Sunday, August 21, 2022

ಕಾಳಿದಾಸನ ಜೀವನದರ್ಶನ - 24 ಯೋಗದಿಂದ ದೇಹತ್ಯಾಗ! (Kalidasana Jivanadarshana - 24 Yogadinda Dehatyaga!)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಜೀವನದ ಕೊನೆಯ ವರ್ಷಗಳನ್ನು ಕಳೆಯುವ ಬಗೆಯೇನು? – ಎಂಬ ಪ್ರಶ್ನೆಯು ಅನೇಕರಿಗೆ ಆಗಾಗ್ಗೆ ಬರುವುದುಂಟು. ವಯಸ್ಸು ಹೆಚ್ಚಾದವರಿಗೆ ಈ ಪ್ರಶ್ನೆ ಹೆಚ್ಚಾಗಿ ಬರಬಹುದು. ಅಥವಾ ಯಾರಾದರೂ ಉದ್ಯೋಗದಿಂದ ನಿವೃತ್ತರಾದಾಗಲೋ, ಅಥವಾ ಈ ಲೋಕದಿಂದಲೇ ನಿವೃತ್ತರಾದಾಗಲೋ (ಅಂದರೆ ಸತ್ತಾಗ), ಈ ಪ್ರಶ್ನೆ ಬರುವುದು ಅನಿರೀಕ್ಷಿತವೇನಲ್ಲ.


ಆದರೆ ಇದಕ್ಕಿಂತಲೂ ಮುಖ್ಯವೆನಿಸುವ ಪ್ರಶ್ನೆಯೊಂದಿದೆ. ಅದು ಕೊನೆಗೆ ಜೀವನವನ್ನೇ ಮುಗಿಸುವ ಕ್ಷಣದ್ದು. ಅದೇಕೆ ಮುಖ್ಯ? ಏಕೆಂದರೆ ಆ ಬಗ್ಗೆ ಕೃಷ್ಣನೇ ಎರಡು ಮಾತುಗಳನ್ನು ಹೇಳಿದ್ದಾನೆ, ಗೀತೆಯಲ್ಲಿ. ಏನೆಂದು? "ಕೊನೆಗಾಲದಲ್ಲಿ ನನ್ನನ್ನೇ ಸ್ಮರಿಸುತ್ತಾ ಯಾವನು ಶರೀರತ್ಯಾಗಮಾಡುವನೋ ಆತನು ನನ್ನ ಭಾವವನ್ನೇ ಹೊಂದುವನು; ಈ ಬಗ್ಗೆ ಸಂಶಯವಿಲ್ಲ" – ಎಂಬುದೊಂದು; "ಯಾವ ಯಾವ ಭಾವವನ್ನು ಸ್ಮರಿಸುತ್ತಾ ಶರೀರವನ್ನು ತೊರೆಯುವನೋ ಅದದನ್ನೇ ಆತನು ಹೊಂದುವನು" – ಎಂಬುದು ಮತ್ತೊಂದು. ಹೀಗಾಗಿ ನಮಗೆ ನಮ್ಮ ಜೀವಿತದ ಅಂತಿಮಕ್ಷಣವೆಂಬುದು ಬಹಳ ಗಣ್ಯವೇ ಆದದ್ದು!


