿರುವುದೂ ಎಲ್ಲರಿಗೂ ಅನುಭವ ವೇದ್ಯವೇ. ನಾವು ಕಾಣುತ್ತಿರುವ ಬಾಹ್ಯ ಜಗತ್ತೆಲ್ಲಕ್ಕೂ ಚೈತನ್ಯ ನೀಡುತ್ತಿರುವ ಆತ್ಮವಸ್ತುವೊಂದು ಉಂಟೆಂದು, ಅದನ್ನು ಸಾಕ್ಷಾತ್ತಾಗಿ ಅನುಭವಿಸಿ ಹೇಳಿರುವ ಜ್ಞಾನ-ವಿಜ್ಞಾನ ತೃಪ್ತಾತ್ಮರಾದ ಮಹಾಪುರುಷರನೇಕರನ್ನು ನಮ್ಮ ನಾಡು ನೀಡಿದೆ. "ಸತ್ತುಹೋದನು' ಎಂಬುದಾಗಿ ಸಾಮಾನ್ಯ ಜನರೂ ಮಾಡುವ ವ್ಯವಹಾರವು ಎಲ್ಲರಿಗೂ ತಿಳಿದಿರುವ ವಿಷಯ. ಅಂತೆಯೇ ನಮ್ಮ ಈ ದೇಹದಲ್ಲಿಯೇ ಇರುವ ಆ ಸದ್ವಸ್ತುವನ್ನೂ ಅದು ದೇಹದಿಂದ ಹೊರಕ್ಕೆ ಹೊರಡುವುದನ್ನೂ ಸಾಮಾನ್ಯ ಜನರು ಕಂಡಿಲ್ಲ.  ಆದರೂ, ಆ ವಸ್ತುವನ್ನು ಕಂಡು ಅನುಭವಿಸಿದ ಮಹಾಪುರುಷರಿಂದಲೇ 'ಸತ್ತುಹೋದನು'-ಎಂಬ ರೂಢಿ ಬಂದಿದೆ.

'ಆ ಸದ್ವಸ್ತುವನ್ನು ಕಂಡುಕೊಳ್ಳುವುದು ಮಾನವರೆಲ್ಲರ ಹಕ್ಕು'-ಎಂಬುದಾಗಿ ಮಹರ್ಷಿಗಳು ಘೋಷಿಸಿದ್ದಾರೆ. ತಾವು ತಮ್ಮೊಳಗೇ ಸಾಕ್ಷಾತ್ಕರಿಸಿಕೊಂಡು ಅನುಭವಿಸಿದ ಆ ಸದ್ವಸ್ತುವನ್ನೇ ಆತ್ಮ-ಪರಮಾತ್ಮ- ಬ್ರಹ್ಮ-ಎಂಬುದಾಗಿ ಕರೆದಿದ್ದಾರೆ. ಹೀಗೆ, ನಮ್ಮೊಳಗೇ ಬೆಳಗುತ್ತಿರುವ ಆ ನಿತ್ಯಸತ್ಯವಾದ ಸದ್ವಸ್ತುವನ್ನು ಸಾಕ್ಷಾತ್ಕರಿಸಿಕೊಂಡ ಜ್ಞಾನಿಗಳೇ ನಿಜವಾದ ಸಜ್ಜನರು, ಸತ್ಪುರುಷರು. ಅಂತಹವರ ಸಹವಾಸದಲ್ಲಿರುವುದೇ ಸತ್ಸಂಗ. ಅದೇ, ಜೀವನವನ್ನು ಪಾವನ ಮಾಡುವ ಅಂಶ. ಅಂತಹವರ ನಡೆ-ನುಡಿಗಳೆಲ್ಲವೂ ನಿಸ್ವಾರ್ಥವಾಗಿದ್ದು, ಜಗತ್ತಿಗೆ ಹಿತವನ್ನುಂಟು ಮಾಡುವುದಾಗಿರುತ್ತದೆ. ಆದ್ದರಿಂದ ಅವರ ನಡೆ-ನುಡಿಗಳೇ ನಮಗೆ ಆದರ್ಶವಾಗಿರಬೇಕು. ಅದರಿಂದಲೇ ಲೋಕದ ಉದ್ಧಾರ. ಇಂತಹ ಆದರ್ಶವನ್ನು ನಮ್ಮ ಮನಸ್ಸಿನಲ್ಲಿ ಮೂಡಿಸಿದ ಭಾರತೀಯ ಮಹರ್ಷಿಗಳು, ಸತ್ಪುರುಷರು, ಮಹಾಪುರುಷರು ನಮಗೆ ಆದರ್ಶ. ಇಲ್ಲಿ ಶ್ರೀರಂಗಮಹಾಗುರುಗಳ ಅಭಿಪ್ರಾಯವು ಸ್ಮರಣೀಯ. 'ಮಹಾತ್ಮರ ಸಾಹಿತ್ಯವು, ಸರಿಯಾದ ಶಿಕ್ಷಣ ದೊರೆತು ಅದರ ದಾರಿಯನ್ನು ಅನುಸರಿಸಿ ಹೋದರೆ, ಅದರ ಮನೋಭೂಮಿಕೆಗೆ, ಆತ್ಮ ಭೂಮಿಕೆಗೆ ಕೊಂಡೊಯ್ಯುತ್ತದೆ '.  ಅಂತಹ ಸತ್ಪುರುಷರ ಸಂಗವು ನಮಗೂ ದೊರೆಯಲಿ ; ಇಹ ಪರಗಳಲ್ಲಿ ಸೌಖ್ಯ ಪಡೆಯುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.

ಸೂಚನೆ: 15/04/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.