Monday, March 30, 2026

ವ್ಯಾಸ ವೀಕ್ಷಿತ 180 ಜರಾಸಂಧನ ಮೂದಲಿಕೆಗೆ ಕೃಷ್ಣನಿತ್ತ ದಿಟ್ಟ ಉತ್ತರ ( Vyaasa Vikshita 180)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)



ಅದಕ್ಕೆ ಜರಾಸಂಧನು ಹೇಳಿದನು:
"ನಿಮ್ಮೊಂದಿಗೆ ವೈರವೆಂಬುದು ಎಂದುಂಟಾಯಿತು? - ಎಂಬುದು ನನ್ನ ಸ್ಮರಣೆಗೆ ಬರುತ್ತಿಲ್ಲ. ಯೋಚಿಸಿದರೂ ಹೊಳೆಯುತ್ತಿಲ್ಲ. ನನ್ನ ಕಡೆಯಿಂದ ಯಾವುದೇ ಅಪರಾಧವೆಂಬುದಿಲ್ಲದಿರುವಾಗ, ನಿರಪರಾಧನಾದ ನನ್ನನ್ನು ಶತ್ರುವೆಂಬುದಾಗಿ ಹೇಗೆ ಪರಿಗಣಿಸಿದಿರಿ, ವಿಪ್ರರೇ? ಸಾಧು-ಪುರುಷರ ವರ್ತನೆಯೆಂದರೆ ಹೀಗಿರುವುದೇ? ಯಾರಿಗಾದರೂ ಧರ್ಮಕ್ಕೆ ಹೊಡೆತಬಿತ್ತೆಂದರೆ ಮನಸ್ಸು ಸಂತಾಪಗೊಳ್ಳುತ್ತದೆ. ಮಹಾರಥಿಯೆಂದೂ ಧರ್ಮಜ್ಞನೆಂದೂ ಕರೆಸಿಕೊಳ್ಳುವ ಯಾವನೇ ಕ್ಷತ್ರಿಯನು ಅನ್ಯಥಾ ನಡೆದುಕೊಳ್ಳುವವನಾಗಿ ಅಪರಾಧವಿಲ್ಲದವನ ಮೇಲೇರಿ ಹೋಗುವನೋ, ಅಂತಹವನು ಪಾಪಗತಿಯನ್ನು ಹೊಂದುವನು, ಹಾಗೂ ತನ್ನ ಶ್ರೇಯಸ್ಸಿಗೇ ಭಂಗವನ್ನು ತರುವನು. ಸತ್ಕರ್ಮಗಳನ್ನು ಮಾಡುವುದೆನ್ನುವುದರಲ್ಲಿ ಕ್ಷತ್ರಿಯರ ಧರ್ಮವೆಂಬುದೇ ಮೂರೂ ಲೋಕಗಳಲ್ಲಿ ಶ್ರೇಷ್ಠವೆನಿಸತಕ್ಕದ್ದು. ಧರ್ಮಜ್ಞರು ಬೇರಿನ್ನಾವುದೇ ಧರ್ಮವನ್ನು ಪ್ರಶಂಸಿಸುವುದಿಲ್ಲ.

ನಾನಾದರೋ ಸ್ವಧರ್ಮದಲ್ಲಿ ನೆಲೆಗೊಂಡಿರತಕ್ಕವನು. ಮನಸ್ಸನ್ನು ಸಂಯಮದಲ್ಲಿ ಇಟ್ಟುಕೊಂಡಿರುವವನು. ಪ್ರಜೆಗಳ ವಿಷಯದಲ್ಲಿ ಏನೂ ಅಪರಾಧವನ್ನು ಎಸಗದಿರುವವನು. ನನ್ನ ವಿಷಯದಲ್ಲಿ ಏನೋ ಪ್ರಮಾದದಿಂದಲೇ ನೀವು ಹೀಗೆ ಹೇಳುತ್ತಿರುವಿರಿ."

ಅದಕ್ಕೆ ಕೃಷ್ಣನು ಹೇಳಿದನು:
ಒಂದು ಕುಲದ ಉದ್ದಾರವೆಂಬುದು ದೊಡ್ಡಕೆಲಸವಯ್ಯಾ, ಮಹಾಬಾಹುವೇ! ಕುಲದ ಗೌರವವನ್ನುಳಿಸುವಂತಹವನು ಎಲ್ಲೋ ಒಬ್ಬನಿದ್ದಾನು. ಅಂತಹ ಮಹಾಪುರುಷನೊಬ್ಬನ ಆಣತಿಯಂತೆಯೇ ನಾವೀಗ ನಿನಗೆ ದಂಡನವನ್ನೀಯಲು ಬಂದಿದ್ದೇವೆ. ಈ ಭೂಮಿಯ ಮೇಲಿರುವ ಅನೇಕ ಕ್ಷತ್ರಿಯ ರಾಜರನ್ನು ನೀನು ಸೆರೆಗೆ ನೂಕಿರುವೆ. ಇದು ಕ್ರೂರಾಪರಾಧ. ಇದನ್ನು ಮಾಡಿಯೂ ನಿನ್ನನ್ನು ನೀನೇ ನಿರಪರಾಧಿಯೆಂದುಕೊಳ್ಳುವುದೇ?

ಅಪರಾಧಿಗಳಲ್ಲದ ಇತರ ರಾಜರನ್ನು ಒಬ್ಬ ರಾಜನು ಅದೆಂತು ಹಿಂಸಿಸಿಯಾನು, ರಾಜಶ್ರೇಷ್ಠನೇ? ರಾಜರುಗಳನ್ನು ಜೈಲಿಗೆ ತಳ್ಳಿ ಅವರನ್ನು ರುದ್ರನಿಗೆ ಬಲಿಗೊಡಲು ನೀನು ಬಯಸುತ್ತಿರುವೆಯಲ್ಲವೇ? ನೀನು ಎಸಗುವ ಆ ಪಾಪವು ನಮಗೆ ಅಂಟಿಕೊಳ್ಳುತ್ತದೆ, ಓ ಜರಾಸಂಧ! ಆದರೆ ನಾವು ಧರ್ಮವನ್ನು ಪಾಲಿಸತಕ್ಕವರು, ಧರ್ಮದ ರಕ್ಷಣೆಯನ್ನು ಮಾಡಲು ಸಮರ್ಥರಾಗಿರುವವರು.

ದೇವತೆಗೆಂದು ಮನುಷ್ಯರನ್ನು ಬಲಿಗೊಡುವುದನ್ನು ನಾವೆಂದೂ ಕಂಡವರಲ್ಲ. ಹಾಗಿರಲು ಶಿವನ ಯಜ್ಞಕ್ಕಾಗಿ ಅಷ್ಟೊಂದು ಮನುಷ್ಯರನ್ನು ಬಲಿಗೊಡಲಿರುವೆಯೆಂಬುದೇ ಒಪ್ಪಲಾಗದ ಸಂಗತಿ. ನೀನು ಕ್ಷತ್ರಿಯ. ಉಳಿದ ರಾಜರು ನಿನಗೆ ಸವರ್ಣರು. ಎಂದರೆ ಅವರೂ ಕ್ಷತ್ರಿಯವಂಶದವರೇ. ಹೀಗೆ ತಾನು ಸವರ್ಣನಾಗಿದ್ದು ಸವರ್ಣರಾದವರನ್ನೇ ನೀನು ಪಶುಗಳನ್ನಾಗಿಸಹೊರಟಿರುವೆ!

ಜರಾಸಂಧ, ಮತ್ತಾರು ತಾನೆ ನಿನ್ನಂತೆ ಈ ರೀತಿಯಾಗಿ ದುರ್ಮತಿಯನ್ನು ಹೊಂದಿದ್ದಾರು?  ಯಾವ ಯಾವ  ಅವಸ್ಥೆಯಲ್ಲಿ ಯಾವ ಯಾವ ಕರ್ಮವನ್ನು ಒಬ್ಬನು ಮಾಡುತ್ತಾನೋ, ಅದದೇ ಅವಸ್ಥೆಯಲ್ಲಿ ಅದರ ಫಲವನ್ನು ಹೊಂದಬೇಕಾಗುತ್ತದೆ. ನೀನು ಜ್ಞಾತಿಕ್ಷಯಕರ – ಎಂದರೆ ಬಂಧುಗಳನ್ನೇ ನಾಶಮಾಡಲಿಕ್ಕೆ ಹೊರಟಿರತಕ್ಕವನು. ಆದರೆ ನಾವು ಆರ್ತರಿಗೆ, ಎಂದರೆ ಸಂಕಟಕ್ಕೆ ಒಳಗಾಗಿರುವವರಿಗೆ, ರಕ್ಷಣೆಯನ್ನು ಕೊಡತಕ್ಕವರು. ಆದ್ದರಿಂದ, ಎಂದರೆ ಜ್ಞಾತಿವೃದ್ದಿಗಾಗಿ ನಿನ್ನ ವಧೆಯನ್ನು ಮಾಡಲು ಬಂದಿರುವಂಥವರು.

ಈ ಲೋಕದಲ್ಲಿ ಕ್ಷತ್ರಿಯರಲ್ಲಿ ಗಂಡಸೆಂಬುವನೇ ಮತ್ತೊಬ್ಬನಿಲ್ಲ – ಎಂದ ನೀನೇನ್ನನ್ನು ಭಾವಿಸಿಕೊಂಡಿರುವೆಯೋ, ಅದು ನಿನ್ನ ಮಹತ್ತಾದ ಬುದ್ಧಿ-ವಿಪ್ಲವವೇ ಸರಿ. ಸ್ವಾಭಿಮಾನಿಯಾದ ಯಾವ ಕ್ಷತ್ರಿಯನು ತಾನೆ ತನ್ನ ಬಂಧುಗಳನ್ನು ಅರಿತವನಾಗಿ, ಅವರನ್ನು ಕಾಪಾಡಲೋಸುಗ ಮಾಡಬೇಕಾದ ರಣವನ್ನು ತಪ್ಪಿಸಿಕೊಂಡಾನು – ಅದರಿಂದಲೇ ಸ್ವರ್ಗಪ್ರಾಪ್ತಿಯು ತನಗಂಟಾಗುವುದು – ಎಂಬುದನ್ನು ಅರಿತಿದ್ದೂ ಸಹ?

ರಣವೆಂಬುದು ಒಂದು ಯಜ್ಞ. ರಣಯಜ್ಞದಲ್ಲಿ ದೀಕ್ಷೆಗೊಂಡ ಕ್ಷತ್ರಿಯರು ಸ್ವರ್ಗದಲ್ಲಿ ಆಸ್ಥೆಯುಳ್ಳವರಾಗಿ, ತಮಗೆ ಅಭೀಷ್ಟವಾದ ಲೋಕಗಳನ್ನು ಸೇರುವರೆಂಬುದನ್ನು ನೀನೂ ಅರಿತಿರಬೇಕಷ್ಟೆ?

ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 59 (Prasnottara Ratnamalike 59)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೯ - ಚಿಂತಿಸಬೇಕಾದ ವಿಷಯ ಯಾವುದು ? 

ಉ. ವೈಭವವಿದ್ದರೂ ಮತ್ತೊಬ್ಬರಿಗೆ ಕೊಡದಿರಿವ ಕೃಪಣತಾ.

ಅತ್ಯಂತ ವಿಷಾದದ ಸಂಗತಿ ಯಾವುದು? ಎಂಬುದು ಇಲ್ಲಿನ ಪ್ರಶ್ನೆ. ಇದಕ್ಕೆ ಉತ್ತರ -  ಒಬ್ಬ ವ್ಯಕ್ತಿಯಲ್ಲಿ ಸಾಕಷ್ಟು ಸಂಪತ್ತು ಇದೆ; ಆ ವ್ಯಕ್ತಿ ಒಂದರ್ಥದಲ್ಲಿ ಧನಿಕ. ತಾನು ಮಾತ್ರ ಆ ಸಂಪತ್ತನ್ನು ಬಳಸಿದರೂ ಅದು ಖರ್ಚಾಗದ ರೀತಿಯಲ್ಲಿ ಇದೆ. ಹಾಗಾದರೆ, ಇಷ್ಟು ಸಂಪತ್ತುಳ್ಳವನಾಗಿದ್ದರೂ ಕೂಡ ಅವನು ದೀನ ದರಿದ್ರರಿಗೆ ಆ ಸಂಪತ್ತನ್ನು ಕೊಡದೇ ತಾನೇ ಭೋಗಿಸಬೇಕು ಎಂಬ ಯಾವ ಆಸೆ ಇದೆಯೋ, ಅದೇ ವಸ್ತುತಃ ಕೃಪಣತಾ ಎಂಬುದಾಗಿ ಹೇಳಲಾಗಿದೆ. ಈ ಕಾರ್ಪಣ್ಯ ಎಂಬ ಅತಿಭಯಂಕರವಾದ ಅವಗುಣವು ಪ್ರಸ್ತುತ ವಿಷಾದ ಪಡಬೇಕಾದ ವಿಚಾರವಾಗಿದೆ. ಅಲ್ಲ, ವಿಷಾದಪಡುವ ಸಂಗತಿಯಾದರೂ ಏನು? ಸಂಪತ್ತುನ್ನು ಕೊಡಲೇಬೇಕೆಂಬ ನಿಯಮವಿದೆಯೇ? ಕೊಡದಿದ್ದರೆ ಏನು ಅಪರಾಧ? ನಿಜವಾಗಿಯೂ ಆ ವ್ಯಕ್ತಿ ತನ್ನ ಸಾಮರ್ಥ್ಯ, ಬುದ್ಧಿಮತ್ತೆ ಮತ್ತು ಶ್ರಮದ ಕಾರಣದಿಂದ ಸಂಪತ್ತನ್ನು ಗಳಿಸಿರುತ್ತಾನೆ. ಹಾಗಾಗಿ ಆ ಸಂಪತ್ತನ್ನು ಅವನೇ ಇಟ್ಟುಕೊಂಡು ಬಳಸಿ, ತನ್ನ ಪರಿವಾರದ ಪ್ರಗತಿಗಾಗಿ ಸೀಮಿತವಾಗಿ ಇಟ್ಟರೆ ಅದು ಹೇಗೆ ಆತಂಕದ ವಿಷಯ? ಅದನ್ನು ಏಕೆ ಕಾರ್ಪಣ್ಯ ಎಂಬುದಾಗಿ ಕರೆಯಬೇಕು? ಎಂಬುದು ಇಲ್ಲಿನ ಆಶಯ. ಹೀಗಿರುವಾಗ ವೈಭವವಿದ್ದಾಗ ಮತ್ತೊಬ್ಬರಿಗೆ ಕೊಡದ ಮನೋಧರ್ಮವು ಹೇಗೆ ವಿಷಾದದ ಸಂಗತಿ ಎಂಬುದನ್ನು ಯೋಚಿಸಬೇಕಾಗಿದೆ.

