Sunday, August 28, 2022

ಅಷ್ಟಾಕ್ಷರೀ​ - 18 ಸಂಶಯಾತ್ಮಾ ವಿನಶ್ಯತಿ (Astakshara Darshana 18 Samshayatma Vinashyati)


ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

                                    (ಸಾಂದರ್ಭಿಕ ಚಿತ್ರ)

ಒಂದರ್ಥದಲ್ಲಿ ಜೀವನವೇ ಸಂಶಯಮಯ. ನನ್ನೀ ಪ್ರಯತ್ನ ಸಫಲವಾಗುವುದೋ ಇಲ್ಲವೋ? - ಎಂಬ ಸಂದೇಹ ಯಾರಿಗೆ ಒಮ್ಮೆಯೂ ಬಂದಿಲ್ಲ? ಈತನನ್ನು (ಅಥವಾ ಈಕೆಯನ್ನು) ನಂಬಲೋ ಬೇಡವೋ? ಈ ಔಷಧದಿಂದ ನನ್ನ ಖಾಯಿಲೆಯು ವಾಸಿಯಾಗುವುದೋ ಇಲ್ಲವೋ? ಕೊನೆಗೆ, ದೇವನಿರುವನೋ ಇಲ್ಲವೋ? : ಎಲ್ಲವೂ ಸಂದೇಹಕ್ಕೆ ಒಳಪಡುವುದೇ!

ನಂಬಿಕೆಯಿದ್ದಾಗಲೇ ಅಲ್ಲವೇ ನೆಮ್ಮದಿ? ಆದರೂ ಹಾಗೆಂದು ಎಲ್ಲರನ್ನೂ ನಂಬಿಬಿಡುವುದೇ? ನಂಬಿದರೂ ಒಮ್ಮೊಮ್ಮೆ ಸಂದೇಹವೇ: "ಅಷ್ಟೊಂದು ನಂಬಬಾರದಿತ್ತೇನೋ?"; ನಂಬಲಾಗದಿದ್ದಾಗಲಂತೂ ಸಂತತ ಚಿಂತೆಯೇ. ಯಾರನ್ನು ನಂಬುವುದು, ಎಷ್ಟು ನಂಬುವುದು? ಹೇಗೆ ನಂಬುವುದು? - ಎಂದೆಲ್ಲ ಪ್ರಶ್ನೆಗಳೇ.

ಇಷ್ಟು ಸಾಲದೆಂಬಂತೆ, ಇದರ ಜೊತೆಗೆ, "ಪ್ರಶ್ನಿಸದೆ ನಂಬಬೇಡಿ" ಎಂದು ಸುಲಭವಾಗಿ ಉಪದೇಶ ಮಾಡುವ ಭೂಪರೂ ಇಲ್ಲದಿಲ್ಲ. ವಿಜ್ಞಾನದ ಪಾಠದಷ್ಟಕ್ಕೆ ಅದನ್ನು ಸೀಮಿತಗೊಳಿಸಿಕೊಂಡರೆ ಸ್ವಲ್ಪ ಪರವಾಯಿಲ್ಲವೇನೋ? ವಾಸ್ತವವಾಗಿ, ಅಲ್ಲೂ ಎಲ್ಲವನ್ನೂ ಸುಲಭವಾಗಿ ಒಪ್ಪಿ(ಸಿ)ಬಿಡುವುದೂ ಕಷ್ಟವೇ. "ಭೂಮಿ ಸುತ್ತುತ್ತಿದೆ, ಸೂರ್ಯನಲ್ಲ" – ಎಂದು ಶಾಲೆಯಲ್ಲಿ ಅಧ್ಯಾಪಕರೇನೋ ಹೇಳುತ್ತಾರೆ; ಅದಕ್ಕೊಂದಿಷ್ಟು ತರ್ಕವನ್ನೂ ಹೇಳಿರಬಹುದು; ಆದರೆ, ಎಷ್ಟು ಮಂದಿಗದು ಸ್ಪಷ್ಟವಾಗಿಬಿಡುತ್ತದೆ? ಕೊನೆಗೆ ಉಪಾಧ್ಯಾಯರಿಗೇ ಅಲ್ಲೊಂದಿಷ್ಟು ಅಸ್ಪಷ್ಟತೆಯು ಉಳಿದುಕೊಂಡಿದ್ದರೂ ಆಶ್ಚರ್ಯವಿಲ್ಲ! ಹೆಚ್ಚು ಪ್ರಶ್ನಿಸಿದರೆ, ನುಣುಚಿಕೊಳ್ಳುವ ರಾಜಮಾರ್ಗವಂತೂ ಇದ್ದೇ ಇರುತ್ತದೆ: "ಅದೆಲ್ಲಾ ಮುಂದೆ ಗೊತ್ತಾಗುವುದು"!    

