Monday, August 8, 2022

ಶ್ರೀ ರಾಮನ ಗುಣಗಳು - 66 ಸೀತಾಪತಿ - ಶ್ರೀರಾಮ (Sriramana Anandamaya - 65 Seethapathi - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀರಾಮನಲ್ಲಿ 'ಸೀತಾಪತಿತ್ವ' ಎಂಬುದು ಒಂದು   ಶ್ರೀರಾಮನ ಆದರ್ಶ ಗುಣ ಹೇಗಾದೀತು? ಒಬ್ಬ ಗಂಡನಿಗೆ ಒಬ್ಬಳು ಸತಿ ಇರುವುದು ಸಹಜ. ಅವಳೇ ಸೀತಾದೇವಿ. ಇದರಲ್ಲಿ ಇರುವ ವಿಶೇಷ ಏನು ? ಎಂಬುದು ಸಾಮಾನ್ಯ ಪ್ರಶ್ನೆಯಾಗಿದೆ. 


'ಋಣಾನುಬಂಧ-ರೂಪೇಣ ಪಶುಪತ್ನಿ-ಸುತ-ಆಲಯಾ:' ಎಂಬಂತೆ ಮನುಷ್ಯನ ಜೀವಿತಕಾಲಕ್ಕೆ ಪಶು , ಪತ್ನಿ, ಮಕ್ಕಳು, ಮನೆ ಎಲ್ಲವೂ ಅವನವನ ಋಣಕ್ಕೆ ತಕ್ಕಂತೆ ಪಡೆಯುತ್ತಾನೆ ಎಂದು. ಮನುಷ್ಯನ ಜನ್ಮವೇ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಫಲವನ್ನು ಅನುಭವಿಸುವುದಕ್ಕಾಗಿಯೇ. ಅದಕ್ಕೆ ಅನುಗುಣವಾಗಿ ಉಳಿದ ಎಲ್ಲಾ ಪರಿಕರಗಳು ಕೂಡಿ ಬರುತ್ತವೆ. ಇವುಗಳಲ್ಲಿ ಪತ್ನಿಯೂ  ಹೊರತಲ್ಲ. ಆದರೆ ಶ್ರೀರಾಮನ ವಿಷಯದಲ್ಲಿ ಸೀತಾಮಾತೆಯನ್ನು ಪಡೆದದ್ದು ಶ್ರೀರಾಮನ ಯಾವುದೋ ಕರ್ಮಫಲವಾಗಿ ಅಲ್ಲ. ಏಕೆಂದರೆ ಶ್ರೀರಾಮನದ್ದು ಜನ್ಮ ಅಲ್ಲ; ಅವತಾರ. ಅವನಿಗೆ ಅವಳನ್ನು ಭಾರ್ಯೆಯಾಗಿ ಪಡೆದದ್ದು ಕೂಡ ತನ್ನ ಅವತಾರಸಂಲ್ಪವನ್ನು ನೆರವೇರಿಸಿ ಶುಭಪರ್ಯವಸಾನ ಮಾಡುವ ಉದ್ದೇಶದಿಂದ ಅಷ್ಟೇ. ಅದನ್ನು ಸಾಧಿಸಲು ಪರಾ ಪ್ರಕೃತಿ ಸ್ವರೂಪಳಾದ ಸೀತೆಯನ್ನೇ ವಿವಾಹವಾಗಬೇಕು. ರಾಮನಂತಹ ಪರಮಪುರುಷನಲ್ಲದೆ ಇನ್ನಾರೂ ಅವಳನ್ನು ವರಿಸುವಂತಿಲ್ಲ. ಅದಕ್ಕೇ ಬೇಕಾದ ವಿಶೇಷ ಗುಣ ಶ್ರೀ ರಾಮನದು. ವಿವಾಹ ಆಗಿದ್ದು, ಅನಂತರ ಕಾಡಿಗೆ ಹೋಗಿದ್ದು, ಅರಣ್ಯದಲ್ಲಿ ಸೀತೆಯನ್ನು ಕಳೆದುಕೊಂಡಿದ್ದು, ಅವಳ ಅನ್ವೇಷಣೆ ಮಾಡಿದ್ದು, ಲಂಕೆಯಲ್ಲಿರುವುದಾಗಿ ತಿಳಿದಿದ್ದು, ಅವಳನ್ನು ಪಡೆಯಲು ರಾವಣನ ಜೊತೆ ಯುದ್ಧ ಮಾಡಿದ್ದು, ಅವಳ ಜೊತೆಗೂಡಿ ಪಟ್ಟಾಭಿಷಿಕ್ತನಾಗಿ ರಾಜ್ಯಭಾರ ಮಾಡಿದ್ದು, ಕೆಲವ ಸಮಯ ಅಂತರದಲ್ಲಿ ಅವಳನ್ನು ವಾಲ್ಮೀಕಿ ಆಶ್ರಮದ ಬಳಿ ಬಿಟ್ಟಿದ್ದು, ಕೊನೆಯಲ್ಲಿ ಅವಳು ಭೂಮಿಯಲ್ಲಿ ಅಸ್ತವಾಗಿದ್ದು ಹೀಗೆ ಎಲ್ಲವನ್ನು ಗಮನಿಸಿದರೆ ಕಾಣುವುದು; ಅವತಾರ ಮಂಗಳದ ಉದ್ದೇಶವಷ್ಟೇ. ಶ್ರೀರಾಮನದ್ದು ಮಾನವನ ಅವತಾರ. ದೇವತೆಗಳಿಗೆ ಮಹಾವಿಷ್ಣುವು ಅಭಯ ಕೊಟ್ಟಂತೆ "ತಾನು ದಾಶರಥಿಯಾಗಿ ಬಂದು ರಾವಣನನ್ನು ವಧಿಸುತ್ತೇನೆ" ಎಂಬುದು. ಇವೆಲ್ಲವೂ ಈ ಪ್ರಪಂಚದಲ್ಲಿ ಅಧರ್ಮವನ್ನು ದಮನ ಮಾಡುವ ವಿಧಾನ. ಅದಕ್ಕಾಗಿ ಇಷ್ಟೆಲ್ಲಾ ವ್ಯಾಜಗಳು (ನಿಮಿತ್ತಗಳು )ಎಂಬುದು ಇದರ ಅಂತರಾರ್ಥ. ಈ ನೇರದಲ್ಲಿ ಸೀತಾಮಾತೆಯು ಪ್ರಕೃತಿಮಾತೆಯ ಸ್ವರೂಪ. ಶ್ರೀರಾಮನದ್ದು ಪರಮಪುರುಷನ ಸ್ವರೂಪ. ಇವೆರಡರ ಸಾಮರಸ್ಯವೇ ಈ ಪ್ರಪಂಚ. ಅದರ ಪ್ರತೀಕವೇ ರಾಮನ ಅಯನ-ರಾಮಾಯಣ. ಅಲ್ಲಿ ಸೀತಾಪತಿ ಎಂಬುದಕ್ಕೆ ಈ ತಾತ್ತ್ವಿಕವಾದ ವಿಷಯ ಮನಗಂಡಾಗ ಮಾತ್ರ ರಾಮನ ನೈಜ ಪರಿಚಯವಾದೀತು. ಸೀತಾಮಾತೆಯ ಜೊತೆ ಕಂಡದ್ದು ಪ್ರಕೃತಿಮಾತೆಯ ಸಹಕಾರಿತ್ವ, ಮಾಯೆಯಿಂದ ದೂರವಾಗಿದ್ದುದು  ಪರಮಪುರುಷನ ವಿರಹ.  ಈ ಎರಡು ಅಂಶಗಳನ್ನು ರಾಮಾಯಣದ ಉದ್ದಕ್ಕೂ ಕಾಣಲು ಸಾಧ್ಯ. ಒಮ್ಮೆ ಸೀತಾರಾಮ ಸಹಬಾಳ್ವೆ, ಇನ್ನೊಮ್ಮೆ ಅವರಿಬ್ಬರ ವಿರಹ. ಮತ್ತೆ ಕೊನೆಯಲ್ಲಿ ಅವರವರ ಮೂಲಕ್ಕೆ ಸೇರಿಕೊಳ್ಳುವಿಕೆ. ಶ್ರೀರಾಮನು ತನ್ನ ಮೂಲವಾದ ವೈಕುಂಠಕ್ಕೆ ತೆರಳಿದ. ಸೀತಾಮಾತೆಯು ಭೂಗರ್ಭಕ್ಕೆ ಸೇರಿದಳು.  ಇದೆ ಅವರಿಬ್ಬರ ದಾಂಪತ್ಯಜೀವನ ರಹಸ್ಯ.


ಸೂಚನೆ :07/07/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.