Monday, August 8, 2022

ಕಾಳಿದಾಸನ ಜೀವನದರ್ಶನ – 22 ರಘುರಾಜರ ಸತ್ಯಪ್ರೀತಿ-ಯಶಃಪ್ರೀತಿಗಳು (Kalidasana Jivanadarshana - 22 Raghurajara Satyapriti-Yashahpritigalu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಸಮಯಕ್ಕೆ ಸಲ್ಲುವ ಮಾತನ್ನಷ್ಟೆ ಆಡಿ, ದೊಡ್ಡಸ್ಥಾನದಲ್ಲಿರುವವರು ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕು. ಹೆಚ್ಚಿನ ಮಾತೆಂಬುದು  ಅಪಭಾಷಿತಕ್ಕೆ ಆಸ್ಪದ. ಮಾತಿನಲ್ಲಿ ಅಪಶಬ್ದಪ್ರಯೋಗವಾಗಲಿ, ಸ್ವಾಭಿಪ್ರಾಯಕ್ಕೆ ಹೊಂದದ ನುಡಿಯಾಗಲಿ ಇರಬಾರದು. "ಬಹುವಾಗಿ ಮಾತನಾಡಿಯೂ ಕಿಂಚಿತ್ತೂ ಅಪಶಬ್ದವನ್ನು ನುಡಿಯಲಿಲ್ಲವಲ್ಲಾ!"- ಎಂಬುದಾಗಿ ಹನುಮಂತನ ಬಗ್ಗೆ ಮೆಚ್ಚುಗೆಯನ್ನು ರಾಮನು ವ್ಯಕ್ತಪಡಿಸಿದನೆಂದು ರಾಮಾಯಣವು ಹೇಳುತ್ತದೆ.

ಮಾತಿನಲ್ಲಿ ಗಾಂಭೀರ್ಯವೆಂಬುದು ಎಲ್ಲರಿಗೂ ಬೇಕಾದದ್ದೇ ಆದರೂ ಅರಸರಿಗದು ವಿಶೇಷವಾಗಿ ಬೇಕಾಗುವಂತಹುದು. ಯಾರ ಅಧಿಕಾರವು ಅಧಿಕವೋ, ಅಂಥವರಲ್ಲಿ ವಾಕ್ಸಂಯಮವೂ ಅಧಿಕವಾಗಿಯೇ ಅಪೇಕ್ಷಿತವಾಗುವುದು. ಏಕೆ? ಹಿರಿದಾದ ಸ್ಥಾನದಲ್ಲಿರುವವರು ಲೀಲಾಜಾಲವಾಗಿ ಆಡಿದ್ದೂ ಆಪ್ಪಣೆಯಂತಾಗಿಬಿಡಬಹುದು.

ಎಂದೇ ವ್ಯರ್ಥವಾದ ಮಾತನ್ನೇ ಆಡದ ಎಚ್ಚರವಿರಬೇಕು. ಆಡುವುದು ಸತ್ಯವನ್ನೇ, ಸತ್ಯವನ್ನು ಹೊರತಾಗಿ ಮತ್ತೇನಿಲ್ಲ ಎಂಬುದು ವ್ರತವಾಗಬೇಕು. ಸತ್ಯವಾದ ನುಡಿಯೂ ತನ್ನ ದೇಶ-ಕಾಲ-ವ್ಯಕ್ತಿ-ವಸ್ತು-ಸಂನಿವೇಶಗಳನ್ನು ಮೀರಿದಲ್ಲಿ ಧರ್ಮಕ್ಕೆ ಧಕ್ಕೆ ತಂದೀತು - ಎಂಬ ಎಚ್ಚರವೂ ಬೇಕಾಗುತ್ತದೆ. ಹೀಗಾಗಿ, ಅತ್ತ ಮಾತಿನಲ್ಲಿ ಗಾಂಭೀರ್ಯವೂ ಪರಿಷ್ಕಾರವೂ ಇದ್ದು, ಯುಕ್ತಮಿತಿಯೆಂಬುದೂ ಇದ್ದಾಗ ಮಾತಿಗೆ ಬೆಲೆ ಬರುತ್ತದೆ; ಅದು ಸತ್ಯಕ್ಕೆ ಸಾಧಕವಾಗುತ್ತದೆ. ಎಂದೇ "ಸತ್ಯಾಯ ಮಿತಭಾಷಿಣಾಮ್" ಎಂದಿರುವುದು.

