Monday, April 24, 2023

ವ್ಯಾಸ ವೀಕ್ಷಿತ - 35 ಗಂಧರ್ವನ ಮೇಲೆ ಅರ್ಜುನನ ಅಸ್ತ್ರ-ಪ್ರಯೋಗ (Vyaasa Vikshita - 35 Gandharvana Mele Arjunana Astra-prayoga)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಗಂಧರ್ವನ ಮೂದಲಿಕೆಯ ಮಾತುಗಳಿಂದ ಅರ್ಜುನನು ಕೆರಳಿದನು. ಮತ್ತು ಹೇಳಿದನು:


ಸಮುದ್ರ, ಹಿಮಾಲಯ, ಈ ಗಂಗಾನದಿ - ಇವುಗಳ ಮೇಲೆ, ರಾತ್ರಿಯಾಗಲಿ ಹಗಲಾಗಲಿ ಸಂಧ್ಯಾಕಾಲದಲ್ಲಾಗಲಿ, ಯಾರ ಅಧಿಕಾರ ಸುರಕ್ಷಿತವಾಗಿದೆ? ನದಿಗಳಲ್ಲಿ ಶ್ರೇಷ್ಠವೆನಿಸಿದ ಈ ಗಂಗೆಗೆ ಬರಲು ಕಾಲನಿಯಮವಿರದು; ಉಂಡವನೋ ಹಸಿದವನೋ, ರಾತ್ರಿಯೋ ಹಗಲೋ, ಯಾವಾಗಲಾದರೂ ಬರಬಹುದು. ನಾವು ಶಕ್ತಿಸಂಪನ್ನರು. ಅಕಾಲದಲ್ಲಿಯೇ ನಿನ್ನನ್ನು ಕೆಣಕುತ್ತಿದ್ದೇವೆಂದುಕೋ. ಕ್ರೂರನೇ! ನಿಮ್ಮೊಂದಿಗೆ ಯುದ್ಧ ಮಾಡಲು ಅಶಕ್ತರಾದ ಮಾನವರಷ್ಟೇ ನಿಮ್ಮನ್ನು ಅರ್ಚಿಸುವುದು!


ಅಷ್ಟೇ ಅಲ್ಲ. ಈ ಗಂಗೆಯೇನು ಸಾಮಾನ್ಯಳೇ?: ಈಕೆಯು ಹುಟ್ಟಿದುದು ಹಿಮಾಲಯದ ಹೇಮಶೃಂಗದಿಂದ (ಎಂದರೆ ಚಿನ್ನದ ಶಿಖರದಿಂದ). ಸಮುದ್ರವನ್ನು ಸೇರುವ ಗಂಗೆಯು ಏಳಾಗಿ ವಿಭಾಗವಾದಳು - ಗಂಗೆ, ಯಮುನೆ, ಪ್ಲಕ್ಷಜೆ (=ಸರಸ್ವತೀ), ರಥಸ್ಥಾ, ಸರಯೂ, ಗೋಮತೀ, ಮತ್ತು ಗಂಡಕೀ - ಎಂಬುದಾಗಿ. ಈ ಏಳು ನದಿಗಳ ಜಲವನ್ನು ಪಾನಮಾಡಿದವರಿಗೆ ಪಾಪವೆಂಬುದುಳಿಯದು. ಶುದ್ಧಳಾದ ಈ ಗಂಗೆಯು ಆಕಾಶದಲ್ಲಿ ಪ್ರವಹಿಸುತ್ತಾ "ಅಲಕನಂದಾ" ಎಂಬ ಹೆಸರನ್ನು ಪಡೆಯುತ್ತಾಳೆ; ಹಾಗೆಯೇ ಪಿತೃಲೋಕದಲ್ಲಿ "ವೈತರಣೀ" ಎಂಬ ಹೆಸರನ್ನು ಹೊಂದುತ್ತಾಳೆ. ಪಾಪಕರ್ಮಗಳುಳ್ಳವರಿಗೆ ದುಸ್ತರವಾದ (ಎಂದರೆ ದಾಟಲು ಅಸಾಧ್ಯವಾದ) ನದಿಯಿದು; ಕಲ್ಯಾಣಮಯವಾದ ದೇವನದಿಯಿದು; ಶುಭವಾದದ್ದು. ಎಂದೇ ಸ್ವರ್ಗವನ್ನೂ ಸಂಪಾದಿಸಿಕೊಡತಕ್ಕದ್ದು. ಅಂತಹ ನದಿಯನ್ನು ಪ್ರತಿಬಂಧಿಸಲು ನೀನು ಅದೆಂತು ಇಚ್ಛಿಸುವೆ? ಹೀಗೆ ಮಾಡುವುದು ಸನಾತನವಾದ ಧರ್ಮವಲ್ಲ. ಯಾರಿಂದಲೂ ನಿರ್ಬಂಧಪಡಿಸಲು ಸಾಧ್ಯವಾಗದಂತಹುದು ಈ ಪುಣ್ಯಗಂಗಾಜಲವೆಂಬುದು. ನೀನು ಹೇಳಿಬಿಟ್ಟೆಯೆಂಬಷ್ಟೇ ಕಾರಣಕ್ಕೆ ನಾವು ಮುಟ್ಟದಿರುವುದೆಂತು? ಯಥೇಷ್ಟವಾಗಿ ಮುಟ್ಟುವೆವು - ಎಂದನು.


