Sunday, March 30, 2025

ವ್ಯಾಸ ವೀಕ್ಷಿತ 130 ಮಂದಪಾಲನ ಕಥೆ (Vyaasa Vikshita 130)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಮಂದಪಾಲನ ಕಥೆ

ಅಶ್ವಸೇನ ಹಾಗೂ ಮಯ - ಇವರಿಬ್ಬರನ್ನು ಅಗ್ನಿಯು ಸುಡದಿರಲು ಕಾರಣವನ್ನು ಹೇಳಿದ್ದಾಗಿದೆ. ಈ ಶಾರ್ಙ್ಗಕಗಳನ್ನು ಸುಡದಿರಲು ಕಾರಣವೇನು? ಅದಕ್ಕೊಂದು ಹಿನ್ನೆಲೆಯಿದೆ.

ಧರ್ಮಜ್ಞರಲ್ಲಿ ಅತ್ಯಂತ ಮುಖ್ಯನೂ ಉಗ್ರವ್ರತಗಳನ್ನಾಚರಿಸುವವನೂ ಆದ ಮಹರ್ಷಿಯೊಬ್ಬನಿದ್ದ. ಆತನ ಹೆಸರು ಮಂದಪಾಲ. ಆತನು ಊರ್ಧ್ವರೇತಸ್ಕರಾದ ಋಷಿಗಳ ಮಾರ್ಗವನ್ನು ಹಿಡಿದವನು, ಅರ್ಥಾತ್ ಬ್ರಹ್ಮಚರ್ಯವ್ರತವನ್ನು ಅತ್ಯಂತ ನಿಷ್ಠೆಯಿಂದ ಪಾಲಿಸತಕ್ಕವನು. ಸ್ವಾಧ್ಯಾಯನಿರತನೂ ಇಂದ್ರಿಯಜಯವನ್ನು ಸಂಪಾದಿಸಿರುವವನೂ ಆದವನು. ಧರ್ಮರತನಾದ ಆತ ತನ್ನ ತಪಸ್ಯೆಯನ್ನು ಪೂರೈಸಿದನು.

ತಪಸ್ಸಿನ ಪಾರವನ್ನು ಮುಟ್ಟಿ ಪಿತೃಲೋಕಕ್ಕೆ ಹೋದನು. ಆದರೆ ಮಂದಪಾಲನಿಗೆ ಅದರ ಫಲವೇನೂ ದೊರೆಯಲಿಲ್ಲ. ಆಗ ಯಮಧರ್ಮರಾಜನ ಸಮೀಪದಲ್ಲಿದ್ದ ದೇವತೆಗಳನ್ನು ಆತನು ಕೇಳಿದನು: "ತಪಸ್ಸಿನಿಂದ ನಾನು ಸಂಪಾದಿಸಿರುವ ಈ ಲೋಕಗಳು ಮುಚ್ಚಿರುವುವೇಕೆ? ಮಾಡಬೇಕಾದದ್ದನ್ನು ಏನನ್ನೋ ನಾನು ಮಾಡಿಲ್ಲವೆಂಬ ಕಾರಣದಿಂದಾಗಿ ನನಗೀ ಫಲವೇ? ಯಾವ ಕಾರಣಕ್ಕಾಗಿ ಇವು ನನ್ನ ಪಾಲಿಗೆ ಮುಚ್ಚಿಹೋಗಿವೆಯೋ ಅದಕ್ಕೆ ಪ್ರತಿಯಾಗಿ ನಾನು ಮಾಡಬೇಕಾದದ್ದನ್ನು ಸೂಚಿಸಿರಿ, ನಾ ಮಾಡುವೆ" ಎಂದು.

ಅದಕ್ಕೆ ದೇವತೆಗಳು ಹೇಳಿದರು :

"ಯಾವ ಋಣವನ್ನಿಟ್ಟುಕೊಂಡು ಮನುಷ್ಯರು ಜನಿಸುವರೆಂಬುದನ್ನು ತಿಳಿದುಕೋ. ಯಜ್ಞಕ್ರಿಯೆಗಳು, ಬ್ರಹ್ಮಚರ್ಯ ಹಾಗೂ ಸಂತಾನೋತ್ಪತ್ತಿ - ಈ ಮೂರರ ನಿಮಿತ್ತ ಮನುಷ್ಯರೆಲ್ಲರೂ ಋಣಿಗಳಾಗಿರುತ್ತಾರೆ. ಯಜ್ಞಕಾರ್ಯ, ತಪಸ್ಸು ಹಾಗೂ ವೇದಾಧ್ಯಯನ - ಇವುಗಳಿಂದ ಆ ಋಣಗಳನ್ನು ಪರಿಹರಿಸಿಕೊಳ್ಳುವುದಾಗುತ್ತದೆ. ನೀನು ತಪಸ್ವಿ ಹೌದು, ಯಜ್ಞಗಳನ್ನು ಮಾಡಿರುವೆ ಹೌದು. ಆದರೆ ನಿನಗೆ ಸಂತಾನವಿಲ್ಲ. ಆ ಕಾರಣಕ್ಕಾಗಿಯೇ ಈ ಲೋಕಗಳು ನಿನಗಿಲ್ಲವಾಗಿವೆ. ಆದುದರಿಂದ ಮೊದಲು ಸಂತಾನವನ್ನು ಪಡೆಯುವೆಯಾದರೆ ಈ ಲೋಕಗಳನ್ನು ಯಥೇಚ್ಛವಾಗಿ ಭೋಗಿಸಬಹುದು. 'ಪುತ್' ಎಂಬ ಹೆಸರಿನ ನರಕವುಂಟು. ಅದರ ದೆಸೆಯಿಂದ, ಎಂದರೆ ಅಲ್ಲಿ ಹೋಗದಂತೆ ಆಗಿಸಲೋಸುಗ, ಕಾಪಾಡತಕ್ಕವನು ಯಾರೋ ಆತನನ್ನೇ 'ಪುತ್ರ' (ಪುತ್+ತ್ರ) ಎನ್ನುವುದು - ಎನ್ನುತ್ತದೆ ಶ್ರುತಿ. ಆದ್ದರಿಂದ, ನೀನು ಸಂತಾನಪ್ರಾಪ್ತಿಗಾಗಿ ಯತ್ನಿಸಬೇಕು, ವಿಪ್ರಶ್ರೇಷ್ಠನೇ" - ಎಂದರು.

ದೇವತೆಗಳ ಆ ಮಾತನ್ನು ಮಂದಪಾಲನು ಆಲಿಸಿದನು. ಹಾಗಿದ್ದರೆ ನನಗೆ ಬೇಗನೆ ಬಹುಮಂದಿ ಮಕ್ಕಳಾಗಬೇಕು, ಎಲ್ಲಿ ನನಗಿದು ಸಾಧ್ಯ? - ಎಂಬುದಾಗಿ ಆಲೋಚಿಸಿದನು. ಹಾಗೆ ಯೋಚಿಸುತ್ತಾ ನಡೆದು ಕಂಡದ್ದು ಅನೇಕ ಸಂತಾನಗಳನ್ನು ಹೊಂದಿದ್ದ ಪಕ್ಷಿಗಳನ್ನು. ಅವುಗಳಂತೆಯೇ ತಾನೂ ಒಂದು ಶಾರ್ಙ್ಗಕಪಕ್ಷಿಯಾದನು. "ಜರಿತಾ" ಎಂಬ ಹೆಸರಿನ ಶಾರ್ಙ್ಗಿಕಾಪಕ್ಷಿಯೊಂದರೊಂದಿಗೆ ಸಂಬಂಧವನ್ನು ಬೆಳೆಸಿದನು. ಅವಳಲ್ಲಿ ಬ್ರಹ್ಮವಾದಿಗಳಾಗುವ ನಾಲ್ಕು ಮಕ್ಕಳನ್ನು ಪಡೆದನು. ಇನ್ನೂ ಮೊಟ್ಟೆಯೊಳಗೇ ಇದ್ದ ಅವರೆಲ್ಲರನ್ನೂ, ಜೊತೆಗೆ ಅವರ ತಾಯಿಯನ್ನೂ, ತೊರೆದು ಆತನು ಮುಂದಕ್ಕೆ ಸಾಗಿ, ಲಪಿತಾ ಎಂಬುವಳಲ್ಲಿಗೆ ಹೋದನು.

ಲಪಿತೆಯ ಬಳಿ ಸಾಗಿದ ಬಳಿಕ, ತನ್ನ ಸಂತಾನದ ಬಗ್ಗೆ ಅತ್ಯಂತ ವಾತ್ಸಲ್ಯಭಾವದಿಂದ ಕೂಡಿದ್ದ ಜರಿತೆಯು ಬಹಳವೇ ಚಿಂತೆಗೀಡಾದಳು. ಋಷಿಗಳಾದ ಆ ಮಕ್ಕಳು ತ್ಯಾಜ್ಯರಾಗಿರಲಿಲ್ಲವಾದರೂ ಅವನ್ನು ಮಂದಪಾಲನು ತೊರೆದಿದ್ದನಾದರೂ ತಾಯಿಯಾದ ಜರಿತೆಯು ತೊರೆಯಲಿಲ್ಲ. ಆ ಖಾಂಡವದಲ್ಲಿಯೇ ಇದ್ದುಕೊಂಡು, ಸಂಜಾತರಾದ ಆ ಮಕ್ಕಳನ್ನು ಸ್ನೇಹ ತುಂಬಿದ್ದ ಆಕೆಯು ತಾನೇ ಪಾಲಿಸಿ ಪೋಷಿಸಿದಳು.

ಲಪಿತೆಯೊಡನೆ ಸಂಚರಿಸುತ್ತಿದ್ದ ಆ ಮಂದಪಾಲ ಮುನಿಯು, ಖಾಂಡವವನ್ನು ಸುಡಲೆಂದು ಬರುತ್ತಿದ್ದ ಅಗ್ನಿಯನ್ನು ಕಂಡನು. ಅಗ್ನಿಯ ಸಂಕಲ್ಪವನ್ನು ಅರಿತುಕೊಂಡನು.

ಸೂಚನೆ : 30/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 9 (Prasnottara Ratnamalike 9)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೯. ಯಾವುದು ವಿಷ ?

ಉತ್ತರ - ಗುರುಜನರ ಬಗ್ಗೆ ತಿರಸ್ಕಾರ.

ಪ್ರಸ್ತುತ ಪ್ರಶ್ನೆ ಇದಾಗಿದೆ - ಯಾವುದು ವಿಷ? ಎಂಬುದು? ಪ್ರಶ್ನೆಯ ಅರ್ಥ ಹೀಗಿದೆ ಎಂಬುದಾಗಿ ಭಾವಿಸ ಬಹುದು. ವಿಷ ಎಂದರೆ ವಿಷಮ. ಅಥವಾ ಫಲಸಾಧನೆಗೆ ಯಾವುದು ವಿಘ್ನವನ್ನು ಉಂಟುಮಾಡುವ ವಿಷಯವಾಗಿದೆಯೋ ಅಥವಾ ಉದಿಷ್ಟವಾದ ಪ್ರಯೋಜನಕ್ಕೆ ಯಾವುದು ಪ್ರತಿಬಂಧಕವೋ ಸಾಮಾನ್ಯವಾಗಿ ಅದನ್ನು 'ವಿಷ ಎಂಬುದಾಗಿ ಕರೆಯಬಹುದು ವಿಷವು ವಿಷಮತೆಯನ್ನು ಉಂಟುಮಾಡುತ್ತದೆ. ಯಾವುದೋ ಒಂದು ಇರುವ ಸ್ಥಿತಿಯನ್ನು ಕೆಡಿಸುತ್ತದೆ. ಧರ್ಮವನ್ನು ಕೆಡಿಸುತ್ತದೆ. ಹೀಗೆ ಕೆಡಿಸುವ ಸ್ವಭಾವವುಳ್ಳದ್ದು ವಿಷ ಎಂದರ್ಥ. ವಿಷವನ್ನು ಪಡೆದವನು ಸ್ವಸ್ಥವಾಗಿ ಇರಲು ಸಾಧ್ಯವೇ? ವಿಷವನ್ನು ಸೇವಿಸುತ್ತಾ ಸೇವಿಸುತ್ತಾ ವ್ಯಕ್ತಿಯ ಬಾಳೇ ನಾಶದತ್ತ ಸಾಗುತ್ತದೆ. ಪ್ರಗತಿ ಅಲ್ಲಿ ಸಾಧ್ಯವಾಗುವುದಿಲ್ಲವಷ್ಟೆ. 


ಪ್ರಸ್ತುತ ಪ್ರಶ್ನೆಯು ಬಾಳಿನ ವಿಷಮತೆಗೆ ಕಾರಣವನ್ನು ಕೇಳುತ್ತಿದೆ. ವಿಷ ಯಾವುದು ಎಂಬುದಕ್ಕೆ ಪ್ರಶ್ನೆಗೆ, ಗುರುಜನರ ಬಗ್ಗೆ ತಿರಸ್ಕಾರ, ಅಂದರೆ ಗುರು ಜನರ ವಿಷಯದಲ್ಲಿ ತೋರಿಸಲೇಬೇಕಾದ ಗೌರವ, ಆದರ, ಸತ್ಕಾರ, ಪ್ರೀತಿ, ಶ್ರದ್ಧೆ ಇತ್ಯಾದಿ ಸಂಗತಿಗಳನ್ನು ತೋರಿಸದಿರುವಿಕೆ ಎಂದರ್ಥ. ಇಲ್ಲಿ ಗುರುಜನ ಎಂದರೆ ತಂದೆ, ತಾಯಿ, ಕಲಸಿದ ಗುರು, ಶಿಕ್ಷಕ, ಅತಿಥಿ,  ಜ್ಞಾನವೃದ್ಧರು ಅಥವಾ ವಯೋವೃದ್ಧರು, ದುಃಖಿತರು, ದೀನಜನರು ದಯೆಗೆ - ಕಾರುಣ್ಯಕ್ಕೆ ಯೋಗ್ಯರಾದವರು, ಅನುಭವದಲ್ಲಿ ಮತ್ತು ವಿದ್ಯೆಯಲ್ಲಿ ನಮಗಿಂತ ದೊಡ್ಡವರು ಇವರೆಲ್ಲರನ್ನು ಸತ್ಕರಿಸುವುದು, ಆದರಿಸುವುದು ಅತ್ಯಂತ ಅವಶ್ಯಕ ಮತ್ತು ಆದ್ಯಕರ್ತವ್ಯ. ತಂದೆತಾಯಿ ವೃದ್ಧರಾಗಿದ್ದಾಗ ಅವರಿಗೆ ನೋವುಂಟಾಗದಂತೆ ವರ್ತಿಸುವುದು, ವಿದ್ಯೆಯನ್ನು ಪಡೆದ ಗುರುವಿನಲ್ಲಿ ಕೃತಜ್ಞತಾಭಾವವನ್ನು ಇಟ್ಟುಕೊಳ್ಳುವುದು, ವೃದ್ಧರಲ್ಲಿ ಸಂದರ್ಭವನ್ನು ಅರಿತು ವರ್ತಿಸುವುದು, ವೃದ್ಧರನ್ನು, ರೋಗಿಗಳ ಶುಶ್ರೂಷೆ ಮಾಡುವುದು. ಇಂತಹ ಅನೇಕ ನಡವಳಿಕೆಗಳಿಂದ ಗುರುಹಿರಿಯರ ಪ್ರೀತಿಗೆ ಆತ ಪಾತ್ರನಾಗುತ್ತಾನೆ. ಇದನ್ನು ಮಾಡದಿರುವವನು ಅವನ ಜೀವನಕ್ಕೆ ವಿಷಮತೆಯನ್ನು ತಂದುಕೊಳ್ಳುತ್ತಾನೆ ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ. 