ಸಾಯುವುದೆಂದರೆ ಪ್ರಾಣವು ಹೋಗುವುದು. ಇದನ್ನೇ ಪ್ರಾಣಪ್ರಯಾಣವೆನ್ನುತ್ತಾರೆ. ಪ್ರಾಣಪ್ರಯಾಣಸಮಯವೆಂಬುದು ಹೇಗಿರುವುದು? - ಎಂಬುದನ್ನು ಮುಕುಂದಮಾಲೆಯೆಂಬ ಸ್ತೋತ್ರವೊಂದು ಚಿತ್ರಿಸುತ್ತದೆ: ಆಗ ದೇಹದಲ್ಲಿ ಕಫ-ವಾತ-ಪಿತ್ತಗಳು ಕೆರಳಿ, ಕಂಠಾವರೋಧನವನ್ನು ಮಾಡಿಬಿಡುವುವು; ಎಂದರೆ ಗಂಟಲೇ ಬಿಗಿದುಬಂದುಬಿಡುವುದು. ಅಲ್ಲದೆ, ಪ್ರಾಣವು ಕಿತ್ತುಕೊಂಡುಹೋಗುವಾಗ ದಾಹವೋ ಬೇರೆ ಹಿಂಸೆಗಳೋ ಮಿತಿಮೀರಿ ಕಾಡುವುವು. ಆ ನೋವುಗಳ ನಡುವಿನಲ್ಲಿ ಭಗವಂತನನ್ನು ಸ್ಮರಿಸಿಕೊಳ್ಳಬೇಕೆಂದರೆ ಅದು ಸಾಧ್ಯವೇ, ಸುಲಭವೇ?


ಆದರೆ ಯಾರು ಯೋಗಸಾಧನೆಯನ್ನು ಸರಿಯಾಗಿ ಮಾಡಿರುವರೋ ಅವರಿಗೆ ಅದು ಅಶಕ್ಯವಲ್ಲ. ಕೊನೆಗಾಲದಲ್ಲಿ ಮಾಡಬೇಕಾದುದರ ಬಗೆಗೆ ಅವರಿಗರಿವಿರುತ್ತದೆ; ಅಂತಕಾಲದಲ್ಲದು ಗೋಚರಿಸುತ್ತದೆ ಕೂಡ. ಸಾಧಾರಣರಿಗಿದು ಎಟುಕುವ ವಿಷಯವೇ ಅಲ್ಲ!


ಆದರೆ ಯೋಗಿಗಳಿಗೆ ಹಾಗಾಗದು. ದೇಹ-ಪ್ರಾಣ-ಮನಸ್ಸುಗಳು ಅವರ ಹಿಡಿತದಲ್ಲಿರುವುವು. ಯೋಗಾಭ್ಯಾಸವನ್ನೇ ಚೆನ್ನಾಗಿ ಮಾಡಿರುವವರಿಗೆ ಇದು ಬಹುಕ್ಲೇಶಕರವಲ್ಲವೆಂದು ಒಪ್ಪಬಹುದೇನೋ? ಆದರೆ ಇತರರಿಗೆ?


ಇತರರಿಗೇನು? ಒಬ್ಬ ಮಹಾರಾಜನಿಗೇ ಹಾಗಾಗಬಹುದೆಂಬುದನ್ನು ಕಾಳಿದಾಸನು ಚಿತ್ರಿಸುತ್ತಾನೆ, ತನ್ನ ರಘುವಂಶಮಹಾಕಾವ್ಯದಲ್ಲಿ. ಯಾವನ ಹೆಸರು ಆ ವಂಶಕ್ಕೇ ಸಂದಿತೋ ಅಂತಹ ರಘುಮಹಾರಾಜನದ್ದೇ ಜೀವನದಲ್ಲಿ ಹಾಗಾಯಿತು.


ಆತನು ತನ್ನ ಕೊನೆದಿನಗಳನ್ನು ಹೇಗೆ ಕಳೆದನು? ಅವನ ಅಂತಕಾಲವು ಹೇಗಿತ್ತು? ತನ್ನ ಮಗನಾದ ಅಜನು ಪ್ರಜೆಗಳ ಮನಸ್ಸಿನಲ್ಲಿ ಪ್ರತಿಷ್ಠಿತನಾಗಿದ್ದನ್ನು ರಘುವು ಕಂಡುಕೊಂಡನು: ತನ್ನ ಕರ್ತವ್ಯಗಳು ಮುಗಿದುದು ಮನಸ್ಸಿಗೆ ಬಂದಿತು; ತೃಪ್ತಿಯಾಯಿತು; ಮನಸ್ಸು ಸುಖಗಳಿಂದ ಹಿಂದಿರುಗಿತು; ದೇವಲೋಕದ ಭೋಗಗಳು ಸಹ ಆತನಿಗೆ ಬೇಡವಾದವು!


