Monday, April 24, 2023

ಅಷ್ಟಾಕ್ಷರೀ​ - 33 ಅಯಂ ತು ಪರಮೋ ಧರ್ಮಃ (Astakshara Darshana 33 Ayam Tu Paramo Dharmaḥ)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೋಸ್ಕರ ನಾವು ಭಾಷೆಯನ್ನು ಬಳಸುತ್ತೇವಷ್ಟೆ. ಆದರೆ ಅದೆಷ್ಟೋ ವೇಳೆ ಸರಿಯಾದ ಪದವು ಹೊಳೆಯುವುದಿಲ್ಲ. ಅದಿರಲಿ, ಕೆಲವೊಮ್ಮೆ ಸರಿಯಾದ ಪದವೇ ಇರುವುದಿಲ್ಲ! ಭಾಷೆಯೆಂಬುದು ಸಂಸ್ಕೃತಿಬಿಂಬಕವೂ ಹೌದಾದ್ದರಿಂದ, ಒಂದು ದೇಶದ ಸಂಸ್ಕೃತಿಯಲ್ಲಿರುವ ಭಾವಗಳಿಗೆ ಮತ್ತೊಂದು ದೇಶದ ಭಾಷೆಯಲ್ಲಿ ಪದಗಳೇ ಇಲ್ಲದಿರುವುದು ಅಸಂಭವವೇನಲ್ಲ. (ಈ  ಬಗ್ಗೆ ೧೯-೨೦ನೇ ಶತಮಾನಗಳ ಎಡ್ವರ್ಡ್ ಸಪೀರ್(Edward Sapir), ಬೆಂಜಮಿನ್ ವೋರ್ಫ಼್(Benjamin Whorf) ಮುಂತಾದ ಭಾಷಾವಿಜ್ಞಾನಿಗಳು ಸಾಕಷ್ಟು ಬರೆದಿದ್ದಾರೆ.) ಹಾಗಾದಾಗ, ಅಪೇಕ್ಷಿತಭಾವಕ್ಕೆ ಸುಮಾರಾಗಿ ಹತ್ತಿರದ ಅರ್ಥವುಳ್ಳ ಇಲ್ಲಿಯ ಪದವೊಂದನ್ನು ಅದಕ್ಕಾಗಿ ಬಳಸಿಕೊಳ್ಳುವುದಾಗಿಬಿಡುತ್ತದೆ. ಕೆಲವೊಮ್ಮೆ, ಬರಬರುತ್ತಾ ಮೊದಲಿದ್ದ ಅರ್ಥವೇ ಮಾಸಿದಂತಾಗಿ, ಈ ಹೊಸ ಅರ್ಥವೇ ಆ ಪದಕ್ಕೆ ಬಂದೂರಿಬಿಡುವುದೂ ಉಂಟು!

ನಮಗೆ ಅತಿಮುಖ್ಯವೆನಿಸುವ ಪದವೊಂದಕ್ಕೆ ಈ ಗತಿ – ವಸ್ತುತಃ ದುರ್ಗತಿ – ಬಂದಿದೆ. ಇಂದಿನ ಬಹುಮಟ್ಟಿನ ಅವಾಂತರಗಳಿಗೆ ಕಾರಣವಾದ "ಧರ್ಮ" ಎಂಬುದೇ ಆ ಪದ! ಋಗ್ವೇದದ ಕಾಲದಿಂದಲೂ ಬಳಕೆಯಲ್ಲಿರುವ ಇದರ ಮೂಲಾರ್ಥವು ಮಾಯವಾಗಿ, 'ರಿಲಿಜನ್' ಎಂಬುದರ ಅರ್ಥವೇ ಅದಕ್ಕಿಂದು ಬಂದುಕೂತಿದೆ. ಎಂದರೆ, ಐದುಸಾವಿರ ವರ್ಷಗಳ ಕಾಲ ನೆಲೆಗೊಂಡಿದ್ದ ಅದರ ಅರ್ಥವಳಿದು, ಕಳೆದೊಂದೆರಡು ಶತಮಾನಗಳಲ್ಲಿ ಪರಿಚಿತವಾಗಿರುವ ವಿದೇಶೀಪದವೊಂದಕ್ಕದು ಸಮೀಕೃತವಾಗಿಬಿಟ್ಟಿದೆ! ಬೌದ್ಧ-ಜೈನ-ಸಿಕ್ಖ - ಇವೆಲ್ಲವೂ ಒಂದೇ ಹಿಂದೂಸಂಸ್ಕೃತಿಯ ನಾನಾಂಗಗಳು; ಇವೆಲ್ಲವೂ "ಧಾರ್ಮಿಕ ಸಂಸ್ಕೃತಿ"ಗಳೇ: ಅರ್ಥಾತ್, ಧರ್ಮವೇ ಇವುಗಳ ಜೀವಾಳ. ಆದರಿಂದು, ಇವೆಲ್ಲವನ್ನೂ ಕ್ರೈಸ್ತ-ಇಸ್ಲಾಮೀಯ-ಮತಗಳಂತೆಯೇ ಒಂದೆಂದು ಭಾವಿಸಿಬಿಡುವ ದುರ್ಘಟನೆಯು ಆಗಿಹೋಗಿದೆ! ಮೂಲದ ಸೊಗಡು ತೊಡೆದುಹೋಗಿದೆ! ಒಂದು ಭಾಷೆಯ ಅಥವಾ ಸಂಸ್ಕೃತಿಯ ವಿಷಯದಲ್ಲಿ ಇಂತಹ ವಿರೂಪವೆಂಬುದು ಒಂದು ಭಾರೀ ದುರಂತವೇ ಸರಿ.