ಒಬ್ಬ ವ್ಯಕ್ತಿ ಯಾವ ಉತ್ತಮವಾದ ಜೀವನವನ್ನು ಸಾಗಿಸಬೇಕಾಗಿದೆಯೋ, ಅದಕ್ಕೆ ಅನೇಕ ರೀತಿಯ ಸಾಧನಸಾಮಗ್ರಿಗಳು, ಪೋಷಕ ಅಂಶಗಳು ಬೇಕಾಗುತ್ತವೆ. ಆ ಎಲ್ಲಾ ಅಂಶಗಳು ವೃದ್ಧರ, ಹಿರಿಯರ, ಗೌರವಕ್ಕೆ ಅರ್ಹರಾದವರನ್ನು ಪುರಸ್ಕರಿಸುವುದರಿಂದ ಪಡೆಯಬಹುದು. ಅವರನ್ನು ತಿರಸ್ಕರಿಸುವುದರಿಂದ ಅವರಿಂದ ನಮ್ಮ ಬಾಳಿಗೆ ಸಿಗಬೇಕಾದ ಪೋಷಕ ವಿಚಾರಗಳು ಅಲಭ್ಯವಾಗುವವು. ಅವರನ್ನು ಹೇಗೆ ನೋಡಿಕೊಳ್ಳಬೇಕು? ಎಂಬುದರ ಬಗ್ಗೆ ವಿವೇಕದ ಅವಶ್ಯಕತೆ ಇದೆ; ಒಂದು ಸಾಮಾನ್ಯಜ್ಞಾನದ ಅವಶ್ಯಕತೆ ಇದೆ;. ಸತ್ಕರಿಸುವುದು ಪೂಜಿಸುವುದು ಎಂದರೆ ದೇವರ ಪೂಜೆಯನ್ನು ಮಾಡಿದಂತೆ ಗಂಧ ಪುಷ್ಪ ಅಕ್ಷತಾ ಇವುಗಳನ್ನು ಸಮರ್ಪಿಸುವುದು ಎಂದರ್ಥವಲ್ಲ. ಯಾರನ್ನು ಹೇಗೆ ನೋಡಿಕೊಳ್ಳಬೇಕು ಹಾಗೆ ನೋಡಿಕೊಳ್ಳುವುದು. ಅದೇ ಅವರಿಗೆ ಸಲ್ಲಿಸುವ ಗೌರವ ಅಥವಾ ಪುರಸ್ಕಾರವಾಗಿರುತ್ತದೆ. "ಜ್ಞಾನದ ಕಡೆಗೆ ಒಯ್ಯುವ ಜಾಗಕ್ಕೆ ಬಗ್ಗಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಸ್ಮರಣೀಯ. ಹಾಗೆ ಅಂತಹ ಸ್ಥಾನಕ್ಕೆ ಗೌರವವನ್ನು ಸಲ್ಲಿಸದಿದ್ದರೆ ಅದೇ ತಿರಸ್ಕಾರವಾಗುತ್ತದೆ. ಹಾಗಾದಾಗ ಜೀವನವು ವಿಷಮತೆಗೆ ಸಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಾನವನೂ ಗುರುಹಿರಿಯರಿಗೆ ಗೌರವಾದರಗಳನ್ನು ಸಮರ್ಪಿಸಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 30/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 78 ನಷ್ಟೋ ಮೋಹಃ ಸ್ಮೃತಿರ್ಲಬ್ಧಾ Ashtakshari 78

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಮೋಹ ಕಳೆಯಿತು, ಸ್ಮರಣೆ ಒದಗಿತು

ಗೀತೆಯು ಕೃಷ್ಣ-ಅರ್ಜುನರ ಸಂವಾದದ ರೂಪದಲ್ಲಿದೆ  - ಎಂಬುದನ್ನು ಎಲ್ಲರೂ ಬಲ್ಲರೇ. ಅವರಿಬ್ಬರಲ್ಲಿ ಅರ್ಜುನನು ಪ್ರಚ್ಛಕ - ಎಂದರೆ ಪ್ರಶ್ನೆಯನ್ನು ಕೇಳುವವನು. ಮತ್ತು ಕೃಷ್ಣನು ಬೋಧಕ - ಎಂದರೆ ಬೋಧವನ್ನು ಉಂಟುಮಾಡತಕ್ಕವನಷ್ಟೆ?

ಎರಡನೆಯ ಅಧ್ಯಾಯದ ಆರಂಭದಲ್ಲಿ ಕೃಷ್ಣನೇ ಪ್ರಶ್ನೆ ಕೇಳಿದನಲ್ಲವೇ - "ಎಲ್ಲಿಂದ ಬಂದೊದಗಿತಯ್ಯಾ ಅರ್ಜುನಾ, ನಿನಗೀ ಕಶ್ಮಲ? - ಅದೂ ಈ ವಿಷಮ-ಪರಿಸ್ಥಿತಿಯಲ್ಲಿ!" - ಎಂದು? ಉತ್ತರಕ್ಕೋಸ್ಕರವಾಗಿ ಕೇಳಿದ ಪ್ರಶ್ನೆಯಲ್ಲ ಅದು; ಅರ್ಜುನನ ಮನಃಸ್ಥಿತಿಗೆ ಮರುಗಿದ ಮನೋವೈದ್ಯನ ಮಾತದು.

ಕಶ್ಮಲ ಅಥವಾ ಕಲ್ಮಷವೆಂದರೆ ಕೊಳಕು. ದೈಹಿಕವಾದ ಕೊಳಕು ಮಾತ್ರವೇ ಕಶ್ಮಲವೇ? ಮನೋಬುದ್ಧಿಗಳ ಕೊಳಕೂ ಕಶ್ಮಲವೇ.

ಇನ್ನು ವಿಷಮವೆಂದರೆ ಇಕ್ಕಟ್ಟಿನ ಘಟ್ಟ: ಪಾಂಡವರಿಗೆ ಕೌರವರೆಸಗಿದ ವರ್ಷಗಟ್ಟಲೆಯ ಅಪಕಾರ-ಅಧರ್ಮಗಳು ತೀರ್ಮಾನವಾಗುವ ಮುಖ್ಯಘಟ್ಟ. ಪ್ರಾಣತ್ಯಾಗಕ್ಕೂ ಸಿದ್ಧರಾಗಿರುವ ಸಹಸ್ರಾರು ಮಂದಿಯ ಅಳಿವು-ಉಳಿವುಗಳ ಘಟ್ಟ. ಇಂತಹ ಘಟ್ಟದಲ್ಲಿರಬೇಕಾದದ್ದೇ ಕಾರ್ಯ-ಸ್ಪಷ್ಟತೆ, ಬುದ್ಧಿಯ ತಿಳಿ.

ತಿಳಿವಿನಿಂದ ಕೂಡಿದ ಅಳಕೆಯೇ ತಿಳಿವಳಕೆ - ಎಂಬ ನೂತನ-ಶಬ್ದವನ್ನೂ ಹಾಗೂ ಅದರ ಸುಂದರ-ವ್ಯುತ್ಪತ್ತಿಯನ್ನೂ ಶ್ರೀರಂಗಮಹಾಗುರುಗಳು ಕೊಟ್ಟಿದ್ದಾರೆ. ರೂಢಿಯಲ್ಲಿರುವ ಪದ ತಿಳುವಳಿಕೆ ಎಂಬುದು. ಆದರೆ ಅರಿವನ್ನು ಆಧರಿಸಿದ ಅಳತೆ - ಎಂಬ ಭಾವವೇ ಇಂತಹೆಡೆಗಳಲ್ಲಿ ಸುಸಂಗತವೆನಿಸುವುದರಿಂದ, ತಿಳುವಳಿಕೆ ಎಂಬುದಕ್ಕಿಂತ, ತಿಳಿವಳಕೆಯೆಂಬ ಪದವೇ ಹೆಚ್ಚು ಸಮಂಜಸ. ರೂಢವಾದ ಪದಗಳಿದ್ದರೂ ಅನ್ವರ್ಥವಾದ ಪದಗಳೇ ಭಾಷೆಗೆ ಭೂಷಣವೆನಿಸುವುದು. ಇರಲಿ.
ಅರ್ಜುನನಿಗೆ ಬಂದಿರುವ ಕಶ್ಮಲವೇನು? ಮತ್ತು ಅದು ಕಶ್ಮಲವೇ - ಎಂಬ ತೀರ್ಮಾನವು ಹೇಗೆ? - ಎಂಬುದನ್ನರಿತುಕೊಳ್ಳಬೇಕು. ಅದರ ಫಲದಿಂದಲೇ ಅದನ್ನು ಅಳೆದುಕೊಳ್ಳಬಹುದು - ಎಂಬ ಸೂಚನೆಯೂ ಕೃಷ್ಣನ ಮಾತಿನಲ್ಲೇ ಇದೆ.

ಯಾವುದು ಅಕೀರ್ತಿಕರವೋ, ಎಂದರೆ ಅಪಕೀರ್ತಿಯನ್ನು ಉಂಟುಮಾಡುವುದೋ ಅದು ಕಶ್ಮಲವೇ ಸರಿ. ಯಾವುದು ಅಸ್ವರ್ಗ್ಯವೋ, ಎಂದರೆ ಸ್ವರ್ಗಪ್ರಾಪ್ತಿಗೆ ಯಾವುದು ಪ್ರತಿಕೂಲ(ವಿರುದ್ಧ)ವೋ, ಅದೂ ಕಶ್ಮಲವೇ.

ಕ್ಷತ್ರಿಯರಿಗೆ ಬೇಕಾದುದು ಇವೆರಡೇ. ಯುದ್ಧದಲ್ಲಿ ಜಯಸಿಕ್ಕರೊದಗುವ ಕೀರ್ತಿ, ಸತ್ತರೆ ವೀರಸ್ವರ್ಗ.

ಅರ್ಜುನನಿಗುಂಟಾಗಿರುವ ಚಿತ್ತಕಲ್ಮಷವು ಹೀಗೆ ಇಹಕ್ಕೂ ಪರಕ್ಕೂ ಘಾತಕವಾದದ್ದು, ಎಂದರೆ ಹೊಡೆತಕೊಡುವಂತಹುದು, ಹಾಳುಗೆಡವುವಂತಹುದು. ("ಘಾತುಕ"ವಲ್ಲ.) ಯಾವುದರಿಂದ ಇಹದಲ್ಲಿ ಅಭ್ಯುದಯವೂ ಪರದಲ್ಲಿ ನಿಃಶ್ರೇಯಸವೂ ಲಭಿಸುವುದೋ ಅದನ್ನೇ ಆರ್ಯರು ಮಾಡುವುದು. ಅದನ್ನೇ ಆರ್ಯಜುಷ್ಟವೆನ್ನುವುದು. ಇಹಪರಗಳಿಗೊದಗದ್ದು ಅನಾರ್ಯಜುಷ್ಟ. ಕರ್ತವ್ಯವನ್ನು ಮಾಡತಕ್ಕವನು ಆರ್ಯ; ಅಕಾರ್ಯವನ್ನು ಮಾಡದಿರುವವನು ಆರ್ಯ. ಎರಡಕ್ಕೂ ವಿರೋಧವಾಯಿತು ಅರ್ಜುನನ ನಡೆ.

ಇದು ಕಶ್ಮಲ - ಎಂಬುದನ್ನು ಮತ್ತೊಂದು ರೀತಿಯಿಂದಲೂ ಅರಿಯಬಹುದು. ಬುದ್ಧಿಯಲ್ಲಿ ಒಳ್ಳೆಯ ತಿಳಿವಳಕೆಯಿದ್ದಾಗ ಮನಸ್ಸು ಪ್ರಸನ್ನವಾಗಿರುವುದು. ಉತ್ಸಾಹವೂ ತುಂಬಿರುವುದು. ಆದರೆ ಈಗ ಅರ್ಜುನನಿಗೆ ಆಗಿರುವುದೇನು? ಕ್ಲೈಬ್ಯ-ಹೃದಯದೌರ್ಬಲ್ಯಗಳು. ಕ್ಲೈಬ್ಯವೆಂದರೆ ಷಂಡತನ. ರಣಾಂಗಣಸಂದರ್ಭದಲ್ಲಿ ಕ್ಲೈಬ್ಯವೆಂದರೆ ಹೇಡಿತನ.

ಇನ್ನು ಹೃದಯ-ದೌರ್ಬಲ್ಯವೆಂದರೇನು? ಅರ್ಜುನನೇ ಬಿಡಿಸಿ ಹೇಳಿಕೊಂಡುಬಿಟ್ಟಿದ್ದಾನೆ, ಅದನ್ನು: ನನ್ನ ಬಾಯೊಣಗುತ್ತಿದೆ. ಮೈ ನಡುಗುತ್ತಿದೆ. ಬಿಲ್ಲು ಜಾರುತ್ತಿದೆ. ಚರ್ಮ ಸುಡುತ್ತಿದೆ. ಬುದ್ಧಿಭ್ರಮಣೆಯಾದಂತಾಗುತ್ತಿದೆ - ಇತ್ಯಾದಿಯಾಗಿ.

ಶೂರ-ವೀರನೆನಿಸಿದ್ದ ಅರ್ಜುನನಿಗೆ ಜ್ವರ ಬಂದಿರುವುದು ಮೈಗೂ, ಮನೋಬುದ್ಧಿಗಳಿಗೂ.

ಈ ಹಿಂದೆಯೂ ಕೌರವರೊಂದಿಗೆ ಯುದ್ಧವನ್ನಾತ ಮಾಡಿರಲಿಲ್ಲವೇ? "ಇವರನ್ನೆಲ್ಲಾ ಕೊಲ್ಲಬಹುದೇ?" - ಎಂಬ ಪ್ರಶ್ನೆಯು ಆವಾಗಲೂ ಬರಬಹುದಾಗಿತ್ತಲ್ಲವೇ?

ಬುದ್ಧಿಗೆ ಮಂಕು ಕವಿದಾಗ ಹೀಗಾಗುವುದುಂಟು. ಇದನ್ನೇ ಮೋಹವೆನ್ನುವುದು. ಸತ್ತ್ವದಿಂದ ಹರ್ಷೋಲ್ಲಾಸಗಳೂ, ರಜಸ್ಸಿನಿಂದ ರಾಗ-ದ್ವೇಷಗಳೂ, ತಮಸ್ಸಿನಿಂದ ಮೋಹ-ಜಾಡ್ಯಗಳೂ ಉಂಟಾಗುವುವು. ಮೋಹವಾವರಿಸಿತೆಂದರೆ ಮುಖ್ಯೋದ್ದೇಶವೂ ಮರೆಯಾದಂತೆಯೇ.

ಮೋಹಕ್ಕೆ ಮದ್ದು ಅರಿವು. ಅದುವೇ ಸಾಂಖ್ಯಜ್ಞಾನ. ಮರೆವಿಗೆ ಮದ್ದು ಯೋಗವಿದ್ಯೆ. ಅರ್ಜುನನಿಗೆ ಅವೆರಡನ್ನೂ ಕೃಷ್ಣನುಂಟುಮಾಡಿದಾಗಲೇ ಆತನ ಬುದ್ಧಿಯು ಬೆಳಕಾಗುವುದು. ಚಿತ್ತದಲ್ಲಿ ಸ್ಫೂರ್ತಿಯುಕ್ಕುವುದು. ಆಗ ಆತ ಹೇಳಿದುದೇ "ನಷ್ಟೋ ಮೋಹಃ ಸ್ಮೃತಿರ್ಲಬ್ಧಾ" : ಮಂಕಳಿಯಿತು, ನೆನಪೊದಗಿತು – ಎಂದು.

ಶ್ರೀರಂಗಮಹಾಗುರುಗಳು ಹೇಳುವಂತೆ, "ಜ್ಞಾನರೂಪವಾದ ದಿವ್ಯದೃಷ್ಟಿಯನ್ನು ಕೃಷ್ಣನು ಅನುಗ್ರಹಿಸಿದಾಗಲೇ ಅರ್ಜುನನ ಮೋಹವು ಕಳೆದು ಗುಟ್ಟೊಡೆಯಿತು. ಜ್ಞಾನದೀಪದ ನೆನಪುಂಟಾಯಿತು. ಹೀಗಾದಾಗಲೇ ಸಂದೇಹಗಳು ಕಳೆದು, "ನಿನ್ನ ನಿರ್ದೇಶದಂತೆ ವರ್ತಿಸುತ್ತೇನೆ" - ಎಂದು ಅರ್ಜುನನು ಹೇಳುವುದು."

ಅರ್ಜುನನ ಮೋಹನಾಶ-ಸ್ಮೃತಿಪ್ರಾಪ್ತಿಗಳೆರಡಕ್ಕೂ ಶ್ರೀಕೃಷ್ಣಪ್ರಸಾದವೇ ಕಾರಣವಷ್ಟೆ? "ಗೀತೆಯ ಮೊದಲನೆಯ ಅಧ್ಯಾಯವು ವಿಷಾದಯೋಗವಾದರೆ, ಉಳಿದೆಲ್ಲ ಅಧ್ಯಾಯಗಳೂ ಪ್ರಸಾದಯೋಗವೇ!" - ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳಿರುವುದೂ ಅತ್ಯಂತ ಔಚಿತ್ಯಪೂರ್ಣವಾಗಿದೆಯಲ್ಲವೇ?

ಸೂಚನೆ: 30/3//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 57 ಮನವೆಂತೋ ಮಾತಂತೇ ! (Krishakarnamrta 57)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಎಷ್ಟೋ ವೇಳೆ ಯಾವುದೋ ವಿಷಯದಲ್ಲಿ ಮುಳುಗಿರುತ್ತೇವೆ. ಎದುರಿಗೆ ಸಿಕ್ಕವರನ್ನು ಮತ್ತಾವುದೋ ಹೆಸರಿನಿಂದ ಮಾತನಾಡಿಸಿಬಿಡುತ್ತೇವೆ. ಪರಿಣಾಮವಾಗಿ, ನಗೆಗೀಡಾಗುತ್ತೇವೆ.

