Monday, December 29, 2025

ವ್ಯಾಸ ವೀಕ್ಷಿತ 168 ಐವರು ಸಮ್ರಾಟರ ಸಾಧನೆ – ಈಗ ಜರಾಸಂಧನ ಬಾಧನೆ ( Vyaasa Vikshita 168)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ರಾಜಸೂಯಯಾಗವನ್ನು ಕುರಿತಾಗಿ ಶ್ರೀಕೃಷ್ಣನಾಡಿದ ಮಾತಿಗೆ ಪ್ರತ್ಯುತ್ತರವಾಗಿ ಯುಧಿಷ್ಠಿರನು ತನ್ನ ಅಧೈರ್ಯವನ್ನು ತೋಡಿಕೊಂಡನಷ್ಟೆ. ಆಗ ಭೀಮನು ತನ್ನ ಪ್ರತಿವಾದವನ್ನು ಮಂಡಿಸಿ, ತನ್ನ ಮಾತನ್ನು ಹೀಗೆ ಮುಗಿಸಿದನು:

"ಕೃಷ್ಣ-ಅರ್ಜುನ-ನಾನು – ಈ ಮೂವರಲ್ಲಿ ನಯ-ಬಲ-ವಿಜಯಶಾಲಿತೆಗಳಿವೆ.  ನಾವು ಮೂರು ಜನ, ಮೂರು ಅಗ್ನಿಗಳ ಹಾಗೆ (ದಕ್ಷಿಣಾಗ್ನಿ- ಗಾರ್ಹಪತ್ಯ- ಆಹವನೀಯ - ಎಂಬಿವು ಮೂರು ಅಗ್ನಿಗಳು; ಆ ಮೂರರಿಂದಲೇ ಯಾಗವು ಸಂಪೂರ್ಣವಾಗುವುದು). ಹಾಗಿದ್ದು ಈ ಮಾಗಧ-ವಧವನ್ನು, ಎಂದರೆ ಜರಾಸಂಧನ ವಧವನ್ನು, ಸಾಧಿಸಿಬಿಡಬಹುದು".

ಆಗ ಕೃಷ್ಣನು ಹೇಳಿದನು:

"ಬಾಲಕನೆನಿಸುವವನು, ಎಂದರೆ ತಿಳಿವಳಿಕೆ ಸಾಲದವನು, ದೊಡ್ಡ ದೊಡ್ಡ ಕೆಲಸಗಳನ್ನೇನೋ ಆರಂಭಿಸಿಬಿಡುವನು; ಆದರೆ ಮುಂದಕ್ಕೆ ಅದರಿಂದಾಗುವ ಪರಿಣಾಮವೇನು? - ಎಂಬುದರತ್ತ ದೃಷ್ಟಿಯನ್ನು ಹರಿಸುವುದಿಲ್ಲ. ಆದುದರಿಂದ ಸ್ವಾರ್ಥ-ಸಾಧನ-ಮಾತ್ರದತ್ತ ಮಾತ್ರ ಮನಸ್ಸು ಕೊಡುವ ಅವಿವೇಕಿ-ಶತ್ರುವನ್ನು ವೀರರು ಸಹಿಸಲಾರರು.

ನಾನು ಕೊಡುವ ನಿದರ್ಶನಗಳನ್ನು ಗಮನಿಸಿ. ಯುವನಾಶ್ವನ ಮಗ ಯೌವನಾಶ್ವಿ ಎಂಬುವನು; ಆತನು ತಾನು ಜಯಿಸಬಲ್ಲ ರಾಜರುಗಳನ್ನು ಗೆದ್ದೇ ರಾಜಸೂಯ-ಯಾಗವನ್ನು ಮಾಡಿದುದು. ಹಾಗೆಯೇ ಭಗೀರಥನೂ; ಪ್ರಜಾ-ಪಾಲನವನ್ನು ಚೆನ್ನಾಗಿ ನೆರವೇರಿಸಿಯೇ ಆತನು ಸಮ್ರಾಟ್ ಆದುದು. ರಾಜಾ ಕಾರ್ತವೀರ್ಯನಾದರೂ ತನ್ನ ತಪೋವೀರ್ಯದಿಂದಲೇ ಸಮ್ರಾಟನಾದದ್ದು. ಭರತನೂ ಸಹ ಸಮ್ರಾಟ್ ಎನಿಸಿಕೊಂಡದ್ದು ತನ್ನ ಬಲದಿಂದಲೇ. ಇದೇ ರೀತಿ ಮರುತ್ತನೆಂಬ ರಾಜನೂ ತನ್ನ ಸಮೃದ್ಧಿಯಿಂದಲೇ ಸಮ್ರಾಟ್ ಪದವಿಯನ್ನು ಪಡೆದದ್ದು.

ಹೀಗೆ ಐದು ಮಂದಿ ಸಮ್ರಾಟರ ಬಗ್ಗೆ ಕೇಳಿ ಬಲ್ಲೆವು ನಾವು. ಇವರುಗಳೆಲ್ಲ ಒಂದೊಂದು ಗುಣಾತಿಶಯದಿಂದ ಸಮ್ರಾಟ್-ಪದವಿಯನ್ನು ಪಡೆದರು.

ಆದರೆ ಯುಧಿಷ್ಠಿರಾ, ನಿನ್ನಲ್ಲಿ ಈ ಎಲ್ಲ ಗುಣಗಳೂ ಇವೆ! ಶತ್ರುನಿಗ್ರಹ-ಸಾಮರ್ಥ್ಯ, ಪ್ರಜಾ-ಪಾಲನ, ತಪಃಶಕ್ತಿ, ವಿತ್ತ-ಸಮೃದ್ಧಿ, ಹಾಗೂ ಉತ್ತಮವಾದ ನೀತಿ - ಎಂಬಿವೈದು ಗುಣಗಳೂ ನಿನ್ನಲ್ಲಿವೆ, ಯುಧಿಷ್ಠಿರಾ!

ನಮಗೀಗ ಬಾಧಕನಾಗಿರುವುದೆಂದರೆ ಬೃಹದ್ರಥ-ಪುತ್ರನಾದ ಜರಾಸಂಧನಿರುವನಲ್ಲಾ, ಆತನೇ. ಅದನ್ನರಿತುಕೋ, ಭರತಶ್ರೇಷ್ಠನೇ. ನೂರು ರಾಜರ ಸಮೂಹವೂ ಆತನನ್ನು ಬಲ-ಪರಾಕ್ರಮಗಳಲ್ಲಿ ಅನುಸರಿಸಲಾಗದು. ಎಂದೇ ಆತನು ಬಲ-ಪ್ರಯೋಗದಿಂದಲೇ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿರುವುದು.

ರತ್ನ-ಸಂಪನ್ನರಾದ ರಾಜರುಗಳೆಲ್ಲ ಜರಾಸಂಧನ ಉಪಾಸನೆಯನ್ನು ಮಾಡುತ್ತಾರೆ, ಎಂದರೆ ಕಾಣಿಕೆಗಳನ್ನು ಆಗಾಗ್ಗೆ ಸಲ್ಲಿಸಿ ಆದರಿಸುತ್ತಿರುತ್ತಾರೆ. ಆದರೆ ಆತನು ಮಾತ್ರ ಅವುಗಳಿಂದ ಸಂತೋಷಪಡತಕ್ಕವನಲ್ಲ. ಏಕೆಂದರೆ ಬಾಲ್ಯದಿಂದಲೂ ಸಹ ಆತನಲ್ಲಿ ನಯವೆಂಬುದಿಲ್ಲವಾಗಿದೆ.

ಎಂದೇ, ತಾನು ಪ್ರಧಾನ-ಪುರುಷನೆಂದಾಗಿಬಿಟ್ಟು, ಮೂರ್ಧಾಭಿಷಿಕ್ತ-ರಾಜರನ್ನು ಸಹ ಆತನು ಬಂದಿಗಳನ್ನಾಗಿ ಮಾಡಿಟ್ಟಿದ್ದಾನೆ: ಹತ್ತಿರ ಹತ್ತಿರ ನೂರರಷ್ಟು ಅರಸರನ್ನು ಈ ಜರಾಸಂಧನು ತನ್ನ ವಶದಲ್ಲಿ ಇಟ್ಟುಕೊಂಡಿದ್ದಾನೆ. ಹಾಗಿರಲು, ಅತಿದುರ್ಬಲನಾದ ಯಾವುದೇ ರಾಜನು ಆತನ ಬಳಿ ಸಾರಲಾದರೂ, ಎಂದರೆ ರಣದಲ್ಲಿ ಎದುರಿಸಲಾದರೂ, ಹೇಗೆ ತಾನೆ ಸಮರ್ಥನಾದಾನು? ಪಶುಗಳನ್ನು ಪ್ರೋಕ್ಷಿಸಿ ಒರೆಸಿ ರುದ್ರ-ಗೃಹದಲ್ಲಿ ಇಟ್ಟಿರುವರಲ್ಲವೇ – ಬಲಿಗೊಡಲೆಂದು? ಹಾಗಿದೆ ಆ ರಾಜರುಗಳ ಪರಿಸ್ಥಿತಿ! ಜೀವನದಲ್ಲಿ ಇನ್ನದಾವ ಪ್ರೀತಿ-ಸಂತೋಷಗಳನ್ನು ಅವರು ಕಂಡಾರು, ಭರತಶ್ರೇಷ್ಠನೇ?

ಕ್ಷತ್ರಿಯನಾದವನಿಗೆ ಶಸ್ತ್ರದಿಂದ ಮರಣವೆಂಬುದೇ ಪ್ರಶಸ್ತವೆನಿಸುವುದು; ಅದರಿಂದಲೇ ಆತನು ಸತ್ಕಾರವೆಂಬುದನ್ನು ಹೊಂದುವುದು! ಆ ಕಾರಣಕ್ಕಾಗಿ ಯುದ್ಧದಲ್ಲಿ ಜರಾಸಂಧನನ್ನು ನಾವು ಸಂಹರಿಸೋಣ. ಈಗ ಜರಾಸಂಧನು ಮಾಡಲಿರುವುದನ್ನು ಹೇಳುತ್ತೇನೆ" ಎಂದನು.

ಸೂಚನೆ : 28/12/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  


ಪ್ರಶ್ನೋತ್ತರ ರತ್ನಮಾಲಿಕೆ 46 (Prasnottara Ratnamalike 46)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೪೬. ಸಕಲಪ್ರಾಣಿ ಸಂಕುಲ ಯಾರ ವಶದಲ್ಲಿರುತ್ತದೆ

ಸತ್ಯ, ಪ್ರಿಯಭಾಷಿ ಮತ್ತು ವಿನೀತನಾದ ವ್ಯಕ್ತಿಯ ವಶದಲ್ಲಿ.

ಎಲ್ಲಾ ಪ್ರಾಣಿಗಳು ಯಾರ ವಶದಲ್ಲಿ ಇರುತ್ತವೆ? ಎಂಬ ಪ್ರಶ್ನೆಯ ಆಶಯ ಹೀಗಿದೆ ಎಂಬುದಾಗಿ ಮೊದಲು ಭಾವಿಸಿಕೊಳ್ಳಬೇಕು. ವಶದಲ್ಲಿ ಇಟ್ಟುಕೊಳ್ಳುವುದು ಎರಡು ಬಗೆಯಲ್ಲಿ. ಬಲಾತ್ಕಾರವಾಗಿ ವಶದಲ್ಲಿ ಇಟ್ಟುಕೊಳ್ಳುವಂಥದ್ದು ಒಂದು ವಿಧಾನವಾದರೆ, ಸಾತ್ವಿಕತೆಯಿಂದ ವಶಪಡಿಸಿಕೊಳ್ಳುವುದು ಇನ್ನೊಂದು. ಸಾತ್ವಿಕತೆಯ ಸಾಧನೆಯಿಂದ ಸಹಜವಾಗಿ ಎಲ್ಲವೂ ಅವನ ವಶದಲ್ಲಿ ಬರುತ್ತವೆ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ. ಅಂದರೆ ವಶಪಡಿಸಿಕೊಳ್ಳುವುದಕೋಸ್ಕರ ಯಾವುದೇ ಪ್ರಯತ್ನವು ಇಲ್ಲ. ಯಾವುದೋ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎಂದು ಮಾಡುವ ಸಾಧನೆನದಿಂದ ಎಲ್ಲವು ತಾನಾಗಿಯೇ ವಶಕ್ಕೆ ಬರುತ್ತವೆ ಎಂಬುದು ತಾತ್ಪರ್ಯ. ಅಂತಹ ಗುಣಗಳು ಯಾವುವು? ಎಂಬುದು ಈ ಪ್ರಶ್ನೆಯಲ್ಲಿ ಹೇಳಿರುವ ವಿಷಯ. ಸತ್ಯವನ್ನು ಮಾತನಾಡುವುದು, ಪ್ರಿಯವಾದುದನ್ನು ಮಾತನಾಡುವುದು ಮತ್ತು ಆ ಮಾತು ವಿನಯದಿಂದ ಕೂಡಿರಬೇಕಾದುದು. ಹೀಗೆ ಇದ್ದಾಗ ಎಲ್ಲ ಪ್ರಾಣಿಗಳು ಅಪ್ರಯತ್ನಪೂರ್ವಕವಾಗಿ ವಶವಾಗುತ್ತವೆ. ಆ ಮಾತಿನಲ್ಲಿ ಎಷ್ಟು ಶಕ್ತಿ ಅಡಗಿದೆ ಎಂಬುದನ್ನು ಈ ಪ್ರಶ್ನೋತ್ತರದಿಂದ ಭಾವಿಸಬಹುದಾಗಿದೆ.

