ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಇದರ ಜೊತೆಗೇ ಬರುವ ಪ್ರಶ್ನೆಗಳು ಹಲವು. ಅವರ ಅದೃಷ್ಟವು ಚೆನ್ನಾಗಿತ್ತೆಂದು ಅವರಿಗೆ ಇದೆಲ್ಲ ಸಾಧ್ಯವಾಯಿತೇ? ಅಥವಾ ಅವರಿಗೆ ತೊಂದರೆ ಕೊಡುವ ಶತ್ರುಗಳಾರೂ ಇರಲಿಲ್ಲವೆಂದೇ? ಅವರಿಗೆ ಅನುಕೂಲವಾಗಿದ್ದ ವಿಶಾಲ ಬಂಧುಸಮೂಹವಿತ್ತೇ? ಅಮಿತವಾದ ಜನಬಲ-ಧನಬಲಗಳಿದ್ದುವೇ? ಅವರಿಗೆ ಸದಾ ಉತ್ತಮಮಾರ್ಗದರ್ಶಕರು ಲಭ್ಯರಾಗಿದ್ದರೇ? ಹೊಟ್ಟೆಪಾಡಿಗಾಗಿ ದುಡಿಯಬೇಕೆನ್ನುವ ಆವಶ್ಯಕತೆಯೆಂಬುದಿಲ್ಲದೆ, ಖುಷಿಬಂದಂತೆ ಸಮಯವನ್ನು ಉಪಯೋಗಿಸಿಕೊಳ್ಳಲು ಸರ್ವವಿಧ-ಸೌಕರ್ಯಗಳಿದ್ದುವೇ? - ಎಂದೆಲ್ಲಾ ಪ್ರಶ್ನಪರಂಪರೆ ತೋರುವುದುಂಟು.
ಮಹಾತ್ಮರ ಜೀವನಚರಿತ್ರೆಗಳ ಪುಟಗಳನ್ನು ತಿರುವಿಹಾಕುತ್ತಾ ಹೋದಂತೆ, ಮೇಲೆ ಉಲ್ಲೇಖಿಸಿದ ಎಷ್ಟೋ ಕೆಲವು ಅಂಶಗಳು ಕೆಲವರಿಗೆ ಅನುಕೂಲವಾಗಿದ್ದುದು ತೋರಿಬರುತ್ತದೆ. ಎಲ್ಲರಿಗೂ ಎಲ್ಲವೂ ಹಾಗಿತ್ತೆಂದೇನಿಲ್ಲ. ಅಷ್ಟೇ ಅಲ್ಲ, ಬಹುಮಂದಿಗೆ ಪರಿಸ್ಥಿತಿಗಳು ಪ್ರತಿಕೂಲವಾಗಿದ್ದುವೆಂಬುದೇ ಗೋಚರವಾಗುತ್ತದೆ. (ಪ್ರತಿಕೂಲ ಎಂದರೆ ವಿರುದ್ಧ). ಯಾವ ಒಳ್ಳೆಯ ಕೆಲಸಕ್ಕೆ ಹೊರಟರೂ ಟೀಕಿಸುವ ಮಂದಿ ಹೇರಳವಾಗಿಯೇ ದೊರೆಯುತ್ತಾರೆ! ಎಷ್ಟೋ ವೇಳೆ, ಟೀಕೆಮಾಡುವವರನ್ನಾದರೂ ಎದುರಿಸಬಹುದು, ಗೇಲಿ ಮಾಡುವವರನ್ನು ಎದುರಿಸುವುದು ಕಷ್ಟವೇ ಸರಿ.
