Sunday, April 2, 2023

ಜೀವನದಲ್ಲಿ ಸಾಧನೆ ಮಾಡಲು ಈ ಸೂತ್ರ ತುಂಬಾ ಮುಖ್ಯ (Jivanadalli Sadhane Madalu E Sutra Tumba Mukhya)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ನಾವು ಅನೇಕ ರೀತಿಯ ಸಾಧಕರನ್ನು ಜೀವನದಲ್ಲಿ ನೋಡಿರುತ್ತೇವೆ. ಹಾಗೆಯೇ ನಾವೂ ನಾನಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕು, ಯಶಸ್ವಿಯಾಗಬೇಕು ಎಂದುಕೊಂಡಿರುತ್ತೇವೆ. ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಯಶಸ್ವಿಯಾಗಬೇಕಾದರೆ ಕೆಲವೊಂದಷ್ಟು ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ. ಅಂತಹ ಸೂತ್ರಗಳಲ್ಲಿ ಪತಂಜಲಿ ಯೋಗಸೂತ್ರದಲ್ಲಿ ಬರುವಂತಹ ಸೂತ್ರವೂ ಒಂದಾಗಿದೆ. ಅದು ಯಾವುದೆಂದರೆ ' ಸ ತು ದೀರ್ಘಕಾಲ ನೈರಂತರ್ಯ ಸತ್ಕಾರಾ ಸೇವಿತ ದೃಢಭೂಮಿಃ' ಎಂಬುದಾಗಿ. ಅಂದರೆ ನಮ್ಮ ಯೋಗ ಸಾಧನೆಯು ಪಕ್ವವಾಗಬೇಕಾದರೆ, ನಮಗೆ ಸಾಧನೆಯಲ್ಲಿ ಒಂದು ದೃಢ ಭೂಮಿ ಉಂಟಾಗಬೇಕಾದರೆ, ನಮ್ಮ ಯೋಗ ಸಾಧನೆಯನ್ನು ದೀರ್ಘಕಾಲ ಮಾಡಬೇಕು. ಎರಡನೆಯದಾಗಿ, ಈ ಸಾಧನೆಯಲ್ಲಿ gap (ಅಂತರ) ಬರಬಾರದು, ನಿರಂತರವಾಗಿರಬೇಕು. ಇವತ್ತು ಮಾಡಿದ್ದೇವೆ, ನಾಳೆ ಮಾಡಲಿಲ್ಲ; ಮತ್ತೆ ನಾಡಿದ್ದು ಮಾಡುತ್ತೇವೆ ಎಂದರೆ ಅದರಿಂದ ಫಲ ಸಿಗುವುದಿಲ್ಲ. ಮತ್ತು ಸತ್ಕಾರಾ ಸೇವಿತ ಅಂದರೆ ಆ ಸಾಧನೆಗೆ ಎಷ್ಟು ರೀತಿಯಲ್ಲಿ ಸತ್ಕಾರವನ್ನು ಕೊಡಬೇಕೋ ಅದನ್ನು ಕೊಟ್ಟು ಮಾಡಬೇಕು. ಶ್ರದ್ಧೆ, ಭಕ್ತಿ ಇವುಗಳಿಂದ ಆ ಸಾಧನೆಯನ್ನು ಮಾಡಬೇಕು. ಹಾಗೆ ಮಾಡಿದಾಗ ಅದರಲ್ಲಿ ನಮಗೆ ಒಂದು ದೃಢ ಭೂಮಿ ಸಿಗುತ್ತದೆ.