ಒಂದು ಮಾತಿನಿಂದ ಇಡೀ ಪ್ರಪಂಚವನ್ನೇ ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯ. ಆದರೆ ಆ ಮಾತಿನಲ್ಲಿ ಈ ಅಂಶಗಳು ಅಡಕವಾಗಿರಬೇಕು. ಅದಕ್ಕೆ ಒಂದು ಸುಭಾಷಿತ ಹೀಗೆ ಹೇಳುತ್ತದೆ -  "ಸತ್ಯಂ ಪ್ರಿಯಂ ಬ್ರೂಯಾದ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ । ಪ್ರಿಯಂ ಚ ನ ಅನೃತಂ ಬ್ರೂಯಾತ್ ಏಷ ಧರ್ಮಃ ಸನಾತನಃ" ಎಂದು. ಮಾತಿನಲ್ಲಿ ಸತ್ಯ ಇರಬೇಕು; ಅದು ಪ್ರಿಯವಾಗುವಂತೆ ಇರಬೇಕು ಅಪ್ರಿಯವಾದರೆ ಅದು ಸತ್ಯವೇ ಆದರೂ ಅದು ಮಾತಿಗೆ ಯೋಗ್ಯವಲ್ಲ. ಹೀಗೆ ಮಾತನಾಡಿದರೆ ಯಾರು ತಾನೆ ವಶವಾಗುವುದಿಲ್ಲ! ಎಲ್ಲರೂ ವಶರಾಗುತ್ತಾರೆ. ಹಾಗಾಗಿ ಒಳ್ಳೆ ಮಾತಿಗೆ ಏಕೆ ದಾರಿದ್ರ್ಯ ಎಂಬ ಅರ್ಥ ಈ ಸುಭಾಷಿತದಲ್ಲಿ ಇದೆ. ಮಾತು ಹೇಗಿರಬೇಕು? ಹೇಗಿದ್ದರೆ ಚೆನ್ನು? ಹೇಗಿದ್ದರೆ ಅಪಾಯ? ಎಂಬುದನ್ನು ತುಂಬಾ ವಿಸ್ತಾರವಾಗಿ ಮಾತಿನ ಬಗ್ಗೆ ನಮ್ಮ ಆರ್ಷಸಾಹಿತ್ಯಗಳು, ಗಾದೆ ಮಾತುಗಳು ಎಲ್ಲವೂ ಬಹಳ ವಿಮರ್ಶಾತ್ಮಕವಾದ ವಿಚಾರವನ್ನು ನೀಡುತ್ತವೆ. ಆದ್ದರಿಂದ ಒಂದು ಮಾತು ಇಷ್ಟು ಸಮರ್ಪಕವಾಗಿದ್ದರೆ ಅವನು ಏನನ್ನು ಬೇಕಾದರೂ ಸಾಧಿಸಬಹುದು. ಅದೇ ಮಾತು ವಿಪರೀತವಾದರೆ ಅಪಾಯವು ಕಟ್ಟಿಟ್ಟಿದ್ದು ಎಂಬುದನ್ನು ಈ ಸುಭಾಷಿತವೇ ಸಾರುತ್ತದೆ. ಅತಿಯಾದ ಮಾತು ಅನಾಹುತಕ್ಕೆ ದಾರಿ ಎಂಬಂತೆ ಮಾತು ಮಿತವಾಗಿರಬೇಕು; ಇಲ್ಲದಿದ್ದರೆ ಮಾತೇ ನಮಗೆ ಕೆಡುಕಾದೀತು. "ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು", "ಮಾತು ಮನೆಯನ್ನು ಕೆಡಿಸೀತು" ಇತ್ಯಾದಿ ಮಾತುಗಳು ಈ ಮಾತಿನ ಬಗ್ಗೆ ಎಚ್ಚರಿಕೆನ್ನು ನೀಡುತ್ತಿವೆ. ಯಾರ ಮಾತಿನಲ್ಲಿ ಸತ್ಯ, ಪ್ರಿಯ ಮತ್ತು ವಿನಯಗಳು ಈ ಮೂರೂ ಬೆರೆತುಕೊಂಡಿರುತ್ತವೆಯೋ, ಅವರ ಭಾವವೂ ಅಂತಯೇ ಬದಲಾಗುತ್ತಾ ಹೋಗುತ್ತದೆ. ಆ ಮಾತು ಹೇಳುವುವವನ್ನು, ಕೇಳುವವನನ್ನು ಸತ್ಯದಲ್ಲೇ ನೆಲೆನಿಲ್ಲಿಸುವಂತೆ ಮಾಡುತ್ತದೆ. ಭಾಗವತ ಮೊದಲಾದ ಮಹಾಪುರಾಣ  ಪುರಾಣಗಪುಣ್ಯ ಕಥಾನಕಗಳು ಹುಟ್ಟಿದ್ದೆ ಹೀಗೆ ಮಾತಿನಿಂದಲೇ. ಎದುರುಗಡೆ ಇರುವನನ್ನು ಪರಿವರ್ತಿಸುವಂತಿರುತ್ತದೆ. ಒಬ್ಬ ಪರೀಕ್ಷಿತ್ ಮಹಾರಾಜನು ಶುಕಮುನಿಗಳ ಉಪದೇಶಾಮೃತವನ್ನು ಕೇಳಿ ಉದ್ಧಾರನಾದ. ಕೇವಲ ಮನುಷ್ಯ ಮಾತ್ರನಲ್ಲ, ಪ್ರಾಣಿ ಪಶುಪಕ್ಷಿಗಳು ಕೂಡ ಅವನ ಭಾವಕ್ಕೆ ಸಹಕರಿಸುತ್ತವೆ. ಅವನು ಸತ್ಯದಲ್ಲಿ ಪ್ರತಿಷ್ಠಿತನಾಗುತ್ತಾ ಸಾಗುತ್ತಾನೆ. ಹಾಗಿರುವಾಗ ಅವನನ್ನು ಕಂಡರೆ ಯಾರಿಗೂ ದ್ವೇಷ ಭಾವನೆ ಬರುವುದೇ ಇಲ್ಲ. ಆ ಪರಿಸರವು ಅಹಿಂಸಾಭಾವದಿಂದ ಕೂಡಿರುತ್ತದೆ. ಇದು ಪ್ರಾಣಿ-ಪಕ್ಷಿಗಳು ಎಲ್ಲವೂ ಕೂಡ ಅವನ ವಶದಲ್ಲಿ ಇರುವಂತೆ ಮಾಡುತ್ತದೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.

ಸೂಚನೆ : 28/12/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

Saturday, December 27, 2025

ಅಷ್ಟಾಕ್ಷರೀ 96 ಪೌರುಷಂ ದ್ವಿವಿಧಂ ಸ್ಮೃತಮ್ (Astakshara 96)


ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ಯಾವ ಭಾಷೆಗಳಲ್ಲಿ ಗಾದೆಗಳಿಲ್ಲ? ಗಾದೆಗಳು ಜೀವನಾನುಭವಗಳನ್ನು ಆಧರಿಸಿ ಬಂದವು. ಅನುಭವಗಳು ಬಗೆಬಗೆಯಾಗಿರುವ ಕಾರಣ, ಗಾದೆಗಳಲ್ಲೂ ವೈವಿಧ್ಯವು ಸಹಜವೇ. ಆಯಾ ಸಂಸ್ಕೃತಿಯ ಮಂದಿಯ ಜೀವನಾನುಭವದ ವ್ಯಾಪ್ತಿಯೆಂತಹುದೋ ಅವರ ಗಾದೆಗಳ ವ್ಯಾಪ್ತಿಯೂ ಅಂತಹುದೇ ಆಗಿರುತ್ತದೆಯಷ್ಟೆ.

ವೈವಿಧ್ಯವಿರಲಿ, ಒಂದೇ ಭಾಷೆಯ ಗಾದೆಗಳಲ್ಲೇ ವೈರುಧ್ಯವನ್ನೂ ಕಾಣಬಹುದು. ಹಣದ ಬಗ್ಗೆಯೋ ವಿದ್ಯೆಯ ಬಗ್ಗೆಯೋ ಪರಸ್ಪರ-ವಿರುದ್ಧ ಗಾದೆಗಳಿಗೇನು ಕಡಿಮೆಯೇ? "ಅಲ್ಪವಿದ್ಯ, ಮಹಾಗರ್ವಿ"ಗೆ ವಿರೋಧಿಯೋ ಎನಿಸುವಂತಹುದು "ಓದಿ ಓದಿ ಮರುಳಾದ ಕೂಚಭಟ್ಟ." ಹಾಗೆಯೇ, "ದುಡ್ಡೇ ದೊಡ್ಡಪ್ಪ"ಕ್ಕೆ ಪ್ರತಿಯಾಗಿ, "ಧನವಿದ್ದರೆ ಫಲವೇನು, ಮನವಿಲ್ಲದನಕ" - ಇತ್ಯಾದಿ.

ಆದರೆ ಅದೃಷ್ಟವನ್ನು ಕುರಿತಾದ ಗಾದೆಗಳಲ್ಲಿ, ವಿಧಿಯನ್ನು ಹೊಗಳುವ ಗಾದೆಗಳೇ ಎಲ್ಲ ಭಾಷೆಗಳಲ್ಲೂ ಹೆಚ್ಚೆಂದು ತೋರುತ್ತದೆ. "ತಾನೊಂದು ಬಗೆದರೆ ದೈವವೊಂದು ಬಗೆಯಿತು," "ಕೈಗೆ ಬಂದದ್ದು ಬಾಯಿಗಿಲ್ಲ" - ಎಂಬ ಬಗೆಯ ಗಾದೆಗಳನ್ನು ಕೇಳಿದ್ದೇವಲ್ಲವೇ? ವಿಧಿಯ ಆಟ, ಹಣೆಬರಹಗಳನ್ನೇ ಹೆಚ್ಚೆಂದು ಹೇಳುವ ಗಾದೆಗಳನ್ನು ನಾನಾಭಾಷೆಗಳಲ್ಲಿ ಕಾಣಬಲ್ಲೆವು. ವಿಧಿಯೇ ಹೆಚ್ಚು, ಅದರ ಮುಂದೆ ಮನುಷ್ಯ-ಪ್ರಯತ್ನವೇನು? - ಎಂಬ ತೆರನ ನುಡಿಗಳು ಸಂಸ್ಕೃತದಲ್ಲೂ ಸಾಕಷ್ಟಿವೆ.

ಹಾಗೆಂದು ನಮ್ಮ ಕೈಯಲ್ಲೇನೂ ಇಲ್ಲವೆಂದು ಕೊಳ್ಳುವುದೂ ತರವಲ್ಲವಷ್ಟೆ? ಜೀವನದಲ್ಲಿ ಮಹಾ-ಸಾಧನೆಗಳನ್ನು ಮಾಡಿದವರಾರೂ ತೀವ್ರ-ಶ್ರಮಪಡದೆ ಏನನ್ನೂ ಸಾಧಿಸಿಲ್ಲವೆನ್ನುವ ಗಾದೆಗಳೂ ಉಂಟು. 

ಏನನ್ನೂ ಮಾಡದೆ ಸುಮ್ಮನಿದ್ದುಬಿಡುವುದು ಯಾರಿಗೂ ಸಾಧ್ಯವಿಲ್ಲವೆಂಬ ಮಾತನ್ನು ಭಗವದ್ಗೀತೆಯೇ ಹೇಳುತ್ತದೆ. ಅಷ್ಟೇ ಅಲ್ಲ, ಏನೂ ಕೆಲಸಮಾಡದವನಿಗೆ ಶರೀರ-ಯಾತ್ರೆಯೂ ಸಿದ್ಧಿಸದು - ಎನ್ನುತ್ತದೆ. ಶರೀರ-ಯಾತ್ರೆಯೆಂದರೆ ಜೀವನ-ನಿರ್ವಹಣೆ.

ತಾತ್ತ್ವಿಕವಾಗಿ ಹೇಳುವುದಾದರೆ, ಪ್ರಕೃತಿಯೆಲ್ಲವೂ ತ್ರಿಗುಣಮಯ. ಪ್ರಕೃತಿಯಲ್ಲಿ ಸತ್ತ್ವ, ರಜಸ್, ತಮಸ್ - ಎಂಬ ಮೂರು ಗುಣಗಳುಂಟು. ಅವು ಸುಮ್ಮನಿರಗೊಡಿಸವು, ನಮ್ಮನ್ನು; ಏನನ್ನಾದರೂ ಮಾಡಿಸುತ್ತಲೇ ಇರುತ್ತವೆ. ಏನನ್ನೂ ಮಾಡದೇ ಒಂದು ಕ್ಷಣವಾದರೂ ಇದ್ದುಬಿಡಲು ಜೀವನು ಸ್ವತಂತ್ರನಲ್ಲ: ಪ್ರಕೃತಿ-ಪ್ರೇರಿತನಾಗಿ ಏನಾದರೂ ಕೆಲಸಗಳನ್ನು ಅವಶನಾಗಿ ಮಾಡುತ್ತಲೇ ಇರುವನು; ಅಂತೆಯೇ ಸೃಷ್ಟಿ-ವ್ಯವಸ್ಥೆಯಿರುವುದು!

ಹಾಗೆಂದ ಮೇಲೆ ಸುಮ್ಮನಿರುವ ಪ್ರಶ್ನೆಯೇ ಇಲ್ಲವೆಂದಾಯಿತು. ಸದಾ ಕೆಲಸವೆಂದರೆ, ಕೊನೆಯ ಪಕ್ಷ, ಏನನ್ನು ಮಾಡಬಾರದು, ಏನನ್ನು ಮಾಡಬೇಕು? – ಎಂಬುದು ಗೊತ್ತಿರುವುದೊಳ್ಳೆಯದಲ್ಲವೆ?

ವ್ಯರ್ಥವಾದ ಕೆಲಸವನ್ನು ಮಾಡಬಾರದೆನ್ನುತ್ತಾರೆ. ಯಾವುದೇ ನಿರ್ದಿಷ್ಟ-ಪ್ರಯೋಜನವಿಲ್ಲದೆ ಕೆಲವರು ನೀರನ್ನು ತಟ್ಟುವುದು, ನೀರಲ್ಲಿ ಕೈ-ಕಾಲಾಡಿಸುವುದು ಉಂಟಲ್ಲವೇ? ಪಾರ್ಕಿನಲ್ಲಿ ಕುಳಿತು  ಸುಮ್ಮನೆಯೇ ಹುಲ್ಲನ್ನು ಕೀಳುವುದೋ ಕತ್ತರಿಸುವುದೋ ಮಾಡುತ್ತಿರುವುದುಂಟಲ್ಲವೇ? ಹಾಗೆ ಜಲತಾಡನ-ತೃಣಚ್ಛೇದನಗಳನ್ನು ಕೂಡ ಮಾಡಕೂಡದೆಂದಿವೆ, ಶಾಸ್ತ್ರಗಳು!

ಪೌರುಷವೆಂದರೆ ಪರಾಕ್ರಮ ಎಂಬುದು ಪ್ರಸಿದ್ಧಾರ್ಥ. ಆದರೆ ಪುರುಷ-ಪ್ರಯತ್ನವೆಲ್ಲಕ್ಕೂ ಪೌರುಷವೆಂದು ಹೇಳುವುದು ಸಂಸ್ಕೃತದಲ್ಲುಂಟು. ಮತ್ತು ಪುರುಷನೆಂದರೂ ಗಂಡಸು - ಎಂಬರ್ಥ ಮಾತ್ರವಲ್ಲ; ಸ್ತ್ರೀಯರೂ ಪುರುಷರೇ! ಪುರುಷ ಎಂಬುದಕ್ಕೆ ಜೀವ ಎಂಬುದೇ ಸಾರಭೂತವಾದ ಅರ್ಥ. ಆದುದರಿಂದ ಪುರುಷ-ಪ್ರಯತ್ನಕ್ಕೆಲ್ಲ, ಎಂದರೆ ಮನುಷ್ಯರು ಮಾಡುವುದಕ್ಕೆಲ್ಲಾ, ಪೌರುಷವೆಂಬ ಪದದ ಬಳಕೆಯು ಸಲ್ಲುತ್ತದೆ.

ಪೌರುಷವೆಂಬುದು ಎರಡು ಬಗೆ (ಪೌರುಷಂ ದ್ವಿವಿಧಂ ಸ್ಮೃತಂ) - ಎಂದು ಶಾಸ್ತ್ರಗಳು ಹೇಳುತ್ತವೆ: ಉಚ್ಛಾಸ್ತ್ರ ಮತ್ತು ಶಾಸ್ತ್ರಿತ - ಎಂಬುದಾಗಿ. ಶಾಸ್ತ್ರಿತ ಎಂದರೆ ಶಾಸ್ತ್ರಾನುಸಾರಿಯಾದದ್ದು. ಉಚ್ಛಾಸ್ತ್ರ - ಎಂದರೆ ಶಾಸ್ತ್ರಗಳನ್ನು ಮೀರುವಂತಹುದು.

ಇವುಗಳಲ್ಲಿ ಉಚ್ಛಾಸ್ತ್ರ-ಪೌರುಷವು ಅನರ್ಥಕ್ಕೆ ಕಾರಣವಾಗುವುದೆಂದೂ ಶಾಸ್ತ್ರಿತ-ಪೌರುಷವು ಪರಮಾರ್ಥಕ್ಕೆ ಕಾರಣವಾಗುವುದೆಂದೂ ಮುಕ್ತಿಕೋಪನಿಷತ್ತು ಹೇಳುತ್ತದೆ. 

ಏನು ಹಾಗೆಂದರೆ? ಮೂಲತಃ ಶಾಸ್ತ್ರವೆಂಬುದು ನಮ್ಮ ಹಿತಕ್ಕಾಗಿ ನಿಯಮಗಳನ್ನು ಹೇಳುವಂತಹುದು - ಏನನ್ನು ಮಾಡಬೇಕು/ಬಾರದೆಂದು. ಶಾಸ್ತ್ರವೆಂದರೆ ಕೇವಲ ಪುಸ್ತಕಗಳೆಂದೇ ಬಹುಮಂದಿಯ ಭಾವನೆ. ಹಾಗಲ್ಲ. ಯಾವುದೇ ಕ್ಷೇತ್ರದಲ್ಲಿ ನುರಿತವರ ಅನುಭವ-ವಾಣಿಯೇ ಶಾಸ್ತ್ರವೆನಿಸುವುದು.