ಸಾಧಾರಣವ್ಯವಹಾರದಲ್ಲಿ ಇದು ಬರೀ ನಗುವಿಗಾಗಬಹುದು. ಆದರೆ ಒಬ್ಬಳನ್ನು ಬೇರೊಬ್ಬಳ ಹೆಸರಿನಿಂದ ಸಂಬೋಧಿಸಿಬಿಟ್ಟರೆ, ಕಥೆ ಮುಗಿಯಿತು. ಸ್ತ್ರೀಯರಲ್ಲಿ ಕೆಲಸಮಾಡುವಷ್ಟು ಪ್ರಬಲವಾಗಿ ಗಂಡಸರಲ್ಲಿ ಕೆಲಸಮಾಡುವುದಿಲ್ಲವೋ ಏನೋ, ಅಸೂಯೆಯೆಂಬುದು. ಕೃಷ್ಣನಿಗೇ ಹಾಗೊಮ್ಮೆ ಆಯಿತಂತೆ. ರಾಧೆಯ ಸುಂದರ-ಗೃಹದಿಂದ ಹಿಂದಿರುಗಿಬರುತ್ತಿರುವಾಗ, ದಾರಿಯಲ್ಲಿ ಚಂದ್ರಾವಳಿಯೆಂಬ ಗೋಪಿಕೆ ಎದುರಾದಳು. ಆದರೆ ರಾಧೆಯ ಗುಂಗಿನಲ್ಲೇ ಇದ್ದ ಕೃಷ್ಣ, ಚಂದ್ರಾವಳಿಯನ್ನು ಕುರಿತು, "ರಾಧೆಯೇ, ಕ್ಷೇಮವೇ?" ಎಂದ.

ಪ್ರೀತಿಯಿಂದಿರುವ ಒಬ್ಬ ನಾರಿಗೆ ತುಂಬ ಕೋಪ ಬರಿಸುವ ವಿಷಯವೆಂದರೆ ಅವಳನ್ನು ಬೇರೊಬ್ಬಳ ಹೆಸರಿನಿಂದ ಕರೆಯುವುದು. ಯಾರ ಹೆಸರು ಬಾಯಲ್ಲಿ ಬಂದಿತೋ ಅವರಲ್ಲಿಯೇ ಅನುರಕ್ತಿ ಹೆಚ್ಚಿದೆಯೆಂಬ ಶಂಕೆಯು ಆಗ ಉಕ್ಕುವುದು. ಅನುರಕ್ತಿಯೆಂದರೆ ಅನುರಾಗವೇ. ಪ್ರೇಮವನ್ನು ಹಂಚಿಕೊಳ್ಳುವುದೇನು ಸುಲಭವೇ? ಕೃಷ್ಣನಿಗಾದರೂ ಹೆಂಗೆಳೆಯರೇನು ಕಡಿಮೆಯೇ? ಅವರಲ್ಲಿ ಪ್ರತಿಯೊಬ್ಬರಿಗೂ ತಾನೇ ಕೃಷ್ಣನಿಗೆ ಅಚ್ಚುಮೆಚ್ಚು - ಎಂಬ ಭಾವನೆ. ಕೃಷ್ಣನೇನೂ ಒಬ್ಬರಿಗೆ ನೋವಾಗುವಂತೆ ಮತ್ತೊಬ್ಬರೊಂದಿಗೆ ವರ್ತಿಸುವವನಲ್ಲ. ಅದು ಇತ್ತ ಆತನ ವ್ಯವಹಾರಕುಶಲತೆಯೂ ಹೌದು, ಅತ್ತ ಸರ್ವಜೀವ-ಸಮಾನಪ್ರೀತಿಯ ಸುಲಕ್ಷಣವೂ ಹೌದು.

ಯಾರೇ ಆದರೂ ಒಮ್ಮೊಮ್ಮೆ, ಬಹಳ ಅಪರೂಪವಾಗಿಯಾದರೂ, ಸಣ್ಣ ತಪ್ಪೊಂದನ್ನು ಮಾಡಿದರೆ ಆಶ್ಚರ್ಯವಿಲ್ಲ; ಆದರೆ ಇಂತಹ ತಪ್ಪು ಮಾತ್ರ ಕೆರಳಿಸುವಂತಹುದೇ. ಅಂತೂ ಇಲ್ಲಾಗಿರುವುದು ಹಾಗೆಯೇ. ನಾರಿಯರಿಗೆ ವಾಕ್-ಚಾತುರ್ಯವೆಂಬುದು ಹೇಳಿಕೊಟ್ಟು ಬರಬೇಕಾದುದಿಲ್ಲ. ಅದು ಅವರಿಗೆ ಸಹಜವಾಗಿ ಸ್ಫುರಿಸುವಂತಹುದು. ಇದನ್ನು "ಅಶಿಕ್ಷಿತ-ಪಟುತ್ವ"ವೆನ್ನುವರು. ಎಂದರೆ ಶಿಕ್ಷಣ ಕೊಟ್ಟಿಲ್ಲದೆಯೂ ಬಂದಿರುವ ಪಟುತ್ವ. ಎಂದೇ ಚಂದ್ರಾವಳಿಯು ಕೃಷ್ಣನ ಮೇಲೆ ಕೆಂಡವಾಗುವುದರ ಬದಲು, ಅದೇ ಧಾಟಿಯಲ್ಲಿ, "ಕಂಸನೇ, ನೀ ಕ್ಷೇಮವೇ?" ಎಂದು ಚೆನ್ನಾಗಿಯೇ ಚುಚ್ಚಿ ಕೇಳಿದಳು.

ಇದೇನಿವಳಿಗೆ ಇಂತಹ ಭ್ರಮೆ? ನಾನೆಲ್ಲಿ ಕಂಸನೆಲ್ಲಿ? - ಎಂದೆನಿಸಿತು ಕೃಷ್ಣನಿಗೆ. "ಅಯ್ಯೋ ಮುಗ್ಧೇ, ಕಂಸನನ್ನೆಲ್ಲಿ ಕಂಡೆ?" - ಎಂದು ಕೇಳಿದ. ಅದಕ್ಕವಳು, "ರಾಧೆಯೆಲ್ಲಿ?" ಎಂದು ಕೇಳಿಯೇಬಿಟ್ಟಳು. ನಾಚಿಕೆಯಾಯಿತು, ಕೃಷ್ಣನಿಗೆ. ಇನ್ನೇನು ಮಾಡಿಯಾನು? ಪೆಚ್ಚಾಗಿ ಮುಗುಳ್ನಕ್ಕ. ಈ ಪರಿಯ ಹಸಿತದ ಹರಿಯು ಪೊರೆಯಲೆಮ್ಮನು - ಎನ್ನುತ್ತಾನೆ, ಲೀಲಾಶುಕ.

ರಾಧಾಮೋಹನ-ಮಂದಿರಾದುಪಗತಃ ಚಂದ್ರಾವಲೀಮೂಚಿವಾನ್/

"ರಾಧೇ ಕ್ಷೇಮಮಯೇಽಸ್ತಿ?", ತಸ್ಯ ವಚನಂ ಶ್ರುತ್ವಾಽಽಹ ಚಂದ್ರಾವಲೀ |

"ಕಂಸ, ಕ್ಷೇಮಂ?" "ಅಯೇ ವಿಮುಗ್ಧಹೃದಯೇ! ಕಂಸಃ ಕ್ವ ದೃಷ್ಟಸ್ತ್ವಯಾ?"/

"ರಾಧಾ ಕ್ವೇ"ತಿ - ವಿಲಜ್ಜಿತೋ ನತಮುಖಃ ಸ್ಮೇರೋ ಹರಿಃ ಪಾತು ವಃ ||


ಇನ್ನೂ ಸೊಗಸಿನ ಈ ಪದ್ಯದ ಪರಿ ನೋಡಿ. ಈಗ ಕೇವಲ ಐವತ್ತು ವರ್ಷಗಳ ಹಿಂದೆ ಇಂದಿರುವ ಸಂನಿವೇಶವಿರಲಿಲ್ಲ. ಹಾಲು-ಮೊಸರುಗಳೆಂದರೆ ಪ್ಲಾಸ್ಟಿಕ್ ಕವರ್ ಗಳಲ್ಲಿ ಈಗ ಲಭ್ಯ. ಆಗೆಂದರೆ ಗೋಪಾಲಕರಲ್ಲಿಗೆ ನಾವೇ ಪಾತ್ರೆಯನ್ನು ತೆಗೆದುಕೊಂಡು ಹೋಗಿ ಹಾಲನ್ನೋ ಮೊಸರನ್ನೋ ತರುತ್ತಿದ್ದೆವು.

ಆದರೆ ಅದಕ್ಕೂ ಮೊದಲು ಶತಮಾನಗಟ್ಟಲೆ ಇದ್ದ ಸಂನಿವೇಶ ಬೇರೆ. ಮಡಕೆಗಳಲ್ಲಿ ಹೊತ್ತು ಹಾಲನ್ನೋ ಮೊಸರನ್ನೋ ಮಾರುತ್ತಿದ್ದರು. ಇಲ್ಲವೇ ಮನೆಯ ಮುಂದೆಯೇ ಹಸುವನ್ನು ತಂದು, ಮರಕ್ಕೋ ಕಂಬಕ್ಕೋ ಕಟ್ಟಿಹಾಕಿ, ಹಸಿವಿಗೆಂದು ಹಸುವಿಗೆ ಒಂದಷ್ಟು ಮೇವನ್ನು ಹಾಕಿ, ಅದು ಮೇಯುವುದರೊಳಗೆ ಹಾಲನ್ನು ಕರೆದುಕೊಡುವುದಾಗಿತ್ತು. ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಬರೆದಿರುವ ಕಥೆಯೇ ಒಂದುಂಟಲ್ಲವೇ, "ಮೊಸರಿನ ಮಂಗಮ್ಮ" ಎಂದು? ಅಂತೂ ಗೊಲ್ಲತಿಯರು ತಲೆಯ ಮೇಲೆ ಮೊಸರನ್ನೋ ಹಾಲನ್ನೋ ಹೊತ್ತು ಹೋಗುತ್ತ "ಹಾಲೂ, ಮೊಸರೂ…" ಎಂದು ಕೂಗಿಕೊಳ್ಳುತ್ತಾ ಹೋಗುತ್ತಿದ್ದರು. ಅವು ಬೇಕಾದವರು, "ಏ ಹಾಲೂ, ಏ ಮೊಸರೂ" ಎಂದು ಕೂಗಿದರೆ, ಒಂದಷ್ಟು ಮುಂದಕ್ಕೆ ಹೋಗಿದ್ದವರೂ ಹಿಂದಕ್ಕೆ ಬಂದು, ನಮ್ಮ ಪಾತ್ರೆಗೆ ಅದನ್ನು ಹುಯ್ದು ಹೋಗುತ್ತಿದ್ದರು. ಇದು ಹಳ್ಳಿಗಳಲ್ಲೆಂತೋ ಪಟ್ಟಣಗಳಲ್ಲೂ ಅಂತೆಯೇ ಸಾಧಾರಣವಾದ ದೃಶ್ಯವಾಗಿದ್ದಿತು. ಇದು ಲೀಲಾಶುಕನ ಕಾಲಕ್ಕೂ ಅನ್ವಯಿಸುವಂತಹುದೇ. ಇನ್ನೂ ಮೊದಲಿನ ಭಾಗವತ-ಪುರಾಣದ ಕಾಲಕ್ಕೂ ಅನ್ವಯಿಸುವಂತಹುದೇ ಎನ್ನಬಹುದು.

ಅಂತಹ ಕಾಲಕ್ಕೆ ಸಹಜವಾಗಿದ್ದ ಮಧುರ-ಚಿತ್ರಣವೊಂದನ್ನು ಕವಿ ಲೀಲಾಶುಕ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಿದ್ದಾನೆ. ಗೋಪ-ಕನ್ಯೆಯೊಬ್ಬಳು ಹೀಗೆಯೇ ಮೊಸರು ಮೊದಲಾದುವನ್ನು ಮಾರುತ್ತ ಹೋಗುತ್ತಲಿದ್ದಾಳೆ. "ಹಾಲೂ, ಮೊಸರೂ, ಬೆಣ್ಣೇ" - ಎಂದು ಕೂಗುತ್ತ ತಾನೆ ಅವಳು ಹೋಗಬೇಕಾದುದು? ಆದರೆ ನಡೆದುದೇ ಬೇರೆ. ಮುರಾರಿಯ ಪಾದದಲ್ಲೇ ಅವಳ ಚಿತ್ತ-ವೃತ್ತಿ ಅರ್ಪಿತವಾಗಿತ್ತು. ಕೃಷ್ಣನ ಚರಣಗಳಲ್ಲೇ ನೆಲೆಗೊಂಡ ಅವಳ ಮನಸ್ಸು, ಅವಳ ಬಾಯಿಂದ ಬೇರೆ ಮಾತುಗಳನ್ನೇ ಹೊರಡಿಸಿತು. ಮೊಸರೂ-ಹಾಲೂ-ಬೆಣ್ಣೇ - ಎಂಬುದಾಗಿ ಕೂಗಿಕೊಂಡು ಹೋಗುವ ಬದಲು, ಶ್ರೀಕೃಷ್ಣನ ಬಗೆಗೇ ತನ್ನ ಮೋಹ-ವ್ಯಾಮೋಹಗಳು ಆವರಿಸಿತ್ತಾಗಿ, ಬದಲಾಗಿ, ಗೋವಿಂದಾ ದಾಮೋದರಾ ಮಾಧವಾ - ಎಂಬುದಾಗಿ ಕೂಗಿ ಹೇಳಿದಳಂತೆ!

ಈ ಗೊಲ್ಲತಿ ಹೋಗುತ್ತಿದ್ದುದು ವ್ಯಾಪಾರಕ್ಕಾಗಿ. ವ್ಯಾಪಾರ-ವ್ಯವಹಾರಗಳಲ್ಲಿ ಎಚ್ಚರ ಬೇಕಷ್ಟೆ. ಈಕೆಗೆ ಆ ಬಗೆಯ ಎಚ್ಚರ ಸಾಲದೆಂದು ಆಕೆಯನ್ನು ನಿಂದಿಸುವುದಲ್ಲ. ಕೃಷ್ಣನು ಆಕೆಯ ಮನಸ್ಸನ್ನು ಸೂರೆಗೊಂಡಿದ್ದನಾಗಿ, ಆಕೆಯ ಅಂತರಂಗವೆಲ್ಲವೂ ಆ ರಂಗಯ್ಯನ ಚಿಂತನೆಗೇ ತಾಣವಾಗಿತ್ತು. ಚಿತ್ತ-ವೃತ್ತಿಯನ್ನು ಏಕಾಗ್ರಗೊಳಿಸುವುದೇ ಯೋಗವೆನ್ನುತ್ತಾರೆ. ಯೋಗೇಶ್ವರನಾದ ಶ್ರೀಕೃಷ್ಣನ ಪಾದಾರವಿಂದದಲ್ಲೇ ಸಮರ್ಪಣೆಗೊಂಡ ಅವಳ ಚಿತ್ತವೃತ್ತಿಗೆ ಅಲ್ಲೇ ಐಕಾಗ್ರ್ಯ. ಹೀಗಾಗಿ ಮನದೊಳಗಿರುವ ಮುದದ ವಚನವೇ ವದನದಿಂದಾಚೆ ಬಂದಿದೆ. ಮನಸ್ಸಿನಲ್ಲಿ ನೆಲೆಗೊಂಡ ಮುರಾರಿಯ ನೆನಪು ಅವಳನ್ನು ಕಾಡುತ್ತಲೇ ಬಂದಿದೆ. ಮುರಾರಿಯ ನಾಮಾಂತರಗಳೇ ಆದ ಗೋವಿಂದ-ದಾಮೋದರ-ಮಾಧವ-ಗಳನ್ನೇ ಅವಳು ಕೂಗಿ ಹೇಳುತ್ತಿದ್ದಾಳೆ!

ಆ ಗೊಲ್ಲತಿಯ ಮುಗ್ಧತೆಗೆ ಎಣೆಯುಂಟೆ? ಆ ಮುಗ್ಧಾಂಗನೆಯರು ಕೃಷ್ಣನಿಗೆ ಸೋತರೋ, ಅವರಿಗೆ ಕೃಷ್ಣನು ಸೋತನೋ, ಹೇಳಬಲ್ಲವರಾರು? ಅವರು ಓದಿದವರಲ್ಲ, ಶಾಸ್ತ್ರ ತಿಳಿದವರಲ್ಲ. ಆದರೆ ಸರ್ವ-ಶಾಸ್ತ್ರಗಳನ್ನೂ ತಿಳಿದವರಿಗೆ ದೊರೆಯಬೇಕಾದ ಯೋಗ-ಮೂರ್ತಿಯೇ ಅವರಿಗೆ ಕ್ರೀಡಾ-ಮೂರ್ತಿಯಾಗಿ ದೊರೆತಿದ್ದನು. ಎಷ್ಟು ಜನ್ಮಗಳ ಪುಣ್ಯವೋ - ಆ ಮುಗ್ಧ-ಬಾಲೆಯರದು, ಹೇಳುವುದೆಂತು? ಪ್ರಾಸಂಗಿಕವಾಗಿ ಹೇಳುವುದಾದರೆ, ಮುರನೆಂಬ ಅಸುರನನ್ನು ಕೊಂದದ್ದರಿಂದ ಕೃಷ್ಣನಿಗೆ ಮುರಾರಿಯೆಂಬ ಹೆಸರು. ಗೋವುಗಳನ್ನು ಕಾಪಾಡಿದವನು ಗೋವಿಂದ. ಉದರದಲ್ಲಿ ದಾಮವನ್ನು, ಎಂದರೆ ಹಗ್ಗವನ್ನು, ಯಾರಿಗೆ ಕಟ್ಟಿಹಾಕಲಾಗಿತ್ತೋ ಆತನು ದಾಮೋದರ. ಮಾ ಎಂದರೆ ಲಕ್ಷ್ಮಿ; ಅವಳಿಗೆ ಧವನೇ, ಎಂದರೆ ಪತಿಯೇ, ಮಾಧವ. ಅರ್ಥಾತ್ ವಿಷ್ಣು.

