Sunday, August 28, 2022

ವ್ಯಾಸ ವೀಕ್ಷಿತ -1 ಪೀಠಿಕೆ (Vyaasa Vikhita -1 Pithike)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ |

ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ||

ಪೀಠಿಕೆ

ನಾರಾಯಣನಿಗೆ ನಮಸ್ಕಾರ. ಶ್ರೇಷ್ಠನೆನಿಸುವ ನರನಿಗೂ ನಮಸ್ಕಾರ. ಸರಸ್ವತೀದೇವಿಗೆ ನಮಸ್ಕಾರ. ವ್ಯಾಸರಿಗೂ ನಮಸ್ಕಾರವನ್ನು ಹೇಳಿಯೇ 'ಜಯ'ವನ್ನು ಹೇಳುವುದು.

ಮಹಾಭಾರತವು ಬಂದು ಅದ್ಭುತವಾದ ಗ್ರಂಥ. ಮಹತ್ತಾದ ಗ್ರಂಥ. ಸಾರವತ್ತಾದ ಗ್ರಂಥವೂ ಹೌದು. ಸಾವಿರಾರು ಸದ್ವಿಷಯಗಳಿಗೆ ಆಕರವಾದ ಈ ಕೃತಿಯ ಆಕಾರವೂ ಅದ್ಭುತವೇ. ಎಷ್ಟು ದೊಡ್ಡದಿದು? – ಎಂಬ ಪ್ರಶ್ನೆಗೆ ಚಿಕ್ಕದಾದರೂ ಚೊಕ್ಕದಾದ ಉತ್ತರವೊಂದಿದೆ. ಗಣಿತದ ಸೂತ್ರದ ಹಾಗಿರುವ ಉತ್ತರ. ಗಣಿತವನ್ನು ವಿಶೇಷವಾಗಿ ಓದಿಲ್ಲದವರೊಬ್ಬರು ಮಾಡಿಟ್ಟ ಸೂತ್ರ. ನನಗದರ ಬೋಧನೆಯಾದುದು ನಾನಿನ್ನೂ ಪಿ. ಯು. ಓದುತ್ತಿದ್ದಾಗ.

ಪೂಜ್ಯ ರಂಗಪ್ರಿಯ ಸ್ವಾಮಿಗಳೆಂದು ಮುಂದೆ ಪ್ರಸಿದ್ಧರಾದ ಶ್ರೀ ಎಚ್. ಎಸ್. ವರದದೇಶಿಕಾಚಾರ್ಯರು (ಅಂದಿನ ಎಚ್ಚೆಸ್ವಿ) ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತ-ಬೋಧಕರಾಗಿದ್ದರು. ಈಗಲಾದರೂ ಹಿಂದೂಗಳು ಸ್ವಲ್ಪ ಕಣ್ಣುಬಿಡುತ್ತಿದ್ದಾರೆ. ಆಗಂತೂ ಪಾಶ್ಚಾತ್ತ್ಯರೆಂಬ ಶಂಖದಿಂದ ಬಂದದ್ದೇ ತೀರ್ಥವಾಗಿತ್ತು. ಆ ಭ್ರಮೆಯನ್ನು ಧ್ವಂಸಮಾಡುವ ಆ ಸೂತ್ರವನ್ನು ನಿರ್ಮಿಸಿದವರೇ ಎಚ್ಚೆಸ್ವಿ. ಏನದು ಸೂತ್ರ? M = 8 (I + O). ಎಂಬುದಾಗಿ. ಏನದರರ್ಥ? "I" ಎಂದರೆ ಇಲಿಯಡ್ (Iliad) ಎಂಬ ಗ್ರೀಕ್ ಕಾವ್ಯ, ಹೋಮರ್ ಎಂಬುವನು ಬರೆದದ್ದು. "O" ಎಂದರೆ ಒಡಿಸ್ಸೀ (Odyssey). ಅದೂ ಅವನ ಕೃತಿಯೇ. ಇವೆರಡೇ ಪ್ರಪಂಚದ ಅತಿ ಬೃಹತ್ಕೃತಿಗಳೆಂದು ಪಾಶ್ಚಾತ್ತ್ಯರು ಬಗೆದಿದ್ದರು. ಭಾರತಕ್ಕೆ ಬಂದ ಮೇಲೇ ಅವರ ಕಣ್ತೆರೆದದ್ದು, ಗರ್ವಭಂಗವಾದದ್ದು. ಅವೆರಡನ್ನೂ ಕೂಡಿಸಿದರೆ ಎಷ್ಟಾಗುವುದೋ ಅದಕ್ಕೆ ಎಂಟರಷ್ಟಿರುವುದು "M" ಎಂಬ ಮಹಾಭಾರತವೆಂಬುದು. ಹೀಗೆ ಪಾಶ್ಚಾತ್ತ್ಯರ ಎರಡು ಬೃಹತ್ತಮಗ್ರಂಥಗಳ ಮೊತ್ತಕ್ಕೆ ಎಂಟರಷ್ಟಿದೆ ಮಹಾಭಾರತ!

