Saturday, August 27, 2022

ಮಹರ್ಷಿ ಭಾರತ ಭಾಗ-10 ಮಹರ್ಷಿ ಭಾರತಕ್ಕೆ ನಮಸ್ಕಾರ (Maharsi Bharata Bhaga -10 Maharashi Bharatakke Namaskara)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)

 

ಕಡೆಯಲ್ಲಿ ಈ ಮಹರ್ಷಿ ಭಾರತದ ಬಗೆಗಿನ ಶ್ರೀರಂಗಮಹಾಗುರುಗಳ ಈ ಅಮೃತವಾಣಿಗಳೆರಡನ್ನು ಸ್ಮರಿಸೋಣ-"ಯಾವ ಮಹರ್ಷಿಗಳು ತಮ್ಮ ಮನೀಷೆಯಿಂದ ಜ್ಞಾನ-ವಿಜ್ಞಾನತೃಪ್ತಾತ್ಮರಾಗಿ ಸತ್ಯಮೂಲವಾದ ಜೀವನದ ಆರಂಭ, ಅದರ ವಿಕಾಸ ಮತ್ತು ಅದರ ವಿಲಯಗಳ ವಿಷಯವಾಗಿ ಅನ್ವೇಷಣೆ, ಅಧ್ಯಯನಗಳನ್ನು ನಡೆಸಿ, ಆಧಿಭೌತಿಕ, ಆಧಿದೈವಿಕ, ಆಧ್ಯಾತ್ಮಿಕಗಳಲ್ಲಿರುವ ಸ್ಥೂಲ,ಸೂಕ್ಷ್ಮ, ಪರ- ಭೇದಗಳನ್ನು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಅಳೆದು, ಜೀವನದ ಹುಟ್ಟು, ಸ್ಥಿತಿ,ಬೆಳವಣಿಗೆ,ವಿಕಾರ, ಕ್ಷಯ,ನಾಶಗಳೆಂಬ ಆರು ಬಗೆಯ ಸ್ಥಿತಿಭೇದಗಳನ್ನು ಅರಿತು ತಮ್ಮ ಇಂದ್ರಿಯ-ಆತ್ಮಗಳ ಕಲ್ಯಾಣವನ್ನು ಮಾಡಿಕೊಂಡು ,ಪ್ರಜೆಗಳೆಲ್ಲರನ್ನೂ ಪರಮವ್ಯೋಮದಲ್ಲಿಡುವ ಸಾಹಿತ್ಯವನ್ನು ಲೋಕಕ್ಕೆ ಕೊಟ್ಟು ಸತ್ಯಾತ್ಮಪ್ರಾಣಾರಾಮರಾಗಿ ಜೀವನದ ಬೆಳಕನ್ನು ಕಂಡು, ಅಜರಾಮರರಾಗಿ ಪ್ರಕಾಶದಲ್ಲಿ ಆಸಕ್ತರಾಗಿದ್ದರೋ, ಅಂತಹ ಸನಾತನ ಆರ್ಯಮಹರ್ಷಿಗಳ ಭಾರತವು ಇದಾಗಿರುವುದು".

"ಯಾವ ದೇಶವು ಪರಮ ಪ್ರಕಾಶದಲ್ಲಿ ಆಸಕ್ತವಾಗಿ ತನ್ನ ಜೀವನದ ಮಬ್ಬನ್ನು ಹರಿಸಿಕೊಂಡಿತೋ, ಯಾವ ದೇಶವು ತನ್ನ ಉತ್ತರಾಯಣದಲ್ಲಿ ಉಚ್ಚಕುಲಾಚಲವನ್ನಿಟ್ಟುಕೊಂಡು ತನ್ನ ಉತ್ತುಂಗ ಶಿಖರಕ್ಕೆ ಏರಿಬರುವ ಸಾಂಖ್ಯಯೋಗಿಗಳ ಮನೋವೃತ್ತಿಗಳನ್ನು ತಡೆದು ನಿಲ್ಲಿಸಿ ಅಪ್ರಾಕೃತವಾದ ದಿವ್ಯ ದೃಷ್ಟಿಯನ್ನಿತ್ತು ಪ್ರಕೃತಿ-ಪುರುಷರನ್ನು ಒಂದಾಗಿಸಿ ಶಿಖಾಸ್ಥಾನದಲ್ಲಿರುವಂತೆ ಮಾಡಿ, ಆಚಲರನ್ನಾಗಿ ಮಾಡಿಸಿ, ದಿವಿಯನ್ನು ಚುಂಬಿಸುವ ಗೌರೀಶಂಕರವನ್ನು ಹೊಂದಿ ಆ ಉನ್ನತ ಸ್ಥಾನದ ಮೂಲಕ "ಸ್ವದೇಶೋ ಭುವನತ್ರಯಂ" ಎಂದು ಸಾರುತ್ತಾ ತನ್ನ ಮೇರೆಯಲ್ಲಿ ಸುತ್ತಲೂ ಸಮುದ್ರರಾಜನು ಘೋಷಿಸುವಂತೆ ಮಾಡುತ್ತಿದೆಯೋ, ಅಂತಹ ಭಾರತ ಮಾತೃಭೂಮಿಗೆ ಪ್ರಾಣ ಪ್ರಣಾಮಗಳು"

 

ಉಪಸಂಹಾರ

 

ಹೀಗೆ ನಮ್ಮ ಭಾರತ ದೇಶವನ್ನು ಇತರರು ತಮ್ಮ ನೆಲವನ್ನು ಭಾವುಕವಾಗಿ ಪ್ರೀತಿಸುವಂತೆ ಮಾತ್ರವೇ ಪ್ರೀತಿಸಬೇಕಾಗಿಲ್ಲ. ವಿಚಾರಪೂರ್ವಕವಾಗಿ ನೋಡಿದರೂ ಈ ದೇಶದಂತಹ ಪ್ರಬುದ್ಧ ಸಂಸ್ಕೃತಿಯ ದೇಶ, ಅನ್ಯಾದೃಶ ಪೂರ್ವಜರನ್ನೊಳಗೊಂಡ ದೇಶ, ಸಹಜ ಪಾವಿತ್ರ್ಯದಿಂದ ಸಂಸ್ಕಾರಿಗಳನ್ನು ಜೀವನದ ಪರಮೋನ್ನತ ಸ್ಥಿತಿಗೆ ಕೊಂಡೊಯ್ಯುವ ದೇಶ ಜಗತ್ತಿನ ಇನ್ನಾವ ಭಾಗದಲ್ಲೂ ಕಾಣಸಿಗದು. ಉಪನಿಷತ್ತು ಅಪ್ಪಣೆ ಕೊಡಿಸುವಂತೆ- ಸುವರ್ಣ ನಿಕ್ಷೇಪ ಇರುವ ನೆಲದ ಮೆಲೆಯೇ ನಿತ್ಯವೂ ಸಂಚರಿಸುತ್ತಿದ್ದರೂ ಅದರೊಳಗಿನ ಸುವರ್ಣದ ಅರಿವು ಕ್ಷೇತ್ರಜ್ಞನಲ್ಲದವನಿಗೆ ಗೊತ್ತಾಗದು. ಹಾಗೆಯೇ ಈ ದೇಶದಲ್ಲೇ ಹುಟ್ಟಿದಾರಭ್ಯ ಓಡಾಡಿಕೊಂಡು ಇದ್ದರೂ ನಮ್ಮ ಶರೀರವೆಂಬ ಕ್ಷೇತ್ರದ  ಹಾಗೂ ಈ ಭೂಮಿಯೆಂಬ ಕ್ಷೇತ್ರದ ಪರಿಚಯ ನಮಗಿಲ್ಲದಿರುವುದೇ ಈ ದೇಶದ ಬಗೆಗಿನ ನಮ್ಮ ಉದಾಸೀನತೆಗೆ ಕಾರಣ. ಈ ದೇಶವನ್ನು ನಮ್ಮ ಮಹರ್ಷಿಗಳ, ರಾಜರ್ಷಿಗಳ ದೃಷ್ಟಿಯಿಂದ ನೋಡುವಂತಾದಾಗ ಶ್ರೀ ರಾಮನು ಹೇಳುವಂತೆ- "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಎಂದು ಅರ್ಥಪೂರ್ಣವಾಗಿ ನಾವೂ ಹೇಳುವಂತಾದೀತು. ಈ ದೇಶದ ವೈಭವವನ್ನು ಇಷ್ಟು ಚಿಕ್ಕ ಲೇಖನಮಾಲೆಯಲ್ಲಿ ಹಿಡಿದಿಡುವುದಂತೂ ಅಸಾಧ್ಯದ ಮಾತು. ಕೇವಲ ದಿಗ್ದರ್ಶನಮಾತ್ರವಾಗಿ ಕೆಲವೇ ವೈಶಿಷ್ಟ್ಯಗಳನ್ನು ಜ್ಞಾಪಿಸಿಕೊಂಡದ್ದಾಗಿದೆ. ನಮ್ಮ ಹೆಮ್ಮೆಯ ಭಾರತವನ್ನು ನಮ್ಮ ದೇಶದ ಜ್ಞಾನೀ ಜನರಂತೆ ನಾವೂ ಅರಿತು ಪ್ರೀತಿಸುವಂತಾದರೆ ಅದೊಂದು ಅಹೋಭಾಗ್ಯ. ನಾವೆಲ್ಲಾ ಸತ್ಯಾರ್ಥದಲ್ಲಿ ಭಾರತೀಯರಾದರೆ ನಮ್ಮೀ ಪವಿತ್ರದೇಶ ವಿಶ್ವಗುರುವಾಗಿ ಮತ್ತೆ ಮೆರೆದು ತನ್ನ ಜ್ಞಾನವೈಭವದಿಂದ ಲೋಕವನ್ನೆಲ್ಲಾ ಬೆಳಗುವುದರಲ್ಲಿ ಯಾವ ಸಂಶಯವೂ ಇರದು. ನಮ್ಮ ಪೂರ್ವಜರ ಮನದಾಳದ ಘೋಷಣೆ- "ಕೃಣ್ವಂತೋ ವಿಶ್ವಮಾರ್ಯಂ" (ಜಗತ್ತನ್ನು ಆರ್ಯವನ್ನಾಗಿ ಮಾಡೋಣ)  ಎಂದು ಪ್ರಾರ್ಥಿಸೋಣ. 

ಸೂಚನೆ : 27/08/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.