ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ಒಬ್ಬ ಸಂಸ್ಕಾರಿಯಾದ ಮಗ ರೋಗಗ್ರಸ್ತೆಯಾದ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ ನಾವು ನಮ್ಮೀ ಪವಿತ್ರ ಭೂಮಿಯನ್ನು ನೋಡಿಕೊಳ್ಳಬೇಕಾಗಿದೆ. ಆ ತಾಯಿಯ ಪ್ರೀತಿಯ ಸವಿಯನ್ನುಂಡ ತಂಪಾದ ನೆನಪಿನಿಂದ ಅವನು ಅವಳ ಸೇವೆಯನ್ನು ಮಾಡುವುದಿಲ್ಲವೆ? ಹಾಗೆಯೇ ನಾವು ಇಷ್ಟೊಂದು ಅದ್ಭುತವಾದ ಗುಣ ವಿಶೇಷಗಳಿಂದ ಕೂಡಿದ ,ಜೀವನ ಲಕ್ಷ್ಯವನ್ನು ನಮಗೆ ತೋರಿಸಿಕೊಟ್ಟ, ಸಂಸ್ಕೃತಿಯಿಂದ ಸಮೃದ್ಧವಾದ ನಮ್ಮೀ ಮಾತೃಭೂಮಿಯನ್ನು ಪ್ರೀತಿಸಬೇಕಾದುದು ಅತ್ಯಂತ ಸಹಜವಾಗಿದೆ. ಈ ನಮ್ಮ ಮಾತೃಭೂಮಿಯ ಹಿರಿಮೆಯನ್ನು ಅರಿಯದ ರೋಗಕ್ಕೆ ನಮ್ಮ ಮನಸ್ಸುಗಳು ತುತ್ತಾಗಿವೆ. ಈ ಸಂಸ್ಕೃತಿಯ ಮಹಿಮೆಯನ್ನು ಅರಿಯದ ನಮ್ಮ ರೋಗಗ್ರಸ್ತ ಮನಸ್ಸುಗಳನ್ನು ಈ ದೇಶದ ಮಹರ್ಷಿಗಳ ಉದಾತ್ತ ಜೀವನದೃಷ್ಟಿಯೆಡೆಗೆ ಹೊರಳಿಸಬೇಕಾಗಿದೆ. ನಾವು ಈ ದೇಶದ ನಮ್ಮ ಮಹರ್ಷಿಗಳ ವಾರಸುದಾರರು- ಎಂದ ಮೇಲೆ ಅವರು ಇಲ್ಲಿ ಕಂಡುಕೊಂಡ ಸತ್ಯವನ್ನು, ಅದಕ್ಕಾಗಿ ಅವರು ಆಚರಿಸಿದ ತಪಸ್ಸನ್ನು, ನಾವು ನಮ್ಮದಾಗಿಸಿಕೊಳ್ಳಬೇಕಲ್ಲವೇ? ನಮ್ಮೆಲ್ಲ ಹೃದಯ ದೌರ್ಬಲ್ಯವನ್ನೂ ಆತ್ಮವಿಸ್ಮೃತಿಯನ್ನೂ ತೊಡೆದುಹಾಕಿ ಮತ್ತೊಮ್ಮೆ ಈ ದೇಶದ ವೈಭವವನ್ನು ಜಗತ್ತಿನಲ್ಲಿ ಮೆರೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದು ಅಂಧಾಭಿಮಾನವಲ್ಲ. ಲೋಕಹಿತದ ದೃಷ್ಟಿಯಿಂದಲೂ ಭಾರತೀಯ ಮೌಲ್ಯಗಳು ಮತ್ತೆ ಅರಳಬೇಕಾಗಿದೆ. ವಿಶ್ವಕ್ಕೆ ಶಾಂತಿ, ನೆಮ್ಮದಿಗಳ ಸಂತರ್ಪಣೆಯನ್ನು ಮಾಡಿಸಬೇಕಾಗಿದೆ.
ಈ ದೇಶದ ಹಿರಿಮೆ ಅದ್ವಿತೀಯ
ಕವಿಯೊಬ್ಬರು ಈ ದೇಶದ ಹಿರಿಮೆಯನ್ನು ಹೀಗೆ ಕೊಂಡಾಡಿದ್ದಾರೆ-"ಚಂದನ ಹೈ ಇಸ ದೇಶ್ ಕೀ ಮಾಟಿ, ತಪೋ ಭೂಮಿ ಹರ್ ಗ್ರಾಮ ಹೈ, ಹರ್ ಬಾಲಾ ದೇವೀ ಕೀ ಪ್ರತಿಮಾ ಬಚ್ಚಾ ಬಚ್ಚಾ ರಾಮ ಹೈ.." (ಈ ದೇಶದ ಮಣ್ಣು ಚಂದನ, ಎಲ್ಲಾ ಗ್ರಾಮಗಳೂ ತಪೋ ಭೂಮಿಯೇ, ಇಲ್ಲಿನ ಬಾಲೆಯರೆಲ್ಲರೂ ದೇವಿಯರೇ, ಒಂದೊಂದು ಮಗುವೂ ರಾಮನೇ.) ಪ್ರಾಚೀನ ಭಾರತದ ವಿಷಯದಲ್ಲಿ ಈ ಕೊಂಡಾಟ ನಿಜಕ್ಕೂ ಅತ್ಯುಕ್ತಿಯಲ್ಲ. ಜೀವನದ ಪರಮಾದರ್ಶವನ್ನು ಬೆಳಗಿದ ಶ್ರೀರಾಮ ಜಾನಕಿಯರ ಪಾವನ ಪಾದಗಳು ನಡೆದಾಡಿದ ನಾಡು ಇದು. ಶ್ರೀ ಕೃಷ್ಣನ ಅವತಾರದಿಂದ ಪುನೀತವಾದ ಧರ್ಮಕ್ಷೇತ್ರ, ಕರ್ಮಕ್ಷೇತ್ರ. ಜಗತ್ತಿನ ಇನ್ನಿತರ ಜನಾಂಗದ ಊಹೆಗೂ ನಿಲುಕದ ಪ್ರಬುದ್ಧರ, ಜ್ಞಾನಿಗಳ ತಪೋಭೂಮಿ ನಮ್ಮ ಭಾರತ. ಅವರೆಲ್ಲ ಭಾವಿಸಿದಂತೆ ಈ ದೇಶದ ಹಿರಿಮೆಯನ್ನು ಭಾವಿಸಲು ನಾವೂ ನಮ್ಮನ್ನು ಕೊಟ್ಟುಕೊಳ್ಳಬೇಕಾಗಿದೆ. ಉತ್ತಿಷ್ಠತ! ಜಾಗ್ರತ! ಅಗ್ನಿಮಿಚ್ಛಧ್ವಂ ಭಾರತಾ:! ಎಂಬ ಉಪನಿಷತ್ತಿನ ಮಹಾ ಮಂಗಳ ಘೋಷಕ್ಕೆ ನಮ್ಮ ಮೈ ಮನಸ್ಸುಗಳನ್ನು ಒಡ್ಡಿಕೊಳ್ಳಬೇಕಾಗಿದೆ. ನಮ್ಮ ಪೂರ್ವಜರು ಕಂಡು ಆನಂದಿಸಿದ ಆ ಪರಮಾತ್ಮಾಗ್ನಿಯನ್ನು ಬಯಸಿ ಮುನ್ನಡೆಯುವ ಪ್ರೇರಣೆ ನಮಗೆ ಉಂಟಾಗಲಿ ಎಂದು ಪ್ರಾರ್ಥಿಸೋಣ.