Friday, June 16, 2023

ಮಾಂಡವ್ಯ ಋಷಿಯ ಆದರ್ಶ (Mandavya Rsiya Adarsha)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)


ಒಮ್ಮೆ ಮಾಂಡವ್ಯ ಋಷಿಗಳು  ತಮ್ಮ ಆಶ್ರಮದಲ್ಲಿ ಧ್ಯಾನವನ್ನು ಮಾಡುತ್ತಾ ಕುಳಿತಿರುವರು. ಆಗ ಅಲ್ಲಿಗೆ ಕೆಲವು ಕಳ್ಳರು ತಮ್ಮ ಕದ್ದಮಾಲಿನೊಂದಿಗೆ ಓಡೋಡಿ ಬಂದು, ಆಶ್ರಮದ ಒಂದು ಜಾಗದಲ್ಲಿ ಕದ್ದಮಾಲನ್ನು ಬಚ್ಚಿಟ್ಟು, ಮತ್ತೊಂದು ಕಡೆ ಅವಿತುಕೊಳ್ಳುವರು. ಕಳ್ಳರನ್ನು ಹಿಡಿಯಲು ಹಿಂಬಾಲಿಸಿದ್ದ ರಾಜಭಟರು ಆ ಆಶ್ರಮಕ್ಕೂ ಬರುವರು. ಕದ್ದ ಮಾಲನ್ನು ವಶಪಡಿಸಿಕೊಂಡು, ಕಳ್ಳರನ್ನು ಹಿಡಿಯುವರು.  ಈ ವಿಷಯವೇ ತಿಳಿಯದ ಮಾಂಡವ್ಯರನ್ನು ಸಹ ಕಳ್ಳರ ಗುರುವೆಂದು ಭಾವಿಸಿ, ಹಿಡಿದು ರಾಜನ ಬಳಿಗೆ ಕರೆದುಕೊಂಡು ಹೋಗುವರು. 

ಕದ್ದ ಮಾಲಿನ ಸಮೇತ ಸಿಕ್ಕಿದ್ದರಿಂದ ರಾಜನು ಪ್ರತ್ಯೇಕವಾಗಿ ವಿಚಾರಣೆ ಮಾಡದೆ, 'ಅವರನ್ನು ಶೂಲಕ್ಕೆ ಏರಿಸಿ' ಎಂಬ ತೀರ್ಪು ನೀಡುವನು. ಅದರಂತೆ ರಾಜಭಟರು ಎಲ್ಲರನ್ನೂ ಶೂಲಕ್ಕೆ ಏರಿಸುವರು. ಮನುಷ್ಯ ಸಹಜವಾದ ಯಾತನೆಯಿಂದ ಕಳ್ಳರೆಲ್ಲರೂ ಸತ್ತು ಹೋಗುವರು. 

ಆಶ್ಚರ್ಯವೆಂದರೆ ಮಾಂಡವ್ಯರು ಮಾತ್ರ ಯಾತನೆಯಿಂದ ಬಳಲದೆ ಶಾಂತ ಚಿತ್ತರಾಗಿ ಭಗವಂತನ ಸ್ಮರಣೆಯೊಂದಿಗೆ ಇರುವುದನ್ನು ರಾಜಭಟರು ಗಮನಿಸುವರು. ಈ ವಿಷಯವನ್ನು ರಾಜನಿಗೆ ತಿಳಿಸಲು, ರಾಜನೂ ಅಲ್ಲಿಗೆ ಬರುವನು. ಮಾಂಡವ್ಯರನ್ನು ಕಂಡು ಇವರು ಮಹಾತ್ಮರೇ ಇರಬೇಕೆಂದು ನಿಶ್ಚಯಿಸಿ ' ನಾನು ನಿಮ್ಮನ್ನು ವಿಚಾರಣೆ ಮಾಡದೇ ಶಿಕ್ಷೆ ವಿಧಿಸಬಾರದಾಗಿತ್ತು, ನನ್ನದು ತಪ್ಪಾಗಿದೆ ' ಎಂದು ಪಶ್ಚಾತ್ತಾಪದಿಂದ ಕ್ಷಮೆ ಯಾಚಿಸುವನು. 

ಮಾಂಡವ್ಯರು ಸ್ವಲ್ಪವೂ ವಿಕಾರಗೊಳ್ಳದೆ  ಕ್ಷಮಿಸುವರು. ಇನ್ನು ಶೂಲವನ್ನು ದೇಹದಿಂದ ಹೊರಗೆ ತೆಗೆಯಲು ಪ್ರಯತ್ನ ಪಟ್ಟರೂ  ಅದು ಸಂಪೂರ್ಣವಾಗಿ ಬರುವುದಿಲ್ಲ. ಸ್ವಲ್ಪಭಾಗ ತುಂಡಾಗಿ ದೇಹದಲ್ಲೇ ಉಳಿದುಕೊಳ್ಳುವುದು.  ಇದನ್ನು ಬಲವಂತವಾಗಿ ತೆಗೆದರೆ ಅವರ ಜೀವಕ್ಕೆ ತೊಂದರೆ ಆಗಬಹುದೆಂದು ಅಲ್ಲಿಯೇ ಬಿಟ್ಟುಬಿಡುವರು.  ಈ ಕಾರಣದಿಂದಲೇ ಇವರು ಮುಂದೆ ಅಣಿಮಾಂಡವ್ಯ ಮಹರ್ಷಿಎಂದು  ಕರೆಯಲ್ಪಡುತ್ತಾರೆ.

