ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಸಂಬಾಧೇ ಸುರಭೀಣಾಮ್
ಆ ಬಾಲಕನನ್ನು ನಾನು ಅವಲಂಬಿಸುತ್ತೇನೆ, ಎನ್ನುತ್ತಾನೆ ಲೀಲಾಶುಕ. ಯಾರು ಆ ಬಾಲಕ? ಮತ್ತಾರು, ನಮ್ಮ ಕೃಷ್ಣನೇ, ಬಾಲಕೃಷ್ಣನೇ. ಆದರೆ ಆತನ ಹೆಸರನ್ನು ಹೇಳುತ್ತಿಲ್ಲ, ನಮ್ಮ ಕವಿ. ಬದಲಾಗಿ ಆತನ ಕ್ರಿಯೆಯನ್ನು ಹೇಳುತ್ತಿದ್ದಾನೆ. ಅದಾದರೂ, ಎಲ್ಲ ಮಕ್ಕಳೂ ಮಾಡುವ ಕ್ರಿಯೆಯೇ, ಎಲ್ಲ ಚಿಣ್ಣರೂ ಆಡುವ ಆಟವೇ. ಆದರೂ ಅದರಲ್ಲಿ ವಿಶೇಷಗಳಿಲ್ಲದಿಲ್ಲ.
ಏನು ಮಾಡುತ್ತಿದ್ದಾನೆ, ಈ ಬಾಲಕ? ಅಮ್ಮನನ್ನು ಆಯಾಸಪಡಿಸುತ್ತಿದ್ದಾನೆ. ಹೇಗೆ? ಆತ ಓಡುತ್ತಿದ್ದಾನೆ, ಅಮ್ಮ ಆತನನ್ನು ಅಟ್ಟಿಸಿಕೊಂಡು ಬರುತ್ತಿದ್ದಾಳೆ. ಅವನ ಹಿಂದೆ ಓಡಿ ಓಡಿ ದಣಿಯುವುದಷ್ಟೇ ಆಗುತ್ತಿದೆ, ಓಡುತ್ತಿರುವ ಬಾಲಕ ಮಾತ್ರ ಕೈಗೆ ಸಿಗುತ್ತಿಲ್ಲ.
ಅವನ ಓಟವು ಏತಕ್ಕೆ – ಎಂದು ಕೇಳುವುದಕ್ಕಿಂತ, ಎಲ್ಲಿ - ಎಂದು ಕೇಳಬಹುದು. ಓಡುತ್ತೋಡುತ್ತಾ ಮೈಯೆಲ್ಲಾ ಕೆಸರು ಮಾಡಿಕೊಂಡಿದ್ದಾನೆ, ಈ ಬಾಲ. ಏಕೆ? ಅವನು ಓಡುತ್ತಿರುವುದು ಸುರಭಿಗಳ ಸಂಬಾಧದಲ್ಲಿ, ಎಂದರೆ ಗೋವುಗಳ ಮಂದೆಯಲ್ಲಿ. ಅಲ್ಲಿರದೇ ಪಂಕ, ಕೆಸರು? ಅದು ಅಂಟಿದೆ.
ಎಳಸಿನಿಂದಲೇ ಗೋ-ಪ್ರಿಯ, ನಮ್ಮ ಕೃಷ್ಣ: ಹಸುಗಳ ಸಂಗವೇ ಆತನಿಗೆ ಅಚ್ಚುಮೆಚ್ಚು. ಓಡುತ್ತೋಡುತ್ತ ಕೊಚ್ಚೆಯಲ್ಲಿ ಬಿದ್ದನೋ, ಸಗಣಿ ಹಾರಿಸಿಕೊಂಡನೋ, ಅಂತೂ ಮೈಯೆಲ್ಲಾ ಕೊಳೆ. ತನು-ವಿಲಗ್ನವೆಂದರೆ ತನುವಿಗೆ ವಿಲಗ್ನವಾಗಿರುವುದು, ಮೈಗೆ ಮೆತ್ತಿಕೊಂಡಿರುವುದು. ಜಂಬಾಲವೆಂದರೆ ಪಂಕ, ಕೆಸರು. ಜಂಬಾಲವಾಗಿದೆ ಮೈಯೆಲ್ಲಾ! ಮೈಗೆ ಬಟ್ಟೆಯನ್ನು ಸಹ ಹಾಕಿಕೊಂಡಿರುವನೋ ಇಲ್ಲವೋ!
