Sunday, August 14, 2022

ಕಾಳಿದಾಸನ ಜೀವನದರ್ಶನ – 23 ರಘುರಾಜರ ಯೌವನ-ವಾರ್ಧಕ್ಯಗಳು (Kalidasana Jivanadarshana - 23 Raghurajara Yauvana-Vardhakyagalu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಯೌವನವು ಮೂಡುತ್ತಲೇ, ಕಾಮೋಪಭೋಗವೇ ಸುಖವೆಂಬ ಗ್ರಹಿಕೆಯು ಲೋಕಸಾಧಾರಣವಾದದ್ದು. ಆದರೆ ಗೀತೆಯು ಈ ಭೋಗಾಭಿಲಾಷೆಯ ಇನ್ನೊಂದು ಮುಖವನ್ನೂ ತೆರೆದಿಡುವುದು. ಅದು ಹೇಳುವಂತೆ, ಕಾಮವು ಆತ್ಮನಾಶಕ್ಕೊಯ್ಯುವ ನರಕದ್ವಾರವಾಗಬಹುದು; ಮಹಾಪಾಪಿಯಾದ ಶತ್ರುವೇ ಆಗಬಹುದು.

ಯಾವ ಮಿತಿಗಳನ್ನು ಇತ್ತ ಆಯುರ್ವೇದಗ್ರಂಥಗಳೂ ಅತ್ತ ಧರ್ಮಶಾಸ್ತ್ರಗಳೂ ಸೂಚಿಸುವುವೋ ಆ ಮಿತಿಗಳೊಳಗೇ ಇದ್ದಲ್ಲಿ ಕಾಮವು ಧರ್ಮಾವಿರುದ್ಧವಾಗಿದ್ದು ಸ್ವಾಗತಾರ್ಹವೆನಿಸುವುದು; ಅದನ್ನು ಉಲ್ಲಂಘಿಸಿ ವರ್ಜ್ಯಾವರ್ಜ್ಯಗಳನ್ನು ಲೆಕ್ಕಿಸದೆ, ಸೊಕ್ಕಿನ ಮಾತಂಗದಂತಾದಲ್ಲಿ ಅಧೋಗತಿಯತ್ತ ಅದು ಎಳೆಯುವುದು.  ಅಂತಹ ಅವನತಿಗೆ ಇನಿತೂ ಆಸ್ಪದವಿಲ್ಲದಂತೆ ರಘುರಾಜರು ವರ್ತಿಸುತ್ತಿದ್ದರು.

ಹೀಗೆ ರಘುರಾಜರು ತಮ್ಮ ಧನ-ವಾಣಿ-ಜಯಶೀಲತೆ-ಕಾಮಗಳೆಂಬ ನಾಲ್ಕು ಸಾಧನಗಳನ್ನು ತ್ಯಾಗ-ಸತ್ಯ-ಯಶಸ್-ಪ್ರಜೆಗಳೆಂಬ ಶ್ಲಾಘನೀಯ ಲಕ್ಷ್ಯಗಳಿಗಾಗಿಯೇ ಬಳಸಿಕೊಳ್ಳುತ್ತಿದ್ದುದನ್ನು ಇಲ್ಲಿ ಹೇಳಿದೆ.

ಇವಿಷ್ಟಲ್ಲದೆ, ಕೊನೆಯದಾದ ನಾಲ್ಕನೆಯ ಶ್ಲೋಕದಲ್ಲಿ, ತಮ್ಮ ಯಾವ ಯಾವ ವಯೋಮಾನದಲ್ಲಿ ಯಾವ ಯಾವ ಪ್ರವೃತ್ತಿ/ಸಾಧನೆಗಳನ್ನು ರಘುರಾಜರು ಹೊಂದಿದ್ದರೆಂಬುದನ್ನೂ ಕವಿಯು ನಿರೂಪಿಸಿದ್ದಾನೆ. ಚಿಕ್ಕಂದಿನಲ್ಲಿ ವಿದ್ಯಾಭ್ಯಾಸ; ಯೌವನದಲ್ಲಿ ವಿಷಯಾಸ್ವಾದ; ವಾರ್ದ್ಧಕದಲ್ಲಿ ಮುನಿವೃತ್ತಿ; ಜೀವನಾವಸಾನದಲ್ಲಿ ಯೋಗದಿಂದ ದೇಹತ್ಯಾಗ.

