Sunday, June 18, 2023

ವ್ಯಾಸ ವೀಕ್ಷಿತ - 42 ಧೌಮ್ಯರ ಸ್ವಸ್ತಿವಾಚನ, ಪಾಂಚಾಲದತ್ತ ಪಾಂಡವರ ಪಯಣ (yaasa Vikshita - 42Dhaumyara Svastivacana, Paccaladatta Pandavara payana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಆ ಬಳಿಕ ಆ ಗಂಧರ್ವನೂ ಪಾಂಡವರೂ ಪರಸ್ಪರ ಬೀಳ್ಕೊಟ್ಟರು. ಭಾಗೀರಥೀತೀರವನ್ನು ತೊರೆದ ಪಾಂಡವರು ಉತ್ಕೋಚಕವೆಂಬ ತೀರ್ಥಕ್ಕೆ ಹೋದರು. ಅಲ್ಲಿ ಧೌಮ್ಯರನ್ನು ಕಂಡರು. ನಮ್ಮೆಲ್ಲರಿಗೆ ತಾವೇ ಪುರೋಹಿತರಾಗಬೇಕು" ಎಂದು ಅವರನ್ನು ಪ್ರಾರ್ಥಿಸಿಕೊಂಡರು.

ವೇದಜ್ಞರಾದ ಧೌಮ್ಯರು ಅವರ ಪ್ರಾರ್ಥನೆಗೆ ಒಪ್ಪಿದರು. ಆಗಂತೂ ಪಾಂಡವರ ವಿಶ್ವಾಸ ವರ್ಧಿಸಿತು. ಈ ವಿಪ್ರನನ್ನು ಮುಂದಿರಿಸಿಕೊಂಡು ಹೆಜ್ಜೆ ಹಾಕಿದಲ್ಲಿ ಐಶ್ವರ್ಯವೂ ರಾಜ್ಯವೂ ಲಭಿಸುವುವು; ಅಷ್ಟೇ ಅಲ್ಲ, ಸ್ವಯಂವರದಲ್ಲಿ ಪಾಂಚಾಲಿಯೂ (ಎಂದರೆ ದ್ರೌಪದಿಯೂ) ದೊರಕುವವಳೇ ಸರಿ - ಎಂದವರು  ಭಾವಿಸಿದರು. ಅಂತಹ ಗುರುವೂ ಪುರೋಹಿತರೂ ಆದ ಧೌಮ್ಯರು ದೊರೆತರಾಗಿ ತಾವಿನ್ನು ಸನಾಥರಾದೆವೆಂಬಂತಾಯಿತು, ಪಾಂಡವರಿಗೆ (ಸನಾಥ ಎಂದರೆ ಸಂರಕ್ಷಕನೊಬ್ಬನನ್ನು ಹೊಂದಿರುವವವನು).

ಧೌಮ್ಯರು ಉದಾರಮತಿಗಳು, ವೇದಾರ್ಥಜ್ಞರು. ಪಾಂಡವರನ್ನು ಅವರು ಧರ್ಮಕಾರ್ಯದಲ್ಲಿ ತೊಡಗಿಸಿದರು. ಪಾಂಡವರಾದರೂ ವೀರರು; ಅವರ ಬುದ್ಧಿಯೇನು. ವೀರ್ಯವೇನು, ಬಲವೇನು, ಉತ್ಸಾಹವೇನು! - ಇವೆಲ್ಲವನ್ನುಳ್ಳ ದೇವತೆಗಳೇ ಇವರು! - ಎಂದು ಅತ್ತ ಧೌಮ್ಯರೂ ಭಾವಿಸುವಂತಾಯಿತು; ಸ್ವಧರ್ಮದಿಂದಲೇ ತಮ್ಮ ರಾಜ್ಯವನ್ನು ಪಾಂಡವರು ಮತ್ತೆ ಗಳಿಸಿಕೊಳ್ಳುವವರೇ – ಎಂದನಿಸಿತು ಅವರಿಗೆ.

ಧೌಮ್ಯರು ಪಾಂಡವರಿಗೆ ಸ್ವಸ್ತಿವಾಚನವನ್ನು ಮಾಡಿದರು. ಪಾಂಡವರೂ ಮೊದಲಂದುಕೊಂಡಂತೆ ದ್ರೌಪದೀಸ್ವಯಂವರದತ್ತ ಹೋಗಲು ಮನಸ್ಸು ಮಾಡಿದರು..