ಶ್ರೀರಂಗಮಹಾಗುರುಗಳು ಶಾಸ್ತ್ರದ ಪಾತ್ರವನ್ನು ಈಜುವಿಕೆಯ ನಿದರ್ಶನದ ಮೂಲಕ ತಿಳಿಸುತ್ತಿದ್ದರು. ಈಜಿನಲ್ಲಿ ಪರಿಣತರು ಈಜುಕಲಿಯುವವನಿಗೆ ಹೀಗೆ ಮಾಡು, ಹೀಗೆ ಮಾಡಬೇಡ - ಎಂದೆಲ್ಲ ಹೇಳಿಕೊಡುವುದುಂಟಲ್ಲವೆ? ಆ ಮಾಡು-ಬೇಡಗಳೇ ವಿಧಿ-ನಿಷೇಧಗಳು, ಅರ್ಥಾತ್ ನಿಯಮಗಳು. ಆ ನಿಯಮಗಳೇ ಶಾಸ್ತ್ರ.

ಶಾಸ್ತ್ರಾನುಸಾರಿಯಾಗಿ ಈಜಬಲ್ಲವನೇ ದಡಸೇರಬಲ್ಲನು; ನಿಷ್ಣಾತನೇ ಆಗಿದ್ದರೆ ಬೇರೆಯವರನ್ನೂ ದಾಟಿಸಬಲ್ಲನು. ಆದರೆ ಆ ಶಾಸ್ತ್ರವನ್ನರಿಯದೆ ಎರ್ರಾಬಿರ್ರಿಯಾಗಿ ವರ್ತಿಸುವವನಿಗೆ ನೀರಲ್ಲಿ ಮುಳುಗುವುದೇ ಗತಿ.

ಅಧ್ಯಾತ್ಮಶಾಸ್ತ್ರಗಳೂ ಅಂತೆಯೇ. ಶಾಸ್ತ್ರ ಮೀರಿ ನಡೆದಲ್ಲಿ ಈಗಲೋ ಆಮೇಲೋ ಅನರ್ಥವು ಸಿದ್ಧ. ಶಾಸ್ತ್ರಾನುಸಾರ ನಡೆಯುವವನು ಪರಮಾರ್ಥವನ್ನು, ಎಂದರೆ ಪರಮ-ಪ್ರಯೋಜನವಾದ ಬಂಧ-ಮುಕ್ತಿಯನ್ನೇ, ಹೊಂದುವನು. 

ಮುಕ್ತಿಯೆಂದರೆ ಸ್ವಾತಂತ್ರ್ಯವೇ ಅಲ್ಲವೇ?  ಅದು ಬೇಕೇ?: ಶಾಸ್ತ್ರಗಳತ್ತ ಗಮನ ಹರಿಸಿ. ಪುರುಷ-ಪ್ರಯತ್ನದ ಸಾಫಲ್ಯವಿಲ್ಲಿದೆ.

ಸೂಚನೆ: 27/12//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.


ಕೃಷ್ಣಕರ್ಣಾಮೃತ 88 ಪಿಂಛ-ಲಾಂಛಿತ ಗೋಪವೇಷನ ಕಡುಮುದ್ದು ಕಾಂತಿ (Krishakarnamrta 88)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ನಮ್ಮ ಇಷ್ಟಾರ್ಥವನ್ನು ನೆರವೇರಿಸಲಿ, ಶ್ರೀಕೃಷ್ಣ - ಎಂದು ಕೇಳಿಕೊಳ್ಳುತ್ತಾನೆ, ಕವಿ ಲೀಲಾಶುಕ. ಅದಕ್ಕಾಗಿ ಮುರಾರಿಯ ಮುದ್ದಾದ ಮೈಯನ್ನು ಈ ಶ್ಲೋಕದಲ್ಲಿ ಚಿತ್ರಿಸಿದ್ದಾನೆ.

ಅಭಿನವ-ನವನೀತದಂತೆ ಸ್ನಿಗ್ಧನಾಗಿದ್ದಾನೆ, ಕೃಷ್ಣ. ಸ್ನಿಗ್ಧವೆಂದರೆ ಹೊಳೆಯುತ್ತಿರುವುದು. ಕಳೆಕಳೆಯಾಗಿ ಮುದ್ದುಮುದ್ದಾಗಿರುವ ಮಗುವನ್ನು, ಒಳ್ಳೇ ಬೆಣ್ಣೆಯ ಮುದ್ದೆಯಂತಿದೆ - ಎನ್ನುವುದಿಲ್ಲವೇ? ಹಾಗೆ ಇದು.

ಗೊಲ್ಲರ ಮನೆಗಳಲ್ಲಿ ಹಾಲು-ಮೊಸರು-ಬೆಣ್ಣೆಗಳಿಗೇನು ಕಡಿಮೆಯೇ? ಎಂದೇ, ದುಗ್ಧವನ್ನು, ಎಂದರೆ ಹಾಲನ್ನಂತೂ, ಚೆನ್ನಾಗಿಯೇ ಕುಡಿದಿದ್ದಾನೆ. ಆ-ಪೀತವೆಂದರೆ ಚೆನ್ನಾಗಿ ಕುಡಿದಿರುವುದು, ಕೊನೆಯ ಬಿಂದುವಿನವರೆಗೂ, ಕುಡಿದಿರುವುದು!

ಇನ್ನು ಬೆಣ್ಣೆ ಪಡೆಯಬೇಕೆಂದರೆ, ಮೊಸರು ಕಡೆಯುತ್ತಿರುವವರ ಬಳಿ ಮೊದಲು ಹೋಗಬೇಕಲ್ಲವೇ? ಅಲ್ಲಿಗವನು ಹೋದಾಗ ಅವನ ಮೈಮೇಲೆ ಅಲ್ಲಲ್ಲಿ ಆ ಮೊಸರಿನ ಕೆಲವೆರಡು ಬಿಂದುಗಳು ಹಾರಿವೆ. ಹೀಗೆ ದಧಿಯ, ಎಂದರೆ ಮೊಸರಿನ, ಕಣಗಳು ಗುರುತು ಮೈಮೇಲೆ ಪರಿದಿಗ್ಧವಾಗಿವೆ, ಎಂದರೆ ಲೇಪಗೊಂಡಿವೆ: ಅಲ್ಲಿಲ್ಲಿ ತಮ್ಮ ಗುರುತನ್ನು ಮೂಡಿಸಿವೆ.

ತಾಪಿಂಛ-ಗುಚ್ಛವೆಂದರೆ ತಮಾಲ-ವೃಕ್ಷದ ಗೊಂಚಲು. ಅದರ ಬಣ್ಣವೆಂದರೆ ಕಪ್ಪೇ. ಅದರ ಛವಿಯ ಪರಿಯೆಂತೋ ಅಂತಹುದೇ ಛವಿಯು, ಶ್ರೀಕೃಷ್ಣನ ಶರೀರದ್ದು. ಛವಿಯೆಂದರೆ ಕಾಂತಿ, ವರ್ಣ, ಹೊಳಪು. ಹೀಗಾಗಿ ಕೃಷ್ಣನು ತಮಾಲತರುವಿನ ಕಪ್ಪುಕಾಂತಿಯನ್ನೇ ಹೊಂದಿ ಕಮನೀಯನಾಗಿರುವನು.

ಇದಲ್ಲದೆ ಹೊಸದಾದ ಒಂದು ನವಿಲುಗರಿಯಿಂದ ಲಾಂಛಿತನಾಗಿದ್ದಾನೆ, ಎಂದರೆ ಅಲಂಕೃತನಾಗಿದ್ದಾನೆ, ಕೂಡ.

ಇವೆಲ್ಲವೂ ಆತನ ಹೊರಮೈಯಾಯಿತು. ಆತನ ಒಳರೂಪವನ್ನೂ ಅರಿಯಬೇಕು. ಆತನು ಭುವನದ ಕೃಚ್ಛ್ರಗಳನ್ನು, ಎಂದರೆ ಜಗತ್ತಿನಲ್ಲಿರುವವರ ಕಷ್ಟಗಳನ್ನು, ಛೇದಿಸುವವನು ಎಂದರೆ ಕತ್ತರಿಸಿಹಾಕತಕ್ಕವನು.

ಎಳಸಾದರೂ ಮುದ್ದಾದರೂ ಮಹಿಮೆಯುಳ್ಳ ಇಂತಹ ಮೈಯುಳ್ಳ ಈ ದೇವತೆಯು, ಎಂದರೆ ಶ್ರೀಕೃಷ್ಣನು, ನಮ್ಮ ಅಪೇಕ್ಷೆಗಳನ್ನು ಈಡೇರಿಸಲಿ - ಎಂದು ಕೇಳಿಕೊಂಡಿದ್ದಾನೆ, ಕವಿ.

ಶ್ಲೋಕ ಹೀಗಿದೆ:
ಅಭಿನವ-ನವನೀತ-ಸ್ನಿಗ್ಧಂ ಆಪೀತ-ದುಗ್ಧಂ
ದಧಿ-ಕಣ-ಪರಿದಿಗ್ಧಂ ಮುಗ್ಧಂ ಅಂಗಂ ಮುರಾರೇಃ |
ದಿಶತು ಭುವನ-ಕೃಚ್ಛ್ರ-ಚ್ಛೇದಿ ತಾಪಿಂಛ-ಗುಚ್ಛ-
-ಚ್ಛವಿ ನವ-ಶಿಖಿ-ಪಿಂಛಾ-ಲಾಂಛಿತಂ ವಾಂಛಿತಂ ನಃ ||

ಈ ಶ್ಲೋಕದಲ್ಲಿ ಬಂದಿರುವ ವರ್ಣಸಾಮ್ಯಗಳು ಆಕರ್ಷಕವಾಗಿದೆ. ಅಭಿನವ-ನವನೀತ - ಎನ್ನುವಾಗ ನವ-ನವ ಎಂದೆರಡು ನವಗಳು ಒಟ್ಟಿಗೇ ಬಂದಿವೆ. ಹಾಗೆಯೇ ಸ್ನಿಗ್ಧ-ದುಗ್ಧ-ದಿಗ್ಧ-ಮುಗ್ಧ-ಗಳನ್ನೆಲ್ಲ ಶ್ಲೋಕದ ಪ್ರಥಮಾರ್ಧದಲ್ಲೇ, ಎಂದರೆ ನಿಕಟ-ನಿಕಟವಾಗಿಯೇ, ತಂದಿದೆ. ಮುಗ್ಧ-ಮುರಾರಿ ಎನ್ನುವಾಗ ಮು-ಮುಗಳು ಬಂದಿವೆ. ಹಾಗೆಯೇ ಕೃಚ್ಛ್ರ-ಗುಚ್ಛ-ಚ್ಛವಿ ಎಂಬಲ್ಲಿಯ ಅನುಪ್ರಾಸವೂ ಸುವೇದ್ಯವೇ. ಶ್ಲೋಕಾಂತದಲ್ಲಿಯ ಲಾಂಛಿತ-ಪಿಂಛ-ವಾಂಛಿತಗಳೂ ಹೃದಯಂಗಮವೇ ಆಗಿವೆ.

***

ಮತ್ತೊಂದು ಪದ್ಯ.

ನನ್ನ ಮಾನಸದಲ್ಲಿ ಭಾಸಿಸಲಿ - ಎನ್ನುತ್ತಾನೆ, ಲೀಲಾಶುಕ. ಮಾನಸವೆಂದರೆ ಮನಸ್ಸು. ಅಲ್ಲಿ ಸ್ಫುರಿಸಬೇಕಾದದ್ದು ಯಾವುದು? ಎಂಬ ಪ್ರಶ್ನೆ, ಮತ್ತು ಅದೆಂತಹುದು? ಅದರಿಂದಾಗುವ ಫಲವೇನು? - ಎಂಬ ಪ್ರಶ್ನೆಗಳೂ ಬರುತ್ತವೆ. ಅವೆಲ್ಲಕ್ಕೂ ಉತ್ತರವಿತ್ತೇ ಇದ್ದಾನೆ, ಲೀಲಾಶುಕ.

ಕವಿಯು ಹೇಳುವುದರಲ್ಲಿ ವಿಶೇಷವಿದೆ. "ಮುಹುರು ಮುಹುರ್ ಮುಹುಃ" ನನ್ನ ಚಿತ್ತದಲ್ಲಿ ಹೊಳೆಯಲಿ ಎನ್ನುತ್ತಿದ್ದಾನೆ; ಹಾಗೆಂದರೆ "ಮತ್ತೆ ಮತ್ತೆ ಮತ್ತೆ".

ಹೇಳಿದ್ದನ್ನೇ ಮತ್ತೆ ಮತ್ತೆ ಮೂರು ಬಾರಿ ಹೇಳಿದೆಯೆಂದರೆ ಅದೇನೋ ಅತಿಶಯವೇ ಸರಿ. ಯಾವುದು ಬಹಳ ಮುಖ್ಯವೋ ಅಥವಾ ಬಹಳ ಆಸ್ವಾದ್ಯವೋ ಅಂತಹುದನ್ನೇ ನಾವು ಪುನಃ ಪುನಃ ಹೇಳುವುದು. ಪುನಃ ಪುನಃ ಹೇಳುವುದನ್ನೇ ಪೌನಃಪುನ್ಯ - ಎನ್ನುವುದು. ಪೌನಃಪುನ್ಯವು ಉತ್ಸುಕತೆ-ಸಂಭ್ರಮಗಳಿಗಾಗಿಯೂ ಬರಬಹುದು. ಪ್ರಕೃತ-ಶ್ಲೋಕದಲ್ಲಿ ಭಕ್ತನಿಗಾಗುವ ಸಂಭ್ರಮ-ಭಾವತೀವ್ರತೆಗಳು ವ್ಯಕ್ತವಾಗಿವೆ.

ಯಾವುದು ಹಾಗೆ ಮತ್ತೆ ಮತ್ತೆ ಚಿತ್ತದಲ್ಲಿ ಕಾಣುತ್ತಲಿರಬೇಕಾದದ್ದು? : ವಿಭುವಿನ ರಮಣೀಯತೆ.

ಯಾರು ವಿಭು? ವಿಭುವೆಂದರೆ ಪರಮಾತ್ಮನೇ. ಎಂತಹವನು ಈ ವಿಭು? ಯಾವನು ನಾನಾಕಾರ-ನಾನಾರೂಪಗಳನ್ನು ತಳೆಯಬಲ್ಲನೋ ಆತನೇ ವಿ-ಭು: ಅರ್ಥಾತ್ ವಿವಿಧವಾಗಿ ಆಗತಕ್ಕವನು. ಹಾಗಿದ್ದರೆ ಇಲ್ಲಿ ಹೇಳುತ್ತಿರುವುದು ಯಾವುದನ್ನು? ಸ್ವಯಂ ಗೋಪವೇಷವನ್ನು ಧರಿಸಿದವನನ್ನು - ಎಂದರೆ ಕೃಷ್ಣನನ್ನು.

ಇಲ್ಲಿ ಸ್ವಯಂ ಎಂಬುದರ ವಿಶೇಷವೇನು? ಮಿಕ್ಕ ಗೊಲ್ಲರೋ ತಮ್ಮ ತಮ್ಮ ಕರ್ಮಕ್ಕೆ ವಶರಾಗಿ ಹಾಗೆ ಹುಟ್ಟಿರುವವರು. ಕೃಷ್ಣನು ಹಾಗಲ್ಲ. ಯಾವುದೇ ಶರೀರವನ್ನಾದರೂ ಆತನು ಪರಿಗ್ರಹಿಸಬಲ್ಲನು. ಹಿಂದೆ ಪ್ರಾಣಿ-ಶರೀರಗಳನ್ನೇ ತಳೆದಿದ್ದನಲ್ಲವೇ? ಆತನು ಇಚ್ಛಾ-ಮೀನ, ವಿಹಾರ-ಕಚ್ಛಪ - ಎಂದರೆ ಮತ್ಸ್ಯಾವತಾರ-ಕೂರ್ಮಾವತಾರಗಳನ್ನು ಸ್ವಕೀಯೇಚ್ಛೆಯಿಂದಲೇ ಪರಿಗ್ರಹಿಸಿದವನು.

ಆ ಶರೀರಗಳನ್ನು ಹೊಂದಿದ್ದುದು ತನ್ನ ಪೂರ್ವ-ಕರ್ಮಗಳಿಗೆ ಅಧೀನನಾಗಿ ಅಲ್ಲ, ಬೇರೆ ವಿಧಿಯೂ ಇರಲಿಲ್ಲವೆಂದಲ್ಲ.