"ಸ್ತೋಕಾದಪಿ ಹಿ ದಾತವ್ಯಂ ಮುದಿದೇನ ಅಂತರಾತ್ಮನಾ। ಅಹನ್ಯಹನಿ ಯತ್ಕಿಂಚಿತ್ ಅಕಾರ್ಪಣ್ಯಮ್ ಇತಿ ಸ್ಮೃತಮ್॥" ಸ್ವಲ್ಪವನ್ನಾದರೂ ಕೊಡಲೇಬೇಕು, ಸ್ವಲ್ಪವನ್ನಾದರೂ ಅತ್ಯಂತ ಸಂತೋಷದಿಂದ ಕೊಡಬೇಕು, ಅದನ್ನು ಪ್ರತಿನಿತ್ಯವೂ ಕೊಡಬೇಕು ಎಂಬುದಾಗಿ ಅಕಾರ್ಪಣ್ಯದ ಸ್ವಭಾವವನ್ನು ಇಲ್ಲಿ ಹೇಳಲಾಗಿದೆ. ಪ್ರತಿಯೊಬ್ಬ ಮನುಷ್ಯನು ಕೂಡ ತಾನು ಸಂಪಾದಿಸಿದ್ದರಲ್ಲಿ ಹತ್ತನೆಯ ಒಂದು ಭಾಗವನ್ನು ದಾನ ಮಾಡಬೇಕು ಎಂಬುದಾಗಿ ನಮ್ಮೆಲ್ಲಾ ಶಾಸ್ತ್ರ - ಸಂಪ್ರದಾಯಗಳು ಒಕ್ಕೊರಳಿನಿಂದ ಸಾರುತ್ತವೆ. ಅಂದರೆ ತ್ಯಾಗ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು; ಕೇವಲ ತಾನು ಮಾತ್ರ ಸಂಪತ್ತನ್ನು ಬಳಸಿಕೊಳ್ಳಬೇಕು ಎಂಬ ಭಾವನೆ ಸಲ್ಲದು ಎಂದು. ಸಂಪಾದಿಸಿದ ದ್ರವ್ಯದಲ್ಲಿ ಗೃಹಸ್ಥನಾದವನು ಪಂಚಮಹಾಯಜ್ಞಗಳನ್ನು ಮಾಡಬೇಕು ಎಂಬುದಾಗಿ ನಮ್ಮ ಸನಾತನ ಧರ್ಮದಲ್ಲಿ ಹೇಳಿರುವ ಅತ್ಯಂತ ಮಹತ್ವದ ವಿಷಯ. ಈ ಪಂಚಮಹಾಯಜ್ಞ ಎಂಬ ಶ್ರೇಷ್ಠವಾದ ಕರ್ಮವು ತನ್ನ ಸಂಪತ್ತನ್ನು ಸದ್ವಿನಿಯೋಗ ಮಾಡುವ ವಿಧಾನ ಎಂದು ಕರೆಯುತ್ತಾರೆ. ಇದರಿಂದ ಸಂಪತ್ತು ಸದ್ವಿನಿಯೋಗವಾದಂತಾಗುತ್ತದೆ. ಶ್ರೀರಂಗಮಹಾಗುರುಗಳ ಈ ಮಾತು ಕೊಡುವುದು ಎಷ್ಟು ಅಗತ್ಯ ಎಂಬುದನ್ನು ತಿಳಿಸುತ್ತದೆ. "ದಾನ ಪ್ರತಿಗ್ರಹಗಳ ಪ್ರಿನ್ಸಿಪಲ್ ಮೇಲೆಯೇ ಸೃಷ್ಟಿಯು ನಡೆದು ನಿಂತು ಮುಂದುವರಿಯುತ್ತಿದೆ. ಸೃಷ್ಟಿಕರ್ತನು ತನ್ನ ಸಂಪತ್ತುಗಳನ್ನು ತನ್ನ ಸಂತಾನಕ್ಕೆ ದಾನ ಮಾಡದಿದ್ದರೆ, ಸೃಷ್ಟಿ ಹೇಗೆ ಮುಂದುವರಿದೀತು? ತಂದೆ ತಾಯಿಗಳು ತಮ್ಮ ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ಸ್ವತ್ತುಗಳನ್ನು ತಮ್ಮ ಸಂತಾನಕ್ಕೆ ದಾನ ಮಾಡುತ್ತಾರೆ. ಅವು ತಮ್ಮ ಮುಂದಿನ ಪೀಳಿಗೆಗೆ. ಒಬ್ಬನು ದಾನ ಮಾಡಿದ. ಇನ್ನೊಬ್ಬನೂ ಆ ದಾನ ಮಾಡಿದ. ಇದರ ಮೇಲೆಯೇ ಸೃಷ್ಟಿ ವ್ಯಾಪಾರವೆಲ್ಲವೂ ನಿಂತಿದೆ. ದಾನ ಮಾಡದಿದ್ದರೆ ಏನು ಫಲ? ಏನೂ ಫಲವಿಲ್ಲ. ದಾನ ಪ್ರತಿಗ್ರಹಗಳು ಸೃಷ್ಟಿಸಹಜವಾದ ಕ್ರಿಯೆಗಳು" ಎಂದು. ಹಾಗಾಗಿ ಎಷ್ಟು ವೈಭವವಿದ್ದರೂ ಅವನು ತನ್ನ ಗಳಿಕೆಯ ದ್ರವ್ಯವನ್ನು ಬೇರೊಬ್ಬರಿಗೆ ದಾನ ಮಾಡಲಿಲ್ಲವೆಂದರೆ ಅವನು ಶುದ್ಧನಾಗುವುದಿಲ್ಲ. ತ್ಯಾಗದ ಮನೋಭೂಮಿಕೆ ಬರೆದಿದ್ದರೆ ಶುದ್ದಿ ಎಲ್ಲಿಂದ ಬರುತ್ತದೆ! ಶುದ್ಧನಾಗದಿದ್ದರೆ ಅವನು ಹೇಗೆ ತಾನೇ ಪುರುಷಾರ್ಥಗಳನ್ನು ಪಡೆಯುತ್ತಾನೆ! ಇತ್ಯಾದಿ ಅನೇಕ ಆತಂಕಗಳಿಂದ ಕೇಳಿರುವ ಪ್ರಶ್ನೆ ಇದಾಗಿದೆ ಎಂಬುದಾಗಿ ಭಾವಿಸಬೇಕು.

ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, March 29, 2026

ಅಷ್ಟಾಕ್ಷರೀ102 ಅಭ್ಯಷಿಂಚನ್ ನರವ್ಯಾಘ್ರಂ (Astakshara 102)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಯುಗಾದಿಯು ಬಂತೆಂದರೆ ರಾಮನವಮಿಯೂ ಬಂದಂತೆಯೇ ಸರಿ. ನವಮಿಯೆಂದರೆ ಒಂಭತ್ತನೆಯ ತಿಥಿ. ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದೇ ರಾಮನವಮಿ. 

ಇಡೀ ಭಾರತದಲ್ಲಿ ಸಡಗರದಿಂದ ನೆರವೇರುವ ಅತಿಮುಖ್ಯ ಹಬ್ಬಗಳಲ್ಲಿ ರಾಮನವಮಿಯೂ ಒಂದು. ದೇಶವಿದೇಶಗಳಿಂದ ಕೋಟ್ಯಂತರ ಜನರು ಅಯೋಧ್ಯೆಯ ರಾಮಮಂದಿರದಲ್ಲಿ ತಮ್ಮ ಹಾರ್ದ ಪ್ರಣಾಮಗಳನ್ನು ಸಲ್ಲಿಸುತ್ತಿದ್ದಾರೆ. ಈ ಹೆಗ್ಗಳಿಕೆ ಇಡೀ ಪ್ರಪಂಚದ ಇನ್ನಾವ ಪವಿತ್ರಸ್ಥಾನಕ್ಕಿದೆ?

ರಾಮನ ಹಬ್ಬವೆಂದರೆ ರಾಮಪಟ್ಟಾಭಿಷೇಕವೆಂಬುದು ಸ್ಮರಣೆಗೆ ಬರದೇ? 

ಅದು ವಾಸ್ತವವಾಗಿ ಹೇಗೆ ನಡೆಯಿತು? ಪಟ್ಟಾಭಿಷೇಕವೆಂದರೆ ರಾಜನಾಗುವುದಲ್ಲವೇ? ರಾಜನೆಂದು ಗುರುತಿಸುವುದು ಕಿರೀಟ ಧರಿಸಿದಾಗ. ಅಲ್ಲಿಗೆ ಪಟ್ಟಾಭಿಷೇಕವೆಂದರೆ ಕಿರೀಟಧಾರಣೆಯೇ ತಾನೆ?

ಬಹುಮಂದಿಯ ಮನಸ್ಸಿನಲ್ಲಿರುವುದು ಹಾಗೆಯೇ. ವಾಸ್ತವವಾಗಿ ಕಿರೀಟಧಾರಣೆಯೆಂಬುದಾಗುವುದು ಪಟ್ಟಾಭಿಷೇಕವಾದಮೇಲೆಯೇ. ಅಲ್ಲಿಗೆ ಎರಡೂ ಬೇರೆಬೇರೆಯೆಂದಾಯಿತು.  

ರಾಮಾಯಣದಲ್ಲೇ ಹಲವು ಅಭಿಷೇಕಗಳುಂಟಲ್ಲವೇ? ಭರತನು ಮಾಡುವ  ರಾಮಪಾದುಕಾಪಟ್ಟಾಭಿಷೇಕ. ಬಳಿಕ ಸುಗ್ರೀವಪಟ್ಟಾಭಿಷೇಕ. ಅನಂತರ ವಿಭೀಷಣನದು. ರಾವಣಸಂಹಾರವಾದ ಮೇಲೆ ಸೀತಾಸಮೇತನಾಗಿ ರಾಮನು ಅಯೋಧ್ಯೆಗೆ ಹಿಂದಿರುಗಿದ ಮೇಲೆ ರಾಮಪಟ್ಟಾಭಿಷೇಕ - ಯುದ್ಧಕಾಂಡದ ಕೊನೆಯ ಸರ್ಗದಲ್ಲಿ. 

ವಾಸ್ತವವಾಗಿ ಅಭಿಷೇಕವೆಂದರೇನು? ಇದಾದ ಬಳಿಕವೇ ಏಕೆ ಕಿರೀಟಧಾರಣೆ? ಸಂಸ್ಕೃತದಲ್ಲಿ ಸೇಕವೆಂದರೆ ಸುರಿಯುವುದು. ಸಸ್ಯಗಳಿಗೆ ಜಲಸೇಕವೆಂದರೆ ಗಿಡಗಳಿಗೆ ನೀರು ಹಾಕುವುದು. ಅಭಿಷೇಕವೆಂದರೆ ತಲೆಯ ಮೇಲೆ ನೀರನ್ನು ಸುರಿಯುವುದು. ಸ್ನಾನ ಮಾಡುವಾಗ ತಲೆಯ ಮೇಲೆ ನೀರು ಹುಯ್ದುಕೊಳ್ಳುವುದಿದ್ದೇ ಇದೆಯಲ್ಲವೇ? ಇಲ್ಲೇನು ವಿಶೇಷ?

ವಿಶೇಷವಿದೆ. ಯಾವ ನೀರು, ನೀರು ಹುಯ್ದವರಾರು? - ಎಂಬಲ್ಲೇ ವಿಶೇಷಗಳಿವೆ. ರಾಮನೊಡನೆ ಬಂದಿದ್ದವರಿಗೆಲ್ಲ ತಂಗಲು ವ್ಯವಸ್ಥೆಯಾದ ಬಳಿಕ ಭರತನು ಸುಗ್ರೀವನಿಗೆ ಮಂಗಲಜಲವನ್ನು ತರಲು ನಿನ್ನ ದೂತರಿಗೆ ಆಜ್ಞಾಪಿಸೆನ್ನುತ್ತಾನೆ. ಆಗ ಸುಗ್ರೀವನು ನಾಲ್ಕು ಮಂದಿಗೆ ನಾಲ್ಕು ಸುವರ್ಣಕಲಶಗಳನ್ನಿತ್ತು ಸಮುದ್ರಗಳಿಂದಲೂ ವಿವಿಧ ಪುಣ್ಯತೀರ್ಥಗಳಿಂದಲೂ ಜಲವನ್ನು ತರಬೇಕು – ಅದೂ ಬೆಳಗಾಗುವಷ್ಟರಲ್ಲಿ! – ಎಂದು ಅಪ್ಪಣೆಕೊಡುತ್ತಾನೆ. ಐನೂರು ಪುಣ್ಯನದಿಗಳಿಂದಲೂ ನಾಲ್ಕು ಸಮುದ್ರಗಳಿಂದಲೂ ಪುಣ್ಯಜಲವನ್ನು ತರಲಾಗುತ್ತದೆ.

ಆಗ ಶತ್ರುಘ್ನನು ಅಭಿಷೇಕವನ್ನು ನೆರವೇರಿಸಿಕೊಡಬೇಕೆಂದು ವಸಿಷ್ಠರನ್ನು ಕೇಳಿಕೊಳ್ಳುತ್ತಾನೆ. ರತ್ನಮಯಪೀಠದಲ್ಲಿ ಸೀತಾಸಮೇತನಾದ ರಾಮನನ್ನು ಕುಳ್ಳಿರಿಸಿ,  ವಸಿಷ್ಠ-ವಾಮದೇವಾದಿ ಅಷ್ಟಮಹರ್ಷಿಗಳು, "ನರವ್ಯಾಘ್ರನಾದ ರಾಮನಿಗೆ ಪ್ರಸನ್ನವೂ ಸುಗಂಧಿಯೂ ಆದ ಸಲಿಲದಿಂದ ಅಭಿಷೇಕ ಮಾಡುತ್ತಾರೆ (ಅಭ್ಯಷಿಂಚನ್ ನರವ್ಯಾಘ್ರಂ). ಇದು ಹೇಗಿತ್ತೆಂದರೆ ವಸುಗಳು ವಾಸವನಿಗೆ, ಎಂದರೆ ಇಂದ್ರನಿಗೆ, ಹೇಗೆ ಅಭಿಷೇಕವನ್ನು ಮಾಡಿದರೋ ಹಾಗೆ" – ಎನ್ನುತ್ತದೆ, ರಾಮಾಯಣ. ನರವ್ಯಾಘ್ರನೆಂದರೆ ನರಶ್ರೇಷ್ಠ.

ಆ ಬಳಿಕ ಋತ್ವಿಕ್ಕುಗಳು, ಕನ್ಯೆಯರು, ಮಂತ್ರಿಗಳು, ಯೋಧರು, ವಣಿಗ್ಜನರು, ಅಭಿಷೇಕ ಮಾಡುತ್ತಾರೆ. ಆಕಾಶದಲ್ಲಿದ್ದ ದೇವತೆಗಳು ಸರ್ವ ಔಷಧಿರಸಗಳಿಂದ ಅಭಿಷೇಕ ಮಾಡುತ್ತಾರೆ. ಇಷ್ಟಾದ ಬಳಿಕವೇ ರಾಮನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ವಸಿಷ್ಠರು ಕಿರೀಟಧಾರಣವನ್ನು ರಾಮನಿಗೆ ಮಾಡಿಸುವುದು.

ಈ ಸಂದರ್ಭದಲ್ಲಿ ರಾಜನಿಗೇಕೆ ಮೂರ್ಧಾಭಿಷೇಕ? ಹಾಗೂ ಇಲ್ಲಿ ವಾಲ್ಮೀಕಿಗಳು ಕೊಟ್ಟಿರುವ ಉಪಮೆಯ ಔಚಿತ್ಯವೇನು? - ಎಂಬ ಪ್ರಶ್ನೆಗಳಿಗೆ ಉತ್ತರವು ಅವಶ್ಯವಾಗುತ್ತವೆ. 

ಇದನ್ನು ಶ್ರೀರಂಗಮಹಾಗುರುಗಳು ಹೀಗೆ ವಿವರಿಸುವರು. "ಕೈಗೆ, ಕಾಲಿಗೆ ಮಾತ್ರ ಅಭಿಷೇಕವಲ್ಲ. ಎಲ್ಲವೂ ಹೋಗಿ ಸೇರುವ ಭಾಗವೂ ನೆಲೆಯೂ ಆದ ಶಿರಸ್ಸಿನಲ್ಲಿ ಅಭಿಷೇಕ. ಅಲ್ಲದೆ, ಇಂದ್ರನಿಗೆ ವಸುಗಳು ಮಾಡಿದ ಅಭಿಷೇಕವು ಭುವಿಯನ್ನು ದಿವಿಯೊಡನೆ ಸೇರಿಸುವ ಕ್ರಮವಾಗಿದೆ."

ಶಿರಸ್ಸೆಂಬುದು ಎಲ್ಲ ಅಂಗಗಳೂ ಸೇರುವ ಎಡೆ. ಆಧುನಿಕವಿಜ್ಞಾನವೂ ಇದನ್ನೇ ಹೇಳುತ್ತದಲ್ಲವೇ? ಎಲ್ಲ ಅಂಗಗಳನ್ನೂ ಆಳುವ ಉತ್ತಮಾಂಗವೇ ಶಿರಸ್ಸು. ಶೀರ್ಷವು ತಂಪಾಗಿದ್ದರೆ ಎಲ್ಲವೂ ತಂಪಾದಂತೆ. ಗಿಡದ ರೆಂಬೆಗಳಿಗೋ ಎಲೆಗಳಿಗೋ ನೀರು ಸುರಿಯುವುದಲ್ಲ. ಮೂಲಕ್ಕೆ ಹಾಕಿದರೆ ಎಲ್ಲ ಅಂಗಗಳಿಗೂ ಹಾಕಿದಂತೆಯೇ. ಶಿರಸ್ಸೇ ನಮ್ಮ ಮೂಲ. ಶಿರಸ್ಸು ತಂಪಾಗಿದ್ದವನ ಚಿತ್ತವೂ ತಂಪಾಗಿರುವುದು. ರಾಜನು ಯಾವ ಸಮಾಧಾನದಿಂದ ರಾಜ್ಯವನ್ನಾಳಬೇಕೋ ಅದು ಸಿದ್ಧಿಸುವುದು ಪುಣ್ಯಜಲ, ದಿವ್ಯೌಷಧರಸ – ಇವುಗಳ ಪ್ರಭಾವದಿಂದಾಗಿ. 

