Sunday, June 25, 2023

ಯಕ್ಷ ಪ್ರಶ್ನೆ 43 Yaksha prashne 43

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 42 ಶೀತಕ್ಕೆ ಔಷಧ ಯಾವುದು ?

ಉತ್ತರ - ಅಗ್ನಿ

ಯಕ್ಷನ ಪ್ರಶ್ನೆಗಳಲ್ಲಿ ಒಂದು ವಿಶೇಷವನ್ನು ಗಮನಿಸಬೇಕು. ಈ ಪ್ರಪಂಚದಲ್ಲಿ ಸಿಗುವ ಸಾಮಾನ್ಯವಾದ ವಿಷಯದಿಂದ ಅಧ್ಯಾತ್ಮದ ಶಿಖರವನ್ನು ಏರುವ ವಿಧಾನ. ಈ ಹಿಂದಿನ ಎರಡು ಪ್ರಶ್ನೋತ್ತರಗಳನ್ನು ಗಮನಿಸಿದರೆ ಈ ವಿಷಯ ತಿಳಿಯುತ್ತದೆ. ಸೂರ್ಯ ಮತ್ತು ಚಂದ್ರರನ್ನು ಇಟ್ಟುಕೊಂಡು ಸೃಷ್ಟಿಯ ಮೂಲ ಮತ್ತು ಅದರ ವಿಕಾಸವನ್ನು ಯಾವ ರೀತಿಯಾಗಿ ವಿವರಿಸಲಾಗಿದೆ ಎಂದು ತಿಳಿಯುತ್ತದೆ. ಈ ಪ್ರಶ್ನೆಯಿಂದಲೂ ಅಂತಹದ್ದೇ ಒಂದು ಪ್ರಯತ್ನ ನಡೆದಿದೆ 'ಶೀತಕ್ಕೆ ಔಷಧ ಯಾವುದು?' ಎಂದು. ಉತ್ತರ ಅಗ್ನಿ ಎಂಬುದಾಗಿ.

ಶೀತ ಅಂದರೆ ತಂಪು. ಅದಕ್ಕೆ ತಾಪವನ್ನು ಸೇರಿಸಿದಾಗ ಶೈತ್ಯದ ಗುಣ ಕಡಿಮೆಯಾಗುತ್ತದೆ. ಇದು ಸಾಮಾನ್ಯನಿಗೂ ತಿಳಿದದ್ದೇ. ನೀರನ್ನು ಕಾಯಿಸಬೇಕಾದರೆ ಬೆಂಕಿಯನ್ನು ಹಾಕಬೇಕು. ಇದನ್ನು ಆಯುರ್ವೇದದ ದೃಷ್ಟಿಯಿಂದಲೂ ನೋಡಬಹುದು. ನೀರು ಔಷಧವೇ. ಶೀತವಾದಾಗಲೂ ಅಥವಾ ಉಷ್ಣವಾದಾಗಲೂ ನೀರಿನಿಂದ ಉಪಶಮನ ಮಾಡಬಹುದು. ದೇಹದಲ್ಲಿ ಉಷ್ಣವಾದಾಗ ಸಹಜವಾಗಿ ತಂಪಾದ ನೀರನ್ನು ಕೊಟ್ಟರೆ ದೇಹದ ತಾಪ ಕಡಿಮೆಯಾಗುತ್ತದೆ. ಬಾಯಾರಿದಾಗ ತಣ್ಣಿರು ಹಿತವೆನಿಸುವುದಲ್ಲವೇ? ಅಂತೆಯೇ ಮೈಯ್ಯಲ್ಲಿ ಶೀತಬಾಧೆಯುಂಟಾದಾಗ ಕಾಯಿಸಿದ ನೀರನ್ನು ಕೊಟ್ಟಾಗ ಆ ಶೀತಬಾಧೆ ನಿವಾರಣೆಯಾಗುತ್ತದೆ. ಹೀಗೆ ಶೀತಕ್ಕೆ ಅಗ್ನಿಯಿಂದ ಉಪಶಮನವಾಗುವುದಂತೂ ನಿಜವೇ. ಆದರೆ ಯಕ್ಷನಪ್ರಶ್ನೆಯ ಆಶಯ ಇಷ್ಟೇನಾ?

