Sunday, April 9, 2023

ವ್ಯಾಸ ವೀಕ್ಷಿತ - 33 ವ್ಯಾಸಾಗಮನ; ಕಥಾಕಥನ (Vyaasa Vikshita-33 Vyasagamana: Kathakathana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಪಾಂಚಾಲದೇಶಕ್ಕೇ ಎಲ್ಲರೂ ಹೋಗಿಬಿಡೋಣವೆಂದು ಕುಂತಿಯು ಯುಧಿಷ್ಠಿರನಿಗೆ ಸೂಚಿಸಿದಳಷ್ಟೆ. ಅದಕ್ಕೆ ಯುಧಿಷ್ಠಿರನೂ, "ಏನು ಮಾಡುವುದೆಂದು ನಿನ್ನ ಮನಸ್ಸಿಗೆ ಬಂದಿದೆಯೋ ಅದುವೇ ನಮಗೆ ಅತ್ಯಂತ ಹಿತವಾದದ್ದು. ಆದರೆ, ಹೋಗುವುದೋ ಬೇಡವೋ ಎಂಬುದರ ಬಗ್ಗೆ ಅನುಜರ (ಎಂದರೆ ತಮ್ಮಂದಿರ) ಮನಸ್ಸು ಹೇಗಿರುವುದೋ ನಾನರಿಯೆ" ಎಂದನು. ಆಗ ಕುಂತಿಯು ಭೀಮಾರ್ಜುನರಿಗೂ ನಕುಲಸಹದೇವರಿಗೂ, ಪಂಚಾಲಕ್ಕೆ ಹೋಗಬಹುದೆನ್ನುವ ವಿಷಯವನ್ನು ಹೇಳಿದಳು. ಅವರೂ ಸಹ ಆಗಲೆಂದರು.

ಇಲ್ಲಿಯವರೆಗೆ ಆಶ್ರಯಕೊಟ್ಟಿದ್ದ ಆ ಬ್ರಾಹ್ಮಣನನ್ನು ಬೀಳ್ಕೊಟ್ಟು, ಮಹಾತ್ಮನಾದ ದ್ರುಪದನ ರಮಣೀಯವಾದ ನಗರಿಗೆ, ಮಕ್ಕಳೊಂದಿಗೆ ಕುಂತಿಯು ಅಲ್ಲಿಂದ ಹೊರಡುವುದಾಯಿತು.

ಮಹಾತ್ಮರಾದ ಪಾಂಡವರಿನ್ನೂ ಛದ್ಮವೇಷದಲ್ಲಿದ್ದಾಗಲೇ ಅವರನ್ನು ಕಾಣಲೆಂದು ಸತ್ಯವತೀಪುತ್ರರಾದ ವ್ಯಾಸರು ಆಗಮಿಸಿದರು. ಅವರು ಬರುತ್ತಿರುವುದನ್ನು ಕಾಣುತ್ತಲೇ, ಪಾಂಡವರು ಹೋಗಿ ಅವರನ್ನು ಎದುರ್ಗೊಂಡರು. ನಮಸ್ಕಾರ-ಅಭಿವಾದನಗಳನ್ನು ಮಾಡಿದರು. ಬದ್ಧಾಂಜಲಿಗಳಾಗಿ (ಎಂದರೆ ಕೈಜೋಡಿಸಿದವರಾಗಿ) ನಿಂತುಕೊಂಡರು. ವ್ಯಾಸರು ಅವರೆಲ್ಲರಿಗೂ ಕುಳಿತುಕೊಳ್ಳಲು ಅನುಮತಿಯಿತ್ತರು; ರಹಸ್ಯವಾಗಿ ತಮ್ಮನ್ನು ಪೂಜಿಸಿದ ಆ ಪಾಂಡವರನ್ನು ಕುರಿತು, ಪ್ರೀತಿಪೂರ್ವಕವಾಗಿ ಹೀಗೆ ಕೇಳಿದರು: "ವೀರರೇ ನೀವುಗಳು ಧರ್ಮದಿಂದಲೂ ಶಾಸ್ತ್ರಾನುಸಾರಿಯಾಗಿಯೂ ಜೀವನವನ್ನು ನಡೆಸುತ್ತಿದ್ದೀರಲ್ಲವೆ? ಪೂಜಾರ್ಹರಾದ ವಿಪ್ರರ ವಿಷಯದಲ್ಲಿ ತಮ್ಮ ಆದರವು ಕಡಿಮೆಯಾಗಿಲ್ಲ ತಾನೆ?" – ಎಂದು.