ಇದಂತೂ, ಈ ಗೊಲ್ಲರ ನಡುವೆ ಈತನಿರುವ ಬಗೆಯಂತೂ, ನಮ್ಮ ಭಾಗ್ಯವೇ. ಏಕೆ? ಅದೆಷ್ಟು ಸುಲಭನಾದ, ಈಗ! ಬಾಲ-ಬಾಲೆಯರಿಗೂ ಲಭ್ಯನಾದ!

ಎಂತಹುದು, ಈ ವಿಭುವಿನ ರಮಣೀಯತೆ? ಅದು "ಯಾಪಿ ಕಾಪಿ" ಎಂದರೆ "ಯಾವುದೋ ಒಂದು"; ಎಂದರೆ "ಹೀಗೆಂದು ಬಣ್ಣಿಸಲಾಗದಿರುವುದು" ಎಂದರ್ಥ. ಅರ್ಥಾತ್, ಅನಿರ್ವಚನೀಯವಾದುದದು.

ಎಲ್ಲವೂ ಸರಿಯೇ. ಆತನೇಕೆ ನಮ್ಮ ಅಂತರಂಗದಲ್ಲಿ ಮತ್ತೆ ಮತ್ತೆ ಗೋಚರನಾಗಬೇಕು? ಏಕೆಂದರೆ ಆತನೇ ಭವ-ಭಯೈಕ-ಭೇಷಜ. ಎಂದರೆ ಭವಭಯಕ್ಕೆ ಆತನೇ ಏಕ-ಭೇಷಜ. ಭವ-ಭಯವೆಂದರೆ ಸಂಸಾರಭೀತಿ. ಮತ್ತೆ ಮತ್ತೆ ಹುಟ್ಟಿಸಾಯುತ್ತಿರುವುದೇ ಭವ. ಅದುವೇ ಎಲ್ಲ ಭಯಗಳಿಗಿಂತಲೂ ಹಿರಿದಾದುದು. ಅದುವೇ ಒಂದು ರೋಗವೂ ಹೌದು. ರೋಗಕ್ಕೆ ಮದ್ದು ಬೇಕು. ಈ ವಿಶಿಷ್ಟವಾದ ರೋಗಕ್ಕೆ ವಿಶಿಷ್ಟವಾದ ಭೇಷಜವೇ ಬೇಕು. ಇದಕ್ಕಿರುವುದೋ ಒಂದೇ ಔಷಧ: ಅದುವೇ ಈ ವಿಭುವಿನ ರಮಣೀಯತೆ, ಅದರ ದರ್ಶನ.

ಸಾರಾಂಶವಿಷ್ಟು. ಕೃಷ್ಣ-ರಮಣೀಯತೆಯು ನಮ್ಮ ಅಂತಃಕರಣದಲ್ಲಿ ಪೌನಃಪುನ್ಯದಿಂದ ಹೊಳೆಯುತ್ತಿದ್ದರೆ, ನಮ್ಮ ಭವ-ಭಯಕ್ಕೆ ಮದ್ದು ಸಿದ್ಧವಾದಂತೆಯೇ ಸರಿ. ಎಂದೇ, ಅದೇ ಸ್ಫುರಿಸುತ್ತಿರಲಿ - ಎಂದು ಕೋರಿಕೆ. 

ಅರ್ಥಾತ್, ಧ್ಯಾನದಲ್ಲಿ ಸಾಧಾರಣವಾಗಿ, ಚಿತ್ತ-ಚಾಂಚಲ್ಯದಿಂದಾಗಿ ಮನಸ್ಸಿನಲ್ಲಿ ಏನೂ ಸ್ಥಿರವಾಗಿ ನಿಲ್ಲದಲ್ಲವೇ? ಆದರೀಗ ಮತ್ತೆ ಮತ್ತೆ ಕೃಷ್ಣ-ಸೌಂದರ್ಯವೇ ಕಣ್ಮುಂದೆ ಬರುತ್ತಿದ್ದಲ್ಲಿ, ಬರಬರುತ್ತಾ ಧ್ಯಾನ-ಸಿದ್ಧಿಯೇ ಅಗುವುದು. ಅಂತರಂಗದ ಪಟಲದ ಮೇಲೆ ಈ ರಂಗನ ಮೂರ್ತಿಯೇ ಸ್ಥಿರವಾಗಿ ನಿಲ್ಲುವುದು. ಪರಿಣಾಮವಾಗಿ, ಸಂಸಾರ-ಬಂಧನವು ಕಳಚುವುದು: ಭವ-ಭಯವೇ ಕೊನೆಗೊಳ್ಳುವುದು.

ಯಾವ ಲಕ್ಷ್ಯದ ಸಾಧನೆಗಾಗಿ ಎಲ್ಲರೂ ಬಹುವಾಗಿ ಶ್ರಮಿಸುವರೋ, ಆ ಕಷ್ಟ-ಸಾಧ್ಯವಾದ ಲಕ್ಷ್ಯವು ಈಗ ಈ ಸುಲಭೋಪಾಯದಿಂದಲೇ ಸಾಧ್ಯ! ಯೋಗ-ಧ್ಯಾನಾದಿಗಳಿಗೆ ನಿಯಮಾವಳಿಗಳು ಹೆಚ್ಚು; ಆದರೆ ಶ್ರೀಕೃಷ್ಣ-ರಮಣೀಯತೆಯು ಸ್ವತಃ ಸ್ವರೂಪತಃ ಆಸ್ವಾದ್ಯವೇ ಆಗಿರುತ್ತದೆ.

ಅಲ್ಲಿಗೆ, ಮೆಚ್ಚಿಕೊಂಡು ಚಪ್ಪರಿಸಿಕೊಂಡು ತೋಷಗೊಂಡೇ ಗುರಿಯನ್ನು ಸಾಧಿಸುವ ಮಾರ್ಗವಿದಾಗಿದೆ. ಜ್ಞಾನ-ಮಾರ್ಗವು ಕ್ಲೇಶ-ಬಹುಲ. ಭಕ್ತಿ-ಮಾರ್ಗವು ಸುಲಭ-ಸಾಧ್ಯ, ಚಿತ್ತಾಸ್ವಾದ್ಯ.

ಶ್ಲೋಕ ಹೀಗಿದೆ:
ಭಾಸತಾಂ ಭವ-ಭಯೈಕ-ಭೇಷಜಂ /
ಮಾನಸೇ ಮಮ ಮುಹುರ್ಮುಹುರ್ ಮುಹುಃ |
ಗೋಪ-ವೇಷಂ ಉಪಸೇದುಷಃ ಸ್ವಯಂ /
ಯಾಪಿ ಕಾಪಿ ರಮಣೀಯತಾ ವಿಭೋಃ ||

ಮೊದಲ ಪಾದದಲ್ಲಿ ಭ-ಭ-ಭ-ಭಗಳು ನಾಲ್ಕು. ಎರಡನೆಯದರಲ್ಲಿ ಮಕಾರವು ಆರು ಬಾರಿ ಬಂದಿದೆ, ಹಕಾರವು ಮೂರು ಬಾರಿ. ಉಳಿದೆರಡು ಪಾದಗಳಲ್ಲೂ ಅನುಪ್ರಾಸವು ಕಿಂಚಿತ್ತಾಗಿ ಕಂಡಿದೆ. ಒಟ್ಟಿನಲ್ಲಿ ಆಸ್ವಾದ್ಯಪದ್ಯ.

ಸೂಚನೆ : 27/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, December 21, 2025

ಪ್ರಶ್ನೋತ್ತರ ರತ್ನಮಾಲಿಕೆ 44 (Prasnottara Ratnamalike 44)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೪೫. ಬುದ್ಧಿಮಂತನಾದ ವಿವೇಕಿಯು ಯಾವುದಕ್ಕೆ ಭಯಪಡುತ್ತಾನೆ

ಸಂಸಾರವೆಂಬ ಅರಣ್ಯಕ್ಕೆ.

ಈ ಪ್ರಶ್ನೋತ್ತರದಲ್ಲಿ ಒಂದು ದೃಷ್ಟಾಂತದ ಮೂಲಕ ವಿವರಣೆಯನ್ನು ಕೊಡಲಾಗಿದೆ. ಸಂಸಾರವೆಂಬುದು ಒಂದು ಅರಣ್ಯ ಎಂಬುದಾಗಿ ಭಾವಿಸಲಾಗಿದೆ. ಅರಣ್ಯವು ಪ್ರವೇಶ ಮಾಡುವುದಕ್ಕೆ ಭಯಾನಕವಾಗಿತ್ತದೆ. ಅಲ್ಲಿ ಜೀವಿಸುವುದು ಕಷ್ಟಸಾಧ್ಯವೇ ಸರಿ. ಅಲ್ಲಿನ ಜೀವಿಕೆಗೆ ಅವಧಿ ಇಷ್ಟೇ! ಎಂಬುದು ತೀರ್ಮಾನವಾಗುವುದು ಕಷ್ಟವೇ. ಏಕೆಂದರೆ ಯಾವಾಗ ಜೀವಕ್ಕೆ ಕುತ್ತು ಬರುತ್ತದೆ? ಎಂಬುದನ್ನು ತಿಳಿಯುವುದು ಕಷ್ಟವಾದ್ದರಿಂದ. ಒಂದು ಜೀವವು ಮತ್ತೊಂದು ಜೀವವನ್ನು ಬಳಸಿ ಜೀವಿಸುವ ಅನಿವಾರ್ಯ ಅಲ್ಲಿರುತ್ತದೆ. ಹಾಗಾಗಿ ಭಯವೆಂಬುದು ಅರಣ್ಯದಲ್ಲಿ ಅತ್ಯಂತ ಸಹಜ. ಹಾಗೆಯೇ ಈ ಸಂಸಾರವೂ ಕೂಡ ಅರಣ್ಯದಂತೆ ಭಯಾನಕವಾದದ್ದು ಎಂಬ ದೃಷ್ಟಾಂತದ ವಿವರಣೆ ಇಲ್ಲಿದೆ. ಆದ್ದರಿಂದ 'ವಿವೇಕಿಯಾದವನಿಗೆ ಸಂಸಾರವು ಹೇಗೆ ಅರಣ್ಯಸದೃಶವಾಗಿದೆ?' ಎಂಬುದನ್ನು ನಾವು ಚಿಂತಿಸಬೇಕಾಗಿದೆ.

ಬುದ್ಧಿಮಂತನಾದ ವ್ಯಕ್ತಿ ಏಕೆ ಸಂಸಾರಕ್ಕೆ ಭಯಪಡಬೇಕು? 'ಅದು ಭಯಾನಕ ಅರಣ್ಯದಂತೆ' ಎಂಬುದಾಗಿ ಭಯಪಡಿಸಲು ಕಾರಣವೇನು? ಹಾಗಾದರೆ ಸಂಸಾರವು ಬೇಡವೇ? ಭಗವಂತ ಸಂಸಾರವನ್ನು ಸೃಷ್ಟಿ ಮಾಡಿದ್ದಾದರೂ ಏಕೆ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ವಿವೇಕವು ಹೇಗೆ ನಿಜವಾದ ಬುದ್ಧಮತ್ತೆ ಎಂದು ಪರಿಗಣಿತವಾಗುತ್ತದೆ? ಇದಕ್ಕೆ ಸಂಸಾರವೆಂಬುದು ಹೇಗೆ ವಿರೋಧಿಯಾಗುತ್ತದೆ? ಎಂಬ ಪ್ರಶ್ನೆಗಳೂ ಇದರ ಜೊತೆ ಸೇರಿಕೊಳ್ಳುತ್ತವೆ. ಈ ಕಾರಣಗಳಿಂದ ಈ ಪ್ರಶ್ನೋತ್ತರವು ಕೆಲವೇ ಕೆಲವು ಶಬ್ದಗಳಿಂದ ವಿವರಿಸಲು ಕಷ್ಟ ಸಾಧ್ಯವಾದುದು. ಸಂದರ್ಭಕ್ಕೆ ಅನುಗುಣವಾಗಿ ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನವಿದಾಗಿದೆ. 

ಶಾಸ್ತ್ರದಲ್ಲಿ 'ಸಂಸಾರ' ಎಂಬುದಕ್ಕೆ ಹೀಗೆ ಒಂದು ವಿವರಣೆ ಇದೆ - "ಮಿಥ್ಯಾಜ್ಞಾನದಿಂದ ಬರುವ ವಾಸನಾರೂಪವಾದ ಸಂಸ್ಕಾರವನ್ನು 'ಸಂಸಾರ' ಎಂಬುದಾಗಿ ಕರೆಯಬೇಕು" ಎಂದು. ಅಂದರೆ ಇದೊಂದು ವಿಪರೀತವಾದ ಅರಿವು ಅಷ್ಟೇ. ಆದರೆ ಈ ಅರಿವೂ ಕೂಡ ಮುಂದಿನ ಅನುಭವಕ್ಕೂ ವಿಷಯವಾಗುತ್ತದೆ ಎಂಬುದೂ ಅಷ್ಟೇ ಸಹಜ. ಏಕೆಂದರೆ ಅನುಭವವೂ ಒಂದು ಅರಿವಷ್ಟೇ. "ಯಾವುದು ಸಂಸರಣ ಶೀಲವಾದದ್ದೋ, ಅಂದರೆ ನಿತ್ಯವೂ ಗತಿಶೀಲವಾದದ್ದೋ ಅದು 'ಸಂಸಾರ' ಎಂಬುದಾಗಿ ಕರೆಸಿಕೊಳ್ಳುತ್ತದೆ" ಎಂಬ ವಿವರಣೆ ಇನ್ನೊಂದು ಕಡೆ ಸಿಗುತ್ತದೆ. ಈ ಸಂಸಾರ ಎಂಬ ಪದಕ್ಕೆ 'ದುಃಖಲೋಕ' ಎಂಬ ಅರ್ಥವಿವರಣೆಯೂ ಇದೆ. ಅದರಿಂದ ನಮಗೆ ತಿಳಿಯುವುದು ಇಷ್ಟೇ - ಸಂಸಾರವು ಸದಾ ದುಃಖಕಾರಿ ಎಂಬುದಾಗಿ. "ಸಂಸಾರವೆಂಬುದು ಅಜ್ಞಾನಮೂಲವಾದುದು. ಆದ್ದರಿಂದ ಇದು ಸರ್ವದಾ ದುಃಖಕಾರಿ" ಎಂಬುದಾಗಿ ಇನ್ನೊಂದು ಕಡೆ ವಿವರಣೆಯನ್ನು ನೋಡಬಹುದು. ಇಷ್ಟೆಲ್ಲಾ ಸಂಸಾರದ ಬಗ್ಗೆ ಹೇಯವಾದ ವಿವರಣೆ ಇರುವುದರಿಂದಲೇ ಒಬ್ಬ ವಿವೇಕಿಯಾದವನು ಈ ಸಂಸಾರವನ್ನು ಭಯದಿಂದ ನೋಡುತ್ತಾನೆ. ಈ ಸಂಸಾರದಲ್ಲಿ ಸಿಲುಕದೆ ಇರುವಂತೆ ಅವನು ಎಚ್ಚರಿಕೆಯನ್ನು ವಹಿಸುತ್ತಾನೆ. ಕೆಲವರು ಈ ಸಂಸಾರದಲ್ಲಿ ಇದ್ದು, ಸಂಸಾರವನ್ನು ಜಯಿಸುವ ಕಾರ್ಯವನ್ನು ಮಾಡುತ್ತಾರೆ. ಇಂತಹವರೇ ನಿಜವಾದ ವಿವೇಕಿಯಾಗುತ್ತಾರೆ. ಇನ್ನು ಕೆಲವೊಮ್ಮೆ ವಿವೇಕಿಯಾದವನು ಸಂಸಾರಿಯಾಗಿ, ಧ್ಯೇಯವಾದುದನ್ನು ನಿಶ್ಚಯಿಸಿ, ಸಂಸಾರವನ್ನು ತ್ಯಜಿಸಿ, ಸಂಸಾರದಿಂದ ಮುಕ್ತಿಯನ್ನು ಪಡೆದು, ಭವವೆಂಬ ಬಂಧನದಿಂದ ಪಾರಾಗುವುದನ್ನು ನೋಡುತ್ತೇವೆ. ಆಶ್ಚರ್ಯವಾದರೂ ಸತ್ಯವಾದ ವಿಷಯವೇನೆಂದರೆ, ಸಂಸಾರವು ಎಷ್ಟೇ ಹೇಯವೆಂದಾದರೂ ಅಲ್ಲೇ ಇದ್ದು, ಅದನ್ನೇ ಬಳಸಿ, ಅದನ್ನು ಪೂರಕವಾಗಿ ಮಾಡಿಕೊಂಡು, ಅದನ್ನು ದಾಟಬೇಕು ಎಂಬುದು ಜ್ಞಾನಿಗಳ ಉಪದೇಶದ ಸಾರವಾಗಿದೆ. ಹಾಗಾಗಿ ಈ ಪ್ರಶ್ನೋತ್ತರದಲ್ಲಿ ಇದರ ಬಗ್ಗೆ ಅಂತಹ ಎಚ್ಚರಿಕೆಯನ್ನು ಕೊಡಲಾಗಿದೆ ಎಂಬುದಾಗಿ ಭಾವಿಸಬೇಕು. ಹಾಗಾದಾಗ ಮಾತ್ರ ಈ ಸಂಸಾರವು ಸಾರವಾಗಿ ಕಾಣುತ್ತದೆ. ಹಾಗಿಲ್ಲದಿದ್ದರೆ ಅದು ಅರಣ್ಯಸದೃಶವೇ ಸರಿ.