ಧರ್ಮ-ಶಬ್ದದ ಸತ್ಯಾರ್ಥವಾದ ವ್ಯಾಖ್ಯೆಯನ್ನು ಶ್ರೀರಂಗಮಹಾಗುರುಗಳು ಬಹಳ ಸರಳವಾಗಿ ಮಂಡಿಸಿದ್ದರು. ಧರ್ಮವೆಂಬುದು ಮೂಲಸ್ವಭಾವ/ಶುದ್ಧಸ್ವರೂಪವನ್ನು ಹೇಳುವಂತಹುದು. ಉನ್ನತವಾದ ಮೂಲಸ್ಥಿತಿಯಿಂದ ಜಾರಿರುವ ನಾವು, ಮತ್ತೆ ಅದನ್ನು ಸಂಪಾದಿಸಿಕೊಳ್ಳಲು ಬೇಕಾದ ಕ್ರಿಯಾಸಮೂಹಕ್ಕೂ ಧರ್ಮವೆಂಬ ಹೆಸರೇ ಸಲ್ಲುತ್ತದೆ.  "ಧರ್ಮಂ ಚರ" ಎಂಬ ಉಪನಿಷದುಕ್ತಿಯು ನಮ್ಮ ಕರ್ತವ್ಯಗಳಾದ ಆ ಕ್ರಿಯೆಗಳತ್ತಲೇ ಬೊಟ್ಟುಮಾಡುತ್ತದೆ. ಜೀವನದ ಹಿರಿದಾದ ಗುರಿಯತ್ತ ನಮ್ಮನ್ನೊಯ್ಯುವ ಇಂತಹ ಕರ್ಮ/ಧರ್ಮಗಳು ಏಳೆಂದೂ, ಇವೇಳರಲ್ಲಿ ಒಂದಂತೂ ಪರಮವೆಂದೂ ಯಾಜ್ಞವಲ್ಕ್ಯಸ್ಮೃತಿಯು ಹೇಳುತ್ತದೆ. ಈ ಬಗ್ಗೆ ಸ್ಥೂಲವಾದೊಂದು ನೋಟವಿಲ್ಲಿದೆ.