ಭಾವ-ಪರವಶತೆಯಿಂದ ಅಂತರಂಗ-ಬಹಿರಂಗಗಳಲ್ಲಿ ರಂಗನನ್ನು ಭಾವಿಸುತ್ತಿದ್ದ ಆ ಗೋಪ-ಕನ್ಯೆಯೇ ಧನ್ಯೆ. ಅವಳೇನು ಗೋವಿಂದನನ್ನೋ ದಾಮೋದರನನ್ನೋ ಮಾಧವನನ್ನೋ ಮಾರತಕ್ಕವಳೇ? ಆತನಿಗಾಗಿ ತನ್ನ ಪ್ರಾಣವನ್ನಾದರೂ ತೆತ್ತಾಳವಳು. ತನ್ನ ಆ ಪ್ರಾಣೇಶನನ್ನು ಬಿಟ್ಟುಕೊಡಲಾರಳು! ಅವಳಂತೆ ಭಗವಂತನನ್ನು ಭಾವಿಸುವಂತಾದರೆ ಇದೋ ನಮ್ಮ ಜೀವನವೂ ಧನ್ಯವಲ್ಲವೇ?

ವಿಕ್ರೇತುಕಾಮಾ ಕಿಲ ಗೋಪಕನ್ಯಾ/

ಮುರಾರಿ-ಪಾದಾರ್ಪಿತ-ಚಿತ್ತ-ವೃತ್ತಿಃ|

ದಧ್ಯಾದಿಕಂ ಮೋಹವಶಾದ್ ಅವೋಚತ್

"ಗೋವಿಂದ ದಾಮೋದರ ಮಾಧವೇ"ತಿ ||

 ಸೂಚನೆ : 29/03/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, March 27, 2025

ಯುಗಾದಿ- ಕಾಲ-ಪರ್ವಗಳ ಅವಿನಾಭಾವಸಂಬಂಧ (Yugadi- Kala-Parvagala Avinabhavasambandha)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪರ್ವ ಕಾಲಾಧಾರಿತ

ಭಾರತೀಯರ ಹಬ್ಬಗಳು ಕಾಲದ ಆಧಾರದಲ್ಲಿಯೇ ಆಚರಿಸಲ್ಪಡುತ್ತವೆ. ಕಾಲಕ್ಕೂ ಹಬ್ಬಕ್ಕೂ ಅವಿನಾಭಾವ ಸಂಬಂಧ ಇದೆ. ಇಂತಹ ಕಾಲದಲ್ಲಿ ಇಂತಹದ್ದೇ ಹಬ್ಬವನ್ನು ಆಚರಿಸಬೇಕೆಂಬ ವಿಧಾನ ಇದೆ. ಕಾಲವೇ ಆ ಹಬ್ಬಕ್ಕೆ ಬೇಕಾದ ಸಂದರ್ಭ - ಸನ್ನಿವೇಶಗಳನ್ನು ಒದಗಿಸಿಕೊಡುತ್ತದೆ. ಹಾಗಾಗಿ ಕಾಲ ಮತ್ತು ಪರ್ವ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾವು ಕಾಲವನ್ನು ಬಿಟ್ಟು ಹಬ್ಬವನ್ನು ಆಚರಿಸಲು ಸಾಧ್ಯವೇ ಇಲ್ಲ. ಭಾರತೀಯರ ಕಾಲಗಣನೆ ಇಂದು ನಿನ್ನೆಯದಲ್ಲ. ಇದನ್ನು ಅಳೆಯುವುದು ಸುಲಭಸಾಧ್ಯವಲ್ಲ. ಏಕೆಂದರೆ ಈ ಕಾಲಗಣನೆ ಎಂದಿನಿಂದ ಆರಂಭವಾಯಿತು? ಭಗವಂತನ ಸೃಷ್ಟಿಯ ಆರಂಭವೇ ಕಾಲದ ಆರಂಭ. ಅಷ್ಟು ಹಿಂದಿನಿಂದ ಈ ಕಾಲದ ಗಣನೆ ಬಂದಿದೆ. ಈ ಕಾಲದ ಆರಂಭವು ಬ್ರಹ್ಮನ ಆಯುಷ್ಯದಿಂದ ಆರಂಭವಾಗಿ, ಸೂಕ್ಷ್ಮಾತಿ ಸೂಕ್ಷ್ಮವಾದ ಕಾಲದವರೆಗೆ ವಿಸ್ತೃತವಾಗಿದೆ. ಇಂತಹ ಕಾಲದ ಘಟ್ಟದ ಆರಂಭವನ್ನು ಸೂಚಿಸುವ ಅತ್ಯಂತ ವಿಶೇಷವಾದ ಪರ್ವವೇ ಯುಗಾದಿ.


ನಾಲ್ಕು ಯುಗಗಳು

ಇಲ್ಲಿ 'ಯುಗಾದಿ' ಎಂದು ಹೆಸರೇ ಹೇಳುವಂತೆ ಈ ಪರ್ವವು ಯುಗದ ಆರಂಭವನ್ನು ತಿಳಿಸುತ್ತದೆ. ಕಾಲದ ಗಣನೆಯಲ್ಲಿ ಕೃತ, ತ್ರೇತ, ದ್ವಾಪರ ಮತ್ತು ಕಲಿ ಎಂಬುದಾಗಿ ನಾಲ್ಕು ಯುಗಗಳನ್ನು ಹೇಳಲಾಗಿದೆ. ಈ ನಾಲ್ಕು ಯುಗಗಳು ಆಗಾಗ ಆವರ್ತನೆಗೊಳ್ಳುತ್ತವೆ. ಒಂದೊಂದು ಯುಗಕ್ಕೂ ನಿರ್ದಿಷ್ಟವಾದ ಕಾಲ ಪರಿಮಾಣವಿದೆ. ಸಾಮಾನ್ಯವಾಗಿ ಕೃತಯುಗಕ್ಕೆ ೧೭೨೮೦೦೦ ವರ್ಷಗಳು, ತ್ರೇತಾಯುಗಕ್ಕೆ ೧೨೯೬೦೦೦ ವರ್ಷಗಳು, ದ್ವಾಪರಯುಗಕ್ಕೆ ೮೬೪೦೦೦ ವರ್ಷಗಳು ಮತ್ತು ಕಲಿಯುಗಕ್ಕೆ ೪೩೨೦೦೦ ವರ್ಷಗಳು ಎಂಬುದಾಗಿ. ಇಂತಹ ನಾಲ್ಕು ಯುಗಗಳು ಸೇರಿ ಒಂದು ಮಹಾಯುಗವಾಗುತ್ತದೆ. ಅಂತಹ ೭೧ ಯುಗಗಳಿಗೆ ಒಂದು ಮನ್ವಂತರವಾಗುತ್ತದೆ. ಒಟ್ಟು ಹದಿನಾಲ್ಕು ಮನ್ವಂತರಗಳಿವೆ. ಹಾಗಾಗಿ ಈ ಯುಗ ಎಂಬುದು ಯಾವುದೋ ಒಂದು ದಿನ ಆರಂಭವಾಗಿದೆ ಅನ್ನುವುದಲ್ಲ. ಇದು ಮತ್ತೆ ಮತ್ತೆ ಪರಿವರ್ತನೆಯಾಗುತ್ತದೆ ಎಂಬುದು ತಾತ್ಪರ್ಯ. ಈ ಹಿನ್ನೆಲೆಯಲ್ಲಿ ನೋಡಿದಾಗ ನಾಲ್ಕು ಯುಗದ ಆರಂಭವನ್ನು ಕಾಲವಿಧಾಯಕ ಶಾಸ್ತ್ರವಾದ ಜ್ಯೋತಿಷ್ಯದಲ್ಲಿ ಹೀಗೆ ಹೇಳಲಾಗಿದೆ. ಕಾರ್ತಿಕ ಶುಕ್ಲ ನವಮಿಯಂದು ಕೃತಯುಗದ ಆರಂಭ, ವೈಶಾಖ ಶುಕ್ಲ ಪಕ್ಷದ ತೃತೀಯಾ ತ್ರೇತಾಯುಗದ ಆರಂಭ, ಮಾಘ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯು ದ್ವಾಪರಾಯುಗದ ಆರಂಭ ಮತ್ತು ಶ್ರಾವಣ ಮಾಸದ ಅಮಾವಾಸ್ಯೆಯು ಕಲಿಯುಗದ ಆರಂಭ ಎಂಬುದಾಗಿ ಯುಗದ ಆರಂಭದ ದಿನಗಳನ್ನು ಹೇಳಲಾಗಿದೆ. ಅಂದರೆ ನಾವು ಈಗ ಈ ಯುಗಾದಿಯನ್ನು ವಸಂತ ಋತುವಿನ ಚೈತ್ರ ಮಾಸದ ಆರಂಭದ ದಿನ ಚಾಂದ್ರಮಾನ ಯುಗಾದಿ ಎಂತಲೂ ಸೌರಮಾಸಗಳಲ್ಲಿ ಮೇಷ ಮಾಸದ ಆರಂಭದ ದಿನವನ್ನು ಸೌರಮಾನ ಯುಗಾದಿ ಎಂಬುದಾಗಿಯೂ ಆಚರಣೆ ಮಾಡುತ್ತೇವೆ. ಚಾಂದ್ರಮಾನ ಯುಗಾದಿ ಎಂಬುದು ಚೈತ್ರಾದಿ ಮಾಸಗಳಿಂದ ಗಣನೆಮಾಡುವ ನೂತನ ವರ್ಷದ ಆರಂಭಕಾಲ. ಸೌರಮಾನ ಯುಗಾದಿ ಎಂಬುದು ಮೇಷಾದಿ ಮಾಸಗಳಿಂದ ಗಣನೆಮಾಡುವ ನೂತನ ವರ್ಷದ ಆರಂಭಕಾಲ. ಹೀಗೆ ಯುಗಾದಿ ಎಂಬುದನ್ನು ನಾವಿಂದು ಆಚರಿಸುತ್ತಿದ್ದೇವೆ. ಯಾವುದೋ ಒಂದು ಕಾಲಘಟ್ಟದಲ್ಲಿ ಈ ಯುಗಾದಿಯು ಚೈತ್ರಮಾಸದ ಶುಕ್ಲಪಕ್ಷದ ಪ್ರತಿಪತ್ ಭಾನುವಾಸರ ಅಶ್ವಿನಿನಕ್ಷತ್ರದಂದೇ ಆರಂಭವಾಗಿತ್ತು. ಕಾಲಾಂತರದಲ್ಲಿ ಅವುಗಳಲ್ಲಿ ವ್ಯತ್ಯಯ ಆಗಿದೆ. ಈಗ ಭಾನುವಾಸರ ಅಥವಾ ಅಶ್ವಿನಿನಕ್ಷತ್ರದಂದೇ ಯುಗಾದಿ ಆರಂಭವಾಗಬೇಕೆಂಬ ನಿಯಮವಿಲ್ಲ. ಮಾಸದ ಮೊದಲ ದಿನವನ್ನು ಯುಗಾದಿಯಾಗಿ ಪರಿಗಣಿಸುತ್ತೇವೆ. ಚಂದ್ರಮಾಸ ಅಥವಾ ಸೌರಮಾಸದ ಆದಿಯನ್ನು ಸಾಮಾನ್ಯವಾಗಿ ಯುಗಾದಿ ಎಂಬುದಾಗಿ ಇಟ್ಟುಕೊಂಡಿದ್ದೇವೆ. ಭಾರತೀಯರ ಕಾಲಗಣನೆಯು ಸೂರ್ಯ ಮತ್ತು ಚಂದ್ರನ ಆಧರಿಸಿ ಇದೆ. ಅದು ಸೂರ್ಯ ಚಂದ್ರರು ಎಷ್ಟು ನಿಖರವೋ ಅಷ್ಟೇ ನಿಖರವಾದದ್ದು ಭಾರತೀಯರ ಕಾಲಮಾನ. ಹಾಗಾಗಿ ಈ ಯುಗಾದಿಯ ಆರಂಭದಲ್ಲಿ ಕಿಂಚಿತ್ತೂ ವ್ತ್ಯಯಯ ಆಗುವುದಿಲ್ಲ. ಇಂತಹ ವಿಶಿಷ್ಟವಾದ ಕಾಲ ಗಣನೆಯ ಆರಂಭವನ್ನು 'ಯುಗಾದಿ' ಎಂಬುದಾಗಿ ಕರೆಯಲಾಗಿದೆ.


ಯುಗಾದಿ ಹಬ್ಬ ಏಕೆ?

ಈ ಯುಗಾದಿಯು ಒಂದು ಹಬ್ಬವಾಗಿದೆ, ಪರ್ವಕಾಲವಾಗಿದೆ. ಯಾವುದೇ ಆರಂಭವೂ ಇನ್ನೊಂದರ ಮುಕ್ತಾಯದ ಸಂಕೇತವಾಗಿರುತ್ತದೆ. ಅಂದರೆ ಒಂದರ ಮುಕ್ತಾಯ ಇನ್ನೊಂದರ ಆರಂಭ. ಭಾನುವಾರ ಮುಕ್ತಾಯ ಎಂದರೆ ಸೋಮವಾರದ ಆರಂಭವಷ್ಟೆ. ಅಶ್ವಿನಿಯ ಮುಕ್ತಾಯವೆಂಬುದು ಭರಣಿಯ ಆರಂಭವಲ್ಲವೇ! ಇದನ್ನೇ ಸಂಧಿಯೆಂದು ಕರೆಯಲಾಗಿದೆ. ಇದನ್ನೇ 'ಪರ್ವ' ಎಂಬುದಾಗಿ ಗುರುತಿಸಿ ಇದು ಅತ್ಯಂತ ಪವಿತ್ರವಾದ ಕಾಲ ಎಂಬುದಾಗಿ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಪರ್ವಕಾಲವು ಭಗವಂತನ ಉಪಾಸನೆ, ಪೂಜೆ, ಧ್ಯಾನ ಮೊದಲಾದ ವಿಷಯಗಳಿಗೆ ಅತ್ಯಂತ ಅನುಕೂಲವಾದದ್ದು ಎಂಬುದು ಜ್ಞಾನಿಗಳ ಅನುಭವದಿಂದ ಮತ್ತು ವೇದ ಶಾಸ್ತ್ರ ಮೊದಲಾದ ಗ್ರಂಥಗಳ ಆಧಾರದಿಂದ  ತೀರ್ಮಾನವಾಗಿದೆ. ಈ ಪರ್ವದಂದು ನಾವು ಹೇಗೆ ಹಬ್ಬವಾಗಿ ಆಚರಿಸುತ್ತಿದ್ದೇವೆ, ಇದರ ಗುಣಲಕ್ಷಣಗಳೇನು ಇತ್ಯಾದಿ ವಿಚಾರಗಳನ್ನು ನಾವು ಚಿಂತಿಸಬೇಕಾಗಿದೆ.


ಸೂಚನೆ: 27/3//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Sunday, March 23, 2025

ಪ್ರಶ್ನೋತ್ತರ ರತ್ನಮಾಲಿಕೆ 8 (Prasnottara Ratnamalike 8)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೮. ಪಂಡಿತನಾರು ?

ಉತ್ತರ - ವಿವೇಕೀ.

