Friday, June 16, 2023

ವಿದ್ಯೆಯ ಗುರಿ (Vidyeya guri)


ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)
ಒಂದೂರಿನಲ್ಲಿ ಗುರುಗಳೊಬ್ಬರಿದ್ದರು. ವ್ಯಾಕರಣ, ಜ್ಯೋತಿಷ, ವೇದಾಂತ ಹಾಗೂ ತರ್ಕಗಳಲ್ಲಿ ಅವರಿಗೆ ಪಾಂಡಿತ್ಯವಿತ್ತು. ಪ್ರತಿಶಾಸ್ತ್ರಾಧ್ಯಯನಕ್ಕೂ ಒಬ್ಬೊಬ್ಬ ವಿದ್ಯಾರ್ಥಿಯು ಬರುತ್ತಿದ್ದ. ಗುರುಗಳು ಶ್ರದ್ಧೆಯಿಂದಲೇ ಪಾಠ ಹೇಳುವವರಾದರೂ, ತರ್ಕದ ವಿದ್ಯಾರ್ಥಿಗೆ ವಿಶೇಷವಾದ ಆಸ್ಥೆಯಿಂದ ಪಾಠ ಹೇಳುತ್ತಿದ್ದಾರೆಂದು  ನಿತ್ಯವೂ ಗುರುಗಳ ಪಾಠದ ವೈಖರಿಯನ್ನು ಗಮನಿಸುತ್ತಿದ್ದ ಅವರ ಮಗಳಿಗೆ ಅನ್ನಿಸಿತು. ತಡೆಯಲಾರದೆ ಒಮ್ಮೆ ತಂದೆಯನ್ನು ಈ ಬಗ್ಗೆ ಪ್ರಶ್ನಿಸಿಯೇ ಬಿಟ್ಟಳು. ಗುರುಗಳು ಮಂದಸ್ಮಿತರಾಗಿ, "ನಾಳೆ ಒಂದು ಸಣ್ಣ ಪ್ರಯೋಗವನ್ನು ಮಾಡೋಣ. ಉತ್ತರವು ನಿನಗೇ ತಿಳಿಯುತ್ತದೆ" ಎಂದರು. 