ಮಹಾಭಾರತವೊಂದು ದೊಡ್ಡ ಕಥೆ. ಕಥೆಯೊಳಗಣ ಕಥೆಗಳನ್ನು ಹೊಂದಿರುವ ಕಥೆ. ಹತ್ತಾರು ಉಪಾಖ್ಯಾನಗಳಿಂದ ಕೂಡಿರುವಂಥದ್ದು. ಸೌತಿಪೌರಾಣಿಕನು ನೈಮಿಷಾರಣ್ಯಕ್ಕೆ ಬಂದಾಗ ಅಲ್ಲೊಂದು ಹನ್ನೆರಡು ವರ್ಷಗಳ ಕಾಲದ ಸತ್ರ (=ಯಜ್ಞವು) ನಡೆಯುತ್ತಿತ್ತು. ಅಲ್ಲಿ ಬ್ರಹ್ಮರ್ಷಿಗಳು ಸುಖಾಸೀನರಾಗಿದ್ದರು. ಆಶ್ರಮಕ್ಕೆ ಬಂದ ಈತನ ಸುತ್ತುವರಿದರು ತಪಸ್ವಿಗಳು. ಏತಕ್ಕಾಗಿ? "ಚಿತ್ರಾಃ ಶ್ರೋತುಂ ಕಥಾಸ್ತತ್ರ ಪರಿವವ್ರುಸ್ತಪಸ್ವಿನಃ" ಅವರು ಸುತ್ತುವರೆದದ್ದು "ಚಿತ್ರವಾದ ಕಥೆ"ಗಳನ್ನು ಕೇಳಲು. "ಚಿತ್ರ"ವೆಂದರೆ ಆಶ್ಚರ್ಯಕರವಾದದ್ದು. "ಚಿತ್ರ"ವೆಂದರೆ ಬಗೆಬಗೆಯಾದದ್ದೂ ಹೌದು. ಎಲ್ಲರೂ ಕುಳಿತುಕೊಳ್ಳಲು ಕಥೆಯನ್ನು ಹೇಳಲು ಆತನು ಆರಂಭಿಸಿದನು.

ಕಥೆಗಳು ಯಾರಿಗೆ ಬೇಡ? ಋಷಿ-ಮುನಿಗಳಿಗೂ ಕೊನೆಗೆ ಬ್ರಹ್ಮರ್ಷಿಗಳಿಗೂ ಕಥೆಗಳೆಂದರೆ ಆದರವೇ. ಕಥೆಗಳೆಂದರೆ ಬರೀ ಕಾಲಯಾಪನ (time-pass, pastime)ವಲ್ಲ – ಸರಿಯಾದ ಕಥೆಗಳಾಗಿದ್ದರೆ. ಹಾಗಿದ್ದರೆ ಎಂತಹ ಕಥೆಗಳನ್ನು ಸೌತಿಯು ಹೇಳಿದುದು?

ವ್ಯಾಸರು ಹೇಳಿದಂತಹ "ಸುಪುಣ್ಯಾಃ ವಿವಿಧಾಃ ಕಥಾಃ": ಪುಣ್ಯಪ್ರದವಾದ ಕಥೆಗಳು, ಬೇರೆಬೇರೆ ತೆರನಾದ ಕಥೆಗಳು. ಏನನ್ನು ಕುರಿತಾದವು? ಧರ್ಮ-ಅರ್ಥಗಳನ್ನು ("ಧರ್ಮಾರ್ಥ-ಸಂಶ್ರಿತಾಃ"). ಯಾರನ್ನು ಕುರಿತಾದವು? ರಾಜಶ್ರೇಷ್ಥರನ್ನು, ಮಹಾತ್ಮರಾದ ಋಷಿಗಳನ್ನು.

ಇಂತಹ ರೋಚಕವಾದ ಕಥೆಗಳು ಯಾರಿಗೆ ಬೇಡ? ಮಹಾರಾಜರನ್ನೂ ಮಹರ್ಷಿಗಳನ್ನೂ ಕಾಣದ ಇಂದಂತೂ ಈ ಕಥೆಗಳು ಮತ್ತೂ ಕುತೂಹಲಮಯವೇ ಸರಿ! ಮುಂದೆ ನೋಡೋಣ.

ಸೂಚನೆ :28/08/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.