Monday, April 17, 2023

ಯಕ್ಷ ಪ್ರಶ್ನೆ 34 (Yaksha prashne34)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 33 ಮನೆಯಲ್ಲಿ ಇರುವವನಿಗೆ ಮಿತ್ರನಾರು ?

ಉತ್ತರ - ಪತ್ನೀ 

ಭಾರತೀಯವಾದ ಸಂಸ್ಕೃತಿ ಅತ್ಯಂತ ಪ್ರಾಚೀನ ಎಂಬ ಹೆಮ್ಮೆಪಡಲು ಕಾರಣವೇ ಇಲ್ಲಿನ ಕುಟುಂಬ ವ್ಯವಸ್ಥೆ. ಇದರಲ್ಲಿ ಗಂಡ-ಹೆಂಡತಿ ಇವರ ಪಾತ್ರ ಬಹಳ ಮುಖ್ಯವಾದು. ಅದರಲ್ಲೂ ಪತ್ನಿಯ ಸ್ಥಾನ ಇನ್ನೂ ಹಿರಿದು. 'ನಿಮ್ಮ ಕುಟುಂಬ ಚೆನ್ನಾಗಿ ಇದ್ದಾರಾ?' ಎಂದು ಕೇಳುವಾಗ ಇಲ್ಲಿ ಕುಟುಂಬ ಎಂದರೆ ಪತ್ನಿಯೇ. ಅಂದರೆ 'ಕುಟುಂಬ' ಎಂಬುದು  ಪತ್ನಿಗೆ ಇನ್ನುಂದು ಹೆಸರು ಎಂಬಷ್ಟರ ಮಟ್ಟಿಗೆ ಮಹತ್ತ್ವವಿದೆ. ದಾಂಪತ್ಯಜೀವನದಲ್ಲಿ ಸ್ತ್ರೀ ಪುರುಷರ ಇಬ್ಬರ ಪಾತ್ರವೂ ಇದೆ. "ಕುಟುಂಬದ ಹೊಣೆ ಹೊತ್ತು ಗೃಹಿಣಿಯಾಗಿ ಗೃಹವನ್ನು ಬೆಳೆಸುವವಳು, ಬೆಳಗಿಸುವವಳು ಸ್ತ್ರೀ. ಆದ್ದರಿಂದ  'ಗೃಹಿಣೀ ಗೃಹಮುಚ್ಯತೇ' ಎಂಬ ಮಾತು ಬಂದಿದೆ" ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಪತ್ನಿಯಿದ್ದರೆ ಮಾತ್ರ ಗೃಹಕ್ಕೆ ಶೋಭೆ. ಮನೆಯಲ್ಲಿ ಹೆಂಡತಿ ಇಲ್ಲದಿರುವಾಗ ಅತಿಥಿಗಳು ಬರುವುದಕ್ಕೆ ಸಂಕೋಚಪಡುತ್ತಾರೆ ' ನಿಮ್ಮ ಮನೆಯವರು ಮನೆಯಲ್ಲಿ ಇಲ್ಲವಲ್ಲ, ಬಂದರೆ ನಿಮಗೆ ತೊಂದರೆ ಆಗುತ್ತದೆ, ಹಾಗಾಗಿ ಅವರು ಇರುವಾಗ ಬರುತ್ತೇನೆ' ಎಂಬ ಮಾತನ್ನು ಆಡುತ್ತಾರೆ. ಅಂದರೆ ಕುಟುಂಬದ ವ್ಯವಸ್ಥೆಯಲ್ಲಿ ಪತ್ನಿಗೆ ಮುಖ್ಯ ಪಾತ್ರವಿರುವುದು ಸತ್ಯ. ಈ ಅಭಿಪ್ರಾಯವನ್ನು ಲೋಕಕ್ಕೆ ಇನ್ನಷ್ಟು ದೃಢಪಡಿಸಲು ಯಕ್ಷನು ಧರ್ಮರಾಜನಿಗೆ 'ಮನೆಯಲ್ಲಿ ಇರುವವನಿಗೆ ಮಿತ್ರನಾರು?' ಎಂಬ ಪ್ರಶ್ನೆಯನ್ನು ಮುಂದಿಡುತ್ತಾನೆ. 