ಪುಟ್ಟ ಪುಟ್ಟ ಹೆಜ್ಜೆಗಳಾದರೂ ಪುಟಪುಟನೆ ಓಡುವ ಆತನನ್ನು, ಯಶೋದೆಯು ಅಟ್ಟಿಸಿಕೊಂಡುಬಂದಳಾದರೂ ಹಿಡಿಯಲಾದೀತೇ? ಗೋಸಮೂಹದಲ್ಲಿಯ ಸಂದಿಗೊಂದಿಗಳಲ್ಲಿ ಆತನ ಓಟ, ಧಾವಂತ. ಅಮ್ಮನ ಕೈಗೆ ಸಿಕ್ಕಬಾರದೆಂಬ ಆತಂಕ. ಆತಂಕವೆಂಬ ಆಟ.
ಅಮ್ಮನಿಗೆ ಇಷ್ಟೊಂದು ಆಟವಾಡಿಸಿ ತ್ರಾಸಕೊಟ್ಟರೂ ಮುದ್ದೇ ನಮ್ಮ ಕೃಷ್ಣ. ಏಕೆ? ನೋಡಿದರೆ ದೃಷ್ಟಿಯಾಗುವಂತಿರುವ ಲಂಬಾಲಕ ಆತನದು. ಲಂಬವಾದ ಅಲಕ - ಅರ್ಥಾತ್ ನೀಳವಾದ ಮುಂಗುರುಳು. ಏನು ಮುಂಗುರುಳೆಂದರೆ? ಮುಂದೆ ಎಂದರೆ ಮುಖದ ಮುಂದೂ, ಲಂಬಿಸುವ ಕುರುಳು. ಕುರುಳೆಂದರೆ ಕೂದಲು. ಹೀಗೆ ಮುದ್ದಾದ ಉದ್ದವಾದ ಮುಂಗುರುಳುಗಳಿಂದ ಕಂಗೊಳಿಸುವ ಕಡುಮುದ್ದಿನ ಕೂಸೇ ಈ ಕೃಷ್ಣ.
ಶ್ಲೋಕದಲ್ಲಿಯ ಅನುಪ್ರಾಸ ಆಸ್ವಾದ್ಯ: ಸಂಬಾಧ-ಅಂಬಾ-ಲಂಬಾಲಕ-ಜಂಬಾಲಗಳಲ್ಲದೆ, ತಂ ಬಾಲಂ ಮತ್ತು ಅವಲಂಬೇ - ಎಂಬುದಾಗಿ ಆರು ಎಡೆಗಳಲ್ಲಿ "ಅಂಬಾ" ಶಬ್ದವು ಕೇಳಿಬರುವುದಲ್ಲವೇ? ಗೋ-ಸಮೂಹದಲ್ಲಿಯೇ ಅಂಬಾ-ಶಬ್ದವು ಕೇಳಿಬರುತ್ತಲೇ ಇರುವುದಲ್ಲವೇ? ಹೀಗೆ ಯುಕ್ತ-ಶಬ್ದ-ಪ್ರಯೋಗದಿಂದಲೇ ಅರ್ಥದ ಸಂನಿವೇಶವನ್ನು, ಪರಿಸರದ ಪರಿಚಯವನ್ನು, ಒದಗಿಸಿಬಿಡಬಲ್ಲ, ನಮ್ಮ ಕವಿ! ಕಿವಿಗೆ ಕೊಟ್ಟದ್ದು ಕಣ್ಣಿನ ಮುಂದೆ ತಂದಿಡುತ್ತದೆ: ಶಬ್ದವೇ ರೂಪಕ್ಕೆ ದಾರಿಯಾಯಿತು. ಇದಲ್ಲದೆ, ಬಾಲ-ಜಂಬಾಲಗಳಲ್ಲೂ ಶಬ್ದಚಮತ್ಕಾರವಿಲ್ಲವೇ?