ಸಾಮಾನ್ಯದಿಂದ ಅಸಾಮಾನ್ಯದ ಕಡೆಗೆ, ಭೌತಿಕದಿಂದ ಅಧ್ಯಾತ್ಮದ ಕಡೆಗೆ ಕರೆದುಕೊಂಡುಹೋಗುವ ಪ್ರಯತ್ನವಿದೇ ತಾನೆ. ಮಕ್ಕಳಿಗೆ ಕಥೆಯನ್ನು ಹೇಳಿ ಊಟಮಾಡಿಸಿದಂತೆ. ಪರ್ಯವಸಾನದಲ್ಲಿ ಅಧ್ಯಾತ್ಮವೇ. ಅದಕ್ಕೆ ಸಾಧನ ನಮ್ಮ ಕಣ್ಣಿಗೆ ಕಾಣುವ ವಿಷಯ. ಇಲ್ಲಿ ಶೀತದ ಗುಣ - ಚಲಿಸದಿರುವುದು, ಜಾಡ್ಯ. ಅದಕ್ಕೆ ಚಾಲನೆ ಕೊಡುವ ಪದಾರ್ಥವೇ ಅಗ್ನಿ. ಅಗ್ನಿಯ ಸಂಯೋಗದಿಂದ ನೀರು ಆವಿಯಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತದೆ. ಸಮುದ್ರದ ನೀರು ಆವಿಯಾಗಿ ಮೋಡವಾಗಿ ಬೇಕಾದ ಕಡೆ ಮಳೆಯಾಗಿ ಸುರಿಯುತ್ತದಷ್ಟೇ. ಶೀತವು ಜಾಡ್ಯ, ಅಜ್ಞಾನ, ಅಂಧಕಾರದ ಸಂಕೇತ. ಅಗ್ನಿಯು ಉತ್ಸಾಹ, ಜ್ಞಾನ, ಪ್ರಕಾಶದ ಸಂಕೇತ. ಭೌತಿಕ, ದೈವಿಕ ಮತ್ತು ಅಧ್ಯಾತ್ಮ ಎಂಬ ಮೂರು ಪರದೆಯನ್ನು ತೆರೆದು ಒಳಹೊಗಬೇಕು ಎಂಬುದು ನಮ್ಮೆಲ್ಲರ ಆಕಾಂಕ್ಷೆ. ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕವಾದ ಮೂರು ಸ್ತರಗಳಲ್ಲಿ ಇರುವ ಜಾಡ್ಯ ಅಥವಾ ಅಂಧಕಾರವನ್ನು ಇಲ್ಲವಾಗಿಸಬೇಕು. ಇದಕ್ಕೆ ಬೇಕು ಉತ್ಸಾಹ. ನಾವು ಮಾಡುವ ದಿನನಿತ್ಯದ ಕಾರ್ಯಗಳಲ್ಲಿ ಉತ್ಸಾಹವನ್ನು ತೋರಬೇಕು. ಆಗ ಆ ಕಾರ್ಯವು ಸತ್ಫಲವನ್ನು ನೀಡಲು ಸಾಧ್ಯ. ಮಾಡುವ ಕಾರ್ಯವು ನಿರುತ್ಸಾಹದಿಂದ ಕೂಡಿದ್ದರೆ ಕಾರ್ಯ ಹೇಗೆ ಸಮರ್ಪಕವಾಗಲು ಸಾಧ್ಯವಾದೀತು ಅಲ್ಲವೇ? ಆದ್ದರಿಂದ ಶೀತವೆಂಬ ಸ್ವಭಾವವನ್ನು ತೆಗೆಯಲು ಅಗ್ನಿಯು ಯಾವರೀತಿಯಾಗಿ ಸಹಾಯವನ್ನು ಮಾಡುತ್ತದೆಯೋ ಜ್ಞಾನವು ಅಜ್ಞಾನವನ್ನು ನಿವಾರಿಸುತ್ತದೆ. ವಿದ್ಯೆಯು ಅವಿದ್ಯೆಯನ್ನು ದೂರಮಾಡುತ್ತದೆ. ವಿವೇಕವು ಅವಿವೇಕವನ್ನು ನಾಶಮಾಡುತ್ತದೆ ಎಂಬ ತತ್ತ್ವಿಕವಾದ ವಿಷಯವನ್ನು ವಿವರಿಸಲು ಈ ಸಾಮಾನ್ಯವಾದ ಪ್ರಶ್ನೆಯನ್ನು ಇಲ್ಲಿ ಯಕ್ಷನು ಕೇಳಿದ್ದಾನೆ.

ಸೂಚನೆ : 25/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.