 ಈ ಸೂತ್ರವನ್ನು ನಾವು ಲೌಕಿಕ ಕ್ಷೇತ್ರದ ಸಾಧನೆಗಳಿಗೂ ಅನ್ವಯಿಸಿಕೊಳ್ಳಬಹುದು. ಉದಾಹರಣೆಗೆ ಅದು ಸಂಗೀತ ಕ್ಷೇತ್ರ ಇರಬಹುದು, ಕ್ರೀಡಾಕ್ಷೇತ್ರ ಇರಬಹುದು -ಯಾವುದೇ ಕ್ಷೇತ್ರದಲ್ಲಾದರೂ ನಾವು ನಮ್ಮನ್ನು ದೀರ್ಘಕಾಲ ತೊಡಗಿಸಿಕೊಂಡಾಗ ಆ ಕ್ಷೇತ್ರದಲ್ಲಿ ನಮಗೆ ಒಂದು ದೃಢ ಭೂಮಿ ಸಿಗುತ್ತದೆ. ಇದನ್ನು ನಾವು ನಮ್ಮ ನಿತ್ಯ ಜೀವನದಲ್ಲಿಯೂ ಅಳವಡಿಸಿಕೊಳ್ಳಬಹುದು. ಹೇಗೆಂದರೆ ಮೊಟ್ಟಮೊದಲನೆಯದಾಗಿ ನಾವು ನಮ್ಮನ್ನು ಅಧ್ಯಾತ್ಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಅಧ್ಯಾತ್ಮ ಕ್ಷೇತ್ರ ಎಂದು ಹೇಳಿದ ಮಾತ್ರಕ್ಕೆ ಸಂಸಾರವನ್ನು ತ್ಯಾಗ ಮಾಡಿ, ಕಾಡಿನಲ್ಲಿ ಹೋಗಿ ಮೂಗನ್ನು ಹಿಡಿದು ಕುಳಿತುಕೊಳ್ಳುವವರಿಗೆ ಮಾತ್ರ ಎಂದು ಅರ್ಥ ಮಾಡಿಕೊಳ್ಳಬೇಕಾಗಿಲ್ಲ. ಅಧ್ಯಾತ್ಮ ಸಾಧನೆ ಅಥವಾ ಯೋಗ ಸಾಧನೆ ಎನ್ನುವುದು ನಿತ್ಯ ಜೀವನದಲ್ಲಿ ಎಲ್ಲರಿಗೂ ಬೇಕಾಗಿರುವಂತಹ ವಿಷಯವಾಗಿದೆ. ಇದರಿಂದ ನಮ್ಮ ಲೌಕಿಕ ಜೀವನದಲ್ಲಿಯೂ ಕೂಡ ಪೋಷಣೆ ಸಿಗುತ್ತದೆ. ಅಧ್ಯಾತ್ಮ ಸಾಧನೆಯಿಂದ ಲೌಕಿಕ ಜೀವನಕ್ಕೆ ಹೇಗೆ ಪೋಷಣೆ ಸಿಗುತ್ತದೆ ಎನ್ನುವುದನ್ನು ಒಂದು ವೈದಿಕ ಆಶೀರ್ವಚನದಿಂದ ಅರ್ಥ ಮಾಡಿಕೊಳ್ಳಬಹುದು. 


ವೈದಿಕ ಕರ್ಮಗಳನ್ನು ಆಚರಣೆ ಮಾಡಿದಾಗ ಕೊನೆಯಲ್ಲಿ ಒಂದು ಶುಭಾಶಂಸನೆಯನ್ನು ಹೇಳುತ್ತಾರೆ - ಶಾಂತಿರಸ್ತು, ತುಷ್ಟಿರಸ್ತು, ಪುಷ್ಟಿರಸ್ತು, ಆಯುಷ್ಯಮಸ್ತು ಶಿವಂ ಕರ್ಮಾಸ್ತು, ಧನಧಾನ್ಯಾಭಿವೃದ್ಧಿರಸ್ತು, ಪುತ್ರ ಪೌತ್ರಾಭಿವೃದ್ದಿರಸ್ತು ಎಂಬುದಾಗಿ. ಇದರ ಅರ್ಥ ಏನೆಂದರೆ ನಾವು ಯಾವುದಾದರೂ ಒಂದು ವೈದಿಕ ಕರ್ಮವನ್ನಾಗಲಿ ಅಥವಾ ಭಗವಂತನಿಗೆ ಪ್ರೀತಿಕರವಾದ ಕರ್ಮವನ್ನಾಗಲಿ ಆಚರಿಸಿದರೆ ನಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಆ ಶಾಂತಿಯಿಂದ ನಮ್ಮ ಮನಸ್ಸಿಗೆ ಒಂದು ಬಲ ಸಿಗುತ್ತದೆ ಅದೇ ತುಷ್ಟಿ. ಮನಸ್ಸಿನಲ್ಲಿ ಒಂದು ಬಲ ಉಂಟಾದಾಗ ಶರೀರಕ್ಕೂ ಪುಷ್ಟಿ ದೊರೆಯುತ್ತದೆ, ಅದರಿಂದ ನಮ್ಮ ಆಯುಷ್ಯ ವೃದ್ಧಿಯಾಗುತ್ತದೆ. ಆ ಆಯುಷ್ಯವೃದ್ಧಿಯಾದಾಗ ಶಿವಂ ಕರ್ಮಾಸ್ತು ಎಂಬುದಾಗಿ  ಹೇಳುವ ಉದ್ದೇಶವು ಹೀಗಿದೆ-  ನಾವು ಮಂಗಳಮಯವಾದ ಕರ್ಮಗಳನ್ನು ಆಚರಿಸಿದಾಗ ಅದರಿಂದ ಒಂದು ಫಲ ಸಿಗುತ್ತದೆ. ಕರ್ಮಗಳನ್ನು (ಕೆಲಸಗಳನ್ನು)  ಚೆನ್ನಾಗಿ ಮಾಡಿದರೆ,  ಅದರಿಂದ ನಮಗೆ ಸಂಪತ್ತು ದೊರೆಯುತ್ತದೆ; ಧನ ಧಾನ್ಯಗಳು ವೃದ್ಧಿಯಾಗುತ್ತವೆ. ಆ ಧನ ಧಾನ್ಯಗಳ ಅಭಿವೃದ್ಧಿಯಿಂದ ನಾವು ನಮ್ಮ ಸಾಂಸಾರಿಕ ಜೀವನದಲ್ಲಿಯೂ ಏಳಿಗೆಯನ್ನು ಕಾಣಬಹುದು, ಹೆಂಡತಿ,ಮಕ್ಕಳು,ಮೊಮ್ಮಕ್ಕಳು ಅಭಿವೃದ್ಧಿಯನ್ನು ಹೊಂದುತ್ತಾರೆ. ಇದೇ ಈ ಆಶೀರ್ವಾದದ ಒಂದು ಆಶಯವಾಗಿದೆ. 