ಎಲ್ಲವನ್ನೂ/ಎಲ್ಲರನ್ನೂ ನಂಬಿದರೂ ಕಷ್ಟವೇ, ನಂಬದಿದ್ದರೂ ಕಷ್ಟವೇ. ಎಲ್ಲವನ್ನೂ ಶಂಕಿಸುತ್ತಾ ಪ್ರಶ್ನಿಸುತ್ತಾ ಕುಳಿತರೆ ಜೀವನ ನಡೆದೀತೇ? "ಅಮ್ಮನು ಬಡಿಸಿದ ಊಟದಲ್ಲಿ ವಿಷವಿಲ್ಲವೆಂದು ಏನು ಖಾತ್ರಿ?" – ಎಂಬ ಸಂಶಯ ಬರಬಾರದೆ? ಏಕೆ? ಇತಿಹಾಸದಲ್ಲಿ ಎಂದೂ ಯಾವ ತಾಯಿಯೂ ಹೆತ್ತ ಮಕ್ಕಳಿಗೆ ವಿಷವಿಕ್ಕಿಯೇ ಇಲ್ಲವೇ?; ಇಕ್ಕಲು ಸಾಧ್ಯವೇ ಇಲ್ಲವೇ? - ಹೀಗೆಲ್ಲಾ "ತರ್ಕಬದ್ಧ"ವಾಗಿ ಪ್ರಶ್ನೆಗಳೂ ಸಂಶಯಗಳೂ ಏಳುತ್ತಿರುವುದಾದರೆ, ಜೀವಕ್ಕೆ ನೆಲೆಯೆಲ್ಲಿ, ನೆಮ್ಮದಿಯೆಲ್ಲಿ? ಜೀವನಿರ್ವಹಣೆಯೆಲ್ಲಿ? ಹಾಗೆಂದು ಯಾವೊಂದನ್ನೂ ಪ್ರಶ್ನಿಸದೆ ಕೂರಬೇಕೆ? ಹಾಗಾದರೆ ಇಲ್ಲಿ ವಿಭಾಗವೆಲ್ಲಿ? ಗೆರೆಯೆಳೆಯುವುದೆಲ್ಲಿ? ಮತ್ತು ಹೇಗೆ? - ಹೇಳುವವರಾರು? (ಹೇಳುವವರೂ ನಂಬಲರ್ಹರೆಂಬ ನಂಬಿಕೆಯಿದೆಯೇ?) ಈ ಪರಿಗೆ ಕೊನೆಯೆಂಬುದೇ ಇರದು: ಕೊನೆಯೇ ಕಾಣದಾಗದ ತಾರ್ಕಿಕಪರಿಸ್ಥಿತಿಯನ್ನು"ಅನವಸ್ಥಾ-ದೋಷ"ವೆನ್ನುತ್ತಾರೆ.

ಪ್ರಶ್ನೆಗಳ ಸುರಿಮಳೆಯೇ ಆಯಿತು. ಇನ್ನು ಉತ್ತರದತ್ತ ಸ್ವಲ್ಪ ಪ್ರಯತ್ನಮಾಡುವಾ. ಗೀತೆಯಲ್ಲಿಯ ಒಂದು ಮಾತು ಈ ಪ್ರಶ್ನಪರಂಪರೆಗೆ ಉತ್ತರ ಕೊಡಬಹುದೇನೋ? ಗೀತೆಯು ಹೇಳುವುದು "ಸಂಶಯಾತ್ಮಾ ವಿನಶ್ಯತಿ" – ಎಂಬುದಾಗಿ: "ಸಂಶಯಪರನಾದವನು ಹಾಳಾಗುವನು."