'ಬಾಲ್ಯದಲ್ಲಿ ವಿದ್ಯಾಭ್ಯಾಸ'ವೆಂಬುದು ಇಂದೂ ಎಲ್ಲೆಡೆಯೂ ಪ್ರಚುರವೇ ಆದ ನಡೆಯಾದುದರಿಂದ, ಪ್ರಾಚೀನಶಿಕ್ಷಣಪದ್ಧತಿಯ ಬಾಲ್ಯವಿದ್ಯಾಭ್ಯಾಸಕ್ಕೂ ಇಂದು ನಡೆಯುವ ವಿದ್ಯಾಭ್ಯಾಸಕ್ಕೂ ಭೇದವೇನೆಂಬುದು ಸುಲಭಕ್ಕೆ ಗೋಚರವಾಗದಿರಬಹುದು. ಅದನ್ನು ತಿಳಿಯುವ ಮಾರ್ಗವೊಂದಿದೆ. ಮುಂದಿನ ಘಟ್ಟಗಳಲ್ಲಿ, ಎಂದರೆ ವಯೋಽವಸ್ಥೆಗಳಲ್ಲಿ ಅವರ ನಡೆಗಳು ಏನಾಗುವುವೆಂಬುದನ್ನು ಗಮನಿಸಿಕೊಂಡಾಗ, ಅವಕ್ಕೆ ಇದು ಯಾವ ಹಿನ್ನೆಲೆಯನ್ನು ಒದಗಿಸಿಕೊಡುವುದೆಂಬುದನ್ನು ಅರಿಯಬಹುದು. ಆದ್ದರಿಂದ ಅವುಗಳನ್ನೇ ಮೊದಲೊಮ್ಮೆ ಗಮನಿಸಿ, ಆಮೇಲೆ ಆ ವಿದ್ಯಾಭ್ಯಾಸದ ಬಗ್ಗೆ ಒಂದು ಪುನರವಲೋಕನವನ್ನು ಮಾಡಬಹುದು. (ಪುನರಾವಲೋಕನವೆಂಬ ಪದವು ಸರಿಯಲ್ಲ).

ಯೌವನದಲ್ಲಿ "ವಿಷಯ"ಗಳನ್ನು ಅವರು ಅನುಭವಿಸುತ್ತಿದ್ದರೆಂಬ ಮಾತಿದೆ. ವಿಷಯಗಳೆಂದರೆ ಇಂದ್ರಿಯವಿಷಯಗಳು; ಅವು ಐದು: "ರೂಪಂ ಶಬ್ದೋ ಗಂಧ-ರಸ-ಸ್ಪರ್ಶಾಶ್ಚ ವಿಷಯಾ ಅಮೀ" ಎಂದು ಅಮರಕೋಶವು ಪಟ್ಟಿಮಾಡಿ ಹೇಳುವಂತೆ, ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳು. ಹೀಗೆ ಕಣ್ಣು-ಕಿವಿ-ಮೂಗು-ನಾಲಿಗೆ-ಚರ್ಮಗಳಿಗೆ ಸುಖವನ್ನು (ಮಿತಿಯನ್ನು ಮೀರಿದರೆ ದುಃಖವನ್ನೂ) ಕೊಡಬಲ್ಲ ವಸ್ತುಗಳು ವಿಷಯಗಳು. ಸುಖಪಡುವ ಪ್ರವೃತ್ತಿಯೂ ಅಪೇಕ್ಷೆಯೂ ಸಾಮರ್ಥ್ಯವೂ ತಾರುಣ್ಯದಲ್ಲಿ ಕೂಡಿಬರುವುವಷ್ಟೆ.

ತಾರುಣ್ಯಾವಸ್ಥೆಯ ಮುಂದಿನ ಘಟ್ಟವೇ ವೃದ್ಧಾವಸ್ಥೆ. ಆ ಅವಸ್ಥೆಯಲ್ಲಿ ರಘುಕುಲದ ಪುರುಷರು ಮುನಿವೃತ್ತಿಯನ್ನು ಅವಲಂಬಿಸುತ್ತಿದ್ದರು. ಮುನಿವೃತ್ತಿಯೆಂಬುದು ಜಪ-ಧ್ಯಾನ ಮುಂತಾದುವುಗಳಲ್ಲೇ ಹೆಚ್ಚು ಕಾಲಕಳೆಯುವ ಪರಿ.

