Sunday, August 14, 2022

ಶ್ರೀ ರಾಮನ ಗುಣಗಳು - 67 ಸರ್ವಗುಣಸಂಪನ್ನ - ಶ್ರೀರಾಮ (Sriramana Anandamaya - 67 Sarvagunasampanna - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ಸಕಲಗುಣ ಪರಿಪೂರ್ಣನಾಗಿದ್ದಾನೆ. ಅವನಲ್ಲಿ ಇಲ್ಲದ ಗುಣಗಳಿಲ್ಲ. ಶ್ರೀರಾಮನು ಸಾಕ್ಷಾತ್ ಭಗವಂತನೇ ಭೂಮಿಗೆ ಇಳಿದ ಅವತಾರ. ಅವನಲ್ಲಿ ಇರುವುದೆಲ್ಲವೂ ಗುಣಗಳೇ ಹೊರತು, ಅವಗುಣಗಳಲ್ಲ. ಅವನಲ್ಲಿ ಎಲ್ಲಾ ಗುಣಗಳೂ ಇರುವುದರಿಂದ,   ಅವನನ್ನು 'ಸಗುಣೀ' ಎಂದೂ, ಪರಮಾರ್ಥದಲ್ಲಿ ಎಲ್ಲಾ ಗುಣಗಳನ್ನೂ ಮೀರಿ ಅವುಗಳ ಹಿಂಬದಿಯಲ್ಲಿ ಬೆಳಗುವ ಪರಮಾತ್ಮನೂ ಅವನಾಗಿರುವುದರಿಂದ,  'ನಿರ್ಗುಣೀ' ಎಂದೂ ಹೇಳುತ್ತೇವೆ. ಹಾಗಾಗಿ ಭಗವಂತನನ್ನು ಸಗುಣ - ನಿರ್ಗುಣ, ಸಾಕಾರ - ನಿರಾಕಾರ ಎಂದೆಲ್ಲಾ ಹೇಳುವ ರೂಢಿ ಬಂದಿದೆ. 


