Sunday, April 9, 2023

ಯಕ್ಷ ಪ್ರಶ್ನೆ -33(Yaksha prashne -33)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 32 ಪ್ರಯಾಣ ಮಾಡುವವನಿಗೆ ಮಿತ್ರನಾರು ?

ಉತ್ತರ - ಸಾರ್ಥ

ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುತ್ತಲೇ ಇರುತ್ತೇವೆ. ಕೆಲವೊಮ್ಮೆ ತಿಳಿದ ಊರಿಗೆ, ಇನ್ನು ಕೆಲವೊಮ್ಮೆ ತಿಳಿಯದ ಊರಿಗೆ, ಹೀಗೆ ನಮ್ಮ ಪಯಣವು ಸಾಗುತ್ತಿರುತ್ತದೆ. ಪ್ರಯಾಣ ಮಾಡುವಾಗ ಒಬ್ಬರೇ ಹೋಗುವುದು ಉಂಟು. ಇನ್ನು ಕೆಲವೊಮ್ಮೆ ನಮ್ಮ ಜೊತೆಯಲ್ಲಿ ಕೆಲವರನ್ನು ಕರೆದುಕೊಂಡು ಹೋಗುವುದೂ ಉಂಟು. ಇವರೆಲ್ಲರೂ ಪೂರ್ವ ನಿರ್ಧಾರಿತರಾದ ವ್ಯಕ್ತಿಗಳು. ಇಲ್ಲಿ ಯಕ್ಷನ ಪ್ರಶ್ನೆ ಅದಲ್ಲ, ಒಬ್ಬ ಪ್ರವಾಸಕ್ಕೆ ಹೊರಟನೆಂದಾರೆ ಅವನಿಗೆ ಮಾರ್ಗದಲ್ಲಿ ಯಾರು ಮಿತ್ರರಾಗಿ ಸಹಕರಿಸುತ್ತಾರೆ? ಎಂಬುದು. ಅದಕ್ಕೆ ಧರ್ಮರಾಜನು 'ಸಾರ್ಥ' ಎಂದು ಉತ್ತರವನ್ನು ನೀಡುತ್ತಾನೆ. 

ಇಲ್ಲಿ ನಾವು ತಿಳಿಯಬೇಕಾದುದು 'ಸಾರ್ಥ' ಎಂಬ ಪದದ ಅರ್ಥ. ಪ್ರಸ್ತುತ ಅರ್ಥ ಎಂಬ ಶಬ್ದ ಒಂದಾದರೆ ಅದರಿಂದ ಕೂಡಿದ್ದು 'ಸಾರ್ಥ' ಎಂಬ ಇನ್ನೊಂದು ಪದವೂ ನಿಷ್ಪನ್ನವಾಗುತ್ತದೆ. ಅರ್ಥ ಶಬ್ದದ ಅರ್ಥಕ್ಕೂ ಸಾರ್ಥ ಶಬ್ದದ ಅರ್ಥಕ್ಕೂ ದೂರದ ಸಂಬಂಧವಿದೆಯೇ ಹೊರತು ನೇರವಾದ ಸಂಬಂಧ ಕಾಣುವುದಿಲ್ಲ. ಹಾಗಾಗಿ ಒಟ್ಟಾರೆಯಾಗಿ ಸಾರ್ಥ ಎಂಬ ಶಬ್ದಕ್ಕೆ ಇಲ್ಲಿ ಸಹಪ್ರಯಾಣಿಕ ಎಂಬ ಅರ್ಥವನ್ನು ಮಾಡಲಾಗುತ್ತದೆ. ಅರ್ಥ ಶಬ್ದಕ್ಕೆ ಪ್ರಯಾಣಿಕ ಎಂಬ ಅರ್ಥ ಇಲ್ಲ. ಆದರೆ ಸಾರ್ಥ ಎಂಬ ಶಬ್ದಕ್ಕೆ ಈ ಅರ್ಥ ಬರುತ್ತದೆ. ಈ ವಿಶೇಷವಾದ ಅರ್ಥ ಬರಲು ಕಾರಣ ಏನು? ಮತ್ತು ಸಹಪ್ರಯಾಣಿಕ ಎಂಬ ಅರ್ಥ ಸಿದ್ಧವಾಗುವುದು ಹೇಗೆ? ಎಂಬುದು ಯಕ್ಷಪ್ರಶ್ನೆಯಲ್ಲಿರುವ ಆಶಯ ಎಂಬುದು ನನ್ನ ಭಾವನೆ. 