ಗುಣಶಾಲಿಯಾದ ಪುತ್ರನಲ್ಲಿ ತಮ್ಮ ರಾಜ್ಯಶ್ರೀಯನ್ನು ನೆಲೆಗೊಳಿಸಿ, ಜೀವನಯಾತ್ರೆಯ ಅಂತಿಮಭಾಗದಲ್ಲಿ ದಿಲೀಪವಂಶದ ರಾಜರು ಯತಿಗಳ ಹಾಗೆ ಸರಳಜೀವನವನ್ನು ನಡೆಸುವವರು. ವಲ್ಕಲಗಳೇ, ಎಂದರೆ ನಾರುಮಡೆಯೇ, ಅವರ ವಸ್ತ್ರ. ಎಂದೇ, ಕಾಡಿನಲ್ಲಿದ್ದುಕೊಂಡು ತಪಸ್ಸು ಮಾಡುವ ಬಯಕೆ ರಘುವಿನದು; ಬೇಡವೆಂದು ಪುತ್ರನಾದ ಅಜ ಅಂಗಲಾಚುತ್ತಾನೆ; ಮಗನ ಮಾತಿಗೆ ಕಟ್ಟುಬಿದ್ದ ರಘುವು ಅಲ್ಲೇ ಉಳಿದುಕೊಂಡನಾದರೂ ಮತ್ತೆ ರಾಜ್ಯಭೋಗವನ್ನು ಸ್ಪರ್ಶಿಸಲಿಲ್ಲ. "ಕಳಚಿದ ಪೊರೆಯನ್ನು ಹಾವೇನು ಮತ್ತೆ ತೊಟ್ಟೀತೇ?" - ಎಂದು ಕೇಳುತ್ತಾನೆ, ಕವಿ!


ಈ ಘಟ್ಟದಲ್ಲಿ, ಅಜನು ಪ್ರವೃತ್ತಿಧರ್ಮವನ್ನು ಪ್ರತೀಕಿಸಿದರೆ, ರಘುವು ನಿವೃತ್ತಿಧರ್ಮವನ್ನು ಪ್ರತೀಕಿಸಿದನು. ರಘುವಿನ ವಾಸ ಊರಿನಾಚೆ - ಆಪ್ತರಾದ ಯೋಗಿಗಳ ಸಂಗದಲ್ಲಿ – ಎನ್ನುತ್ತಾನೆ, ಕಾಳಿದಾಸ. ಯಾರು ಆಪ್ತರೆಂದರೆ? "ಸತ್ಯವನ್ನು ಕಂಡುಕೊಂಡವರು; ಸತ್ಯವನ್ನು ಅಂತೆಯೇ ಹೇಳಬಲ್ಲವರು" - ಎನ್ನುತ್ತಾನೆ, ಮಲ್ಲಿನಾಥ. ("ಯಥಾರ್ಥದರ್ಶಿನೋ ಯಥಾರ್ಥವಾದಿನಶ್ಚ"). ಆದರೆ ಶ್ರೀರಂಗಮಹಾಗುರುಗಳು ಆ ಪದದ ವ್ಯುತ್ಪತ್ತಿಯಿಂದಲೇ ನಿಷ್ಪನ್ನವಾಗುವ ಅದ್ಭುತವಾದ ಒಂದು ವಿವರಣೆಯನ್ನು ಕೊಟ್ಟಿದ್ದರು: " 'ಆಪ್' - ಎಂಬ ಧಾತುವಿನಿಂದ ಬಂದ ಪದವದಲ್ಲವೇ? ಆ ಧಾತುವಿನ ಅರ್ಥವಾದರೂ 'ಪಡೆದುಕೊಳ್ಳುವುದು' – ಎಂಬುದಾಗಿ. ಜೀವನದ ಪರಮಾರ್ಥವನ್ನೇ ಯಾರು ಪಡೆದುಕೊಂಡಿರುವರೋ ಅವರೇ ಆಪ್ತರು!" ಅದರ ಆಳವಾದ ಈ ಅರ್ಥದ ಅರಿವಿಲ್ಲದ ನಾವು "ಆಪ್ತರು-ಇಷ್ಟರು" – ಎಂದು ಸಾಧಾರಣಾರ್ಥಗಳಲ್ಲಷ್ಟೆ ಬಳಸುತ್ತೇವೆ.