ಪ್ರಸ್ತುತ ಪ್ರಶ್ನೆ ಬಹಳ ಸಾಮಾನ್ಯವಾದಂತೆ ಕಂಡು ಬರುತ್ತಿದೆ. ಆದರೆ ವಿಷಯದ ಆಳ ಮಾತ್ರ ಹೇಳಲು ಕಷ್ಟಸಾಧ್ಯವಾದುದು. ಏಕೆಂದರೆ ಇಲ್ಲಿನ ಪ್ರಶ್ನೋತ್ತರ ಹೀಗಿದೆ - 'ಪಂಡಿತ ಯಾರು?' ಎಂಬುದಾಗಿ. ಸಾಮಾನ್ಯವಾಗಿ ಯಾರು ತಿಳಿದಿರುತ್ತಾನೋ, ಜ್ಞಾನಿಯಾಗಿರುತ್ತಾನೋ, ಅನೇಕ ವಿಷಯಗಳ ಅರಿವನ್ನು ಪಡೆದಿರುತ್ತಾನೋ, ಅಥವಾ ತುಂಬಾ ಜನರಿಗೆ ತಿಳಿಯದೆ ಇರುವಂತಹ ವಿಷಯವನ್ನು ಯಾರೊಬ್ಬನು ತಿಳಿದಿರುತ್ತಾನೋ ಅಂತವನನ್ನು 'ಪಂಡಿತ' ಎಂಬುದಾಗಿ ಕರೆಯುವಂತದ್ದು ಅಭ್ಯಾಸ. ಆದರೆ ಇಲ್ಲಿನ ಉತ್ತರ ಬಹಳ ವಿಶೇಷವಾಗಿದೆ. ಪಂಡಿತ ಯಾರು? ಎಂಬ ಪ್ರಶ್ನೆಗೆ 'ವಿವೇಕೀ' ಎಂಬುದಾಗಿ ಉತ್ತರವನ್ನು ಇಲ್ಲಿ ಕೊಡಲಾಗಿದೆ. ಅಂದರೆ ವಿವೇಕಿಯಾದವನು ಮಾತ್ರ ಪಂಡಿತನಾಗಲು ಸಾಧ್ಯ ಎಂಬುದು ಇದರ ತಾತ್ಪರ್ಯ.


ಅಂದರೆ ನಾವಿಲ್ಲಿ ವಿವೇಚಿಸಬೇಕಾದ ವಿಷಯ ಇಷ್ಟು - ವಿವೇಕಿ ಎಂದರೇನು? ಎಂಬುದನ್ನು ತಿಳಿದರೆ, ಅವನು ಹೇಗೆ ಪಂಡಿತನಾಗುತ್ತಾನೆ? ಎಂಬುದನ್ನು ತಿಳಿಯಲು ಸುಲಭವಾಗುತ್ತದೆ. ವಿವೇಕ ಎಂಬ ಶಬ್ದಕ್ಕೆ ಪೃಥಕ್ಕಾಗಿ ಕಾಣುವುದು ಎಂದರ್ಥ. ಅಂದರೆ ಯಾವುದನ್ನು ಹೇಗೆ ನೋಡಬೇಕೋ ಅದನ್ನು ಹಾಗೆಯೇ ನೋಡುವಂತದ್ದು. ಅನ್ಯಥಾಭಾವದಿಂದ ನೋಡದಿರುವುದು. ಈ ಪ್ರಪಂಚದಲ್ಲಿ ಎರಡು ರೀತಿಯ ವಸ್ತುಗಳಿವೆ, ನಿತ್ಯವಾದದ್ದು ಮತ್ತು ಅನಿತ್ಯವಾದದ್ದು ಎಂಬುದಾಗಿ. ನಿತ್ಯವಾದ ವಿಷಯವನ್ನು ಅನಿತ್ಯವೆಂದೋ ಅಥವಾ ಅನಿತ್ಯವಾದ ವಸ್ತುವನ್ನು ನಿತ್ಯ ಎಂದೋ ಪರಿಗಣಿಸಿದರೆ ಅದು ಅವಿವೇಕವಾಗುತ್ತದೆ. ನಿತ್ಯವಾದದ್ದನ್ನು ನಿತ್ಯ ಎಂದು ಪರಿಗಣಿಸುವುದು, ಅನಿತ್ಯವಾದದ್ದನ್ನು ಅನಿತ್ಯವೆಂದೇ ಪರಿಗಣಿಸುವಂಥದ್ದು ವಿವೇಕ ಎಂದು ಕರೆಸಿಕೊಳ್ಳುತ್ತದೆ.


ಹಾಗಾದರೆ ನಿತ್ಯವಾದ ವಸ್ತು ಯಾವುದು? ಎಂದರೆ ಆತ್ಮವನ್ನು ಅಥವಾ 'ಪರಬ್ರಹ್ಮ' ಎಂಬ ವಿಷಯ ಏನಿದೆಯೋ ಅದನ್ನು ಮಾತ್ರ 'ನಿತ್ಯ' ಎಂದು ಕರೆದು, ಅದನ್ನು ಹೊರತುಪಡಿಸಿದ ಎಲ್ಲ ವಿಷಯಗಳನ್ನು 'ಅನಿತ್ಯ' ಎಂಬುದಾಗಿ ಕರೆಯುತ್ತಾರೆ. ಆದ್ದರಿಂದ ಈ ಪರಬ್ರಹ್ಮ ವಸ್ತುವನ್ನು ಬಿಟ್ಟು ಉಳಿದವುಗಳೆಲ್ಲವೂ ಕೂಡ ಅನಿತ್ಯ ಎಂಬುದಾಗಿ ಭಾವಿಸಬೇಕು ಮತ್ತು ಈ ಪ್ರಪಂಚದಲ್ಲಿ ಕಾಣುವ ಯಾವುದೇ ವಿಷಯಗಳು ಕೂಡ ಅನಿತ್ಯ ಅಶಾಶ್ವತ ಎಂಬುದಾಗಿ ಪರಿಗಣಿಸಿ, ಆ ಭಗವಂತ ಮಾತ್ರ ನಿತ್ಯ, ಅವನು ಮಾತ್ರ ಪಡೆಯಬೇಕಾದವನು ಎಂಬ ಅರಿವನ್ನೇ ವಿವೇಕ ಎಂಬುದಾಗಿ ಕರೆದು, ಇಂತಹ ಅರಿವು ಉಳ್ಳವನನ್ನು ವಿವೇಕೀ ಎಂದು ಕರೆಯುತ್ತಾರೆ. ಅಂದರೆ ಇವನೇ ನಿಜವಾದ ಜ್ಞಾನಿ, ಪಂಡಿತ. 'ಪಂಡಾ' ಅಂದರೆ ಪರಾತ್ಮವಿಜ್ಞಾನ. ಆತ್ಮಾ ಎರಡು ಬಗೆ ಜೀವಾತ್ಮ ಮತ್ತು ಪರಮಾತ್ಮಾ ಎಂದು. ಆತ್ಯಂತಿಕವಾಗಿ ಜೀವಾತ್ಮ ಮತ್ತು ಪರಮಾತ್ಮಾ ಎರಡೂ ಅಭಿನ್ನವಾದದ್ದು ಎಂಬ ಬಗೆಗಿನ ಅರಿವೇ ಪರಾತ್ಮವಿಜ್ಞಾನ ಎಂಬುದಕ್ಕೆ ಅರ್ಥವಾಗಿದೆ. ಅಂತಹ ಅರಿವು ಉಳ್ಳವನು ಪಂಡಿತ. ಅಂದರೆ ಯಾರು ಆ ಪರಬ್ರಹ್ಮ ವಸ್ತುವನ್ನು ನಿತ್ಯ ಎಂದೂ, ಉಳಿದ ವಸ್ತುಗಳೆಲ್ಲವೂ ಅನಿತ್ಯ ಎಂಬುದಾಗಿ ತಿಳಿದಿರುತ್ತಾನೋ ಅವನೇ ನಿಜವಾದ ಪಂಡಿತನಾಗುತ್ತಾನೆ. ಅವನೇ ನಿಜವಾಗಿ ವಿವೇಕೀ ಎಂದು ಅನಿಸಿಕೊಳ್ಳುತ್ತಾನೆ.


ಸೂಚನೆ : 23/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 129 ಮಯನಿಗೆ ದೊರೆಯಿತು ಅಭಯ (Vyaasa Vikshita 129)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಒಂದೇ ಬಾಣದಿಂದಲೇ ಆತನು ನೂರಾರು ಪ್ರಾಣಿಗಳನ್ನು ಕೊಲ್ಲುತ್ತಿದ್ದನು. ಹಾಗೆಯೇ ನೂರು ಬಾಣಗಳನ್ನು ಹೊಡೆದು ಪಕ್ಷಿಯೊಂದನ್ನು ಕೊಲ್ಲುತ್ತಿದ್ದನು.

ಪ್ರಾಣಗಳನ್ನು ಕಳೆದುಕೊಂಡ ಅವು ಅಗ್ನಿಯೊಳಗೆ ಬಿದ್ದವು - ಸಾಕ್ಷಾದ್ ಯಮನಿಂದಲೇ ಕೊಲ್ಲಲ್ಪಟ್ಟವೋ, ಎಂಬಂತೆ. ಜಲಸ್ಥಾನಗಳ ದಡಗಳಲ್ಲಾಗಲಿ, ಹಳ್ಳದಿಣ್ಣೆಗಳಲ್ಲಾಗಲಿ, ನೆಮ್ಮದಿಯನ್ನು ಅವು ಕಾಣದಾದವು. ಪಿತೃಲೋಕ-ದೇವಲೋಕಗಳಿಗೆ ಖಾಂಡವದ ಮಹಾತಾಪವು ಮುಟ್ಟಿತು. ಅನೇಕ ಪ್ರಾಣಿಸಮೂಹಗಳು ದೀನಸ್ಥಿತಿ ಹೊಂದಿ ದೊಡ್ಡ ಸದ್ದನ್ನೇ ಮಾಡಿದವು: ಆನೆಗಳೂ, ಜಿಂಕೆ-ಚಿರತೆಗಳೂ ಗೋಳಿಟ್ಟವು. ಮತ್ತು ಆ ಗೋಳಾಟದ ಸದ್ದಿಗೆ ಗಂಗೆಯೊಳಗಣ ಹಾಗೂ ಸಮುದ್ರದೊಳಗಣ ಮತ್ಸ್ಯಗಳೂ ಬೆದರಿ ಬೆಚ್ಚಿದವು.

ಆ ವನದಲ್ಲಿ ವಾಸಮಾಡುತ್ತಿದ್ದ ವಿದ್ಯಾಧರರ ಸಮೂಹಗಳೂ ಸಹ ಅರ್ಜುನನನ್ನು ದಿಟ್ಟಿಸಿ ನೋಡಲು ಸಹ ಸಮರ್ಥರಾಗಲಿಲ್ಲ. ಇನ್ನು ಆತನೊಡನೆ ಯುದ್ಧ ಮಾಡುವುದೆಲ್ಲಿ ಬಂತು?

ಹಾಗೂ ಯಾವ ರಾಕ್ಷಸರಾಗಲಿ ದಾನವರಾಗಲಿ ನಾಗರಾಗಲಿ ಒಗ್ಗಟ್ಟಾಗಿ ಬಂದು ಎರಗಿದರೋ ಅವರೆಲ್ಲರನ್ನೂ ತನ್ನ ಚಕ್ರಾಯುಧದಿಂದ ಕೃಷ್ಣನು ಸಂಹರಿಸಿದನು. ಅವರ ಶಿರಸ್ಸುಗಳೂ ದೇಹಗಳೂ ತುಂಡರಿಸಿ ಹೋದವು, ಅವರ ಪ್ರಾಣಗಳೂ ಹಾರಿಹೋದವು. ಮತ್ತಿನ್ನುಳಿದ ಮಹಾಕಾಯದ ಪ್ರಾಣಿಗಳು ಜ್ವಲಿಸುವ ಅಗ್ನಿಯೊಳಗೆ ತಾವೇ ಬಿದ್ದುಹೋದವು.

ಹೀಗಾಗಿ ಅಗ್ನಿ ಮಾಂಸ-ರಕ್ತಗಳ ಧಾರೆಗಳಿಂದ ಹಾಗೂ ಮೇದಸ್ಸುಗಳಿಂದ ತೃಪ್ತಿಯಾಯಿತು, ಅಗ್ನಿದೇವನಿಗೆ.

ಅಗ್ನಿಯು ಮೇಲೆಮೇಲಕ್ಕೆ ಆಕಾಶಕ್ಕೆ ಹೋಯಿತು. ಹೊಗೆಯಿಲ್ಲದಾಯಿತು. ಅಗ್ನಿಯ ಕಣ್ಣು-ನಾಲಿಗೆಗಳೂ ದೊಡ್ಡ ಬಾಯಿಯೂ ಬೆಳಗಿದವು. ಅಗ್ನಿಯ ಕೇಶರಾಶಿಯೂ ಬೆಳಗುತ್ತ ಮೇಲಕ್ಕೆ ಚಾಚಿತು. ಪಿಂಗವರ್ಣದ ಕಣ್ಣುಗಳುಳ್ಳವನಾಗಿ ಪ್ರಾಣಿಗಳ ಮೇದೋರಸವನ್ನು ಕುಡಿಯುತ್ತಿದ್ದನು. ಪಿಂಗವರ್ಣವೆಂದರೆ ಕಂದು ಹಳದಿ. ಕೃಷ್ಣನೂ ಅರ್ಜುನನೂ ತನಗೆ ಒದಗಿಸಿದ ಅಮೃತದಂತಹ ಆಹಾರದಿಂದಾಗಿ ಮೋದಗೊಂಡ ಅಗ್ನಿ, ತೃಪ್ತನಾದನು, ಬಹುಶಾಂತಿಯನ್ನು ಹೊಂದಿದನು.

ಅಷ್ಟರಲ್ಲಿ ತಕ್ಷಕನ ಮನೆಯಿಂದ ಮಯನೆಂಬ ಅಸುರನು ಓಡಿಹೋಗುತ್ತಿರುವುದನ್ನು ಥಟ್ಟನೆ ಕೃಷ್ಣನು ಕಂಡನು. ವಾಯುವನ್ನೇ ಸಾರಥಿಯನ್ನಾಗಿ ಹೊಂದಿರುವ ಅಗ್ನಿಯು, ಶರೀರಧಾರಿಯಾಗಿ ಜಟಾಧರನಾಗಿ, ಮೋಡದಂತೆ ಗರ್ಜಿಸುತ್ತಾ ಆತನನ್ನು ಸುಟ್ಟುಹಾಕುವ ಅಪೇಕ್ಷೆ ಹೊಂದಿದ್ದನು.

ಆ ಮಯನು ದಾನವ ಶ್ರೇಷ್ಠರಿಗೆ ಉತ್ತಮನೆನಿಸುವ ಶಿಲ್ಪಿ - ಎಂಬುದನ್ನು ಅರಿತ ಕೃಷ್ಣನು, ಆತನನ್ನು ಕೊಲಲ್ಲೆಂದು ನಿಂತನು. ಕೃಷ್ಣನು ಚಕ್ರವನ್ನೆತ್ತಿ ಹಿಡಿದಿರುವುದನ್ನೂ ಅಗ್ನಿಯು ಸುಡಹೊರಟಿರುವುದನ್ನೂ ಕಂಡ ಮಯನು ಅರ್ಜುನನಲ್ಲಿಗೆ ಓಡಿದನು. ನನ್ನನ್ನು ಕಾಪಾಡು - ಎಂದು ಬೇಡಿಕೊಂಡನು. 

ಆತನ ಭಯಧ್ವನಿಯನ್ನು ಕೇಳಿದ ಅರ್ಜುನನು ಹೆದರಬೇಡ - ಎಂದು ಹೇಳಿದನು. ಅದು ಆತನಿಗೆ ಜೀವದಾನವನ್ನೇ ಮಾಡಿದಂತಿತ್ತು. ದಯೆಯಿಂದ ಅರ್ಜುನನು ಹಾಗೆ ಹೇಳಿ ಅಭಯಪ್ರದಾನ ಮಾಡಲು, ನಮುಚಿಯ ಭ್ರಾತೃವಾದ ಮಯನನ್ನು ಕೊಲ್ಲುವ ಸಂಕಲ್ಪವನ್ನು ಕೃಷ್ಣನು ತೊರೆದನು. ಅಗ್ನಿಯೂ ಆತನನ್ನು ಸುಡಲಿಲ್ಲ.

ಅಂತೂ ಕೃಷ್ಣಾರ್ಜುನರು ಇಂದ್ರನ ದೆಸೆಯಿಂದ ಹೀಗೆ ರಕ್ಷಣೆಯೊದಗಿಸಿರಲು, ಹದಿನೈದು ದಿನಗಳ ಕಾಲ ಆ ಕಾಡನ್ನು ಅಗ್ನಿಯು ಸುಟ್ಟನು. ಹೀಗೆ ಆ ಕಾಡು ಸುಡಲ್ಪಡುತ್ತಿರಲು, ಆರು ಮಂದಿಯನ್ನು ಅಗ್ನಿಯು ಸುಡಲಿಲ್ಲ - ಅಶ್ವಸೇನನೆಂಬ ನಾಗ, ಮಯಾಸುರ, ಹಾಗೂ ನಾಲ್ಕು ಪಕ್ಷಿಗಳು. ಅವು ಶಾರ್ಙ್ಗಕಗಳೆಂಬ ಪಕ್ಷಿಗಳು.

