Sunday, June 25, 2023

ವ್ಯಾಸ ವೀಕ್ಷಿತ - 43 Vyaasa Vikshita - 43 (ವ್ಯಾಸರ ಆಶೀರ್ವಾದ – ದ್ರುಪದನ ಸಂಕಲ್ಪVyasara Ashirvvda – Drupadana Sankalpa)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)
 

ಪಾಂಚಾಲದತ್ತ ಸಾಗುತ್ತಿದ್ದ ವಿಪ್ರರು ಪಾಂಡವರಿಗೆ ಇನ್ನಿಷ್ಟು ಹೀಗೆ ತಿಳಿಯಹೇಳಿದರು.

ಒಬ್ಬನೆಂದನು: ಪಾಂಚಾಲಕ್ಕೆ ಹಲವು ಮಂದಿ ರಾಜರೂ ರಾಜಪುತ್ರರೂ ನಾನಾದೇಶಗಳಿಂದ ಬರುವರು. ಅವರುಗಳೆಲ್ಲಾ ಯಜ್ಞಮಾಡತಕ್ಕವರು, ಯಜ್ಞಗಳಲ್ಲಿ ಭೂರಿಯಾದ (ಎಂದರೆ ಬಹಳವಾದ) ದಕ್ಷಿಣೆಯನ್ನು ಕೊಡತಕ್ಕವರು (ಅರ್ಥಾತ್, ಬಹಳ ಉದಾರಿಗಳು); ಸ್ವಾಧ್ಯಾಯಸಂಪನ್ನರು, ವ್ರತಶೀಲರು - ಎಂದೇ ಶುಚಿಯಾದವರು; ತರುಣರು, ರೂಪಸಂಪನ್ನರು; ಮಹಾರಥರು, ಅಸ್ತ್ರವಿದ್ಯಾನಿಪುಣರು. "ನಾವು ವಿಜಯಶಾಲಿಗಳಾಗಬೇಕು" ಎಂಬ ಮಹಾಕಾಂಕ್ಷೆಯಿಂದ ಅವರುಗಳು ನಾನಾದಾನಗಳನ್ನು ಮಾಡುವವರು. ಅಲ್ಲಿ ಸ್ವಯಂವರದರ್ಶನ, ಉತ್ಸವಾನಂದ - ಇವುಗಳನ್ನೂ ಅನುಭವಿಸಿ, ಬಳಿಕ ನಾವು ಮುಂದೆ ಸಾಗುವೆವು.

ಇನ್ನೊಬ್ಬನು ಹೀಗೆಂದನು: ಅಷ್ಟೇ ಅಲ್ಲ. ನಟರು ನರ್ತಕರು, ಮಲ್ಲರು, ಇವರುಗಳೂ ನಾನಾದೇಶಗಳಿಂದ ಬರುವರು. ನಮ್ಮೊಂದಿಗೆ ನೀವೂ ಈ ಕುತುಕಗಳನ್ನು ಕಾಣಬಹುದು. ಅವರು ಕೊಡುವ ದಾನಗಳನ್ನು ಸ್ವೀಕರಿಸಬಹುದು. ಬಳಿಕ ಹಿಂದಿರುಗಬಹುದು.

ಮತ್ತೊಬ್ಬನು ಹೀಗೆಂದನು: "ನೀವುಗಳೆಲ್ಲರೂ ದರ್ಶನೀಯರು, ದೇವತೆಗಳಂತೆಯೇ ಇರುವಿರಿ. ನಿಮ್ಮನ್ನು ಕಂಡ ಕೃಷ್ಣೆಯು (=ದ್ರೌಪದಿಯು) ನಿಮ್ಮಲ್ಲೊಬ್ಬರನ್ನು ವರನನ್ನಾಗಿ ವರಿಸಲೂ ಬಹುದು!"

ಭೀಮನತ್ತ ನೋಡುತ್ತಾ ಮತ್ತೊಬ್ಬನು, "ಈ ನಿಮ್ಮ ಸಹೋದರ ಆಕರ್ಷಕನಾಗಿದ್ದಾನೆ. ಹೇಗಿವೆ ಆ ಭುಜಗಳು! ಮಲ್ಲಯುದ್ಧಕ್ಕೆ ನಿಂತರೆ ಗೆಲುವನ್ನು ಸಾಧಿಸುವುದಷ್ಟೇ ಅಲ್ಲ, ಭೂರಿಯಾದ ಹಣವನ್ನು ಸಹ ಸಂಪಾದಿಸತಕ್ಕವನೇ. ಎಂದೇ ನಿಮ್ಮಗಳ ಸಂತೋಷವನ್ನು ಹೆಚ್ಚಿಸತಕ್ಕವನೇ" - ಎಂದನು.

ಅವರ ಮಾತುಗಳಿಗೆ ಪ್ರತಿಯಾಗಿ ಯುಧಿಷ್ಠಿರನು ಹೇಳಿದನು: ಈ ಪರಮಮಹೋತ್ಸವಕ್ಕೆ ನಿಮ್ಮಗಳೊಂದಿಗೇ ನಾವೂ ಬರುತ್ತೇವೆ - ಆ ಕನ್ಯೆಯ ಸ್ವಯಂವರವನ್ನೂ ನೋಡಲಿಕ್ಕಾಗಿಯೇ.