ಮರುದಿನ ತನ್ನ ಮಗಳನ್ನು ಕರೆದು, "ನಾನು ಮನೆಯ ಒಳಗಿರುತ್ತೇನೆ. ಒಬ್ಬೊಬ್ಬ ಶಿಷ್ಯನೂ ಒಂದೊಂದು ಕಾಲಾವಧಿಯಲ್ಲಿ ಪಾಠಕ್ಕೆ ಬರುತ್ತಾನೆ. ಬಂದೊಡನೆಯೇ ನನ್ನನ್ನು ಕಾಣದೆ "ಇಂದು ಪಾಠವಿಲ್ಲವೇ? ಗುರುಗಳು ಕಾಣಿಸುತ್ತಿಲ್ಲವಲ್ಲ?" ಎಂದು ನನ್ನ ಬಗ್ಗೆ ಪ್ರಶ್ನಿಸುತ್ತಾನೆ."ಗುರುಗಳ ಹೊಟ್ಟೆಗೆ ಒಂದು ಗೋಸುಂಬೆ ಹೊಕ್ಕಿದೆ" ಎಂದಷ್ಟೇ ಹೇಳು. ಮುಂದಿನದು ನಿನಗೇ ತಿಳಿಯುತ್ತದೆ" ಎಂದರು. ಎಂದಿನಂತೆ ಪಾಠಕ್ಕೆ ಮೊದಲು ಬಂದವ, ವ್ಯಾಕರಣದ ವಿದ್ಯಾರ್ಥಿ. ಗುರುಗಳ ಬಗ್ಗೆ ಪ್ರಶ್ನಿಸಿದ. ಕೂಡಲೇ ಗುರುಪುತ್ರಿಯು, ತಂದೆ ಹೇಳಿಕೊಟ್ಟಂತೆಯೇ ಹೇಳುತ್ತಾಳೆ. ವ್ಯಾಕರಣದ ವಿದ್ಯಾರ್ಥಿ "ಈ ವಾಕ್ಯ ವ್ಯಾಕರಣಶುದ್ಧವಾಗಿದೆ" ಎಂದು ಹೇಳಿ ಗುರುಗಳ ಬಗ್ಗೆ ಮತ್ತೇನನ್ನೂ ವಿಚಾರಿಸದೆ ಹಿಂತಿರುಗುತ್ತಾನೆ. ನಂತರ ಬಂದ ಶಿಷ್ಯ, ಜ್ಯೋತಿಶ್ಶಾಸ್ತ್ರದವನು. ಅವನು ಗುರುಗಳ ಹೊಟ್ಟೆಗೆ ಗೋಸುಂಬೆ ಹೊಕ್ಕಿರಬೇಕೆಂದರೆ ಅವರ ಗ್ರಹಚಾರ ಸರಿಯಿಲ್ಲವೆಂದೆನಿಸುತ್ತದೆ;  ಇದನ್ನು ಪರಿಹರಿಸಲು ದಾನ, ಜಪ, ಹೋಮ, ದೇವತಾರ್ಚನೆ - ಇವುಗಳಲ್ಲಿ ಏನನ್ನು ಮಾಡಬಹುದು? ಎಂದು ಚಿಂತಿಸುತ್ತಾ ನಿರ್ಗಮಿಸುತ್ತಾನೆ. ನಂತರ ಬಂದವನು ವೇದಾಂತದ ವಿದ್ಯಾರ್ಥಿ. ಅವನು ಗುರುಪುತ್ರಿಯ ಮಾತನ್ನು ಕೇಳಿ, ಗುರುವಿನ ಶರೀರವು ಪೃಥಿವೀ ತತ್ತ್ವದಿಂದಲೇ ಆದದ್ದು; ಗೋಸುಂಬೆಯದೂ ಅಷ್ಟೇ. ಒಂದು ತತ್ತ್ವದ ಒಳಗೆ ಅದೇ ತತ್ತ್ವದ ಮತ್ತೊಂದು ಹೊಕ್ಕಿದೆ. ಸರಿಯಾಗಿಯೇ ಇದೆ ಎನ್ನುತ್ತಾ ಹೊರಟುಬರುತ್ತಾನೆ. ನಂತರ ಬಂದವನು ತರ್ಕದ ವಿದ್ಯಾರ್ಥಿ. ಅವನು ಮಾತ್ರ  ಗುರುಪುತ್ರಿಯ ಮಾತನ್ನು ಕೇಳುತ್ತಲೇ ಗೋಸುಂಬೆಯಂತಹ ಪ್ರಾಣಿ, ಒಬ್ಬ ಮನುಷ್ಯನ ಹೊಟ್ಟೆಯೊಳಗೆ ಹೊಗುವುದು ಹೇಗೆ ಸಾಧ್ಯ? ಒಂದು ಪಕ್ಷ ಹೊಕ್ಕಿತೆಂದರೆ, ಗುರುಗಳು ಜೀವದಿಂದಿರಲು ಸಾಧ್ಯವೇ? ಹಾಗೊಮ್ಮೆ ಗುರುಗಳು ಪ್ರಾಣಬಿಟ್ಟಿದ್ದರೆ, ಮಗಳು ಹೀಗೆ ಲವಲವಿಕೆಯಿಂದ ಓಡಾಡಿಕೊಂಡಿರಲು ಹೇಗೆ ತಾನೇ ಸಾಧ್ಯವಾದೀತು? ಈ ಮಾತಿನಲ್ಲೇನೋ ಮೋಸವಿದೆ ಎಂದು ಊಹಿಸಿ, ಗುರುವಿನ ಮಗಳ ಮುಂದೆ ತನ್ನ ಸಂದೇಹವನ್ನು ವ್ಯಕ್ತಪಡಿಸುತ್ತಾನೆ. ಗುರುಪುತ್ರಿಗೆ ಆಗ, ನಾಲ್ಕು ಶಿಷ್ಯರಲ್ಲಿ ತಾನು ಕಲಿತ ವಿದ್ಯೆಯನ್ನು ತಾರ್ಕಿಕ ಒರೆಗಲ್ಲಿಗೆ ಹಚ್ಚಿ, ಚಿಂತಿಸಬಲ್ಲವ ಇವನೊಬ್ಬನೇ; ಆದ್ದರಿಂದಲೇ ತಂದೆಯು ಇವನಲ್ಲಿ ವಿಶೇಷ ಆಸ್ಥೆ ವಹಿಸುತ್ತಿದ್ದಾರೆ ಎಂಬ ಸತ್ಯ ಗೋಚರವಾಗುತ್ತದೆ.