ಸೂಚನೆ : 23/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, March 22, 2025

ಹಿತ ನುಡಿಗಳ ಹಿತತೆಯ ಪರಿಕಿಸುವ ಪರಿ (Hita Nudigala Hitateya Parikisuva Pari)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಹಿತವನ್ನು ಬಯಸುವವರ ಮಾತುಗಳನ್ನು ಕೇಳಬೇಕೇ ಬೇಡವೇ? ಇದನ್ನು ಇತ್ಯರ್ಥ ಮಾಡಬೇಕಾದ ಸಂನಿವೇಶ ಬಂದಾಗ, ಹಲವು ವಿಷಯಗಳನ್ನು ನಾವು ಮನಸ್ಸಿನಲ್ಲಿ ಅಳೆದು ಸುರಿದು ನೋಡಬೇಕಾಗುತ್ತದೆ. ಹೇಳುವವರೆಂತಹವರು? ಹೇಳುತ್ತಿರುವ ವಿಷಯ ಎಂತಹುದು? ಅದರಲ್ಲಿ ಅವರ ಸ್ವಾರ್ಥವೇನಾದರೂ ಇದೆಯೇ? - ಇತ್ಯಾದಿ. ರಾಮಾಯಣದಲ್ಲೇ ಬರುವ ಎರಡು ಘಟನೆಗಳನ್ನು ಹೋಲಿಸಿ ನೋಡಿದಾಗ ನಮಗೆ ಇದರ ಬಗ್ಗೆ ಒಂದು ಚಿತ್ರ ಮೂಡಬಹುದು.

ರಾಮನ ಯೌವರಾಜ್ಯಾಭಿಷೇಕಕ್ಕೆ ಆಗುತ್ತಿರುವ ಸಂನಾಹವನ್ನು ಮಂಥರೆ ಕಂಡಳು. ರಾಮನ ವಿಷಯದಲ್ಲಿ ಪ್ರೀತಿಯಿಂದಲೇ ಇದ್ದ ಕೈಕೇಯಿಯು ಸುವಾರ್ತೆಯಿಂದ ಸಂಭ್ರಮಿಸುತ್ತಿದ್ದಾಗ, ತನಗುಕ್ಕಿದ ಕೋಪವನ್ನು ಅವಳ ಮುಂದೆ ಚೆಲ್ಲಿದಳು. "ಮೂಢೆ" ಎಂದು ಬೈದು, ಅವಳಿಗೆ ಈಗ ಆಪತ್ತು ಬಂದಿದೆಯೆಂದು ಉಸುರಿದಳು. ದಶರಥನ ವಿಷಯದಲ್ಲೂ ರಾಮ-ಕೌಸಲ್ಯೆಯರ ವಿಷಯದಲ್ಲೂ ಒಡಕುಬುದ್ಧಿಯುಂಟುಮಾಡುವಂತಹ ಮಾತುಗಳನ್ನಾಡಿದಳು. ದಶರಥನು ಕಪಟಿಯೆಂದೂ, ಭರತನನ್ನು ದೂರ ಕಳಿಸಿ ರಾಮನಿಗೆ ಪಟ್ಟಾಭಿಷೇಕ ಮಾಡುತ್ತಿದ್ದಾನೆಂದೂ ಕಿವಿ ಊದಿದಳು. ಕೈಕೇಯಿಗೆ ಸಂತೋಷವೇ ಆಯಿತು ಸುಖವಾರ್ತೆಯನ್ನು ಕೇಳಿ. ಮಂಥರೆಗಾದರೋ ದುಃಖ-ಕೋಪಗಳ ಕಟ್ಟೆಯೊಡೆಯಿತು. ರಾಮನಿಗೆ ಅಭಿಷೇಕವಾದರೆ ಆಗಬಹುದಾದ ಅನಾಹುತಪರಂಪರೆಯ ಬಗ್ಗೆ ಬಣ್ಣಿಸಿ ಬಣ್ಣಿಸಿ ಕೈಕೇಯಿಗೆ ಹೇಳತೊಡಗಿದಳು. ಕೌಸಲ್ಯೆ ಇವಳನ್ನು ಮುಂದೆ ಹೇಗೆ ನಡೆಸಿಕೊಳ್ಳುತ್ತಾಳೆಂದು ದುಃಖಿಸಿದಳು. ಆದಾಗ್ಯೂ ಕೈಕೇಯಿಗೆ ರಾಮನ ಸದ್ಗುಣಗಳೇ ಮನಸ್ಸಿನಲ್ಲಾಡಿದವು. ಭರತನು ತನಗೆ ಹೇಗೋ, ರಾಮನೂ ಹಾಗೇ ಎಂದಳು. ಮಂಥರೆ ಅಲ್ಲಿಗೆ ಬಿಡದೇ, ಮತ್ತೆ ನಿಟ್ಟುಸಿರು ಬಿಡುತ್ತಾ ಮುಂದೆ ಬರುವ ಕಷ್ಟಪರಂಪರೆಯನ್ನು ವಿವರಿಸಿ ಹೇಳಿದಳು, ರಾಮನು ಮುಂದೆ ರಾಜನಾದರೆ ಭರತನನ್ನು ರಾಜ್ಯದಿಂದಲೇ ನಿಷ್ಕಾಸನ ಮಾಡುವುದರಲ್ಲಿ ಸಂದೇಹವೇ ಇಲ್ಲ ಎಂದೆಲ್ಲಾ ವರ್ಣಿಸಿ ಹೇಳಿದಳು. ಪದೇ ಪದೇ ಕಿವಿಯ ಮೇಲೆ ಬಿದ್ದ ಈ ಮಾತಿಗೆ ಕೈಕೇಯಿ ಮರುಳಾದಳು. ನಂತರ ಘಟಿಸಿದ ಖೇದನೀಯ ವಿಷಯಗಳೆಲ್ಲಾ ಎಲ್ಲರಿಗೂ ತಿಳಿದೇ ಇದೆ.


ಇದಕ್ಕೆ ವ್ಯತಿರಿಕ್ತವಾದ ಇನ್ನೊಂದು ಪರಿಸ್ಥಿತಿಯೆಂದರೆ, ಯುದ್ಧಕಾಂಡದಲ್ಲಿ ರಾಮನಲ್ಲಿ ಶರಣಾಗಿ ಬಂದ ವಿಭೀಷಣನನ್ನು ತಮ್ಮೆಡೆ ಕರೆದುಕೊಳ್ಳಬೇಕೋ ಬೇಡವೋ ಎಂದು ಸುಗ್ರೀವಾದಿಗಳು ರಾಮನಲ್ಲಿ ಅರಿಕೆ ಮಾಡಿಕೊಂಡದ್ದು. ಸುಗ್ರೀವ ಹೇಳಿದ್ದಾದರೂ, "ವಿಭೀಷಣನಾದರೋ ರಾಕ್ಷಸ, ರಾವಣನ ಸಾಕ್ಷಾದ್ ಅನುಜ. ರಾಕ್ಷಸರು ಕಾಮರೂಪಿಗಳು, ನಿಕೃತಿಜ್ಞರು, ಎಂದರೆ ಕಪಟೋಪಾಯಗಳನ್ನು ಬಲ್ಲವರು. ಆದ್ದರಿಂದ ವಿಭೀಷಣನು ರಾವಣನ ಗೂಢಚಾರನಾಗಿ ಬಂದಿದ್ದಲ್ಲಿ ಆಶ್ಚರ್ಯವೇನಿಲ್ಲ. ಇತ್ಯಾದಿಯಾಗಿ. ಕಪಿಸೈನ್ಯದ ವಿವಿಧ ಪ್ರಾಜ್ಞರೂ "ವಿಭೀಷಣನನ್ನು ಪರೀಕ್ಷಿಸಬೇಕು, ಅವನನ್ನು ಹಾಗೆಯೇ ನಂಬಲಾರದು", "ಯಾವ ಪಕ್ಷದಲ್ಲಿಯೂ ನಂಬಲರ್ಹನಲ್ಲ ಅವನು" ಮುಂತಾಗಿ ಅಭಿಪ್ರಾಯವಿತ್ತರು. ಹನುಮಂತನಾದರೂ "ಬೇರೆಯವರು ಹೇಳಿದ್ದರಲ್ಲಿ ಯುಕ್ತವಾದದ್ದಿದ್ದರೂ, ವಿಭೀಷಣನು ಶರಣಾಗತನಾಗಿ ಬರಲು ಇದೊಂದೇ ಸರಿಯಾದ ದೇಶ-ಕಾಲ. ಚಾರನ ಮೂಲ ಪರೀಕ್ಷಿಸಿದರೆ - ಅವನು ಶತ್ರುವಾಗಿದ್ದ ಪಕ್ಷೇ ಸಂದೇಹಿಸಿಬಹುದು, ಮಿತ್ರನಾಗಿದ್ದ ಪಕ್ಷೇ ಮನಸ್ಸು ಕೆಡಬಹುದು. ಅಲ್ಲದೇ, ಆತ ರಾವಣನ ದುರ್ವರ್ತನೆಯನ್ನೂ ನೋಡಿದ್ದಾನೆ, ನಿನ್ನ ಪರಾಕ್ರಮದ ಬಗ್ಗೆ ತಿಳಿದು ಇಲ್ಲಿಗೆ ರಾಜ್ಯಕಾಂಕ್ಷಿಯಾಗಿ ಬಂದಿದ್ದಾನೆ" ಎಂದು ಹೇಳಿ ಅವನು ಗಮನಿಸಿದ ಅಕುಟಿಲತೆ, ಭಯರಾಹಿತ್ಯ ಇವುಗಳ ಬಲದ ಮೇಲೆ ವಿಭೀಷಣನು ಮಿತ್ರನೇ ಎಂದು ಹೇಳುತ್ತಾನೆ. ಹನುಮಂತನ ವಿಮರ್ಶೆಯನ್ನೂ ಅವನ ಮಾತಿನ ತೂಕವನ್ನೂ ಮನಸ್ಸಿಗೆ ತಂದುಕೊಂಡು, ರಾಮನು ವಿಭೀಷಣನಿಗೆ ಅಭಯ ಕೊಡಲು ನಿಶ್ಚಯಿಸುತ್ತಾನೆ. ಸುಗ್ರೀವನಿಗೆ ಆಗಲೂ ಸಮಾಧಾನವಿರುವುದಿಲ್ಲ. ಕೊನೆಗೆ, ವಿಭೀಷಣನು ಶತ್ರುವೇ ಆಗಿದ್ದ ಪಕ್ಷದಲ್ಲೂ ತನಗೇನೂ ಮಾಡಲಾರನೆಂದೂ (ರಾಮನಿಗೆ ತನ್ನ ಸಾಮರ್ಥ್ಯದ ಬಗ್ಗೆ ಇದ್ದ ವಿಶ್ವಾಸ ಇಲ್ಲಿ ತೋರುತ್ತದೆ), ಶರಣು ಎಂದು ಬಂದವನಿಗೆ ಒಲ್ಲೆ ಎನ್ನಲಾರೆನೆಂದೂ ಹೇಳಿ ಸಮಾಧಾನಪಡಿಸಿದನು.


ಈ ಎರಡೂ ಘಟನೆಗಳನ್ನು ವಿಮರ್ಶಿಸಿದಲ್ಲಿ, ನಾವು ಇಷ್ಟನ್ನು ಅರಿಯಬಹುದು. ರಾಮನ ವಿಷಯದಲ್ಲಿ ಅಷ್ಟು ಪ್ರೀತಿಯಿಟ್ಟಿದ್ದ ಕೈಕೇಯಿ ಮಾಡಿದ ಒಂದೇ ತಪ್ಪೆಂದರೆ ತನಗೆ ಹಿತೈಷಿಣಿ ಎಂದೆಣಿಸಿದ್ದ ಮಂಥರೆಯ ಮಾತನ್ನು ಕೇಳಿದ್ದು. ಮಂಥರೆಯಾದರೂ ಕೈಕೇಯಿಯ ತವರಿನಿಂದ ಅವಳೊಟ್ಟಿಗೆ ಬಂದಿದ್ದ ದಾಸಿ. ಒಳ್ಳೆಯ ನಡತೆಯಿತ್ತೆಂದಾಗಲೀ ಜ್ಞಾನವಿತ್ತೆಂದಾಗಲೀ ಇಲ್ಲ, ಅವಳಿಗೆ. ಯಾವ ಸಂಸ್ಕಾರದಿಂದ ಕೂಡಿದ್ದಳೋ ತಿಳಿದಿಲ್ಲ. ಕೈಕೇಯಿಯ ವಿಷಯದಲ್ಲಿದ್ದ ಅವಳ ಆಸ್ಥೆಯೊಂದೇ ಅವಳ ಗುಣವೆನ್ನಬಹುದೇನೋ. ನಿಜಕ್ಕೂ ನೋಡಿದರೆ ಅಸೂಯಾಪರಳಾದ ಅವಳು ಹಿತಮಾಡುವ ಸೋಗಿನಲ್ಲಿ ಕೈಕೇಯಿಗೆ ಮಾಡಿದ್ದು ಕೆಡುಕನ್ನೇ. ಕೈಕೇಯಿಯಾದರೋ ರಾಮನ ವಿಷಯದಲ್ಲಿ ಬಹಳ ಪ್ರೀತಿಯಿಟ್ಟುಕೊಂಡಿದ್ದವಳೇ. ದಶರಥನು ತನಗೆ ಕೊಟ್ಟಿದ್ದ ವರಗಳನ್ನು ಸಹ ಅವಳು ಮರೆತಿದ್ದಳು - ಮಂಥರೆಯೇ ಅವನ್ನು ಜ್ಞಾಪಿಸಿಕೊಟ್ಟದ್ದು. ಇಂತಹ ಸನ್ನಡತೆಯುಳ್ಳವಳಿಗೂ ಒಡಕುಬುದ್ಧಿಯ ಮಾತು ಕಿವಿಯ ಮೇಲೆ ಪದೇ ಪದೇ ಬೀಳುತ್ತಿದ್ದಾಗ, ಅದನ್ನು ನಂಬುವಂತಾಯಿತು - ಮತ್ತೆ ಮತ್ತೆ ಬಿದ್ದ ನೀರಿನಿಂದ ಕಲ್ಲೂ ಕೊರೆದುಹೋದಂತೆ. ರಾಮನೆಂತಹವನು, ದಶರಥನೆಂತಹವನು - ಹೀಗೆ ತನ್ನ ಸ್ವಂತ ಅನುಭವಗಳನ್ನೇ ಅವಳು ಮರೆಯುವಂತಾಯಿತು. ತನ್ನ ವಿವೇಕ, ಅನುಭವಗಳನ್ನು ಮುಂದಿಟ್ಟುಕೊಂಡು ಯೋಚಿಸದೇ, ಪೈಶುನ್ಯಕ್ಕೆ ಬಲಿಯಾಗಿ, ತನ್ನ ಮೇಲೆ ಮಾತ್ರವಲ್ಲದೇ ತನ್ನ ಪರಿವಾರ-ರಾಜ್ಯಗಳೆಲ್ಲಕ್ಕೂ ಆಪತ್ತನ್ನು ತಂದೊಡ್ಡಿದಳು.


ಅತ್ತ ರಾಮನ ಸಂದರ್ಭದಲ್ಲಿ ವಿಭೀಷಣನ ಬಗ್ಗೆ ಅವನಿಗೆ ಸಲಹೆಗಳನ್ನಿತ್ತವರೆಲ್ಲಾ ಪ್ರಾಜ್ಞರು, ಗುಣವಂತರು. ರಾಮನ ಹಿತವನ್ನೇ ಬಯಸಿ, ಸುಗ್ರೀವ, ಅಂಗದ, ಮುಂತಾದವರು ವಿಭೀಷಣನ ಬಗ್ಗೆ ಸಂದೇಹದ ಕಣ್ಗಳಿಂದಲೇ ಇದ್ದವರು. ಹನುಮಂತ ಅವರ ಸಂದೇಹಗಳ ವಿಮರ್ಶೆ ಮಾಡಿ, ಆ ರೀತಿ ಮಾಡುವುದರಿಂದ ಆಗುವ ನಷ್ಟದ ಬಗ್ಗೆಯೂ ಹೇಳಿದನು. ಹೀಗೆ ಒಳ್ಳೆಯ ಮೇಧೆ-ಸಂಸ್ಕಾರಗಳಿದ್ದವರಾದ ಇವರೆಲ್ಲರೂ ಕೊಟ್ಟ ವಿಮರ್ಶೆ-ಅಭಿಪ್ರಾಯಗಳನ್ನು ಗಮನಕ್ಕೆ ತಂದುಕೊಂಡರೂ, ರಾಮನು ನಿಶ್ಚಯ ಮಾಡಿದ್ದು ತನ್ನ ಬುದ್ಧಿ-ವಿವೇಕಗಳಿಂದಲೇ. ತನ್ನ ಸಾಮರ್ಥ್ಯವನ್ನೂ ಧರ್ಮಪ್ರಜ್ಞೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ. ಶ್ರೀರಂಗಮಹಾಗುರುಗಳು ಹೇಳಿದ ಮಾತುಗಳು ಇಲ್ಲಿ ಮನನೀಯ: "ಒಂದು ವಿಷಯವನ್ನು ಮೋಸಹೋಗದೇ ನೋಡಬೇಕಾದರೆ ಪ್ರಮಾಣಬದ್ಧವಾಗಿದೆಯೇ ಎಂದು ಪರಿಶೀಲಿಸಿ ನೋಡಬೇಕು. ಎಲ್ಲ ರೀತಿಯಿಂದಲೂ ಪರೀಕ್ಷಿಸಿ ನೋಡಬೇಕು. ನಂತರ ನಿರ್ಣಯಕ್ಕೆ ಬರಬೇಕು.". ಕೈಕೇಯಿಯು ತನ್ನ ಅನುಭವಕ್ಕೆ ಬಂದ ಸತ್ಯವನ್ನೂ ಲೆಕ್ಕಿಸದೆ, ಬೇರೊಬ್ಬಳ ಪ್ರಮಾಣವಿಲ್ಲದ ಮಾತುಗಳನ್ನು ನಂಬಿ ಆಪತ್ತಿಗೆ ಸಿಕ್ಕಿಬಿದ್ದಳು. ರಾಮನು ಎಲ್ಲ ರೀತಿಯಲ್ಲೂ ವಿಷಯದ ಪರಾಮರ್ಶೆ ಮಾಡಿ ತನ್ನ ಸಾಮರ್ಥ್ಯ-ಕರ್ತವ್ಯ-ಧರ್ಮಗಳನ್ನು ಮರೆಯದೇ ನಿರ್ಣಯಕ್ಕೆ ಬಂದನು.