ಉದಾಹರಣೆಗೆ ಬೀಜದಲ್ಲಿ ಚಿಗುರು ಕಾಂಡ, ಶಾಖೆ, ಉಪಶಾಖೆ, ಹೂವು, ಕಾಯಿ, ಹಣ್ಣು ಮುಂತಾದ ವೃಕ್ಷದ ಎಲ್ಲಾ ಅಂಗಗಳು ಇರುವುದುಂಟು. ಇಲ್ಲದಿರುವ ಅಂಗಗಳು ಬರಲು ಹೇಗೆ ಸಾಧ್ಯ! ಬೀಜದಲ್ಲಿ ಅವು ಸೂಕ್ಷ್ಮವಾಗಿ ಇದ್ದವು ಎಂಬುದು ತಾತ್ಪರ್ಯ. ಅವಕಾಶ ಬಂದಾಗ ಬೀಜದಲ್ಲಿರುವ ಎಲ್ಲಾ ಅಂಶಗಳೂ ಗೋಚರಿಸುವುವು. ಅವುಗಳಿಗೆ ಬೇರೆ ಬೇರೆ ಹೆಸರುಗಳು ಬರುತ್ತವೆ. ಅಂತೆಯೇ ಭಗವಂತನು ಈ ಜಗತ್ತಿಗೆ ಮೂಲ. ಅವನಲ್ಲಿ ಎಲ್ಲವೂ ಅಡಕಗೊಂಡಿವೆ. ಸಕಾಲದಲ್ಲಿ ಬೇಕಾದ ಅಂಶಗಳು ವಿಕಾಸವಾಗುತ್ತವೆ. ಈ ವಿಕಾಸಕ್ಕೆ ಬೇರೆ ಬೇರೆ ಹೆಸರುಗಳು ಬಂದಿವೆ. ಅವುಗಳನ್ನೇ ಅವನ ಗುಣಗಳು ಎನ್ನಬಹುದು. ಭಗವಂತನ ಗುಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅವು ಅಸಂಖ್ಯ.. ಅವುಗಳೆಲ್ಲವನ್ನೂ ಹೇಳಲು ನಾನೂ ಅಸಮರ್ಥನೇ. ಕೆಲವೊಂದನ್ನು ಮಾತ್ರವೇ ಕಾಲ ಮತ್ತು ಸಂದರ್ಭಕ್ಕೆ ಬದ್ಧನಾಗಿ ವಿವರಿಸುವ ಪ್ರಯತ್ನ ಮಾಡಿದ್ದೇನೆ. ಭಗವಂತನ ಗುಣಗಳನ್ನು ಹೇಳಲು ಯಾವ ಸಾಧನವೂ ಪರಿಪೂರ್ಣವಲ್ಲ. ಭಾಷೆಯಿಂದ ಅವುಗಳನ್ನು ಕೀರ್ತನೆ ಮಾಡುವುದು ಎಂಬುದೂ ಅಪರಿಪೂರ್ಣವೇ ಸರಿ. ಭಾಷೆಗೂ  ಒಂದು ಮಿತಿ ಉಂಟು. ಎಂತಹ ಜ್ಞಾನಿಯೇ ಆದರೂ ಇದರಲ್ಲಿ ಅಸಹಾಯಕನೇ. ಮತ್ತೆ ನನ್ನಂತಹ ಪಾಮರನ ಪಾಡೇನು!? ಈ ನನ್ನ ಮನಸ್ಸು ಬುದ್ಧಿ ಇಂದ್ರಿಯಗಳು ಈ ನೆಪದಲ್ಲಾದರೂ ಭಗವಂತನ ಸ್ಮರಣೆ ಮಾಡಿದಂತಾಗಲಿ ಅಥವಾ ಇವುಗಳಿಗೆ ಸಾರ್ಥಕತೆ ಬರಲಿ ಎಂಬ ಉದ್ದೇಶದಿಂದ ಆರಂಭ ಮಾಡಿದ್ದೆ ಅಷ್ಟೇ. ಅವನ ಅನುಗ್ರಹದಿಂದ ಪ್ರೇರಿತವಾದ ಬುದ್ಧಿಯಿಂದ ಅಷ್ಟಿಷ್ಟು ಶಬ್ದಗಳ ಜೋಡಣೆ ಮಾಡಿ ಕೆಲವು ಗುಣಗಳನ್ನು ಕೀರ್ತನೆ ಮಾಡಲು ಪ್ರಯತ್ನಿಸಿದ್ದೇನೆ. 


ಶ್ರೀರಾಮನನ್ನು ಭಾವಿಸಲು ಈ ಎಲ್ಲಾ ಆದರ್ಶಗುಣಗಳು ಸಹಾಯಕವಾಗಲಿ ಎಂಬುದು ಬಿನ್ನಹ. ಓದುಗರಿಗೆ ಚೈತನ್ಯದಾಯಕವಾಗುವುದು, ನನಗೆ ರಾಮನನ್ನು ಭಾವಿಸಲು ಹೆಚ್ಚು ಅನುಕೂಲವಾಯಿತು ಎಂಬುದೇ ಸತ್ಯವಾದ ವಿಷಯ. ಹಾಗೇನಾದರೂ ಸಹೃದಯರಿಗೆ ಸ್ಫೂರ್ತಿಯಾದಲ್ಲಿ ಅದು ನನ್ನ ಶ್ರೀರಂಗ ಮಹಾಗುರುವಿನ ಅನುಗ್ರಹ ಎಂದು ಭಾವಿಸುತ್ತಾ ಈ ಲೇಖನಮಾಲೆಯನ್ನು ಭಗವದರ್ಪಣ ಮಾಡುತ್ತೇನೆ.


ಸೂಚನೆ :07/07/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.