Sunday, April 30, 2023

ವ್ಯಾಸ ವೀಕ್ಷಿತ - 36 ಪ್ರಾಣದಾನವಿತ್ತುದಕ್ಕೆ ಗಂಧರ್ವನ ಪ್ರತಿದಾನ (Vyaasa Vikshita - 36 Pranadanavittudakke Gandharvana Pratidana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ರಥವನ್ನು ಕಳೆದುಕೊಂಡು ತತ್ತರಿಸಿಹೋಗಿದ್ದ, ಆ ಗಂಧರ್ವನು ಕಂಗಾಲಾಗಿ ಕೆಳಮುಖವಾಗಿ ಬಿದ್ದನು! ಆತನು ಬೀಳುತ್ತಿರುವಷ್ಟರಲ್ಲೇ ಧನಂಜಯನು (=ಅರ್ಜುನನು) ಹೋಗಿ, ಹೂಮಾಲೆಗಳ ಅಲಂಕಾರಗಳಿದ್ದ ಆತನ ಜುಟ್ಟನ್ನು ಹಿಡಿದುಕೊಂಡನು. ತನ್ನ ಅಸ್ತ್ರಪ್ರಹಾರದಿಂದಾಗಿ ಪ್ರಜ್ಞಾಶೂನ್ಯನಾಗಿದ್ದ ಆತನನ್ನು ತನ್ನ ಸೋದರರ ಬಳಿಗೆ ದರದರನೆ ಎಳೆದುಕೊಂಡುಹೋದನು. ಆಗ ಆ ಗಂಧರ್ವನ ಪತ್ನಿಯಾದ ಕುಂಭೀನಸಿಯು ಯುಧಿಷ್ಠಿರನಿಗೆ ಶರಣಾದಳು. ಪತಿಪ್ರಾಣವನ್ನು ಉಳಿಸಿಕೊಳ್ಳಲು ಕೇಳಿಕೊಂಡಳು: ಮಹಾತ್ಮನೇ, ನನ್ನ ಕಾಪಾಡು, ನನ್ನೀ ಪತಿಯನ್ನು ಬಿಟ್ಟುಬಿಡು. ಪ್ರಭುವೇ, ನಾನು ಈ ಗಂಧರ್ವನ ಪತ್ನಿ, ನಿನ್ನನ್ನು ಮೊರೆಹೊಕ್ಕಿದ್ದೇನೆ" ಎಂದಳು.

ಅದಕ್ಕೆ ಯುಧಿಷ್ಠಿರನು ಹೇಳಿದನು: "ಶತ್ರುಸಂಹಾರಕ ಅರ್ಜುನ, ಯುದ್ಧದಲ್ಲಿ ಸೋತವನನ್ನೂ ಕೀರ್ತಿರಹಿತನನ್ನೂ, ನಾರಿಯಿಂದ ಕಾಪಾಡಲ್ಪಡಬೇಕಾದವನನ್ನೂ, ಪರಾಕ್ರಮರಹಿತನನ್ನೂ ಯಾರು ತಾನೆ ಕೊಂದಾರು? ಆದ್ದರಿಂದ ಈತನನ್ನು ಬಿಟ್ಟುಬಿಡು" ಎಂದನು. ಅದಕ್ಕೆ ಅರ್ಜುನನು, "ಬದುಕಿಕೋ ಗಂಧರ್ವ, ಹೋಗು. ದುಃಖಿಸಬೇಡ. ಕುರುರಾಜನಾದ ಯುಧಿಷ್ಠಿರನು ನಿನಗೆ ಅಭಯವನ್ನು ಅಪ್ಪಣೆಕೊಡಿಸಿದ್ದಾನೆ" ಎಂದನು.

ಆಗ ಗಂಧರ್ವನು ಹೇಳಿದನು: "ನಾನೀಗ ಸೋತಿದ್ದೇನೆ; ಎಂದೇ ಅಂಗಾರಪರ್ಣ ಎಂಬ ಹಿಂದಿನ ಹೆಸರನ್ನು ತೊರೆಯುತ್ತೇನೆ. ಇನ್ನು ಮುಂದೆ ನಾನು ನನ್ನ ಬಲದ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ; ಹಾಗೂ ಜನಸಮೂಹದಲ್ಲಿ ನನ್ನ ಆ ಹೆಸರನ್ನೂ ಹೇಳಿಕೊಳ್ಳುವುದಿಲ್ಲ. ಇದೋ ನನಗೊಂದು ಒಳ್ಳೆಯ ಲಾಭವೇ ಆಯಿತು. ಏಕೆಂದರೆ ಈ ಅರ್ಜುನನು ದಿವ್ಯಾಸ್ತ್ರಧಾರಿ. ಈತನಿಗೆ ಗಾಂಧರ್ವೀಮಾಯೆಯನ್ನು ಉಪದೇಶಿಸಲು ಇಚ್ಛಿಸುತ್ತೇನೆ. ನನ್ನ ರಥ ಉತ್ತಮವಾದದ್ದು. ವಿಚಿತ್ರವಾದದ್ದು; ಅಂತಹದು ಈತನ ಅಸ್ತ್ರದ ಅಗ್ನಿಯಿಂದ ಸುಟ್ಟುಹೋಗಿದೆ. ಹೀಗಾಗಿ ನಾನು "ಚಿತ್ರರಥ"ನೆನಿಸಿಕೊಂಡಿದ್ದವನು ಈಗ "ದಗ್ಧರಥ" (ಸುಟ್ಟುಹೋದ ರಥದವ)ನಾಗಿಬಿಟ್ಟಿದ್ದೇನೆ! ನಾನು ಹಿಂದೆ ತಪಸ್ಸಿನಿಂದ ಸಂಪಾದಿಸಿದ ವಿದ್ಯೆಯಿದು. ನನಗೆ ಪ್ರಾಣದಾನವನ್ನು ಮಾಡಿರುವ ಮಹಾತ್ಮನಿಗೆ (ಎಂದರೆ ಅರ್ಜುನನಿಗೆ) ಆ ವಿದ್ಯೆಯನ್ನು ಕೊಡುವೆ.