ಹೀಗೆ ಹಿತೈಷಿಗಳ ಮಾತನ್ನು ಕೇಳುವಾಗ ಅವರ ಸಾಮರ್ಥ್ಯಾಸಾಮರ್ಥ್ಯಗಳ ವಿವೇಚನೆ ಮಾತ್ರವಲ್ಲದೆ, ನಮ್ಮ ಸ್ವಂತ ಬುದ್ಧಿ-ವಿವೇಕಗಳಿಂದ, ಸಂನಿವೇಶದ ಪರಿಣಾಮಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಉಚಿತವಲ್ಲವೇ?


ಸೂಚನೆ : 22/03/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 57 ಎತ್ತ ಒಲಿವನು ಉತ್ತಮ ಪುರುಷನು? (Krishakarnamrta 57)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಗೋಪಾಲಾಜಿರಕರ್ದಮೇ...

ಜೀವನದಲ್ಲಿ ಯಾರನ್ನು ನೆಚ್ಚಬಹುದು, ಯಾರನ್ನು ನೆಚ್ಚಬಾರದು? - ಎಂಬ ಜಿಜ್ಞಾಸೆಯು ನಮಗೆ ಅಗಾಗ್ಗೆ ಬರುವುದೇ. ಇಂತಹ ಸಂದರ್ಭಗಳಲ್ಲಿ ನಮಗೆ ದೊರೆಯಬಹುದಾದ ಅಳತೆಗೋಲೆಂದರೆ ಅವರ ನಡೆ-ನುಡಿಗಳೇ.

ಬಹುಮಂದಿಯ ನಡೆಯಲ್ಲಿ ಏನೋ ಒಂದು ಏಕರೂಪತೆಯಿರುತ್ತದೆ. ಉದಾಹರಣೆಗೆ ಒಬ್ಬ ಮನುಷ್ಯ ಕೋಪಿಷ್ಠನಾಗಿದ್ದರೆ, ಆತನು ಅನೇಕರೊಂದಿಗೆ, ಅಥವಾ ಎಲ್ಲರೊಂದಿಗೂ, ಕೋಪದ ವರ್ತನೆಯನ್ನೇ ತೋರುತ್ತಾನೆ. ಹಾಗೆಯೇ ಪರಮ-ಜಿಪುಣನಾದವನು ತನ್ನ ಜಿಪುಣತನವನ್ನು ಬಹುತೇಕ ಬಚ್ಚಿಟ್ಟುಕೊಳ್ಳಲಾರನು. ಹೀಗೆ ಸಜ್ಜನರ ಸಜ್ಜನಿಕೆಯಲ್ಲೂ ಏನೋ ಒಂದು ಏಕರೂಪತೆ, ದುರ್ಜನರ ದುಷ್ಟತನದಲ್ಲೂ ಏನೋ ಒಂದು ಏಕರೂಪತೆಗಳನ್ನು ನಾವು ಕಾಣಬಹುದಷ್ಟೆ?

ಆದರೆ ಯಾರಾದರೂ ಕೆಲವೊಮ್ಮೆ ಕೋಪಿಷ್ಠರು, ಕೆಲವೊಮ್ಮೆ ಶಾಂತ-ಸ್ವಭಾವದವರು - ಎಂದಾಗಿಬಿಟ್ಟರೆ, ಅವರೊಡನೆ ವ್ಯವಹರಿಸುವುದೇ ಕಷ್ಟವಾಗಿಬಿಡುವುದು, ಅಲ್ಲವೇ? ಅಂಥವರನ್ನೇ ಅವ್ಯವಸ್ಥಿತ-ಚಿತ್ತ ಎಂದು ಕರೆಯುವುದೂ.

ಕೃಷ್ಣನ ವರ್ತನೆಯು ಒಬ್ಬೊಬ್ಬರೊಂದಿಗೆ ಒಂದೊಂದು ಪರಿಯಲ್ಲಿರುವುದನ್ನು ಲೀಲಾಶುಕ ಗಮನಿಸಿದ್ದಾನೆ. ಕೃಷ್ಣನ ವರ್ತನೆಯ ಆರು ಪ್ರಸಂಗಗಳನ್ನು ನಮ್ಮ ಮುಂದಿಡುತ್ತಾನೆ. ಅವುಗಳಲ್ಲಿ ಎರಡೆರಡರಲ್ಲಿ ಪರಸ್ಪರ ವಿರೋಧಗಳು ತೋರುತ್ತವೆ. ಯಾವುದೋ ಒಂದು ಸೂಕ್ಷ್ಮಾಂಶವು ಹೊಳೆದಾಗ ಅವುಗಳಲ್ಲಿ ವಾಸ್ತವ-ವಿರೋಧವಿಲ್ಲವೆಂಬುದು ಗೋಚರವಾಗುವುದು. ಅದರ ಏನು-ಹೇಗೆಗಳನ್ನು ಗಮನಿಸಬೇಕಲ್ಲವೇ?

ಮೊದಲನೆಯದಾಗಿ ಕೃಷ್ಣನ ವಿಹಾರ-ಭೂಮಿಯೆಂಬುದು ಯಾವುದು? ಅದಾದರೂ ಗೋಪಾಲಾಜಿರ-ಕರ್ದಮ. ಅಜಿರಗಳ ಕರ್ದಮವೆಂದರೆ ಮನೆಯಂಗಳಗಳ ಕೆಸರು. ಗೊಲ್ಲರಂಗಣದ ಕೊಚ್ಚೆಯಿದು.ಇದಕ್ಕೆ ವ್ಯತಿರಿಕ್ತವಾದ ವರ್ತನೆ ಯಜ್ಞ-ಸಂನಿವೇಶದಲ್ಲಿ. ಅಲ್ಲಿ ವಿಪ್ರರು ನೆರವೇರಿಸುವುದು ಅಧ್ವರಗಳನ್ನು - ಎಂದರೆ ಯಜ್ಞಗಳನ್ನು. ಅಲ್ಲಿ ತೋರಿಕೊಳ್ಳಲೇ ಲಜ್ಜೆಪಡುತ್ತಾನಂತೆ, ಕೃಷ್ಣ!

ಅವರು ಅಷ್ಟೊಂದೆಲ್ಲ ನೀತಿ-ನಿಯಮಬದ್ಧವಾಗಿ ಕಟ್ಟುನಿಟ್ಟಾದ ಆಚರಣೆಗಳನ್ನು ಪಾಲಿಸುತ್ತಾ ಶುದ್ಧರಾಗಿ ಶುಚಿರ್ಭೂತರಾಗಿ ಯಾಗಗಳನ್ನು ನಿರ್ವಹಿಸುತ್ತಾರೆ. ಅವರ ಅಷ್ಟೊಂದು ಪ್ರಯತ್ನಕ್ಕಾದರೂ ಬೆಲೆಗೊಡಬಾರದೇ? ಭಗವಂತನು ಶುಚಿಯಾದ ಎಡೆಯಲ್ಲಿ ಕಾಣಿಸಿಕೊಳ್ಳತಕ್ಕವನೆಂದು ಬಗೆದು ನಿತ್ಯಗಟ್ಟಲೆಯ ಪೂಜೆಯಲ್ಲಿ ಸಹ ಮಡಿ-ಆಚಾರ-ಸಂಪ್ರದಾಯಗಳನ್ನು ಬ್ರಾಹ್ಮಣರು ಪಾಲಿಸಿರುತ್ತಾರೆ. ತಮ್ಮ ನಿತ್ಯಕೃತ್ಯಗಳಲ್ಲೇ ಅಷ್ಟು ಬಿಗಿ ಅವರದು. ಇನ್ನು ಸಾರ್ವಜನಿಕವಾಗಿ ನಡೆಸಬೇಕಾದ ಯಜ್ಞ-ಯಾಗಾದಿಗಳೆಂದರೆ ಅವರ ಕಟ್ಟುನಿಟ್ಟುಗಳೇನು ಕಡಿಮೆಯೇ? ಇಷ್ಟೆಲ್ಲ ಆದರೂ ಎಲ್ಲ ಯಜ್ಞಗಳಲ್ಲೂ ಯಜ್ಞ-ಸಾಫಲ್ಯ-ಸೂಚಕವಾಗಿ ಭಗವಂತನ ದರ್ಶನವು ಆಗಿಬಿಡುವುದೆಂಬ ನೆಚ್ಚಿಕೆಯಿಲ್ಲ.

ಸಾರಾಂಶವಾಗಿ, ಎಲ್ಲಿ ಕಾಣಿಸಿಕೊಳ್ಳಬೇಕೋ ಅಲ್ಲಿ ಕಾಣಿಸಿಕೊಳ್ಳುತ್ತಿಲ್ಲ! ವಿದ್ಯಾವಂತರೆನಿಸದ, ಶಾಸ್ತ್ರ-ಜ್ಞಾನ-ರಹಿತರ - ಎಂದರೆ ಕೇವಲ ದನಗಾಹಿಗಳ ಮನೆಗಳಂಗಳಗಳ ಕೊಚ್ಚೆಯಲ್ಲಿ ಕಾಣಿಸಿಕೊಳ್ಳುವವ ಈತ! ಇದರಿಂದ ಏಳುವ ಪ್ರಶ್ನೆಯೆಂದರೆ, ಹಾಗಾದರೆ ಈತನ ಲೆಕ್ಕಾಚಾರವೇನೆಂಬುದು. ತಾನೆಲ್ಲಿ ಕಾಣಬೇಕು, ಎಲ್ಲಿ ಕಾಣಬಾರದು? - ಎಂಬುದಕ್ಕೆ ಲೆಕ್ಕವೇನಾದರೂ ಈತನಿಗಿದೆಯೋ ಇಲ್ಲವೋ? - ಎಂಬುದು. ಇದು ಮೊದಲನೆಯ ವೈಪರೀತ್ಯ.

ಎರಡನೆಯದಿದು. ಗೋಧನರು, ಎಂದರೆ ಹಸುಗಳನ್ನೇ ತಮ್ಮ ಸಂಪತ್ತೆಂದು ಭಾವಿಸುವ ಮಂದಿ, ಏನನ್ನು ಹೇಳುವರೋ ಅದನ್ನು ಕೇಳುತ್ತಾನೆ, ಕೃಷ್ಣ. ಅವರು "ಹುಂ" ಎಂದರೆ ಸಾಕು, ಅಪ್ಪಣೆಯೆಂಬಂತೆ. ಅಷ್ಟರ ಸೂಚನೆ ಮಾತ್ರಕ್ಕೇ ಅವರೊಂದಿಗೆ ಮಾತನಾಡುವನು. ಆದರೆ ಜ್ಞಾನಿಗಳೆನಿಸುವವರೊಂದಿಗೆ ಹಾಗಿಲ್ಲ. ಅವರೋ ವೇದ-ಶಾಸ್ತ್ರ-ಪುರಾಣಾದಿಗಳನ್ನು ಓದಿಕೊಂಡಿರುವವರು, ನೂರಾರು ಸ್ತುತಿಗಳನ್ನು ಮಾಡುವವರು: ಅದು ದೀರ್ಘಕಾಲದ ಅಭ್ಯಾಸದಿಂದಾದ ವೇದ-ಮಂತ್ರಗಳಿಂದಾಗಬಹುದು, ಗಾನದ್ವಾರಾ ನೆರವೇರಬಹುದು. ವಿಪುಲ-ಸ್ತೋತ್ರ-ಸಾಹಿತ್ಯದ ಶುದ್ಧೋಚ್ಚಾರಣೆಯ ರೂಪದಲ್ಲಿರಬಹುದು.

ಹಾಗೆ ವೇದಮಂತ್ರಗಳಿಂದ ಆಹೂತನಾದ ದೇವನು, ಎಂದರೆ ಆಹ್ವಾನಿಸಲ್ಪಟ್ಟ ಭಗವಂತನು, ಸುಪ್ರಸನ್ನನಾಗಿ ಅವರ ಮುಂದೆ ನಿಂತು ಅವರ ಇಚ್ಛಾ-ಪೂರ್ತಿಯನ್ನು ಮಾಡಿಕೊಡಬೇಕು, ಅಲ್ಲವೇ? ಉಹೂಂ, ಅವರುಗಳೆದುರಿಗೆ ಬರಿದೇ ಮೌನ!

ಹೀಗೆ ಮತ್ತೆ ಅದೇ, ಅಜ್ಞರ ಸಂಜ್ಞೆಗೂ ಗೌರವವೀಯುವುದು; ಪ್ರಾಜ್ಞರ ಪ್ರಶಂಸೆಗೂ ಬೆಲೆಗೊಡದಿರುವುದು! ಏನಿದೆಲ್ಲ? ಅರ್ಥವಾಗದ ವಿಷಯವೇ ಸರಿ.

ಮತ್ತೆ ಮೂರನೆಯ ಅಂಶ. ಗೋಕುಲದ ನಾರಿಯರೆಂದರೇನು? ಅವರು ಒಂದರ್ಥದಲ್ಲಿ ಪುಂಶ್ಚಲಿಯರು. ಏನು ಹಾಗೆಂದರೆ? ಗಂಡುಬೀರಿಗಳು! ಮನೆಬಿಟ್ಟು ಬೀದಿ ಸುತ್ತುವ, ಅನ್ಯ-ಪುರುಷರೊಂದಿಗೆ ಹರಟುವ, ನಾರಿಯರವರು! ಅಂತಹ ಮಂದಿಯೊಂದಿಗೆ, ಅವರ ದಾಸನೆಂಬಂತೆ ವರ್ತಿಸುತ್ತಾನೀತ!

ಇದಕ್ಕೆ ಪ್ರತಿಯಾಗಿ ತೋರುವ ದೃಶ್ಯ ಯಾರಿಗಾದರೂ ಆಶ್ಚರ್ಯವೆನಿಸುವಂತಹುದು. ಅದೆಷ್ಟೇ ಮಂದಿ ದಾಂತಾತ್ಮರು - ಎಂದರೆ ತಮ್ಮ ಆತ್ಮದ ಮೇಲೆ, ಅರ್ಥಾತ್ ಮನಸ್ಸಿನ ಮೇಲೆ, ದಮನವನ್ನು ಸಾಧಿಸಿರುವವರು, ಎಂದರೆ ಹತೋಟಿಯನ್ನು ತಂದುಕೊಂಡಿರುವವರು - ಅವರಲ್ಲಿ ನಿನ್ನ ಸ್ವಾಮ್ಯವನ್ನು ಸಹ ನೀ ತೋರಿಸೆ. ಎಂದರೆ ನಿನ್ನ ಪ್ರಭುತ್ವವನ್ನೂ ತೋರುವುದಿಲ್ಲ. ನೀನು ನಿನ್ನ ಒಡೆತನವನ್ನು ಅವರ ಮೇಲೆ ಅವರ ಮುಂದೆ ಪ್ರದರ್ಶನ ಮಾಡಿದರೂ ಧನ್ಯಂಮನ್ಯರಾಗುವವರು, ಅವರು. ಎಂದರೆ ಧನ್ಯತಾಭಾವವನ್ನು ಹೊಂದುವವರು. "ಆಹಾ ನಮ್ಮ ಪ್ರಭು ನಮಗೊಲಿದ! ನಮ್ಮನ್ನು ತನ್ನವರನ್ನಾಗಿ ಭಾವಿಸಿದ! ಮಹಾಪ್ರಭುವಿಗೆ ಸೇರಿದವರು ನಾವು" - ಎಂದೆಲ್ಲ ಭಾವಿಸುವವರು, ಅವರು. ಪಾಪ, ಅವರ ವಿಷಯದಲ್ಲಿ ಇವರು ತನ್ನವರೆಂಬ ಭಾವವನ್ನು ಸಹ ತೋರ್ಪಡಿಸ!