ಏನೋ ದನಗಳ ನಡುವೆ ಓಡಾಡುವ ಅನಾಗರಿಕ ದನಗಾರನೆಂದುಕೊಳ್ಳಬೇಡಿ, ಈತನನ್ನು. ಇಲ್ಲಿರುವ ಗೋವುಗಳನ್ನು ಸುಮ್ಮನೆ ಪಶುವೆಂದಿಲ್ಲ. ಇವು ಸುರಭಿಗಳು. ಸುರಭಿಯೆಂದರೆ ಕಾಮಧೇನುವೇ ಸರಿ! "ನೀನಾರಿಗಾದೆಯೋ ಎಲೆ ಮಾನವ?" ಎಂದೋ (ಅಥವಾ ಇನ್ನೂ, "ಹುಲುಮಾನವ!" ಎಂದೋ) ಕೇಳಬಲ್ಲಂತಹವು!
ಸುರಭಿಯೆಂದರೆ ಒಳ್ಳೆಯ ಪರಿಮಳವುಳ್ಳ ವಸ್ತುವೂ ಹೌದು; ಎಂದೇ ಸೌರಭವೆಂದರೆ ಸುಗಂಧ. ಆರೋಗ್ಯವಾಗಿರುವ ಗೋಗಳ ಸ್ತೋಮವು ಪವಿತ್ರವೂ ಹೌದು. ಕೊಟ್ಟಿಗೆಯೆಂಬುದು ಧ್ಯಾನಕ್ಕೆ ಸಹ ಪ್ರಶಸ್ತವಾದ ಎಡೆಯೆಂದು ಯೋಗಶಾಸ್ತ್ರವು ಹೇಳುತ್ತದೆ. ಗೋವುಗಳ ಅಂಗಗಳಲ್ಲಿ ನಾನಾ-ದೇವತಾ-ಸಾಂನಿಧ್ಯವೇ ಇರಬಲ್ಲುದು. ಗೋಮಯ-ಗವ್ಯಗಳು ಮೇಲ್ನೋಟಕ್ಕೆ ಕೊಳಕಾಗಿ ಕೆಲವರಿಗೆ ಕಾಣಿಸಬಹುದಾದರೂ ಅವಲ್ಲಿ ಪಾವಿತ್ರ್ಯವುಂಟು. ಪಂಚ-ಗವ್ಯವೆಂಬುದು ಪಾಪಹರ-ದ್ರವ್ಯಗಳಲ್ಲಿ ಪ್ರಶಸ್ತವಲ್ಲವೇ? ಮತಾಂತರಗೊಂಡವರು ಹಿಂದಿರುಗಬೇಕೆಂದರೆ ಪಂಚಗವ್ಯ-ಸ್ವೀಕಾರವೇ ಮೊದಲ ಹೆಜ್ಜೆಯೆನ್ನುತ್ತಾರೆ. ಗೋ-ಮೂತ್ರಕ್ಕೆ ಅನೇಕ ಔಷಧೀಯ ಗುಣಗಳುಂಟೆಂಬುದನ್ನು ಆಧುನಿಕ-ವಿಜ್ಞಾನವೂ ಖಚಿತಪಡಿಸುತ್ತಿದೆ. ಗೋವುಗಳು ರಾಷ್ಟ್ರದ ಸಂಪತ್ತು. ಗೋ-ರಕ್ಷೆಯೆಂಬುದು ವೈಶ್ಯರಿಗೆ ವೃತ್ತಿಯೇ ಹೌದು. ಕೃಷಿ-ಗೋರಕ್ಷೆ-ವಾಣಿಜ್ಯಗಳಲ್ಲಿ ಪರಸ್ಪರ ಒಂದಕ್ಕೊಂದರ ನಂಟಿದೆ, ಕೂಡ. ಗೋಕುಲದ ಗೊಲ್ಲರೆಂದರೆ ವೈಶ್ಯರೇ.