ಜೊತೆಗೆ ಭೂಮಿಯ ಮೇಲೆ ಜರುಗುವ ಘಟನೆಗೆ ದೇವಲೋಕದ ಘಟನೆಯೇ ಮಾದರಿ. ರಾಮನೂ ಭೂಮಿಯ ಮಗಳನ್ನು ಮದುವೆಯಾಗಿ ಕೊನೆಗೆ ತನ್ನ ಪ್ರಜೆಗಳನ್ನು ದಿವ್ಯಧಾಮದತ್ತ ಒಯ್ಯುವುದೇ ರಾಮಾಯಣದ ಕಥೆಯಲ್ಲವೇ? ಹೀಗೆ ದಿವ್ಯಾದರ್ಶಗಳನ್ನು ನಮ್ಮ ಮುಂದಿರಿಸುವ ಕಥೆಯೇ ರಾಮಾಯಣ. ರಾಜನು ತನ್ನ ತಲೆಯನ್ನು ತಂಪಾಗಿಟ್ಟುಕೊಂಡು ಜನತೆಗೂ ತಂಪನ್ನೀಯುವುದೇ ಅಭಿಷೇಕತತ್ತ್ವ. 

ಹೀಗೆ ಈ ಘಟನೆಗಳನ್ನೂ, ಶಾಸ್ತ್ರವಿಧಿಗಳನ್ನೂ ತಾತ್ತ್ವಿಕನೆಲೆಗಟ್ಟಿನಲ್ಲಿ ನೋಡುವ ಅರಿವೇ ತಾರಕವಾದುದು. 

ಸೂಚನೆ: 28/3//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ. 

Monday, March 23, 2026

ವ್ಯಾಸ ವೀಕ್ಷಿತ 179 ಜರಾಸಂಧನೊಂದಿಗೆ ಮಾತಿನ ಚಕಮಕಿ ( Vyaasa Vikshita 179)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)



ಸತ್ಯಸಂಧನಾದ ಜರಾಸಂಧನು ವೇಷಾಂತರಧಾರಿಗಳಾಗಿದ್ದ ಅವರನ್ನು ಕುರಿತು ಹೇಳಿದನು:

"ಸ್ನಾತಕವ್ರತವನ್ನು ಮುಗಿಸಿ ಬಂದ ವಿಪ್ರರು, ವಿಕಾರವುಳ್ಳವರಾಗಿ - ಎಂದರೆ ವೇಷವಿರೋಧಿಯಾದ ಆಚಾರವುಳ್ಳವರಾಗಿ -ಹೊರಗೆ ತೋರುವಂತೆ ಹೀಗೆ ಮಾಲಾಧಾರಣ-ಚಂದನ-ಲೇಪನಗಳನ್ನು ಮಾಡಿಕೊಳ್ಳುವುದಿಲ್ಲ. ಇದು ಎಲ್ಲರಿಗೂ ತಿಳಿದಿರುವಂತಹುದೇ ಸರಿ. ಆದರೆ ತಾವುಗಳು ಪುಷ್ಪಮಾಲೆಗಳನ್ನು ಧರಿಸಿದ್ದೀರಿ.

ಅಷ್ಟೇ ಅಲ್ಲ. ತಮ್ಮ ತೋಳುಗಳಲ್ಲಿ (ಉತ್ತಮ ಬಿಲ್ಲುಗಾರರ ತೋಳುಗಳಲ್ಲಿ ಕಾಣುವ) ಬಿಲ್ಲಿನ ಹುರಿಯ ಚಿಹ್ನೆಗಳಿವೆ. ಹಾಗಿರಲು ನಿಜವಾಗಿ ನೀವು ಯಾರು? ಕ್ಷತ್ರಿಯರಿಗೆ ಸಲ್ಲುವ ಓಜಸ್ಸನ್ನು ಹೊಂದಿದ್ದೀರಿ. ಆದರೆ ಬ್ರಾಹ್ಮಣರೆಂದು ಹೇಳಿಕೊಳ್ಳುತ್ತಿದ್ದೀರಿ. ವಿಧವಿಧವಾದ ರಾಗಗಳನ್ನುಳ್ಳ, ಎಂದರೆ ಬೇರೆ ಬೇರೆ ಬಣ್ಣಗಳನ್ನು ಹೊಂದಿರುವ, ವಸ್ತ್ರಗಳನ್ನು ಧರಿಸಿರುವಿರಿ. ಹೊರಗೆ ಮಾಲ್ಯಾನುಲೇಪನಗಳನ್ನು - ಎಂದರೆ ಹಾರ-ಚಂದನಗಳನ್ನು – ಧರಿಸಿರುವಿರಿ!

ನೀವು ಯಾರೆಂಬುದನ್ನು ಸತ್ಯವಾಗಿ ಹೇಳಿರಿ. ರಾಜರಿಗೆ ಶೋಭಿಸತಕ್ಕದ್ದು ಸತ್ಯವೇ ಸರಿ: ಸತ್ಯಂ ರಾಜಸು ಶೋಭತೇ.

ಅಷ್ಟೇ ಅಲ್ಲ. ಬರುವಾಗ ಚೈತ್ಯಪರ್ವತದ ಶಿಖರಗಳನ್ನು ಒಡೆದುಹಾಕಿದ್ದೀರಿ. ಅದು ರಾಜಾಪಚಾರವಲ್ಲವೇ? ಅದಕ್ಕಾಗಿ ನಿಮ್ಮಲ್ಲಿ ಭಯವಿರಬೇಡವೇ?

ಛದ್ಮವೇಷವನ್ನು ಧರಿಸಿರುವಿರಲ್ಲದೆ ಅದ್ವಾರದಿಂದ ಪ್ರವೇಶಮಾಡಿದ್ದೀರಿ! ಯಾವ ಕಾರಣಕ್ಕಾಗಿ? ಮಾತನಾಡಿ.

ಬ್ರಾಹ್ಮಣರಾದವರಿಗಂತೂ ತಮ್ಮ ಮಾತಿನಲ್ಲೇ ವೀರ್ಯವೆಂಬುದು ನೆಲೆಗೊಂಡಿರುವುದು. ನಿಮ್ಮ ಕರ್ಮವು ವಿಲಿಂಗಸ್ಥವಾದದ್ದು. ಅರ್ಥಾತ್, ನಿಮ್ಮ ಬಾಹ್ಯ-ಚಿಹ್ನಗಳಿಗೆ ಹೊಂದತಕ್ಕದ್ದಲ್ಲ; ವಾಸ್ತವವಾಗಿ ಅದಕ್ಕೆ ವಿರುದ್ಧವಾದದ್ದೇ ಸರಿ! ಇರಲಿ. ಒಟ್ಟಿನಲ್ಲಿ ನಿಮ್ಮ ಧ್ಯೇಯವೇನು? ನನ್ನ ಬಳಿಗೇನೋ ಬಂದಿದ್ದೀರಿ. ಆದರೆ ವಿಧ್ಯುಕ್ತವಾಗಿ ನಾವು ನಿಮಗೆ ಅರ್ಪಿಸಿದ ಆದರವನ್ನು ಸ್ವೀಕರಿಸದೆಯೇ ನಿಂತಿದ್ದೀರಿ. ಇದಕ್ಕೆ ಕಾರಣವೇನು? ನಮ್ಮಲ್ಲಿಗೆ ನೀವು ಬರುವುದರ ಹಿಂದಿನ ಉದ್ದೇಶವಾದರೂ ಏನಾಗಿದೆ?"

ಜರಾಸಂಧನು ಹೀಗೆ ನುಡಿಯಲಾಗಿ, ಮಹಮನಸ್ಕನಾದ ಕೃಷ್ಣನು ಉತ್ತರವಿತ್ತನು. ವಾಕ್ಯವಿಶಾರದನಾದ ಆತನ ಮಾತು ಸ್ನಿಗ್ಧವೂ ಗಂಭೀರವೂ ಆಗಿದ್ದಿತು. ಕೃಷ್ಣನು ಹೀಗೆ ಹೇಳಿದನು:

"ರಾಜನೇ, ನಮ್ಮನ್ನು ನೀನು ಸ್ನಾತಕ-ಬ್ರಾಹ್ಮಣರೆಂದೇ ಭಾವಿಸಿಕೋ, ಪರವಾಯಿಲ್ಲ. ಆದರೆ ಸ್ನಾತಕ-ವ್ರತಿಗಳೆಂದರೆ ಬ್ರಾಹ್ಮಣರು ಮಾತ್ರವಲ್ಲದೆ, ಕ್ಷತ್ರಿಯರೂ ವೈಶ್ಯರೂ ಆಗಬಹುದಷ್ಟೆ.

ಸ್ನಾತಕರೆನಿಸಿಕೊಂಡವರಿಗೆಲ್ಲಾ ಅನ್ವಯಿಸುವ ಸಾಮಾನ್ಯ-ನಿಯಮಗಳೂ ಇವೆ, ಜೊತೆಗೆ ವಿಶೇಷ-ನಿಯಮಗಳೂ ಇರುತ್ತವೆಯಷ್ಟೆ?

ವಿಶೇಷ-ನಿಯಮಗಳನ್ನು ಸತತವಾಗಿ ಅನುಸರಿಸತಕ್ಕ ಕ್ಷತ್ರಿಯನು ಯಾರುಂಟೋ ಆತನು ಲಕ್ಷ್ಮಿಯನ್ನು ಹೊಂದುವನೇ ಸರಿ. ಯಾರು ಪುಷ್ಪ-ಧಾರಣೆಯನ್ನು ಮಾಡುವರೋ ಅವರಲ್ಲಿ ಲಕ್ಷ್ಮಿಯು ನೆಲಸುವಳು. ಆ ಕಾರಣಕ್ಕಾಗಿಯೇ ನಾವು ಪುಷ್ಪವಂತರಾಗಿದ್ದೇವೆ, ಎಂದರೆ ಮಾಲಾಧಾರಿಗಳಾಗಿದ್ದೇವೆ.

ಕ್ಷತ್ರಿಯನೆಂದರೆ ಬಾಹುವೀರ್ಯವುಳ್ಳವನು. ಕ್ಷತ್ರಿಯನು ಅದೆಷ್ಟು ಬಾಹುವೀರ್ಯವುಳ್ಳವನೋ ಅಷ್ಟೊಂದು ವಾಕ್ಯವೀರ್ಯವುಳ್ಳವನಲ್ಲ. ಎಂದೇ ಓ ಬೃಹದ್ರಥಪುತ್ರನಾದ ಜರಾಸಂಧನೇ, ಕ್ಷತ್ರಿಯನ ಮಾತಿನಲ್ಲಿ ಧಾರ್ಷ್ಟ್ಯವು ಹೆಚ್ಚಿರುವುದಿಲ್ಲ. ಸೃಷ್ಟಿಮಾಡುವಾಗ ಬ್ರಹ್ಮನು ಕ್ಷತ್ರಿಯರ ಬಲವೆಂಬುದನ್ನು ಅವರ ತೋಳುಗಳಲ್ಲಿಯೇ ತುಂಬಿಸಿಟ್ಟಿರುವನು. ಅದನ್ನು ನೀ ನೋಡಬಯಸುವೆಯಾದರೆ, ಓ ರಾಜನೇ, ಇಂದು ನಿಸ್ಸಂಶಯವಾಗಿಯೂ ನೋಡುವೆ. ಇದರಲ್ಲಿ ಸಂಶಯವೇ ಇಲ್ಲ.

ಮಿತ್ರಗೃಹವನ್ನು ಪ್ರವೇಶಿಸುವಾಗ ದ್ವಾರದ ಮೂಲಕ ಪ್ರವೇಶಿಸತಕ್ಕದ್ದು; ಆದರೆ ಶತ್ರುಗೃಹವನ್ನು ಪ್ರವೇಶಿಸುವಾಗ ಅದ್ವಾರದ ಮೂಲಕವೇ ಪ್ರವೇಶಿಸತಕ್ಕದ್ದು. ಇದು ಧೀರರ ನಡೆ. ಹೀಗಿರುವುವು ಶತ್ರು-ಮಿತ್ರರುಗಳ ದ್ವಾರಗಳು – ಎಂಬುದಾಗಿ ಧರ್ಮ-ದೃಷ್ಟಿಯಿಂದ ಹೇಳಲಾಗಿದೆ.

ನಮ್ಮ ಕೆಲಸದ ಮೇರೆಗೇ ನಾವು ನಿನ್ನ ಮನೆಗೆ ಬಂದಿರುವುದು. ಶತ್ರುವಿನಿಂದ ನಾವು ಆದರ-ಸತ್ಕಾರಗಳನ್ನು ಸ್ವೀಕರಿಸುವವರಲ್ಲ. ಇದುವೇ ನಮ್ಮ ಶಾಶ್ವತ-ವ್ರತವಾಗಿದೆ" – ಎಂದನು, ಶ್ರೀಕೃಷ್ಣ.

ಸೂಚನೆ : 22/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 58 (Prasnottara Ratnamalike 58)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೮ - ದುರ್ಲಭವಾದ ಚತುರ್ಭದ್ರಗಳು ಯಾವುವು ?

ಉ. ಪ್ರಿಯವಾದ ಮಾತಿನಿಂದ ಕೂಡಿದ ದಾನ, ಗರ್ವರಹಿತವಾದ ಜ್ಞಾನ, ಕ್ಷಮಾದಿಂದ ಕೂಡಿದ ಶೌರ್ಯ ಮತ್ತು ತ್ಯಾಗದಿಂದ ಕೂಡಿದ ವಿತ್ತ 

ಈ ಹಿಂದಿನ ಪ್ರಶ್ನೋತ್ತರದಲ್ಲಿ 'ಚತುರ್ಭದ್ರ ಅಂದರೆ ಯಾವುದು?' ಎಂಬ ವಿಷಯವನ್ನು ವಿವರಿಸಲಾಗಿತ್ತು. ನಾಲ್ಕು ಪುರುಷಾರ್ಥಗಳೇ ಚತುರ್ಭದ್ರಗಳು ಎಂಬ ವಿವರಣೆ ಅಲ್ಲಿತ್ತು. ಇದಕ್ಕೂ ಮುಂದುವರಿದ ಪ್ರಶ್ನೆ ಇದಾಗಿದೆ. ದುರ್ಲಭವಾದ ಚತುರ್ಭದ್ರಗಳು ಯಾವುವು? ಎಂದು. ಅಂದರೆ ಇಲ್ಲಿ ಹೇಳಿದ ನಾಲ್ಕು ಸಂಗತಿಗಳು ನಾಲ್ಕು ಪುರುಷಾರ್ಥಗಳನ್ನು ಪಡೆಯಲು ಅತ್ಯಂತ ಸಹಕಾರಿಗಳು ಎಂಬುದು ಎರಡು ಪ್ರಶ್ನೋತ್ತರಗಳನ್ನು ಗಮನಿಸಿದಾಗ ತಿಳಿದುಬರುವ ಅಂಶವಾಗಿದೆ. ಹಾಗಾಗಿ ಈ ಉತ್ತರದಲ್ಲಿ ಚತುರ್ಭದ್ರವನ್ನು ಸಾಧಿಸಲು ಬೇಕಾದ ದುರ್ಲಭವಾದ ಚತುರ್ಭದ್ರಗಳು ಯಾವುವು? ಎಂಬುದನ್ನು ತಿಳಿಯಬೇಕಾದ ಸಂದರ್ಭವಿದೆ.

ದಾನ ಮಾಡಬೇಕು. ಆದರೆ ದಾನವನ್ನು ಮಾಡುವಾಗ ಪ್ರಿಯವಾದ ಮಾತಿನಿಂದ ದಾನ ಮಾಡಬೇಕು. ಅಂದರೆ ದಾನವನ್ನು ಕೊಡುವ ಸಂದರ್ಭದಲ್ಲಿ ಸ್ವೀಕರಿಸುವವರ ಮನಸ್ಸು ಮೃದುವಾಗಿರಬೇಕು; ಅಂತಹ ಮನಸ್ಸನ್ನು ನಿರ್ಮಿಸಬೇಕು; ಅಂತಹ ಮನಸ್ಸನ್ನು ನಿರ್ಮಿಸಲು ಇರುವ ಉತ್ತಮ ಸಾಧನವೇ ಪ್ರಿಯವಾದ ಮಾತು. ಪ್ರಿಯವಾದ ಮಾತಿನಿಂದ ದಾನ ಮಾಡಿದಾಗ ದಾನಕ್ಕೆ ಹೆಚ್ಚಿನ ಮಹತ್ವ ಬರುತ್ತದೆ ಎಂಬುದು ಇದರ ಅರ್ಥ.