ಈ ಸೃಷ್ಟಿಯಲ್ಲಿ ಸ್ತ್ರೀಯ ಪಾತ್ರ ಆಕಾಶ ಭೂಮಿಗಳಷ್ಟು ಹಿರಿದು. 'ದ್ಯೌಃ ಪಿತಾ ಪೃಥಿವೀ ಮಾತಾ' ಆಕಾಶ ಮತ್ತು ಭೂಮಿಯನ್ನು ಪ್ರತಿನಿಧಿಸುವ ಎರಡು ವಿಷಯಗಳು. ಭೂಮಿಯಲ್ಲಿ ಹಾಕಿದ ಬೀಜವು ಬೆಳೆಯುತ್ತದೆ. ವೃದ್ಧಿಗೆ ಕಾರಣವಾದು ಭೂಮಿ. ಅಂತೆಯೇ ಸಂತತಿ ಮುಂದುವರಿಯಲು ಸ್ತ್ರೀಯು ಕಾರಣವಷ್ಟೆ.  'ಪತ್ಯುರ್ನೋ ಯಜ್ಞಸಂಯೋಗೇ' ಎಂಬುದಾಗಿ ಪಾಣಿನಿ ಮಹರ್ಷಿಯು ಸಂಸ್ಕೃತ ವ್ಯಾಕರಣದಲ್ಲಿ ಪತ್ನಿ ಪದವನ್ನು ಹೀಗೆ ವಿವರಿಸಿದ್ದಾನೆ 'ಯಜ್ಞದಲ್ಲಿ ಸಹಕರಿಸುವವಳೇ ಪತ್ನೀ' ಎಂದು. ಪತ್ನಿ ಶಬ್ದಕ್ಕೆ ಭಾರ್ಯಾ, ಗೃಹಿಣೀ, ದ್ವಿತೀಯಾ, ಸಹಧರ್ಮಿಣೀ, ಜಾಯಾ, ದಾರಾ ಎಂಬಿತ್ಯಾದಿ ಪದಗಳಿವೆ. ಈ ಪದಗಳು ಪತ್ನಿಯಲ್ಲಿರುವ ಬಹುಮುಖವಾದ ಕಾರ್ಯಕ್ಷಮತೆಯನ್ನು ವಿವರಿಸುತ್ತವೆ. 

ವಿವಾಹದಲ್ಲಿ ಸಪ್ತಪದಿ ಎಂಬ ಭಾಗವುಂಟು. ಇಲ್ಲಿ ಗಂಡನಾದವನು ತನ್ನ ಪತ್ನಿಯನ್ನು ಏಳು ಹೆಜ್ಜೆಗಳನ್ನು ನಡೆಸುತ್ತಾನೆ. ಏಳು ಹೆಜ್ಜೆಗಳಿಂದ ನೀನು ಸಖನಾದೆ, ನಾವಿಬ್ಬರೂ ಈ ದಾಂಪತ್ಯಜೀವನದಲ್ಲಿ ಪರಸ್ಪರ ಅನ್ಯೋನ್ಯಭಾವದಿಂದ ಇರಬೇಕಾದವರು. ನೀನು ಇಂದಿನಿಂದ ನನ್ನ ಮಿತ್ರಳಾಗಿದ್ದೀಯಾ, ನನ್ನ ಇಹ ಮತ್ತು ಪರಗಳೆಂಬ ಎರಡು ವಿಧವಾದ ಬಾಳಾಟದಲ್ಲೂ ನೀನು ಸಹಧರ್ಮಚಾರಿಣೀ ಆಗಿದ್ದೀಯಾ, ಧರ್ಮದಲ್ಲಿ, ಅರ್ಥದಲ್ಲಿ ಮತ್ತು ಕಾಮದಲ್ಲಿ ಈ ಮೂರರಲ್ಲೂ ನಾನು ನಿನ್ನನ್ನು ಬಿಡದೆ ಮುನ್ನಡೆಸುವೆ, ಮೂರು ಲೋಕವಷ್ಟೇ ಅಲ್ಲ, ಸಪ್ತ ಊರ್ಧ್ವಲೋಕಗಳಲ್ಲಿ ಸಂಚರಿಸುವಾಗಲೂ ನೀನೇ ನನ್ನ ಸಹಚಾರೀ ಎಂಬಿತ್ಯಾದಿ ಮಾತುಗಳನ್ನು ಆಡಿ ವರನಾದವನು ವಿವಾಹದ ಆ ಶುಭಗಳಿಗೆಯಲ್ಲಿ ವಧುವಿನ ಸಂಪೂರ್ಣ ಹೊಣೆಗಾರಿಕೆಯನ್ನು ಹೊರುತ್ತಾನೆ. ಆಕೆಯೂ ಅಂತೆಯೇ ಅವನ ಜೀವನದುದ್ದಕ್ಕೂ ಮಿತ್ರಭಾವದಿಂದ ಇರಬೇಕಾಗುತ್ತದೆ. ಹೀಗೆ ಪ್ರಕೃತಿಸ್ವರೂಪಿಣಿಯಾಗಿ ಕುಟುಂಬದ ಸಮಸ್ತ ಭಾರವನ್ನು ವಹಿಸಿ ಜೀವನವನ್ನು ಮುನ್ನಡೆಸುವವಳೇ ಪತ್ನೀ. 

ಸೂಚನೆ : 16/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.