Saturday, August 27, 2022

ಕಾಳಿದಾಸನ ಜೀವನದರ್ಶನ - 25 ಮಹಾರಾಜನ ಕಾರ್ಯವೈಖರಿ (Kalidasana Jivanadarshana - 25 Maharajana Karyavaikhari)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಾಜನೊಬ್ಬನ ನಿತ್ಯಜೀವನವು ಹೇಗಿರಬೇಕೆಂಬುದನ್ನು ಕಾಳಿದಾಸನ ಕೃತಿಗಳಿಂದ ಅರಿತುಕೊಳ್ಳಬಹುದು.  ತನ್ನ ಧರ್ಮಾಸನಕ್ಕೆ ಬೆಳಿಗ್ಗೆ ಬೇಗನೆ ಬಂದು ಕುಳಿತುಕೊಳ್ಳುತ್ತಾನೆ, ಮಹಾರಾಜ. ಆ ಕೆಲಸವೇ ಮಧ್ಯಾಹ್ನದವರೆವಿಗೂ ಸಾಗುತ್ತದೆ. ಧರ್ಮಾಸನದಲ್ಲಿ ಕುಳಿತಿದ್ದು ಧರ್ಮಾಧರ್ಮನಿರ್ಣಯವನ್ನು ಮಾಡುವುದು ಸುಲಭವಾದ ಕೆಲಸವೇ? ರಘುವಂಶದಲ್ಲಿ ಹೇಳುವಂತೆ, ರಾಜವೃತ್ತವೆಂಬುದು ರಾಜರಿಗೆ ಸುಖಕ್ಕೆ ಪ್ರತಿಬಂಧಕವೇ ಸರಿ.  ಎಷ್ಟರ ಮಟ್ಟಿಗೆಂದರೆ, ಆತನ ಕಾರ್ಯಸ್ಥಾನವು ಆತನ ಮಟ್ಟಿಗೆ ಒಂದು ಕಾರಾಸ್ಥಾನವೇ ಸರಿ! - ಎಂಬ ಭಾವ ಅಲ್ಲಿದೆ.


ರಾಜನಾಗುವ ತನಕ ಕುತುಕ, ತವಕ, ಹಂಬಲಗಳಿರುವುವು. ರಾಜನಾದ ಬಳಿಕ ಅಲ್ಲಿಯ ಜವಾಬ್ದಾರಿಯ ಕ್ಲೇಶದ ಅನುಭವವಾಗುತ್ತಿದ್ದಂತೆ ಅವೆಲ್ಲವೂ ಮಾಯವಾಗಲಾರಂಭಿಸುವುವು! ರಾಜತ್ವದಲ್ಲಿ ಸುಖವುಂಟು, ಇಲ್ಲವೆಂದಲ್ಲ; ಜೊತೆಗೇ ಅಪಾರಶ್ರಮವೂ ಉಂಟು. ಇದಕ್ಕೆ ಕಾಳಿದಾಸನು ಒಂದು ಕೊಡೆಯ ಉದಾಹರಣೆಯನ್ನು ಕೊಡುತ್ತಾನೆ: ಕೊಡೆಯನ್ನು ಹಿಡಿದುಕೊಂಡರೆ ನೆರಳೆಂಬ ಸುಖವೇನೋ ಇರುವುದೇ; ಆದರೆ ಕ್ರಮೇಣ ಕೈಗೆ ನೋವು ಬರುವುದೇ. ರಾಜಪದವಿಯು ದೊರಕುವ ಮುಂಚಿನ ಉತ್ಸುಕತೆ, ಪಡೆದಾಗಾಗುವ ಸಂತೋಷ - ಇವು ನೋವನುಭವವನ್ನು ಕೊಂಚ ಹೊತ್ತು ಮೆಟ್ಟಿರುತ್ತವೆ. ಛತ್ರದಂಡವನ್ನು ಹಿಡಿದು ಕೆಲಕಾಲವಾಗುತ್ತಲೇ ಕೈನೋವು ತೋರಿಬರುತ್ತಿದ್ದು, ಕೊನೆಗೆ ಛತ್ರ-ಧಾರಣದಿಂದಾಗಿ ಉಂಟಾದ ಛಾಯಾಸುಖಕ್ಕಿಂತಲೂ ಏರ್ಪಟ್ಟ ದುಃಖವೇ ಹೆಚ್ಚಾಯಿತೆನಿಸಿಬಿಡುತ್ತದೆ! ಹೀಗೆ ಸ್ವಹಸ್ತದಿಂದಲೇ ಹಿಡಿದುಕೊಂಡ ಕೊಡೆಯ ದಂಡದಂತಿರುವುದು, ರಾಜ್ಯವೆಂಬುದು - ಎಂಬ ಉದ್ಗಾರವು ಬಂದಿದೆ, ದುಷ್ಯಂತನ ಬಾಯಲ್ಲಿ (ಶಾಕುಂತಲನಾಟಕದಲ್ಲಿ). ಕಾರ್ಯಮುಗಿಸಿ ಆಯಾಸಪಟ್ಟು ಎದ್ದು ಹೊರಡುತ್ತಿರುವ ರಾಜನ ನುಡಿಗಳಿವು.