ಈ ಮೂರು ಘಟ್ಟಗಳು ಮೂರು ಆಶ್ರಮಗಳನ್ನು ಹೇಳುವುದನ್ನೂ ಗಮನಿಸಿಕೊಳ್ಳಬಹುದು. ಬ್ರಹ್ಮಚರ್ಯಾಶ್ರಮ-ಗೃಹಸ್ಥಾಶ್ರಮ- ವಾನಪ್ರಸ್ಥಾಶ್ರಮಗಳನ್ನುಇವು ಹೇಳುತ್ತವೆ. ಇವಲ್ಲಿ ಗೃಹಸ್ಥಾಶ್ರಮವು ಪ್ರವೃತ್ತಿಧರ್ಮವನ್ನೂ, ವಾನಪ್ರಸ್ಥಾಶ್ರಮವು ನಿವೃತ್ತಿಧರ್ಮವನ್ನೂ ಹೇಳುತ್ತವೆ.

ಧರ್ಮವು ಎರಡು ಬಗೆಯಾದದ್ದು: ಪ್ರವೃತ್ತಿಧರ್ಮ ಹಾಗೂ ನಿವೃತ್ತಿಧರ್ಮ ಎಂಬುದಾಗಿ. ಎಲ್ಲಿ ಇಂದ್ರಿಯಗಳು ಬಹಿರ್ಮುಖವಾಗಿ (ಎಂದರೆ ನಮಗೆಲ್ಲರಿಗೂ ಸಾಧಾರಣವಾಗಿ ಕೆಲಸಮಾಡುವಂತೆ) ಕೆಲಸಮಾಡುತ್ತವೆಯೋ ಅದು ಪ್ರವೃತ್ತಿಮಾರ್ಗ. ಎಲ್ಲಿ ಅವು ಅಂತರ್ಮುಖವಾಗಿಯೇ ಹೆಚ್ಚಾಗಿ ಕಾರ್ಯಮಾಡುತ್ತವೆಯೋ ಅದು ನಿವೃತ್ತಿಮಾರ್ಗ.

ಒಂದರ್ಥದಲ್ಲಿ ವೃದ್ಧಾವಸ್ಥೆಯು ಬರುವ ಹೊತ್ತಿಗೆ ಇಂದ್ರಿಯಗಳು ತಮ್ಮ ಪಾಟವವನ್ನು ಕಳೆದುಕೊಳ್ಳುವುದರ ಆರಂಭವಾಗಿರುತ್ತದೆ; ಜೀವನದಲ್ಲಿ ಸಾಕಷ್ಟು ಸುಖದುಃಖಗಳನ್ನು ಕಂಡುಂಡ ಬಳಿಕ ಒಂದು ವಿಧವಾದ ಪಕ್ವತೆಯು ಮೂಡುವುದು ಸಹಜವೂ ಆಗಿರುತ್ತದೆ. ಆಗ ಬಾಹ್ಯವಿಷಯಗಳನ್ನು ಕುರಿತಾದ ಪರಮಾಭಿಲಾಷ-ಉತ್ಕಟಕುತೂಹಲಗಳೂ ಕ್ಷೀಣಿಸುತ್ತಾ ಮರೆಯಾಗುತ್ತಾ ಬಂದಿರುತ್ತವೆ.

ವಿದ್ಯಾಭ್ಯಾಸವೆಂದರೆ ಚತುರ್ಭದ್ರವನ್ನು ಪಡೆಯಲು ಬೇಕಾದ ಸಾಧನ - ಎಂಬುದಾಗಿ ಶ್ರೀರಂಗಮಹಾಗುರುಗಳು ಗುರುತಿಸಿದ್ದಾರೆ. ಅರ್ಥಾತ್, ಶೈಶವ-ಗಾರ್ಹಸ್ಥ್ಯ-ವಾನಪ್ರಸ್ಥ-ತುರ್ಯಾಶ್ರಮಗಳಲ್ಲಿ ಕ್ರಮವಾಗಿ ಧರ್ಮ-ಅರ್ಥ-ಕಾಮ-ಮೋಕ್ಷಗಳ ಸಾಧನೆಯಾಗಲು ವಿದ್ಯಾಭ್ಯಾಸವು ಮಾರ್ಗದರ್ಶಕವಾಗಬೇಕು.