ಸೂಚನೆ : 21/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವ್ಯಾಸ ವೀಕ್ಷಿತ 167 ರಾಜಸೂಯವನ್ನು ಮಾಡುವುದೇ ಬಿಡುವುದೇ? (Vyaasa Vikshita 167)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಅದಕ್ಕೆ ಯುಧಿಷ್ಠಿರನು ಹೀಗೆ ಉತ್ತರವಿತ್ತನು: "ಶ್ರೀಕೃಷ್ಣಾ, ನೀನು ಧೀಮಂತ. ಬೇರಾರಿಗೂ ಹೇಳಲಾಗದುದನ್ನು ನೀನು ಹೇಳಿದ್ದೀಯೇ. ಅಲ್ಲದೆ, ಇಂತಹ ವಿಷಯಗಳಲ್ಲಿ ಸಂಶಯಗಳನ್ನು ಪರಿಹರಿಸತಕ್ಕವನು ನಿನಗಿಂತಲೂ ಮತ್ತಾರೂ ಭೂಮಿಯಲ್ಲಿರಲಾರರು.

ಈಗೆಲ್ಲ ಮನೆಮನೆಗೂ ರಾಜರಿರುತ್ತಾರೆ, ತಮತಮಗೆ ಪ್ರಿಯವಾದ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ! ಅವರಾರೂ ಸಾಮ್ರಾಜ್ಯವನ್ನು ಸಂಪಾದಿಸಿಕೊಂಡಿಲ್ಲ. ಸಮ್ರಾಟ್ - ಎಂಬ ಪದವಿಯು ಬರುವುದಾದರೂ ಕಡುಕಷ್ಟದಿಂದಲೇ ಸರಿ!

ಅನ್ಯರಾಜರ ಪರಾಕ್ರಮವೆಷ್ಟು ಹೆಚ್ಚು ಎಂಬುದನ್ನು ತಿಳಿದೂ, ತನ್ನನ್ನೇ ತಾನು ಯಾರು ಪ್ರಶಂಸಿಸಿಕೊಂಡಾನು? ಮತ್ತೊಬ್ಬನಾದರೂ ನಮ್ಮ ಸಾಮರ್ಥ್ಯವನ್ನು ಅರಿತಿದ್ದವನಾಗಿದ್ದೂ ನಮ್ಮನ್ನು ಪ್ರಶಂಸಿಸುವುದಾದರೆ, ಆವಾಗ ನಾವು ಆದರಣೀಯರೆನ್ನಬಹುದೇನೋ? ಸಾರಾಂಶವಾಗಿ ತನ್ನ ಬಗ್ಗೆ ತಾನೇ ಮಾಡಿಕೊಳ್ಳುವ ಪ್ರಶಂಸೆಯಾಗಲಿ, ಪರರು ತನ್ನ ಬಗ್ಗೆ ಮಾಡುವ ಪ್ರಶಂಸೆಯಾಗಲಿ, ಅರಿವಿನ ಆಧಾರದ ಮೇಲೆ ಬಂದಿರುವುದಾಗಿರಬೇಕು. ಕೃಷ್ಣಾ, ಈ ಭೂಮಿಯೆಂಬುದು ಬಹಳ ವಿಶಾಲವಾದುದು. ಅನೇಕ ರಾಜರತ್ನಗಳಿಂದ ತುಂಬಿರುವುದು. ದೂರದೂರದ ದೇಶಗಳಿಗೆ ಹೋದವನಿಗೆ ತಾನೆ ಶ್ರೇಯಸ್ಸೆನ್ನುವುದೇನು? - ಎಂಬುದು ತಿಳಿಯುವುದು?

ಇರಲಿ. ಶಮವೇ, ಎಂದರೆ ಮನಸ್ಸಿನ ಶಾಂತಿಯೇ, ಶ್ರೇಷ್ಠ - ಎಂದು ನನಗೀಗ ಅನಿಸಹತ್ತಿದೆ, ಕೃಷ್ಣಾ. ಶಮದಿಂದಲೇ ನನಗೆ ಕ್ಷೇಮವೆಂಬುದುಂಟಾಗುವುದು.

ಇದನ್ನೇಕೆ ಹೇಳುತ್ತಿದ್ದೇನೆಂದರೆ, ರಾಜಸೂಯದ ಆರಂಭವನ್ನು ನಾನೇನೋ ಮಾಡಿಬಿಡಬಹುದು; ಆದರೆ ಅದರ ಫಲವಾದ ಪಾರಮೇಷ್ಠ್ಯವೆಂಬುದಿದೆಯೆಲ್ಲಾ - ಅರ್ಥಾತ್ ಎಲ್ಲರಿಗಿಂತಲೂ ಮೇಲಾಗಿರುವಿಕೆ - ಎಂಬುದಿದೆಯೆಲ್ಲಾ? – ಅದು ನನಗೆ ಅಸಾಧ್ಯವೆಂದೇ ತೋರುವುದು.

ಸತ್ಕುಲ-ಪ್ರಸೂತರೂ ಮನಸ್ವಿಗಳೂ ಆದ ಅನೇಕ-ರಾಜರು ಇಲ್ಲಿರುವರಷ್ಟೆ? ಇವರುಗಳಲ್ಲೇ ಯಾರಾದರೊಬ್ಬರು ಅದನ್ನು ಸಾಧಿಸುವ ಶ್ರೇಷ್ಠರಿರಬಹುದಲ್ಲವೇ?  

ಈಗ ನೀನು ಹೇಳಿದ ಜರಾಸಂಧ-ವೃತ್ತಾಂತದಿಂದ ನಾನೂ ಭಯಗೊಂಡಿದ್ದೇನೆ, ಕೃಷ್ಣಾ. ಆತನ ದೌರಾತ್ಮ್ಯದಿಂದ, ಅರ್ಥಾತ್ ದುಷ್ಟತನದಿಂದ, ಚಿಂತೆಗೊಳಗಾಗಿದ್ದೇನೆ. ಕೃಷ್ಣಾ, ನೀನಾದರೋ ದುರ್ಧರ್ಷ - ಎಂದರೆ ನಿನ್ನನ್ನಾರೂ ಘಾಸಿಗೊಳಿಸಲಾರರು. ಅಂತಹ ನಿನ್ನ ಭುಜ-ಬಲವನ್ನಾಶ್ರಯಿಸಿಕೊಂಡೇ ನಾವುಗಳು ಇರುವುದು.

'ನಾನು ಬಲಶಾಲಿ'ಯೆಂಬುದಾಗಿ ನನ್ನ ಬಗ್ಗೆ ನಾನಂದುಕೊಂಡಿಲ್ಲ, ಕೃಷ್ಣಾ. ಅದೂ ಆ ಜರಾಸಂಧನ ವಿಷಯದಲ್ಲಿ ನೀನೇ ಅತಂಕಪಡುತ್ತಿರುವಾಗ!

ನಿನ್ನಿಂದಾಗಲಿ ಬಲರಾಮನಿಂದಾಗಲಿ ಭೀಮನಿಂದಾಗಲಿ ಅರ್ಜುನನಿಂದಾಗಲಿ ಆ ಜರಾಸಂಧನನ್ನು ಸೋಲಿಸಲು ಆದೀತೋ ಆಗುವುದಿಲ್ಲವೋ? - ಎಂಬ ಯೋಚನೆಯಾಗುತ್ತದೆ, ನನಗೆ. ಇದನ್ನೆಲ್ಲಾ ಅರಿತ ಮೇಲೆ, ರಾಜಸೂಯ ಯಾಗವನ್ನು ನಾನು ಮಾಡಬೇಕೇ? - ಎಂಬುದಾಗಿ ಮತ್ತೆ ಮತ್ತೆ ವಿಮರ್ಶಿಸುವಂತಾಗುತ್ತಿದೆ; ಕೇಶವ, ನಮ್ಮ ಎಲ್ಲ ಕೆಲಸ-ಕಾರ್ಯಗಳಿಗೂ ನೀನೇ ಪ್ರಮಾಣ" ಎಂದು ತನ್ನ ಮಾತನ್ನು ಮುಗಿಸಿದನು.

ಮಾತಿನಲ್ಲಿ ಚತುರನಾದ ಭೀಮನು, ಯುಧಿಷ್ಠಿರನ ಈ ಮಾತುಗಳನ್ನು ಕೇಳಿದವನೇ ಹೀಗೆ ಹೇಳಿದನು:

"ಯಾವ ರಾಜನು ಪ್ರಯತ್ನವನ್ನೇ ಮಾಡನೋ, ಹಾಗೆಯೇ ತಾನು ದುರ್ಬಲನಾಗಿದ್ದೂ ಸರಿಯಾದ ಯುಕ್ತಿಯನ್ನು ಬಳಸನೋ, ಅಂತಹ ರಾಜನು ಹಾಳಾಗುವನು - ಮಣ್ಣಿನ ಹುತ್ತವು ಹೇಗೆ ನಾಶಹೊಂದುವುದೋ ಹಾಗೆ. ಇನ್ನು ತಾನು ದುರ್ಬಲನಾಗಿದ್ದರೂ ಅತಂದ್ರಿತನೇ ಆಗಿದ್ದರೆ, ಎಂದರೆ ಜಾಗರೂಕನೂ ಪ್ರಯತ್ನಶೀಲನೂ ಆಗಿದ್ದರೆ, ಹಾಗಿದ್ದರಷ್ಟೇ ಬಲಶಾಲಿಯಾದ ರಿಪುವನ್ನೂ ಹತ್ತಿಕ್ಕುವನು - ಯುಕ್ತಿಯಿಂದ ಶಕ್ತಿ-ಪ್ರಯೋಗವನ್ನು ಆತನು ಮಾಡಿದಲ್ಲಿ; ಅಲ್ಲದೆ ಸ್ವ-ಹಿತವಾದ ಸಂಪತ್ತನ್ನೂ ಗಳಿಸಿಕೊಳ್ಳುವನು.

ಕೃಷ್ಣನಲ್ಲಿ ನಯವಿದೆ, ಎಂದರೆ ರಾಜನೀತಿಯಿದೆ; ನನ್ನಲ್ಲಿ ಬಲವಿದೆ; ಅರ್ಜುನನಲ್ಲಿ ಎಲ್ಲವನ್ನೂ ಜಯಿಸಿಕೊಂಡು ಬರುವ ಶಕ್ತಿಯಿದೆ. ಹೀಗಿರುವುದರಿಂದ ನಾವೀಗ ಸಾಧಿಸುವಂತಹುದಿದೆಯಲ್ಲವೇ?"

ಸೂಚನೆ : 21/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, December 20, 2025

ಕೃಷ್ಣಕರ್ಣಾಮೃತ 86 ನಾನಾಶ್ರಯಿಸುವುದು ಭುವನಾಶ್ರಯನನ್ನೇ!(Krishakarnamrta 86)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀಕೃಷ್ಣನನ್ನು ನಾನು ಆಶ್ರಯಿಸುತ್ತೇನೆ - ಎನ್ನುತ್ತಾನೆ ಲೀಲಾಶುಕ. ಏಕೆ ಶ್ರೀಕೃಷ್ಣನನ್ನು ಆಶ್ರಯಿಸಬೇಕು? - ಎನ್ನುವುದನ್ನು ಕಂಠೋಕ್ತವಾಗಿ, ಎಂದರೆ ಬಾಯಿಬಿಟ್ಟು, ಹೇಳಿಲ್ಲ. ಪುಟ್ಟಶ್ಲೋಕದಲ್ಲಿ ಕೃಷ್ಣನಿಗೆ ನಾಲ್ಕು ವಿಶೇಷಣಗಳನ್ನು ಬಳಸಿದ್ದಾನೆ. ಆ ವಿಶೇಷಣಗಳನ್ನು ಪರಿಭಾವಿಸಿದರೆ ನಮಗೇ ಗೊತ್ತಾಗುತ್ತದೆ, ಏಕೆ ಆಶ್ರಯಿಸಬೇಕೆಂದು.

ಅವನು ಕೊಡುವ ವಿಶೇಷಣಗಳಲ್ಲಿ ನಾಲ್ಕನೆಯದನ್ನು, ಎಂದರೆ ಕೊನೆಯದನ್ನೇ, ಮೊದಲು ಗಮನಿಸಬಹುದು. ಅದೆಂದರೆ ಕೃಷ್ಣನು ಭುವನಾಶ್ರಯ - ಎಂಬುದು. ಭುವನಕ್ಕೇ ಆಶ್ರಯನಾದವನು ಭುವನಾಶ್ರಯ.

ಭುವನವೆಂದರೆ ಲೋಕ. ಲೋಕವೇನು ಒಂದೇ ಇರುವುದೆ? ಮೂರು ಲೋಕಗಳುಂಟು - ಸ್ವರ್ಗ, ಮರ್ತ್ಯ, ಪಾತಾಳಗಳೆಂದು. ಕೆಲವೊಮ್ಮೆ ಭೂಃ, ಭುವಃ, ಸುವಃ - ಎಂಬುದನ್ನೇ ಭುವನ-ತ್ರಯ ಎನ್ನುವುದುಂಟು.

ಕೆಲವೊಮ್ಮೆ ಇನ್ನು ನಾಲ್ಕನ್ನು ಸೇರಿಸಿ ಲೋಕಗಳನ್ನು ಏಳೆಂದು ಹೇಳುವುದುಂಟು. ಆ ನಾಲ್ಕೆಂದರೆ ಮಹಃ ಜನಃ ತಪಃ ಮತ್ತು ಸತ್ಯಂ – ಎಂಬುದಾಗಿ. ಕೊನೆಯದನ್ನು ಸತ್ಯಲೋಕವೆನ್ನುವ ಬದಲು ಬ್ರಹ್ಮಲೋಕವೆನ್ನುವುದೂ ಉಂಟು.

ಕೆಲವೊಮ್ಮೆ ಲೋಕಗಳು ಹದಿನಾಲ್ಕೆಂದು ಸಹ ಹೇಳುವುದುಂಟು. ಅದು ಹೇಗೆ? ಮೇಲೆ ಹೇಳಿದವು ಊರ್ಧ್ವಲೋಕಗಳು, ಎಂದರೆ ಮೇಲಿರುವ ಲೋಕಗಳು. ಅಧೋಲೋಕಗಳೂ ಏಳುಂಟು. ಕೆಳಗಣ ಲೋಕಗಳೆಂದರೆ - ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಮತ್ತು ಪಾತಾಲಗಳು.

ಇವೆಲ್ಲಾ ಸೇರಿ ಬ್ರಹ್ಮಾಂಡವೆನಿಸುತ್ತದೆ. ಆದರೆ, ಸಾವಿರಾರು ಬ್ರಹ್ಮಾಂಡಗಳೇ ಉಂಟೆನ್ನುವರು! ಸಾವಿರಾರೇನು, ಅನಂತಕೋಟಿ-ಬ್ರಹ್ಮಾಂಡಗಳೇ ಇವೆಯೆಂದೂ ಹೇಳುವುದುಂಟಲ್ಲವೇ? ಇವೆಲ್ಲವೂ ಸೇರಿಯೇ ಭುವನ.