ತನ್ನ ಬಲದಿಂದ ಶತ್ರುವನ್ನು ಸ್ತಂಭನಗೊಳಿಸಿದ ಮೇಲೆ, ಸೋತು ಶರಣಾದ ರಿಪುವಿಗೆ ಯಾವನು ಪ್ರಾಣದಾನಮಾಡುತ್ತಾನೋ ಆತನು ಯಾವ ಕಲ್ಯಾಣಕ್ಕೆ (ಮಂಗಳಕ್ಕೆ) ಅನರ್ಹನಾದಾನು? ಎಲ್ಲ ಒಳ್ಳೆಯದಕ್ಕೂ ಆತನು ಅರ್ಹನೇ ಸರಿ. ಇದೋ "ಚಾಕ್ಷುಷೀ" ಎಂಬ ವಿದ್ಯೆಯಿದು. ಇದನ್ನು ಮನುವು ಸೋಮನಿಗಿತ್ತನು; ಅದನ್ನಾತನು ವಿಶ್ವಾವಸುವಿಗಿತ್ತನು; ವಿಶ್ವಾವಸುವು ನನಗಿತ್ತನು. ಗುರುವೇ ಕೊಟ್ಟಿದ್ದರೂ ಹೇಡಿಯ ಕೈ ಸೇರಿದರೆ ಈ ವಿದ್ಯೆಯು ನಷ್ಟವಾಗಿಬಿಡುವುದು! ಇದು ನನಗೆ ಬಂದುದು ಹೇಗೆಂಬುದನ್ನು ಹೇಳಿದೆನಲ್ಲವೆ? ಅದರ ಶಕ್ತಿಯೆಂತಹುದೆಂಬುದನ್ನು ಹೇಳುವೆ, ಕೇಳು.

ಮೂರು ಲೋಕಗಳಲ್ಲಿ ಯಾವುದನ್ನಾದರೂ ನೋಡಲು ಬಯಸಿದಲ್ಲಿ ಈ ವಿದ್ಯೆಯಿಂದಾಗಿ ಅದನ್ನು ಕಾಣಬಹುದು -  ಅದನ್ನು ಹೇಗೆ ನೋಡಲು ಬಯಸುವನೋ ಹಾಗೆ (ಎಂದರೆ ಸ್ಥೂಲವಾಗಿಯಾದರೂ/ಸೂಕ್ಷ್ಮವಾಗಿಯಾದರೂ.) ಈ ವಿದ್ಯೆಯನ್ನು ಪಡೆಯುವುದೂ ಸುಲಭವೇನಲ್ಲ: ಆರು ತಿಂಗಳು ಒಂಟಿಕಾಲಿನ ಮೇಲೆ ನಿಂತು ತಪಸ್ಸು ಮಾಡಬೇಕಾಗುತ್ತದೆ. ನೀನು ಈ ಯಾವ ತಪಸ್ಸನ್ನು ಮಾಡದಿದ್ದರೂ ನಾನಿದನ್ನು ನಿನಗೆ ಸ್ವತಃ ಉಪದೇಶಿಸುವೆ. ಈ ವಿದ್ಯೆಯಿಂದಾಗಿಯೇ ಓ ರಾಜನೇ, ಮನುಷ್ಯರಿಗಿಂತಲೂ ನಾವು (ಎಂದರೆ ಗಂಧರ್ವರು) ಶ್ರೇಷ್ಠರಾಗಿರುವೆವು. ಹಾಗೂ ದೇವತೆಗಳಿಗೆ ಸರಿಸಮವೆನಿಸುವ ಪ್ರಭಾವವನ್ನು ತೋರಿಸಬಲ್ಲೆವು.

ಸೂಚನೆ : 30/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.