Sunday, August 28, 2022

ಯಕ್ಷ ಪ್ರಶ್ನೆ?– 1 ಪೀಠಿಕೆ(Yaksha Prashne - 1 Pithike)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)


ಪೀಠಿಕೆ

ಯಕ್ಷನು ಕೇಳುವ ಪ್ರಶ್ನೆ 'ಯಕ್ಷಪ್ರಶ್ನೆ'. ಲೋಕದಲ್ಲಿ ಯಕ್ಷಪ್ರಶ್ನೆಯು 'ಅದೊಂದು ಯಕ್ಷಪ್ರಶ್ನೆಯಾಗಿದೆ' ಎಂದು ಯಾವ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯುವುದು ಕಷ್ಟವೋ ಅಥವಾ ಅಸಾಧ್ಯವೋ ಅಂತಹ ಸಮಯದಲ್ಲಿ ಈ ಸಾಮಾನ್ಯ ಮಾತನ್ನು ಕೇಳುತ್ತೇವೆ. ಪ್ರಶ್ನೆಯನ್ನು ಎರಡು ಸಂದರ್ಭಗಳಲ್ಲಿ ಕೇಳುವುದುಂಟು. ಗೊತ್ತಿಲ್ಲದ ವಿಷಯವನ್ನು ತಿಳಿಯಲು ಗೊತ್ತಿರುವವನಲ್ಲಿ ಪ್ರಶ್ನೆಯನ್ನು ಕೇಳುವುದು ಒಂದು ಬಗೆಯಾದರೆ; ಗೊತ್ತಿರುವವನು ಮತ್ತೊಬ್ಬನಲ್ಲಿರುವ ಜ್ಞಾನವನ್ನು ಪರೀಕ್ಷಿಸಲು ಪ್ರಶ್ನೆಯನ್ನು ಕೇಳುವುದು ಮತ್ತೊಂದು. ಪ್ರಕೃತ ಯಕ್ಷಪ್ರಶ್ನೆಯಲ್ಲಿ ಎರಡನೆಯ ರೀತಿಯಾಗಿದೆ. ಯಕ್ಷನು ಯಮಧರ್ಮರಾಜನ ರೂಪದಲ್ಲಿ ಬಂದವನು. ತನ್ನ ಮಗನ ಜ್ಞಾನವನ್ನು ಲೋಕಕ್ಕೆ ಪ್ರಚುರಪಡಿಸಲು ಇಲ್ಲೊಂದು ನೆಪವಷ್ಟೇ. ಯಕ್ಷನಿಗೆ ಗೊತ್ತಿಲ್ಲ ಎಂಬುದಿಲ್ಲ. ಆದ್ದರಿಂದ ಇದಕ್ಕೆ 'ಯಕ್ಷಪ್ರಶ್ನೆ' ಎಂಬುದಾಗಿ ಪ್ರಚಲಿತವಾಗಿದೆ. ಮಹಾಭಾರತದಲ್ಲಿ ಬರುವ ಒಂದು ಘಟನೆ. ಪಾಂಡವರು ಅರಣ್ಯದಲ್ಲಿ ಸಂಚರಿಸುತ್ತಿರುವಾಗ ಬಾಯಾರಿಕೆಯಿಂದ ಬಳಲಿರುತ್ತಾರೆ. ವಿಶೇಷವಾಗಿ ಪತ್ನಿಯಾದ ದ್ರೌಪದಿಯು ನೀರನ್ನು ತಂದುಕೊಡಲು ಪತಿದೇವರನ್ನು ಕೇಳಿಕೊಳ್ಳುತ್ತಾಳೆ. ಆಗ ಧರ್ಮರಾಜನು ತನ್ನ ಕೊನೆಯ ತಮ್ಮನಾದ ಸಹದೇವನನ್ನು ನೀರು ತರಲು ಕಳುಹಿಸುತ್ತಾನೆ. ಸಹದೇವನು ಅಲ್ಲೇ ಸಮೀಪದಲ್ಲಿರುವ ಒಂದು ಕೊಳಕ್ಕೆ ಹೋಗುತ್ತಾನೆ. ನೀರನ್ನು ಕಂಡು ಅದನ್ನು ಸ್ವೀಕರಿಸಲೆಂದು ಪ್ರಯತ್ನಿಸಿದಾಗ ಅಲ್ಲೊಂದು ಅಶರೀರವಾಣಿಯು ಕೇಳಿಸುತ್ತದೆ. " ಈ ನೀರನ್ನು ತೆಗೆದುಕೊಳ್ಳುವ ಮೊದಲು ನನ್ನ ಪ್ರಶ್ನೆಗೆ ಉತ್ತರಿಸಬೇಕು" ಎಂದು. ಆ ವಾಣಿಯನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಲಿಲ್ಲ ಸಹದೇವ. ಅದರ ಪರಿಣಾಮವಾಗಿ ನೀರನ್ನು ಕುಡಿಯು ತ್ತಿದ್ದಂತೆ ಅಲ್ಲೇ ಶವವಾಗಿ ಬಿದ್ದ. ಬಹಳ ಸಮಯದಿಂದಲ್ಲೂ ಬಾರದಿರುವ ಸಹದೇವನನ್ನು ವಿಚಾರಿಸಲೆಂದು ನಕುಲನನ್ನು ಕಳುಹಿಸಿದ ಧರ್ಮರಾಜ. ನಕುಲನಿಗೂ ಇದೆ ಪರಿಸ್ಥಿತಿ ಬಂದೊದಗಿತು. ಮುಂದೆ ಅರ್ಜುನ ಮತ್ತು ಭೀಮನ ಸರದಿ ಬಂದಾಗ ಅವರಿಬ್ಬರಿಗೂ ನಕುಲ ಸಹದೇವರ ಸ್ಥಿತಿಯೇ ಬಂದಿತು. ಎಷ್ಟು ಹೊತ್ತು ಕಳೆದರೂ ಯಾವ ತಮ್ಮನೂ ಹೋದವನು ಬಾರದಿರುವುದನ್ನು ಕಂಡು ಸ್ವತಃ ತಾನೇ ಅತ್ತ ತೆರಳಿದನು. ಉಳಿದವರಂತೆ ಧರ್ಮರಾಜನಿಗೂ ಇದೆ ರೀತಿಯಲ್ಲಿ ಆ ಶರೀರವಾಣಿ ಕೇಳಿಸಿತು. ಆದರೆ ಧರ್ಮಜನು ಆ ವಾಣಿಯನ್ನು ತಿರಸ್ಕರಿಸಲಿಲ್ಲ. ಆ ವಾಣಿಗೆ ಪ್ರತಿಸ್ಪಂದಿಸಿದ. ಯಕ್ಷನ ವಾಣಿಯು ಅದಾಗಿತ್ತು. ನೀರನ್ನು ಸ್ವೀಕರಿಸುವಕ್ಕಿಂತ ಮೊದಲು ಅವನ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ. ಈ ಸಂದರ್ಭವೇ 'ಯಕ್ಷಪ್ರಶ್ನೆ' ಎಂದು ಪ್ರಸಿದ್ಧಿಯನ್ನು ಪಡೆಯಿತು. ಇಲ್ಲಿ ೧೨೬ ಪ್ರಶ್ನೆಗಳನ್ನು ಯಕ್ಷ ಕೇಳಿದ. ಆ ಎಲ್ಲ ಪ್ರಶ್ನೆಗಳಿಗೂ ಯುಧಿಷ್ಠಿರನು ಬಹಳ ಸಮರ್ಪಕವಾಗಿ ಉತ್ತರಿಸಿದನು. ಇದರಿಂದ ಸಂತುಷ್ಟನಾದ ಯಕ್ಷನು ಯುಧಿಷ್ಠಿರನ ಎಲ್ಲ ಸಹೋದರರನ್ನು ಪುನಃ ಮರಳಿಸಿದನು. ಅಲ್ಲೂ ಒಂದು ನ್ಯಾಯವನ್ನೇ ತೋರಿಸಿದ ಧರ್ಮಜನ ಧರ್ಮಪ್ರಜ್ಞೆ ಲೋಕಕ್ಕೆ ಮಾದರಿಯಾಯಿತು. ಅಲ್ಲದೆ ಧರ್ಮರಾಜನು ಯಾವ ರೀತಿಯಾಗಿ ಧರ್ಮದ ಎಲ್ಲಾ ಮರ್ಮಗಳನ್ನು ಬಲ್ಲವನಾಗಿದ್ದ ಎಂಬುದು ಈ ಪ್ರಕರಣದಿಂದ ತಿಳಿಯುತ್ತದೆ. ಯಕ್ಷನು ಕೇಳಿದ ಆ ಎಲ್ಲ ಪ್ರಶ್ನೆಗಳಿಗೆ ಒಂದೊಂದು ಪದದಲ್ಲಿ ಉತ್ತರಿಸಿದ. ಅದನ್ನು ನಾನಿಲ್ಲಿ ವಿವರಿಸುವ ಪ್ರಯತ್ನವನ್ನು ಮಾಡುತ್ತೇನೆ. ನನ್ನ ಸೀಮಿತವಾದ ಬುದ್ಧಿಯಿಂದ ಈ ಮಹಾಪ್ರಯತ್ನಕ್ಕೆ ಮುಂದಡಿಯಿಡುತ್ತಿದ್ದೇನೆ. ಅದಕ್ಕೆ ಗುರು-ದೇವರ ಅನುಗ್ರಹವನ್ನು ಬೇಡುತ್ತೇನೆ.

ಸೂಚನೆ :28/08/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.