ಆ ಸಮಯದಲ್ಲೇ ಬರುವ ಇನ್ನೆರಡು ಮಾತುಗಳೂ ನಮಗೆ ಪ್ರಕೃತ : ರಾಜನ ಮಾತಿಗೆ ಮೊದಲು ಕಾಂಚುಕೀಯನಾಡುವ ಮಾತು; ರಾಜನ ಮಾತಾದ ಮೇಲೆ ವೈತಾಳಿಕರಾಡುವ ಮಾತು. ಎರಡರಲ್ಲೂ ಹಲವು ಉಪಮೆಗಳೊಂದಿಗೆ ರಾಜವೃತ್ತದ ಚಿತ್ರಣವು ದೊರೆಯುತ್ತದೆ: ಸೂರ್ಯ-ವಾಯು-ಶೇಷ-ಗಜ-ವೃಕ್ಷ - ಎಂಬ ಐದು ಉಪಮೆಗಳು.

ಸೂರ್ಯನು ಎಂದಿನಿಂದ ಕೆಲಸ ಮಾಡುತ್ತಿದ್ದಾನೆ? - ಎಂದು ಹೇಳುವವರಾರು? ಆತನ ರಥಕ್ಕೆ ಒಮ್ಮೆಯಷ್ಟೇ ಕುದುರೆಗಳನ್ನು ಜೋಡಿಸಿದ್ದು; ಆಗ ಆರಂಭಿಸಿದ್ದು ಆಮೇಲೆ ನಿಂತಿಲ್ಲ, ನಿಲ್ಲುವಂತೆಯೇ ಇಲ್ಲ! ರಾಜನ ನಡೆಯೂ ಹೀಗೆಯೇ: ಎಡೆಬಿಡದ ನಡೆ. ಬೀಸುವ ವಾಯುವೂ ಅಂತೆಯೇ. ಗಾಳಿಗೇನು ಹಗಲೇ ಇರುಳೇ? ಬೀಸುತ್ತಿರುವುದೇ ವಾಯುಧರ್ಮವಲ್ಲವೇ? ಭೂಮಿಯನ್ನು ಹೊತ್ತಿರುವ ಆದಿಶೇಷನ ಕಥೆಯೂ ಅದುವೇ. ಭೂಭಾರವೆಲ್ಲವೂ ಆತನ ಮೇಲೇ ನಿಂತಿರುವುದೆಂದರೆ ಆತನಿಗೆ ತುರಿಸಿಕೊಳ್ಳಲಾದರೂ ಪುರುಸೊತ್ತಿದೆಯೆಂದೇ?


ಈ ಮೂರೂ ಹೋಲಿಕೆಗಳಲ್ಲಿಯ ಸಾಮ್ಯವೆಂದರೆ ಎಡೆಬಿಡದೆ ದುಡಿಯುವುದು. ಮತ್ತು ಈ ದುಡಿತವಾದರೂ ಸ್ವಸುಖಕ್ಕಾಗಿ ಅಲ್ಲ, ಅಥವಾ ಸ್ವಕೀಯರ ಸುಖಕ್ಕಾಗಿಯೂ ಅಲ್ಲ ("ತನ್ನವರು" - ಎಂಬ ಪದವನ್ನು ತನ್ನ ಬಂಧುಗಳು ತನ್ನ ಮಿತ್ರರು ಎಂಬಷ್ಟೇ ಅರ್ಥಕ್ಕೆ ಸೀಮಿತಗೊಳಿಸಿದಲ್ಲಿ). ಇಡೀ ರಾಜ್ಯವೇ ತನ್ನದು, ರಾಜ್ಯದಲ್ಲಿರುವವರೆಲ್ಲಾ ತನ್ನವರೇ - ಎಂಬ ಭಾವನೆ ಬಂದಾಗ ರಾಜನಿಂದಾಗುವ ಕಾರ್ಯದ ಪರಿಯೇ ಬೇರೆ. ಸೃಷ್ಟಿ-ಸ್ಥಿತಿ-ಲಯಗಳಲ್ಲಿ ಸ್ಥಿತಿ-ಕಾರ್ಯವು ವಿಷ್ಣುವಿನದು. ರಾಜನೂ ಲೋಕದ ಸ್ಥಿತಿಗಾಗಿಯೇ ಶ್ರಮಿಸುವವನಾದ್ದರಿಂದಲೇ ರಾಜನನ್ನು ವಿಷ್ಣುವೆಂದಿರುವುದು: ಇದು ತತ್ತ್ವದರ್ಶಿಗಳಾದ ಶ್ರೀರಂಗಮಹಾಗುರುಗಳಿತ್ತ ನೋಟ. "ಆದಿತ್ಯಾನಾಮಹಂ ವಿಷ್ಣುಃ" ಎಂಬುದು ಗೀತೆಯ ಮಾತೇ; ಆದಿಶೇಷನು ವಿಷ್ಣುವಿನ ಶಯ್ಯೆಯೇ; ಇನ್ನು ವಾಯುಸಂಚಾರವೇ ಇಲ್ಲದಿದ್ದಲ್ಲಿ ಉಸಿರಾಟವೇ ಇಲ್ಲದಂತಾಗುವುದು. ಹೀಗೆ ಸೂರ್ಯ-ವಾಯು-ಶೇಷರು ಜಗತ್ತಿನ ಸ್ಥಿತಿಗಾಗಿಯೇ ಶ್ರಮಿಸತಕ್ಕವರು. ಅವರೇ ಮಾದರಿ, ರಾಜನಿಗೆ.


