Sunday, April 2, 2023

ವ್ಯಾಸ ವೀಕ್ಷಿತ - 32 ದ್ರೌಪದಿಯತ್ತ ಎಲ್ಲರ ಚಿತ್ತ (Vyaasa Vikshita - 32 Draupadiyatta Ellara Chitta)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಯಾಗದ ಕೊನೆಯಲ್ಲಿ ಬರಬೇಕಾಗಿದ್ದ ದ್ರುಪದಪತ್ನಿಯು ವಿಳಂಬಮಾಡಿದಳಷ್ಟೆ.ಅವಳು ಬರುವಷ್ಟರಲ್ಲಿ, ಸಾಕ್ಷಾದ್ ಯಜ್ಞಾಗ್ನಿಯಿಂದಲೇ ಯಾಗಫಲವು ತೋರಿಬಿಟ್ಟಿತು: ಒಬ್ಬ ಕುಮಾರನೂ ಒಬ್ಬಳು ಕುಮಾರಿಯೂ ಜನಿಸಿದರು! ಯಾಜ-ಅನುಯಾಜರಿಗೆ ತಾವು ನಡೆಸಿದ ಕಾರ್ಯದ ಸಫಲತೆಯು ತೃಪ್ತಿಕೊಟ್ಟಿತು.

ಹೀಗೆ ಸಂಪೂರ್ಣಮಾನಸರಾದ ದ್ವಿಜರು, ಆ ಜೋಡಿಮಕ್ಕಳಿಗೆ ನಾಮಕರಣ ಮಾಡಿದರು. "ಇದೋ, ಈತನು ಹುಟ್ಟುವಾಗಲೇ ಧೃಷ್ಟ (ಎಂದರೆ ಎದೆಗಾರಿಕೆಯುಳ್ಳವ, ಧೈರ್ಯಶಾಲಿ); ಅತ್ಯಮರ್ಷಿ (ಅತಿಯಾದ ಅಸಹನೆಯುಳ್ಳವನು) ಕೂಡ; ಜೊತೆಗೆ ದ್ಯುಮ್ನಾದಿಗಳೊಂದಿಗೇ ಹುಟ್ಟಿಬಂದವನು (ಹಾಗೆಂದರೆ ತೇಜೋಮಯವಾದ ಕವಚ-ಕುಂಡಲಗಳು ಹಾಗೂ ಕ್ಷಾತ್ರತೇಜಸ್ಸು - ಇವುಗಳೊಂದಿಗೇ ಹುಟ್ಟಿರುವವನು): ಹಾಗಾಗಿ  ಈತನಿಗೆ "ಧೃಷ್ಟದ್ಯುಮ್ನ" ಎಂಬ ಹೆಸರು ಸಲ್ಲಲಿ. ಇನ್ನು ಇವಳು. ಬಣ್ಣದಲ್ಲಿ ಇವಳು ಕೃಷ್ಣೆ (ಎಂದರೆ ಕಪ್ಪು); ಆ ಕಾರಣಕ್ಕಾಗಿ ಅವಳನ್ನು ಕೃಷ್ಣೆಯೆಂದೇ ಕರೆಯಲಾಗುವುದು" ಎಂದರು. (ಹೀಗೆ ಅವರಿಬ್ಬರಿಗಿಟ್ಟ ನಾಮಗಳು ಅನ್ವರ್ಥವೇ ಆದುವು.)

ದ್ರುಪದನ ಆ ಮಹಾಮಖದಲ್ಲಿ (ಮಖ ಎಂದರೆ ಯಜ್ಞ) ಹೀಗೆ ಈ (ಸೋದರ-ಸೋದರಿಯರೆಂಬ) ಜೋಡಿಯು ಜನ್ಮ ತಾಳಿತು. ದ್ರುಪದಪುತ್ರನಾದ ಧೃಷ್ಟದ್ಯುಮ್ನನನ್ನು ಪ್ರತಾಪಶಾಲಿಗಳಾದ ದ್ರೋಣರು ತಮ್ಮ ಮನೆಗೇ ಕರೆದುಕೊಂಡು ಬಂದರು - ಅವನಿಗೇ  ಅಸ್ತ್ರವಿದ್ಯೋಪದೇಶಕ್ಕಾಗಿ! ಹೀಗವರು ಉಪಕರಿಸಿದರು! ದೈವವನ್ನು ಮೀರಲಾಗದು (ಅಮೋಕ್ಷಣೀಯಂ ದೈವಂ ಹಿ); ಅದು ಮುಂದೆ ಆಗತಕ್ಕದ್ದೇ - ಎಂಬುದನ್ನು ಮಹಾಮತಿಗಳಾದ ದ್ರೋಣರು ಮನಗಂಡಿದ್ದವರೇ. ಆದರೂ ಹಾಗೆ ಮಾಡಿದರು; ತಮ್ಮ ಕೀರ್ತಿಯ ರಕ್ಷಣೆಗಾಗಿಯೂ ಹಾಗೆ ಮಾಡಿದರು. (ಅರ್ಥಾತ್, ಧೃಷ್ಟದ್ಯುಮ್ನನು ಜನಿಸಿರುವುದೇ ನನ್ನ ಸಾವನ್ನು ಸಾಧಿಸಲಿಕ್ಕಾಗಿ – ಎಂಬುದನ್ನು ಅವರು ಮೊದಲೇ ಅರಿತಿದ್ದರು; ಆದರೂ  ಅಸ್ತ್ರೋಪದೇಶಮಾಡಿದರು!)