ಹೀಗಾಗಿ, ಇಡೀ ಜಗತ್ತಿನ ಸಮಸ್ತ-ಜೀವಿಗಳಿಗೆ ಕೃಷ್ಣನು ಆಶ್ರಯನೆಂದೇ ಅರ್ಥ. ಹೀಗೆ ಎಲ್ಲರಿಗೂ ಯಾವನು ಆಶ್ರಯನೋ ನನಗೂ ಆತನೇ ಆಶ್ರಯ ಎಂಬ ಅಭಿಪ್ರಾಯವಿಲ್ಲಿದೆ.

ಇದರ ತಾತ್ಪರ್ಯವೆಂದರೆ, ನಾನು ಹಿಡಿದಿರುವ ಸ್ವಾಮಿಯು ಸಾಧಾರಣನಲ್ಲ, ಬದಲಾಗಿ ಸರ್ವ-ಜೀವ-ಕೋಟಿಗೂ ನೆಮ್ಮದಿಯನ್ನು ಕೊಡಬಲ್ಲವನು - ಎಂದು. ಆತನು ಅಷ್ಟು ವಿಶಿಷ್ಟನೆಂಬ ಕಾರಣಕ್ಕೇ ಆತನನ್ನೇ ಆಶ್ರಯಿಸಿರುವುದು.

ಆಶ್ರಯಿಸುವುದೆಂದರೆ ಆಸರೆ ಬೇಡುವುದೆಂಬ ಅರ್ಥ. ವಾಸ್ತವವಾಗಿ, "ಶ್ರಯೇ" ಎಂದರೇ ನೆಲೆಹೊಂದುವೆ – ಎಂದು. "ಆ" ಎಂದರೆ ಚೆನ್ನಾಗಿ. ಆ-ಶ್ರಯೇ ಎಂದರೆ ಚೆನ್ನಾಗಿ ಸೇವಿಸುವೆ – ಎಂದು.

ಆಶ್ರಯಕ್ಕಾಗಿ ಯಾರಾರನ್ನೋ ಬೇಡುವುದಲ್ಲ. ಸರ್ವ-ಸ್ವಾಮಿಯೇ ನನ್ನ ಸ್ವಾಮಿ - ಎಂದು ಹೇಳುವಲ್ಲಿ ಹೆಮ್ಮೆಯಿದೆ. ಎಂದೂ ನೀಚರನ್ನು ಆಶ್ರಯಿಸುವುದಲ್ಲ, ಮಹೋನ್ನತನಾದವನನ್ನೇ ಆಶ್ರಯಿಸತಕ್ಕದ್ದು - ಎಂಬ ಲೆಕ್ಕದ ನೀತಿ ಇಲ್ಲಿದೆ. ಧನಾಢ್ಯರನ್ನೋ, ರಾಜರುಗಳನ್ನೋ ಆಶ್ರಯಿಸುವವರುಂಟು. ಹಾಗೆಯೇ ದೇವತಾಸ್ತೋಮವು ವಿಸ್ತಾರವಾದುದರಿಂದ ಅವರಲ್ಲೊಬ್ಬರಲ್ಲಿ ಆಶ್ರಯ ಪಡೆಯುವವರುಂಟು. ಆದರೆ ನಾನಾಶ್ರಯಿಸುವುದು ಭುವನಾಶ್ರಯನನ್ನೇ!

ಇದಲ್ಲದೆ, ಆತನು ಶೃಂಗಾರರಸ-ಸರ್ವಸ್ವ. ಸರ್ವಸ್ವವೆಂದರೆ ಸಮಸ್ತ-ಸಂಪತ್ತು. ಸ್ವ ಎಂಬುದೇ ಸ್ವತ್ತಾಗಿರುವುದು. ಆಸ್ತಿಗೆ ಸೊತ್ತು ಎನ್ನುವುದಿಲ್ಲವೇ? ಅದೇ ಅದು. ಆಸ್ತಿಯನ್ನು ಸ್ಥಿರ ಮತ್ತು ಚರವೆಂದು ವಿಭಾಗಿಸುವುದುಂಟು. ಹೀಗಾಗಿ ಇಲ್ಲಿ ಸರ್ವ-ಸ್ವವೆಂದರೆ ಎಲ್ಲ ಬಗೆಯ ಸಿರಿ.

ಹಾಗಾದರೆ ಶೃಂಗಾರರಸಕ್ಕೆ "ಆಸ್ತಿ"ಯುಂಟೇ? ಉಂಟು. ಮತ್ತಾವ ರಸಕ್ಕೂ ಇಲ್ಲದಷ್ಟು! ಎಂದೇ ಕಾವ್ಯಗಳಲ್ಲಿ ಶೃಂಗಾರ-ರಸವನ್ನು, ಅಥವಾ ವೀರರಸವನ್ನು, ಮಾತ್ರವೇ ಪ್ರಧಾನ-ರಸವಾಗಿ ನಿರೂಪಿಸುವುದು. ಉಳಿದ ರಸಗಳು ಅಂಗ-ರಸಗಳಾಗಿ ಬಂದು ಹೋಗಬಹುದು. ಆದರೆ ಶೃಂಗಾರವೇ ಅಂಗಿ-ರಸವೆನಿಸುವುದು. ಅಂಗವು ಗೌಣ, ಅಂಗಿಯು ಪ್ರಧಾನ.

ಶೃಂಗಾರವನ್ನೇ "ರಸ-ರಾಜ"ವೆನ್ನುವುದು. ಅದಕ್ಕಿರುವ ವ್ಯಾಪ್ತಿ ಮತ್ತಾವ ರಸಕ್ಕೂ ಇಲ್ಲ. ಶೃಂಗಾರ-ಭಾವವು ಇತ್ತ ಪ್ರಾಣಿಗಳಲ್ಲೂ ಆಡುವುದುಂಟು, ಅತ್ತ ದೇವತೆಗಳಲ್ಲೂ ಉಂಟು. ಮನುಷ್ಯರಲ್ಲಂತೂ ಶೃಂಗಾರಕ್ಕೆ ಎಡೆಗೊಡದವರ ಸಂಖ್ಯೆ ಅತ್ಯಲ್ಪವೇ ಸರಿ. ಕಾವ್ಯ-ನಾಟಕಗಳಲ್ಲೂ ಶೃಂಗಾರರಸದ ಮೆರೆತವೇ ಹೆಚ್ಚು. ಶೃಂಗಾರ-ರಸಾಸ್ವಾದನ-ಸಾಮರ್ಥ್ಯವು ಯೌವನೋದಯವಾಗುತ್ತಲೇ ಉದಯಿಸುವುದಾಗಿದ್ದು, ಜೀವನದ ಕೊನೆಯವರೆಗೂ ಇರಬಲ್ಲದು!

ಇನ್ನು ಶ್ರೀಕೃಷ್ಣನ ಜೀವಿತವೋ, ಯೌವನೋದಯಕ್ಕೆ ಮೊದಲೇ ಗೋಪಿಕೆಯರ ಮನಸ್ಸನ್ನು ಸೂರೆಗೊಂಡದ್ದು. ವಯೋಮಾಧುರ್ಯ, ವರ್ಣ-ಮಾಧುರ್ಯ, ವಚೋಮಾಧುರ್ಯ, ಮನೋಮಾಧುರ್ಯ, ವಿಲಾಸ-ಮಾಧುರ್ಯ - ಇವೆಲ್ಲವೂ ಮಧುರವಾಗಿ ಮೇಳೈಸಿರುವ ಈ ಸುಂದರಾಂಗನನ್ನು ಕಂಡರೆ ಯಾರ ಮನಸ್ಸಿಗೆ ಸೆಳೆತವುಂಟಾಗದು? ಇವೆಲ್ಲಕ್ಕೆ ಕಿರೀಟ-ಪ್ರಾಯವಾಗಿ, ತನ್ನಲ್ಲಿಗೆ ಬಂದ ಪ್ರತಿಯೊಬ್ಬರಿಗೂ ಪ್ರಿಯವನ್ನೂ ಹಿತವನ್ನೂ ಉಂಟುಮಾಡುವ ಸಾಮರ್ಥ್ಯವೂ ಪ್ರವೃತ್ತಿಯೂ ಇತ್ತಾಗಿ, ಎಲ್ಲರ ಮನಸ್ಸೂ ಆತನತ್ತ ದ್ರುತಿಗೊಳ್ಳುತ್ತಿದ್ದದ್ದೇ - ಎಂದರೆ ಕರಗಿ ಹರಿಯುತ್ತಿದ್ದದ್ದೇ. ಹೀಗಾಗಿ ಲೋಕಹಿತ-ಕಾರಿಯೇ ಲೋಕಪ್ರಿಯ-ಕಾರಿಯೂ ಆಗಿ ಬಂದ ಆತನನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುವ ತವಕ ಯಾರ ಮನಸ್ಸಿಗಿರುತ್ತಿರಲಿಲ್ಲ?

ಯಾವ ವೇಷ-ಭೂಷಣಗಳಿಲ್ಲದಿದ್ದರೂ ಆಕರ್ಷಕ ನಮ್ಮ ಕೃಷ್ಣ. ಆದರೂ ಆತನಿಗೆ ಒಂದು ಭೂಷಾ-ವಿಶೇಷವೇ ಉಂಟು. ಅದೆಂದರೆ ಆತನ ನವಿಲುಗರಿ, ಶಿಖಿ-ಪಿಂಛ.

ಕೃಷ್ಣನು ಮೇಘ-ಶ್ಯಾಮನಲ್ಲವೇ? ಎಂದೇ ಆತನನ್ನು ಕಂಡೊಡನೆ ಮೋಡವನ್ನೇ ಕಂಡಂತಾಗಿ ನವಿಲುಗಳು ನಲಿಯುತ್ತಿದ್ದುವಂತೆ, ಕೆಲ ಗರಿಗಳನ್ನು ಉದುರಿಸುತ್ತಿದ್ದುವಂತೆ - ತಮ್ಮ ಆನಂದಾತಿರೇಕದಿಂದಾಗಿ; ಆತನಲ್ಲಿಯ ಪ್ರೇಮಾತಿಶಯದಿಂದಾಗಿ! ಆ ಗರಿಗಳೇ ಆತನ ಶಿರೋಲಂಕಾರವಾಗುತ್ತಿದ್ದವು.

ನವಿಲಿನ ಗರಿಗಿಂತಲೂ ಸುಂದರತರವೆನಿಸುವ ಗರಿಯು ಮತ್ತಾವ ಹಕ್ಕಿಗಾದರೂ ಉಂಟೇ? ಹೀಗೆ ಸ್ವತಃ ಸುಂದರನಾಗಿರುವವನಿಗೆ ಸುಂದರಾಭೂಷಣವೂ ಸೇರಿಕೊಂಡರೆ ಆ ಸೊಗಸಿಗೆ ಸಮನುಂಟೆ? ಅಂತಹವನನ್ನು ಶೃಂಗಾರರಸ-ಸರ್ವಸ್ವವೆನ್ನಲು ಅಡ್ಡಿಯೆಲ್ಲಿಯದು? ಶೃಂಗಾರವೇ ಮೂರ್ತವಾಗಿ ಬಂದಿರುವವನೇ ಕೃಷ್ಣ - ಎಂದು ಗೀತಗೋವಿಂದವೂ ಹೇಳುವುದಲ್ಲವೇ?

ಮೂರು ವಿಶೇಷಣಗಳಾದವು. ಇನ್ನೊಂದು ಬಾಕಿಯಿದೆ. ಅದೆಂದರೆ ಕೃಷ್ಣನು ನರಾಕಾರನಾಗಿರುವುದು.

ವಾಸ್ತವವಾಗಿ ಪರಬ್ರಹ್ಮಕ್ಕೆ ಯಾವ ರೂಪ, ಯಾವ ಆಕಾರ? ಆದರೆ ಅಚಿಂತ್ಯವಾದ ಅಂತಹ ಸ್ವರೂಪವನ್ನು ಯಾರು ಭಾವಿಸಬಲ್ಲರು? ಎಂದೇ ಆ ಅನೂಹ್ಯ-ಸ್ವರೂಪವು ಭಾವುಕರಿಗೆ ಭಾವ್ಯವಾಗಲೆಂದು ಸುರೂಪವಾಗಿ ಅವತರಿಸಿದೆ.

ನರರನ್ನು ಉದ್ಧಾರಮಾಡಲೆಂದು ಬಂದ ತತ್ತ್ವವು ನರಾಕಾರವಾಗಿಯೇ ಬಂದಿದೆ: ನರರ ಆಕಾರವನ್ನೇ ಅಂಗೀಕರಿಸಿದೆ.


ತಾವು ದೇವಾಧಿಪತಿಗಳೆಂಬ ಅಹಂಕಾರವು ಇಂದ್ರನಿಗೂ ಬ್ರಹ್ಮನಿಗೂ ಬಂದಿತ್ತಾಗಿ, ಸಾಧಾರಣವೆನಿಸುವ ನರರೂಪವನ್ನೇ ಧರಿಸಿ, ಅವರಿಗೆ ತಮ್ಮ ಸ್ಥಾನ-ಮಾನಗಳ ವಿವೇಕವನ್ನು ಮೂಡಿಸಿದವನೇ ಕೃಷ್ಣ. ಕರ್ಮ-ಫಲವಾಗಿ ಬಂದುದಲ್ಲ, ಆತನ ನರಜನ್ಮ. ಸ್ವೇಚ್ಛೆಯಿಂದಲೇ, ತನ್ನ ಲೀಲಾ-ವಿಭೂತಿಯಾಗಿಯೇ, ಸ್ವೀಕಾರಮಾಡಿದ ಆಕಾರವದು.

ಅಲ್ಲದೆ, ನರರೂಪದಲ್ಲೂ ಅತಿಸಾಧಾರಣವೆನಿಸುವ ಗೋಪ-ರೂಪವನ್ನೇ ತಳೆದು, ತನ್ನ ಎಳವಿನಿಂದಲೇ ಮಹಾ-ಮಹಿಮೆಗಳನ್ನು ತೋರಿಸಿದವನು, ಶ್ರೀಕೃಷ್ಣ.

ಭಗವಂತನಿಗೆ ತನ್ನ ಮಹಾವೈಭವವನ್ನು ತೋರಿಸಿಕೊಳ್ಳಲೂ ಗೊತ್ತು, ಮರೆಮಾಚಲೂ ಗೊತ್ತು. ಎಂದೇ ಅತ್ತ ಅರ್ಜುನನಿಗೆ ವಿಶ್ವರೂಪವನ್ನೇ ತೋರಿಸಿದುದು; ಇತ್ತ ಗೊಲ್ಲನ ವೇಷ ಧರಿಸಿ, ಎಲ್ಲರಿಗೂ ಅತಿಸುಲಭನಾಗಿ ಸರಳನಾಗಿಯೂ ಇದ್ದುದು.

ಗೊಲ್ಲರು, ಕಿರಾತರು – ಇವರುಗಳೇ, ಎಂದರೆ ಅತಿಸಾಧಾರಣರೇ, ತಮ್ಮ ಭೂಷಣವಾಗಿ ನವಿಲುಗರಿಯನ್ನು ಧರಿಸುವುದು. ಹೀಗೆ ನರಾಕಾರವನ್ನೇ ತಾಳಿದ್ದರೂ, ಆತನು ಲೋಕಾಶ್ರಯನೇ ಹೌದೆಂಬುದನ್ನು ಬಲ್ಲವರೆಲ್ಲೋ ಕೆಲವರು ಮಾತ್ರವೇ! ಅಂತಹವರಲ್ಲೊಬ್ಬನೇ ಧನ್ಯ-ಲೀಲಾಶುಕನೂ!