ಎಳೆಮಕ್ಕಳನ್ನು ಗೋವುಗಳು ಗುಮ್ಮವು, ತುಳಿಯವು. ಮನೆಯ ಗೋವುಗಳೆಂದರಂತೂ ಹೇಳಲೇಬೇಕಿಲ್ಲ. ಪ್ರೀತಿಯಿಂದ ಬೆಳೆಸಿದ ಇವು ತುಂಟಹಸುಗಳಲ್ಲ. ಎಂದೇ ಮನೆಯಲ್ಲಿ ಗೋ-ವೃಂದ, ಎಂದರೆ ಗೋ-ಸಮೂಹವೇ, ಇದೆ. ಎಂದೇ ಗೋಪಾಲಕನ ಮಗನಾಗಿ ಬೆಳೆದ ಪುಟ್ಟಕೃಷ್ಣನ ಆಟ ಗೋ-ಸ್ತೋಮದಲ್ಲೇ. ಅದನ್ನೇ ಶ್ಲೋಕದಲ್ಲಿ ಸುರಭಿಗಳ ಸಂಬಾಧವೆಂದಿರುವುದು. ಸಂಬಾಧವೆಂದರೆ ಕಿಕ್ಕಿರಿದಿರುವೆಡೆ.
ಅವುಗಳಲ್ಲಿ ಪರಸ್ಪರವಿರುವ ಕಿಂಚಿತ್ತಾದ ಸಂದಿಯಲ್ಲಿ ಓಡಿದನೋ, ಅವುಗಳ ಕಾಲುಗಳ ನಡುವೆಯೇ ತೂರಿಹೋಗುತ್ತಿದ್ದನೋ, ಪುಟ್ಟಕೃಷ್ಣ. ಒಟ್ಟಿನಲ್ಲಿ ಅಟ್ಟಿಸಿಕೊಂಡುಬಂದರೂ ಅಮ್ಮನಿಗೆ ಹಿಡಿಯಲಾದ ಓಟ ಈ ಬಾಲನದು! ಅಮ್ಮನಿಗೆ ಕಾಟ ಈತನ ಆಟ!
ಸಂಬಾಧೇ ಸುರಭೀಣಾಂ
ಅಂಬಾಂ ಆಯಾಸಯಂತಂ ಅನುಯಾಂತೀಮ್ |
ಲಂಬಾಲಕಮ್ ಅವಲಂಬೇ
ತಂ ಬಾಲಂ ತನು-ವಿಲಗ್ನ-ಜಂಬಾಲಮ್ ||
ಮತ್ತೊಂದು ಶ್ಲೋಕ.
ಯಾವುದಾದರೂ ನಿಷ್ಪ್ರಯೋಜಕವಾದ ಕೆಲಸವನ್ನು ನಾವು ಮಾಡುವುದಾದಲ್ಲಿ, ಹಿರಿಯರು ಹಿತೋಕ್ತಿಯೊಂದನ್ನು ಹೇಳುವುದುಂಟು: "ಪುಣ್ಯವಿಲ್ಲ, ಪುರುಷಾರ್ಥವಿಲ್ಲ" ಎಂದೋ, "ಇಹವಿಲ್ಲ, ಪರವಿಲ್ಲ" ಎಂದೋ ಮೂದಲಿಸುವುದುಂಟು.
ಕೆಲವೊಮ್ಮೆ ಇಹ-ಪರವೆಂದೋ ಐಹಿಕ-ಆಮುಷ್ಮಿಕವೆಂದೋ ಸಹ ಎರಡಾಗಿ ಹೇಳುವುದುಂಟು. ಇಹ ಎಂದರೆ ಈ ಲೋಕ; ಐಹಿಕವೆಂದರೆ ಈ ಲೋಕಕ್ಕೆ ಸಂಬಂಧಪಟ್ಟುದು. ಪರವೆಂದರೆ ಬೇರೆಯದು, ಶ್ರೇಷ್ಠವಾದುದು. ಪರಲೋಕವೆಂದರೆ ಬೇರೆಯ ಲೋಕ. ಸ್ವರ್ಗವನ್ನು ಪರವೆನ್ನುವುದುಂಟು. ಪರಂಧಾಮವೆನ್ನುವಾಗಲೂ ಶ್ರೇಷ್ಠವಾದ ನೆಲೆಯೆಂಬರ್ಥವೇ.