ಸಲಗದ ಪರಿಯೇನು? ತನ್ನ ಮಂದಿಯನ್ನೆಲ್ಲಾ ಪಾಲಿಸಬೇಕು. ಜಲವೋ ಆಹಾರವೋ ದೊರೆಯುವಲ್ಲಿಗೆ, ಬಳಿಕ ನೆರಳಲ್ಲಿಗೆ, ತನ್ನ ಹಿಂಡನ್ನೆಲ್ಲಾ ನಡೆಯಿಸಿಕೊಂಡುಹೋಗಬೇಕು. ಹೀಗೆ ರಾಜನಾದರೂ ಪ್ರಜೆಗಳನ್ನು ತನ್ನ ಪ್ರಜೆಗಳಂತೆಯೇ - ಎಂದರೆ ತನ್ನ ಮಕ್ಕಳಂತೆಯೇ - ಪಾಲಿಸತಕ್ಕದ್ದು. ಇಲ್ಲೂ ಹಾಗೆಯೇ. ಬರೀ ತನ್ನ ಪಾಡನ್ನು ತಾನು ನೋಡಿಕೊಂಡರಾಯಿತೆಂದಲ್ಲ; ಮೇಲೆ ಹೇಳಿದಂತೆ, ಪ್ರಜೆಗಳೆಲ್ಲರ ಯೋಗಕ್ಷೇಮಗಳು ರಾಜನ ಕಾರ್ಯವೇ ಸರಿ. "ತಾಪ ನನಗೆ, ತಂಪು ನಿಮಗೆ" – ಎಂಬುದು ಮರದ ಕಾರ್ಯವೈಖರಿ. ಮರದ 'ತಲೆ'ಯ ಮೇಲೆ ತೀವ್ರೋಷ್ಣ, ಮಹಾಬಿಸಿಲು; ಆ ಬೇಗೆಯೆಲ್ಲಾ ತನಗೆ. ನೆರಳಿಗಾಗಿ ತನ್ನನ್ನಾಶ್ರಯಿಸಿ ಬಂದವರೆಲ್ಲರಿಗೂ (ಬೇರೆ ಜಾತಿಯ ಪ್ರಾಣಿಗಳಿಗೂ) ತಾಪಕಳೆದು ತಂಪನ್ನಷ್ಟೇ ಕೊಡುತ್ತವೆ, ಮರಗಳು.


ರಾಜನು ಸ್ವಸುಖದ ಬಗ್ಗೆ ಹೆಚ್ಚು ಆಸೆಗಳನ್ನಿಟ್ಟುಕೊಳ್ಳುವಂತಿಲ್ಲ. ಲೋಕಹಿತಕ್ಕಾಗಿಯೇ ಆತನ ಶ್ರಮವೆಂಬುದು. ತಾನು ತಲೆಕಾಯಿಸಿಕೊಂಡೂ ಲೋಕಹಿತವನ್ನು ಸಾಧಿಸಬೇಕು. ಒಂದೆರಡೇ ದಿನಗಳೆಂದರೆ ಯಾರು ಬೇಕಾದರೂ ಕಷ್ಟಪಟ್ಟು ಹಾಗಿದ್ದು ತೋರಿಸಬಹುದು; ಆದರೆ ಪ್ರತಿದಿನವೂ ಅದನ್ನು ಮಾಡುವುದು ಸುಲಭವೇ? ಮರಗಳೆಂದೂ ಅದನ್ನು ತಪ್ಪಿಸವು. ಹಾಗೆಯೇ ರಾಜನೂ.

ಸರ್ವರಿಗೂ ವಿದಿತವಾಗಿರುವ ಸಣ್ಣಸಣ್ಣ ಉಪಮೆ-ಉದಾಹರಣೆಗಳಿಂದ ಜೀವನಕ್ಕೆ ದೊಡ್ಡದೊಡ್ಡ ಪಾಠಗಳು!


ಸೂಚನೆ : 27/08/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.