ಹೊಟ್ಟೆಪಾಡಿಗೋಸ್ಕರ ಯಾರೋ ಧನಿಕ, ಯಾರೋ ರಾಜ - ಇವರುಗಳನ್ನು ಆಶ್ರಯಿಸುತ್ತೇವೆ. ಅಂತರಂಗದಲ್ಲಿ ಆಶ್ರಯಿಸಬೇಕಾದುದು ಈ ಭುವನಾಶ್ರಯನನ್ನಲ್ಲದೆ ಮತ್ತಾರನ್ನು?

ಶ್ಲೋಕವನ್ನೀಗ ಆಸ್ವಾದಿಸಿ:

ಶೃಂಗಾರ-ರಸ-ಸರ್ವಸ್ವಂ/

ಶಿಖಿಪಿಂಛ-ವಿಭೂಷಣಂ |

ಅಂಗೀಕೃತ-ನರಾಕಾರಂ/

ಆಶ್ರಯೇ ಭುವನಾಶ್ರಯಂ ||

ಸೂಚನೆ : 20/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Friday, December 19, 2025

ಪ್ರಶ್ನೋತ್ತರ ರತ್ನಮಾಲಿಕೆ 46

ಲೇಖಕರು : ವಿದ್ವಾನ್ ನರಸಿಂಹ ಭಟ್  

ಸಂಸ್ಕೃತಿ ಚಿಂತಕರು 

ಅಷ್ಟಾಂಗಯೋಗ ವಿಜ್ಞಾನಮಂದಿರಂ

ಪ್ರಶ್ನೆ ೪೫. ಬುದ್ಧಿಮಂತನಾದ ವಿವೇಕಿಯು ಯಾವುದಕ್ಕೆ ಭಯಪಡುತ್ತಾನೆ

ಸಂಸಾರವೆಂಬ ಅರಣ್ಯಕ್ಕೆ.

ಈ ಪ್ರಶ್ನೋತ್ತರದಲ್ಲಿ ಒಂದು ದೃಷ್ಟಾಂತದ ಮೂಲಕ ವಿವರಣೆಯನ್ನು ಕೊಡಲಾಗಿದೆ. ಸಂಸಾರವೆಂಬುದು ಒಂದು ಅರಣ್ಯ ಎಂಬುದಾಗಿ ಭಾವಿಸಲಾಗಿದೆ. ಅರಣ್ಯವು ಪ್ರವೇಶ ಮಾಡುವುದಕ್ಕೆ ಭಯಾನಕವಾಗಿತ್ತದೆ. ಅಲ್ಲಿ ಜೀವಿಸುವುದು ಕಷ್ಟಸಾಧ್ಯವೇ ಸರಿ. ಅಲ್ಲಿನ ಜೀವಿಕೆಗೆ ಅವಧಿ ಇಷ್ಟೇ! ಎಂಬುದು ತೀರ್ಮಾನವಾಗುವುದು ಕಷ್ಟವೇ. ಏಕೆಂದರೆ ಯಾವಾಗ ಜೀವಕ್ಕೆ ಕುತ್ತು ಬರುತ್ತದೆ? ಎಂಬುದನ್ನು ತಿಳಿಯುವುದು ಕಷ್ಟವಾದ್ದರಿಂದ. ಒಂದು ಜೀವವು ಮತ್ತೊಂದು ಜೀವವನ್ನು ಬಳಸಿ ಜೀವಿಸುವ ಅನಿವಾರ್ಯ ಅಲ್ಲಿರುತ್ತದೆ. ಹಾಗಾಗಿ ಭಯವೆಂಬುದು ಅರಣ್ಯದಲ್ಲಿ ಅತ್ಯಂತ ಸಹಜ. ಹಾಗೆಯೇ ಈ ಸಂಸಾರವೂ ಕೂಡ ಅರಣ್ಯದಂತೆ ಭಯಾನಕವಾದದ್ದು ಎಂಬ ದೃಷ್ಟಾಂತದ ವಿವರಣೆ ಇಲ್ಲಿದೆ. ಆದ್ದರಿಂದ 'ವಿವೇಕಿಯಾದವನಿಗೆ ಸಂಸಾರವು ಹೇಗೆ ಅರಣ್ಯಸದೃಶವಾಗಿದೆ?' ಎಂಬುದನ್ನು ನಾವು ಚಿಂತಿಸಬೇಕಾಗಿದೆ.

ಬುದ್ಧಿಮಂತನಾದ ವ್ಯಕ್ತಿ ಏಕೆ ಸಂಸಾರಕ್ಕೆ ಭಯಪಡಬೇಕು? 'ಅದು ಭಯಾನಕ ಅರಣ್ಯದಂತೆ' ಎಂಬುದಾಗಿ ಭಯಪಡಿಸಲು ಕಾರಣವೇನು? ಹಾಗಾದರೆ ಸಂಸಾರವು ಬೇಡವೇ? ಭಗವಂತ ಸಂಸಾರವನ್ನು ಸೃಷ್ಟಿ ಮಾಡಿದ್ದಾದರೂ ಏಕೆ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ವಿವೇಕವು ಹೇಗೆ ನಿಜವಾದ ಬುದ್ಧಮತ್ತೆ ಎಂದು ಪರಿಗಣಿತವಾಗುತ್ತದೆ? ಇದಕ್ಕೆ ಸಂಸಾರವೆಂಬುದು ಹೇಗೆ ವಿರೋಧಿಯಾಗುತ್ತದೆ? ಎಂಬ ಪ್ರಶ್ನೆಗಳೂ ಇದರ ಜೊತೆ ಸೇರಿಕೊಳ್ಳುತ್ತವೆ. ಈ ಕಾರಣಗಳಿಂದ ಈ ಪ್ರಶ್ನೋತ್ತರವು ಕೆಲವೇ ಕೆಲವು ಶಬ್ದಗಳಿಂದ ವಿವರಿಸಲು ಕಷ್ಟ ಸಾಧ್ಯವಾದುದು. ಸಂದರ್ಭಕ್ಕೆ ಅನುಗುಣವಾಗಿ ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನವಿದಾಗಿದೆ. 

ಶಾಸ್ತ್ರದಲ್ಲಿ 'ಸಂಸಾರ' ಎಂಬುದಕ್ಕೆ ಹೀಗೆ ಒಂದು ವಿವರಣೆ ಇದೆ - "ಮಿಥ್ಯಾಜ್ಞಾನದಿಂದ ಬರುವ ವಾಸನಾರೂಪವಾದ ಸಂಸ್ಕಾರವನ್ನು 'ಸಂಸಾರ' ಎಂಬುದಾಗಿ ಕರೆಯಬೇಕು" ಎಂದು. ಅಂದರೆ ಇದೊಂದು ವಿಪರೀತವಾದ ಅರಿವು ಅಷ್ಟೇ. ಆದರೆ ಈ ಅರಿವೂ ಕೂಡ ಮುಂದಿನ ಅನುಭವಕ್ಕೂ ವಿಷಯವಾಗುತ್ತದೆ ಎಂಬುದೂ ಅಷ್ಟೇ ಸಹಜ. ಏಕೆಂದರೆ ಅನುಭವವೂ ಒಂದು ಅರಿವಷ್ಟೇ. "ಯಾವುದು ಸಂಸರಣ ಶೀಲವಾದದ್ದೋ, ಅಂದರೆ ನಿತ್ಯವೂ ಗತಿಶೀಲವಾದದ್ದೋ ಅದು 'ಸಂಸಾರ' ಎಂಬುದಾಗಿ ಕರೆಸಿಕೊಳ್ಳುತ್ತದೆ" ಎಂಬ ವಿವರಣೆ ಇನ್ನೊಂದು ಕಡೆ ಸಿಗುತ್ತದೆ. ಈ ಸಂಸಾರ ಎಂಬ ಪದಕ್ಕೆ 'ದುಃಖಲೋಕ' ಎಂಬ ಅರ್ಥವಿವರಣೆಯೂ ಇದೆ. ಅದರಿಂದ ನಮಗೆ ತಿಳಿಯುವುದು ಇಷ್ಟೇ - ಸಂಸಾರವು ಸದಾ ದುಃಖಕಾರಿ ಎಂಬುದಾಗಿ. "ಸಂಸಾರವೆಂಬುದು ಅಜ್ಞಾನಮೂಲವಾದುದು. ಆದ್ದರಿಂದ ಇದು ಸರ್ವದಾ ದುಃಖಕಾರಿ" ಎಂಬುದಾಗಿ ಇನ್ನೊಂದು ಕಡೆ ವಿವರಣೆಯನ್ನು ನೋಡಬಹುದು. ಇಷ್ಟೆಲ್ಲಾ ಸಂಸಾರದ ಬಗ್ಗೆ ಹೇಯವಾದ ವಿವರಣೆ ಇರುವುದರಿಂದಲೇ ಒಬ್ಬ ವಿವೇಕಿಯಾದವನು ಈ ಸಂಸಾರವನ್ನು ಭಯದಿಂದ ನೋಡುತ್ತಾನೆ. ಈ ಸಂಸಾರದಲ್ಲಿ ಸಿಲುಕದೆ ಇರುವಂತೆ ಅವನು ಎಚ್ಚರಿಕೆಯನ್ನು ವಹಿಸುತ್ತಾನೆ. ಕೆಲವರು ಈ ಸಂಸಾರದಲ್ಲಿ ಇದ್ದು, ಸಂಸಾರವನ್ನು ಜಯಿಸುವ ಕಾರ್ಯವನ್ನು ಮಾಡುತ್ತಾರೆ. ಇಂತಹವರೇ ನಿಜವಾದ ವಿವೇಕಿಯಾಗುತ್ತಾರೆ. ಇನ್ನು ಕೆಲವೊಮ್ಮೆ ವಿವೇಕಿಯಾದವನು ಸಂಸಾರಿಯಾಗಿ, ಧ್ಯೇಯವಾದುದನ್ನು ನಿಶ್ಚಯಿಸಿ, ಸಂಸಾರವನ್ನು ತ್ಯಜಿಸಿ, ಸಂಸಾರದಿಂದ ಮುಕ್ತಿಯನ್ನು ಪಡೆದು, ಭವವೆಂಬ ಬಂಧನದಿಂದ ಪಾರಾಗುವುದನ್ನು ನೋಡುತ್ತೇವೆ. ಆಶ್ಚರ್ಯವಾದರೂ ಸತ್ಯವಾದ ವಿಷಯವೇನೆಂದರೆ, ಸಂಸಾರವು ಎಷ್ಟೇ ಹೇಯವೆಂದಾದರೂ ಅಲ್ಲೇ ಇದ್ದು, ಅದನ್ನೇ ಬಳಸಿ, ಅದನ್ನು ಪೂರಕವಾಗಿ ಮಾಡಿಕೊಂಡು, ಅದನ್ನು ದಾಟಬೇಕು ಎಂಬುದು ಜ್ಞಾನಿಗಳ ಉಪದೇಶದ ಸಾರವಾಗಿದೆ. ಹಾಗಾಗಿ ಈ ಪ್ರಶ್ನೋತ್ತರದಲ್ಲಿ ಇದರ ಬಗ್ಗೆ ಅಂತಹ ಎಚ್ಚರಿಕೆಯನ್ನು ಕೊಡಲಾಗಿದೆ ಎಂಬುದಾಗಿ ಭಾವಿಸಬೇಕು. ಹಾಗಾದಾಗ ಮಾತ್ರ ಈ ಸಂಸಾರವು ಸಾರವಾಗಿ ಕಾಣುತ್ತದೆ. ಹಾಗಿಲ್ಲದಿದ್ದರೆ ಅದು ಅರಣ್ಯಸದೃಶವೇ ಸರಿ.


Tuesday, December 16, 2025

ಕೃಷ್ಣಕರ್ಣಾಮೃತ 86 ಕಿವಿಗಳೆರಡೂ ಕೊಳಲಿನಮೃತಕ್ಕಾಗಿ ಕಾದು ನಿಂತಿವೆ (Krishakarnamrta 86)


ಲೇಖಕರು : 
ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ನಾನರಿಯೆ - ಎನ್ನುತ್ತಾನೆ, ಲೀಲಾಶುಕ.

ಅರಿತವರ ಮಾತನ್ನಲ್ಲವೆ, ಕೇಳಬೇಕಾದುದು? - ಎಂದು ಮೊದಲು ತೋರಬಹುದು. ಆದರೆ ಏನನ್ನು ಅರಿಯೆನೆಂದು ಕವಿಯು ಹೇಳುತ್ತಿದ್ದಾನೆಂಬುದನ್ನು ಮೊದಲು ತಿಳಿದು ಆಮೇಲೆ ತಮ್ಮ ಪ್ರತಿಕ್ರಿಯೆಯನ್ನು ಕೊಡುವುದೊಳಿತು, ಅಲ್ಲವೆ?

ಏನನ್ನರಿಯೆ, ಲೀಲಾಶುಕ? – ಎಂದು ಕೇಳಿದರೆ, ಕೃಷ್ಣನಿಗಿಂತಲೂ ಮಧುರವೆನಿಸುವ ಮತ್ತಾವುದನ್ನೂ ನಾನರಿಯೆ - ಎನ್ನುತ್ತಾನೆ. ಹಾಗೇಕೆ ಹೇಳುತ್ತಾನೆ ಎಂಬುದನ್ನೊಮ್ಮೆ ಗಮನಿಸಬೇಕಷ್ಟೆ. ಇದೇ ಉತ್ಕೃಷ್ಟ, ಶ್ರೇಷ್ಠ ಎಂಬುದನ್ನು ಯಾರಾದರೂ ಹೇಳಬೇಕಾದರೆ, ಮಿಕ್ಕವುಗಳ ಪರಿಚಯವೂ ಇದ್ದು ಹಾಗೆ ಹೇಳಿದ್ದಲ್ಲಿ ಅದಕ್ಕೆ ಬೆಲೆಯುಂಟು, ಅಲ್ಲವೇ? ಹೌದು, ಅವುಗಳ ಪರಿಚಯದ ಹಿನ್ನೆಲೆಯಲ್ಲೇ ಹೇಳಿರುವ ಮಾತು, ಲೀಲಾಶುಕನದು.

ಏಕೆಂದರೆ, ಆತನ ಹೃದಯದಲ್ಲಿ ನಾನಾಭಾವಗಳು ಆಡಿವೆ. ಇಡೀ ಜಗತ್ತಿನಲ್ಲಿ ಎಲ್ಲರಿಂದಲೂ ಅಭಿಲಷಿಸಲ್ಪಡುವ ಪ್ರಭಾವವುಳ್ಳ ಭಾವಗಳು ಹಲವುಂಟು. ಅವುಗಳೆಲ್ಲದನ್ನು ಕುರಿತಾಗಿಯೂ ನನ್ನ ಹೃದಯದಲ್ಲಿ ಆಸೆಗಳು ಇದ್ದೇ ಇವೆ - ಎನ್ನುತ್ತಾನೆ, ಕವಿ. ಅದನ್ನೇ, "ಅನೇಕ ತೃಷ್ಣೆಗಳಿಗೆ ನನ್ನ ಹೃದಯವು ಸುಹೃತ್ತಾಗಿದೆ" - ಎಂದಿದ್ದಾನೆ. ಮಕ್ಕಳಾಗಲಿ ಸಂಪತ್ತಾಗಲಿ ಲಭ್ಯವಾದರೆ ಅದರಲ್ಲಿ ಸಂತೋಷವಿಲ್ಲವೆ? ಯಾರ ಹೃದಯದಲ್ಲಿರುವುದಿಲ್ಲ ಇಂತಹ ಪುತ್ರಾಶೆ-ವಿತ್ತಾಶೆಗಳು? ನನ್ನ ಹೃದಯದಲ್ಲಂತೂ ಅಂತಹ ಬಯಕೆಗಳೊಂದಿಗೆ ನಂಟು ಇದ್ದೇ ಇದೆ, ಎಂದೊಪ್ಪಿಕೊಳ್ಳುತ್ತಾನೆ, ಲೀಲಾಶುಕ. ಅಲ್ಲಿಗೆ, ಅವನ್ನೆಲ್ಲಾ ನಾನು ನನ್ನ ಹೃದಯದಿಂದ ತಳ್ಳಲಾಗಿಲ್ಲ. ಹೀಗಾಗಿ ಆ ತೆರನಾದ ಎಷ್ಟೋ ಭಾವಗಳು ನನ್ನ ಹೃದಯದಲ್ಲಿ ಆಗಾಗ ತೋರಿಕೊಳ್ಳುತ್ತಲೇ ಇರುತ್ತವೆ. ಆದರೂ, ಅವೆಷ್ಟಾದರೂ ತೋರಿಕೊಳ್ಳಲಿ, ಪರವಾಯಿಲ್ಲ - ಎನ್ನುತ್ತಾನೆ, ಲೀಲಾಶುಕ.