ಎಲ್ಲಾ ಸಂಶಯಾತ್ಮರೂ ಹಾಳಾಗುವರು – ಎಂದು ಇಲ್ಲಿ ಹೇಳಿಲ್ಲ. ಎರಡು ವಿಶೇಷಣಗಳನ್ನು ಹೇಳಿದೆ: "ಅಜ್ಞನೂ ಅಶ್ರದ್ದಧಾನನೂ ಆಗಿರುವ" ಸಂದೇಹಿಯು ಹಾಳಾಗುವನು - ಎಂದಿದೆ. ಹಾಗೆಂದರೇನು? ಹಾಗೆಂದರೇನೆಂಬುದನ್ನು ತಿಳಿಯಲು, ಚಿಕ್ಕಂದಿನಲ್ಲಿ ನಮ್ಮನ್ನು ಅಪ್ಪ-ಅಮ್ಮಂದಿರು ಬೈಯುತ್ತಿದ್ದುದನ್ನು ಸ್ಮರಿಸಿಕೊಂಡರೆ ಸಾಕು. ಏನದು ಬೈಗಳ? "ಇಲ್ಲವೋ ಸ್ವಂತಬುದ್ಧಿಯಿರಬೇಕು; ಇಲ್ಲವೋ ಹಿರಿಯರು ಹೇಳಿದ ಮಾತನ್ನು ಕೇಳಬೇಕು; ಎರಡೂ ಇಲ್ಲದ ನೀನು ಉದ್ಧಾರವಾಗುವೆಯಾ?" – ಎಂಬ (ಪ್ರೀತಿಯ) ಮಾತನ್ನು ಯಾರು ಎಷ್ಟು ಬಾರಿ ಕೇಳಿಲ್ಲ? ಅಂತೆಯೇ ಕೃಷ್ಣನಿಲ್ಲಿ ಹೇಳುತ್ತಿರುವುದೂ.

ಇಲ್ಲವೇ "ಜ್ಞ"ನಾಗಿರಬೇಕು (ಎಂದರೆ ತಾನೇ ಚೆನ್ನಾಗಿ ತಿಳಿದವನಾಗಿರಬೇಕು); ಅಥವಾ (ಬಲ್ಲ ಹಿರಿಯರ ಮಾತಿನಲ್ಲಿ) ಶ್ರದ್ಧೆಯಾದರೂ ಇರಬೇಕು: ಇವೆರಡೇ ಮಾರ್ಗಗಳಿರುವುದು. "ಎರಡೂ ಇಲ್ಲ; ಜೊತೆಗೆ ಸಂಶಯಗಳ "ಗಂಟು"ಗಳಂತೂ (ಎರಡೂ ಅರ್ಥದಲ್ಲಿ) ಭೂರಿಭೂರಿಯಾಗಿಯೇ ಉಂಟು" - ಎಂದಾಗಿಬಿಟ್ಟರೆ ಹೇಗೆ? 

ಶ್ರದ್ಧೆಯೆಂದರೇನು? ಬಲ್ಲ ಗುರುವಿನ ಮೇಲೆ, ಬಲ್ಲಿದರು ರೂಪಿಸಿದ ಶಾಸ್ತ್ರದ ಮೇಲೆ – ಇಡುವ ನಂಬಿಕೆಯೇ ಶ್ರದ್ಧೆ. ಶಾಸ್ತ್ರವೆಂದರೇನು? ಜೀವನದ ಲಕ್ಷ್ಯವೇನು, ಅದಕ್ಕೆ ಬೇಕಾದ ಮಾರ್ಗವೇನು? - ಎಂಬೀ ಗಹನಪ್ರಶ್ನೆಗಳಿಗೆ ಉತ್ತರವನ್ನು ಕೊಡತಕ್ಕವೇ ಶಾಸ್ತ್ರಗಳು: ಗೀತೆ-ಉಪನಿಷತ್ತು-ಸ್ಮೃತಿಗಳು - ಮೊದಲಾದವು. ಗುರುವಾರು? ಶಾಸ್ತ್ರಗಳು ಬೋಧಿಸುವ ಸಾರಭೂತವಾದ ವಿಷಯವನ್ನೇ, ಮತ್ತೂ ಸಾರವತ್ತಾಗಿ ಮತ್ತು ಸಾನ್ವಯವಾಗಿ ಸಾಕಷ್ಟು ವಿವರಿಸಿ ನಿರೂಪಿಸಬಲ್ಲವನೇ ನಿಜವಾದ ಗುರು.