ಹೀಗೆ ಧರ್ಮಾರ್ಥವಾದ (ಎಂದರೆ ಧರ್ಮದ ಗುರಿಯನ್ನುಳ್ಳ) ಮಾತುಗಳನ್ನಾಡಿ, ಆ ಪೂಜ್ಯರಾದ ಋಷಿಯು ವಿಚಿತ್ರವಾದ ನಾನಾಕಥೆಗಳನ್ನೂ ಹೇಳುತ್ತಾ ಮತ್ತೆ ಹೀಗೆ ಹೇಳಿದರು:


"ತಪೋವನವೊಂದರಲ್ಲಿ, ಮಹಾತ್ಮನಾದ ಋಷಿಯೊಬ್ಬನ ಕನ್ಯೆಯೊಬ್ಬಳಿದ್ದಳು. ಅವಳು ರೂಪವತಿ, ಗುಣಶಾಲಿನಿ. ಆದರೆ ತಾನು ಮಾಡಿದ ಕರ್ಮಗಳಿಂದಾಗಿ ಆಕೆಯು ದೌರ್ಭಾಗ್ಯವತಿಯಾದಳು: ಎಂದರೆ, ತಾನು ಸುರೂಪಳಾಗಿದ್ದರೂ ಸಹ ಪತಿಯೊಬ್ಬನನ್ನು ಪಡೆಯಲಾಗಲಿಲ್ಲ. ಸುಖವಿಲ್ಲದ ಆಕೆ, ಪತಿಪ್ರಾಪ್ತಿಗಾಗಿ ತಪಸ್ಸನ್ನು ಆರಂಭಿಸಿದಳು. ತನ್ನ ಉಗ್ರವಾದ ತಪಸ್ಸಿನಿಂದ ಶಂಕರನನ್ನು ಮೆಚ್ಚಿಸಿದಳು. ಅವಳ ವಿಷಯದಲ್ಲಿ ಭಗವಂತನು ತುಷ್ಟನಾದನು. ಆ ಯಶಸ್ವಿನಿಯನ್ನು ಕುರಿತು ಹೇಳಿದನು: ನಿನಗೆ ಒಳ್ಳೆಯದಾಗಲಿ. ವರವನ್ನು ಕೇಳಿಕೋ. ವರಪ್ರದನಾದ ಶಂಕರನು ನಾನು - ಎಂದನು.

ಸ್ವಹಿತಕ್ಕಾಗಿ ಆಗ ಆಕೆ ಈಶ್ವರನನ್ನು ಕುರಿತು, "ಸರ್ವಗುಣಗಳಿಂದ ಕೂಡಿದ ಪತಿಯನ್ನು ನಾನು ಬಯಸುವೆ" - ಎಂಬುದಾಗಿ ಮತ್ತೆ ಮತ್ತೆ ಹೇಳಿದಳು. ಅವಳನ್ನು ಕುರಿತು ಈಶಾನನು (ಎಂದರೆ ಶಂಕರನು) "ಭರತವಂಶಸಂಜಾತರಾದ ಐದು ಮಂದಿ ನಿನಗೆ ಗಂಡಂದಿರಾಗುವರು" - ಎಂದನು. ಆಗ ಆ ಕನ್ಯೆಯು, "ದೇವ, ನಿನ್ನ ಪ್ರಸಾದದಿಂದ ಒಬ್ಬ ಪತಿಯನ್ನು ನಾನು ಬಯಸುವೆ" ಎಂದು ವರದನಾದ ದೇವನಿಗೆ ಹೇಳಿದಳು. ಆಗ ದೇವನು ಈ ಉತ್ತಮವಾದ ಮಾತನ್ನು ಹೇಳಿದನು: 'ಪತಿಂ ದೇಹಿ' ಎಂಬುದಾಗಿ ಐದು ಬಾರಿ ನೀನು ಹೇಳಿದೆಯಲ್ಲವೆ? ಇದೋ, ಮತ್ತೊಂದು ದೇಹವನ್ನು ನೀನು ಪಡೆಯುವೆಯಲ್ಲಾ, ಆಗ ಹೇಳಿದಂತೆ ನಡೆಯುತ್ತದೆ."

ಹೀಗೆ ಹೇಳಿ, ದೇವರೂಪಿಣಿಯಾದ ಆ ಕನ್ಯೆಯು ಈಗ ದ್ರುಪದನ ಕುಲದಲ್ಲಿ ಜನಿಸಿದ್ದಾಳೆ. ಆಕೆ ನಿಮ್ಮ ಪತ್ನಿಯಾಗಬೇಕೆಂಬ ವಿಧಿವಿಹಿತವಿಲ್ಲಿದೆ. ಆದ್ದರಿಂದ, ಮಹಾಬಲರೇ, ಪಾಂಚಾಲನಗರದಲ್ಲಿ ವಾಸಮಾಡಿರಿ. ಅವಳನ್ನು ಪಡೆದು ಸುಖಿಗಳಾಗಿರುವಿರಿ, ಇದಕ್ಕೆ ಸಂಶಯವಿಲ್ಲ – ಎಂದು ಹೇಳಿ ಹೊರಟರು.

ಸೂಚನೆ : 9/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.