ಅದನ್ನು ಕೇಳಿ ಕೋಪಗೊಂಡ  ಆ ಗಂಧರ್ವನಾದ ಅಂಗಾರಪರ್ಣನು ತನ್ನ ಬಿಲ್ಲನ್ನು ಬಗ್ಗಿಸಿದನು. ಚೂಪಾದವೂ ವಿಷಸರ್ಪಗಳಂತಿದ್ದವೂ ಆದ ಬಾಣಗಳನ್ನು ಅರ್ಜುನನ ಮೇಲೆ ಬಿಟ್ಟನು. ಅರ್ಜುನನು ತನ್ನ ಕೈಯಲ್ಲಿದ್ದ ಪಂಜನ್ನೇ ವರಸೆವರಸೆಯಾಗಿ ಬಿರುಸಿನಿಂದ ತಿರುಗಿಸುತ್ತಾ, ತನ್ನ ಉತ್ತರೀಯವನ್ನೂ ಆಡಿಸುತ್ತಾ ಆತನ ಎಲ್ಲಾ ಬಾಣಗಳನ್ನೂ ನಿವಾರಿಸಿಕೊಂಡನು. ಮತ್ತು ಹೇಳಿದನು:


"ಗಂಧರ್ವನೇ, ನಿನ್ನ ಬೆದರಿಕೆಯು ಅಸ್ತ್ರಜ್ಞರ ಮೇಲೆ ನಡೆಯದು. ಅಸ್ತ್ರಜ್ಞರ ಮೇಲೆ ಪ್ರಯೋಗಿಸಲ್ಪಟ್ಟರೆ ಅದು ನೊರೆಯ ಹಾಗೆ ಕರಗಿಹೋಗುತ್ತದೆ, ಅಷ್ಟೆ. ಗಂಧರ್ವರೆಲ್ಲರೂ ಮನುಷ್ಯರನ್ನು ಮೀರಿಸಿರುವವರು - ಎಂಬುದನ್ನು ನಾನು ಬಲ್ಲೆ. ಎಂದೇ ನಾನು ದಿವ್ಯಾಸ್ತ್ರದಿಂದ ನಿನ್ನೊಂದಿಗೆ ಹೋರಾಡುವೆ, ಮಾಯಾಯುದ್ಧದಿಂದಲ್ಲ. ಇದೋ ಈ ಆಗ್ನೇಯಾಸ್ತ್ರ: ಇದನ್ನು ಹಿಂದೆ ಬೃಹಸ್ಪತಿಯು ಭರದ್ವಾಜರಿಗೆ ಕೊಟ್ಟನು (ಬೃಹಸ್ಪತಿಯಂತೂ ಶತಕ್ರತುವಿಗೆ (ಅಂದರೆ ಇಂದ್ರನಿಗೆ) ಆಚಾರ್ಯನೆನಿಸಿದವನು). ಭರದ್ವಾಜರು ಅಗ್ನಿವೇಶರಿಗೂ, ಅವರು ನನ್ನ ಗುರುಗಳಾದ ದ್ರೋಣರಿಗೂ ಇದನ್ನು ಕೊಟ್ಟರು. ಬ್ರಾಹ್ಮಣರಲ್ಲಿ ಶ್ರೇಷ್ಠರೆನಿಸುವ ದ್ರೋಣರು ಇದನ್ನು ನನಗೆ ಚೆನ್ನಾಗಿಯೇ ಉಪದೇಶಿಸಿರುವರು" ಎಂದನು.


ಹೀಗೆಂಬುದಾಗಿ ಹೇಳಿ, ಕೋಪಗೊಂಡಿದ್ದ ಆ ಅರ್ಜುನನು ಚೆನ್ನಾಗಿ ಜ್ವಲಿಸುವ ಆಗ್ನೇಯಾಸ್ತ್ರವನ್ನು ಆ ಗಂಧರ್ವನ ಮೇಲೆ ಪ್ರಯೋಗಿಸಿದನು. ಆದಾದರೂ ಆ ಗಂಧರ್ವನ ರಥವನ್ನು ಸುಟ್ಟಿಹಾಕಿತು. ರಥವನ್ನು ಕಳೆದುಕೊಂಡು ತತ್ತರಿಸಿಹೋದನು, ಆ ಗಂಧರ್ವ. ಅರ್ಜುನನ ಅಸ್ತ್ರದ ತೇಜಸ್ಸಿನಿಂದಾಗಿ ಕಂಗಾಲಾಗಿ ಕೆಳಮುಖವಾಗಿ ಬಿದ್ದನು!


ಸೂಚನೆ : 23/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.