ಆದರೆ ಸ್ವತಃ ಅಜ್ಞ, ಪ್ರಾಜ್ಞರನ್ನೂ ಪ್ರಶ್ನಿಸ; ಮನಸ್ಸು ಮಾತ್ರ ಸಂಶಯಮಯ! – ಎಂದಾಗಿಬಿಟ್ಟವನಿಗೆ ಎಲ್ಲವೂ ಅಯೋಮಯವೇ! ಹಾಗೆ ಮತಿಗೆಟ್ಟವನು ಗತಿಗೆಡುವುದರಲ್ಲಿ ಸಂಶಯವೇನು? ಆಶ್ಚರ್ಯವೇನು?

ಸಂಶಯಪಡಬಾರದೆಂದರೇನು?: ಪ್ರಶ್ನೆಗಳೇ ಹುಟ್ಟಿಕೊಳ್ಳಬಾರದೆಂದಲ್ಲ; ಹುಟ್ಟಿದ ಪ್ರಶ್ನೆಗೆ ಸಮಾಧಾನವನ್ನರಸಬಾರದೆಂದಂತೂ ಅಲ್ಲವೇ ಅಲ್ಲ. ಪ್ರಶ್ನೆಗಳು ತಾವಾಗಿ ಹುಟ್ಟಿಕೊಳ್ಳುತ್ತಿರುತ್ತವೆಯಲ್ಲವೇ? ಅವನ್ನು ತಡೆಯುವುದದೆಂತು? ಎದುರಿಗೆ ಗುರುವಿದ್ದರೆ, ಪ್ರಶ್ನೆಗಳಿಗೆ ನೇರವಾಗಿಯೋ ಜಾಣ್ಮೆಯ ಪ್ರಯೋಗದಿಂದಲೋ ಅರ್ಹತಾನುಸಾರ ಉತ್ತರವಿತ್ತಾನು.

ನಚಿಕೇತನಿಗೆ ಯಮನೂ, ಅರ್ಜುನನಿಗೆ ಕೃಷ್ಣನೂ ಲೋಕೋತ್ತರಗುರುಗಳಾಗಿ ಲಬ್ಧರಾದರು. ಅರ್ಜುನನೂ ನಚಿಕೇತನೂ ಬೇಕಾದಷ್ಟೇ ಪ್ರಶ್ನೆಗಳನ್ನು ಎತ್ತಲಿಲ್ಲವೇ? ಆದರೂ, "ಆಹಾ! ನಿನ್ನಂತೆ ಪ್ರಶ್ನೆಕೇಳುವವರು ನಮಗೆ ದೊರೆಯಲಿ!" - ಎಂದು ನಚಿಕೇತನ ಬಗ್ಗೆ ಯಮನೇ ಆಶೆಪಟ್ಟ! "ಆಹಾ! ನಿನ್ನ ಹಾಗೆ ಈ ಸಂಶಯವನ್ನು ಛೇದಿಸುವವರು ದೊರೆಯರೇ ಸರಿ!" ಎಂದು ಧನ್ಯಂಮನ್ಯನಾಗಿ (ತಾನೇ ಧನ್ಯನೆಂಬ ಭಾವನೆಯಿಂದ) ಕೃಷ್ಣನ ಬಗ್ಗೆ ಅರ್ಜುನನೇ ಹೇಳಿಕೊಂಡ! ಶ್ರೀಕೃಷ್ಣನಾದರೂ ಪರಿಪ್ರಶ್ನವನ್ನು - ಎಂದರೆ ನಾನಾಮುಖಗಳಿಂದ ಪ್ರಶ್ನೆಗಳನ್ನು ಕೇಳುವುದನ್ನು - ಅರಿವು ಮೂಡುವುದಕ್ಕೆ ಒಂದು ಮುಖ್ಯಮಾರ್ಗವೆಂಬುದಾಗಿಯೇ ತಿಳಿಸಿದ: "ಅರುಹುವರು ತತ್ತ್ವಜ್ಞರು" - ಎಂದ. ತತ್ತ್ವಜ್ಞನೇ ಗುರು!