ಇಜ್ಯೆಯೆಂಬುದು ಮೊದಲನೆಯದು. ಇಜ್ಯೆಯೆಂದರೆ ಯಾಗವೇ. ಯಜ್ಞಯಾಗಾದಿಗಳಿಂದಾಗಿ ಪುಣ್ಯಸಂಪಾದನೆಯಾಗುವುದೆಂಬುದನ್ನು ಕೇಳಿಯೇ ಇದ್ದೇವೆ. ನೂರು ಯಾಗಗಳನ್ನು ಮಾಡಿದುದರಿಂದಲೇ ಇಂದ್ರನು ಶತಕ್ರತುವೆನಿಸಿ ದೇವರಾಜನಾದನೆಂಬುದು ಪುರಾಣಪ್ರಸಿದ್ಧ. ಎರಡನೆಯದು ಆಚಾರ. ಯುಕ್ತವಾದ ಆಚಾರವು ದೇಹ-ಇಂದ್ರಿಯ-ಮನಸ್ಸು-ಬುದ್ಧಿಗಳ ಧರ್ಮಗಳನ್ನು ಕಾಪಾಡಬಲ್ಲುದು; ಇವೆಲ್ಲದರಿಂದಾಗಿಯೇ ಆತ್ಮಧರ್ಮವು ವಿಕಸಿಸುವುದೂ. ಮೂರನೆಯದು ದಮ: ಬಾಹ್ಯವೃತ್ತಿಗಳ ನಿಗ್ರಹ, ಇಂದ್ರಿಯಗಳ ಮೇಲಿನ ಹತೋಟಿ. ಅಹಿಂಸೆಯು ನಾಲ್ಕನೆಯದು: ಯಾರಿಗೂ ಹಿಂಸೆಯಾಗದಂತಿರುವುದು. ಭೋಗಗಳಲ್ಲೆಲ್ಲಾ ಹಿಂಸೆಯೆಂಬುದು ಸೇರಿಕೊಂಡೇ ಇ(ಬ)ರುವುದಾದ್ದರಿಂದ, ಅತಿಭೋಗಲಾಲಸೆಯನ್ನಿಟ್ಟುಕೊಳ್ಳದೆ, "ಇತರ ಜೀವಿಗಳಿಗೆ ನನ್ನಿಂದೆಲ್ಲಿ ಹಿಂಸೆಯಾದೀತೋ!" - ಎಂಬ ಎಚ್ಚರದೊಂದಿಗಿನ ವರ್ತನೆಯದು. ನಾನು ಗೌರವಿಸುವ ವ್ಯಕ್ತಿಯನ್ನೋ ದೇವನನ್ನೋ ಯಾರು ಆದರಿಸರೋ ಅವರನ್ನೆಲ್ಲಾ ಕಡಿ-ಕೊಲ್ಲು - ಎಂದು ಹೊರಡುವುದಂತೂ ಹಿಂಸೆಯ ಪರಮಾವಧಿಯೇ ಸರಿ. ಇನ್ನು ಐದನೆಯದು ದಾನ. ಅದಂತೂ ಬಹಳ ಹಿರಿದಾದುದು. ಅನ್ನದಾನವಾಗಲಿ ವಿದ್ಯಾದಾನವಾಗಲಿ, ದಾನವಿತ್ತವನಲ್ಲೇ ಒಂದು ಉದಾತ್ತತೆಯು ಮೂಡುತ್ತದೆ. ಆರನೆಯದು ಸ್ವಾಧ್ಯಾಯ: ತತ್ತ್ವದರ್ಶನಕ್ಕಾಗಿ ಸಲ್ಲುವ ವೇದಾಧ್ಯಯನವು ಅತ್ಯಂತಶ್ರೇಯಸ್ಕರವೇ. ಹೀಗೆ ಇವೆಲ್ಲವೂ ಧರ್ಮಗಳೇ. ಅರ್ಥಾತ್, ಮೂಲಸ್ಥಿತಿಯತ್ತ ಒಯ್ಯುವವೇ.

ಆದರೆ ಇವೆಲ್ಲಕ್ಕಿಂತಲೂ ಮಿಗಿಲಾದುದು ಏಳನೆಯದಾದುದು: ಆತ್ಮದರ್ಶನವೆಂಬ ಧರ್ಮವದು; ಅದನ್ನು ಯೋಗದಿಂದ ಸಾಧಿಸುವುದೆಂಬುದೇ ಪರಮಧರ್ಮ- ಎಂಬುದು ಯೋಗಿಯಾಜ್ಞವಲ್ಕ್ಯರ ಮಾತು. ಸ್ವಸ್ವರೂಪವನ್ನು ಅರಿತುಕೊಳ್ಳುವುದನ್ನೇ ಆತ್ಮಸಾಕ್ಷಾತ್ಕಾರ, ಪರಮಾತ್ಮಸಾಕ್ಷಾತ್ಕಾರ, ಸಮಾಧಿಸ್ಥಿತಿ ಎನ್ನುತ್ತಾರೆ. ಆತ್ಮಲಾಭಕ್ಕಿಂತಲೂ ಮಿಗಿಲಾದ ಲಾಭವಿಲ್ಲ - ಎಂದು ಆಪಸ್ತಂಬಮಹರ್ಷಿಗಳು ಹೇಳುತ್ತಾರೆ. ವಿದ್ಯೆಗಳಲ್ಲೆಲ್ಲ ಅಧ್ಯಾತ್ಮವಿದ್ಯೆಯೇ ಶ್ರೇಷ್ಠವೆಂದು ಗೀತೆಯೂ ಸಾರುವುದಲ್ಲವೇ?

ಯೋಗಿಪುಂಗವರಾದ ಶ್ರೀರಂಗಮಹಾಗುರುಗಳು ಯಾಜ್ಞವಲ್ಕ್ಯಸ್ಮೃತಿಯ ಈ ಮಾತನ್ನು ಒತ್ತಿ ಹೇಳುತ್ತಿದ್ದರು. ಯೋಗವಿದ್ಯೆಯ ಮರ್ಮವನ್ನು ಸ್ವತಃ ಅರಿತವರಾಗಿ, ಅನುಭವಕ್ಕದು ದಕ್ಕುವಂತೆ ಬೋಧಿಸುವವರಾಗಿದ್ದರು. ಯೋಗವೆಂಬುದೊಂದೇ ಜೀವನದ ಪರಮಲಕ್ಷ್ಯವನ್ನು ಮುಟ್ಟಿಸಬಲ್ಲುದು: ಪರಮಧರ್ಮವೆಂದರೆ ಅದುವೇ.

ಸೂಚನೆ: 24/04/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.