ಭಾರತದ ಅಧ್ಯಾತ್ಮಸಂಪತ್ತಿನತ್ತ ಜಗತ್ತಿನ ಕಣ್ತೆರೆಸಿದ ಸ್ವಾಮಿವಿವೇಕಾನಂದರ ಕಣ್ಣನ್ನು ತೆರೆಸಿದ ಶ್ರೀರಾಮಕೃಷ್ಣ ಪರಮಹಂಸರಿಗೆ ಹುಚ್ಚನೆಂಬ ಪಟ್ಟೆಯನ್ನೇ ಅವರ ಕೆಲವು ಸಮಕಾಲೀನರು ಕಟ್ಟಿದ್ದುಂಟು. ಇಂದು ಪ್ರಪಂಚದಲ್ಲೇ ಅತಿದೊಡ್ಡಸಂಸ್ಥೆಯೆಂದು ಹೆಸರು ಮಾಡಿರುವ, ಶಿಸ್ತು-ದೇಶಭಕ್ತಿಗಳಿಗೆ ಪರ್ಯಾಯವೆನಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ|| ಹೆಡಗೇವಾರರನ್ನು 'ಗವಾರ'ನೆಂದೇ ಗಣಿಸಿದ್ದವರಿದ್ದರು. ಇವರಿಬ್ಬರಿಗೂ ಬಡತನದ ಭಾಗ್ಯವೂ ಜೊತೆಯಾಗಿಯೇ ಬಂದಿತ್ತು. ಯೋಗವಿದ್ಯೆಯ ಅಂತರಂಗ-ಬಹಿರಂಗಗಳನ್ನು ಕರತಲಾಮಲಕವಾಗಿ ಕಂಡುಕೊಂಡವರಾಗಿ ಬೌದ್ಧಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಭಾರತೀಯಸಂಸ್ಕೃತಿಯ ಶಾಸ್ತ್ರ-ಪ್ರಯೋಗಗಳಲ್ಲಿ ಪ್ರವೀಣರೆನಿಸಿದ್ದ ಶ್ರೀರಂಗಮಹಾಗುರುಗಳೂ ಬಡತನಕ್ಕೆ ಅಪರಿಚಿತರೇನಾಗಿರಲಿಲ್ಲ. ಇವೆಲ್ಲಾ ಆಧುನಿಕ ಉದಾಹರಣೆಗಳೇ.
ಮೇಲೆ ಉಲ್ಲೇಖೀಸಿದ ಮಂದಿಯಲ್ಲಿಒಂದು ಸಾಮ್ಯವನ್ನಂತೂ ಕಾಣಬಹುದು: ತಮ್ಮ ಜೀವನದ ಗುರಿಯ ಬಗೆಗಿನ ಖಚಿತವಾದ ನೋಟವು ಸಾಕಷ್ಟು ಸಣ್ಣ ವಯಸ್ಸಿನಲ್ಲಿಯೇ ಅವರಿಗೆ ಮೂಡಿತ್ತು. ಸಾಕಷ್ಟು ಕಷ್ಟಗಳನ್ನು ಎದುರಿಸಿಯೇ ತಮ್ಮ ಧ್ಯೇಯವನ್ನು ಅವರು ಸಾಧಿಸುವುದಾಯಿತು. ಅವರೆಲ್ಲರ ಹೃದಯದಲ್ಲಿ ತಮ್ಮ ಜೀವನಲಕ್ಷ್ಯದ ಅರಿವು ಸದಾ ಜ್ವಲಿಸುತ್ತಿತ್ತು.
ಧ್ಯೇಯಸಾಧನೆಗೆ ಅಷ್ಟೇ ಸಾಲದು: ಅದಕ್ಕಾಗಿ ಹೊರಗಡೆಯ ಪ್ರತಿಕೂಲಸಂನಿವೇಶಗಳನ್ನೂ ಅನುಕೂಲವಾಗಿಸಿಕೊಳ್ಳುತ್ತಲೇ ಹೋಗಬೇಕಾಗುವುದು. ಆದುದರಿಂದ ಹೊರಮುಖವಾದ ನೋಟವೂ ಸದಾ ಸ್ಫುರಿಸುತ್ತಿರಬೇಕಾದುದೂ ಮುಖ್ಯವೇ. ಯಾವನು ಜ್ವಲಂತವಾದ ಶ್ರೇಷ್ಠಾದರ್ಶವನ್ನು ಹೃದಯದಲ್ಲಿ ಸದಾ ಧರಿಸಿರುವನೋ, ಹಾಗೂ ಅದಕ್ಕಾಗಿ ಸಲ್ಲುವ ಲೋಕವ್ಯವಹಾರವನ್ನೇ ಜಾಗರೂಕತೆಯಿಂದ ನಡೆಸುವನೋ, ಆತನನ್ನೇ ಪುರುಷನೆನ್ನುವುದು!