ಹೀಗೆಂಬುದಾಗಿ ಆ ಆಗಂತುಕಬ್ರಾಹ್ಮಣನು ತನಗೆ ತಿಳಿದಿದ್ದ ವೃತ್ತಾಂತವನ್ನು ಹೇಳಿಮುಗಿಸಿದನು. ಬ್ರಾಹ್ಮಣನ ಬಾಯಿಂದ ಇದೆಲ್ಲವನ್ನೂ ಆ ಕೌಂತೇಯರು ಕೇಳಿದರು. ಮಹಾಬಲಶಾಲಿಗಳೇ ಆದರೂ ಅವರು "ಅಸ್ವಸ್ಥ-ಚಿತ್ತ"ರಾದರು! (ಎಂದರೆ ದ್ರೌಪದಿಯ ವಿಷಯದಲ್ಲಿ ಇವರಿಗೆ ತೀವ್ರವಾದ ಆಸಕ್ತಿ ಕೆರಳಿತು, ಸೆಳೆತವು ಹುಟ್ಟಿಕೊಂಡಿತು.) ಇವರುಗಳ ಮನಸ್ಸು ಅತ್ತಲೇ ನೆಟ್ಟಿರುವುದನ್ನು ಕುಂತಿಯೂ ಗಮನಿಸಿಕೊಂಡಳು. ಹಾಗೂ ಯುಧಿಷ್ಠಿರನನ್ನು ಕುರಿತು ಹೇಳಿದಳು:

"ಈ ಬ್ರಾಹ್ಮಣನ ಗೃಹದಲ್ಲಿ ನಾವು ಬಹಳ ಕಾಲದಿಂದಲೇ ವಾಸವಾಗಿದ್ದೇವೆ. ಈ ಊರು ಸುಂದರವಾಗಿದೆ; ಭಿಕ್ಷೆಯೂ ದೊರಕುತ್ತದೆ; ಇಲ್ಲಿ ನಾವು ಆನಂದದಿಂದಲೇ ಇದ್ದೇವೆ; ಇಲ್ಲಿ ರಮಣೀಯವಾದ ವನಗಳುಂಟು, ಉಪವನಗಳುಂಟು (ಉಪವನವೆಂದರೆ ಉದ್ಯಾನ, ತೋಟ); ಅವೆಲ್ಲವನ್ನೂ ಮತ್ತೆ ಮತ್ತೆ ನೋಡಿದ್ದಾಯಿತು. ಇನ್ನೂ ಮತ್ತೆ ಅವನ್ನೇ ನೋಡು(ತ್ತಿರು)ವುದೆಂದರೆ, ಮೊದಲಿನ ಹಾಗೆ ಅವು ಸಂತೋಷವನ್ನುಂಟುಮಾಡವು. ಭಿಕ್ಷೆಯೂ ಸಹ ಮೊದಮೊದಲು ಸಿಕ್ಕಂತೆ ಈಗ ಸಿಗುತ್ತಿಲ್ಲ.

ಆದ್ದರಿಂದ, ಯುಧಿಷ್ಠಿರ, ನಿನಗೆ ಒಪ್ಪಿಗೆಯಾಗುವುದಾದರೆ ಪಂಚಾಲದೇಶಕ್ಕೇ ನಾವು ಹೋಗೋಣ. ಹಿಂದೆ ಕಂಡಿಲ್ಲದ್ದನ್ನು ಕಂಡರೆ ಅದು ರಮಣೀಯವಾಗಿ ತೋರುತ್ತದೆ (ಅಪೂರ್ವದರ್ಶನಂ ರಮಣೀಯಂ). ಅಷ್ಟೇ ಅಲ್ಲ. ಪಂಚಾಲದೇಶವು ಸುಭಿಕ್ಷವಾದ ದೇಶ - ಎಂದೂ ಕೇಳಿದ್ದೇವೆ. (ಸುಭಿಕ್ಷವೆಂದರೆ ಧಾನ್ಯಾಹಾರಗಳು ಯಥೇಚ್ಛವಾಗಿ ದೊರಕುವ ಎಡೆ). ರಾಜನಾದ ಯಜ್ಞಸೇನನೂ(ಎಂದರೆ ದ್ರುಪದನೂ) ಬ್ರಾಹ್ಮಣರ ವಿಷಯದಲ್ಲಿ ಗೌರವಸಂಪನ್ನನೆಂದೂ ಕೇಳಿದ್ದೇವೆ. ಒಂದೇ ಜಾಗದಲ್ಲಿ ದೀರ್ಘಕಾಲ ವಾಸಮಾಡುವುದೆನ್ನುವುದು ಉಚಿತವೆಂದು ನನಗೆ ತೋರದು. ನೀನೊಪ್ಪುವೆಯಾದರೆ ನಾವು ಅಲ್ಲಿಗೇ ಹೋಗಿಬಿಡೋಣ" ಎಂದು.


ಸೂಚನೆ : 2/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.