ಸಾರಾಂಶವೇನು? ಬಲ್ಲರಲ್ಲದ ಗೊಲ್ಲರ ಬಳಿ ಸಲ್ಲದ ದಾಸ್ಯ; ಶಮ-ದಮಗಳ ಮಹಾಶ್ರಮದ ಸಾಧನೆ ಮಾಡಿದವರ ಮೇಲೆ ಒಂದೊಡೆತನದ ನಡೆಯು ಸಹ ಇಲ್ಲ!

ಓಹ್! ಇದಾವುದೂ ಅರ್ಥವೇ ಆಗದ ವಿಷಯ - ಎಂದು ಉದ್ಗರಿಸಬೇಕೆಂದಿರುವಷ್ಟರಲ್ಲೇ ಹೊಳೆದಿದೆ, ಲೀಲಾಶುಕನಿಗೆ. "ಅರ್ಥವಾಯಿತು, ಕೃಷ್ಣಾ! ನಿನ್ನ ಮಂಜುಲವಾದ ಚರಣ-ಕಮಲ-ಯುಗಲವು, ಎಂದರೆ ಸುಂದರವಾದ ಪದ-ಪದ್ಮ-ದ್ವಂದ್ವವು, ಪ್ರೇಮದಿಂದಲೇ ನಿಶ್ಚಲವಾಗಿರತಕ್ಕದು" - ಎಂದುದ್ಗರಿಸುತ್ತಾನೆ!

ಈಗ ಅರ್ಥವಾಗಿದೆ, ಶ್ರೀಕೃಷ್ಣನ ವರ್ತನೆಯೇನೆಂಬುದು! ಗೋವುಗಳನ್ನೇ ಧನವನ್ನಾಗಿ ಉಳ್ಳ ಗೋಕುಲದ ಗೋಪಾಲಕರು ಆತನಲ್ಲಿ ಭಕ್ತಿ-ಪ್ರೇಮಗಳಿಂದ ತುಂಬಿರುವರು. ಬದಲಾಗಿ ಜ್ಞಾನಿಗಳೆನಿಸಿಕೊಂಡ ವಿಪ್ರರು ಅಚಾರಸಾಧನೆ-ಯೋಗಸಾಧನೆಗಳಲ್ಲಿ ಮುಂದುವರೆದವರಾಗಿ ಚಾಚೂತಪ್ಪದಂತೆ ಯಜ್ಞವಿಧಿಗಳನ್ನು ನೆರವೇರಿಸಿಕೊಂಡು ಹೋಗುತ್ತಿದ್ದರೂ ಸಹ, ಯಾವ ನಮ್ರತೆ, ಯಾವ ಭಕ್ತಿಭಾವ, ಯಾವ ಆರ್ದ್ರತೆಗಳೊಂದಿಗೆ ತಮ್ಮ ಕ್ರಿಯೆಗಳನ್ನು ನೆರವೇರಿಸಬೇಕೋ ಹಾಗೆ ಮಾಡುತ್ತಿಲ್ಲ. ಅತಿಯಾದ ಆತ್ಮ-ವಿಶ್ವಾಸ, ಮಿತಿಯಾದ ಭಕ್ತಿ - ಇವುಗಳಿಗೆ ಒಲಿಯನು, ನಮ್ಮ ಕೃಷ್ಣನು. ಬದಲಾಗಿ ಎಲ್ಲಿ ಪ್ರೇಮರಸವು ಆತನತ್ತ ಹರಿಯುತ್ತದೋ, ಭಕ್ತಿಯಿಂದ ಆತನಿಗೇ ತಮ್ಮ ಸರ್ವಸ್ವವನ್ನೂ ಒಪ್ಪಿಸುವ ಮಂದಿಯಿರುವರೋ, ಅಲ್ಲಿಯೇ ಒಲಿಯುವವನು ನಮ್ಮ ದೇವ!

ಇದೆಲ್ಲರದರ ತಾತ್ಪರ್ಯವೆಂದರೆ ಯಜ್ಞ-ಯಾಗಾದಿಗಳನ್ನು ಬಿಡಬೇಕೆಂದಲ್ಲ, ವೇದೋಪನಿಷತ್ತುಗಳ ಅಧ್ಯಯನವನ್ನು ತೊರೆಯಬೇಕೆಂದಲ್ಲ. ಅವೆಲ್ಲವೂ ಬೇಕೇ. ಆದರೆ, ಇವುಗಳೊಂದಿಗೆ ಭಕ್ತಿ-ರಸವನ್ನೂ ಸೇರಿಸಿಕೊಂಡರೆ ಇವಿಷ್ಟೂ ಶೀಘ್ರವಾಗಿಯೂ ಅಧಿಕವಾಗಿಯೂ ಫಲಕೊಡತಕ್ಕವು - ಎಂದರಿಯಬೇಕು. ಗೋಪಿಕೆಯರ ಮುಗ್ಧ-ಭಕ್ತಿಗೂ ಬೆಲೆಯುಂಟು; ಪ್ರಾಜ್ಞಂಮನ್ಯ-ವಿಪ್ರರ ಯಜ್ಞರೂಪ-ಕ್ರಿಯೆಗಳಿಗೂ ಬೆಲೆಯಿರದು, ಭಕ್ತಿಭಾವವಿಲ್ಲದಿದ್ದರೆ - ಎಂಬುದು ಇದರ ತಾತ್ಪರ್ಯ. ಪ್ರಾಜ್ಞಂಮನ್ಯ ಅಥವಾ ಪಂಡಿತಂಮನ್ಯ ಎಂದರೆ ತಾನೇ ಪ್ರಾಜ್ಞ, ತಾನೇ ಪಂಡಿತ - ಎಂದೆಲ್ಲಾ ಭಾವಿಸಿಕೊಂಡುಬಿಡುವವನು.

ಹೀಗೆ, ಪ್ರೇಮಕ್ಕೇ ಪ್ರಧಾನವಾಗಿ ಒಲಿಯುವವ ನಮ್ಮ ಹೃದಯೇಶ್ವರ - ಎಂಬ ಸಂದೇಶವನ್ನು ಈ ಶ್ಲೋಕವು ಹೃದಯಂಗಮವಾಗಿ ತಲುಪಿಸುತ್ತದೆಯಲ್ಲವೇ?

ಶ್ಲೋಕ ಹೀಗಿದೆ:

ಗೋಪಾಲಾಜಿರ-ಕರ್ದಮೇ ವಿಹರಸೇ, ವಿಪ್ರಾಧ್ವರೇ ಲಜ್ಜಸೇ! /

ಬ್ರೂಷೇ ಗೋಕುಲ-ಹುಂಕೃತೈಃ, ಸ್ತುತಿಶತೈರ್ ಮೌನಂ ವಿಧತ್ಸೇ ವಿದಾಮ್! ।

ದಾಸ್ಯಂ ಗೋಕುಲ-ಪುಂಶ್ಚಲೀಷು ಕುರುಷೇ, ಸ್ವಾಂತಂ ನ ದಾಂತಾತ್ಮಸು! /

ಜ್ಞಾತಂ ಕೃಷ್ಣ! ತವಾಂಘ್ರಿ-ಪಂಕಜ-ಯುಗಂ ಪ್ರೇಮ್ಣಾಚಲಂ ಮಂಜುಲಮ್॥ 

 ಸೂಚನೆ : 22/03/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, March 16, 2025

ವ್ಯಾಸ ವೀಕ್ಷಿತ 128 ಇಂದ್ರನೇ ಹಿಂದಿರುಗಿಹೋದ! (Vyaasa Vikshita 128)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in





ಪಿಶಾಚ-ಸರ್ಪ-ರಾಕ್ಷಸರುಗಳನ್ನು ಸಂಹರಿಸುತ್ತಿದ್ದ ಸರ್ವಭೂತಾತ್ಮನಾಗಿದ್ದ ಆ ಕೃಷ್ಣನ ರೂಪವು ಆಗ ಅತ್ಯುಗ್ರವಾಗಿ ಕಂಡಿತು.


ಆ ಸಂದರ್ಭದಲ್ಲಿ ಎಲ್ಲೆಡೆಗಳಿಂದಲೂ ಸಹ ದಾನವರು ಸೇರಿದ್ದರೂ, ಅವರಲ್ಲಾರೊಬ್ಬರೂ ಸಹ ಕೃಷ್ಣ-ಪಾಂಡವರೊಂದಿಗಿನ ಆ ಸಂಗ್ರಾಮದಲ್ಲಿ ಜಯಿಸಲು ಸಮರ್ಥರಾಗಲಿಲ್ಲ. ಅವರಿಬ್ಬರ, ಎಂದರೆ ಶ್ರೀಕೃಷ್ಣಾರ್ಜುನರ, ಬಲದಿಂದಾಗಿ ಆ ಕಾಡನ್ನು ರಕ್ಷಿಸಲು ಯಾವಾಗ ಆ ಸುರರು ಅಸಮರ್ಥರಾದರೋ, ಅಗ್ನಿಯನ್ನು ಶಮನಮಾಡಲೂ ಸಹ ಅಶಕ್ತರಾದರೋ, ಆಗ ಆ ದೇವತೆಗಳು ಪರಾಙ್ಮುಖರಾದರು, ಎಂದರೆ ಬೆನ್ನು ತೋರಿಸಿ ಓಡಿಹೋದರು.


ಹೀಗೆ ವಿಮುಖರಾಗಿ ಹೋದ ಅಮರರನ್ನು ಕಂಡು ಇಂದ್ರನು ಮುದಿತನೇ ಆದನು, ಎಂದರೆ ಸಂತೋಷಗೊಂಡನು. ಹಾಗೂ ಕೇಶವಾರ್ಜುನರ ಪ್ರಶಂಸೆಯನ್ನೇ ಮಾಡಿದನು.


ದೇವತೆಗಳು ಹಿಂದಿರುಗಲಾಗಿ, ಅಶರೀರವಾಣಿಯೊಂದು ನುಡಿಯಿತು. ಆ ನುಡಿಯು ಗಂಭೀರಸ್ವರದಿಂದ ಕೂಡಿದ ಧ್ವನಿಯನ್ನುಳ್ಳದ್ದಾಗಿತ್ತು. ಹಾಗೂ ಅದು ಇಂದ್ರನನ್ನು ಉದ್ದೇಶಿಸಿ ಹೇಳಿದ ಮಾತಾಗಿತ್ತು.


"ಓ ಇಂದ್ರನೇ, ನಿನ್ನ ಸ್ನೇಹಿತನಾದ ಸರ್ಪಶ್ರೇಷ್ಠನಾದ ತಕ್ಷಕನು ಈಗಿಲ್ಲಿಲ್ಲ. ಖಾಂಡವದ ದಹನದ ಸಮಯಕ್ಕೆ ಆತನು ಕುರುಕ್ಷೇತ್ರಕ್ಕೆ ಹೋಗಿದ್ದಾನೆ.


ನನ್ನ ಮಾತನ್ನು ಕೇಳು ಇಂದ್ರಾ, ಈ ವಾಸುದೇವಾರ್ಜುನರನ್ನು ಯುದ್ಧದಲ್ಲಿ ನೀ ಗೆಲ್ಲಲು ಸರ್ವಥಾ ಆಗದು. ಇವರಿಬ್ಬರು ನರನಾರಾಯಣರು: ನರನಾರಾಯಣಾವೇತೌ. ಹಿಂದೆ ದೇವತೆಗಳಾಗಿದ್ದವರು. ದೇವಲೋಕದಲ್ಲಿ ಖ್ಯಾತಿಹೊಂದಿದವರು.


ಇವರು ಎಂತಹ ವೀರ್ಯದಿಂದ ಕೂಡಿರುವವರು, ಹಾಗೂ ಎಂತಹ ಪರಾಕ್ರಮದಿಂದ ಸಂಪನ್ನರಾಗಿರುವವರು - ಎಂಬುದನ್ನು ನೀನೂ ಈಗ ಅರಿತುಕೊಂಡಿದ್ದೀಯೇ. ಇವರು ಅಜಿತರು, ಎಂದರೆ ಎಂದೂ ಸೋಲು ಕಂಡಿರದವರು. ಯುದ್ಧದಲ್ಲಿ ಇವರನ್ನು ಕೆಡವಲು ಯಾರೂ ಸಮರ್ಥರಲ್ಲ.


ಸರ್ವಲೋಕಗಳಲ್ಲಿಯೂ ಸಹ ಪುರಾತನರೆನಿಸಿದ ಋಷಿಶ್ರೇಷ್ಠರು, ಇವರಿಬ್ಬರು. ಸುರರೂ ಅಸುರರೂ, ಯಕ್ಷರೂ ರಾಕ್ಷಸರೂ ಗಂಧರ್ವರೂ, ನರರೂ ಕಿಂನರರೂ ಪನ್ನಗರೂ (ಎಂದರೆ ನಾಗರೂ) - ಇವರೆಲ್ಲರಿಗೂ ಪೂಜ್ಯರಾದವರು, ಇವರು.


ಆ ಕಾರಣದಿಂದಾಗಿ ದೇವತೆಗಳೊಂದಿಗೆ ನೀನು ಇಲ್ಲಿಂದ ಹಿಂದಿರುಗಿಹೋಗುವುದೇ ಲೇಸು. ಖಾಂಡವದ ವಿನಾಶವೆಂಬುದು ಸಹ ದೈವದಿಂದಲೇ, ಎಂದರೆ ಪೂರ್ವಕರ್ಮಗಳ ಫಲದಿಂದಲೇ, ಆಗಿರುವಂತಹುದೆಂಬುದನ್ನು ನೀ ಮನಗಾಣಬೇಕು."


ಈ ಪ್ರಕಾರವಾದ ಉಪಶ್ರುತಿಯನ್ನು ಕೇಳಿದ ಇಂದ್ರನು ಇದು ತಥ್ಯವೆಂಬುದನ್ನು ಕಂಡುಕೊಂಡು, ತನ್ನ ಕ್ರೋಧ ಹಾಗೂ ಅಸಹನೆಗಳನ್ನು ತೊರೆದು, ಸ್ವರ್ಗದತ್ತ ಸಾರಿದನು. ಆ ಮಹಾತ್ಮನೇ ಹಾಗೆ ಹೊರಟಿರುವುದನ್ನು ಕಂಡವರಾಗಿ ದೇವತೆಗಳೆಲ್ಲರೂ ಸಹ ಸೇನಾಸಮೇತರಾಗಿ ಇಂದ್ರನ ಬಳಿಗೆ ಸಾರಿದರು. ದೇವತೆಗಳೊಂದಿಗೆ ದೇವರಾಜನಾದ ಇಂದ್ರನೇ ಹೊರಟುಹೋಗುತ್ತಿರುವುದನ್ನು ಕಂಡು ವೀರ ಕೃಷ್ಣಾರ್ಜುನರಿಬ್ಬರೂ ಸಹ ಸಿಂಹನಾದವನ್ನು ಗೈದರು.


ದೇವರಾಜನಾದ ಇಂದ್ರನೇ ಹೋಗಿರಲಾಗಿ, ಕೇಶವಾರ್ಜುನರು ಪ್ರಹರ್ಷಗೊಂಡರು. ಇನ್ನು ಮುಂದಕ್ಕೆ ಆ ವನವನ್ನು ಯಾವುದೇ ಆತಂಕವಿಲ್ಲದೆ ಸುಟ್ಟುಹಾಕಿದರು. ಗಾಳಿಯು ಯಾವ ರೀತಿಯಲ್ಲಿ ಮೋಡಗಳನ್ನು ಚಲ್ಲಾಪಿಲ್ಲಿ ಮಾಡುವುದೋ ಅದೇ ರೀತಿಯಲ್ಲಿ ಅರ್ಜುನನು ದೇವತೆಗಳನ್ನು ಚಲ್ಲಾಪಿಲ್ಲಿಯಾಗಿಸಿದನು. ಖಾಂಡವದಲ್ಲಿ ಮನೆಮಾಡಿದ್ದ ಪ್ರಾಣಿಗಳನ್ನು ತನ್ನ ಶರಸ್ತೋಮದಿಂದ ಧ್ವಂಸಮಾಡಿದನು. ಅರ್ಜುನನು ಬಾಣಗಳನ್ನು ಪ್ರಯೋಗಿಸಿ ಕತ್ತರಿಸಿಹಾಕುತ್ತಿರಲು, ಯಾವೊಂದು ಪ್ರಾಣಿಯೂ ಸಹ ಅಲ್ಲಿಂದ, ಎಂದರೆ ಖಾಂಡವದಿಂದ, ಆಚೆ ಹೋಗಲು ಶಕ್ತವಾಗಲಿಲ್ಲ.


ಅಮೋಘವಾದ ಅಸ್ತ್ರಗಳನ್ನು ಹೊಂದಿದ್ದ ಅರ್ಜುನನನ್ನು ದೊಡ್ಡದೊಡ್ಡ ಪ್ರಾಣಿಗಳೂ ಸಹ ದಿಟ್ಟಿಸಿನೋಡಲೂ ಆಗದಾದವು, ಇನ್ನು ಅವನೊಡನೆ ಯುದ್ಧಮಾಡುವುದೆಲ್ಲಿ ಬಂತು?


ಸೂಚನೆ : 16/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.