ಅರ್ಜುನನಾದರೂ ಕೃಷ್ಣನನ್ನು ಸ್ವಲ್ಪಕ್ಕೇ ಬಿಡಲಿಲ್ಲವಲ್ಲ?: "ಈ ಘೋರಕರ್ಮದಲ್ಲೇಕೆ ನನ್ನನ್ನು ತೊಡಗಿಸುವೆ?"; "ವ್ಯಾಮಿಶ್ರವಾಗಿರುವ (ಎಂದರೆ ಸಂಕೀರ್ಣವಾಗಿರುವ) ಮಾತುಗಳಿಂದ ನನ್ನ ಬುದ್ಧಿಗೆ ಮೋಹವನ್ನು (ಎಂದರೆ ಭ್ರಮೆಯನ್ನು) ನೀನುಂಟುಮಾಡುತ್ತಿರುವಂತಿದೆಯೆಲ್ಲಾ!" ಎಂದೆಲ್ಲಾ ಆಕ್ಷೇಪಿಸಲಿಲ್ಲವೆ, ಮೊದಮೊದಲು? ಕಳಕಳಿಯ ಈ ಪ್ರಶ್ನೋಪಪ್ರಶ್ನೆಗಳಿಗೆ ಕೃಷ್ಣನು ಇನಿತಾದರೂ ಕಿರಿಕಿರಿಗೊಂಡನೇನು? ಅಂತಿಮವಾಗಿ ಅರ್ಜುನನೇ ಅಂದದ್ದೇನು? "ನನ್ನ ಮೋಹವಿದೋ ಹರಿಯಿತು, ಸಂದೇಹಗಳೆಲ್ಲ ಕಳೆದವು - ಎಲ್ಲವೂ ನಿನ್ನ ಪ್ರಸಾದದಿಂದ! ಇದೋ ಇನ್ನು ನಿನ್ನ ಮಾತಿನಂತೆ(ಯೇ) ಮಾಡುವೆ."

ಮೊದಲನೆಯ ಅಧ್ಯಾಯವನ್ನು "ವಿಷಾದಯೋಗ"ವೆಂದು ಪಾರಂಪರಿಕವಾಗಿ ಕರೆದಿದೆಯಷ್ಟೆ? ಉಳಿದೆಲ್ಲ ಅಧ್ಯಾಯಗಳನ್ನು ಶ್ರೀರಂಗಮಹಾಗುರುಗಳು ಸುಭಗವಾಗಿ "ಪ್ರಸಾದಯೋಗ"ವೆಂದು ನಿರ್ದೇಶಿಸಿದ್ದರು. ಹೌದಲ್ಲವೇ?: ಅರ್ಜುನನ ಸಂಶಯ ಸರಿಯಿತು, ನಿಶ್ಚಯ ಮೂಡಿತು; ದಾರಿಯು ತೋರಿತು: ಗುರಿಯೇ ದೊರೆಯಿತು!

ಇತ್ತ ತಾನೂ ಅರಿಯ(ಲೆಳಸ)ದೆ, ಅತ್ತ ಅರಿತವರತ್ತಲೂ ಸಾಗದೆ, ಸಂಶಯಗಳನ್ನೇ ಗುಡ್ಡೆಹಾಕಿಕೊಂಡು ಮೈಪರಚಿಕೊಳ್ಳುತ್ತ ಕುಳಿತುಕೊಂಡ ಪೆದ್ದಗುಂಡನಿಗೆ ಪರವಿರಲಿ, ಇಹವೂ ಸಾಧಿಸದು! – ಎಂಬರ್ಥದ ಶ್ರೀಕೃಷ್ಣನ ಯುಕ್ತಿಯುಕ್ತವಾದ ಉಕ್ತಿಯಲ್ಲಿ ಯಾರಿಗೆ ರಕ್ತಿ(=ಪ್ರೀತಿ)ಯಾಗದು?

ಸೂಚನೆ: 28/08/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.