ಅರ್ಥ ಶಬ್ದವು 'ಅರ್ಥೋ ಅಭಿಧಾನ-ರೈ-ವಸ್ತು ಪ್ರಯೋಜನ-ನಿವೃತ್ತಿಷು' ಹೆಸರು, ಹಣ, ವಸ್ತು, ಉದ್ದೇಶ, ನಿವಾರಣೆ  ಎಂಬ ಅರ್ಥಗಳಲ್ಲಿ ಪ್ರಯೋಗವಾಗುತ್ತದೆ. ಅರ್ಥದಿಂದ ಕೂಡಿದ್ದು ಸಾರ್ಥ ಎಂಬುದಾಗಿ ಸಂಸ್ಕೃತದಲ್ಲಿ ಈ ಪದಕ್ಕೆ  ನಿಷ್ಪತ್ತಿಯನ್ನು ಹೇಳುತ್ತಾರೆ. ನಮ್ಮ ಪ್ರಯಾಣ ಆರಂಭವಾದ ಮೇಲೆ ಮಧ್ಯದಲ್ಲಿ ಸೇರಿಕೊಂಡ ಅಪರಿಚಿತ ವ್ಯಕ್ತಿಯನ್ನು ಇಲ್ಲಿ ಸಾರ್ಥ ಎಂಬುದಾಗಿ ಕರೆಯಲಾಗಿದೆ. ಅವನ್ನು ನಮ್ಮಂತೆ ಯಾತ್ರೆಯನ್ನು ಆರಂಭ ಮಾಡಿದ ವ್ಯಕ್ತಿಯಾಗಿರುತ್ತಾನೆ. ಒಬ್ಬನಿಗೆ ಮತ್ತೊಬ್ಬನು ಪರಸ್ಪರ ಸಹಪ್ರಯಾಣಿಕನಾಗಿರುತ್ತಾನೆ. ಇವನಿಗೆ ಅವನು, ಅವನಿಗೆ ಇವನು ಸಾರ್ಥನಾಗಿರುತ್ತಾನೆ. ಹೊರ ಊರಿಗೆ ಹೋಗುವಾಗ ಇಬ್ಬರೂ ಏಕಾಂಗಿಗಳೇ ಆಗಿರುತ್ತಾರೆ. ಯಾತ್ರೆಯ ಮಧ್ಯದಲ್ಲಿ ಘಟಿಸುವ ಎಲ್ಲಾ ಬಗೆಯ ಸಂಗತಿಗಳನ್ನೂ ಜೊತೆಯಲ್ಲಿ ಇದ್ದು ಅನಿಭವಿಸುತ್ತಿರುತ್ತಾರೆ ಅಷ್ಟೇ. 

ಇಲ್ಲೊಂದು ತಾತ್ತ್ವಿಕವಾದ ಭಾವವಿದೆ. ಈ ಪ್ರಪಂಚಕ್ಕೆ ಬರುವ ಪ್ರತಿಯೊಬ್ಬ ಜೀವಿಯೂ ಏಕಾಂಗಿಯಾಗಿಯೇ ಬರಬೇಕಾದುದು ಅನಿವಾರ್ಯ. ಬಂದ ಮೇಲೆ ಇವಳು ತಾಯಿ, ಇವನು ತಂದೆ, ಅಣ್ಣ ಅಕ್ಕ, ಅಜ್ಜ, ಅಜ್ಜಿ ಇತ್ಯಾದಿಯಾಗಿ ಅನಂತ ಸಂಬಂಧಿಗಳು ಈ ಜೀವನ ಯಾತ್ರೆಯಲ್ಲಿ ಲಭಿಸುತ್ತಾರೆ. ರೇಲ್ವೇಯಲ್ಲೋ ಬಸ್ಸಿನಲ್ಲೋ ಪ್ರಯಾಣ ಮಾಡುವವನು ಅವನವನ ನಿರ್ದಿಷ್ಟವಾದ ಸ್ಥಳಕ್ಕೆ ಟಿಕೇಟನ್ನು ಪಡೆದಿರುತ್ತಾನೆ. ಆ ಎರಡು ನಿರ್ದಿಷ್ಟವಾದ ಪ್ರದೇಶಗಳ ನಡುವೆ ಸಿಕ್ಕವರು ನಮ್ಮ ಸಹಪ್ರಯಾಣಿಕರಾಗುತ್ತಾರೆ. ಅಲ್ಲಿ ನಾವು ಅವರ ಜೊತೆ ಲೋಕಾಭಿರಾಮವಾಗಿ ಮಾತುಕತೆಗಳನ್ನು ಆಡಿ ಆ ಸಮಯವನ್ನು ಕಳೆಯುತ್ತೇವೆ. ಅವನು ಇಳಿಯುವ ಜಾಗ ಬಂದರೆ ನಮ್ಮನ್ನು ಬಿಟ್ಟು ಇಳಿದುಹೋಗುತ್ತಾನೆ. ಅಂತೆಯೇ ನಾವು, ಕರ್ಮ ಎಂಬ ಟಿಕೇಟನ್ನು ಪಡೆದು ಈ ಜೀವನಯಾತ್ರೆಯನ್ನು ಆರಂಭಿಸುತ್ತೇವೆ. ಕರ್ಮಫಲವನ್ನು ಅನುಭವಿಸಿ ಒಂದು ದಿನ ಇಹಲೋಕದ ಯಾತ್ರೆಯನ್ನು ಮುಗಿಸುತ್ತೇವೆ. ಈ ಮಧ್ಯದಲ್ಲಿ ನಮಗೆ ಸಿಕ್ಕ ಸಹಪ್ರಯಾಣಿಕರಾದ ನಮ್ಮೆಲ್ಲಾ ಬಂಧುಮಿತ್ರರ ಜೊತೆ ಸುಮಧುರವಾದ ಕಾಲವನ್ನು ಕಳೆದರೆ ನಮ್ಮ  ಈ ಪಯಣ ಸಾರ್ಥಕ.   

ಸೂಚನೆ : 9/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.