ಹೀಗೆ, ಅಧ್ಯಾತ್ಮ ಜೀವನಕ್ಕೂ ಲೌಕಿಕ ಜೀವನಕ್ಕೂ ಒಂದು ಸಂಬಂಧವುಂಟು. ಅಧ್ಯಾತ್ಮ ಸಾಧನೆಯಿಂದ ಉಂಟಾದ ಶರೀರ, ಮನಸ್ಸುಗಳ ಬಲವನ್ನು ಉತ್ತಮ ಸಂಕಲ್ಪದಿಂದೊಡಗೂಡಿದ ಲೌಕಿಕ ವೃತ್ತಿಯಲ್ಲಿ ತೊಡಗಿಸಿ ಅಲ್ಲಿಯೂ ಸಾಧನೆಯನ್ನು ದೀರ್ಘಕಾಲ, ನಿರಂತರವಾಗಿ, ಶ್ರದ್ಧೆಯಿಂದ ಮಾಡಬೇಕು. ಲೌಕಿಕ ಸಾಧನೆಗೂ ಈ ಯೋಗಸೂತ್ರ ಅನ್ವಯವಾಗುತ್ತದೆ. ಉದಾಹರಣೆಗೆ ಸತತ ಪರಿಶ್ರಮದಿಂದ ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ವೈದ್ಯರಾಗುತ್ತಾರೆ, ಸಂಗೀತ ವಿದ್ಯಾರ್ಥಿಗಳು ಸಂಗೀತಗಾರರಾಗುತ್ತಾರೆ. 

ಆದುದರಿಂದ ನಾವು ನಮ್ಮ ಜೀವನದಲ್ಲಿ ಸಾಧನೆಯನ್ನು ಮಾಡಬೇಕು ಎಂದು ಮೊದಲು ಅಂದುಕೊಳ್ಳೋಣ, ಸಾಧನೆ ಮಾಡಬೇಕಾದರೆ ಮೊದಲಿಗೆ ನಾವು ನಮ್ಮ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಿ ಯೋಗ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು, ಅನಂತರ ಅದರಿಂದ ನಮಗೆ ಏನು ಒಂದು strength (ಸಾಮರ್ಥ್ಯ) ಬರುತ್ತದೆಯೋ ಅದನ್ನು ಲೌಕಿಕ ಜೀವನದಲ್ಲಿಯೂ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಂಡು ಆತ್ಮಜೀವನ, ಲೋಕಜೀವನಗಳೆರಡರಲ್ಲೂ ಉದ್ಧಾರವಾಗೋಣ.

ಸೂಚನೆ : 1/4/20223 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.