ಸತ್ಯಪ್ರೀತಿಯಿರುವಲ್ಲಿ, ಸತ್ಯಕ್ಕೆಲ್ಲಿ ಅಪಚಾರವಾದೀತೋ ಎಂಬ ಭಯವೊಂದು ಮಾತನಾಡುವಾಗಲೆಲ್ಲ ಜಾಗರಗೊಂಡಿರುವುದೇ."ವಾಕ್ಕಿನ ಪುಷ್ಪವೂ ಫಲವೂ ಸತ್ಯವೇ ಸರಿ" ಎಂಬುದಾಗಿ ಐತರೇಯಶ್ರುತಿಯಿದೆ. "ಸತ್ಯವು (ಎಂದಿಗೂ) ನಿನ್ನ ಜೊತೆಯಾಗಿರಲಿ" – ಎಂಬ ಧರ್ಮ್ಯವಾದ ಮಾತನ್ನು ಶಕುಂತಲೆಯು ದುಷ್ಯಂತನಿಗೆ ಹೇಳುವಳು. "ಸತ್ಯಕ್ಕೆ ಕ್ಷತಿಯಿಲ್ಲದಂತೆ ಆಳುವವನೇ ಕ್ಷತ್ರಿಯ"ನೆಂಬುದಾಗಿ ಸತ್ಯದ ಮೌಲಿಕಾರ್ಥವನ್ನು ಹಿಡಿದು ಶ್ರೀರಂಗಮಹಾಗುರುಗಳು ನುಡಿದಿರುವರು.

ಮಾತು ಸತ್ಯಕ್ಕಾಗಿ – ಎಂದು ಹೇಳಿದಂತೆ, ರಘುವಂಶದ ಅರಸರ ಮತ್ತೊಂದು ಹೆಗ್ಗಳಿಕೆಯನ್ನು ಕವಿ ತೋರಿಸಿದ್ದಾನೆ. ಅದು, ಅವರು ವಿಜಿಗೀಷುಗಳಾಗಿದ್ದುದಾದರೂ ಯಶಸ್ಸಿಗಾಗಿ [ಅಷ್ಟೆ] - ಎಂಬುದು. ಹಾಗೆಂದರೇನು?

ಜಿಗೀಷುವೆಂದರೆ ಜಯಕ್ಕಾಗಿ ಹಂಬಲಿಸುವವ. ವಿಶೇಷವಾದ ಆ ಹೆಬ್ಬಯಕೆಯುಳ್ಳವನು ವಿಜಿಗೀಷು. ಆ ಬಗೆಯ ಮಹಾಕಾಂಕ್ಷೆಯುಳ್ಳವರು ಎಷ್ಟೋ ವೇಳೆ ದೌಷ್ಟ್ಯದಿಂದಲೂ ಕ್ರೌರ್ಯದಿಂದಲೂ ವರ್ತಿಸುವುದುಂಟು. ರಾಜ್ಯವಿಸ್ತಾರ ಎಂಬುದು ಪರಾಕ್ರಮದ ಲಕ್ಷಣವು ಹೌದಾದರೂ, ಅದು ದೌರ್ಜನ್ಯಪ್ರೇರಿತವಾಗಬಾರದು: ಸೋತವರನ್ನು ಹಂಗಿಸಿ ಭಂಗಿಸಿ ಮೆಟ್ಟಿ ಅಣಕವಾಡಿ ಕೆಡವಿ ಕೆರಳಿಸಿ ಕೊರಗಿಸುವ ಪ್ರವೃತ್ತಿಯದಾಗಬಾರದು.