ಜ್ಞಾನವು ಗರ್ವದಿಂದ ರಹಿತವಾದಾಗ ಶೋಭಿಸುತ್ತದೆ. ಇದಕ್ಕೆ ಸಂಬಂಧಪಟ್ಟ ಒಂದು ಸುಭಾಷಿತ ಹೀಗಿದೆ - 'ವಿದ್ಯಾ ವಿನಯೇನ ಶೋಭತೇ' ಎಂಬುದಾಗಿ. ವಿನಯ ಎಂದರೆ ಗರ್ವ ಇಲ್ಲದಿರುವುದು. ಜ್ಞಾನವು ಎತ್ತರದಲ್ಲಿರುವ ವಿಷಯ. ಅದು ನಮ್ಮಲ್ಲಿಗೆ ಬರಬೇಕಾದರೆ ಬಾಗುವಿಕೆ ಅತ್ಯಂತ ಅನಿವಾರ್ಯ. ಈ ಬಾಗುವಿಕೆಯೇ ವಿನಯ ಎಂಬುದಾಗಿ ಕರೆಸಿಕೊಳ್ಳುತ್ತದೆ. ಹಾಗಾಗಿ ಜ್ಞಾನದ ಹರಿವು ವಿನಯದಲ್ಲಿ ನೆಲೆನಿಲ್ಲುತ್ತದೆ. ವಿನಯವಂತಿಕೆ ಜ್ಞಾನವನ್ನು ಇನ್ನಷ್ಟು ಪರಿಶೋಧಿಸುತ್ತದೆ.

ಶೌರ್ಯ ಎಂಬುದು ಬಹಳ ದೊಡ್ಡ ಗುಣ. ಅದು ಶರೀರ, ಇಂದ್ರಿಯ, ಮನಸ್ಸು ಇವುಗಳು ಬಲಿಷ್ಠವಾದಾಗ ರೂಪಿತಗೊಳ್ಳುವ ಒಂದು ವಿಶೇಷಗುಣ. ಈ ಗುಣವು ಪರಿಪೂರ್ಣವಾಗಬೇಕಾದರೆ ಅದಕ್ಕೆ ಕ್ಷಮಾ ಎಂಬ ಗುಣವು ಬೇಕು. ಸಹನೆ ಎಂಬುದು ಇದರ ಅರ್ಥ. ಶೌರ್ಯದಿಂದ ಕೂಡಿರುವ ವ್ಯಕ್ತಿಯು ಬಲಹೀನನಾದವನ ಮೇಲೆ ತನ್ನ ಬಲವನ್ನು ಪ್ರಯೋಗಿಸಬಾರದು; ಅದಕ್ಕೆ ಅವನಿಗೆ ಸಹನೆ ಅಥವಾ ಕ್ಷಮೆ ಎಂಬ ಗುಣ ಅತ್ಯಂತ ಅವಶ್ಯಕ. ಯಾರ ಮೇಲೆ ಬಲಪ್ರಯೋಗವನ್ನು ಮಾಡಬೇಕು? ಯಾರ ಮೇಲೆ ಬಲಪ್ರಯೋಗವನ್ನು ಮಾಡಬಾರದು? ಎಂಬ ವಿವೇಕವನ್ನು ಕ್ಷಮಾ ಗುಣವು ಶೌರ್ಯ ಇದ್ದವನಿಗೆ ಕಲಿಸುತ್ತದೆ.

ಮನುಷ್ಯನು ಧನವನ್ನು ಸಂಪಾದನೆ ಮಾಡಬೇಕಾದದ್ದು ಅತ್ಯಂತ ಅನಿವಾರ್ಯ. ಧನವಿಲ್ಲದಿದ್ದರೆ ಅವನ ಜೀವನ ಸಾರ್ಥಕವಲ್ಲ. ಧನವಿಲ್ಲದ ಜೀವನ ಉಸಿರಿಲ್ಲದ ಶವದಂತೆ. ಆದರೆ ಸಂಪಾದನೆ ಮಾಡಿದ ಧನವು ಉಳಿಯಬೇಕಾದರೆ ಅದು ತ್ಯಾಗದಿಂದ ಮಾತ್ರ ಸಾಧ್ಯ. ಅದಕ್ಕೆ ದಾಸರು ಹೇಳುವುದು "ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ" ಎಂಬುದಾಗಿ. ಇಟ್ಟು ಇಟ್ಟು ಧನವು ಹಾಳಾಗುತ್ತದೆ. ನಿಂತ ನೀರು ಕೆಡುತ್ತದೆ. ಹರಿಯುವ ನೀರು ಶುದ್ಧವಾಗಿರುತ್ತದೆ. ಸಂಪಾದಿಸಿದ ವಿತ್ತವು ತ್ಯಾಗದಿಂದ ಶುದ್ಧವಾಗುತ್ತದೆ. ಮತ್ತಷ್ಟು ಶುದ್ಧವಾದ ಧನ - ಸಂಪತ್ತು ಅವನನ್ನು ಸೇರಿಕೊಳ್ಳುತ್ತದೆ. ಹಾಗಾಗಿ ತ್ಯಾಗದಿಂದ ಕೂಡಿದ ಧನವು ಆ ವ್ಯಕ್ತಿಯಲ್ಲಿ ವ್ಯಕ್ತಿತ್ವವನ್ನು ರೂಪಿಸುತ್ತದೆ. ಹೀಗೆ ದಾನ, ಜ್ಞಾನ, ಶೌರ್ಯ ಮತ್ತು ಧನ ಈ ನಾಲ್ಕು ಸಂಪತ್ತುಗಳು ಉಳಿಯಬೇಕಾದರೆ ಏನು ಮಾಡಬೇಕು ಎಂಬ ಉತ್ತರ ಈ ಪ್ರಶ್ನೋತ್ತರದಲ್ಲಿ ಇದೆ ಎಂಬುದನ್ನು ನಾವು ಗಮನಿಸಬೇಕು.

ಸೂಚನೆ : 22/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ರಾಮಾಯಣದಲ್ಲಿ ಭ್ರಾತೃತ್ವದ ಆದರ್ಶ (Ramayanadalli Bhratrtvada Adarsha)


ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀರಾಮನು ತಮ್ಮ ದೊರೆಯಾಗುವನೆಂದು ಅಯೋಧ್ಯೆಯ ಪ್ರಜೆಗಳೂ, ತನ್ನ ಉತ್ತರಾಧಿಕಾರಿಯಾಗುವನೆಂದು ದಶರಥನೂ ಕನಸು ಕಂಡಿದ್ದರು. ಆ ತೇರನ್ನು ಕೈಕೇಯಿ ತಾನು ಕೇಳಿದ ವರಗಳಿಂದ ನುಚ್ಚುನೂರು ಮಾಡಿದ್ದಳು. ತನ್ನ ಮುಂದಿನ ದೊರೆಗಾಗಿ ಕಾದಿತ್ತು ಅಯೋಧ್ಯೆಯ ಸಿಂಹಾಸನ. ಭರತನು ಅಲ್ಲಿ ಕೂರುವನೆಂಬ ಆಸೆಯನ್ನು ಕೈಕೇಯಿ ಹೊತ್ತಿದ್ದಳು. ಆದರೆ ಆದದ್ದೇನು? ಸಿಂಹಾಸನವೇರಿದುದು ಭರತನಲ್ಲ, ಅವನಿಗೆ ಶ್ರೀರಾಮನಿತ್ತ ಪಾದುಕೆಗಳು. ತಾನು ರಾಮಚಂದ್ರನ ಸೇವಕನೆಂಬ ಭಾವನೆಯಿಂದಲೇ ಪುಣ್ಯಾತ್ಮನಾದ ಭರತನು ಹದಿನಾಲ್ಕು ವರ್ಷಗಳೂ ರಾಜ್ಯಭಾರ ಮಾಡಿದ್ದು. ಭ್ರಾತೃತ್ವದ ಆದರ್ಶವೆಂದರೆ ಇದಕ್ಕಿಂತ ಹೆಚ್ಚಾದದ್ದೇನಿದೆ?

ಶ್ರೀರಾಮನ ಅಮೋಘವಾದ ಕಥೆಯನ್ನು ಹೇಳುವುದರೊಂದಿಗೇ ಮನುಷ್ಯರು ಇಂತಿರಬೇಕು, ಇಂತಿರಬಾರದು ಎನ್ನುವುದನ್ನೂ ರಾಮಾಯಣವು ಬೋಧಿಸುತ್ತದೆ. ಅಣ್ಣ-ತಮ್ಮಂದಿರು ಹೇಗಿರಬೇಕು ಎನ್ನುವುದರ ಆದರ್ಶವು ರಾಮ-ಲಕ್ಷ್ಮಣ-ಭರತ-ಶತ್ರುಘ್ನರ ಮೂಲಕ ಮನಮುಟ್ಟುವಂತೆ ನಮಗೆ ತಿಳಿಯುತ್ತದೆ. ಅದಕ್ಕಾಗಿ ಈ ಮೇಲೆ ಹೇಳಿರುವಂತಹ ಒಂದೇ ಒಂದು ಸಂನಿವೇಶವನ್ನೇ ಕೂಲಂಕಷವಾಗಿ ಗಮನಿಸಿದರೆ ಸಾಕು. 

ಕೈಕೇಯಿಯು ಹೇಳಿದ್ದಕ್ಕೆ ಶ್ರೀರಾಮನ ಪ್ರತಿಕ್ರಿಯೆ ಹೇಗಿತ್ತು? ಯುವರಾಜನಾಗಬೇಕಾದವನು ವನವಾಸಕ್ಕೆ ಹೋಗಬೇಕು ಎಂದಾದರೂ, ರಾಮನ ಮನಸ್ಸು ಕಿಂಚಿತ್ತೂ ಹುಳಿಯಾಗಲಿಲ್ಲ. ತನ್ನ ಬದಲು ತನ್ನ ತಮ್ಮನಾದ ಭರತನಿಗೆ ಪಟ್ಟಾಭಿಷೇಕವೆಂದು ಅವನಿಗೆ ಸಂತೋಷವೇ ಆಯಿತು.  ತಂದೆ ಕೊಟ್ಟ ಮಾತನ್ನು ಉಳಿಸಲು ತಾನೇನು ಮಾಡಬೇಕು? - ಎನ್ನುವುದೊಂದೇ ಶ್ರೀರಾಮನ ಮನಸ್ಸಿನಲ್ಲಿದ್ದದ್ದು. (ಅಯೋಧ್ಯೆಗೆ ಹಿಂದಿರುಗುವಾಗಲೂ ರಾಮನು ಮೊದಲು ಹನುಮಂತನನ್ನು ಕಳುಹಿಸಿದನು – ಭರತನನ್ನು ಗಮನಿಸಲು. ಅಷ್ಟು ದಿನ ರಾಜ್ಯವಾಳಿದ ಭರತನಿಗೆ ಅದರಲ್ಲಿ ಅಕಸ್ಮಾತ್ ರುಚಿ ಮೂಡಿದ್ದರೆ? ಆಗ ಅವನಿಗೇ ರಾಜ್ಯಭಾರವನ್ನು ಒಪ್ಪಿಸಿಬಿಡಬೇಕೆಂಬ ಉದ್ದೇಶ ರಾಮನದು!) 

ಇನ್ನು ಲಕ್ಷ್ಮಣ. ರಾಮನಿಗೆ ಅನ್ಯಾಯವಾಯಿತೆಂದು ಅವನಿಗೆ ಉರಿಗೋಪವೇ ಬಂದಿತ್ತು. ಆದರೆ ಶ್ರೀರಾಮನು ತನ್ನ ನಿಲುವನ್ನೂ ಅದರ ಹಿಂದಿನ ತನ್ನ ಧಾರ್ಮಿಕನೋಟವನ್ನೂ ತಿಳಿಹೇಳಿದ ನಂತರ ಲಕ್ಷ್ಮಣನ ಚಿಂತನವೇ ಬದಲಾಯ್ತು! ನಾರುಮಡಿಯುಟ್ಟು ತನ್ನಣ್ಣನ ಹಿಂದೆ ಕಾಡಿಗೆ ಹೊರಡಲು ಲಕ್ಷ್ಮಣನು ಒಂದು ಕ್ಷಣವೂ ಯೋಚಿಸಲಿಲ್ಲ. ತನ್ನ ಪ್ರಧಾನಧರ್ಮವೇನೆಂಬುದು ಅವನಿಗೆ ಸುಸ್ಪಷ್ಟವಾಗಿತ್ತು. 

ಇತ್ತ ಭರತನ ಪ್ರತಿಕ್ರಿಯೆ: ತನ್ನ ತಾಯಿಯನ್ನು ಅವಳ ಅಕೃತ್ಯಕ್ಕೆ ಹಳಿದವನೇ, ರಾಮನಿಗೆ ರಾಜ್ಯವನ್ನೊಪ್ಪಿಸಲು ಹೊರಟೇಬಿಟ್ಟ! ಜನರ ಬಾಯಿಗೆ ಹೆದರಿ ತೆಗೆದುಕೊಂಡ ನಿರ್ಧಾರವಲ್ಲ ಭರತನದು. ತಾನು ಕೇಳದೆಯೇ ಬಂದ ರಾಜ್ಯವೆಂದು ಆತ ಪಟ್ಟಾಭಿಷಿಕ್ತನಾಗಲು ಒಪ್ಪಬಹುದಿತ್ತು. ತಾಯಿ ಮಾಡಿದ್ದು ಸರಿಯಲ್ಲವೆಂದು ಹೇಳಿ, ಭರತನು ರಾಜ್ಯಭಾರ ಮಾಡಲು ಒಪ್ಪಿದ್ದಿದ್ದರೆ ಆತನನ್ನು ಯಾರೂ ದೂಷಿಸಲು ಆಸ್ಪದವಿರಲಿಲ್ಲ. ಧರ್ಮ್ಯವಾದದ್ದೇನು ಎಂಬುದರ ಬಗ್ಗೆ ಭರತನ ಮನಸ್ಸಿನಲ್ಲಿ ಸ್ಪಷ್ಟತೆ ಮತ್ತು ದೃಢವಿಶ್ವಾಸಗಳಿದ್ದವು. ಆತನು ನೇರವಾಗಿ ಶ್ರೀರಾಮನಿರುವಲ್ಲಿಗೆ ಹೋಗಿ ರಾಜೋಚಿತವಾದ ಎಲ್ಲ ಸಮ್ಮಾನಗಳೊಡನೆ ಅವನನ್ನು ಅಯೋಧ್ಯೆಗೆ ಕರೆತರಲು ಪ್ರಯತ್ನಿಸಿದನು. ರಾಮನೊಪ್ಪದಿದ್ದಾಗ, ಅವನ ಪಾದುಕೆಗಳನ್ನೇ  ಪ್ರತಿನಿಧಿಯನ್ನಾಗಿಟ್ಟು ಆಡಳಿತವನ್ನು ನೋಡಿಕೊಂಡನು. ರಾಜ್ಯವಾಳುವ ಭರತನು ತನ್ನಿಬ್ಬರು ಭ್ರಾತೃಗಳು ಇದ್ದಂತೆಯೇ, ತಪಸ್ವಿಯಂತೆಯೇ, ಇದ್ದನು. 

ಶ್ರೀರಂಗಮಹಾಗುರುಗಳು ಭರತನ ಬಗ್ಗೆ ಹೇಳಿರುವುದು ಮಾರ್ಮಿಕವಾಗಿದೆ: "ತಾನೇ ರಾಜ್ಯಭಾರಮಾಡಿದರೂ ಅಲ್ಲಿ ತನ್ನದನ್ನೇನನ್ನೂ ಇಟ್ಟುಕೊಳ್ಳದೇ, ರಾಮನ ಆಶಯವರಿತು, ಅದರ ಸ್ಫೂರ್ತಿಗಾಗಿ ಆ ಪಾದುಕೆಯನ್ನಿಟ್ಟುಕೊಂಡು, ರಾಮನ ಅಪ್ಪಣೆಯಂತೆ ರಾಜ್ಯಪಾಲನ ಮಾಡಿದ ರೀತಿಯಾಗಿದೆ. ಪಾದುಕೆಗಳು ಮರವಾಗಿದ್ದರೂ ಅದರಲ್ಲಿರುವ ಅಮರವಾದ ಆತ್ಮಾರಾಮನ ಸ್ಫೂರ್ತಿಯಿಂದ ಅಮರತ್ವದಿಂದ ಅಮರರಾಜ್ಯವನ್ನಾಳಿದನು."