ಇಬ್ಬರೇ ಇಂತಹ ಪುರುಷರೆನ್ನುತ್ತದೆ, ಮಹಾಭಾರತ. ಇವರಿಬ್ಬರೂ "ಸೂರ್ಯಮಂಡಲವನ್ನು ಭೇದಿಸಿ ಹೋಗುವರು" - ಎನ್ನುತ್ತದೆ, ವ್ಯಾಸಕೃತಿ. (ಸೂರ್ಯಮಂಡಲವನ್ನು ಭೇದಿಸಿಹೋಗುವರೆಂದರೆ ಸಾಕ್ಷಾನ್ಮೋಕ್ಷವನ್ನು ಪಡೆಯುವವರೆಂದೇ ಅರ್ಥ.) ಯಾರೀ ಇಬ್ಬರು ಪರಮಸಾಧಕರು?: ಯೋಗಯುಕ್ತನಾದ ಪರಿವ್ರಾಜಕನೊಬ್ಬ; ರಣಭೂಮಿಯಲ್ಲಿ ಶತ್ರುವಿಗೆ ಅಭಿಮುಖವಾಗಿ ಸಾವನ್ನಪ್ಪುವ ಸೈನಿಕ ಮತ್ತೊಬ್ಬ.
ರಿಪುವಿನೊಂದಿಗೆ ರಣಾಂಗಣದಲ್ಲಿ ವೀರಾವೇಶದಿಂದ ಹೋರಾಡುವವನಲ್ಲಿಯ ಹಿರಿಮೆಯೇನು? "ಸಾವು ಬಂದರೂ ನಾ ಹೆದರೆ, ನನ್ನ ದೇಶಕ್ಕಾಗಿ ನನ್ನ ಸರ್ವಸ್ವವನ್ನೂ – ಪ್ರಾಣವನ್ನೂ – ಅವಶ್ಯವಿದ್ದರೆ ತ್ಯಜಿಸುವೆ"- ಎನ್ನುವ ದೃಢಸಂಕಲ್ಪ ಆತನದು. ಯೋಗಸಾಧನೆಗಾಗಿ ಶ್ರಮಿಸುವವನ ಬಗೆಯೂ ಹಾಗೆಯೇ: ಅಂತಃಶತ್ರುಗಳ ವಿರುದ್ಧ ಆತನ ಹೋರಾಟ. ಯೋಧನ ಲಕ್ಷ್ಯವು ಹೃದಯದಲ್ಲಿ: "ನನ್ನದೆಲ್ಲವನ್ನೂ ಬಿಡಬಲ್ಲೆ; ಸಾವನ್ನೇ ಎದುರಿಸಬಲ್ಲೆ, ಶತ್ರುಗಳ ಮೇಲೆ ಸದಾ ಕಣ್ಣಿಟ್ಟೇ ಇರುವೆ" - ಎನ್ನುವ ಜಾಗರೂಕತೆ ಆತನದು.
ಯೋಗವಿದ್ಯೆಯ ಬಗೆಯೂ ತೀರ ಬೇರೆಯೇನಲ್ಲ. ಯೋಗದ ಉನ್ನತ ಸ್ಥಿತಿಯಲ್ಲಿ ಭಗವಂತನಲ್ಲಿ ಪ್ರಾಣಾರ್ಪಣವೇ ಘಟಿಸಿರುವುದು. ಆ ಸ್ಥಿತಿಯನ್ನು ಶ್ರೀರಂಗಮಹಾಗುರುಗಳು ಪ್ರಯೋಗಪೂರ್ವಕವಾಗಿ ತೋರಿಸಿಕೊಟ್ಟಿದ್ದರು: ಆಗ ಹೊರಕ್ಕೆ ಕಣ್ಣು ಬಿಟ್ಟಿ(ಟ್ಟಂತಿ)ರುವುದು; ಅಂತರ್ಲಕ್ಷ್ಯವಾದ ಸಮಾಧಿಯಲ್ಲಿ ಮನಸ್ಸು ನೆಟ್ಟಿರುವುದು.
ಜಗತ್ತಿನ ಬಂಧನಗಳನ್ನು ಕೊಡವಿಕೊಂಡು ವಿಶ್ವಾತೀತದಲ್ಲಿ ಒಂದಾಗುವ ಬಗೆಯೇ ಇಬ್ಬರಲ್ಲೂ - ಸರ್ವತ್ಯಾಗಿಯಾದ ಯೋಧ, ಸರ್ವತ್ಯಾಗಿಯಾದ ಯೋಗಿ.
ಅಂತರ್ಲಕ್ಷ್ಯಂ ಬಹಿರ್ದೃಷ್ಟಿಃ - ಎಂಬ ಯೋಗಶಾಸ್ತ್ರದ ಅದ್ಭುತವಾದ ಉಕ್ತಿಯು ಇವರಿಬ್ಬರಲ್ಲಿಯ ದಿವ್ಯಸಾಮ್ಯವನ್ನೇ ಹೇಳುವಂತಿಲ್ಲವೇ?