ಪಾಂಡವರು ಅವರೊಂದಿಗೆ ಪ್ರಯಾಣವನ್ನು ಬೆಳೆಸಿದರು. ದಾರಿಯಲ್ಲಿ ಮಹಾತ್ಮರಾದ ಶ್ರೀಕೃಷ್ಣದ್ವೈಪಾಯನರ (ಎಂದರೆ ವ್ಯಾಸಮಹರ್ಷಿಗಳ) ಸಂದರ್ಶನವಾಯಿತು. ಅವರಿಗೆ ವಂದಿಸಿ, ಅವರ ಆಶೀರ್ವಾದವನ್ನು ಪಡೆದು, ಮುಂದೆ ನಡೆದರು. ದಾರಿಯಲ್ಲಿ ರಮ್ಯವಾದ ಹಲವು ಕಾಡುಗಳನ್ನೂ ಸರಸ್ಸುಗಳನ್ನೂ ಕಂಡರು. ಅಲ್ಲಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ಮೆಲ್ಲನೆ ಸಾಗಿದರು. ಸ್ವಾಧ್ಯಾಯನಿರತರೂ ಶುಚಿಗಳೂ ಪ್ರಿಯವಾದಿಗಳೂ ಆದ ಪಾಂಡವರು ಪಾಂಚಾಲದೇಶವನ್ನು ಕೊನೆಗೆ ಸೇರಿದರು.

ಊರನ್ನೂ ಸ್ಕಂಧಾವಾರವನ್ನೂ ನೋಡಿದರು. ಒಬ್ಬ ಕುಂಬಾರನ ಮನೆಯಲ್ಲಿ ತಂಗಿದರು. ಹಿಂದಿನಂತೆ ಬ್ರಾಹ್ಮಣರ ವೇಷದಲ್ಲಿದ್ದುಕೊಂಡು ಭಿಕ್ಷೆಯಿಂದಲೇ ಜೀವನ ನಡೆಸಿದರು. ಹಾಗಾಗಿ, ಯಾರೊಬ್ಬರೂ ಅವರನ್ನು ಗುರುತಿಸದಾದರು.

ದ್ರೌಪದಿಯನ್ನು ಅರ್ಜುನನಿಗೇ ಕೊಡಬೇಕೆಂಬ ಆಸೆ ದ್ರುಪದನಿಗೆ. ಅದರೆ ಅದನ್ನು ಬಾಯಿಬಿಟ್ಟು ಯಾರಿಗೂ ಹೇಳಲಾರ. ಅರ್ಜುನನನ್ನು ಹುಡುಕಿಸಲೆಂದೇ,  ಮತ್ತಾರೂ ಬಗ್ಗಿಸಲಾಗದ ಬಿಲ್ಲೊಂದನ್ನು ದ್ರುಪದ ಮಾಡಿಸಿದ; ಒಂದು ಕೃತ್ರಿಮವಾದ ಆಕಾಶಯಂತ್ರವೊಂದನ್ನು ಸಹ ನಿರ್ಮಿಸಿದ; ಅದರೊಂದಿಗೆ ಒಂದು ಲಕ್ಷ್ಯವನ್ನೂ ಅದರಲ್ಲಿ ಸಿದ್ಧಪಡಿಸಿದ; ಮತ್ತು ಹೀಗೊಂದು ಘೋಷಣೆಯನ್ನೂ ಮಾಡಿಸಿದ: ಇದೋ ಇಲ್ಲಿ ಬಿಲ್ಲಿದೆ, ಇಲ್ಲಿ ಬಾಣಗಳಿವೆ; ಈ ಬಿಲ್ಲಿಗೆ ಹೆದೆಯೇರಿಸಿ ಈ ಬಾಣಗಳಿಂದ ಲಕ್ಷ್ಯವನ್ನು ಯಾವನು ಭೇದಿಸುವನೋ ಅವನು ನನ್ನ ಮಗಳನ್ನು ವಿವಾಹವಾಗುವನು - ಎಂದು.

ಹೀಗೆ ಹೇಳಿ ತನ್ನ ಮಗಳ ಸ್ವಯಂವರವನ್ನು ಘೋಷಿಸಿದ.  ಅದನ್ನು ಕೇಳಿ ರಾಜರೆಲ್ಲರೂ ಅಲ್ಲಿಗೆ ಬಂದು ಸೇರಿದರು. ಸ್ವಯಂವರವನ್ನು ನೋಡಲೆಂದು ಮಹಾತ್ಮರಾದ ಋಷಿಗಳೂ ಆಗಮಿಸಿದರು. ದುರ್ಯೋಧನ ಮೊದಲಾದ ಕುರುವಂಶದವರೂ ಹಾಗೂ ಕರ್ಣನೂ ಬಂದಿದ್ದರು. ಮಹಾತ್ಮನಾದ ದ್ರುಪದನು ರಾಜಗಣಗಳಿಗೆ ಸರ್ವಸತ್ಕಾರವನ್ನೂ ನಡೆಸಿದನು.

ಸೂಚನೆ : 25/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.