ಶತ್ರುಘ್ನನ ಬಗ್ಗೆ ವಾಲ್ಮೀಕಿರಾಮಾಯಣದಲ್ಲಿ ಹೆಚ್ಚೇನೂ ಬಂದಿಲ್ಲದಿದ್ದರೂ ರಾಮ-ಲಕ್ಷ್ಮಣರಂತೆ ಭರತ-ಶತ್ರುಘ್ನರೂ ಚಿಕ್ಕಂದಿನಿಂದಲೂ ಬಹಳ ಹತ್ತಿರವಾಗಿದ್ದರೆಂದು ತಿಳಿಯುತ್ತದೆ. ಶ್ರೀರಾಮನ ಪಟ್ಟಾಭಿಷೇಕ ತಪ್ಪಿದಾಗ ಅವನೂ ಭರತನಂತೆ ಬಹಳ ದುಃಖಿತನಾದನು. ತನ್ನ ತಂದೆಯ ಮೇಲೆ ಕೋಪವೂ ಬಂದಿತು. ಮಂಥರೆಯು ಕಣ್ಣಿಗೆ ಬಿದ್ದಾಗ, ಅವಳನ್ನು ದಂಡಿಸತೊಡಗಿದ, ಶತ್ರುಘ್ನ. ಒಬ್ಬ ಸ್ತ್ರೀಯನ್ನು ಕೊಲ್ಲಬಾರದೆಂದೂ, ಅವಳನ್ನು ಕೊಂದದ್ದೇ ಆದರೆ ಶ್ರೀರಾಮನು ಅವರಿಬ್ಬರನ್ನೂ ಕ್ಷಮಿಸನು ಎಂದೂ ಭರತನು ಅವನನ್ನು ತಡೆದನು. ಆಗ ಮಾತ್ರ ಶತ್ರುಘ್ನನು ತನ್ನ ರೋಷಕ್ಕೆ ಕಡಿವಾಣಹಾಕಿದನು. ರಾಮಚಂದ್ರನ ವಿಷಯದಲ್ಲಿ ಅಂತಹ ಗೌರವ-ಭಕ್ತಿ ಅವರಿಬ್ಬರಿಗೂ. 

ಸಣ್ಣಪುಟ್ಟ ವಿಷಯಗಳಿಗೂ ಕೌಟುಂಬಿಕ-ಕಲಹಗಳು ಈಗಂತೂ ಸರ್ವೇಸಾಮಾನ್ಯ. ಹಾಗಿರುವಾಗ, ತಂದೆಯ ಮಾತಿಗಾಗಿ ತಮ್ಮನಿಗೆ ರಾಜ್ಯ ಬಿಟ್ಟು ಕಾಡಿಗೆ ಹೊರಟವನೊಬ್ಬ; ಅಣ್ಣನಾಳಬೇಕಾದ ರಾಜ್ಯವನ್ನು ತಾನೊಲ್ಲೆ ಎಂದವನಿನ್ನೊಬ್ಬ; ಅಣ್ಣ ಕಾಡಿಗೆ ಹೊರಟರೆ ನಾನೂ ಹೊರಟೆ ಎಂದು ಮಗದೊಬ್ಬ; ಅಣ್ಣಂದಿರು ತಪಸ್ವಿಗಳಂತೆ ಜೀವನ ನಡೆಸುವಾಗ ತಾನೂ ಅಂತೆಯೇ ಇರುವೆನೆಂದಿಬ್ಬರು. ಅಧಿಕಾರಕ್ಕಾಗಲೀ, ರಾಜ್ಯಕ್ಕಾಗಲೀ ಹಾತೊರೆಯದೆ, ಧರ್ಮನಿಷ್ಠೆ, ಭ್ರಾತೃಪ್ರೇಮ, ತ್ಯಾಗ – ಇವೆಲ್ಲವನ್ನೂ ಮೆರೆದ ಈ ನಾಲ್ವರು ಯಾರಿಗೆ ಆದರ್ಶವಲ್ಲ? 


ಸೂಚನೆ : 21/03/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.



Thursday, March 19, 2026

ನವವರ್ಷಾಚರಣೆಯ ಕುರಿತು ನವಾವಲೋಕನ (Navavarascaraneya Kuritu Navavalokana)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)

ಹಲವು ಭಾರತೀಯ ಹಬ್ಬಗಳಿಗೆ ರಾಮಾಯಣದ ನಂಟುಂಟು. ದೀಪಾವಳಿಯು ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿದ ದಿನವಾದರೆ, ಯುಗಾದಿಯು ಶ್ರೀರಾಮನು ವನವಾಸದಿಂದ ಹಿಂದಿರುಗಿದ ದಿನ. ಶ್ರೀರಾಮನ ಪ್ರಜೆಗಳು ಅಂದು ರಾವಣಸಂಹಾರವನ್ನು ಸ್ತುತಿಸುತ್ತಾ, ಪ್ರಭುವಿನ ಹಿಂದಿರುಗುವಿಕೆಯನ್ನು ಉತ್ಸವವಾಗಿ ಆಚರಿಸಲು ಪ್ರಾರಂಭಿಸಿದ ದಿನ. ವಸಂತನವರಾತ್ರದ ಶುಭಾರಂಭ. ಅಲ್ಲದೆ, ಹಿಂದೆ ವೇದಾಪಹಾರವಾದಾಗ, ಭಗವಂತನು ಮತ್ಸ್ಯಾವತಾರ ಮಾಡಿ ವೇದಗಳನ್ನು ಕಾಪಾಡಿದ ದಿನವೇ ಇದು. ಮೇಲಾಗಿ ಈ ಜಗತ್ತಿನ ಸೃಷ್ಟಿಯೇ ಆದ ದಿನವಿಂದು.

ಬ್ರಹ್ಮಪುರಾಣವು ಹೇಳುವಂತೆ:
ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರಥಮೇಽಹನಿ |
ಶುಕ್ಲಪಕ್ಷೇ ಸಮಗ್ರಂ ತು ತಥಾ ಸೂರ್ಯೋದಯೇ ಸತಿ ||
ಪ್ರವರ್ತಯಾಮಾಸ ತಥಾ ಕಾಲಸ್ಯ ಗಣನಾಮಪಿ |
- ಎಂದರೆ, ಬ್ರಹ್ಮನು ಚೈತ್ರದ ಶುಕ್ಲಪಕ್ಷದ ಪ್ರಥಮದಿನದಂದು ಸೂರ್ಯೋದಯದ ಸಮಯದಲ್ಲಿ ಜಗತ್ತನ್ನು ಸೃಷ್ಟಿಸಿದನು ಹಾಗೂ ಕಾಲಗಣನೆಯನ್ನು ಪ್ರಾರಂಭಿಸಿದನು.

 

ಹೊಸತನದ ಹಬ್ಬ

ಹೊಸತನವೆಂದರೆ ಯಾರಿಗೆ ಸಂತೋಷವಾಗದು? ಪ್ರತಿದಿನವೂ ಹೊಸ ಪ್ರಾರಂಭವನ್ನಾಗಿ ನೋಡುವುದು ಬಹಳ ಶ್ಲಾಘನೀಯವೇ. Today is the first day of the rest of my life ಎಂಬೊಂದು ಆಂಗ್ಲೋಕ್ತಿಯಿದೆ. ಅದರರ್ಥ "ಇಂದು ಎಂಬುದು ನನ್ನ ಮಿಕ್ಕ ಜೀವನದ ಮೊದಲ ದಿನ". ಈ ಮನೋಭಾವ ಮೆಚ್ಚುವಂಥದ್ದಾದರೂ ಪ್ರಕೃತಿಯೇ ಒಂದು ನವನಾವೀನ್ಯವನ್ನು ತಂದುಕೊಡುತ್ತಿರುವಾಗ, ಅಂದಿನ ದಿನ ಮತ್ತೂ ಸುಭಗವೇ.

ಪ್ರಕೃತಿಯೇ ಸಹಜವಾಗಿ ಕೆಲವು ವಿಶೇಷ ಕಾಲಘಟ್ಟಗಳನ್ನು ತಂದೊದಗಿಸುತ್ತದೆ. ಅಂತಹ ರಸವತ್ತಾದ ಘಟ್ಟಗಳನ್ನು ಗುರುತಿಸಬೇಕು; ಅವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು; ಅದುವೇ ವಿವೇಕ. ಇಂತಹ ದಿನಗಳನ್ನು ಉತ್ಸವ/ಪರ್ವಗಳನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿಯ ಒಂದು ಹಿರಿಮೆ.

ವರ್ಷದ ಆರಂಭವೇ ಅಂತಹ ಒಂದು ಘಟ್ಟ – ಸಂವತ್ಸರದ ಪೀಠಿಕೆಯ ರೂಪದ ಮಹಾಪರ್ವ. ಚಾಂದ್ರಮಾನ ಯುಗಾದಿಯನ್ನು ಚೈತ್ರಶುದ್ಧಪ್ರತಿಪತ್ತಿನಂದು ಆಚರಿಸುತ್ತೇವೆ. ಕರ್ನಾಟಕದಲ್ಲಿ ಚಾಂದ್ರಮಾನದ ಆಚರಣೆಯೇ ಹೆಚ್ಚು. ಸೌರಮಾನಪದ್ಧತಿಯಲ್ಲಿ ಮೇಷಸಂಕ್ರಮಣ ದಿನದಂದು ಯುಗಾದಿಯ ಆಚರಣೆ.

ಈ ಹಬ್ಬವಾದರೂ ಯಾವುದರ ದ್ಯೋತಕ? – ಎಂಬುದನ್ನು ನೋಡಬೇಡವೇ?


ಯುಗಾದಿ ಹಾಗೂ ಸೃಷ್ಟಿ

ಸಂಸ್ಕೃತದಲ್ಲಿ "ಯುಗ"ವೆಂಬುದಕ್ಕೆ ಹಲವರ್ಥಗಳಿವೆ. ಪ್ರಕೃತ ಕಾಲವಿಶೇಷ ಎಂಬ ಅರ್ಥ. ಯುಗದ ಆದಿಯೇ ಈ ಯುಗಾದಿ. ಯಾವ ಯುಗ? ತಾತ್ತ್ವಿಕವಾಗಿ ನೋಡಿದರೆ ಇದು ಸತ್ಯಯುಗದ ಆದಿಯೇ. ಇದರ ಅನ್ವಯ ನಮಗೆ ಹೇಗೆ? ಸತ್ಯಾನುಗುಣವಾಗಿ ಧರ್ಮಮಯ ಜೀವನ ನಡೆಸಲು ಪುನರಾರಂಭಕ್ಕೆ ಯೋಗ್ಯವಾದ ದಿನ.

ಈ ದಿನದ ಕಾಲಸನ್ನಿವೇಶವಾದರೂ ಹೇಗಿದೆ? ಆಗ ತಾನೇ ಬಿಟ್ಟುಹೋಗಿರುವ ಛಳಿ, ಇನ್ನೂ ಪೂರ್ಣ ಬಂದಿರದ ಬಿಸಿಲು, ಇಂತಹ ಶೀತೋಷ್ಣಗಳ ಸಾಮ್ಯವಿರುವ ಕಾಲ. ಇದು ಮೈ-ಮನಗಳಿಗೆ ಹಿತ ಕೊಡುವಂತಹುದು. ಷಡೃತುಗಳಲ್ಲಿ ಮೊದಲ ಮೂರು ಔಷ್ಣ್ಯಪ್ರಧಾನ. ಹಾಗೆಂದರೆ ಬಿಸಿಲ ತಾಪ ಕ್ರಮೇಣ ಹೆಚ್ಚುವಂತಹವು. ಹಾಗಾಗಿ ಅವು ಅಗ್ನಿಯ/ಶಿವನ ಪ್ರತೀಕ. ನಂತರದ ಮೂರು ಋತುಗಳು ಶೈತ್ಯಪ್ರಧಾನ ಹಾಗೂ ಸೋಮ/ಶಕ್ತಿಯ ಪ್ರತೀಕ. ಈ ಶಿವ-ಶಕ್ತಿಯರ ಯೋಗ ಅಥವಾ ಅಗ್ನೀಷೋಮ(ಎಂದರೆ ಅಗ್ನಿ-ಸೋಮಗಳ ಜೋಡಿ)ದಿಂದಲೇ ಜಗತ್ಸೃಷ್ಟಿ. ಬಹಳ ಸುಂದರವಾಗಿ ಇದನ್ನು ವಿವರಿಸಿರುವ ಶ್ರೀಶ್ರೀರಂಗಪ್ರಿಯಸ್ವಾಮಿಗಳು ಹೀಗೆ ಹೇಳುತ್ತಾರೆ: "ಈ ಶಿವಶಕ್ತಿಗಳು ಹೊರಮುಖವಾಗಿ ಸೇರಿದರೆ ಸೃಷ್ಟಿ, ಒಳಮುಖವಾಗಿ ಸೇರಿದರೆ ಸಮಾಧಿ." ಸೃಷ್ಟಿಯ ದ್ಯೋತಕವೇ ಈ ಹಬ್ಬ.

 

ಹಬ್ಬದ ಆಚರಣೆಯ ಅಂಗಗಳು

ಯುಗಾದಿಯಂದು ಏನೇನು ಮಾಡಬೇಕು? ಆಚರಣೆ ಹೇಗಿರಬೇಕು? - ಈ ವಿಷಯವನ್ನು ಸಂಗ್ರಹವಾಗಿ ಈ ಶ್ಲೋಕವು ಹೇಳಿಬಿಡುತ್ತದೆ:

ಪ್ರಾಪ್ತೇ ನೂತನವತ್ಸರೇ ಪ್ರತಿಗೃಹಂ ಕುರ್ಯಾದ್ ಧ್ವಜಾರೋಪಣಂ /
ಸ್ನಾನಂ ಮಂಗಲಮಾಚರೇದ್ ದ್ವಿಜವರೈಃ ಸಾಕಂ ಸುಪೂಜ್ಯೋತ್ಸವೈಃ |
ದೇವಾನಾಂ ಗುರುಯೋಷಿತಾಂ ಚ ಶಿಶವೋಽಲಂಕಾರವಸ್ತ್ರಾದಿಭಿಃ /
ಸಂಪೂಜ್ಯಾ ಗಣಕೈಃ ಫಲಂ ಚ ಶೃಣುಯಾತ್ ತಸ್ಮಾಚ್ಚ ಲಾಭಪ್ರದಂ ||

ಹೊಸವರ್ಷವು ಬಂದಾಗ, ಮನೆಮನೆಗಳಲ್ಲೂ ಧ್ವಜಾರೋಪಣವನ್ನು ಮಾಡಬೇಕು. ಮಂಗಲಸ್ನಾನವನ್ನು ಮಾಡಿ ದ್ವಿಜರೊಂದಿಗೆ ದೇವರಿಗೆ ಪೂಜೆಯನ್ನು ಸಲ್ಲಿಸಬೇಕು. ಉತ್ಸವವನ್ನು ಆಚರಿಸಬೇಕು. ದೇವತೆಗಳು, ಗುರುಗಳು, ಸ್ತ್ರೀಯರು ಮತ್ತು ಮಕ್ಕಳನ್ನು ವಸ್ತ್ರಾಲಂಕಾರಗಳಿಂದ ಗೌರವಪೂರ್ವಕವಾಗಿ ಸತ್ಕರಿಸಬೇಕು. ನಂತರ ಹೊಸ ವರ್ಷದ ಫಲವನ್ನು ಕೇಳಬೇಕು. ಆ ಫಲವನ್ನು ಕೇಳುವುದು ಲಾಭಪ್ರದ.

 

ಅಭ್ಯಂಗಸ್ನಾನ

ಈ ಪರ್ವದ ಆಚರಣೆ ಪ್ರಾರಂಭವಾಗುವುದು ಅಭ್ಯಂಗಸ್ನಾನದಿಂದ. ಅಭ್ಯಂಗಕ್ಕೆ ಎಳ್ಳೆಣ್ಣೆ ಪ್ರಶಸ್ತ. ಆಯುರ್ವೇದೀಯವಾಗಿ ಅಭ್ಯಂಗವು ಆರೋಗ್ಯಕ್ಕೆ ಒಳ್ಳೆಯದೆಂಬುದು ಭೌತಿಕವಾದ ಕಾರಣ. ಅದರೊಂದಿಗೆ ಎಣ್ಣೆಸ್ನಾನದಿಂದ ಉಂಟಾಗುವ ಧಾತುಸಾಮ್ಯವು ಆಧ್ಯಾತ್ಮಿಕವಾದ ಔನ್ನತ್ಯವನ್ನು ತಲುಪಲು ಸಹಾಯಮಾಡುವುದು. ಹಾಗಾಗಿ ಅಭ್ಯಂಗವೆಂಬುದು ಭೋಗಕ್ಕೆ ಮಾತ್ರವಲ್ಲ, ಯೋಗಕ್ಕೂ ಸಹಕಾರಿ.