ಸೋತವನು ಸಾಮಂತನಂತಾದರೆ ಸಾಕು; ಅವನಿಗೆ ಅತಿಯಾದ ಸೊಕ್ಕಿದ್ದಲ್ಲಿ ಅದನ್ನು ಹತ್ತಿಕ್ಕಬಹುದೇ ವಿನಾ, ಅವನಿಗೆ ಅವಮಾನಮಾಡುವುದರಲ್ಲಿಯೇ ಸಂತೋಷ ಕಾಣುವ ರುಚಿಯಿರಬಾರದು. ಯಶಸ್ಸಿಗೆ ಸೀಮಿತವಾಗಿರಬೇಕು, ತನ್ನ ಜಿಗೀಷುತೆ. ಈ ಬಗೆಯ ನಡೆಯಿಂದ ಶತ್ರುಗಳನ್ನೂ ಮಿತ್ರರನ್ನಾಗಿಸಿಕೊಳ್ಳಬಹುದು. ರಾಜನಿಗೆ ಅದರ ಅರಿವು ಅವಶ್ಯ.

ಅಂತೆಯೇ ಲೂಟಿಮಾಡುವ ಅಥವಾ ಲಂಪಟತನದ ಪ್ರವೃತ್ತಿಯೂ ಅದಾಗಬಾರದು. ಮುಘಲ್ ದೊರೆಗಳೆಲ್ಲ ಮಾಡಿದುದಿದನ್ನೇ; ಕ್ರೌರ್ಯದಿಂದ ಅವರು ಸಾಧಿಸಿದುದನ್ನೇ, ವಕ್ರಮಾರ್ಗದಿಂದ ಸಾಧಿಸಿದವರು ಕ್ರೈ ಸ್ತದೊರೆಗಳು -ಎಂಬುದನ್ನು ನಮ್ಮ ದೇಶದಲ್ಲೂ ಇತರ ದೇಶಗಳಲ್ಲೂ ಅವರುಗಳು ನಡೆದುಕೊಂಡ ಬಗೆಯನ್ನು ಚಿತ್ರಿಸುವ ಇತಿಹಾಸಗ್ರಂಥಗಳು ಸಾರುವುವು.

ಧರ್ಮಮಾರ್ಗದಿಂದ ಸಂಪಾದಿಸುವ ಕೀರ್ತಿಯು ಯಶಸ್ಸೆನಿಸುವುದು. ಅಧರ್ಮದಿಂದಾದುದು ಅ(ಪ)ಯಶಸ್ಸು. ಎಂದೇ ರಘುವಂಶದ ಅರಸರು ಯಶಸೇ ವಿಜಿಗೀಷೂಣಾಂ ಆಗಿದ್ದವರು.

ರಘುರಾಜರ ವಾಕ್ಪ್ರವೃತ್ತಿ-ಶೌರ್ಯವೃತ್ತಿಗಳನ್ನು ಚಿತ್ರಿಸಿದ ಕವಿಯು, ಮತ್ತೂ ಸೂಕ್ಷ್ಮವೂ, ಮತ್ತೂ ಪ್ರಭಾವಶಾಲಿಯೂ ಆದ ಅವರ ಕಾಮದ ಸೀಮೆಯನ್ನೂ ನಮ್ಮ ಮುಂದಿರಿಸುತ್ತಾನೆ. "ಪ್ರಜಾರ್ಥವಾಗಿಯಷ್ಟೆ ಅವರು ಗಾರ್ಹಸ್ಥ್ಯವನ್ನು ಸ್ವೀಕರಿಸಿದುದು" – ಎನ್ನುತ್ತಾನೆ.

'ಪ್ರಜಾ' ಎನ್ನುವ ಪದಕ್ಕೆ ಸಂತಾನವೆಂದೇ ಅರ್ಥ. (ಈ ಲೆಕ್ಕದಲ್ಲಿ'ಇಂದಿನ ಮಕ್ಕಳು ನಾಳೆಯ ಪ್ರಜೆಗಳು' ಎಂಬ ಪ್ರಯೋಗದ ಸಾಧುತ್ವವು ಚಿಂತ್ಯವೇ ಆಗಬಹುದು).