ಏಕೆ ಹಾಗೆ? ಏಕೆಂದರೆ ಇವೆಲ್ಲಕ್ಕಿಂತಲೂ ಮಿಗಿಲಾದುದೊಂದನ್ನು ನಾ ಕಂಡಿರುವೆ. ಯಾವುದದು? ನಂದನ ಪುಣ್ಯ-ಪ್ರವಾಹವೆನಿಸಿದ ಶ್ರೀಕೃಷ್ಣನ ವಕ್ತ್ರಾರವಿಂದವೇ ಅದು. ವಕ್ತ್ರಾರವಿಂದವೆಂದರೆ ಮುಖ-ಕಮಲ. ವಕ್ತ್ರವೆಂದರೆ ಮುಖವಲ್ಲವೇ? ಎಂತಿರುವ ಮುಖ-ಪದ್ಮವದು? ಸ್ಮೇರವಾದುದು, ಎಂದರೆ ಮಂದಹಾಸದಿಂದ ಕೂಡಿರುವುದು. ಆ ಮಂದಹಾಸವಾದರೂ ಯಾವ ಹಿನ್ನೆಲೆಯಲ್ಲಿ ಮೂಡಿದೆ?

ಕೃಷ್ಣನು ಲೀಲೆಯಿಂದ, ಎಂದರೆ ವಿಶೇಷ-ಯತ್ನವೇ ಇಲ್ಲದೆ, ಲೀಲಾ-ಜಾಲವಾಗಿ ವೇಣುವನ್ನು ನುಡಿಸುತ್ತಿರುವನಲ್ಲವೇ? ತನ್ನೊಂದು ಲೀಲೆಗಾಗಿ ವೇಣುಧ್ವನಿಯನ್ನು ಮಾಡುತ್ತಿರುವನೆಂದರೂ ಸರಿ, ಅಥವಾ ಲೀಲೆಯಾಗಿ ಹಾಗೆ ಮಾಡುತ್ತಿರುವನೆಂದರೂ ಸರಿಯೇ. ಅಂತೂ ಆ ವೇಣುಕ್ವಣಿತದ ಹಿನ್ನೆಲೆಯಲ್ಲಿ ಮೂಡಿರುವ ಮಂದಹಾಸವು ಆತನ ಕಮಲ-ಸದೃಶವಾದ ಮುಖದ ಮೇಲೆ ವಿರಾಜಿಸುತ್ತಿದೆ. ಹೀಗೆ ಮುಗುಳ್ನಗೆಯು ಮೂಡಿರುವ ಮುಖಾರವಿಂದಕ್ಕಿಂತಲೂ ಮಿಗಿಲಾದ ಮಧುರ-ಪದಾರ್ಥವು ಮತ್ತೊಂದಿರಲಾರದು - ಎನ್ನುತ್ತಾನೆ, ಕವಿ.

ಲೀಲಾಶುಕನೇನೂ ವಾನಪ್ರಸ್ಥನೋ ಸಂನ್ಯಾಸಿಯೋ ಆಗಿಬಿಟ್ಟಿಲ್ಲ. ಹಾಗಿರುವುದರಿಂದ ಜನರ ನಡುವಿನಲ್ಲೇ ಇದ್ದು, ಎಲ್ಲರೂ ಯಾವುದನ್ನು ಮಧುರವೆಂದುಕೊಳ್ಳುತ್ತಾರೆ? - ಎಂಬುದನ್ನೂ ಬಲ್ಲವನಾಗಿದ್ದು, ಈ ಮಾತನ್ನು ನುಡಿಯುತ್ತಿದ್ದಾನೆ. "ಯಾವುದೆಂತೇ ಇರಲಿ, ಕೃಷ್ಣ-ವದನ-ಪದ್ಮಕ್ಕಿಂತಲೂ ಹೆಚ್ಚು ಮಾಧುರ್ಯ-ಭರಿತವಾದದ್ದನ್ನು ನಾ ಕಾಣೆ" ಎಂದು ದೃಢವಾಗಿ ಹೇಳುತ್ತಿದ್ದಾನೆ.

ಶ್ಲೋಕ ಹೀಗಿದೆ:
ತೇ ತೇ ಭಾವಾಃ ಸಕಲ-ಜಗತೀ-ಲೋಭನೀಯ-ಪ್ರಭಾವಾಃ / 

ನಾನಾ-ತೃಷ್ಣಾ-ಸುಹೃದಿ ಹೃದಿ ಮೇ ಕಾಮಮ್ ಆವಿರ್ಭವಂತಾಮ್ |

ಲೀಲಾ-ವೇಣು-ಕ್ವಣಿತ-ಲಸಿತ-ಸ್ಮೇರ-ವಕ್ತ್ರಾರವಿಂದಾತ್ /

ನಾಹಂ ಜಾನೇ ಮಧುರಂ ಅಪರಂ ನಂದ-ಪುಣ್ಯಾಂಬುಪೂರಾತ್ ||

***

ಕೃಷ್ಣನು ಇಗೋ ಬರುತ್ತಿದ್ದಾನೆ, ಎನ್ನುತ್ತಿದೆ ಈ ಶ್ಲೋಕ. ಎಂತಹ ಕೃಷ್ಣನಿವನು? ಈತನು ನನ್ನ ನಯನ-ಬಂಧು. ಅಲ್ಲದೆ ಅನನ್ಯ-ಬಂಧುವೂ ಹೌದು.

ಹಾಗೆಂದರೇನು? ಬಂಧುಗಳು ಕಷ್ಟಕ್ಕಾಗುವರು - ಎಂಬ ಮಾತಿದೆಯಲ್ಲವೇ? ಹಾಗೆಂದರೆ, ಕಷ್ಟಗಳು ಬಂದಾಗ ಸಹಾಯಕ್ಕೆ ನಿಲ್ಲುವರು - ಎಂದರ್ಥ. ಕಷ್ಟವನ್ನು ಪರಿಹರಿಸುವವರು, ಸಂತಾಪವನ್ನು ಹೋಗಲಾಡಿಸುವವರು ಯಾರೋ ಅವರೇ ಬಂಧುಗಳು - ಎಂದರ್ಥ. ಕೃಷ್ಣನು ನಯನ-ಬಂಧುವೆಂದರೆ, ನನ್ನ ಕಣ್ಣುಗಳಿಗುಂಟಾಗಿರುವ ನೋವನ್ನು ಪರಿಹರಿಸತಕ್ಕವನು. ಕೃಷ್ಣನನ್ನಿನ್ನೂ ಕಂಡಿಲ್ಲವೆಂಬುದೇ ನನ್ನ ಸಂತಾಪವಾಗಿತ್ತು. ಈಗ ಕಂಡೆನಲ್ಲವೇ? ನನ್ನ ತಾಪ ಕಳೆಯಿತು. ಬಂಧುವೆಂಬ ಪದಕ್ಕೇ ಮತ್ತೊಂದು ಅರ್ಥವೂ ಉಂಟು. ಬಂಧನವನ್ನುಂಟುಮಾಡುವವನೇ ಬಂಧು. ಒಳ್ಳೆಯ ಬಂಧುಗಳಾದರೆ ನಮ್ಮನ್ನು ಪ್ರೇಮಪಾಶದಿಂದ ಕಟ್ಟಿಹಾಕುವವರೇ, ಅಲ್ಲವೇ? ಹಾಗಾಗಿ ನಮ್ಮ ಕಣ್ಣುಗಳನ್ನು ಈತ ಕಟ್ಟಿಹಾಕಿದ್ದಾನೆ. "ಕಣ್ಣಿಗೆ ಕಟ್ಟಿದಂತಿದೆ" ಎಂದೂ ಕನ್ನಡದಲ್ಲಿ ಬಳಕೆಯುಂಟಷ್ಟೆ?

ಪ್ರಕೃತ, ಆತನನ್ನು ಕಂಡರೆ ನಮ್ಮ ದೃಷ್ಟಿಯು ಅಲ್ಲಿಯೇ ಲಗ್ನವಾಗಿಬಿಡುತ್ತದೆ. ಮತ್ತೆಲ್ಲೂ, ಮತ್ತೇನನ್ನೂ ನೋಡಲೇ ಮನಬರದು. ಆತನನ್ನೇ ನೋಡುತ್ತಿರಬೇಕೆನಿಸುತ್ತದೆ. ಹೀಗೆ ಆತನು ನಯನಬಂಧು: ನಮ್ಮ ನೋಟವನ್ನು ತನ್ನಲ್ಲಿಯೇ ಬಂಧಿಸಿರುವವನು. ಯಾವನಿಗೆ ದಿಕ್ಕಾಗಿ ಮತ್ತೊಬ್ಬರಿಲ್ಲವೋ ಅಂತಹವರಿಗೆ ಬಂಧುವಾದವನು ಅನನ್ಯ-ಬಂಧು. "ನನಗಿನ್ನಾರೂ ಇಲ್ಲ; ಅಂತಹ ನನಗೆ ಕೃಷ್ಣನೇ ಬಂಧು; ಹೀಗಾಗಿ ಕೃಷ್ಣನೊಬ್ಬನೇ ನನಗೆ ಬಂಧು" – ಎಂಬುದಾತನ ಭಾವ.

ಕೃಷ್ಣನ ಆಗಮನದಿಂದಾಗಿ ನನ್ನ ಮೇಲೆ ಒಂದು ವಿಶೇಷ-ಪರಿಣಾಮವೂ ಆಗುವುದು. ಆತನು ತನ್ನ ವೇಣುವನ್ನು ನುಡಿಸಿಕೊಂಡು ಬರುವನಲ್ಲವೇ, ವಿಲಾಸ-ಯುತವಾಗಿ? ಎಂದೇ ಅದು ಆತನ ವಿಲಾಸಮುರಳಿ. ಆತನ ವಿಲಾಸಕ್ಕೆ ಆ ಮುರಳಿಯೇ ಕಾರಣವೆಂದಾದರೂ ಭಾವಿಸಬಹುದು. ಹಾಗೂ ಅದು ವಿಲಾಸಮುರಳಿಯೇ. ಅಂತೂ ಆ ವಿಲಾಸ-ಮುರಳಿಯಿಂದ ಹೊಮ್ಮುವ ನಾದವು ಆಪ್ಯಾಯಕವಾಗಿರುತ್ತದೆ, ಅಮೃತದಂತೆ. ಇಂತಹ ಮುರಳಿಯ ಆ ನಿನದಾಮೃತವೇ ನನ್ನ ಮೇಲೆ ವಿಶೇಷ ಪರಿಣಾಮವನ್ನುಂಟುಮಾಡುತ್ತಿರುವುದು.

ಆ ಅಮೃತವು ನನ್ನ ಕಿವಿಗೆ ಸಿಂಚನವಾಗುತ್ತಿದೆ. ನನ್ನ ಎರಡೂ ಕಿವಿಗಳೂ ಅದರ ಅಮೃತ-ಸೇಕವನ್ನು ಹೊಂದಿವೆ. ಸೇಕವೆಂದರೆ ಹುಯ್ಯುವುದು. ಇದರ ಪರಿಣಾಮವಾಗಿ, ಎಂದರೆ ಅಮೃತದಂತಿರುವ ಗಾನದ ಶ್ರವಣದಿಂದಾಗಿ, ನನ್ನ ಎರಡೂ ಕಿವಿಗಳೂ ನಿಮಿರಿ ನಿಂತಿವೆ. ಉದಂಚಿತವೆಂದರೆ ಮೇಲಕ್ಕೆ ನೀಟಿರುವುದು, ನಿಮಿರಿನಿಂತಿರುವುದು. ಹೇಗೆ ಕುದುರೆಯ ಕಿವಿಯು ತನಗಿಷ್ಟವಾದ ದನಿಯು ಕೇಳಿಸಿದೊಡನೆಯೇ, ಆ ಧ್ವನಿಯನ್ನೇ ಲಕ್ಷಿಸಿಕೊಳ್ಳುತ್ತಾ, ನಿಮಿರಿ ನಿಲ್ಲುವುದೋ, ಹಾಗೆ ನನ್ನ ಕಿವಿಗಳೆರಡೂ ಆ ಧ್ವನಿಯನ್ನು ಆಲಿಸುವುದರಲ್ಲೇ ಮಗ್ನವಾಗಿದೆ: ಬಾಲ-ಕೃಷ್ಣನ ಮುರಳೀ-ಗಾನವು ಹೀಗೆ ಕರ್ಣಾಮೃತವಾಗಿದೆ, ಎನಗೆ.

ಆನಂದವು ಚಿಗುರೊಡೆದಿರುವುದು – ಎಂಬುದನ್ನು ಆನಂದ-ಕಂದಳಿತವಾದದ್ದು ಎನ್ನುವರು. ಯಾವುದದು ಹಾಗಾಗಿರುವುದು? ಆತನ ಕೇಲಿ-ಕಟಾಕ್ಷಗಳು, ಎಂದರೆ ವಿಲಾಸ-ದೃಷ್ಟಿಗಳು. ಅವೇ ಆನಂದ-ಕಂದಳಿತವಾಗಿರುವುದು. ಅಂತಹ ಕಟಾಕ್ಷಗಳೂ ಒಂದೆರಡಲ್ಲ, ಹಲವು. ಆ ಲೀಲಾಕಟಾಕ್ಷಗಳು ನನ್ನನ್ನೇ ಲಕ್ಷ್ಯಮಾಡಿಕೊಂಡಿವೆ, ನನ್ನತ್ತಲೇ ಹರಿದಿವೆ. ಒಟ್ಟಿನಲ್ಲಿ, ಕೃಷ್ಣನು ನನ್ನ ನಯನ-ಬಂಧು, ಅನನ್ಯ-ಬಂಧು. ತೋಷವನ್ನು ಅರಳಿಸುವುವು, ಆತನ ಕಟಾಕ್ಷ-ವಿಲಾಸಗಳು. ಅಂತಹ ಕೃಷ್ಣನು ನನ್ನತ್ತ ಬರುತ್ತಲೇ ವಿಲಾಸ-ಮುರಳಿಯ ನಾದಾಮೃತವನ್ನು ಸುರಿಸುತ್ತಿದ್ದಾನೆ. ಆ ಅಮೃತಕ್ಕಾಗಿ ಹಾತೊರೆಯುವ ನನ್ನ ಎರಡೂ ಕಿವಿಗಳು ಆ ಅಮೃತದ ಸೇಕವನ್ನು  ನಿಮಿರಿ ನಿಂತು ಆಸ್ವಾದಿಸುತ್ತಿವೆ. ಸುಖಾಂಕುರವನ್ನು ಹೊರಡಿಸತಕ್ಕವು, ಆತನ ಕೇಲಿಕಟಾಕ್ಷಗಳು. ನನ್ನ ನೇತ್ರ-ಶ್ರೋತ್ರಗಳನ್ನು ಆವರಿಸಿಕೊಂಡಿದ್ದಾನೆ, ಶ್ರೀಕೃಷ್ಣ – ಎಂಬುದು ಒಟ್ಟಿನ ತಾತ್ಪರ್ಯ.

ಶ್ಲೋಕ ಹೀಗಿದೆ:

ಸೋಽಯಂ ವಿಲಾಸ-ಮುರಲೀ-ನಿನದಾಮೃತೇನ/

ಸಿಂಚನ್ ಉದಂಚಿತಂ ಇದಂ ಮಮ ಕರ್ಣಯುಗ್ಮಂ |

ಆಯಾತಿ ಮೇ ನಯನ-ಬಂಧುರ್ ಅನನ್ಯ-ಬಂಧುಃ/

ಆನಂದ-ಕಂದಲಿತ-ಕೇಲಿ-ಕಟಾಕ್ಷ-ಲಕ್ಷ್ಯಃ ||

ಸೂಚನೆ : 14/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.