ಗಾರ್ಹಸ್ಥ್ಯವನ್ನು ಅವಲಂಬಿಸಿದಾಗ ಅಲ್ಲಿಯ ಕರ್ತವ್ಯಗಳನ್ನೂ, ಸುಖಾಭಿಲಾಷೆಯ ಗಡಿಗಳನ್ನೂ, ಲಬ್ಧವಾದ ವಿದ್ಯಾಭ್ಯಾಸದಿಂದಾಗಿ ಸಹಜವಾಗಿ ಭಾವಿಸುವಂತಿರಬೇಕು. ಅಂತೆಯೇ, ವಾನಪ್ರಸ್ಥವನ್ನು ಅವಲಂಬಿಸಿದಾಗ (ಮತ್ತೆ ಬಾಲ್ಯ-ಯೌವನಗಳ ಅಪಕ್ವತೆ-ಚಾಪಲ್ಯಗಳನ್ನು ಬಿಡಲಾರದಂತಾಗದೆ,) ಅಂತರ್ಮುಖತೆಯತ್ತ ಮನಸ್ಸನ್ನು ಹಚ್ಚಿ, ಧ್ಯಾನಾದಿಗಳ ಕಡೆಗೆ ಮನಸ್ಸು ಹರಿದು, ಅದರ ಸುಖವನ್ನು ಆಸ್ವಾದಿಸಲು ಸಜ್ಜುಮಾಡಿಕೊಡಬೇಕು. (ಆ ವಯಸ್ಸಿನಲ್ಲಿ ಕಾಲಕಳೆಯುವ ಬಗೆ ಹೇಗೆಂಬುದರ ಬಗ್ಗೆ ದಿಕ್ಕೇ ತೋಚದ ಇಂದಿನ ಅನೇಕಮಂದಿಯಂತಾಗಿ ಒದ್ದಾಡುವಂತಾಗಬಾರದು). ಎರಡಕ್ಕೂ ಬೇಕಾದ ಅಡಿಪಾಯವನ್ನು ವಿದ್ಯಾಭ್ಯಾಸವು ಹಾಕಿಕೊಟ್ಟಿರಬೇಕು.

ಯುಕ್ತವಾದ ಸಂಗಸುಖವನ್ನುಯೌವನದಲ್ಲೂ, ಹಾಗೆಯೇ ಯುಕ್ತವಾದ ಅಸಂಗದ ಸವಿಯನ್ನು ವಾರ್ಧಕದಲ್ಲೂ, ಆಸ್ವಾದಿಸುವ ಒಂದು ನೋಟವೂ, ಅವಕ್ಕೆ ಬೇಕಾದ ಕ್ರಮಗಳೂ, ಬಾಲ್ಯದಲ್ಲೇ ಬೋಧಿತವಾಗಿದ್ದರೆ ಮಾತ್ರವೇ ಇದು ಸಾಧ್ಯವಾಗುವುದು.

ಹೀಗೆ ವಯಸ್ಸಹಜವಾದ ಒಲುಮೆಗಳೇನು, ಆಗ ನಡೆಸಬೇಕಾದ ಜೀವನಕ್ರಮದ ಪರಿಪಾಟಿಯೇನು, ಅದಕ್ಕೆ ಬೇಕಾದ ಸಿದ್ಧತೆ-ಅನುಕೂಲತೆಗಳೇನು, ಅಲ್ಲಿ ಸಾಧಿಸಬೇಕಾದ ಲಕ್ಷ್ಯಗಳೇನು - ಎಂಬೆಲ್ಲದರ ಒಂದು ನೋಟವು - ಅರ್ಥಾತ್ ಜೀವನದ ಸಮಗ್ರವಾದ ನೋಟವು - ಬಾಲ್ಯದಲ್ಲೇ ದೊರೆಯುವ ಶಿಕ್ಷಣಕ್ರಮವದು. (ವಯೋಸಹಜವೆಂಬ ಪದವು ಸರಿಯಲ್ಲ).

ಇಂತಹ ನೋಟಗಳೇನೂ ಇಂದಿನ ಶಿಕ್ಷಣದಲ್ಲಿ ದೊರೆಯವಲ್ಲವೇ?: ಇಂದಿನ ರಾಜಕೀಯದಲ್ಲಿ, ಧನಾಶೆ-ಭೋಗಾಶೆ-ಅಧಿಕಾರಲಾಲಸೆ ಮುಂತಾದವನ್ನು ಬಿಡ(ಲಾಗ)ದಿರುವ ವೃದ್ಧರೇ ಹೆಚ್ಚು!

ಅಂತಿಮದಿನಗಳನ್ನು ರಘುರಾಜರು ಕಳೆಯುತ್ತಿದ್ದ ಬಗೆಯೇ ಅತಿವಿಶಿಷ್ಟವಾದುದು.

ಸೂಚನೆ : 13/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.