ಈ ಮಧ್ಯೆ ಪಕ್ಷಿಗಳ ರೂಪದಲ್ಲಿ ಬಂದಂತಹ ಋಷಿಗಳು ಇವರನ್ನು ಪ್ರಶ್ನೆ ಮಾಡುತ್ತಾರೆ. "ತಪ್ಪುಗಳನ್ನೇ ಮಾಡದ ನಿಮಗೆ ಈ ಘೋರ ಶಿಕ್ಷೆ ಏಕೆ "? ಎಂದು. "ನನ್ನ ಬಳಿ ಉತ್ತರವಿಲ್ಲ, ಯಮಧರ್ಮನನ್ನೇ ಕೇಳಬೇಕು", ಎನ್ನುವರು ಮಾಂಡವ್ಯರು. ಅವರು ಸಶರೀರರಾಗಿಯೇ ಯಮನ ಲೋಕಕ್ಕೆ ಪ್ರಯಾಣ ಬೆಳೆಸಿ, ಯಮರಾಜನನ್ನು  ಕೇಳುತ್ತಾರೆ " ನನಗೆ ಏಕೆ ಈ ಶೂಲದ ಶಿಕ್ಷೆ?"

ಯಮಧರ್ಮರು, "ನೀವು ಬಾಲಕರಾಗಿದ್ದಾಗ ಚಿಟ್ಟೆಗಳ ಪೃಷ್ಠಭಾಗಕ್ಕೆ ಕಡ್ಡಿಯಿಂದ ಚುಚ್ಚುತ್ತಿದ್ದಿರಿ. ಆ ಪಾಪದ ಫಲವಾಗಿ ಈ ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂದಿತು" ಎನ್ನುತ್ತಾರೆ. ಆಗ ಮಾಂಡವ್ಯರು " ಸಣ್ಣ ವಯಸ್ಸಿನಲ್ಲಿ ಅರಿಯದೆ ಮಾಡಿದ ತಪ್ಪನ್ನು ಅಪರಾಧವೆಂದು ಪರಿಗಣಿಸಬಾರದು; 12ನೇ ವಯಸ್ಸಿನವರೆಗೂ ಬಾಲಕರೆಂದು ಪರಿಗಣಿಸಿ ತಪ್ಪನ್ನು ಕ್ಷಮಿಸಬೇಕಾಗಿತ್ತು.  ಯಮಧರ್ಮರೇ ನೀವು ತಪ್ಪನ್ನು ಮಾಡಿದ್ದೀರಿ! ಆದ್ದರಿಂದ ಭೂಲೋಕದಲ್ಲಿ ಮಾನವ ಜನ್ಮತಾಳಿ" ಎಂದು ಶಾಪವನ್ನು ಕೊಡುವರು.  ಮುಂದೆ ಆ ಶಾಪದ ಫಲವಾಗಿ ಯಮಧರ್ಮರಾಯರೇ 'ವಿದುರ'ನಾಗಿ ಅವತರಿಸುತ್ತಾರೆ  ಎಂದು ಮಹಾಭಾರತದ ಆದಿಪರ್ವವು ವಿವರಿಸುತ್ತದೆ.

 ಈ ಪ್ರಸಂಗದಲ್ಲಿ ಅನೇಕ ಅಂಶಗಳು ಇಂದಿಗೂ ನಮಗೆ ಪ್ರಸ್ತುತ. ಮಾಂಡವ್ಯರು, ಯಾರೋ ಮಾಡಿದ ಕಳ್ಳತನಕ್ಕೆ,  ಶಿಕ್ಷೆಗೆ ಒಳಗಾದರು. ದೇಹಕ್ಕೆ ಯಾತನೆಯಾದರೂ ಭಗವಂತನ ಸ್ಮರಣೆಯಲ್ಲಿದ್ದರು. ಮೇಲ್ನೋಟಕ್ಕೆ ತಮ್ಮದೇನೂ  ತಪ್ಪಿಲ್ಲವೆಂದು ಅನ್ನಿಸಿದ್ದರೂ ಶಾಂತ ಚಿತ್ತರಾಗಿಯೇ ಇದ್ದರು. 

ಇನ್ನು ಮಾಂಡವ್ಯರು ಶಾಪಕೊಡಲು ಶಕ್ತರಾಗಿದ್ದರೂ  ರಾಜಭಟರಿಗಾಗಲಿ, ರಾಜನಿಗಾಗಲಿ ಶಾಪಕೊಡಲಿಲ್ಲ. ಆ ಮೂಲಾಗ್ರವಾಗಿ  ವಿಷಯವನ್ನು ತಿಳಿದುಕೊಂಡು ಯಮರಾಜನಿಗೆ ಶಾಪವನ್ನು ಇತ್ತರು. ತಮ್ಮ ಜೀವನದಲ್ಲಿ ದೇಹಕ್ಕಾದ ನೋವನ್ನು ಲೆಕ್ಕಿಸದೆ ಭಗವತ್ಸ್ಮರಣೆ, ತಪಸ್ಸು , ಅನುಷ್ಠಾನಗಳನ್ನು ಎಂದೂ ಬಿಡದೆ ಸಾಧನೆ ಮಾಡಿ ಉತ್ತಮಲೋಕವನ್ನು  ಪಡೆಯುತ್ತಾರೆ.

ನಮ್ಮ ಜೀವನದಲ್ಲೂ ಅನೇಕ ಕಷ್ಟ ಕಾರ್ಪಣ್ಯಗಳು ಬಂದರೂ, ಭಾರತೀಯ ಮಹರ್ಷಿ ಪ್ರಣೀತವಾದ ಆತ್ಮಸಾಧನೆಯ ಮಾರ್ಗವನ್ನು ಅವಲಂಬಿಸೋಣ.

ಸೂಚನೆ: 15/06/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.