ಅರ್ಥದ ವಿಷಯದಲ್ಲಿ ಹೇಗೆ ರಘುರಾಜರ ವರ್ತನೆಯು ಜವಾಬ್ದಾರಿಯಿಂದ ಕೂಡಿರುವುದಾಗಿತ್ತೋ, ಅದೇ ರೀತಿಯಲ್ಲೇ ಕಾಮದ ವಿಷಯದಲ್ಲೂ. ಒಂದೇ ಶ್ಲೋಕದ ಪ್ರಥಮಪಾದ-ಚರಮಪಾದಗಳಲ್ಲಿ ಆ ಅರಸರ ಅರ್ಥ-ಕಾಮಗಳ ಬಗೆಗಿನ ಮನಃಪ್ರವೃತ್ತಿಯನ್ನು ಕವಿಯು ತೋರಿಸಿದ್ದಾನೆ. ಹಾಗೆಂದರೇನೆಂಬುದನ್ನು ಸ್ವಲ್ಪ ಬಿಡಿಸಿ ನೋಡಬಹುದು.

ಯೌವನದಲ್ಲಿ ಕಾಮಾಭಿಲಾಷೆಯು ಯಾರಿಗುದಿಸದು? ಇನ್ನು ಯೌವನ, ಧನರಾಶಿ, ಪ್ರಭುತ್ವ - ಇವುಗಳೆಲ್ಲ ಒಬ್ಬನಲ್ಲಿ ಸೇರಿಕೊಂಡಾಗ ಭೋಗಾಭಿಲಾಷೆಯು ತೀವ್ರವಾಗುವಲ್ಲಿ ಆಶ್ಚರ್ಯವಿಲ್ಲ. ಕಾಮವೆಂಬುದು ಯೋಗವೂ ಆಗಬಹುದು, ರೋಗವೂ ಆಗಬಹುದು. ಅದೊಂದು ಅದಮ್ಯಪ್ರವೃತ್ತಿಯಾಗಿಹೋದಾಗ ಲಂಪಟತನಕ್ಕೆ ದಾರಿಯಾಗುವುದು. ಎಷ್ಟಾದರೂ, ಇಷ್ಟು ಸಿಕ್ಕರೆ ಮತ್ತಷ್ಟನ್ನು ಬಯಸುವುದಕ್ಕೆ ಇಂಬುಕೊಡುವಂತಹುದು, ಕಾಮವೆಂಬುದು. ಭೋಗಶಕ್ತಿ-ಭೋಗ್ಯಸಾಮಗ್ರಿಗಳ ಭಾಗ್ಯಕ್ಕೆ ಭಾಜನನಾಗಿರುವವರಿಗೆ ಭೋಗಪ್ರವೃತ್ತಿಯಾದರೂ ಭೋರ್ಗರೆಯುವಂತಹುದೇ ಸರಿ!

ರಘುರಾಜರಿಗೆ ಅವೆಲ್ಲವೂ ಇದ್ದರೂ ಅದು ಹಾಗಿರಲಿಲ್ಲ; ಸಂತಾನಾರ್ಥವಾಗಿ ಅವರು ಗೃಹಮೇಧಿಗಳಾದರು. ಗೃಹಮೇಧಿಯೆಂದರೆ ಗೃಹಸ್ಥ. ಗೃಹಶಬ್ದವು ಪತ್ನೀವಾಚಕ; ಮೇಧಿಯೆಂಬುದು ಸಂಗಮವನ್ನು ಸೂಚಿಸುವುದು. ಹೀಗಾಗಿ ದಂಪತಿಗಳು ಸೇರುತ್ತಿದ್ದುದು ಸಂತಾನಾರ್ಥವಾಗಿ – ಎಂಬುದು ಕವಿಯ ಆಶಯ.

ಸೂಚನೆ : 06/07/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.