ಯಾವುದೇ ವಿದ್ಯೆಯನ್ನು ಕಲಿತರೂ ಅದನ್ನು ನಮ್ಮ ಜೀವನಕ್ಕೆ ಬಳಸಿಕೊಳ್ಳುವ ಬಗೆ ಹೇಗೆ ಎಂಬುದರ ಬಗ್ಗೆ ಒಂದು ಸಾಮಾನ್ಯಜ್ಞಾನ (common sense) ಅಗತ್ಯ. ಕೆಲವು ವಿದ್ಯೆಗಳು ಪ್ರತ್ಯಕ್ಷವಾಗಿ ನಮಗೆ ಸಹಕಾರಿ; ಕೆಲವು ಪರೋಕ್ಷವಾಗಿ ಉಪಯುಕ್ತ. ಉದಾಹರಣೆಗೆ ಗಣಿತದಂತಹ ವಿಷಯಗಳು ಬುದ್ಧಿಯ ತಾರ್ಕಿಕ ಚಿಂತನಾಶಕ್ತಿಯನ್ನು ಹರಿತಗೊಳಿಸಿ ನಮಗೆ ಸಹಕಾರಿಯಾಗಬಲ್ಲವು. ಹೀಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ವಿದ್ಯಾಭ್ಯಾಸವು ನಮಗೆ ಉಪಯುಕ್ತವಾಗಿರಬೇಕು.


ಇಂದು ಆಧುನಿಕ ವಿದ್ಯೆಗಳು ಪ್ರಚಲಿತವಾಗಿರುವಂತೆ, ನಮ್ಮ ದೇಶದಲ್ಲಿ ಋಷಿಗಳು ತಂದ ವಿದ್ಯೆ ಹಾಗೂ ಕಲೆಗಳೂ ಇವೆ. ಆದರೆ ಅವು ಋಷಿಗಳು ಉದ್ದೇಶಿಸಿದ ಫಲಗಳನ್ನು ಇಂದು ಎಷ್ಟೋ ನೇರಗಳಲ್ಲಿ ನೀಡುತ್ತಿಲ್ಲ. ಹಾಗಾಗಲು ಕಾರಣವೇನೆಂಬುದರ ಬಗ್ಗೆ ಜಿಜ್ಞಾಸೆಯೂ ಬೇಕಾಗಿದೆ. ಮೊದಲಿಗೆ ಆರ್ಷವಿದ್ಯೆಗಳ ಬಗ್ಗೆ ಒಂದು ಮೂಲಭೂತವಾದ ನೋಟ ಬೇಕು.


ವಿದ್ಯೆಯ ಬಗ್ಗೆ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. "ವಿದ್ಯೆ ಎನ್ನುವ ಪದ ಏನು ಹೇಳುತ್ತೆ? 'ವಿದ್' ಎಂದರೆ ಜ್ಞಾನ. 'ಯಾ' ಎಂದರೆ ಹೊಂದಿಸುವುದು. ಜ್ಞಾನದ ಕಡೆಗೆ ಒಯ್ಯುವ ವಿಚಾರವೇ ವಿದ್ಯೆ". ಇಲ್ಲಿ ಜ್ಞಾನವೆನ್ನುವ ಪದವು ಆತ್ಮಜ್ಞಾನ  ಎಂಬರ್ಥದಲ್ಲಿಯೇ ಬಳಸಲ್ಪಟ್ಟಿದೆ. 

ಗಂಗಾನದಿಯು ಮೂಲದಿಂದ ಶುದ್ಧವಾಗಿಯೇ ಹೊರಟರೂ, ಅದು ಹರಿಯುವಾಗ ಆಯಾ ಕ್ಷೇತ್ರಧರ್ಮವನ್ನೂ ಸೇರಿಸಿಕೊಂಡು ಹರಿಯುವಂತೆ, ಶುದ್ಧವಾಗಿ ಹೊರಟ ಋಷಿಪ್ರಣೀತ ವಿದ್ಯೆಗಳು ಅಲ್ಲಲ್ಲಿ ಕಲುಷಿತವಾಗಿವೆ. ಎಷ್ಟೋ ವಿದ್ಯೆಗಳು ಆತ್ಮಜ್ಞಾನದೆಡೆಗೆ ನಮ್ಮನ್ನು ಒಯ್ಯುತ್ತಿಲ್ಲ. ಆದ್ದರಿಂದ ನಮ್ಮನ್ನು ಭಾರತೀಯ ವಿದ್ಯೆ, ಕಲೆಗಳು ಪರಮಾತ್ಮನಲ್ಲಿ ನೆಲೆ ನಿಲ್ಲಿಸುವಂತೆ ಮಾರ್ಗದರ್ಶನ ಮಾಡಬಲ್ಲವರಿಗಾಗಿ ಎದುರುನೋಡೋಣ. 


ಸೂಚನೆ: 15/06/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.