ಕೆಲವೊಮ್ಮೆ ತ್ರಿವರ್ಗ-ಅಪವರ್ಗವೆಂದೋ ಅಭ್ಯುದಯ-ನಿಃಶ್ರೇಯಸವೆಂದೋ ಹೇಳುವುದುಂಟು. ತ್ರಿವರ್ಗವೆಂದರೆ ಧರ್ಮ-ಅರ್ಥ-ಕಾಮಗಳು. ಇವೇ ಅಭ್ಯುದಯಗಳು. ನಿಃಶ್ರೇಯಸವೆಂದರೂ ಅಪವರ್ಗವೆಂದರೂ ಒಂದೇ: ಮೋಕ್ಷ. ನಿರ್ವಾಣವೆಂದರೂ ಮೋಕ್ಷವೇ.
"ಶರೀರಕ್ಕೆ ಸಂಬಂಧಿಸಿದ ಹಾಗೂ ಮನಸ್ಸಿಗೆ ಸಂಬಂಧಿಸಿದ ಎಲ್ಲ ಸಂಕಲ್ಪಗಳನ್ನೂ ಯಾವನು ತೊರೆಯುವನೋ ಆತನು ನಿರ್ವಾಣವನ್ನು ಪಡೆಯುವನು - ಇಂಧನಗಳು ಮುಗಿದುಹೋಗಿರುವ ಅಗ್ನಿಯ ಹಾಗೆ" - ಎಂಬುದಾಗಿ ಮಹಾಭಾರತದ ಶ್ಲೋಕವೊಂದು ಹೇಳುತ್ತದೆ.
ನಿರ್ವಾಣವನ್ನು ಆಚಿನದು ಎಂದು ಹೇಳಿ, ಇತರ ಪುರುಷಾರ್ಥ-ತ್ರಯವನ್ನು ಈಚಿನದು ಎನ್ನುವುದೂ ಉಂಟು. ಅರ್ವಾಚೀನವೆಂದರೆ ಈಚಿನದು. ಹೀಗೆ ನಿರ್ವಾಣ-ಅರ್ವಾಚೀನಗಳು ಜೀವನದ ಲಕ್ಷ್ಯಗಳು.
ಕೃಷ್ಣನನ್ನು ಎಲ್ಲಿಯೇ ಆಗಲಿ ಸ್ಮರಿಸಿ ಆತನಲ್ಲಿ ಪೂರ್ಣವಿಶ್ವಾಸವಿಟ್ಟಲ್ಲಿ ನಿರ್ವಾಣವೂ ದುರ್ವಾರ - ಎಂದರೆ ತಡೆಯಲಾಗದ್ದು, ಅರ್ಥಾತ್ ದೊರೆತೇ ದೊರೆಯತಕ್ಕದ್ದು; ಹೀಗಿರುವಾಗ ಅರ್ವಾಚೀನಗಳ ಮಾತೇನು? - ಎಂದು ಈ ಶ್ಲೋಕದಲ್ಲಿ ಕೇಳಿದೆ. ಕಷ್ಟವಾದದ್ದೇ ಸುಲಭವಾಯಿತೆಂದರೆ, ಸುಲಭವಾದದ್ದೂ ದೊರೆಯುವುದೆಂಬುದನ್ನು ಬಾಯಿಬಿಟ್ಟೇ ಹೇಳಬೇಕೇ?
ಅಲ್ಲಿಗೆ, ಕೃಷ್ಣನನ್ನು ನೆಚ್ಚಿ ನಡೆದುಕೊಂಡವನಿಗೆ ನಾಲ್ಕೂ ಪುರುಷಾರ್ಥಗಳೂ ದಕ್ಕುವುವು. ಕೃಷ್ಣನಲ್ಲಿ ಅಚಲವಾದ ವಿಶ್ವಾಸವು ಹುಟ್ಟಿತೆಂದರೆ ಇಹ-ಪರಗಳೆರಡೂ ಅವಶ್ಯವಾಗಿ ಲಭಿಸುವುವು - ಎನ್ನುತ್ತದೆ ಈ ಶ್ಲೋಕ. ಇನ್ನೇನು ಬೇಕು ಜೀವನಕ್ಕೆ?
ಯತ್ರ ವಾ ತತ್ರ ವಾ ದೇವ
ಯದಿ ವಿಶ್ವಸಿಮಸ್ತ್ವಯಿ |
ನಿರ್ವಾಣಮಪಿ ದುರ್ವಾರಮ್
ಅರ್ವಾಚೀನಾನಿ ಕಿಂ ಪುನಃ? || ೩.೭೧
ಸೂಚನೆ : 28/12/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.