 

ಮನೆಯ ಸ್ವಚ್ಛತೆ ಮತ್ತು ಅಲಂಕಾರ

ಹಬ್ಬದ ಅಂಗವಾಗಿ ಮನೆಯನ್ನು ತಳಿರುತೋರಣಗಳಿಂದ ರಂಗೋಲೆಗಳಿಂದಲೂ ಅಲಂಕರಿಸುವುದು ಪದ್ಧತಿ. ಮನೆಯನ್ನೆಲ್ಲ ಗುಡಿಸಿ, ಸಾರಿಸಿ, ಸ್ವಚ್ಛ ಮಾಡಿ, ಮಾವಿನ ಎಲೆಗಳ ತೋರಣಗಳನ್ನು ಬಾಗಿಲುಗಳಿಗೆ ಕಟ್ಟುತ್ತೇವೆ. ಅದರೊಂದಿಗೇ ಬೇವಿನ ಎಲೆಗಳ ಗೊಂಚಲುಗಳನ್ನೂ ಕಟ್ಟಿ ಅಲಂಕರಿಸುತ್ತೇವೆ. ಈ ಅಲಂಕಾರದಿಂದ ಕಣ್ಣಿಗೆ ಮಾತ್ರವೇ ಹಬ್ಬವಲ್ಲ, ಶ್ರೀರಂಗಮಹಾಗುರುಗಳು ಹೇಳುವಂತೆ: "ಈ ಸಿಂಗಾರವು ಕೇವಲ ಕಣ್ಣುಗಳ ಚೆಲುವು ಚೆಂದಗಳಲ್ಲಿ ಪರ್ಯವಸಾನವಾಗಬಾರದು. ಆತ್ಮದ ಆಹ್ಲಾದವನ್ನು ಉಂಟುಮಾಡುವ ದಿವ್ಯಭಾವಕ್ಕೆ ಒಯ್ಯುವ ಪದಾರ್ಥಗಳ ಮತ್ತು ಕಲಾಕೃತಿಯ ಸೌಂದರ್ಯದಿಂದಲೂ ಶೋಭಿಸಬೇಕು."

ಪತಾಕೆಯನ್ನು, ಎಂದರೆ ಧ್ವಜವನ್ನು, ಎತ್ತರದಲ್ಲಿ ಕಟ್ಟುವುದನ್ನೂ ಹೇಳಲಾಗಿದೆ. ಇದು ಧರ್ಮಪತಾಕೆಯಾಗಿದ್ದು ಪರಮಾತ್ಮನ ಮಹಾಕಾರ್ಯಗಳನ್ನು ನೆನಪಿಸುವಂತಿರಬೇಕು. ಇಲ್ಲೊಂದು ಎಚ್ಚರ ಬೇಕು. ಹೊರಗೆ ಮಾತ್ರ ಧರ್ಮಧ್ವಜವನ್ನು ಕಟ್ಟುವುದಲ್ಲ, ಆ ಧರ್ಮವು ನಮ್ಮ ವ್ಯವಹಾರದಲ್ಲೂ ಕಾಣುವಂತಿರಬೇಕು.

 

ಸಂಕಲ್ಪ ಮತ್ತು ಪೂಜೆ

ಆ ದಿನ, "ಹರಿಃ ಓಂ ತತ್ಸತ್" ಎಂದು ಪ್ರಾರಂಭಿಸಿ, ಯುಗಾದಿಯ ವ್ರತವನ್ನು ಆಚರಿಸುವ ಸಂಕಲ್ಪವನ್ನು ಮಾಡಲಾಗುತ್ತದೆ. ದೇಶಕಾಲಗಳ ಪರಿಮಿತಿಗೆ ಒಳಪಡದವನು ಪರಮಾತ್ಮ. ಆದರೆ ಆತನನ್ನು ಸ್ಮರಿಸಿ, ಆತನ ಶರೀರವೇ ಆಗಿರುವ ದೇಶಕಾಲಗಳ ವಿಶೇಷವನ್ನು ಮನಸ್ಸಿಗೆ ತಂದುಕೊಳ್ಳುವುದಾಗುತ್ತದೆ. ಸಂಕಲ್ಪವನ್ನೂ, ಅದರ ಹಿಂದಿರುವ ನಿರ್ವಿಕಲ್ಪನನ್ನೂ ನೆನೆದು ಮಾಡಿದ ಕಾರ್ಯವೇ ಪ್ರಬಲವಾಗಿ ಫಲಕಾರಿಯಾಗುವುದು. ಆದ್ದರಿಂದ ಹೀಗೆ ಮಾಡಿಯೇ ದೇವರ ಪೂಜೆಯನ್ನು ಮಾಡಬೇಕು. ನಿತ್ಯಕರ್ಮವಾಗಿ ಮಾಡುವ ದೇವತಾರಾಧನೆಯೊಂದಿಗೆ ಬ್ರಹ್ಮ ಹಾಗೂ ಕಾಲಪುರುಷನ ಪೂಜೆಯನ್ನೂ ಮಾಡುವುದು ವಿಧಿಯಾಗಿದೆ. ಈ ಹಿಂದೆ ನೋಡಿದಂತೆ ಸೃಷ್ಟಿಕರ್ತನು ಜಗತ್ತನ್ನು ಸೃಷ್ಟಿಸಲು ಆರಂಭಿಸಿದ ದಿನವಾದ್ದರಿಂದ ಇಂದಿನ ದಿನ ಅವನ ಪೂಜೆಯು ಯುಕ್ತವೇ ಆಗಿದೆ. ಹಾಗೂ ಆ ಸೃಷ್ಟಿಕರ್ತನ ವಿಸ್ತಾರವೂ ರೂಪಾಂತರವೂ ಆದ ಕಾಲಪುರುಷನು ಪೂಜ್ಯನೇ.

 

ಪಂಚಾಂಗಶ್ರವಣ

ಯುಗಾದಿಯ ಪೂಜಾವಿಧಿಯ ಒಂದು ಮುಖ್ಯ ಭಾಗವೆಂದರೆ ಪಂಚಾಂಗಶ್ರವಣ. ಏನು ಪಂಚಾಂಗವೆಂದರೆ? ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣಗಳು. ಈ ಐದನ್ನೂ ತಿಳಿಯದೇ ಯಾವುದೇ ಕರ್ಮಾಚರಣೆಯನ್ನು ವಿಧಿಪೂರ್ವಕವಾಗಿ ಮಾಡುವುದು ಸಾಧ್ಯವಿಲ್ಲ. ಹೀಗಿರುವುದರಿಂದ, ಸಂವತ್ಸರದ ಆದಿಯಲ್ಲಿ ಆದಿಮಂಗಲವಾಗಿ ಅದರ ಪಠನ-ಶ್ರವಣಗಳು ಉಚಿತವೇ. ವಾಸ್ತವವಾಗಿ ಪಂಚಾಂಗಶ್ರವಣವನ್ನು ನಿತ್ಯವೂ ಮಾಡಬೇಕು. ಯುಗಾದಿಯಂದಂತೂ ಮಾಡಲೇಬೇಕಾದದ್ದು. ಪಂಚಾಂಗಪಠನದಲ್ಲಿ ಸಂವತ್ಸರದ ಹೆಸರು, ಗ್ರಹಸ್ಥಿತಿಗಳು, ರಾಜಫಲ, ಪ್ರಜಾಫಲ, ಧಾನ್ಯಫಲ,ವೃಷ್ಟಿಫಲ, ಆರ್ಥಿಕ ಸ್ಥಿತಿ, ರೋಗಭೀತಿ ಇವೇ ಮುಂತಾದುವನ್ನು ತಿಳಿಸುವುದಾಗುತ್ತದೆ.

 

ನೈವೇದ್ಯ

ದೇವರ ಪೂಜೆ ಮಾಡಿ, ನೈವೇದ್ಯವನ್ನು ಅರ್ಪಿಸುವುದು ತಿಳಿದೇ ಇದೆ. ಈ ದಿನದ ನೈವೇದ್ಯದಲ್ಲಿ ವಿಶೇಷವಿದೆ. ಬೇವಿನ ಚಿಗುರು ಹಾಗೂ ಹೂವನ್ನು ಬೆಲ್ಲದೊಂದಿಗೆ ಸೇರಿಸಿ ಕುಟ್ಟಿ ಅದನ್ನು ಅರ್ಪಿಸುವುದು ಪ್ರಸಿದ್ಧವಾಗಿದ್ದರೂ, ಕೇವಲ ಬೇವಿನ ಚಿಗುರು-ಹೂಗಳನ್ನು ಅರ್ಪಿಸುವುದೂ ಉಂಟು. ಏನಿದು, ಹೊಸವರ್ಷವನ್ನು ಪ್ರಾರಂಭಿಸಲು ಕಹಿಯಾದ ನೈವೇದ್ಯವೇ? ಷಡ್ರಸಗಳಲ್ಲಿ ಅದು ಒಂದಾದರೂ, ಸಾಮಾನ್ಯವಾಗಿ ನೈವೇದ್ಯಕ್ಕೆ ಮಧುರರಸವೇ ಸೂಕ್ತವಾದದ್ದು ಅಲ್ಲವೇ? ಅಧಿಭೂತ-ಅಧಿದೈವ-ಅಧ್ಯಾತ್ಮ ಈ ಮೂರೂ ಕ್ಷೇತ್ರಗಳಲ್ಲೂ ಈ ಅದ್ಭುತವಾದ ಸಸ್ಯದ ಪ್ರಯೋಜನಗಳುಂಟು. ಈ ನೈವೇದ್ಯವನ್ನು ಪ್ರಸಾದವಾಗಿ ಸ್ವೀಕರಿಸುವಾಗ ಈ ಪ್ರಾರ್ಥನೆಯೊಂದಿಗೆ ಸೇವಿಸಿದರೆ ಮತ್ತೂ ಫಲಕಾರಿ.

ಶತಾಯುರ್ವಜ್ರದೇಹಾಯ ಸರ್ವ-ಸಂಪತ್ಕರಾಯ ಚ |
ಸರ್ವಾರಿಷ್ಟ-ವಿನಾಶಾಯ ನಿಂಬ-ಕಂದಲ-ಭಕ್ಷಣಂ ||

ಇದರ ಅರ್ಥ: ನೂರ್ಕಾಲದ ಆಯುಸ್ಸಿಗೂ, ವಜ್ರದಂತೆ ಬಲಶಾಲಿಯಾದ ದೇಹಕ್ಕಾಗಿಯೂ, ಎಲ್ಲ ಸಂಪತ್ತಿನ ಪ್ರಾಪ್ತಿಗೂ ಹಾಗೂ ಎಲ್ಲ ಅನಿಷ್ಟಗಳ ನಾಶಕ್ಕಾಗಿಯೂ ಬೇವಿನ ಚಿಗುರನ್ನು (ನಿಂಬ-ಕಂದಲ) ಸೇವಿಸತಕ್ಕದ್ದು.

 

ಬೇವು-ಬೆಲ್ಲದ ಮಹತ್ತ್ವ

ಬೇವೆಂಬುದು ಕಹಿಯಾದರೂ ಆಯುರ್ವೇದದ ದೃಷ್ಟಿಯಿಂದ ಅದು ಮಹೌಷಧ. ಅದರೊಂದಿಗೆ ಬೆಲ್ಲವನ್ನು ಸೇರಿಸಿದಾಗ ಬೇವಿನಲ್ಲಿರುವ ವಾತದೋಷವು ಹೋಗುತ್ತದೆ. ಹಾಗೆಂದು ಚರಕಸಂಹಿತೆಯಲ್ಲಿ ಹೇಳಿದೆ. ಮಾತ್ರವಲ್ಲದೆ, ಬೆಲ್ಲದ ಸವಿ ಬೇವಿನ ಕಹಿಯನ್ನು ಸಹ್ಯವನ್ನಾಗಿಸುತ್ತದೆ. ಇದು ಆಧಿಭೌತಿಕವಾದ ವಿಷಯವಾಯಿತು. ಇನ್ನು ಆಧಿದೈವಿಕವಾಗಿ, ಈ ಬೇವು ಕಾಲಪುರುಷನ ಪ್ರಿಯವಾದ ವಸ್ತುವಾಗಿದೆ. ಹಾಗಾಗಿ ಅಂತರಂಗದಲ್ಲಿ ಆ ದೇವತೆಗೆ ಸಂಬಂಧಸಿದ ಕೇಂದ್ರಗಳು ತೆರೆದುಕೊಳ್ಳಲು ಅನುವಾಗುತ್ತದೆ. ಇಷ್ಟಲ್ಲದೆ ಅದು ಆಧ್ಯಾತ್ಮಿಕಪ್ರಗತಿಗೂ ಸಹಾಯಕವಾಗುತ್ತದೆ.

ಇದಕ್ಕಿಂತ ಹೆಚ್ಚು ಪ್ರಸಿದ್ಧವಾಗಿ, ಯುಗಾದಿಯ ಬೇವು-ಬೆಲ್ಲಗಳು ನಮಗೆ ಜೀವನವನ್ನು ಹೇಗೆ ಸಾಗಿಸಬೇಕೆಂಬುದರ ಬಗ್ಗೆ ಒಂದು ದೊಡ್ಡ ಪಾಠವನ್ನು ಕೊಡುತ್ತವೆ. ಗೀತಾಚಾರ್ಯನು ಹೇಳಿರುವ ಸ್ಥಿತಪ್ರಜ್ಞನ ಲಕ್ಷಣಗಳನ್ನು ಒಮ್ಮೆ ನೆನಪಿಗೆ ಅವು ತರುತ್ತವೆ: ಸುಖ-ದುಃಖಗಳೆರಡನ್ನೂ ಸಮವಾಗಿ ತೆಗೆದುಕೊಳ್ಳಬಲ್ಲ ಸಾಮರ್ಥ್ಯವನ್ನು ನಾವು ವರ್ಷವಿಡೀ ಇಟ್ಟುಕೊಳ್ಳತಕ್ಕದ್ದು - ಎಂಬ ಸ್ಮೃತಿಯನ್ನು ಯುಗಾದಿಯ ದಿನ ಸೇವಿಸುವ ಬೇವು-ಬೆಲ್ಲ ಕೊಡುತ್ತದೆ.

 

ಪ್ರಕೃತಿ ಮೆರೆಸುವ ಒಂದು ನಾವೀನ್ಯ

ಒಂದು ವರ್ಷದ ಕಾಲಾವಧಿಯಾದರೋ ಪ್ರಕೃತಿಯಲ್ಲಿ ಜೀವನದ ಒಂದು ಆವರ್ತನವನ್ನು ತೋರಿಸುವಂಥದ್ದು. ಶಿಶಿರ ಋತುವಿನಲ್ಲಿ ಪೂರ್ಣವಾಗಿ ಜರ್ಜರಿತವಾದ ಮರಗಳು ವಸಂತರ್ತುವಿನಲ್ಲಿ ಹೊಸ ಚಿಗುರುಗಳನ್ನು ತೋರಿ ಬಾಲ್ಯಕ್ಕೆ ಮತ್ತೆ ಮರುಳುವಂತಿರುತ್ತದೆ. ಪಾಶ್ಚಾತ್ತ್ಯರು ಆಚರಿಸುವ "New Year"ಗೂ ನಾವು ಆಚರಿಸುವ ಯುಗಾದಿಗೂ ಇರುವ ವ್ಯತ್ಯಾಸಗಳು ಹಲವೇ. ಮುಖ್ಯವಾದ ಒಂದೆಂದರೆ ಪ್ರಕೃತಿಯ ನಡೆಯೊಂದಿಗೆ ಹೊಂದಿಕೊಂಡಂತಹ ಆಚರಣೆ.

ಮರಗಳಲ್ಲಿ ನಳನಳಿಸುವ ಹೊಸ ಚಿಗುರುಗಳು, ಕೋಗಿಲೆಗಳ ಹಾಗೂ ಇತರ ಪಕ್ಷಿಗಳ ಗಾನ – ಇವೆಲ್ಲ ವಸಂತದಲ್ಲಿ ಪ್ರಕೃತಿಯು ಪುನರುಜ್ಜೀವಗೊಂಡಿರುವ ಗುರುತುಗಳು. ಕಾಳಿದಾಸನು ತನ್ನ ಕುಮಾರಸಂಭವ ಮಹಾಕಾವ್ಯದಲ್ಲಿ ವರ್ಣಿಸಿರುವ ವಸಂತದ ಆಗಮನ ನಮ್ಮ ಕಣ್ಣ ಮುಂದೆ ಅತಿಮೋಹಕವಾದ ಚಿತ್ರವನ್ನೇ ಬಿಡಿಸುತ್ತದೆ. ಕವಿಗಳ ವರ್ಣನೆಗೆ ಬೇಕಾದಷ್ಟು ಗ್ರಾಸವನ್ನು ಕೊಡುವ ವಸಂತ, ಕಣ್ಣಿಗೆ ಬಹಿರಂಗದಲ್ಲಿ ಮಾತ್ರವಷ್ಟೆ ಸೊಬಗುಣಿಸುವುದಿಲ್ಲ; ಆಂತರಂಗಿಕವಾಗಿಯೂ ಈ ಕಾಲಘಟ್ಟವು ವಿಶಿಷ್ಟವಾದದ್ದು.