ಏಕಾಂತದಲ್ಲಿ ದರ್ಭಾಸನದಲ್ಲಿ ಕುಳಿತು ರಘುವು ಧಾರಣೆಯಲ್ಲಿ ಪಳಗಲೆಳಸಿದನು. ಧಾರಣೆಯೆಂದರೆ ಮನಸ್ಸು ಆತ್ಮನಲ್ಲಿ ನೆಲೆಗೊಳ್ಳುವುದೇ. ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನವೆಂಬ ಪಂಚಪ್ರಾಣಗಳು ಶರೀರದಲ್ಲಿರುವುವು; ಅವುಗಳನ್ನು ರಘುವು ವಶಪಡಿಸಿಕೊಂಡನು. ಜ್ಞಾನಮಯವಾದ ಅಗ್ನಿಯಿಂದ ತನ್ನ ಕರ್ಮಗಳನ್ನೆಲ್ಲ ಸುಟ್ಟುಕೊಂಡನು. "ಮಣ್ಣಿನ ಹೆಂಟೆಯೂ ಒಂದೇ, ಚಿನ್ನವೂ ಒಂದೇ" – ಎನಿಸುವಂತಹ ಉದಾತ್ತಸಮಸ್ಥಿತಿಗೆ ಬಂದಿದ್ದ ರಘುರಾಜನು, ಪ್ರಕೃತಿಯಲ್ಲಿರುವ (ಸತ್ತ್ವ-ರಜಸ್-ತಮಸ್ ಎಂಬ) ಮೂರೂ ಗುಣಗಳನ್ನೂ ಮೀರಿದನು. ಪರಮಾತ್ಮದರ್ಶನಪರ್ಯಂತವೂ ತನ್ನ ಯೋಗವಿಧಿಯನ್ನು ಬಿಡಲಿಲ್ಲ. ಉಚ್ಛೃಂಖಲವಾದ ಇಂದ್ರಿಯಗಳು ಶತ್ರುಗಳಂತೆಯೆ ಸರಿ; ಅವುಗಳನ್ನು ಹಿಡಿತದಲ್ಲಿಟ್ಟುಕೊಂಡು ಅಪವರ್ಗಸಿದ್ಧಿಯನ್ನು ಪಡೆದನು: ತಮಸ್ಸಿನಾಚೆಯ ಪುರುಷನನ್ನು ಯೋಗಸಮಾಧಿಯಿಂದ ಪಡೆದುಕೊಂಡನು! ಬಾಳನ್ನು ಪೂರ್ಣವಾಗಿಸಿದನು.


ಹೀಗೆ ಹೋದವನ ದೇಹಕ್ಕೆ ಅಗ್ನಿಸಂಸ್ಕಾರ-ಪಿಂಡಪ್ರದಾನಗಳೇ ಅನವಶ್ಯ! ಇಂತಹ ಧನ್ಯತೆಯ ಅವಸಾನ ರಘುವಂಶದವರದ್ದು ಎಂದು ಉದ್ಗರಿಸುತ್ತಾನೆ, ಕಾಳಿದಾಸ.


ಸೂಚನೆ : 13/08/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.