ನರಶಾರ್ದೂಲರಾದ (ಎಂದರೆ ನರಶ್ರೇಷ್ಠರಾದ) ಪಂಚಪಾಂಡವರೂ ಆ ಪಾಂಚಾಲದೇಶ ಮತ್ತು ಅಲ್ಲಿ ನಡೆಯುವ ದ್ರೌಪದೀಸ್ವಯಂವರ-ಮಹೋತ್ಸವ - ಇವುಗಳನ್ನು ನೋಡಲಿಕ್ಕಾಗಿ, ಹೊರಟರು. ತಾಯಿಯಾದ ಕುಂತಿಯೊಂದಿಗೆ ಹೋಗುತ್ತಿರುವಾಗ, ಹಲವಾರು ಬ್ರಾಹ್ಮಣರು ಒಟ್ಟಿಗೇ ಹೋಗುತ್ತಿರುವುದನ್ನೂ ಅವರು ಕಂಡರು. ಆಗ ಆ ಬ್ರಾಹ್ಮಣರೇ ಈ ಬ್ರಹ್ಮಚಾರಿಗಳಾದ ಪಾಂಡವರನ್ನು ಮಾತನಾಡಿಸಿದರು. "ನೀವು ಎಲ್ಲಿಗೆ ಹೋಗುತ್ತಿದ್ದೀರಿ? ಎಲ್ಲಿಂದ ಬರುತ್ತಿದ್ದೀರಿ?" ಎಂದರು. ಅದಕ್ಕೆ ಯುಧಿಷ್ಠಿರನು, "ಏಕಚಕ್ರನಗರಿಯಿಂದ ಬರುತ್ತಿದ್ದೇವೆ. ನಾವು ಸೋದರರು; ನಮ್ಮ ತಾಯಿಯೊಂದಿಗೆ ಒಟ್ಟಿಗೇ ಹೋಗುತ್ತಿದ್ದೇವೆ" - ಎಂದನು.

ಆಗ ಆ ಬ್ರಾಹ್ಮಣರು ತಮತಮಗೆ ತಿಳಿದಿದ್ದನ್ನು ಹೇಳಿದರು: ಮಹತ್ತಾದ ಸಿರಿಸಂಪತ್ತಿನ ಮಹಾಸ್ವಯಂವರವೊಂದು ದ್ರುಪದನ ಅರಮನೆಯಲ್ಲಿ ಇನ್ನೇನು ನಡೆಯಲಿರುವುದು. ಅಲ್ಲಿಗೆ ನೀವು ಹೋಗಿ. ಗುಂಪಾಗಿ ಹೋಗುತ್ತಿರುವ ನಾವು ಸಹ ಅತ್ತಲೇ ಹೋಗುತ್ತಿರುವುದು - ಎಂದೊಬ್ಬ. ಅಲ್ಲಾಗಲಿರುವ ಸ್ವಯಂವರವು ದ್ರೌಪದಿಯದು. ಅವಳು ಯಾಜ್ಞಸೇನಿ (ಎಂದರೆ ಯಜ್ಞಸೇನನ ಮಗಳು). ಯಜ್ಞವೇದಿಕೆಯ ಮಧ್ಯದಿಂದ ಜನಿಸಿದವಳು (ವೇದಿಮಧ್ಯಾತ್ ಸಮುತ್ಪನ್ನಾ)! ಕಮಲದ ದಳಗಳಂತಿರುವ ಕಣ್ಣುಗಳುಳ್ಳವಳು. ಅವಳ ಅಂಗಗಳು ಅನವದ್ಯ (ಎಂದರೆ ದೋಷರಹಿತ; ಅವದ್ಯವೆಂದರೆ ದೋಷ). ಆಕೆ ಸುಕುಮಾರಿ, ಆದರೂ ಮನಸ್ವಿನೀ (ಎಂದರೆ ದೃಢಮನಸ್ಕಳು) - ಎಂದಿನ್ನೊಬ್ಬ. 

ಇನ್ನು ಅವಳ ಅಣ್ಣ ಧೃಷ್ಟದ್ಯುಮ್ನನು ದ್ರೋಣನ ಶತ್ರು. ಪ್ರತಾಪಶಾಲಿ. ಹುಟ್ಟುವಾಗಲೇ ಖಡ್ಗ-ಕವಚಗಳನ್ನೂ ಬಿಲ್ಲು ಬಾಣಗಳನ್ನೂ ಧರಿಸಿಯೇ ಜನಿಸಿರುವವನು.ಪ್ರಜ್ವಲಿಸುತ್ತಿದ್ದ ಅಗ್ನಿಯಲ್ಲಿ ಜನಿಸಿದ ಆತನಂತೂ ಬೆಂಕಿಯಂತೆಯೇ ಸರಿ! - ಎಂದು ಮಗದೊಬ್ಬ. ಆತನ ಸೋದರಿಯಾದ ದ್ರೌಪದಿ ಕೃಶವಾದ ನಡುವುಳ್ಳವಳು. ಅವಳ ಶರೀರದಿಂದ ಹೊಮ್ಮುವ ಗಂಧವು ಒಂದು ಕ್ರೋಶದಷ್ಟು ದೂರದವರೆಗೂ ಪಸರಿಸುವುದು! ಅವಳ ಸ್ವಯಂವರವೇ ಈಗಾಗಲಿರುವುದು. ಅವಳನ್ನೂ ಆ ದಿವ್ಯಮಹೋತ್ಸವವನ್ನು ನೋಡಲೆಂದೂ ನಾವು ಹೊರಟಿರುವುದು – ಎಂದು ಇನ್ನೊಬ್ಬ ಹೇಳಿದನು.

ಸೂಚನೆ : 18/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.