ಪಂಚಾಂಗಶ್ರವಣದ ಅಂಗವಾಗಿ ಹೊಸವರ್ಷದಲ್ಲಿ ಮಳೆ ಎಷ್ಟಾಗುವ ಸಾಧ್ಯತೆಯಿದೆ, ಬಿಸಿಲು-ಛಳಿಗಳೆಷ್ಟು, ಧರ್ಮಕಾರ್ಯಗಳಿಗೆ ಅನುಕೂಲಕರವಾದ ಕಾಲಗಳಾವುವು - ಇತ್ಯಾದಿಗಳನ್ನು ತಿಳಿಸುವುದಾಗುತ್ತದೆ. ಹಿಂದಿನ ಕಾಲದಲ್ಲಿ, ಕೃಷಿಕಾರ್ಯಗಳ ವರ್ಷಾವಧಿ ಯೋಜನೆ ಹಾಕಿಕೊಳ್ಳಲು ಸಹಾಯವಾಗುತ್ತಿತ್ತು. ಈಗಲೂ ಕೃಷಿಚಟುವಟಿಗೆಗಳು ವಸಂತದಲ್ಲಿ ಪ್ರಾರಂಭವಾಗಿ ಬಿತ್ತನೆಗೆ ಭೂಮಿಯನ್ನು ಸಿದ್ಧಪಡಿಸುವುದಾಗುತ್ತದೆ.  

 

ಭಾರತದೆಲ್ಲೆಡೆಯೂ ಆಚರಣೆ

ಸೌರಮಾನ-ಚಾಂದ್ರಮಾನ ಎಂಬೆರಡು ಕಾಲಗಣನಾಪದ್ಧತಿಗಳು ನಮ್ಮಲ್ಲಿ ಚಾಲ್ತಿಯಲ್ಲಿದೆ.  "ಮಾನ"ವೆಂದರೆ "ಅಳತೆ". ಸೂರ್ಯನ ಚಲನೆಯನ್ನಾಧರಿಸಿ ಕಾಲವನ್ನು ಅಳೆದಾಗ ಅದು ಸೌರಮಾನ. ಅದೇ ರೀತಿ ಚಂದ್ರನ ಆಧಾರದ ಮೇಲೆ ಕಾಲದ ಅಳತೆಯಾದರೆ ಅದು ಚಾಂದ್ರಮಾನ. ಪಾಶ್ಚಾತ್ತ್ಯರು ಮಾಡುವಂತೆ ಯಾವನೋ ಒಬ್ಬ ಮನುಷ್ಯನ ಜೀವಿತವನ್ನೇ ಮಧ್ಯದಲ್ಲಿಟ್ಟು ಅದರ ಸುತ್ತ ಹೆಣೆದಿರುವ ವರ್ಷವಲ್ಲ ನಮ್ಮದು. ಪ್ರಕೃತಿಯಲ್ಲೇ ಹಾಸುಹೊಕ್ಕಾಗಿರುವ ಅಳತೆಯಿದು.

ಭಾರತದ ಉದ್ದಗಲಕ್ಕೂ ಈ ಹೊಸವರ್ಷವನ್ನು ಬೇರೆ ಬೇರೆ ಹೆಸರುಗಳಿಂದ ಆಚರಿಸುತ್ತಾರೆ. ತಮಿಳುನಾಡಿನಲ್ಲಿ ಚಿತ್ರವಿಷುವೆಂದಾದರೆ (ಸೌರಮಾನ ಸಂವತ್ಸರದ ಚೈತ್ರಮಾಸದ ವಿಷುವತ್ ಸಂಕ್ರಮಣದಂದು), ಕರ್ನಾಟಕ-ಆಂಧ್ರಗಳಲ್ಲಿ ಯುಗಾದಿ/ಉಗಾದಿಯೆಂದೂ,  ಉತ್ತರಭಾರತದಲ್ಲಿ ನವವರ್ಷಪ್ರತಿಪದಾ ಎಂದೂ, ವಸಂತನವರಾತ್ರಾರಂಭವೆಂದೂ ಆಚರಿಸಲ್ಪಡುತ್ತದೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಎಂದೂ, ಕಾಶ್ಮೀರದ ಹಿಂದೂಗಳು ನವ್ರೇಹ್ ಎಂದೂ ಈ ಹಬ್ಬವನ್ನು ಆಚರಿಸುತ್ತಾರೆ.

 

ಹಬ್ಬದ ಸಂಭ್ರಮ

ಈ ದಿನದ ಸಂಭ್ರಮವು ಮನೆ-ಮಂದಿಯಲ್ಲೆಲ್ಲ ಪ್ರತಿಫಲಿಸುವುದು ಹೊಸಬಟ್ಟೆ ಹಾಗೂ ಹಬ್ಬದ ಊಟದಲ್ಲಿ. ಮನೆಮಂದಿಯೆಲ್ಲ ನವವಸ್ತ್ರಧಾರಣೆ ಮಾಡಿ, ಅಲಂಕಾರ ಮಾಡಿಕೊಂಡು ನಲಿಯುವ ದಿನವಿದು. ಹೊಸ ಬಟ್ಟೆಗಳು ನಮ್ಮ ಸುತ್ತಲಿನ ಹೊಸತನವನ್ನು ಪ್ರತಿನಿಧಿಸುತ್ತದೆ ಹಾಗೂ ಅವು ಮಂಗಳದ ಪ್ರತೀಕ.

ಷಡ್ರಸಗಳನ್ನೂ ಕೂಡಿದ ಭಕ್ಷ್ಯ-ಭೋಜ್ಯ-ಲೇಹ್ಯ-ಚೋಷ್ಯ-ಪೇಯಗಳನ್ನು ಪ್ರಸಾದವಾಗಿ ಇಂದು ಸ್ವೀಕರಿಸುವುದಾಗುತ್ತದೆ. ಯುಗಾದಿಯಂದು ಕರ್ನಾಟಕದಲ್ಲಿ ವಿಶೇಷವಾಗಿ ಒಬ್ಬಟ್ಟು ಹಾಗೂ ಮಾವಿನಕಾಯನ್ನು ಬಳಸಿ ಚಿತ್ರಾನ್ನ - ಇವು ಹಬ್ಬದೂಟದ ಒಂದು ನಿಯತವಾದ ಅಂಗವಾಗಿದೆ. ಹೀಗಾಗಿ ಇಂದ್ರಿಯಗಳಿಗೂ, ಮನಸ್ಸಿಗೂ, ಆತ್ಮನಿಗೂ ಮುದ ನೀಡುವ ಹಬ್ಬವಿದಾಗಿದೆ.

 

ಇಂದು ಸಮಾಜದಲ್ಲಿ ಆಗುವ ಆಚರಣೆ

ಕೌಟುಂಬಿಕವಾಗಿ ವ್ರತಾನುಷ್ಠಾನ-ಸಂಭ್ರಮಸಡಗರಗಳಲ್ಲದೆ ಸಮಾಜದಲ್ಲಿಂದು ಯುಗಾದಿ ಹಬ್ಬದ ದಿನ ಕವಿಸಮ್ಮೇಳನ, ಪುರಸ್ಕಾರ ಸಮಾರಂಭಗಳು, ಸಂಗೀತಗೋಷ್ಠಿ - ಎಲ್ಲವನ್ನೂ ಹಮ್ಮಿಕೊಳ್ಳುವುದನ್ನು ನಾವು ನೋಡುತ್ತೇವೆ. ಜನರೆಲ್ಲರೂ ಒಗ್ಗೂಡಿ, ಶುಭದಿನದಂದು ಒಳ್ಳೆಯ ಆಶಂಸೆಗಳೊಂದಿಗೆ ಒಳ್ಳೆಯ ಕಾರ್ಯಗಳಲ್ಲಿ ತೊಡಗುವುದು ಬಹಳ ಶ್ಲಾಘ್ಯವೇ.

ಆದರೆ ಅದ್ದೂರಿಯಾಗಿ ಪೂಜೆ ಮಾಡಿ, ಹೊಸಬಟ್ಟೆಗಳನ್ನು ಧರಿಸಿ, ಉಡುಗೊರೆಗಳನ್ನು ಕೊಟ್ಟು, ಪಟ್ಟಾಗಿ ಹಬ್ಬದ ಊಟಕ್ಕೆ ನಾಲಗೆ ಚಪ್ಪರಿಸಿ, ಹೊರಗೆ ಆಗುವ ಕೆಲ ಸಂಭ್ರಮದ ಗೋಷ್ಠಿ-ಸಮ್ಮೇಳನಗಳಲ್ಲಿ ನಲಿಯುವುದು - ಯುಗಾದಿ ಹಬ್ಬದ ಆಚರಣೆ ಇಷ್ಟಕ್ಕೇ ಮುಗಿದುಬಿಡುತ್ತಿದೆಯೇ? ಈ ಪ್ರಶ್ನೆಯನ್ನು ಇಂದು ನಾವು ನಮಗೇ ಹಾಕಿಕೊಳ್ಳಬೇಕಿದೆ. ಬೇರೆಯವರ ವಿವೇಚನೆಗೆ ನಿಲುಕದ ವಿಷಯ ಇದಾಗಿದ್ದು, ನಾವು ಆತ್ಮಾವಲೋಕನ ಮಾಡಿಕೊಂಡೇ ತಿಳಿಯಬೇಕಿದೆ.

ಕುಟುಂಬದವರೊಂದಿಗೆ, ಬಂಧು-ಮಿತ್ರರೊಂದಿಗೆ ಸಂತೋಷವಾಗಿ ಹಬ್ಬವನ್ನು ಆಚರಿಸುವುದು ಸಹಜವೇ. ಸಮಾಜದಲ್ಲೂ ಒಗ್ಗಟ್ಟಿನಿಂದ ಈ ಸಂಭ್ರಮವನ್ನು ಹಂಚಿಕೊಳ್ಳುವುದೂ ಅಷ್ಟೇ ಅಗತ್ಯ. ಈ ಮೇಲೆ ಹೇಳಿದ ಎಲ್ಲವೂ ಮುಖ್ಯವೇ; ಯಾವುದನ್ನೂ ತಪ್ಪಿಸಬೇಕಿಲ್ಲ. ಆದರೆ ಆ ಆಚರಣೆಯು ಅಲ್ಲಿಗೇ ನಿಂತುಬಿಡಬಾರದು. ಅವೆಲ್ಲದರ ಹಿಂದಿರುವ ತತ್ತ್ವವನ್ನು ಅರಿತು ಮಾಡಿದಾಗಲೇ ಅದರ ಪೂರ್ಣಫಲ ಎಲ್ಲ ರೀತಿಗಳಲ್ಲೂ ದೊರೆಯುವಂತಾಗುವುದು - ಕೇವಲ ಭೌತಿಕಕ್ಷೇತ್ರದಲ್ಲಿ ಮಾತ್ರವಲ್ಲ.

 

ನಮ್ಮ ಆಚರಣೆ ಹೀಗಿರಲಿ

ಯುಗಾದಿಯೊಂದು ಉತ್ಸವ. ಕಾಳಿದಾಸನೇ ಹೇಳಿದಂತೆ, ಮನುಷ್ಯರು ಉತ್ಸವಪ್ರಿಯರು - ಉತ್ಸವಪ್ರಿಯಾಃ ಖಲು ಮನುಷ್ಯಾಃ. "ಹಲವು ಜನರು ಸೇರಿ ಸಂಭ್ರಮದಿಂದ ಆಚರಿಸುವಂತಹುದು ಉತ್ಸವ" ಎಂದಾಗಿದೆ ಆ ಪದದ ಪ್ರಚಲಿತವಾದ ಅರ್ಥ. ಆದರೆ ಆ ಪದದ ಒಳಹೊಕ್ಕು ನೋಡಿದರೆ ನಮಗೆ ಅದರ ಮರ್ಮ ಸಿಗುತ್ತದೆ – ಉತ್ ಎಂದರೆ ಮೇಲ್ಮುಖವಾದ, ಸವನ ಎಂದರೆ ಯಜ್ಞ. ಶ್ರೀರಂಗಮಹಾಗುರುಗಳ ವಿವರಣೆಯಂತೆ "ಜೀವನಕ್ಕೆ ಊರ್ಧ್ವಮುಖವಾದ ಗತಿಯನ್ನು ಕೊಡುವ ಒಂದು ಸವನವೇ ಉತ್ಸವ".

ಯುಗಾದಿಯು ರೂಢಿಯಂತೆ ಉತ್ಸವವಾಗುವುದರೊಂದಿಗೆ, ನಮ್ಮ ಜೀವನದ ಅತಿಮುಖ್ಯಧ್ಯೇಯದ ಎಡೆಗೆ ನಮ್ಮನ್ನು ಕರೆದೊಯ್ಯುವಂತೆ ಆಗಬೇಕು. ಈ ಬಾಳಾಟವು ಸಮಚಿತ್ತದಿಂದ ಆಗುವಂತೆ ಆ ಕಾಲಪುರುಷನನ್ನು ಪರಮಪುರುಷನನ್ನು ನೆನಪಿಸುವಂತಾಗಬೇಕು, ಅಲ್ಲವೇ?

ಎಲ್ಲರಿಗೂ ಯುಗಾದಿಯ ಶುಭಾಶಯಗಳು!!

ಸೂಚನೆ : 19/03/2026 ರಂದು ಈ ಲೇಖನವು ವಿಜಯ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, March 16, 2026

ಪ್ರಶ್ನೋತ್ತರ ರತ್ನಮಾಲಿಕೆ 57 (Prasnottara Ratnamalike 57)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಚಿಂತಾಮಣಿಯಂತೆ ದುರ್ಲಭವಾದುದು ಯಾವುದು ?

ಉ. ಚತುರ್ಭದ್ರ.

ಚಿಂತಾಮಣಿ ಎಂದರೆ ಚಿಂತಿಸಿದ್ದನ್ನು, ಯೋಚಿಸಿದ್ದನ್ನು, ಇಚ್ಛಿಸಿದ್ದನ್ನು ಕೊಡುವ ಒಂದು ರತ್ನವಿಶೇಷ. ಅದೊಂದು ಮಣಿರೂಪದಲ್ಲಿ ಇರುವಂತಹ ವಸ್ತು. ಅತ್ಯಂತ ಅಪರೂಪದ ವಸ್ತು. ಅದನ್ನು ಪಡೆದವನು ಆ ಮಣಿಯ ಸಹಾಯದಿಂದ ಅವನು ಏನನ್ನು ಬೇಕಾದರೂ ಪಡೆಯಬಹುದು. ಅಂತಹ ಒಂದು ಅದ್ಭುತವಾದಂತಹ ಮಣಿರತ್ನವೇ 'ಚಿಂತಾಮಣಿ' ಎಂಬುದಾಗಿ. ಈ ಪ್ರಶ್ನೆಯಲ್ಲಿ ಮಣಿಯ ವಿಷಯವನ್ನು ಪ್ರಸ್ತಾಪಿಸಿಲ್ಲ. ಆದರೆ ಚಿಂತಾಮಣಿಯಂತೆ ದುರ್ಲಭವಾದದ್ದು ಯಾವುದು? ಎಂಬ ಪ್ರಶ್ನೆ ಇಲ್ಲಿದೆ. ಅದಕ್ಕೆ 'ಚತುರ್ಭದ್ರ' ಎಂಬ ಉತ್ತರವನ್ನು ನೀಡಲಾಗಿದೆ. ಹಾಗಾದರೆ ಚತುರ್ಭದ್ರವು ಹೇಗೆ ಚಿಂತಾಮಣಿಯಾಗಿದೆ? ಎಂಬುದನ್ನು ಚಿಂತಿಸಬೇಕಾಗಿದೆ.

ಚತುರ್ಭದ್ರ ಎಂದರೆ ನಾಲ್ಕು ಕಡೆ ಗಟ್ಟಿಯಾಗಿರುವ ಸಂಗತಿ ಎಂದರ್ಥ. ಅಂದರೆ ಒಂದು ವಿಷಯ ಅಥವಾ ಒಂದು ಪದಾರ್ಥ ಅಚಲವಾಗಿ ನೆಲೆ ನಿಲ್ಲಬೇಕಾದರೆ ಅದಕ್ಕೆ ಸುತ್ತಲೂ ರಕ್ಷಣೆ ಅತ್ಯಂತ ಅವಶ್ಯಕ. ಪ್ರಧಾನವಾಗಿ ನಾಲ್ಕು ದಿಕ್ಕುಗಳನ್ನು ಇಟ್ಟುಕೊಂಡು, ಆ ನಾಲ್ಕು ದಿಕ್ಕುಗಳಲ್ಲೂ ಯಾವುದೇ ರೀತಿಯ ಬಾಧೆ ಇಲ್ಲದಿದ್ದರೆ ಅದಕ್ಕೆ 'ಚತುರ್ಭದ್ರ' ಎಂಬುದಾಗಿ ಹೇಳಬಹುದು. ಹಾಗಾದರೆ ಇಲ್ಲಿ ಆ ಚತುರ್ಭದ್ರ ಯಾವುದು? ಎಂದರೆ 'ಪುರುಷಾರ್ಥ'. ಪುರುಷಾರ್ಥಗಳನ್ನೇ 'ಚತುರ್ಭದ್ರ' ಎಂಬ ಇನ್ನೊಂದು ಪದದಿಂದ ಬಳಸಲಾಗಿದೆ. "ಪುರುಷಾರ್ಥವಿದೆ. ಅದಕ್ಕನುಗುಣವಾದ ನಡೆ ನೋಡಿ ನಡೆಸಿದರೆ ಚತುರ್ಭದ್ರಮಯವಾದ ಜೀವನವಾಗುತ್ತದೆ" ಎಂಬುದಾಗಿ ಶ್ರೀರಂಗ ಮಹಾಗುರುಗಳು ಈ ಪುರುಷಾರ್ಥ ಮತ್ತು ಚತುರ್ಭದ್ರ ಎಂಬ ವಿಷಯವನ್ನು ಹೀಗೆ ಸಮೀಕರಿಸಿದ್ದನ್ನು ನಾವು ಇಲ್ಲಿ ಗಮನಿಸಬೇಕು. ಆ ಪುರುಷಾರ್ಥಗಳು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬುದಾಗಿ.

ಒಬ್ಬ ವ್ಯಕ್ತಿ ಪರಿಪೂರ್ಣವಾಗಿ ಯಾವಾಗ ಆಗಬಲ್ಲ? ಎಂದರೆ ಯಾವಾಗ ಈ ನಾಲ್ಕು ಪುರುಷಾರ್ಥಗಳನ್ನು ಅವನು ಅನುಭವಿಸಬಲ್ಲನೋ ಆಗ. ಅವನು ಯಾವುದೇ ರೀತಿಯ ಅಪೇಕ್ಷಿತವಾದ ಅಥವಾ ಚಿಂತಿತವಾದ ವಿಷಯವನ್ನು ಕ್ಷಣಾರ್ಧದಲ್ಲಿ ಪಡೆಯಬಲ್ಲ ಎಂದು ತಾತ್ಪರ್ಯ. ಅಂದರೆ ಅವನಿಗೆ ಈ ಪ್ರಪಂಚದ ಪ್ರತಿಯೊಂದು ಪದಾರ್ಥದ ಅರಿವು ಆಗಿರುತ್ತದೆ ಮತ್ತು ಆ ಪದಾರ್ಥಗಳ ಸ್ವಾಮ್ಯವೂ ಅವನದ್ದಾಗಿರುತ್ತದೆ. ಪದಾರ್ಥಗಳನ್ನು ಹೇಗೆ ಬಳಸಿಕೊಳ್ಳಬೇಕು? ಹೇಗೆ ಬಳಸಿಕೊಂಡರೆ ಆ ಪದಾರ್ಥವು ಮತ್ತು ಆ ಪದಾರ್ಥದಿಂದ ವ್ಯಕ್ತಿಗೂ ಒಂದು ಸಾರ್ಥಕತೆ ಎಂಬುದು ಉಂಟಾಗುತ್ತದೆ? ಎಂಬುದನ್ನು ಆತ ಅರಿಯಬಲ್ಲವನಾಗಿರುತ್ತಾನೆ. ಹಾಗಾಗಿ ಅವನಿಗೆ ಈ ನಾಲ್ಕು ಪುರುಷಾರ್ಥಗಳು ಚಿಂತಾಮಣಿಯಂತೆ ಕೆಲಸ ಮಾಡುತ್ತವೆ ಎಂಬುದು ಇದರ ತಾತ್ಪರ್ಯ. ಹಾಗಾದರೆ ಈ ನಾಲ್ಕು ಪುರುಷಾರ್ಥಗಳನ್ನು ಪಡೆಯಬೇಕಾದರೆ ಅವನಿಗೆ ಬೇಕಾದ ಮೂಲಭೂತ ಅವಶ್ಯಕತೆ ಏನು? ಎಂಬುದನ್ನು ವಿವೇಕ ಚೂಡಾಮಣಿ ಎಂಬ ಗ್ರಂಥದಲ್ಲಿ ಹೀಗೆ ಹೇಳಲಾಗಿದೆ - "ದುರ್ಲಭಂ ತ್ರಯಮೇವೈತತ್ ದೈವಾನುಗ್ರಹಹೇತುಕಂ। ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ॥" ಎಂಬುದಾಗಿ. ಅಂದರೆ ಒಬ್ಬ ಮಾನವನಾಗಿ ಹುಟ್ಟಿ, ಅವನಿಗೆ ಮೋಕ್ಷ ಪಡೆಯಬೇಕೆಂಬ ಉತ್ಕಟ ಇಚ್ಛೆಯು ಉಂಟಾಗಿ, ಅದನ್ನು ಪೂರೈಸಲು ಒಬ್ಬ ಮಹಾಪುರುಷನ ಸಂಸರ್ಗ ಉಂಟಾದರೆ ಅವನಿಗೆ ಇನ್ನು ಉಳಿದ ಎಲ್ಲವೂ ಸುಲಭ. ಏಕೆಂದರೆ ಈ ಮೂರು ಸಿಗುವುದು ಅತ್ಯಂತ ದುರ್ಲಭ. ಈ ಮೂರನ್ನು ಪಡೆದವನು ಪುರುಷಾರ್ಥ ಸಂಪತ್ತಿಯನ್ನು ಸುಲಭವಾಗಿ ತನ್ನದಾಗಿಸಿಕೊಳ್ಳುತ್ತಾನೆ. ಅಂದರೆ ಆತ ಚತುರ್ಭದ್ರಮಯವಾದ ಬಾಳಾಟವನ್ನು ಮಾಡಿದಂತೆ ಆಗುತ್ತದೆ ಎಂಬುದು ಇದರ ತಾತ್ಪರ್ಯವಾಗಿದೆ. ಇದೇ ಅವನಿಗೆ ಚಿಂತಾಮಣಿಯಂತೆ ಆಗುತ್ತದೆ.  

ಸೂಚನೆ : 15
/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 179 ವಿಪ್ರವೇಷದಲ್ಲಿ ಕೃಷ್ಣಭೀಮಾರ್ಜುನರ ಭೇಟಿ – ಜರಾಸಂಧನೊಂದಿಗೆ ( Vyaasa Vikshita 179)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)


ಕೃಷ್ಣಾರ್ಜುನ-ಭೀಮಸೇನರು ಜರಾಸಂಧ-ಸಂಹಾರಕ್ಕಾಗಿ ಆಗಮಿಸುತ್ತಿರುವಲ್ಲಿ ಕೆಲವರು ವೇದ-ಪಾರಂಗತ ಬ್ರಾಹ್ಮಣರು ಕೆಲವು ಅಪಶಕುನಗಳನ್ನು ಕಂಡರು.

ಅವನ್ನವರು ಜರಾಸಂಧನ ಗಮನಕ್ಕೆ ತಂದರು. ಮತ್ತು ಅವಕ್ಕೆ ಪ್ರತಿಯಾಗಿ ಆತನ ಪುರೋಹಿತರು ಆತನನ್ನು ಆನೆಯ ಮೇಲೆ ಕೂರಿಸಿದರು; ಪರ್ಯಗ್ನಿ ಮಾಡಿದರು - ಎಂದರೆ ನಾಲ್ಕೂ ಎಡೆಗಳಲ್ಲಿ ಅಗ್ನಿಜ್ವಾಲನ ಮಾಡಿದರು.

ಸಂಭಾವ್ಯವಾದ ಅನಿಷ್ಟಗಳ ಪರಿಹಾರಕ್ಕಾಗಿ ಜರಾಸಂಧನೂ ಕ್ರಮಗಳನ್ನು ಕೈಗೊಂಡನು: ದೀಕ್ಷಿತನಾಗಿ ವ್ರತಿಯಾದನು, ಉಪವಾಸ ಮಾಡಿದನು.

ಇತ್ತ ಸ್ನಾತಕವ್ರತಸ್ಥರಾಗಿ ಬ್ರಾಹ್ಮಣವೇಷದಲ್ಲಿದ್ದ ಈ ಮೂವರು ಆಯುಧಗಳನ್ನು ತೆಗೆದಿಟ್ಟರು. ಅವರಿಗೋ, ಎಷ್ಟಾದರೂ ತಮ್ಮ ಬಾಹುಗಳೇ ಆಯುಧಗಳು! ಜರಾಸಂಧನೊಡನೆ ಯುದ್ಧಾಪೇಕ್ಷಿಗಳಾಗಿ ಅವರು ನಗರಪ್ರವೇಶವನ್ನು ಮಾಡಿದರು.

ಆ ನರೋತ್ತಮರಾದ ಕೃಷ್ಣ-ಭೀಮ-ಧನಂಜಯರು ಅಲ್ಲಿಯ ರಾಜಮಾರ್ಗಗಳಲ್ಲಿ ಕಂಡದ್ದೇನು?: ಭಕ್ಷ್ಯಾಪಣ-ಮಾಲ್ಯಾಪಣಗಳನ್ನು. ಎಂದರೆ, ಬೇಕಾದ್ದನ್ನು ತಿನ್ನಲು ಅಂಗಡಿಗಳು, ಹಾಗೂ ಹೂಮಾಲೆಗಳ ಅಂಗಡಿಗಳು – ಇವು ಅಲ್ಲಿದ್ದವು. ಅವುಗಳ ಸಿರಿಯನ್ನೂ, ಸರ್ವಕಾಮಗಳನ್ನೂ ಪೂರೈಸುವ ಅಲ್ಲಿಯ ಸಮೃದ್ಧಿಯನ್ನೂ ಅವರು ಕಂಡುಕೊಂಡರು.

ಮಹಾಬಲಶಾಲಿಗಳಾದ ಅವರು ಹೂಕಟ್ಟುವವನೊಬ್ಬನಿಂದ ಮಾಲೆಗಳನ್ನು ಬಲಾತ್ಕಾರವಾಗಿ ಸ್ವೀಕರಿಸಿದರು. ಮಾಲಾಧಾರಿಗಳಾದರು. ಅವರ ವಸ್ತ್ರಗಳೂ ನಾನಾವರ್ಣಗಳಿಂದ ಕೂಡಿದ್ದವು. ಹೊಳೆಯುವ ಕುಂಡಲಗಳನ್ನವರು ಧರಿಸಿದ್ದರು. ಜರಾಸಂಧನ ಅರಮನೆಯನ್ನು ಮುಟ್ಟಿದರು.

ಅವರು ನಡೆದು ಬರುತ್ತಿದ್ದ ರೀತಿಯು ಹೇಗಿತ್ತೆಂದರೆ, ಹಸುಗಳು ಎಲ್ಲೆಲ್ಲಿವೆಯೆಂದು ಗೋಶಾಲೆಯನ್ನು ನೋಡಿಕೊಂಡು ನಡೆಯುತ್ತಿರುವ ಹಿಮಾಲಯದ ಸಿಂಹಗಳಂತೆ. ಯುದ್ಧಗಳಲ್ಲಿ ಶೋಭಿಸುವ ಅವರ ತೋಳ್ಗಳು ಈಗ ಹೇಗಿದ್ದವು? ಚಂದನವನ್ನೂ ಅಗುರುವನ್ನೂ ಲೇಪಿಸಿದ್ದ ಅವು ಶಾಲಾ-ಸ್ತಂಭಗಳ ಹಾಗೆ, ಎಂದರೆ ಮಹಾಗೃಹದ ಕಂಭಗಳಂತೆ, ಇದ್ದುವು. ಒಟ್ಟಿನಲ್ಲಿ, ವಿಶಾಲವಕ್ಷಃಸ್ಥಳವುಳ್ಳವರೂ ಆನೆಗಳಂತಿರುವವರೂ ಆದ ಅವರನ್ನು ಕಂಡು ಮಾಗಧರಿಗೆ, ಎಂದರೆ ಮಗಧ-ದೇಶದ ಪ್ರಜೆಗಳಿಗೆ, ವಿಸ್ಮಯವೇ ಉಂಟಾಯಿತು.

ಜನಗಳು ಕಿಕ್ಕಿರಿದಿದ್ದ ಅಲ್ಲಿಯ ಮೂರು ಕಕ್ಷಗಳನ್ನು ದಾಟಿದರು, ಆ ಮೂವರು ಮಹಾಪುರುಷರು. ನಿರ್ಭಯರಾಗಿದ್ದ ಅವರು ಅಭಿಮಾನಿಗಳಾಗಿಯೇ ಜರಾಸಂಧನನ್ನು ಸಮೀಪಿಸಿದರು. ಜರಾಸಂಧನೂ ಅವರನ್ನು ಆದರದೊಂದಿಗೇ ಸತ್ಕರಿಸಿದನು. ಪಾದ್ಯ-ಮಧುಪರ್ಕಗಳಿಗೆ, ಗೋದಾನಕ್ಕೆ, ಅರ್ಹರಾದವರು ಅವರು. ಪ್ರತ್ಯುತ್ಥಾನ ಮಾಡಿ, ಎಂದರೆ ತಾನೇ ಎದ್ದು ಬಂದವನಾಗಿ, ಅವರಿಗೆ ವಿಧ್ಯನುಸಾರವಾದ ಆತಿಥ್ಯವನ್ನು ಸಲ್ಲಿಸಿದನು, ಜರಾಸಂಧ.

"ತಮಗೆ ಸ್ವಾಗತ" ಎಂದನು. ಆದರೆ ಭೀಮಾರ್ಜುನರು ಮೌನದಿಂದಿದ್ದರು. ಅವರಲ್ಲಿ ಕೃಷ್ಣನೇ ಎಷ್ಟಾದರೂ ಮಹಾಬುದ್ಧಿಶಾಲಿಯಲ್ಲವೇ? ಆತನೇ ಮಾತನಾಡಿದನು. "ರಾಜಶ್ರೇಷ್ಠನೇ, ಇವರಿಬ್ಬರೂ ನಿಯಮದಲ್ಲಿರುವವರು, ಎಂದರೆ ಮೌನವ್ರತದಲ್ಲಿರತಕ್ಕವರು. ಮಧ್ಯರಾತ್ರಿಯು ಕಳೆದ ನಂತರವೇ ನಿನ್ನೊಡನೆ ಇವರು ಮಾತನಾಡತಕ್ಕವರು" – ಎಂದನು.

ತದನುಸಾರ ಯಜ್ಞಗೃಹದಲ್ಲುಳಿದುಕೊಳ್ಳಲು ಅವರಿಗೊಂದು ವ್ಯವಸ್ಥೆ ಮಾಡಿ ತನ್ನ ಅಂತಃಪುರಕ್ಕೆ ತೆರಳಿದನು. ಅರ್ಧರಾತ್ರವು ಕಳೆಯಲು, ಆ ದ್ವಿಜರಿದ್ದೆಡೆಗೆ ತೆರಳಿದನು.

ಆ ರಾಜನ ಈ ವ್ರತವು ಜಗದ್-ವಿಶ್ರುತವಾಗಿದ್ದಿತು; ಏನೆಂದರೆ, ಸ್ನಾತಕಬ್ರಾಹ್ಮಣರು ಬಂದರೆಂದರೆ - ಅದು ಅರ್ಧರಾತ್ರವೇ ಆಗಿದ್ದರೂ ಸಹ -ಅವರನ್ನು ತಾನೇ ಎದುರ್ಗೊಂಡು  ಸ್ವಾಗತಿಸುತ್ತಿದ್ದನು.

ಬಂದಿದ್ದವರ ವೇಷವೇ ಅಪೂರ್ವವಾಗಿದ್ದರಿಂದ, ಜರಾಸಂಧನು ವಿಸ್ಮಯದಿಂದಲೇ ಅವರ ಬಳಿ ಸಾರಿದನು. ಆತನನ್ನು ಕಾಣುತ್ತಲೇ, "ಸ್ವಸ್ತ್ಯಸ್ತು", "ನಿನಗೆ ಕಲ್ಯಾಣವಾಗಲಿ", ಎಂದು ಅವರೆಂದರು; ಪರಸ್ಪರ ಮುಖ ನೋಡಿಕೊಂಡರು. ಬ್ರಾ ಹ್ಮಣವೇಷದಲ್ಲಿದ್ದ ಆ ಪಾಂಡವ-ಯಾದವರಿಗೆ "ಕುಳಿತುಕೊಳ್ಳಿ" ಎಂದು ಹೇಳಿದನು. 

ಸೂಚನೆ : 15/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.